ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ತಪ್ಪು: ದೊಡ್ಡರಂಗೇಗೌಡ ಅಭಿಪ್ರಾಯ

Date: 23-01-2021

Location: ಬೆಂಗಳೂರು


ಸಂವಹನ ಭಾಷೆಯಾಗಿ ಇಂಗ್ಲಿಷನ್ನು ಸ್ವೀಕರಿಸುವುದು ತಪ್ಪಲ್ಲ. ಆದರೆ, ಇತರೆ ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ಸಲ್ಲದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಸಾಹಿತಿ ದೊಡ್ಡರಂಗೇಗೌಡ ಹೇಳಿದರು.

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ದೊಡ್ಡರಂಗೇಗೌಡರೊಂದಿಗೆ ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯ ಸಂಪಾದಕ ದೇವು ಪತ್ತಾರ ಅವರು ನಡೆಸಿದ ಸಂದರ್ಶನಕ್ಕೆ ಸ್ಪಂದಿಸಿ ಅವರು ಮಾತನಾಡಿದರು.

ವಿದೇಶಿಯ ಆಂಗ್ಲಭಾಷೆಯನ್ನು ಸ್ವೀಕರಿಸುವುದಾದರೆ ರಾಷ್ಟ್ರಭಾಷೆಯಾಗಿ ಹಿಂದಿ ಭಾಷೆಗೆ ವಿರೋಧವೇಕೆ? ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿರುವರೆಂಬ ಆರೋಪದೊಂದಿಗೆ ವಿವಾದಾತ್ಮಕ ವರದಿಗಳು ಬಂದಿವೆ. ಆದರೆ, ತಾವೆಲ್ಲೂ ಹೀಗೆ ಹೇಳಿಲ್ಲ. ಸಂವಹನ ಗ್ರಹಿಕೆಯಲ್ಲಿ ದೋಷವಾಗಿದೆ. ಹಿಂದಿ ಹೇರಿಕೆಯ ಕೇಂದ್ರ ಸರ್ಕಾರ ಹಾಗೂ ಇಂಗ್ಲಿಷ್ ಹೇರಿಕೆ ಕರ್ನಾಟಕ ರಾಜ್ಯ ಸರ್ಕಾರದ ನಡೆಯನ್ನು ಏಕಕಾಲಕ್ಕೆ ತಾವು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.

ಟೀ-ಶರ್ಟ್ ಮೇಲೆ ಕನ್ನಡ ಕವಿಗಳ ವಿಚಾರ: ಟೀ-ಶರ್ಟ್ ಗಳ ಮೇಲೆ ಇಂಗ್ಲಿಷ್ ವಾಕ್ಯಗಳನ್ನು ಬಳಸಿದರೆ ಕನ್ನಡ ಬೆಳೆಯಲ್ಲ. ಮೈ-ಮನ ಕನ್ನಡವಾಗಬೇಕಾದರೆ ನಾವು ಬಳಸುವ ಟೀ-ಶರ್ಟ್ ಮೇಲೂ ಕನ್ನಡ ಕವಿಗಳ, ಚಿಂತಕರ ವಿಚಾರಗಳನ್ನು ಮುದ್ರಿಸಿಕೊಳ್ಳಬೇಕು. ನಮ್ಮ ಯಾವುದೇ ಉಡುಗೆ-ತೊಡುಗೆ-ಆಚಾರ-ವಿಚಾರಗಳಲ್ಲಿ ಕನ್ನಡ ಮೆರೆಸಬೇಕು ಎಂದರು

ಕನ್ನಡ ಕಲಿತವರಿಗೆ ಉದ್ಯೋಗ: ಕನ್ನಡ ಕಲಿತ ಬಗ್ಗೆ ಅರ್ಹತಾ ಪತ್ರ ಪಡೆದವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ನೀಡುವ ನಿಯಮ ರೂಪುಗೊಳ್ಳಬೇಕು. ಕನ್ನಡ ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಂತಹ ಕ್ರಮ ಅನಿವಾರ್ಯ. ಇತ್ತ ಕಡೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯ ಮಾಡಿದರು.

ಏನೋ ಕಡೆದು ಗುಡ್ಡೆ ಹಾಕಲ್ಲ : ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನೋನೋ ಕಡೆದು ಗುಡ್ಡೆ ಹಾಕುವುದಿಲ್ಲ. ಏನೋ ಸಾಧಿಸುತ್ತೇನೆ ಎಂಬ ಭ್ರಮೆಯೂ ಇಲ್ಲ. ಈವರೆಗಾದ ಸಮ್ಮೇಳನದ ಗೊತ್ತುವಳಿಗಳಿಂದ ಕನ್ನಡಕ್ಕೆ ಲಾಭವಾಗಿಲ್ಲ. ಆದರೆ, ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು. ಆದ್ದರಿಂದ, ಸಮ್ಮೇಳನ ನಡೆಯಬೇಕು ಎಂಬ ಕಾರಣಕ್ಕೆ ತಾವು ಸಮ್ಮೇಳನದ ಅಧ್ಯಕ್ಷತೆ ಸ್ಥಾನ ನಿರ್ವಹಿಸುವ ಹೊಣೆ ಹೊತ್ತಿರುವುದಾಗಿ ಹೇಳಿದರು.

ಸಾಮಾಜಿಕ ವಿದ್ಯಮಾನಗಳು, ಶ್ರಮಜೀವಿಗಳ ಮೇಲೂ ಪದ್ಯ ಬರೆದಿದ್ದೇನೆ. ಅದರಂತೆ ಪ್ರಧಾನಿ ಮೋದಿ ಬಗ್ಗೆಯೂ ಕವನ ಬರೆಯುವುದು ಕವಿಗಿರುವ ಸ್ವಾತಂತ್ಯ್ರ. ಅದನ್ನೇ ‘ದೊಡ್ಡರಂಗೇಗೌಡರು ಪ್ರಧಾನಿ ಮೋದಿ ಪರ’ ಎಂದು ತಿಳಿದುಕೊಳ್ಳುವುದಾದರೆ ಅವರ ಮಟ್ಟ ತೋರುತ್ತದೆ ಎಂದೂ ಹೇಳಿದರು.

ಅಭಿರುಚಿಯ ಪಠ್ಯಕ್ಕೆ ಮನ್ನಣೆ: ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಪಠ್ಯಕ್ಕೆ ಸಮಿತಿಯು ಬದ್ಧವಾಗಿದೆ. ಒಂದು ಧರ್ಮ ಅಥವಾ ಧರ್ಮಗ್ರಂಥವನ್ನು ಸುಟ್ಟು ಹಾಕುವ ಪ್ರೇರಣೆ ಇಲ್ಲವೇ ಚಾರಿತ್ರಾರ್ಹ ವ್ಯಕ್ತಿಯ ವಿರುದ್ಧಆಕ್ಷೇಪಾರ್ಹ ವಿಷಯಗಳಿರಬಾರದು. ಈ ಕಾರಣಕ್ಕೆ ಕೆಲವು ಪುಸ್ತಕಗಳ ಖರೀದಿಗೆ, ಪಠ್ಯವಾಗಿ ಸ್ವೀಕರಿಸಲು ಸಮಿತಿಯ ಅಭಿಪ್ರಾಯ ಗೌರವಿಸಿ, ಕೆಲ ಪುಸ್ತಕಗಳ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯ. ಇಂಗ್ಲಿಷ್ ಪುಸ್ತಕಗಳನ್ನು ಸಮಿತಿಯು ಹೆಚ್ಚು ಹೆಚ್ಚಾಗಿ ಖರೀದಿಸುತ್ತದೆ. ಕನ್ನಡ ಪುಸ್ತಕಗಳನ್ನು ಖರೀದಿಸುತ್ತಿಲ್ಲ ಎಂಬುದು ಸರಿಯಲ್ಲ’ಎಂದರು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...