ಉರ್ದು ಜನಮಾನಸದ ಕವಿ ’ರಾಹತ್’ ಎಂಬ ದುರಿತ ಕಾಲದ ನೆಮ್ಮದಿ

Date: 17-08-2020

Location: ಬೆಂಗಳೂರು


ಗಂಭೀರ ವಿಷಯವನ್ನು ಲಘುವಾಗಿ ಹಾಗೆಯೇ ಮನಸ್ಸಿಗೆ ಮುಟ್ಟುವಂತೆ ಮಾತನಾಡುವ ಮತ್ತು ಬರೆಯುವ ಹಿರಿಯ ಪತ್ರಕರ್ತ-ಲೇಖಕ ಹೃಷಿಕೇಶ ಬಹದ್ದೂರ ದೇಸಾಯಿ ಅವರು ಬರೆಯುವ ಅಂಕಣ ’ಋಷ್ಯಶೃಂಗ’. ಈ ಬರೆಹದಲ್ಲಿ ಅವರು ಉರ್ದು ಸಾಹಿತ್ಯದ ಹಿನ್ನೆಲೆ ಹಾಗೂ ಮುಷಯಿರಾದ ಸ್ವರೂಪದ ಬಗ್ಗೆ ವಿವರಿಸಿದ್ದಾರೆ. ಇತ್ತೀಚಿಗೆ ವಾಚನಗೋಷ್ಠಿಯಿಂದ ನಿರ್ಗಮಿಸಿದ ಖ್ಯಾತ ಉರ್ದು ಶಾಯರ್‌ ರಾಹತ್‌ ಇಂದೋರಿ ಅವರ ವ್ಯಕ್ತಿತ್ವ ಮತ್ತು ಕಾವ್ಯದ ಮಹತ್ವ ಹಾಗೂ ಅದರ ಸ್ವರೂಪವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಮೈಸೂರಿನ ಹತ್ತಿರ ಚಿಕ್ಕ ವಡ್ಡರ ಗುಡಿ ಅಂತ ಒಂದು ಊರು ಇದೆ. ಅಲ್ಲಿನ ಕೃಷ್ಣೇ ಗೌಡರ ಮಗ ಮಹೇಂದ್ರ ನನ್ನ ಸ್ನೇಹಿತ.

ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ. ಎ ಓದಿದವನು. ಐಚ್ಛಿಕ ವಿಷಯವಾಗಿ ದ. ರಾ. ಬೇಂದ್ರೆ ಸಾಹಿತ್ಯವನ್ನು ಆರಿಸಿಕೊಂಡು ಅತ್ಯಂತ ಆಸ್ಥೆಯಿಂದ ಅಭ್ಯಾಸ ಮಾಡಿದವನು. ವಿವಿ ಬಿಟ್ಟು ದಶಕಗಳ ನಂತರ, ಇಂದಿಗೂ ಕೂಡ ಬೇಂದ್ರೆ ಕವನ- ಹಾಡುಗಳನ್ನು ಒಂದಕ್ಷರ ಬಿಡದೇ ಹಾಡುವವನು, ಗೆಳೆಯರ ಗುಂಪಿನಲ್ಲಿ ಅದರ ಅರ್ಥ ಸಾಧ್ಯತೆಗಳ ಬಗ್ಗೆ ಚರ್ಚಿಸುವನು. ಸಾಹಿತ್ಯ- ಕಾವ್ಯದ ಬಗ್ಗೆ ಸುದ್ದಿಯ ಹೊರತಾಗಿಯೂ ಆಸಕ್ತಿ ಹೊಂದಿರುವ ಈ ಭೂಮಂಡಲದ ಕೆಲವೇ ಕೆಲ ಪತ್ರಕರ್ತರಲ್ಲಿ ಒಬ್ಬ.

ಅವನು ಈಗ ಮೈಸೂರಿನಲ್ಲಿ ಹಿರಿಯ ಪತ್ರಕರ್ತನಾಗಿ, ರಾಜ್ಯ ಮಟ್ಟದ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕನಾಗಿ ಕೆಲಸ ಮಾಡುತ್ತಾ ಇದ್ದಾನೆ. ಇಂತಿಪ್ಪ ಮಹೇಂದ್ರನನ್ನು ಅಲ್ಲಿನ ಉರ್ದು ಸಾಹಿತ್ಯ ಸಂಘಟನೆಯೊಂದು ಮುಷಾಯರಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಲು ಆಹ್ವಾನಿಸಿತು.

ಸಂತೋಷದಿಂದ ಒಪ್ಪಿಕೊಂಡ ಆತ ಅಲ್ಲಿಗೆ ಹೋಗಿ ಒಂದು ಇಡೀ ರಾತ್ರಿ ಕಳೆದ. ಅಂದು ಕೆಡಿಸಿಕೊಂಡ ನಿದ್ದೆಯ ಕೋಟಾ ಮುಗಿದ ಕೆಲವು ದಿನಗಳ ನಂತರ ನನಗೆ ಒಂದು ದಿನ ಬೆಳಿಗ್ಗೆ ಫೋನು ಮಾಡಿದ. "ಅಲ್ಲಪ್ಪಾ, ಆ ಶಾಯರಿ ಕಾರ್ಯಕ್ರಮಕ್ಕೆ ಹೋಗಿ ಒಳ್ಳೆ ಸಾವಾಸ ಆಯ್ತಲ್ಲಪ್ಪ ’’, ಅಂದ. "ಯಾಕೋ" ಅಂದರೆ. "ಅಯ್ಯೋ ಅದು ಕವನ ವಾಚನ ಅಂತ ಹೋದರೆ ಒಳ್ಳೆ ಮಲೆ ಮಹಾದೇಶ್ವರನ ಜಾತ್ರೆ ಇದ್ದಂಗೆ ಇತ್ತು ಕಣಯ್ಯ . ಹೋ ಅಂತಾರೆ, ಎದ್ದೆದ್ದು ಕುಣಿತಾರೇ. ಜೋರಾಗಿ ಕೂಗು ಹಾಕುತಾರೆ, ಆವಯ್ಯ ಒಂದು ಸಾಲು ಹೇಳೋದ್ರಾಗೆ ಕೆಳಗಡೆ ಕುಂತವರೆ ಮುಂದಿಂದು ತಾವೇ ಹೇಳಿ ಬಿಡ್ತಾರೆ,’’ ಅಂತ ಆಶ್ಚರ್ಯ ವ್ಯಕ್ತಪಡಿಸಿದ. ಅದು ಆವನ ಜೀವನದ ಮೊದಲ ಶಾಯರಿ ಕಾರ್ಯಕ್ರಮ ಅಂತ ನನಗೆ ಗೊತ್ತಿತ್ತು. ಈ ರೀತಿಯ ಉದ್ಘಾರಗಳನ್ನು ನಾನು ಅನೇಕರಿಂದ ಕೇಳಿದ್ದರಿಂದ ನನಗೆ ಆಶ್ಚರ್ಯ ಆಗಲಿಲ್ಲ.

ಅವರದು ಅದೇನು ಸಂಭ್ರಮ, ಏನ್ ಕತೆ !’’ ಅಂತ ತಾರೀಫು ಮಾಡಿದ. ನಮ್ಮ ಕನ್ನಡದವರು ಕವನ ವಾಚನ ಅಂದರೆ ಒಳ್ಳೆ ಸರಕಾರಿ ಸಮಾರಂಭ, ಶೋಕ ಸಭೆ ಥರ ಕೂತಿರತರಪ್ಪ. ಆ ಉರ್ದು ಭಾಷೆ ಬರದೇ ಹೋದರೂ ಅವರ ಮೂಷಾಯರಾ ಸ್ಟೈಲು ನೋಡಿ ನಾವು ಕಲತಕೋಬೇಕಪ್ಪ. ಅದೆಲ್ಲ ಬಿಟ್ಟು.. ,’’ ಅಂತ ಅನಿರ್ವಚನೀಯ ಸಂಕಟ ಪಟ್ಟುಕೊಂಡ.

ಉರ್ದು - ಹಿಂದೂಸ್ತಾನಿ ಸರಿಯಾಗಿ ಪರಿಚಯ ಇಲ್ಲದವರಿಗೆ ಶಾಯರಿ ಕಾರ್ಯಕ್ರಮಗಳು ಊರ ಜಾತ್ರೆ ಕಂಡ ಹಂಗ ಕಾಣುವುದು ಸಹಜ.

ಭಾರತದ ಅಸಂಖ್ಯ ಭಾಷೆಗಳಲ್ಲಿ, ಕಾವ್ಯ ವಾಚನ ಕಾರ್ಯಕ್ರಮಕ್ಕೆ ಇಷ್ಟೊಂದು ಸಂಭ್ರಮದ ಸಂಪ್ರದಾಯ ಇರೋದು ಉರ್ದು ಒಂದಕ್ಕೇ ಇರಬಹುದು. ಸಂಭ್ರಮ ಹೋಗಲಿ, ಅನೇಕ ಭಾಷೆಗಳಲ್ಲಿ ಕಾವ್ಯ ವಾಚನದ ಕಾರ್ಯಕ್ರಮವೇ ನಡೆಯೋದಿಲ್ಲ.

ಭಾಷಾತಜ್ಞ ಡಾ. ಗಣೇಶ ದೇವಿ ಅವರ ಜನ ಸಾಮಾನ್ಯರ ಭಾಷಾ ಸಮೀಕ್ಷೆಯ ಪ್ರಕಾರ ಹಿಂದೂಸ್ತಾನದಲ್ಲಿ ಸುಮಾರು 22,000 ಭಾಷೆಗಳು ಇವೆ. ಕೆಲವು ಮಾತಾಡುವವರು ಇಲ್ಲದೇ ಸಾಯುತ್ತಿವೆ. ಭಾರತ ಭಾಷೆಗಳ ಕಬರಸ್ತಾನವಾಗುತ್ತಿದೆ ಅಂತ ಅವರ ಅಂಬೋಣ.

ಇಷ್ಟೊಂದು ಭಾಷೆಗಳಲ್ಲಿ ಸಾಹಿತ್ಯ ಚಟುವಟಿಕೆ ನಿಯಮಿತವಾಗಿ ನಡೆಯುತ್ತವೋ ಇಲ್ಲವೋ , ಮಾಹಿತಿ ಇಲ್ಲ. ಆದರೆ ಸರಕಾರ ಖಾತಾ ಲೆಕ್ಕದಲ್ಲಿ ಇರುವ 18 ಭಾಷೆಗಳಲ್ಲಿ ಅಂತೂ ಖಂಡಿತ ನಡೆಯುತ್ತವೆ. ಅವಕ್ಕೆ ರಾಜ್ಯ- ಕೇಂದ್ರ ಸರ್ಕಾರದ ಬೆಂಬಲವೂ ಇದೆ. ಆದರೆ ಅವು ತಾವೇ ತಾವಾಗಿ ಜೀವಂತವಾಗಿ ಇವೆಯೆ? ಈ ಪ್ರಶ್ನೆಗೆ ಉತ್ತರ ಸರಳ ಇಲ್ಲ.

ಉರ್ದು ಎನ್ನುವುದು ಭಾರತ ಆದ್ಯಂತ ಬಹುತೇಕ ಜನರಿಗೆ ಅರ್ಥ ವಾಗುತ್ತದೆ ಆದ್ದರಿಂದ ಅದರ ಕಾವ್ಯ ವಾಚನ ಕಾರ್ಯಕ್ರಮ ಯಶಸ್ವಿಯಾಗುವುದು ಸಹಜ ಅಂತ ನಮಗೆ ಅನ್ನಿಸಬಹುದು. ಉರ್ದು ಎನ್ನುವ ಅಪ್ಪಟ ಭಾರತೀಯ ಭಾಷೆಯ ಹುಟ್ಟಿನ ಹಿನ್ನೆಲೆಯನ್ನು ನೋಡಿದರೆ ಸ್ವಲ್ಪ ಅರ್ಥ ಆಗಬಹುದು.

ಉರ್ದು ಎನ್ನುವುದು ಉರ್ದು ಭಾಷೆಯ ಪದ ಅಲ್ಲ. ತುರ್ಕಿ ಭಾಷೆಯಲ್ಲಿ ಅದಕ್ಕೆ ಸೈನಿಕನ ಟೆಂಟು ಅಥವಾ ದಂಡು ಪ್ರದೇಶ ಅಂತ ಅರ್ಥ.

ದೆಹಲಿ ದೊರೆ ಅಲ್ಲಾವುದಿನ ಖಿಲಜಿ ಹಾಗೂ ಷಿಹಾಬುದ್ದಿನ ಓಮರ್ನ ಕಾಲದಲ್ಲಿ ಅಖಂಡ ಭಾರತದ ಅಂದರೆ ಆಪ್ಘಾನಿಸ್ತಾನ್ದಿಂದ ಹಿಡಿದು ಬರ್ಮಾದ ವರೆಗೂ ಹಬ್ಬಿದ ಈ ಭೂ ಪ್ರದೇಶ ವಿವಿಧ ಕಡೆಗಳಿಂದ ಯುವಕರನ್ನು ಸೈನ್ಯಕ್ಕೆ ಸೇರಿಸಲಾಯಿತು. ಅವರು ತಮ್ಮ ತಮ್ಮೊಳಗೆ ಮಾತಾಡುವಾಗ ಆಗಿನ ಕಾಲದಲ್ಲಿ ದೆಹಲಿಯಲ್ಲಿ ಚಾಲ್ತಿ ಇದ್ದ ದೇಹಲವಿ ಅಥವಾ ಹಿಂದವಿ ಭಾಷೆಗೆ ತಮ್ಮ ಮಾತೃ ಭಾಷೆಯ ಪದ ಹಾಗೂ ವ್ಯಾಕರಣ ಸೂತ್ರಗಳನ್ನು ಸೇರಿಸಿ ಮಾತನಾಡಲು ಆರಂಭಿಸಿದಾಗ ಹುಟ್ಟಿದ ಭಾಷೆ ಉರ್ದು.

ಉರ್ದು ಭಾಷೆಗೆ ಇನ್ನೊಂದು ಹೆಸರು ರೇಖ್ತಾ. ಅಂದರೆ ಮಿಶ್ರಣ. ಅದು ಇದೇ ಕಾರಣಕ್ಕೆ.

ಸಿಂಧೂ ನದಿಯಿಂದ ಯಮುನಾ ನದಿಗಳ ಪಾತ್ರ ಗಳ ನಡುವೆ ಬರುವ ಪ್ರದೇಶಕ್ಕೆ ದೇಹಲೀಜ್ (ಹೊಸ್ತಿಲು) ಅಂತ ಕರೆಯಲಾಗುತ್ತದೆ. ಭಾರತದ ಶಕ್ತಿ ರಾಜಕಾರಣಕ್ಕೆ ಹೊಸ್ತಿಲು ಆಗಿದ್ದು ದೆಹಲಿ. ಅದಕ್ಕೇ ಆ ಹೆಸರು.

ಈಗ ನಾವು ಯಾವ ರಾಜ್ಯಗಳನ್ನು ಹರಿಯಾಣ- ಪಂಜಾಬ್, ರಾಜಸ್ತಾನ ಹಾಗೂ ದೆಹಲಿ ಅಂತ ಗುರುತಿಸುತ್ತೇವೋ ಆ ಪ್ರದೇಶಗಳಲ್ಲಿ ಮಾತಾಡುವ ಭಾಷೆಗಳು ಇಂಡೋ- ಆರ್ಯನ್ ಹಾಗೂ ಇಂಡೋ ಯುರೋಪಿಯನ್ ಸಮೂಹಕ್ಕೆ ಸೇರಿದ್ದವು. ಇವುಗಳಲ್ಲಿ ಮುಖ್ಯವಾದದು ಅಪಭ್ರಂಶ ಅನ್ನೋ ಭಾಷೆ ಅಥವಾ ಭಾಷಾ ಸಮೂಹ. ಇದು ಜನಸಾಮಾನ್ಯರ ಭಾಷೆಯಾಗಿದ್ದು, ಭೌಗೋಳಿಕ ಗಡಿಗಳನ್ನು ಮೀರಿ ಬೆಳೆಯಿತು.

ಇನ್ನೂ ಇತಿಹಾಸಕಾರರ, ಅರ್ಬನ್ ಲೇಜಂಡಗಳ ಸೃಷ್ಟಿಕರ್ತರಿಗೆ ಬಹು ಪ್ರಿಯವಾದ ಸುಲ್ತಾನ್ ಮೊಹಮ್ಮದ್ ಬಿನ ತುಘಲಕ್ ದೆಹಲಿಯಿಂದ ದೇವಾಗಿರಿಗೆ ತಮ್ಮ ರಾಜಧಾನಿ ಬದಲಾಯಿಸಿ, ಲಕ್ಷಾಂತರ ಜನಉತ್ತರ ದಿಂದ ದಕ್ಷಿಣಕ್ಕೆ ವಲಸೆ ಬರುವಂತೆ ಮಾಡಿದ. ಕೆಲವು ವರ್ಷದ ನಂತರ ಥೇಟ್ ಇಂದಿನ ದೊರೆಗಳಂತೆ ಮತ್ತೆ ಮನಸು ಬದಲಿಸಿ ಎಬೌಟ್ ಟರ್ನ್ ಮಾಡಿಸಿದ. ಆ ದಕ್ಷಿಣಾಪಥದ ವಲಸಿಗರನ್ನು ಉತ್ತರದ ಉತ್ತುಂಗಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದರು. ಬಹುತೇಕರು ಹೋದರು. ಆದರೆ ಅನೇಕರು ಈ ಪ್ರಸ್ಥ ಭೂಮಿಯನ್ನು ಬಿಟ್ಟು ಹೋಗಲಿಲ್ಲ.

ಇಲ್ಲಿಯೇ ನೆಲೆಸಿದವರಲ್ಲಿ ಆಡಳಿತಗಾರರು, ಕಲಾವಿದರು, ಕವಿ, ಸಾಹಿತಿಗಳು, ಶಿಕ್ಷಕರು, ಸೈನಿಕರು, ಕುಶಲಕರ್ಮಿಗಳು ಸಹ ಇದ್ದರು. ಇವರು ದಕ್ಷಿಣದ ಬಹಮನಿ - ಬರೀದಶಾಹಿ, ಅದಿಲ್ ಶಾಹಿ ರಾಜರ ಆಸ್ಥಾನ ಭಾಷೆ ಯಾಗಿದ್ದ ಪರ್ಷಿಯನ್ ಮತ್ತು ಜನ ಸಾಮಾನ್ಯರ ಭಾಷೆಯಾದ ದಖನಿಗಳಿಂದ ಪ್ರಭಾವಿತರಾದರು.

ತಾವು ಕಲಿತು ಬೆಳೆದಿದ್ದ ದೇಹಲವಿ- ಹಿಂದವಿ ಭಾಷೆಗೆ ದಖನಿ -ಪರ್ಷಿಯನ್ ಬೆರೆಸಿ ಬರೆಯ ತೊಡಗಿದರು. ಉರ್ದುದ ಮೊದಲ ಕವಿ ದೆಹಲಿಯ ಅಂಚಿನ ಅಮೀರ್ ಖುಸ್ರೋ ಆದರೆ , ಗದ್ಯದ ಬಿದರಿನ ಫಕರ ಎ ದಿನ ನಿಜಮಿ ಮತ್ತು ಗುಲ್ಬರ್ಗದ ಬಂದೇ ನವಾಜ್ ರಿಂದ ಹುಟ್ಟಿತು.

ಇದು ಜನರಾಡುವ ಅನೇಕ ಭಾಷೆಗಳ ಮಿಶ್ರಣವಾದ್ದರಿಂದ ಜನರ ಹೃದಯಕ್ಕೆ ಹತ್ತಿರವಾದದು ಅಂತ ಬೀದರಿನ ’ಕಾವ್ಯ ಸೂರ್ಯ’ ಶಾಯರ ಎ ಹಯಾತ ರಶೀದ್ ಅಹ್ಮದ್ ರಶೀದ್ ಹೇಳುತ್ತಿದ್ದರು. `ಉರ್ದು ಬಾಯಿಯಿಂದ ಆಡಿ ಕಿವಿಯಿಂದ ಕೇಳುವ ಭಾಷೆ ಅಲ್ಲ. ಒಬ್ಬರ ಹೃದಯದಿಂದ ಇನ್ನೊಬ್ಬರ ಹೃದಯದ ನಡುವೆ ಓಡಾಡುವ ಭಾಷೆ,’ ಅನ್ನುವುದು ಅವರ ಖ್ಯಾತ ಹೇಳಿಕೆ.

ಈಗ ಮಹೇಂದ್ರ ಅವರ ಶಾಯರಿಗೆ ಬರೋಣ. ಉರ್ದು ಕವನ ವಾಚನ ಅನ್ನೋದು ಜನರ ದರಬಾರಿನಲ್ಲಿ ನಡೆಯುವ ಕಾರಣಕ್ಕೆ ಅದರ ಸಂಭ್ರಮವೇ ಬೇರೆ.

ಈ ಸಂಭ್ರಮವನ್ನು ಹೆಚ್ಚಿಸಿದ ಸಾವಿರಾರು ಕವಿಗಳು ಈ ಉಪಖಂಡದ ತುಂಬ ಇದ್ದಾರೆ. ಅವರ ಸಂಖ್ಯೆ ಹೆಚ್ಚುತ್ತಾ ಇದೆ ಹೊರತು ಕಮ್ಮಿ ಆಗುತ್ತಿಲ್ಲ. ಈ ಪ್ರಜಾ ದರ್ಬಾರಿನ ಸೂಪರ್ ಸ್ಟಾರ್ ಪಟ್ಟ ಗಳಿಸಿದ್ದ ರಾಹತ್ಇಂದೋರಿ ಮೊನ್ನೆ ಅಷ್ಟೇ ’ಮಂಚ’ (ವೇದಿಕೆ)ದಿದ್ದ ನಿರ್ಗಮಿಸಿದ್ದಾರೆ.

ಕವಿಗಳು ಜಗತ್ತಿನ ಅನಭಿಶಕ್ತ ದೊರೆಗಳು ಅಂತ ಘೋಷಿಸಿದ ಪಿ. ಬಿ ಷೆಲಿ ಆ ರೀತಿ ರಾಜ್ಯ ಭಾರ ಮಾಡಿದ ಯಾರನ್ನಾದರೂ ನೋಡಿದ್ದನೋ ಇಲ್ಲವೋ. ಆದರೆ ಉರ್ದು ಜಗತ್ತಿನ ಸಾಮ್ರಾಟನಾಗಿ ಕೇಳುಗರ ಹೃದಯವನ್ನು 50 ವರ್ಷ ಆಳಿದವರು ರಾಹತ್ ಇಂದೋರಿ.

ಪಶ್ಚಿಮ ಬಂಗಾಳದ ಸಂಸದೆ ಮಹುವ ಮೊಯಿತ್ರ ಅವರು ಕೋಮುವಾದದ ಬಗ್ಗೆ ಮಾತನಾಡುವಾಗ ರಾಹತ್ ಅವರ `ಸಭಿ ಕಾ ಖೂನ ಹಿ ಈಸ್ ಮಿಟ್ಟಿ ಮೇ, ಕಿಸಿ ಕಿ ಬಾಪ ಕಾ ಹಿಂದೂಸ್ತಾನ್ ಥೋಡಿ ಹೈ' ಅನ್ನುವ ಅವರ ಶಾಯರಿಯನ್ನು ಲೋಕಸಭೆಯಲ್ಲಿ ಓದಿದರು . ಇದರಿಂದ ಉರ್ದು ಪರಿಚಯ ಇರದ ಅನೇಕ ಭಾರತೀಯರಿಗೆ ಮೊದಲ ಬಾರಿಗೆ ರಾಹತ್ ಅವರ ಪರಿಚಯ ಆಯಿತು. ಇದು ನಮ್ಮ ದುರ್ದೈವ. ರಾಹತ್ ಅವರದಲ್ಲ.

ಮಹುವಾ ಭಾಷಣ ಖ್ಯಾತಿ- ಅಪಖ್ಯಾತಿ ಎರಡನ್ನೂ ತಂದಿತು. ಅವರು ನರೇಂದ್ರ ಮೋದಿ ಅವರನ್ನು ಟೀಕಿಸಲು ಬರೆದ ಕವನ ಅಂತ ಕೆಲವರು ಹೇಳಿದರು. ರಾಹತ್ ’ಜಿಹಾದಿ’ ಅಂತ ಹೀಯಾಳಿಸಿದರು.

ಅದಕ್ಕೆ ಅವರು, ಇದು ಮೂವತ್ತು ವರ್ಷ ಹಿಂದಿನ ಕವನ. ಈಗ ಜನರಿಗೆ ನೆನಪಾಗಿದೆ. ಇದು ಮುಸ್ಲಿಂ ಕವಿ ಬರೆದದ್ದು ಅಲ್ಲ. ಭಾರತೀಯ ಕವಿ ಬರೆದದ್ದು. ನನಗೆ ಎಪ್ಪತ್ತು ವರ್ಷವಾಯಿತು. ನಾನು ’ಜಿಹಾದಿ’ ಆಗಿದ್ದೇನೆ ಅನ್ನೋದು ನನಗೆ ಗೊತ್ತಾಗಲೇ ಇಲ್ಲ, ಅಂತ ನಕ್ಕರು.

`ನಾನು ಸತ್ತಾಗ ನನ್ನನ್ನ ಬ್ಯಾರೆ ಅಂತ ಗುರುತು ಮಾಡ್ರಿ

ನನ್ನ ರಕ್ತ ದಿಂದ ನನ್ನ ಹಣೆ ಮ್ಯಾಲೆ ಹಿಂದೂಸ್ತಾನಿ ಅಂತ ಬರದು ಬಿಡರಿ'

ಅಂತ ಸಿಟ್ಟು- ವಿಷಾದದಿಂದ ಹೇಳಿದರು.

ಅವರ ಬಾಲ್ಯ ಕಷ್ಟದಲ್ಲಿ ಕಳೆಯಿತು. `ಅಕಸ್ಮಾತ್ ಸಾಹುಕಾರರ ಮನೆಯಲ್ಲಿ ನಾನು ಹುಟ್ಟಿದ್ದಾರೆ, ನಾನು ಶಾಯರಿ ಕೇಳುತ್ತಿದ್ದೆ, ಓದುತ್ತಿರಲಿಲ್ಲ' ಅಂತ ಅವರು ಒಮ್ಮೆ ಹೇಳಿದ್ದರು.

ಮಧ್ಯ ಪ್ರದೇಶದ ಇಂದೋರಿನಲ್ಲಿ ಜವಳಿ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ರಫತುಲ್ಲಾ ಖುರೇಷಿ ಹಾಗೂ ಮಕಬೂಲ್ ಉನ್ನಿಸ ಅವರ ಐದು ಮಕ್ಕಳಲ್ಲಿ ನಡುವಿನವರು ರಾಹತ್ ಖುರೇಷಿ.

ಕೆಳವರ್ಗ ಕೆಳಜಾತಿಯ ಬಡ ಕುಟುಂಬದಲ್ಲಿ ಹುಟ್ಟಿದ ರಾಹತ್‌ಗೆ ಹೊಸ ದಾರಿ ತೋರಿದ್ದು ಸರಕಾರಿ ಉರ್ದು ಶಾಲೆ. ಅಲ್ಲಿ ಅವರಿಗೆ ಸಾಹಿತ್ಯ ಆಸಕ್ತರಾದ ಶಿಕ್ಷಕರು ಸಿಕ್ಕರು. "ನಿಮ್ಮಪ್ಪ - ಅಮ್ಮ ನಿನಗೆ ಹೊಸ ಆಟಿಗೆ ಕೊಡಿಸದೇ ಇದ್ದರೆ ಏನು? ನಿನ್ನ ಕೈಯಲ್ಲಿ ಪುಸ್ತಕ ಇದೆ, ಅದನ್ನು ಓದು, ಖಾಲಿ ನೋಟುಪುಸ್ತಕ ಇದೆ, ಅದರಲ್ಲಿ ಬರೆ. ಅದರಿಂದ ನೀನು ಹೊಸ ಪ್ರಪಂಚವನ್ನೇ ಸೃಷ್ಟಿಸಬಹುದು'’ ಅಂತ ಹುರಿದುಂಬಿಸಿದರು.

ಅವರು ಸಣ್ಣ ವಯಸ್ಸಿನಲ್ಲಿಯೇ ಕೆಲಸ ಮಾಡಬೇಕಾಯಿತು. ಆದರೆ ಅವರಿಗೆ ಕೆಲಸ ಕೊಡಿಸಿದ್ದು ಪೆನ್ ಅಲ್ಲ, ಪೆನ್ಸಿಲ್. ಚಿಕ್ಕಂದಿನ ಹವ್ಯಾಸವಾಗಿದ್ದ ಚಿತ್ರಕಲೆ ಅವರಿಗೆ ಸಿನಿಮಾ ಪೋಸ್ಟರುಗಳು- ನಾಟಕದ ಬ್ಯಾನರುಗಳನ್ನು ಬರೆಯುವ ಕೆಲಸ ದೊರಕಿಸಿತು. ಅದರಿಂದ ಸ್ವಲ್ಪ ದುಡ್ಡು ಕೂಡಿಟ್ಟು ಕಾಲೇಜು, ನಂತರ ವಿಶ್ವವಿದ್ಯಾಲಯ ಸೇರಿದ ರಾಹತ್ ಉರ್ದು ಸಾಹಿತ್ಯದಲ್ಲಿ ಎಂ.ಎಂ ಓದಿದ್ದರು.

ಅಷ್ಟು ಹೊತ್ತಿಗಾಗಲೇ ಮಧ್ಯಪ್ರದೇಶದ ಮುಷಾಯರಾ ಗಳಲ್ಲಿ ಈ ಯುವ ಕವಿ ಜನಪ್ರಿಯ ಆಗತೊಡಗಿದ್ದ. ಅದನ್ನು ಕಂಡ ಶಿಕ್ಷಕರು ಅವರಿಗೆ ಒಂದು ವಿದ್ಯಾರ್ಥಿವೇತನ ಕೊಡಿಸಿದರು. ಆ ಹಣದಿಂದ ಪಿಎಚ್. ಡಿ. ಸೇರಿಕೊಂಡರು.

`ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಮುಷಾಯರಾ ಗಳ ಪಾತ್ರ' ಅನ್ನುವುದರ ಬಗ್ಗೆ ಸಂಶೋಧನೆ ಮಾಡಿದ ರಾಹತ್ ಕೆಲವು ವರ್ಷ ಕಾಲೇಜಿನಿಲ್ಲಿ ಪಾಠ ಮಾಡಿದರು. ನಂತರ ಇಂದೋರಿನ ದೇವಿ ಅಹಲ್ಯಾದೇವಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇರಿಕೊಂಡರು.

ಮಧ್ಯ ವಯಸ್ಸಿನವರೆಗೂ ಇಂದೋರು ಬಿಟ್ಟು ಹೋಗದ ಕವಿ ಕೊನೆ -ಕೊನೆಗೆ "ನಾನು ಜಗತ್ತಿನ ಮೂರನೇ ಎರಡು ಭಾಗದಲ್ಲಿ ನಾನು ಶಾಯರಿ ಓದಿದ್ದೇನೆ'’ ಅನ್ನುವಷ್ಟು ದೊಡ್ಡವರಾಗಿ ಬೆಳೆದರು.

’ನಮ್ಮ ನಡುವಿನ ಪ್ರಮುಖ ಸಮಕಾಲೀನ ರಾಜಕೀಯ ಕವಿ ರಾಹತ್ ಇಂದೋರಿ’ ಅಂತ ವಿಮರ್ಶಕರು ಗುರುತಿಸುವ ಅನೇಕ ವರ್ಷ ಮೊದಲು ರಾಹತ್ ’ಶಾಯರ ಎ ಆವಾಮ’(ಜನಮಾನಸದ ಕವಿ) ಅಂತ ಹೆಸರಾದವರು. ಅವರ ಕವಿತೆಗಳಲ್ಲಿ ಜಮೀನುದಾರರು, ಸಾಹುಕಾರರು, ಕೈ ಸಾಲ ಕೊಟ್ಟು ಬಡವರ ಜೀವ ತೆಗೆಯುವ ಧಣಿಗಳು ಎಲ್ಲರೂ ಟೀಕೆ ಅಪಹಾಸ್ಯಕ್ಕೆ ಒಳಗಾದರು. ಜನರನ್ನು ನಿತ್ಯ ಕಾಡುತ್ತಿದ್ದ ರೋಟಿ- ಪಾನಿ - ಛತ್ತ, ಆಳುವವರು ಜನರಿಂದ ಕಸಿದುಕೊಂಡ ಸಾರ್ವಜನಿಕ ಆಸ್ತಿ, ಅವರಿಗೆ ಸಿಗಬೇಕಾದ ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆ ಇವು ಅವರ ಕವನದ ತುಂಬ ರಾರಾಜಿಸಿದವು.

ಶಾಯರಿ- ಗಜಲ್ ಅಂದರೆ ಶರಾಬು ಹಾಗೂ ಶಬಾಬು (ಹೆಂಡ ಹಾಗೂ ಯೌವನ), ಸಾಕಿ ಹಾಗೂ ಇಷ್ಕ (ಮಧುಶಾಲೆಯ ಪರಿಚಾರಿಕೆ ಹಾಗೂ ಪ್ರೇಮ ) ಇವುಗಳು ಅಷ್ಟೇ ಅಂತ ಕೆಲವರು ತಿಳಿದು ಕೊಂಡಿದ್ದಾರೆ. ಅದು ಹಂಗಲ್ಲ.

ಅದಕ್ಕೆ ಅವರು ಒಮ್ಮೆ

`ಒಂದು ಗಜಲ್ ಗೆ ಎಷ್ಟು ರಕ್ತ ಬಸಿಯ ಬೇಕಾಗತೇತಿ ಅಂತ ನನ್ನ ಕೇಳರಿ,

ಈ ಧಂದೆ ಭಾರಿ ಆರಾಮ ಅಂತ ತಿಳಕೊಂಡಾರ ಎಲ್ಲರೂ'

ಅಂತ ಅಂದಿದ್ದರು.

ಕಳೆದ ಕೆಲವು ದಶಕಗಳಲ್ಲಿ ಆ ಅವರು ಇಲ್ಲದೇ ಮುಷಾಯರಾ (ಕವನ ವಾಚನ) ಕಾರ್ಯಕ್ರಮ ನಡೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಮಟ್ಟಿಗೆ ಅವರು ಉರ್ದು ಕಾವ್ಯಕ್ಕೆ ಅನಿವಾರ್ಯವಾಗಿದ್ದರು.

ಅಪರಿಮಿತ ನೈತಿಕ ಧೈರ್ಯ ಹೊಂದಿದ್ದ ಅವರು `ಬರುವ- ಹೋಗುವ ಸರಕಾರ'ಗಳ ಮರ್ಜಿಗೆ ಬೀಳದೆ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು.

`ಆತ್ಮ ಗೌರವ' ಅವರ ಕವನಗಳ ಕೇಂದ್ರ ದಲ್ಲಿ ಇತ್ತು. ಸರಕಾರ ಹಜ್ ಸಬ್ಸಿಡಿ ತೆಗೆದು ಹಾಕಿದಾಗ ಕೆಲವು ರಾಜಕೀಯ ನಾಯಕರು, ಲೇಖಕರು ಗೋಳಾಡಿಕೊಂಡರು. ಆಗ ರಾಹತ್ ಹೇಳಿದ ಶಾಯರಿ ಇದು

`ಅಲ್ಲಿ- ಇಲ್ಲೇ ಬಿದ್ದ ಒಂದೊಂದ ಮಂಜಿನ ಹನಿ ಎಣಿಸಿ ಮಾಡತಿರಿ ಏನು?

ಕೇಳೋದಾದ್ರ ಭೋರ್ಗರಿಸಿ ಹರಿಯೊ ನದಿಯ ಮಾಲೀಕತ್ವ ಕೇಳರಿ’

ಅವರ ಸರಕಾರವನ್ನು ವಿರೋಧಿಸುವ ಕವನಗಳನ್ನ ಸಣ್ಣ ಮನಸ್ಸಿನ ಧಾರ್ಮಿಕ ಮುಖಂಡರು, ಮುಸ್ಲಿಂ ರಾಜಕಾರಣಿಗಳು ಬಳಸಿಕೊಳ್ಳತೊಡಗಿದರು. ಇದು ಅವರಿಗೆ ಇಷ್ಟವಾಗಲಿಲ್ಲ.

ಅದಕ್ಕೆ ಅವರು

`ಹಬ್ಬಕ್ಕೆ ಸ್ವಂತ ತಮ್ಮನನ್ನ ಅಪ್ಪಿಕೊಳ್ಳಲಾರದವರು

ನಮಗ ಪ್ರೀತಿಯ ಪಾಠ ಹೇಳಾಕ ಬಂದಾರ

ಮಸೀದಿಯೊಳಗ ಹೆಂಗ ಪ್ರಾರ್ಥನಾ ಮಾಡಬೇಕು ಅಂತ

ಹೇಳೋರು ಸಫಾರಿ ಸೂಟು ಹಾಕ್ಕೊಂಡು ಬಂದಾರ

ಈ ರಾಜಕೀಯದವರು ಹಾಕೋತರಲ್ಲ

ಅಂತಹ ಅಂಧರ ಚಷ್ಮ ಇಮಾಮ್ ಬುಖಾರಿ

ಅಂತವರು ಹಾಕ್ಕೊಂಡು ಬಂದಾರ'

ಅಂತ ಅವರನ್ನ ಗೇಲಿ ಮಾಡಿದರು.

ಮುಸ್ಲಿಮರು ಘೇಟೋದಲ್ಲಿ ಇರುವವರು ಅಂತ ಹಿರಿಯ ನಾಯಕರು ಒಬ್ಬರು ಟೀಕಿಸಿದಾಗ ಅವರು ಮುಸ್ಲಿಮರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಅಂತ ಕಾವ್ಯ ದ ಮೂಲಕ ಸೂಚಿಸಿದರು.

``ನಂ ಹರಕ ಟೋಪಿಗಿ ನೋಡಿ ಮುಸಿಮುಸಿ ನಗಬ್ಯಾಡ್ರಿ

ಮ್ಯೂಸಿಯಂದಾಗ ಈಗ ರೊಕ್ಕ ಕೊಟ್ಟ ನೋಡಿ ಬಂದೀರೆಲ್ಲ

ಶಹನ ಷಾನ ಕಿರೀಟ- ಅದು ನಮ್ಮದ,

 

ನಿಮ್ಮ ಮನಿಯೊಳಗ ಇರೋ ಮುತ್ತು- ರತ್ನದ ಕತಿ ಏನು ಹೇಳ್ತೀ?

ಅಂತವೆಲ್ಲಾ ನಮ್ಮ ಓಣಿಯೊಳಗ ಮಂಗನಾಟ ಆಡಿಸಲಿಕ್ಕೆ ಬರೋರು

ಹಾಕ್ಕೊಂಡು ಬರ್ತಾರ, ’’

ಅಂತ ನಕ್ಕರು.

ಸುಮಾರು ಮೂವತ್ತಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಿಗೆ ಗೀತೆ ಬರೆದ ರಾಹತ್ ಅದನ್ನು ದೊಡ್ಡದಾಗಿ ಹೇಳಿಕೊಳ್ಳಲಿಲ್ಲ.

ಮಿಷನ್ ಕಾಶ್ಮೀರ ದ "ಭೂಮರೋ ಭೂಮರೋ'’, ಸರ್ ಚಿತ್ರದ "ಸುನ ಸುನ ಸುನ ಬಾರಸಾತ ಕಿ ಧುನ ಸುನ" , ಕರಿಬ ಚಿತ್ರದ "ಚೋರಿ ಚೋರಿ ಜಬ ನಜರೆ ಮಿಲಿ', ಮುನ್ನ ಭಾಯಿ ಚಿತ್ರದ ಹಾಡುಗಳು ಖ್ಯಾತಿ ಗಳಿಸಿದವು.

ಅವರ ಹೆಸರು ಕೇಳಿರಲಾರದವರು ಸಹಿತ ಈ ಹಾಡುಗಳನ್ನು ಗುನುಗುನಿಸುತ್ತಿದ್ದರು.

ಕೇಂದ್ರದಲ್ಲಿ ಬಿಜೆಪಿ ಯವರ ಸರಕಾರ ಬಂದಾಗ ಅವರ ಮುಸ್ಲಿಂ ದ್ವೇಷ, ಬಡವರ, ಹಿಂದುಳಿದವರ ಬೆಂಬಲಕ್ಕೆ ನಿಲ್ಲದ ನೀತಿಗಳನ್ನು ನೋಡಿ ಅದನ್ನು ವಿರೋಧಿಸಿದರು.

`ಇವರು ನಮ್ಮ ಬಗ್ಗೆ ಏನು ಅನಕೊತರೋ ಅನ್ನೋ ವಿಚಾರ

ಯಾವಾಗಲೂ ಬರತಾವು.

ಹಂಗ ಆದಾಗ ಎಲ್ಲ ನಮ್ಮ ನೆರಳು ನೋಡಿದರೂ ಹೆದರಿಕಿ ಬರತಾವು.

ಈಗಿನ ಜಂಗಲ್ಲು ಹೊಸಾದು

ಇಲ್ಲೇ ನಮ್ಮನ್ನ ಹೆದರಿಸೋದು ಹುಲಿಯಲ್ಲ, ಆಕಳು'’

 

"ನಮ್ಮ ಮೈ ಮ್ಯಾಲಿನ ಗಾಯದ ಬಗ್ಗೆ ವಿಚಾರಿಸಲಿಕ್ಕೆ

ಆ ಮಂದಿ ನಮ್ಮ ಅಂಗೀನ ಹಾಕ್ಕೊಂಡು ಬಂದರೋ ಯಪ್ಪಾ'’

ಅಂತ ಮೊಸಳೆ ಕಣ್ಣೀರು ಸುರಿಸುವವರಿಗೆ ಉತ್ತರ ಕೊಟ್ಟರು.

 

`ರಾತ್ರೋ ರಾತ್ರಿ ಸೂರ್ಯನನ್ನ ತಯಾರು ಮಾಡಿ ಬಿಡತೇನಿ ಅಂತ ಹೊಂಟ್ರು,

ಒಂದು ದೀಪ ಹಚ್ಛೋದರಾಗ ಬೆವರು ಬಿಟ್ಟಿತು ನೋಡ್ರಿ,’

ಅಂತ ಸುಳ್ಳು ಆಶ್ವಾಸನೆ ಗಳನ್ನ ವ್ಯಂಗ್ಯ ಮಾಡಿದರು.

"ನಮ್ಮನ್ನು ಖೂನಿ ಮಾಡಿದ ಪಾಪಿಗಳನ್ನು ಪತ್ತೆ ಹಚ್ಚುವ ಕೆಲಸ ಕೈ ಬಿಡರೀ

ಆ ಆರೋಪ ವನ್ನೂ ಕೂಡ ನಮ್ಮ ಮೇಲೆ ಹಾಕಿ ಬಿಡಿರಿ ಆತಲಾಗ ,’’

ಅಂತ ಪೊಲೀಸ್ ವ್ಯವಸ್ಥೆಯ ಮೇಲೆ ಕಟಕಿಯಾಡಿದರು.

ರಾಹತ್ ತಮ್ಮ ಕವನಗಳಲ್ಲಿ ಯಾರ ಹೆಸರೂ ಹೇಳುತ್ತಿರಲಿಲ್ಲ. ನೀವು ಯಾರನ್ನು ಟೀಕಿಸುತ್ತಾ ಇದ್ದೀರೋ ಅವರ ಹೆಸರು ಹೇಳಿ, ಏನು ಆದೀತು ಮಹಾ? ಅಂತ ಯಾರೋ ಸಲಹೆ ಮಾಡಿದಾಗ.

"ನನ್ನ ಕವನ ಗಳು ನೂರಾರು ಕೋಟಿ ಬೆಲೆ ಬಾಳುವವು . ಅದರಲ್ಲಿ ನಾನು ಎರಡು ಕವಡೆ ಕಸಿಗೂ ಕಿಮ್ಮತ್ತು ಇಲ್ಲದವರ ಹೆಸರು ತೊಗೊಳ್ಳೋದಿಲ್ಲ,’’ ಅಂತ ಅಂದ್ರು. `ಬರುವ- ಹೋಗುವ ಸರಕಾರ' ಗಳ ಮರ್ಜಿ ನಮಗೆ ಬೇಡ ಅಂತ ಹೇಳಿದವರು, ಹಂಗೇ ಬದುಕಿದರು.

ಯುವಕರಿಗೋಸ್ಕರ ಅಂತ ಬರೆದ

`ಅಕಿ ಕರೀತಾಳ ಅಂತ ಹೋಗಾಕ ಹೋಗ ಬ್ಯಾಡ'

ಅನ್ನುವ ಸಾಲುಗಳು ಜನಪ್ರಿಯ ವಾದವು .

ಅದು ಹುಡುಗಾಟದ ಕವನ ಅನ್ನುವಾಗಲೇ ಕೊನೆಯ ಸಾಲಿನಲ್ಲಿ

ಟೇಲರು ಅಂತ ಬರತಾನ

ಆ ಕಸಾಯಿ

ನಿನ್ನ ಕೊರಳು ಎಷ್ಟು ದೊಡ್ಡು ಅದು ಅಂತ ನೋಡತಾನ

ಆದರ ಪಾಪಿಗಳಿಗೆ ಹೆದರೋದು ಬ್ಯಾಡ'’

ಅಂತ ಅದರ ಧ್ವನಿಯನ್ನೇ ಬದಲು ಮಾಡಿದರು

ಅವರು ಬಹಳ ದೊಡ್ಡ ಹೃದಯದ ಮನುಷ್ಯ ಅಂತ ಹೆಸರಾಗಿದ್ದರು. ಮುಂಬಯಿಯಲ್ಲಿ ದೊಡ್ಡ ಕಾರ್ಯಕ್ರಮ ಮುಗಿಸಿ ಒಂದು ದಿನ ಮುಂಜಾನೆ ಇಂದೋರಿಗೆ ಮರಳುವಾಗ ಅವರ ಕಿಸೆಯಲ್ಲಿ ಸಂಘಟಕರು ನೀಡಿದ್ದ ಹಣದ ಲಕೋಟೆ ಇತ್ತು. ಅದನ್ನು ಅವರು ರೈಲ್ವೆ ನಿಲ್ದಾಣ ದಲ್ಲಿ ತಮ್ಮ ಎದುರಿನಲ್ಲಿ ಸಿಕ್ಕ ಭಿಕ್ಷುಕನೊಬ್ಬನಿಗೆ ಕೊಟ್ಟು ಬಿಟ್ಟರು.

ಅಷ್ಟು ಹಣವನ್ನು ಅವನಿಗೆ ಯಾಕೆ ಕೊಟ್ಟಿರಿ? ಅವನು ಅದನ್ನು ತೊಗೊಂಡು ಏನು ಮಾಡಬಲ್ಲ? ಅಂತ ಸ್ನೇಹಿತರು ಕೇಳಿದಾಗ "ಅಯ್ಯೋ ಅದು ನನ್ನ ಹಣವಲ್ಲ. ಆ ಲಕೋಟೆ ತೊಗೊಂಡು ಹೋಗಿ ಆ ಭಿಕ್ಷುಕನಿಗೆ ಕೊಡು ಅಂತ ಮುಂಬಯಿಯ ಸಂಘಟಕರು ಹೇಳಿದ್ದರು. ನಾನು ಅವರ ಮಾತು ಪಾಲಿಸಿದೆ. ಅವನು ಎರಡು ಕಾಸಿಗಾಗಿ ಸ್ವಾಭಿಮಾನ ಬಿಟ್ಟು ಅಪರಿಚಿತರ ಹತ್ತಿರ ಹಣ ಕೇಳುವವನು. ನನ್ನಂತಹ ಬೆಜವಾಬುದಾರಿ ಮನುಷ್ಯನಿಗಿಂತ ಚೆನ್ನಾಗಿ ಆತ ಆ ಹಣವನ್ನು ಕಾಪಾಡಿ ಕೊಳ್ಳುತ್ತಾನೆ,’’ ಅಂತ ನಕ್ಕು ಬಿಟ್ಟರು.

ರಾಹತ್ ಅಂದರೆ ನೆಮ್ಮದಿ, ನಿರಾಳ, ಹದುಳ ಅಂತ ಅರ್ಥ.

"ಈ ಮಹಾಮಾರಿ ಒಳಗ ನಾನೂ ಹೋಗಿ ಬಿಟ್ಟರ ಛಲೋ ಅತಲಾಗ

ಸಾವಿನ ಮ್ಯಾಲೆ ನಮ್ಮದೇನು ಉಪಕಾರ ಉಳಿಯೋದಿಲ್ಲ ಆವಾಗ'’

ಅಂತ ಕೊನೆಯ ದಿನಗಳಲ್ಲಿ ಹೇಳಿದ್ದರು.

ಕೊನೆಗೂ ಸಾವಿನ ಮೇಲೆ ಉಪಕಾರ ಉಳಿಸದೆ ಹೊರಟು ಹೋದರು. ಅವರಿಗೆ ನೆಮ್ಮದಿ ಆಗಿರಬೇಕು. ಆದರೆ ಈ ಮಹಾಮಾರಿ ನಮ್ಮ ನೆಮ್ಮದಿ ಕಸಿದುಕೊಂಡಿತು.

ಅವರ ಖಿಲಾಫ್ (ವಿರೋಧ ) ಅನ್ನುವ ಹಾಡನ್ನು ನಾನು ಹಿಂದೊಮ್ಮೆ ಅನುವಾದಿಸಿದ್ದೆ . ಅದು ಇಲ್ಲಿದೆ.

ಏನೀಗ ?

ವಿರೋಧ ಮಾಡ್ತಾರಂತ?

ಮಾಡ್ಲಿ ಬಿಡು,

ಅವರೇನ್

ನಮಗ ಜೀವಕ್ಕ ಜೀವಾ

ಕೊಡವರದಾರು? ಇಲ್ಲಲಾ?

 

ಇದೆಲ್ಲಾ

ಬರೇ ಒಣಾ ಧೂಳು-ಹೊಗಿ ಅಷ್ಟ.

ಇದನ್ನ ಏನರ

ಆಕಾಶ ಅಂತ ತಿಳ್ಕೊಂಡೀಯೇನು ಮತ್ತ?

ಇಲ್ಲಲಾ?

 

ಒಮ್ಮೆ ಬೆಂಕಿ ಬಿತ್ತೆಪಾ ಅಂದರ

ಎಲ್ಲಾರ ಮನಿಗೂ ಉರಿ ಹತ್ತ ತೇತಿ

 

ಇಲ್ಲೇನು ಬರೇ

ನಮ್ಮವ ಮನೀ

ಅದಾವೇನು?

ಇಲ್ಲಲಾ?

 

ನೋಡಪಾ ಯಪ್ಪಾ

ನಮ್ಮ ಬಾಯಾಗ ಬಂದದ್ದ ಖರೇನ

ನಮ್ಮ ಬಾಯಾಗೇನರ

ನಿಮ್ಮ ನಾಲಿಗಿ ಐತೇನ?

ಇಲ್ಲಲಾ?

 

ನಂ ದುಷ್ಮನಗಳೇನೂ

ಕಮ್ಮಿ ಇಲ್ಲ

ನನಗ ಗೊತ್ತೈತಿ

ಆದರ ನಮ್ಮಂಗ

ಅವರೇನು ಮುಟಿಗ್ಯಾಗ

ಜೀವಾ ಇಟಗೊಂಡ

ಹೊಂಟಾರೇನು?

ಇಲ್ಲಲಾ?

 

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು

ಮೆರಿಲ್ಯಾಕ ಹತ್ಯಾರಲಾ

ಅವರು ಇಲ್ಲೆ

ಬಾಡಗೀಗೆ ಬಂದಾವರು

ಅವರು ನಾಳೇನು ಇರಂಗಿಲ್ಲಾ

ಈ ಮನಿ ಏನು

ಇವರ ಸ್ವಂತದ್ದೇನು?

ಅಲ್ಲಲಾ?

 

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ

ಈ ಮಣ್ಣು

ಯಾರದರ

ಅಪ್ಪನ ಮನೀದೇನು

ಈ ಹಿಂದೂಸ್ತಾನಾ?

ಅಲ್ಲಲಾ?

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...