ಪುಟ್ಟರೂಪಗಳಲ್ಲಿ ಹುಟ್ಟಿದ ದಟ್ಟ ರೂಪಕ


ಕವಿ ರಂಗಮ್ಮ ಹೊದೇಕಲ್‌ ಅವರ ‘ನೋವೂ ಒಂದು ಹೃದ್ಯ ಕಾವ್ಯ’ ಕವನ ಸಂಕಲನಕ್ಕೆ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿ ಬರೆದಿದ್ದಾರೆ. ಪ್ರಾಸದ ಗೋಜಿಲ್ಲದ ಹಾಗೂ ಸಿದ್ಧ ಮಾದರಿಯ ಪಡಿಯಚ್ಚಿನಂತಿರದ ಕವಿತೆಗಳು ಜೀವನ ಪ್ರೀತಿಯ ಪ್ರೇರಣೆಯಂತಿವೆ ಎಂದು ಅಭಿಪ್ರಾಯಪಡುವ ಬರಗೂರು ಅವರು ಜೀವನ ದೃಷ್ಟಿಯ ದರ್ಶನದಂತಿರುವ ಕವಿತೆಗಳು ನೋವನ್ನೂ ಹೃದಯಸ್ಥ ಮಾಡಿಕೊಳ್ಳುವ ವಿಶಿಷ್ಟ ನೆಲೆ ಮತ್ತು ನಿಲುವಿನಿಂದ ಕೂಡಿದೆ ಎಂದಿದ್ದಾರೆ.

ರಂಗಮ್ಮ ಹೊದೇಕಲ್ ಅವರ ನೋವೂ ಒಂದು ಹೃದ್ಯ ಕಾವ್ಯ ಎಂಬ ಸಂಕಲನಕ್ಕೆ ನಾಲ್ಕು ಮಾತು ಬರೆಯಬೇಕೆಂದು ಅಪೇಕ್ಷಿಸಿದ್ದಾರೆ. ಇದೊಂದು ಹನಿಗವಿತೆಗಳ ಸಂಕಲನ. ಈ ಸಂಕಲನದ ಕವಿತೆಗಳನ್ನು ಓದಿದ ಮೇಲೆ ನನ್ನ ಮಾತುಗಳು ನಾಲ್ಕಕ್ಕೇ ನಿಲ್ಲಲು ಸಾಧ್ಯವಿಲ್ಲ ಎಂದು ನನಗೆ ಅರಿವಾಯಿತು. ಈ ಅರಿವನ್ನು ಮೂಡಿಸಿದ ಹನಿಗವಿತೆಗಳನ್ನು ಅಭಿನಂದಿಸಬೇಕು. ಆ ಮೂಲಕ ಕವಿ ರಂಗಮ್ಮ ಅವರಿಗೆ ಅಭಿನಂದನೆಗಳು ಸಲ್ಲುತ್ತವೆ. ಬಹು ಮುಖ್ಯವಾಗಿ ರಂಗಮ್ಮ ಹೊದೇಕಲ್ ಅವರು ಈಗಾಗಲೇ ಚಾಲ್ತಿಯಲ್ಲಿರುವ ಹನಿಗವನ ರಚನೆಗಳ ರೂಢಮೂಲ ಮಾದರಿಯನ್ನು ಮುರಿದು ತಮ್ಮದೇ ವಸ್ತು ಮತ್ತು ವಿನ್ಯಾಸದಲ್ಲಿ ಹೃದ್ಯ ಪದ್ಯ ನೀಡಿರುವುದನ್ನು ಗಮನಿಸಬೇಕು ಮತ್ತು ಗುರುತಿಸಬೇಕು ಎಂದು ನನ್ನ ಅಂತರಂಗಕ್ಕೆ ಅನ್ನಿಸಿದೆ. ಈಗ ಸಾಮಾನ್ಯವಾಗಿ, ಬಹುಪಾಲು ಹನಿಗವಿತೆಗಳು ಲಘುಮಾದರಿಯಲ್ಲಿ ಮಿಂಚುತ್ತಿವೆ. ಚಮತ್ಕೃತಿಯ ಮೂಲಕ ಚಪ್ಪಾಳೆ ಪಡೆಯುತ್ತಿವೆ. ವಿಶೇಷವಾಗಿ ಕವಿಗೋಷ್ಠಿ ವೇದಿಕೆಯ ಓದಿನಲ್ಲಿ ಸಹೃದಯರನ್ನು ಹಗುರಗೊಳಿಸುತ್ತಿವೆ. ಇಂಥಹ ಮಾದರಿಯ ಮಧ್ಯೆಯೂ ಗಂಭೀರ ವಸ್ತುವಿನ ಕೆಲ ರಚನೆಗಳು ಬಂದಿರುವುದುಂಟು ಮತ್ತು ಪ್ರಾಸದ ಮಂದಹಾಸವನ್ನೂ ಮೀರಿರುವುದೂ ಉಂಟು. ಆದರೆ ಹೆಚ್ಚು ಪ್ರಚಲಿತ, ಪ್ರಸಾರಿತ ಹಾಗೂ ಪ್ರಚಾರಿತ ಹನಿಗವನಗಳು ಗಾಢ ವಸ್ತು ವಿನ್ಯಾಸದ ಕಾವ್ಯ ಗುಣಕ್ಕಿಂತ ಸಂವಹನೆಯ ಚಮತ್ಕೃತಿಯಾಗಿರುವುದನ್ನು ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ. ಈ ಮಾತುಗಳ ಮೂಲಕ ಈಗಾಗಲೇ ಹನಿಗವನ ರಚನೆ ಮಾಡುತ್ತಿರುವ ಕವಿಗಳನ್ನು ಆಕ್ಷೇಪಿಸುತ್ತಿಲ್ಲ, ಟೀಕಿಸುತ್ತಲೂ ಇಲ್ಲ. ಹನಿಗವನ ರಚನೆಯು ಕಂಡುಕೊಂಡ 'ಪ್ರಸಿದ್ಧ' ರೂಪಗಳನ್ನು ನಾನು ಕಂಡಂತೆ ಗುರುತಿಸುತ್ತಿದ್ದೇನೆ ಅಷ್ಟೆ.

ರಂಗಮ್ಮ ಹೊದೇಕಲ್ ಅವರು ಸಿದ್ಧಮಾದರಿಯನ್ನು ಮೀರಿದ ಹನಿಗವನ ಅಥವಾ ಮಿನಿಗವನಗಳ ರಚನೆಯ ಮೂಲಕ ಗಂಭೀರವಾಗಿ ಪರಿಗಣಿಸಬೇಕಾದ ಕವಿಯಾಗಿ ಹೊರಹೊಮ್ಮಿದ್ದಾರೆ. ಈ ಮಾದರಿಯ ಕವನಗಳು ಲಘುತ್ವಕ್ಕೆ , ಪ್ರಾಸಕ್ಕೆ, ಸಂದೇಶಕ್ಕೆ ಮಾತ್ರ ಇಲ್ಲವೆಂದು ಭಾವಿಸಿದ್ದಾರೆ ಮತ್ತು ತಮ್ಮ ಭಾವನೆಗಳಿಗನುಗುಣವಾಗಿ ಅಭಿವ್ಯಕ್ತಿಸಿದ್ದಾರೆ. ಸಂಕಲನದ ಶೀರ್ಷಿಕೆಯೇ ಕವಿಯ ಜೀವನ ದೃಷ್ಟಿದರ್ಶನವನ್ನು ಅಭಿವ್ಯಕ್ತಿಸುತ್ತದೆ. ನೋವೂ ಕೂಡ ಒಂದು ಹೃದ್ಯ ಕಾವ್ಯವೆಂಬ ಪರಿಕಲ್ಪನೆಯು ಬದುಕನ್ನು ಕಾವ್ಯವೆಂಬಂತೆ ಸ್ವೀಕರಿಸುವ, ನೋವನ್ನೂ ಹೃದಯಸ್ಥ ಮಾಡಿಕೊಳ್ಳುವ ವಿಶಿಷ್ಟ ನೆಲೆ ಮತ್ತು ನಿಲುವಿನಿಂದ ಕೂಡಿದೆ.

ಹೀಗಾಗಿಯೇ ಇವರ ರಚನೆಗಳಲ್ಲಿ 'ನೋವೆಂಬುದು ಅಳುವ ಅನುಭವವಾಗುವುದಿಲ್ಲ; ಆಳುವ ಅರಮನೆಯೂ ಆಗುವುದಿಲ್ಲ. ನೋವೆಂಬುದು ಬದುಕಿನ ಸಹಜ ಪ್ರಕ್ರಿಯೆಯೆಂಬಂತೆ ಕವಿತೆಯಾಗುತ್ತದೆ. ಕವಿತೆಯ ಮೂಲಕ ಬದುಕಿನ ವೈರುಧ್ಯ, ವಿಪರ್ಯಾಸ, ವಿಷಾದಗಳನ್ನು ಒಟ್ಟಿಗೇ ಮೂಡಿಸುತ್ತದೆ. ಕಡೆಗೆ ಜೀವನ ಪ್ರೀತಿಯ ಪ್ರೇರಣೆಯೂ ಆಗುತ್ತದೆ. ಇಂಥ ಸಮಚಿತ್ತ ಸಾಧಿಸುವುದು ಸಾಮಾನ್ಯ ಸಂಗತಿಯಲ್ಲ. ನೋವು ಕವಿತೆಯಾದಂತೆ, ಕವಿತೆಯೂ ನೋವಾಗುವ ಅಭಿವ್ಯಕ್ತಿ ವಿಧಾನದ ವಿಶಿಷ್ಟತೆಯು ತಾಂತ್ರಿಕವಾದುದಲ್ಲ; ಅದು ತಾತ್ವಿಕವಾದುದು. ಹಾಗೆಂದು, ತತ್ವಾದರ್ಶಗಳನ್ನು ಪದಗಳ ಮೂಲಕ ಮೆರವಣಿಗೆ ಮಾಡುವುದಿಲ್ಲ. ಪದಗಳ ಮೆರವಣಿಗೆಯಿಂದ ದೂರವಾದಾಗಲೇ ಕಾವ್ಯಕ್ಕೊಂದು ಸತ್ವ ಮತ್ತು ತತ್ವ ಎರಡೂ ಸಾಧ್ಯತೆಗಳಿವೆ ಎಂಬ ನೋಟವನ್ನು ರಂಗಮ್ಮ ಹೊದೇಕಲ್ ಅವರ ಕೆಲವು ರಚನೆಗಳಲ್ಲಿ ಕಾಣಬಹುದು. ನಿದರ್ಶನವಾಗಿ ಈ ಕವಿತೆಗಳನ್ನು ಗಮನಿಸಿ.

ಪದಗಳ
ಮೆರವಣಿಗೆಯಲ್ಲಿ
ತಪ್ಪಿಸಿಕೊಂಡ ಕವಿತೆ
ನಿಡುಸುಯ್ಯುತ್ತದೆ!'

ಮಾತುಗಳಾಚೆಗಿನ
ಮೌನ
ದಕ್ಕಿದ ದಿನ
ಕವಿತೆ ಹೂವಾಗುತ್ತದೆ!'

ಒಂದು ನೋವಿತ್ತು;
ನೇವರಿಸಿದೆ,
ಕವಿತೆಯಾಯಿತು!

ಸದ್ಯ, ಪದಪುಂಜಗಳ ವಿಜೃಂಭಣೆಯಿಂದ ದೂರವಾದೆನೆಂದು ಕವಿತೆಯೇ ನಿಟ್ಟುಸಿರು ಬಿಡುವ ಸಣ್ಣ ಸೂಚನೆಯಲ್ಲಿಯೇ ಕಾವ್ಯಸತ್ವದ ಆಶಯವಿರುವುದನ್ನು ಕಾಣಬಹುದು. ಇನ್ನು ಈ ಕವಿಯ ತತ್ವಾದರ್ಶವನ್ನು ನೋಡಿ;

ಯಾವ ಹೂವೂ
ಮೆಚ್ಚುಗೆನೆಂದೇ ಅರಳುವುದಿಲ್ಲ,
ಯಾವ ನೋವೂ
ಕರುಣೆಗಾಗಿ ಕವಿತೆಯಾಗುವುದಿಲ್ಲ!'

ಬದುಕನ್ನು ಪ್ರೀತಿಸುವುದೆಂದರೆ
ನೋವುಗಳನ್ನು
ದಾಟುವುದಷ್ಟೇ!'

ಬದುಕು
ಕವಿತೆಯನ್ನು
ದಯಪಾಲಿಸಿತು,
ಕವಿತೆ
ನೋವು ಮೀರುವ
ದಾರಿಯಾಯಿತು!'

ರಂಗಮ್ಮ ಹೊದೇಕಲ್ ಅವರ ರಚನೆಗಳಲ್ಲಿ ಹೆಚ್ಚು ಕಾಣಿಸುವ ಪದಗಳೆಂದರೆ ನೋವು, ಹೂವು, ಕತ್ತಲು, ಬೆಳಕು, ಕನಸು. ಇವು ಕೇವಲ ಪದಗಳಾಗಿ ಉಳಿಯದೆ ಪರಸ್ಪರ ಸಂಯೋಜನೆಗೊಳ್ಳುತ್ತ ಜೀವನಾನುಭವದ ಪ್ರತಿಮಾರೂಪವಾಗುತ್ತವೆ. ಹನಿಗವನದ ಅಸಾಧಾರಣ ಸಾಧ್ಯತೆಗೆ ಸಾಕ್ಷಿಯಾಗುತ್ತವೆ. ಬದುಕಿನ ವೈರುಧ್ಯಗಳನ್ನೂ ಒಳಗೊಳ್ಳುತ್ತ ಬಣ್ಣವಿಲ್ಲದೆ ತಣ್ಣಗೆ ಒಳಗಿಳಿಯುತ್ತ ಕರುಳನ್ನು ಕಾಡುತ್ತದೆ. 'ಬೆಳಕಿನ ವಿಳಾಸ ಹೇಳಿದ್ದೇ ಕತ್ತಲು' ಎಂದು ವೈರುಧ್ಯವನ್ನು ಒಂದಾಗಿಸುತ್ತವೆ. ಮುಂದಿನ ರಚನೆಗಳನ್ನು ಗಮನಿಸಿ:

ಬೆಳಕೆಂಬುದೇ
ಎಷ್ಟೊಂದು ಕುರುಡಾಗಿಸುವಾಗ
ನಿಷ್ಪಾಪಿ ಕತ್ತಲನ್ನು
ಹೇಗೆ ದೂರಬಹುದು!'

ಬದುಕೆಂದರೆ ಮತ್ತೇನು?
ಹಸಿರು ಕನಸು,
ಸುಡು ಸುಡು ವಾಸ್ತವ!'

ಕಲ್ಲಿನ ಮಗ್ಗುಲಲ್ಲೇ
ಹೂವರಳುತ್ತದೆ,
ಕ್ರೌರ್ಯ, ಕಾರುಣ್ಯ ಒಂದೇ ದಾರಿಯಲ್ಲಿ
ನಡೆದ ಹಾಗೆ!'

ನಿದರ್ಶನಕ್ಕೆ ನೀಡಿರುವ ಈ ರಚನೆಗಳಲ್ಲಿ ವೈರುಧ್ಯಗಳ ನಡುವೆ ನಡೆಸುವ ಅನುಸಂಧಾನ ಕ್ರಿಯೆಯು ನೋವೆಂಬ ಹೃದ್ಯಕಾವ್ಯದ ಒಂದು ಗುಣವಾಗಿದೆ. ಕಡೆಗೆ ಕವಿ ಬಯಸುವುದು ಎಟುಕದ ಕನಸನ್ನಲ್ಲ. 'ಎತ್ತರದ ಕನಸೇನೂ ಬೇಡ/ನೆಲಕ್ಕುರುಳಿದ ಹೂವಾಗಲಿ ಬಾಳು' ಎಂಬ ಹಂಬಲವನ್ನಷ್ಟೇ. ಯಾಕೆಂದರೆ ಕವಿಗೆ ಕಟು ವಾಸ್ತವದ ಅರಿವಿದೆ: ವಿಪರ್ಯಾಸದ ವಿಷಾದಾನುಭವ ಆವರಿಸಿದೆ.

ಇಲ್ಲಿ
ದಿನವೂ
ಅಸಂಖ್ಯ ಕನಸುಗಳು
ಕೊಲೆಯಾಗುತ್ತವೆ,
ಕೊಂದವರು
ಶತ್ರುಗಳಾಗಿರುವುದಿಲ್ಲ!'

ಮುಗಿಯದ
ಒಲವನ್ನೇ ಬರೆದೆ,
ಅವರೆಲ್ಲಾ
ಕವಿತೆಯನ್ನೇ ಕೊಂದರು!'

ರಂಗಮ್ಮ ಹೊದೇಕಲ್ ಅವರು ತಮ್ಮದು 'ಹೂಧರ್ಮ' ಎನ್ನುತ್ತಾರೆ. ಹಾಗಾದರೆ ಯಾವುದು ಹೂಧರ್ಮ?

ಗೋಡೆಗಳ ಮೀರಿ
ಗಂಧ ಹರಡುವುದು
ಹೂಧರ್ಮ!'

ತರತಮವಿರದೆ
ಪರಿಮಳ ಹಂಚುವ
'ಹೂಧರ್ಮ'
ನನ್ನ ದಾರಿ!'

ಬದುಕಿನ ಕಟುತ್ವ, ಕ್ರೌರ್ಯ, ಕಾರುಣ್ಯ, ವೈರುಧ್ಯ, ವಿಷಾದಗಳನ್ನು ಒಳಗೊಳ್ಳುವ 'ನೋವೂ ಒಂದು ಹೃದ್ಯ ರೂಪಕ ಕಾವ್ಯವಾಗಿ' ಬಿಡಿ ಬಿಡಿ ರಚನೆಗಳ ಮೂಲಕ ಒಳಗೊಳ್ಳುವ ವಿನ್ಯಾಸವನ್ನು ಕಟ್ಟಿದ ಕವಿ, ಕೊರಗುವುದಿಲ್ಲ. 'ಕತ್ತಲಾಳದಲ್ಲಿ ದೀಪ ಉರಿದ ಹಾಗೆ' ನಗುವನ್ನು ದಕ್ಕಿಸಿಕೊಳ್ಳಬಲ್ಲರು. 'ತುಳಿದ ಕಾಲಿನ ಕೆಳಗೂ/ನಗುತ್ತದೆ ಹಸಿರು/ಬೆಂಕಿಯುಗುಳುವವರ ನಡುವೆ/ನರಳುತ್ತದೆ ಉಸಿರು/'ಎಂದುಕೊಳ್ಳುತ್ತಲೇ ಆತ್ಮವಿಶ್ವಾಸವನ್ನು ಗಳಿಸುತ್ತ ಗಟ್ಟಿಯಾಗಬಲ್ಲರು.

ಹೆಚ್ಚೆಂದರೆ ನೀವು
ನನ್ನ ಕಣ್ಣಲ್ಲಿ
ನೀರು ತುಳುಕಿಸಬಹುದು,
ಒಳಗಿನ ಬೆಳಕ
ಕಸಿಯಲಾರಿರಿ!'

ಹೀಗೆ ಪುಟ್ಟರಚನೆಗಳ ಮೂಲಕ ಬದುಕಿನ ದಟ್ಟ ಅನುಭವ ದ್ರವ್ಯವನ್ನು ಕರಗಿಸಿ ಬೆರಗು ಮೂಡಿಸುವಂತೆ 'ಪ್ರತಿಮೆ'ಯಾಗಿಸಿದ್ದು 'ನೋವೂ ಒಂದು ಹೃದ್ಯ ಕಾವ್ಯ'. ಎಲ್ಲ ಹನಿಗವಿತೆಗಳನ್ನು ಓದಿದ ಮೇಲೆ ಏಕತಾನವಾಗುತ್ತವೆಂದು ಅನಿಸಬಹುದು. ನನ್ನ ಪ್ರಕಾರ, ಬಿಡಿ ಬಿಡಿ ಹನಿಗವನಗಳನ್ನು ಪೋಣಿಸಿದರೆ ರೂಪುಗೊಳ್ಳುವುದು ಒಂದೇ ಹೃದ್ಯಕಾವ್ಯ!

ಇಲ್ಲಿಯವರೆಗೆ ನಾನು ಸಂಕಲನದ ಒಳಗನ್ನು ಕುರಿತು ಮಾತನಾಡಿದೆ. ಈಗ ಹೊರಗನ್ನು ಕುರಿತು ಮಾತು. ಇಡೀ ಸಂಕಲನ ರಂಗಮ್ಮ ಹೊದೇಕಲ್ ಅವರ ಕೈ ಬರಹದಲ್ಲೇ ಅಚ್ಚಿನ ರೂಪ ತಾಳಿ ಹೊರಬರುತ್ತಿದೆ. ಲೇಖಕಿ ಶ್ರೀಮತಿ ಬಿ. ಸಿ. ಶೈಲಾ ನಾಗರಾಜ್ ಅವರು ಸಂಪಾದಕರಾಗಿ ಪ್ರಕಟಿಸುವ 'ಶೈನಾ' ಕೈ ಬರಹದ ಅಕ್ಷರಗಳನ್ನು ಮೂಡಿಸುವುದು ಇದೇ ರಂಗಮ್ಮ ಹೊದೇಕಲ್ ಅವರ ಕೈ! ಈಗ ನೋವನ್ನೂ ಹೃದ್ಯವಾಗಿ ಬರೆದ ಕೈಗಳ ಕಾವ್ಯ ಅದೇ ರೂಪದಲ್ಲಿ ಅಚ್ಚಾಗಿ ಪ್ರಕಟಗೊಳ್ಳುತ್ತಿದೆ.

ಪ್ರಕಾಶಕರಿಗೆ ಅಭಿನಂದನೆಗಳು. ರಂಗಮ್ಮ ಹೊದೇಕಲ್ ಅವರಿಗೆ ಶುಭಾಶಯಗಳು....

MORE FEATURES

ಚರಿತ್ರೆಯ ನೆಪ-ವರ್ತಮಾನದ ತಾಪ...

31-10-2020 ಬೆಂಗಳೂರು

ಮೊಘಲ್ ಸಾಮ್ರಾಜ್ಯದ ಚಕ್ರಾಧಿಪತಿ ಜಹಾಂಗೀರನ ಪ್ರಿಯ ರಾಣಿ ಎಂದೇ ಖ್ಯಾತಿಯ ನೂರ್ ಜಹಾನ್ ಅವಳ ಜನಪರ ಕೆಲಸ-ಕಾರ್ಯಗಳ ನ್ನೇ ಕ...

ನಗರೀಕರಣ:ಅಮಾಯಕರ ಬವಣೆಯ ಪರಿಣಾಮಕಾರ...

31-10-2020 ಬೆಂಗಳೂರು

ಕೃಷ್ಣಮೂರ್ತಿ ಹನೂರು ಅವರ ಹೊಸ ಕಾದಂಬರಿ ‘ಕಾಲಯಾತ್ರೆ’. ನಗರೀಕರಣದ ಪರಿಣಾಮ ಮಹಾನಗರಗಳಲ್ಲಿರುವ ಅಮಾಯಕ ಜನರ...

ಕಾಲ ದೇಶಗಳನ್ನು ಮೀರಿ ಪಸರಿಸಿದ ಕಾವ...

30-10-2020 ಬೆಂಗಳೂರು

ಲೇಖಕ, ಅನುವಾದಕ ವಿಜಯ್ ನಾಗ್ ಜಿ ಅವರು ವಿವಿಧ ರಾಷ್ಟ್ರಗಳ ಗಮನಾರ್ಹ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ &lsqu...

Comments