ರೈಜ್ ದ ರೆಡ್ ಲ್ಯಾಂಟರ್ನ್: ದೃಶ್ಯದಲ್ಲಿ ಅರಳಿದ ದುರಂತ ಕಾವ್ಯ

Date: 13-02-2021

Location: .


ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯದಡಿ ಹೆಣ್ಣಿನ ಬದುಕಿನ ದಾರುಣತೆ, ಹತಾಶೆ ಮತ್ತು ದುರಂತವನ್ನು ಅನಾವರಣಗೊಳಿಸುವ ಕಥಾ ವಸ್ತುವಿರುವ ಚೀನಾ ದೇಶದ ಚಲನಚಿತ್ರ ‘ರೈಜ್ ದ ರೆಡ್ ಲ್ಯಾಂಟರ್ನ್’. ಈ ಚಲನಚಿತ್ರದ ಸಂಕೀರ್ಣ ಅರ್ಥಸಾರವನ್ನು ಪ್ರಾಧ್ಯಾಪಕ -ಲೇಖಕ ಡಾ. ಸುಭಾಷ್ ರಾಜಮಾನೆ ಅವರು ತಮ್ಮ ನವಿಲನೋಟ ಅಂಕಣದಲ್ಲಿ ವಿವರಿಸುವ ಬರಹವಿದು.

ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಹತ್ತೊಂಬತ್ತು ವರುಷದ ಸೊಂಗ್‌ಲಿಯನ್ ಎಂಬ ತರುಣಿಯ ದುರಂತ ಕತೆಯಿದು. ಚಹಾ ವ್ಯಾಪಾರಿಯಾಗಿದ್ದ ಆಕೆಯ ತಂದೆಯ ಅಕಾಲಿಕ ಮರಣದಿಂದ ಅವರ ಕುಟುಂಬ ದಿವಾಳಿಯಾಗುತ್ತದೆ. ಮಲತಾಯಿ ಹಣದಾಸೆಗೆ ಬಿದ್ದು ಆಕೆಯನ್ನು ವಯಸ್ಸಾದ ಚೆನ್ ಎಂಬ ಶ್ರೀಮಂತನೊಂದಿಗೆ ಮದುವೆಯಾಗಲು ಒಪ್ಪಿಸುತ್ತಾಳೆ. ಚೆನ್‌ಗೆ ಈಗಾಗಲೇ ಮೂವರು ಹೆಂಡತಿಯರಿದ್ದಾರೆ. ಅವರನ್ನು ಮಿಸ್ಟ್ರೆಸ್ಸ್ ಎಂದು ಕರೆಯಲಾಗುತ್ತದೆ. ದೊಡ್ಡ ಬಂಗಲೆಯಲ್ಲಿ ಅವರೆಲ್ಲರಿಗೂ ಪ್ರತ್ಯೇಕವಾದ ಮನೆಗಳಿವೆ. ಇಲ್ಲಿಗೆ ಸೊಂಗ್‌ಲಿಯನ್ ಚೆನ್‌ನ ನಾಲ್ಕನೆಯ ಹೆಂಡತಿಯಾಗಿ ಬರುತ್ತಾಳೆ.

ಯಜಮಾನ ಚೆನ್ ಪ್ರತಿ ರಾತ್ರಿ ಯಾವ ಹೆಂಡತಿಯ ಜತೆ ಮಲಗಲು ಇಚ್ಚಿಸುತ್ತಾನೋ ಆ ಮನೆಯ ಮುಂದೆ ಕೆಂಪು ಬಣ್ಣದ ಲಾಟೀನುಗಳನ್ನು ತೂಗು ಹಾಕಲಾಗುತ್ತದೆ. ಮಲಗುವ ಕೋಣೆಯಲ್ಲೂ ಲಾಟೀನುಗಳನ್ನು ಹೊತ್ತಿಸಲಾಗುತ್ತದೆ. ಈ ಹೆಂಡತಿಯರಲ್ಲಿ ಪರಸ್ಪರ ಅಸೂಯೆ ಮತ್ತು ದ್ವೇಷ ಹೊಗೆಯಾಡುತ್ತಿರುತ್ತದೆ. ಅವರು ಯಜಮಾನನನ್ನು ಆಕರ್ಷಿಸಲು ಹಾಗೂ ಗಮನ ಸೆಳೆಯಲು ಹಲವು ಕುತಂತ್ರಗಳನ್ನು ಮಾಡುತ್ತಿರುತ್ತಾರೆ. ಮೊದಲ ಹೆಂಡತಿಗೆ ದೊಡ್ಡ ಮಗನಿದ್ದಾನೆ. ಹಿರಿಯ ಹೆಂಡತಿಯು ಮೊದಲ ಭೇಟಿಯಲ್ಲಿ ಸೊಂಗ್‌ಲಿಯನ್‌ಗೆ ಯಜಮಾನನಿಗೆ ವಿಧೇಯಳಾಗಿರಲು ಸಲಹೆ ನೀಡುತ್ತಾಳೆ. ಎರಡನೆಯ ಹೆಂಡತಿ ತುಂಬ ಆದರದಿಂದ ಉಪಚರಿಸುತ್ತಾಳೆ; ಆಪ್ತವಾಗಿ ಹರಟುತ್ತಾಳೆ. ಆದರೆ ಒಳಗೊಳಗೆ ಆಕೆಯ ವಿರುದ್ಧ ಪಿತೂರಿ ನಡೆಸುತ್ತಾಳೆ. ಓಪೇರಾ ಹಾಡುಗಾರ್ತಿಯಾದ ಮೂರನೆಯ ಹೆಂಡತಿಗೆ ಈಕೆಯ ಆಗಮನವು ಖುಷಿಯ ಸಂಗತಿಯೇನಲ್ಲ. ಮೇಲುನೋಟಕ್ಕೆ ಒರಟಾಗಿ ಕಾಣುವ ಈಕೆ ನಿಜವಾಗಿಯು ಸೊಂಗ್‌ಲಿಯನ್‌ಳ ಬಗ್ಗೆ ಅನುಕಂಪವನ್ನು ಹೊಂದಿರುತ್ತಾಳೆ.

ಸೊಂಗ್‌ಲಿಯನ್ ತನ್ನ ಯಜಮಾನನ ಪ್ರೀತಿಗೆ ಪಾತ್ರಳಾಗಲು ಹಾತೊರೆಯುತ್ತಾಳೆ. ಅದಕ್ಕಾಗಿ ತಾನು ಗರ್ಭವತಿ ಎಂದು ವದಂತಿ ಹಬ್ಬಿಸುತ್ತಾಳೆ. ವೈದ್ಯರಿಂದ ಪರೀಕ್ಷಿಸಲಾಗುತ್ತದೆ. ಗರ್ಭವತಿಯಾಗಿದ್ದು ಸುಳ್ಳೆಂದು ತಿಳಿದಾಗ ಯಜಮಾನನ ನಿರ್ಲಕ್ಷಕ್ಕೆ ಗುರಿಯಾಗುತ್ತಾಳೆ. ಆಕೆಯ ಮನೆಯ ಮುಂದಿನ ಕೆಂಪು ಬಣ್ಣದ ಲಾಟೀನುಗಳಿಗೆ ಶಾಶ್ವತವಾಗಿ ಕಪ್ಪು ಬಟ್ಟೆಯನ್ನು ಹಾಕಲಾಗುತ್ತದೆ. ಆ ವಿಶಾಲವಾದ ಮನೆ ಸೊಂಗ್‌ಲಿಯನ್ ಪಾಲಿಗೆ ಬಂದಿಖಾನೆಯಾಗುತ್ತದೆ. ಅಸಹನೀಯವಾದ ಒಂಟಿತನದಿಂದ ಆಕೆ ಹುಚ್ಚಿಯಾಗುತ್ತಾಳೆ.

ವಿಶ್ವದ ಸಿನೆಮಾಗಳಲ್ಲಿ ‘ಮಾಸ್ಟರ್‌ಪೀಸ್’ ಎಂದೇ ಪರಿಗಣಿತವಾಗಿರುವ ಚೀನಿ ಭಾಷೆಯ ‘ರೈಜ್ ದ ರೆಡ್ ಲ್ಯಾಂಟರ್ನ್’ ಎಂಬ ಸಿನಿಮಾದ ಕತೆಯಿದು. ಚೀನಾದ ಪ್ರಸಿದ್ಧ ಲೇಖಕನಾದ ಸು ಟೊಂಗ್ ಬರೆದ ‘Wives And Concubines’(1990) ’ ಎಂಬ ವಿವಾದಾತ್ಮಕ ಕಾದಂಬರಿಯನ್ನು ಜಾಂಗ್ ಇಮೋವ್ 1991ರಲ್ಲಿ ದೃಶ್ಯಕ್ಕೆ ಅಳವಡಿಸಿ ‘ರೈಜ್ ದ ರೆಡ್ ಲ್ಯಾಂಟರ್ನ್’ ಚಿತ್ರವನ್ನು ನಿರ್ದೇಶಿಸಿದ. ಇದು 1920ರ ದಶಕದಲ್ಲಿ ಚೀನಾದಲ್ಲಿ ಭೂಮಾಲಿಕ ಕುಟುಂಬದ ಶ್ರೀಮಂತನೊಬ್ಬ ಹೆಂಗಸರನ್ನು ಅಮಾನುಷವಾಗಿ ಮತ್ತು ಅಮಾನವೀಯವಾಗಿ ನಡೆಯಿಸಿಕೊಳ್ಳುವ ಕಥಾ ವಸ್ತುವನ್ನು ಒಳಗೊಂಡಿದೆ. ಹಲವು ವರುಷಗಳ ತನಕ ಚೀನಾ ಸರಕಾರ ಈ ಚಿತ್ರವನ್ನು ನಿಷೇಧಿಸಿತ್ತು. ಆದರೆ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವಗಳ ಮೂಲಕ ಈ ಅದ್ಭುತವಾದ ಚಿತ್ರವು ಪ್ರೇಕ್ಷಕರನ್ನು ಆಯಸ್ಕಾಂತದಂತೆ ಸೆಳೆಯಿತು.

ಮೇಲುನೋಟಕ್ಕೆ ಈ ಸಿನಿಮಾ ಸರಳವೇ ಅನಿಸುತ್ತದೆ. ಆದರೆ ಅದು ಒಳಗೊಂಡಿರುವ ಥೀಮ್ ಅತ್ಯಂತ ಸಂಕೀರ್ಣವಾದದ್ದು. ಇಡೀ ಸಿನೆಮಾ ನಾಲ್ಕು ಗೋಡೆಗಳಿಂದ ಆವೃತ್ತವಾದ ಕೋಟೆಯಂತಹ ದೊಡ್ಡ ಕಟ್ಟಡದೊಳಗೆ ನಡೆಯುತ್ತದೆ. ಪ್ರತಿಯೊಂದು ದೃಶ್ಯವು ಹಲವು ಬಣ್ಣಗಳಿಂದ ಕೂಡಿದ ಪೇಂಟಿಂಗ್‌ನಂತೆ ಗೋಚರಿಸುತ್ತದೆ. ಯಾಕೆಂದರೆ ಜಾಂಗ್ ಇಮೋವ್ ಚಿತ್ರಕತೆಯ ಸನ್ನಿವೇಶ ಹಾಗೂ ಪಾತ್ರಗಳ ಮೂಡ್‌ಗೆ ತಕ್ಕಂತೆ ಹದವಾಗಿ ಬಣ್ಣಗಳನ್ನು ವಿನ್ಯಾಸಗೊಳಿಸಿದ್ದಾನೆ. (ಚಿತ್ರಕತೆಯ ವಸ್ತು ಮತ್ತು ಆಶಯಕ್ಕೆ ಪೂರಕವಾಗಿ ಬಣ್ಣಗಳನ್ನು ಬಳಸಿ ಸ್ಪೆಕ್ ಜೊಂಝ್ ನಿರ್ದೇಶಿಸಿದ ‘ಹರ್’ [2013] ಸಿನೆಮಾವನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ಆದ್ದರಿಂದ ಜಾಂಗ್ ಇಮೋವ್ ಅಮೋಘವಾದ ದೃಶ್ಯಗಳ ಮೂಲಕ ಭಾವಗಳಿಗೆ ಜೀವ ತುಂಬುವ ನಿರ್ದೇಶಕನಾಗಿದ್ದಾನೆ.

ಜಗತ್ತಿನ ಅತ್ಯಂತ ಪ್ರಭಾವಶಾಲಿ ನಿರ್ದೇಶಕರಲ್ಲಿ ಜಾಂಗ್ ಇಮೋವ್ ಕೂಡ ಒಬ್ಬ. ಚೀನಾದ ಶಾನ್‌ಸಿ ಪ್ರಾಂತ್ಯದ ರಾಜಧಾನಿ ಸಿಯಾನ್ ಪಟ್ಟಣದಲ್ಲಿ ಜನಿಸಿದ ಜಾಂಗ್ ಇಮೊವ್‌ನ ಬಾಲ್ಯದ ಜೀವನ ಕಷ್ಟಗಳಿಂದಲೇ ಕೂಡಿತ್ತು. ಆತ 1960 ಮತ್ತು 1970 ರ ದಶಕಗಳಲ್ಲಿ ಚೀನಾದಲ್ಲಿ ನಡೆದ ‘ಸಾಂಸ್ಕೃತಿಕ ಕ್ರಾಂತಿ’ಯ ಕಾಲದಲ್ಲಿ ತನ್ನ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಕೃಷಿ ಕಾರ್ಮಿಕನಾಗಿ ದುಡಿದ. ತನ್ನ 27ನೆಯ ವರ್ಷದಲ್ಲಿ (1974) ‘ಬೀಜಿಂಗ್ ಫಿಲ್ಮ್ ಅಕಾಡೆಮಿ’ಯ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡಿದರೂ ವಯಸ್ಸಿನ ಕಾರಣದಿಂದ ತಿರಸ್ಕರಿಸಲ್ಪಡುತ್ತಾನೆ. ಅಲ್ಲಿಯ ಸಂಸ್ಕೃತಿ ಸಚಿವಾಲಯದ ಕೋರಿಕೆಯಂತೆ 1982ರಲ್ಲಿ ‘ಬೀಜಿಂಗ್ ಫಿಲ್ಮ್ ಅಕಾಡೆಮಿ’ಗೆ ಮತ್ತೆ ದಾಖಲಾಗುತ್ತಾನೆ. ಇದು ಜಾಂಗ್‌ನ ಬದುಕಿಗೆ ಹೊಸ ತಿರುವು ನೀಡಿತು. ತನ್ನ ಮೈಯ ರಕ್ತವನ್ನು ಮಾರಿ ಮೊದಲ ಕ್ಯಾಮೆರಾ ಕೊಂಡನಂತೆ! ಆತನ ಫೋಟೋಗ್ರಾಫಿಯ ಹುಚ್ಚಿಗೆ ಇದೊಂದು ಉದಾಹರಣೆಯಷ್ಟೆ.

ಯಾಂಗ್ ಜುಮ್‌ಜಾವೋ ನಿರ್ದೇಶನದ ‘ಒನ್ ಅಂಡ್ ಏಯ್ಟ್’ (1984) ಮತ್ತು ಚೆನ್ ಕೈಗೆಯ ‘ಯಲೋ ಅರ್ಥ್’ (1984) ಸಿನೆಮಾಗಳಿಗೆ ಜಾಂಗ್ ಇಮೋವ್ ಛಾಯಾಗ್ರಾಹಕನಾಗಿ ತನ್ನ ವೃತ್ತಿ ಬದುಕನ್ನು ಆರಂಭಿಸಿದ. ಅತ್ಯುತ್ತಮ ಛಾಯಾಗ್ರಾಹಣಕ್ಕೆ ಹಲವು ಪುರಸ್ಕಾರಗಳನ್ನು ಪಡೆದ. ಈ ಎರಡು ಚಿತ್ರಗಳು ಹಾಂಕಾಂಗ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ಚೀನಿ ಸಿನೆಮಾಗಳು ಜಗತ್ತಿನ ಗಮನ ಸೆಳೆಯಲು ಕಾರಣವಾದವು. ಈತನ ಚೊಚ್ಚಿಲ ನಿರ್ದೇಶನದಲ್ಲಿ ಅರಳಿದ ‘ರೆಡ್ ಸರ‍್ಗಮ್’ (1987) ಚಲನಚಿತ್ರವು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಗೋಲ್ಡನ್ ಬೇರ್’ ಪ್ರಶಸ್ತಿಯನ್ನು ಪಡೆಯಿತು.

‘ರೈಜ್ ದ ರೆಡ್ ಲ್ಯಾಂಟರ್ನ್’ ಸಿನಿಮಾ ಹೆಣ್ಣಿನ ಬದುಕನ್ನು ದಾರುಣಗೊಳಿಸುವ ಹಲವು ಮಜಲುಗಳ ಸಂಕೀರ್ಣತೆಯನ್ನು ಒಳಗೊಂಡಿದೆ. ಚಿತ್ರಕತೆಯ ಪ್ರಧಾನ ಪಾತ್ರ ಸೊಂಗ್‌ಲಿಯನ್‌ಳ ಕ್ಲೋಸ್‌ಅಪ್ ಶಾಟ್‌ನೊಂದಿಗೆ ಸಿನೆಮಾ ತೆರೆದುಕೊಳ್ಳುತ್ತದೆ. ಆಕೆ ತನ್ನ ಮಲತಾಯಿಯ ಒತ್ತಾಯಕ್ಕೆ ಮಣಿದು ವೃದ್ಧ ಚೆನ್‌ನ ಹೆಂಡತಿಯಾಗಿ ಹೋಗಲು ಒಲ್ಲದ ಮನಸ್ಸಿನಿಂದ ಒಪ್ಪುತ್ತಾಳೆ. ಆಗ ತನ್ನ ಮಲತಾಯಿಗೆ What sort of man? Is it up to me? Is not that a woman’s fate? ಎಂದು ಹೇಳುವಾಗ ಆಕೆಯ ಕೆನ್ನೆಯ ಮೇಲೆ ಹಾಗೆ ಕಣ್ಣೀರ ಧಾರೆ ಸುರಿಯುತ್ತದೆ. ಇದು ಸೊಂಗ್‌ಲಿಯನ್‌ಳ ನೋವು ತುಂಬಿದ ದುರಂತದ ಕತೆಯೆಂಬುದು ಮೊದಲ ದೃಶ್ಯದಲ್ಲಿಯೇ ತಿಳಿಯುವಂತಿದೆ. ಈ ಪಾತ್ರವನ್ನು ಆವಾಹಿಸಿಕೊಂಡಿರುವ ಗೊಂಗ್ ಲಿ ಎಂಬ ನಿರಾಭರಣ ಚೆಲುವೆಯ ಭಾವಪೂರ್ಣವಾದ ಅಭಿನಯ ಸಹ ಈ ಸಿನಿಮಾದ ದೊಡ್ಡ ಹೆಗ್ಗಳಿಕೆಯಾಗಿದೆ. ಈ ಸಿನೆಮಾದ ಮುಖಾಂತರ ಗೊಂಗ್ ಲಿ ಅಂತಾರಾಷ್ಟ್ರಿಯ ಜನಪ್ರಿಯ ತಾರೆಯಾಗಿ ಹೊಮ್ಮಿದಳು. ಜಾಂಗ್ ಇಮೋವ್‌ನ ಬಹುತೇಕ ಸಿನೆಮಾಗಳಲ್ಲಿ ಈಕೆಯೇ ನಟಿಸಿದ್ದಾಳೆ.

ಸೊಂಗ್‌ಲಿಯನ್ ತಾನು ಕಾಲೇಜು ಸಮವಸ್ತ್ರದಲ್ಲಿಯೇ ಯಜಮಾನ ಚೆನ್‌ನ ಆ ದೊಡ್ಡ ಮನೆಯನ್ನು ಪ್ರವೇಶಿಸಿದಾಗ ಹಾರ್ದಿಕ ಸ್ವಾಗತವೇನೂ ಸಿಗುವುದಿಲ್ಲ. ಅಲ್ಲಿ ಬಟ್ಟೆ ತೊಳೆಯುತ್ತಿದ್ದ ಕೆಲಸದಾಕೆ ಈಕೆಯನ್ನು ಶಪಿಸುತ್ತಾಳೆ. ಯಾಕೆಂದರೆ ಈ ಕೆಲಸದಾಕೆ ಯಜಮಾನನ ನಾಲ್ಕನೆಯ ಹೆಂಡತಿಯಾಗಲು ಬಯಸಿದ್ದವಳು! ಸೊಂಗ್‌ಲಿಯನ್ ತಾನು ಈ ಮನೆಯ ನಾಲ್ಕನೆಯ ಮಿಸ್ಟ್ರೆಸ್ಸ್ ಎಂದು ಗತ್ತಿನಿಂದ ಹೇಳಿ ಕೆಲಸದಾಕೆಯ ಮೇಲೆ ಯಜಮಾನಿಕೆ ನಡೆಸುತ್ತಾಳೆ. ಯಜಮಾನ ಚೆನ್ ಆ ರಾತ್ರಿಯನ್ನು ತನ್ನ ಹೊಸ ಹೆಂಡತಿಯೊಂದಿಗೆ ಕಳೆಯಲು ಇಚ್ಛಿಸುತ್ತಾನೆ. ಇವರು ಹಾಸಿಗೆಯಲ್ಲಿದ್ದಾಗ ಮೂರನೆಯ ಹೆಂಡತಿ ಅನಾರೋಗ್ಯದ ನಿಮಿತ್ತ ಮಾಡಿಕೊಂಡು ಯಜಮಾನನ ಗಮನ ಸೆಳೆಯಲು ಪ್ರಯತ್ನಿಸುತ್ತಾಳೆ.

ನಾಲ್ಕು ಜನ ಹೆಂಡತಿಯರಿಗೂ ಪ್ರತ್ಯೇಕವಾದ ಕೊಠಡಿಗಳಿವೆ. ಅವೆಲ್ಲ ಮಧ್ಯಭಾಗದ ಒಂದು ಹಜಾರಕ್ಕೆ ಮುಖಮಾಡಿ ನಿಂತಿವೆ. ಆ ವಿಶಾಲವಾದ ಮನೆಯು ಹಳೆಯ ಕಾಲದ ಸಂಪ್ರದಾಯ ಮತ್ತು ನಿಯಮಗಳಿಗೆ ಬದ್ಧವಾಗಿದೆ. ಸಂಜೆಯಾಗುತ್ತಿದ್ದಂತೆಯೇ ನಾಲ್ಕೂ ಜನ ಹೆಂಡತಿಯರು ಆ ಹಜಾರದ ಮುಂದೆ ಜಮಾಯಿಸುತ್ತಾರೆ. ಯಜಮಾನ ಆ ರಾತ್ರಿಯನ್ನು ಯಾವ ಹೆಂಡತಿಯೊಂದಿಗೆ ಕಳೆಯಲು ಇಚ್ಛಿಸಿದ್ದಾನೆ ಎಂಬುದನ್ನು ಮನೆಯ ಸೇವಕ ಉಪ್ಪರಿಗೆಯ ಮೇಲೆ ನಿಂತು ಘೋಷಿಸುತ್ತಾನೆ. ಯಜಮಾನ ಮಲಗುವ ಮನೆಯ ಹೊರಗಿನ ಗೋಡೆಯ ಮೇಲೆ ಸಾಲಾಗಿ ಕೆಂಪು ಬಣ್ಣದ ಲಾಟೀನುಗಳನ್ನು ಏರಿಸಲಾಗುತ್ತದೆ. ಆ ಕೋಣೆಯು ಕೆಂಪು ಬಣ್ಣದ ಲಾಟೀನುಗಳಿಂದ ಅಲಂಕೃತಗೊಳ್ಳುತ್ತದೆ. ಯಜಮಾನ ಬೆಳಿಗ್ಗೆ ಎದ್ದು ಹೋದಾಗ ಆ ಲಾಟೀನುಗಳನ್ನು ಕೆಲಸದವರು ಇಳಿಸಿಕೊಂಡು ಹೋಗುತ್ತಾರೆ. ಆ ರಾತ್ರಿ ಯಜಮಾನನೊಂದಿಗಿರುವ ಹೆಂಡತಿಯ ಪಾದಗಳನ್ನು ಸೇವಕಿಯರು ನೀರಿನಿಂದ ತೊಳೆಯುವ ಸಂಪ್ರದಾಯ. ಆಕೆಯ ಪಾದಗಳ ಮೇಲೆ ಬಟ್ಟೆಯನ್ನು ಹಾಕಿ ಎರಡು ಸಣ್ಣ ಕೋಲುಗಳಿಂದ ಮಸಾಜನ್ನೂ ಮಾಡಿಸಲಾಗುತ್ತದೆ. ಅದರಿಂದ ಒಂದು ವಿಶಿಷ್ಟ ಬಗೆಯ ಸಂಗೀತವೂ ಹೊಮ್ಮಿ ಆ ಕೋಣೆಯಲ್ಲಿ ಪ್ರತಿಧ್ವನಿಸುತ್ತದೆ. ಆ ರಾತ್ರಿ ಯಜಮಾನನೊಂದಿಗೆ ಮಲಗುವ ಹೆಂಡತಿಯ ಬಯಕೆಯಂತೆ ಅಂದಿನ ಊಟದ ಮೆನ್ಯು ಕೂಡ ತಯಾರಾಗುತ್ತದೆ. ಆಗ ಉಳಿದ ಹೆಂಡತಿಯರು ಇಂತಹ ಸವಲತ್ತುಗಳಿಂದ ವಂಚಿತರಾಗುತ್ತಾರೆ.

ಈಗ ಮನೆಯಲ್ಲಿ ನಾಲ್ಕು ಜನ ಹೆಂಡತಿಯರು ಕೂಡ ಯಜಮಾನನ ಮನ ಸೆಳೆಯಲು ಒಬ್ಬರ ವಿರುದ್ಧ ಒಬ್ಬರು ರಾಜಕೀಯ ಮಾಡಲು ತೊಡಗುತ್ತಾರೆ. ಮೊದಲ ಹೆಂಡತಿಗೆ ವಯಸ್ಸಾದ್ದರಿಂದ ಈ ಆಟದಿಂದ ಆಕೆ ಹೊರಗುಳಿಯುತ್ತಾಳೆ. ಯಜಮಾನನ ಒಲವನ್ನು ಪಡೆಯುವ ಈ ಚದುರಂಗದಾಟದಲ್ಲಿ ಯಾರು ಕೂಡ ಮತ್ತೊಬ್ಬರನ್ನು ನಂಬುವ ಸ್ಥಿತಿಯಲ್ಲಿಲ್ಲ. ಈ ಆಟದಲ್ಲಿ ಪಿತೂರಿ ನಡೆಸುವ ಹಾಗೂ ಚಾಣಾಕ್ಷತನದಿಂದ ಹೆಜ್ಜೆ ಇಡುವವರು ಮಾತ್ರ ಜಯಶಾಲಿಗಳಾಗುತ್ತಾರೆ. ಬುದ್ಧನ ಮುಖವನ್ನು ಮತ್ತು ಚೇಳಿನ ಹೃದಯವನ್ನು ಹೊಂದಿರುವ ಎರಡನೆಯ ಹೆಂಡತಿ ಈ ರಾಜಕೀಯ ಆಟದಲ್ಲಿ ಗೆಲ್ಲುತ್ತಾಳೆ. ಆಕೆಗೆ ಸೊಂಗ್‌ಲಿಯನ್‌ಳ ದಾಸಿಯ ಬೆಂಬಲವೂ ಸಿಗುತ್ತದೆ. ಯಜಮಾನನ ಅನುಪಸ್ಥಿತಿಯಲ್ಲಿ ನಡೆಯುವ ಮನೆಯೊಳಗಿನ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಸೊಂಗ್‌ಲಿಯನ್ ವಿಫಲಳಾಗುತ್ತಾಳೆ. ವಿಶ್ವವಿದ್ಯಾನಿಲಯದಲ್ಲಿ ಪಡೆದ ಶಿಕ್ಷಣವು ಆಕೆಯ ಪ್ರಯೋಜನಕ್ಕೆ ಒದಗುವುದಿಲ್ಲ. ತನ್ನ ದಾಸಿಯ ಕೋಣೆಯಲ್ಲಿ ಸಿಗುವ ಬೊಂಬೆಯ ಮೇಲೆ ಸೂಜಿಗಳನ್ನು ಚುಚ್ಚಿ ತನಗೆ ಮಾಟ ಮಾಡಿಸಿದ್ದನ್ನು ಬಾಯಿ ಬಿಡಿಸುತ್ತಾಳೆ. ಆದರೆ ಆ ಬೊಂಬೆಯ ಮೇಲೆ “ಸೊಂಗ್‌ಲಿಯನ್” ಎಂದು ಬರೆದದ್ದು ಯಾರು ಎಂಬುದೇ ಆಕೆಗೆ ಒಂದು ಒಗಟಾಗಿ ಕಾಡುತ್ತದೆ. ಯಾಕೆಂದರೆ ಉಳಿದ ಹೆಂಡತಿಯರೆಲ್ಲ ಅನಕ್ಷರಸ್ಥರು! ಯಾರ ಬೆಂಬಲವು ಇಲ್ಲದ ಸೊಂಗ್‌ಲಿಯನ್‌ಗೆ ಸೋಲಾಗುತ್ತದೆ. ಆಗ ಮೂರನೆಯ ಹೆಂಡತಿ “If you play well, you fool the others. If you play badly, you can fool yourself” ಎಂದು ಸೊಂಗ್‌ಲಿಯನ್‌ಗೆ ಹೇಳುತ್ತಾಳೆ. ಈ ಎಲ್ಲ ಸಂಗತಿಗಳು ದೃಶ್ಯಗಳ ಮೂಲಕವೇ ನಿರೂಪಿತವಾಗಿವೆ.

ಯಜಮಾನನೇ ಆ ಮನೆಯ ಸಕಲ ಆಗು ಹೋಗುಗಳಿಗೆ ಹೊಣೆಗಾರ. ಆತನ ಸ್ವ ಹಿತಾಸಕ್ತಿಗೆ ಅನುಗುಣವಾಗಿಯೇ ಎಲ್ಲ ಕ್ರಿಯೆಗಳು ನಡೆಯುತ್ತವೆ. ಆತನ ಆಜ್ಞೆ ಮತ್ತು ಅನುಮತಿಯಿಲ್ಲದೆ ಅಲ್ಲಿ ಗಾಳಿಯು ಸುಳಿಯಲಾಗದು. ಅಷ್ಟೊಂದು ಬಿಗಿ ಮತ್ತು ಭಯಾನಕ ವಾತಾವರಣ ಅಲ್ಲಿದೆ. ಯಜಮಾನ ಚೆನ್‌ನ ಮುಖ ಸ್ಪಷ್ಟವಾಗಿ ಯಾವ ದೃಶ್ಯದಲ್ಲಿಯು ಕಾಣುವುದೇ ಇಲ್ಲ. ಎಲ್ಲ ಹೆಂಡತಿಯರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡುವ ಸಂಪ್ರದಾಯ ಇದ್ದಾಗಲೂ ಆತನ ಧ್ವನಿ ಮಾತ್ರ ಕೇಳಿಸುತ್ತದೆ. ಆತನಿರುವ ದೃಶ್ಯಗಳನ್ನು ಮಿಡ್ ಶಾಟ್‌ಗಳಲ್ಲೆ ಚಿತ್ರೀಕರಿಸಿಲಾಗಿದೆ. ನಿರ್ದೇಶಕ ಇಡೀ ಸಿನೆಮಾದಲ್ಲಿ ಆತನ ಇರುವಿಕೆಯನ್ನು ತಂತ್ರದ ದೃಷ್ಟಿಯಿಂದ ಗೌಣಗೊಳಿಸಿದ್ದಾನೆಂದು ಅನಿಸುತ್ತದೆ. ಆದರೆ ಇಡೀ ಸಿನೆಮಾದ ತುಂಬ ಆತನೇ ಆವರಿಸಿಕೊಂಡಿರುವಂತೆ ಭಾಸವಾಗುತ್ತದೆ. ಇದು ಸಿನೆಮಾದ ವೈಶಿಷ್ಟ್ಯವೇ ಆಗಿದೆ. ಚೆನ್ ತೆರೆಯ ಮರೆಯಲ್ಲಿದ್ದುಕೊಂಡೆ ತನ್ನ ಮನೆತನದ ಪೂರ್ವಜರ ಗೊಡ್ಡು ಸಂಪ್ರದಾಯಗಳ ಪ್ರತಿನಿಧಿಯಾಗಿದ್ದಾನೆ. ಪಿತೃಪ್ರಧಾನ ವ್ಯವಸ್ಥೆಯ ನಿಯಂತ್ರಕ ಹಾಗೂ ಚಾಲಕ ಶಕ್ತಿಯಾಗಿದ್ದಾನೆ. ಹೆಣ್ಣು ಆತನಿಗೆ ಕೇವಲ ಒಂದು ಭೋಗ ವಸ್ತು. ಯಾವ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡುವಳೋ ಆಕೆಗೆ ಮಾತ್ರ ಗೌರವದ ಸ್ಥಾನಮಾನ. ಆತ ಅಕ್ರಮ ಸಂಬಂಧಗಳನ್ನು ಹೊಂದಿದವರನ್ನು ಮನೆಯ ಮೇಲಿರುವ ‘ಕತ್ತಲ ಕೋಣೆ’ಯಲ್ಲಿ ಗುಪ್ತವಾಗಿ ನೇಣು ಹಾಕಿ ಕೊಲ್ಲಿಸುವವನೂ ಆಗಿದ್ದಾನೆ.

ಮೂರನೆಯ ಹೆಂಡತಿಯು (ಮೇಶನ್) ಮನೆ ವೈದ್ಯನೊಂದಿಗೆ ಹೊಂದಿರುವ ಸಂಬಂಧ ಯಜಮಾನನಿಗೆ ಗೊತ್ತಾದಾಗ ಆಕೆಯನ್ನು ಕತ್ತಲ ಕೋಣೆಗೆ ತಳ್ಳಲಾಗುತ್ತದೆ. ಮನೆಯ ಆಳುಗಳು ಆಕೆಯ ಕೈಕಾಲುಗಳನ್ನು ಕಟ್ಟಿ ಛಾವಣಿಯ ಮೇಲಿರುವ ಕೋಣೆಗೆ ದೂಡಲು ಎತ್ತಿಕೊಂಡು ಹೋಗುವಾಗಿನ ದೃಶ್ಯಗಳು ಮನ ಕಲಕುತ್ತವೆ. ಆಗಸದಿಂದ ಹಿಮ ಬೀಳುವ ಆ ಸನ್ನಿವೇಶದ ದೃಶ್ಯಗಳು ಅಪೂರ್ವವಾಗಿವೆ. ಆ ಹಿಮಪಾತವು ತನ್ನ ಚೆಲುವನ್ನು ತೋರುತ್ತಲೇ ಯಜಮಾನನ ತಣ್ಣನೆಯ ಕ್ರೌರ್ಯಕ್ಕೂ ಒಂದು ಸಂಕೇತವಾಗುತ್ತದೆ. ಜಾಂಗ್ ಇಮೋವ್ ತನ್ನ ಹಲವು ಚಿತ್ರಗಳಲ್ಲಿ ಹಿಮಪಾತದ ದೃಶ್ಯಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವುದರಲ್ಲಿ ಅಮೋಘವಾದ ಪ್ರತಿಭೆಯನ್ನು ತೋರಿದ್ದಾನೆ.

ಮೇಶನ್‌ಳನ್ನು ಕತ್ತಲ ಕೋಣೆಯಲ್ಲಿ ನೇಣು ಹಾಕಿದ ಮೇಲೆ ಯಜಮಾನ ಸೊಂಗ್‌ಲಿಯನ್‌ಳನ್ನು ಏನು ನೋಡಿದೆ ಎಂದಾಗ ‘ನೀನು ಕೊಲೆಗಡುಕ’ ಎನ್ನುತ್ತಾಳೆ. ಅದಕ್ಕೆ ಯಜಮಾನ ‘ನೀನು ಏನನ್ನೂ ನೋಡಿಲ್ಲ! ನೀನೊಬ್ಬಳು ಹುಚ್ಚಿ! ನಿನಗೆ ಹುಚ್ಚು ಹಿಡಿದಿದೆ!’ ಎನ್ನುತ್ತಾನೆ. ಆ ವೈಭವದ ವಿಶಾಲವಾದ ಮನೆಯಲ್ಲಿ ಸೊಂಗ್‌ಲಿಯನ್‌ಳ ನೋವು, ಸಂಕಟ, ಯಾತನೆಗಳನ್ನು ಕೇಳಿಸಿಕೊಳ್ಳುವವರು ಯಾರೂ ಇಲ್ಲ; ಆಕೆಯನ್ನು ಪ್ರೀತಿಸುವವರಾಗಲಿ ಮತ್ತು ಆದರಿಸುವವರಾಗಲಿ ಇಲ್ಲ. ಆ ಯಜಮಾನ ಯಾರನ್ನೂ ಪ್ರೀತಿಸದ ಕಟುಕನೇ ಆಗಿದ್ದಾನೆ. ಕೋಟೆಯಂತಹ ಅರಮನೆ ಆಕೆಯ ಪಾಲಿಗೆ ಪಂಜರವಾಗುತ್ತದೆ. ಆಕೆಯ ಬದುಕು ಆ ಪಂಜರದೊಳಗಿಟ್ಟ ಹಕ್ಕಿಯಂತಾಗುತ್ತದೆ. ಸಿನೆಮಾದ ಕೊನೆ ಕೊನೆಯಲ್ಲಿ ಆಕೆ ಬದುಕುವುದಕ್ಕಿಂತ ಸಾಯುವುದೇ ಮೇಲು ಎನ್ನುತ್ತಾಳೆ. ಆಕೆಯ ಜೀವನ ದಾರುಣವಾದ ಹತಾಶೆ ಮತ್ತು ದುರಂತದಲ್ಲಿ ಮುಳುಗುತ್ತದೆ. ಅದೇ ಗಳಿಗೆಯಲ್ಲಿ ಯಾರೂ ಊಹಿಸಲು ಅಸಾಧ್ಯವಾದ ದೃಶ್ಯವೊಂದು ಎದುರಾಗುತ್ತದೆ. ಹದಿಹರೆಯದ ಮುಗ್ಧ ಹುಡುಗಿ ಯಜಮಾನನ ಐದನೆಯ ಹೆಂಡತಿಯಾಗಿ ಬರುವ ಕೊನೆಯ ದೃಶ್ಯವು ತೀರ ಅನರೀಕ್ಷಿತವೂ ಮತ್ತು ಅಷ್ಟೇ ಭಯಾನಕವೂ ಆಗಿದೆ. ಈ ದೃಶ್ಯವು ನೋಡುಗರ ಮನದಲ್ಲಿ ಹತ್ತು-ಹಲವು ಪ್ರಶ್ನೆಗಳನ್ನು ಕಾಡುವಂತೆ ಮಾಡುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು

ದಿ ಗಿಲ್ಟಿ: ವೀಕ್ಷಕರನ್ನು ಹುಡುಕಾಟದಲ್ಲಿ ತೊಡಗಿಸುವ ಸಿನಿಮಾ

ದೇರ್ ವಿಲ್ ಬಿ ಬ್ಲಡ್: ಸಂಪತ್ತಿನ ಲಾಲಸೆ ಹಾಗೂ ವ್ಯಕ್ತಿತ್ವದ ವಿನಾಶ

’ಕಿರಗೂರಿನ ಗಯ್ಯಾಳಿಗಳು: ಗಂಡು ಪ್ರಧಾನತೆಯ ನಿರಾಕರಣೆ ಹಾಗೂ ಮಹಿಳೆಯರ ಸಾಂಘಿಕ ಹೋರಾಟ’

’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್: ಕಂಗೆಟ್ಟ ಬದುಕಿನಲ್ಲಿ ಮಗನಿಗೆ ಆಪ್ತಮಿತ್ರನಾಗುವ ಅಪ್ಪ’

ಮರಾಠಿ ಸಿನಿಮಾ ‘ನಟ ಸಮ್ರಾಟ್: ಮನುಷ್ಯ ಸಂಬಂಧದ ಬಿಕ್ಕಟ್ಟುಗಳ ಕತೆ’

ಜೆನ್ ದಾರ್ಶನಿಕತೆಯ ಸಿನಿಮಾ: ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’

ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...