ರಮಣ ಮಹರ್ಷಿಗಳೊಂದಿಗೆ  ಸಂಭಾಷಣೆ....

Date: 31-08-2020

Location: ಬೆಂಗಳೂರು


ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಶಾಂತ ಆಡೂರ ಹವ್ಯಾಸಿ ಬರಹಗಾರರು. ಹಾಸ್ಯ ಮತ್ತು ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಲಲಿತ ಪ್ರಬಂಧ ರಚಿಸುವ ಪ್ರಶಾಂತ ಅವರ ’ಕುಟ್ಟವಲಕ್ಕಿ’ ’ಗೊಜ್ಜವಲಕ್ಕಿ’ಮತ್ತು ’ಅಳ್ಳಿಟ್ಟು’ ಎಂಬ ಮೂರು ಲಲಿತ ಪ್ರಬಂಧಗಳ ಪುಸ್ತಕ ಪ್ರಕಟಿಸಿದ್ದಾರೆ. ಅವರು ತಮ್ಮ ಓದು ಹಾಗೂ ಪುಸ್ತಕ ಪ್ರೀತಿಯನ್ನು ಹಂಚಿಕೊಳ್ಳುವ ಅಂಕಣ e-ಸಂಭಾಷಣೆ.

ಒಮ್ಮೆ ಒಬ್ಬ ರಾಜನು ತನ್ನ ರಾಜ್ಯದಲ್ಲಿ ಸುತ್ತಾಡುತ್ತ ಒಬ್ಬ ಪ್ರಧಾನನ ಮನೆಗೆ ಹೋದನು. ರಾಜನು ಬಂದಾಗ ಆ ಪ್ರಧಾನನು ಜಪದಲ್ಲಿ ತೊಡಗಿದ್ದನು. ಜಪ ಮುಗಿಯುವವರೆಗೂ ರಾಜನು ಪ್ರಧಾನನ್ನು ಕಾಯುವಂತಾಯಿತು. ಜಪ ಮುಗಿದ ತಕ್ಷಣ ಪ್ರಧಾನನು ರಾಜನು ತನಗಾಗಿ ಕಾಯುತ್ತಿರುವದನ್ನು ಗಮನಿಸಿ ’ತಮ್ಮನ್ನು ಕಾಯಿಸಿದ್ದಕ್ಕೆ ಕ್ಷಮಿಸಿ ಮಹಾ ಪ್ರಭು’ ಎಂದು ರಾಜನಿಗೆ ನಮಸ್ಕರಿಸಿದನು. ರಾಜನು ’ಸರಿ..ಸರಿ...ಆದರೆ ಪ್ರಧಾನರು ಮಾಡುತ್ತಿದ್ದ ಜಪ ಎಂತಹದು, ರಾಜ ಬಂದರು ಬಿಟ್ಟು ಬರಲಾರದಂತಹ ಜಪವೇ’ ಎಂದು ಕೇಳಲು ಪ್ರಧಾನನು ಅತ್ಯಂತ ವಿನಮ್ರತೆಯಿಂದ ’ನಾನು ಪವಿತ್ರ ಗಾಯತ್ರಿ ಮಂತ್ರದ ಜಪದಲ್ಲಿ ಮಗ್ನನಾಗಿದ್ದೆ’ ಎಂದು ಹೇಳಿ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸಿದನು. ರಾಜನು ಅಂತಹ ಪವಿತ್ರ ಮಂತ್ರವನ್ನು ತಾನು ಕಲಿಯಬೇಕೆಂದು ಹಂಬಲಿಸಿ ಪ್ರಧಾನನಿಗೆ ಅದನ್ನು ಕಲಿಸಿಕೊಡಲು ಕೊಡಲು ಆಗ್ರಹಿಸಿದನು. ಅದಕ್ಕೆ ಪ್ರಧಾನನು ಕೈಮುಗಿದು ಅತ್ಯಂತ ವಿನಯದಿಂದ ’ರಾಜನ್ ಕ್ಷಮಿಸಿ..ನಾನು ನಿಮಗೆ ಗಾಯತ್ರಿ ಮಂತ್ರದ ದೀಕ್ಷೆ ಕೊಡಲು ಸಾಧ್ಯವಿಲ್ಲ, ಅದನ್ನು ಕಲಿಯಲು ಸಾಧನೆ ಬೇಕಾಗುತ್ತದೆ’ ಎಂದು ಸ್ವಷ್ಟವಾಗಿ ಹೇಳಿ ಬಿಟ್ಟನು. ಇದರಿಂದ ಕೋಪಗೊಂಡ ರಾಜನು ’ಆಯಿತು, ನೀವು ಮಂತ್ರ ಹೇಳಿ ಕೊಡದಿದ್ದರೆ ಏನಾಯಿತು, ನಾನು ಮತ್ತೊಬ್ಬರಿಂದಲಾದರೂ ಈ ಮಂತ್ರವನ್ನೂ ಕಲಿತೇ ಕಲಿಯುತ್ತೇನೆ’ಎಂದು ಹೊರಟು ಹೋದನು.

ಮುಂದೆ ಬೇರೆಯವರಿಂದ ಗಾಯತ್ರಿ ಮಂತ್ರ, ಜಪ ಎಲ್ಲವನ್ನು ಕಲಿತು ರಾಜನು ಮಹಾಮಂತ್ರಿಯನ್ನು ಕರಿಸಿ

’ಮಹಾಮಂತ್ರಿಗಳೆ, ನೋಡಿ ನಾನು ಈಗ ಪ್ರಧಾನರ ಹಾಗೆ ಗಾಯತ್ರಿ ಮಂತ್ರ, ಜಪ ಎಲ್ಲವನ್ನೂ ಕಲಿತಿದ್ದೇನಿ’ ಎಂದು ಮಹಾಮಂತ್ರಿಗಳ ಮುಂದೆ ಸಂಪೂರ್ಣವಾಗಿ ತಾನು ಕಲಿತಿದ್ದ ಮಂತ್ರವನ್ನ ಪಠಿಸಿ ತನ್ನ ಮಂತ್ರ ಪಠಣ ಸರಿ ಇದೆಯೋ ಎಂದು ಕೇಳಿದನು. ಅದನ್ನು ಕೇಳಿದ ಮಹಾಮಂತ್ರಿಗಳು ಅತಿ ವಿನಮ್ರತೆಯಿಂದ ’ರಾಜನ್... ನೀವು ಮಾಡಿದ ಪ್ರತಿ ಮಂತ್ರದ ಉಚ್ಛಾರ, ಪಠಣ ಅತ್ಯಂತ ಸರಿ ಮತ್ತು ಸ್ಪಷ್ಟವಾಗಿದೆ. ಆದರೆ ಇದು ತಾವು ವಿಧಿವತ್ತಾಗಿ ಸಾಧನೆಯಿಂದ ಕಲಿತಿದ್ದಲ್ಲ ಹಾಗೂ ಅದನ್ನು ತಮಗೆ ಯಾರೂ ದೀಕ್ಷೆ ಕೊಟ್ಟಿರುವದಿಲ್ಲ. ಆದ್ದರಿಂದ ದಯವಿಟ್ಟು ಕ್ಷಮಿಸಿ ನೀವು ಈ ಮಂತ್ರ ಪಠಣ ಮಾಡುವದರಿಂದ ತಮಗೆ ಯಾವ ಪ್ರಯೋಜನವು ಆಗುವದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದನು. ಇದನ್ನು ಕೇಳಿ ರಾಜನಿಗೆ ಸಿಟ್ಟು ಬಂದಿತು ’ಮಂತ್ರಿಗಳೇ.....ಪ್ರಧಾನರು ಪಠಣ ಮಾಡುವದು ಇದ್ದನ್ನೇ ಅಲ್ಲವೇ...ನನಗೇಕೆ ಇದರ ಪಠಣದಿಂದ ಪ್ರಯೋಜನವಿಲ್ಲ’ ಎಂದು ಕೋಪದಿಂದ ಕೇಳಿದನು. ಆಗ ಆ ಮಹಾಮಂತ್ರಿಗಳು ಚಪ್ಪಾಳೆ ಹೊಡೆದು ಅಲ್ಲಿಯೇ ಇದ್ದ ಇಬ್ಬರು ಸೈನಿಕರನ್ನು ಕರೆದು ’ರಾಜನನ್ನು ಬಂಧಿಸಿ’ ಎಂದು ಆದೇಶಿಸಿದ. ಆದರೆ ಸೈನಿಕರು ಒಮ್ಮೆ ರಾಜನನ್ನು ಮತ್ತೊಮ್ಮೆ ಮಹಾಮಂತ್ರಿಯ ಮುಖವನ್ನು ನೋಡುತ್ತ ನಿಂತರೆ ವಿನಹ ರಾಜನನ್ನು ಬಂಧಿಸಲಿಲ್ಲ. ಮಂತ್ರಿಗಳು ಮತ್ತೊಮ್ಮೆ ಜೋರಾಗಿ ’ನಾನು ಈ ರಾಜ್ಯದ ಮಹಾಮಂತ್ರಿ, ನಿಮಗೆ ಆದೇಶ ಮಾಡುತ್ತಿದ್ದೇನೆ, ರಾಜನನ್ನು ಕೂಡಲೇ ಬಂಧಿಸಿ’ಎಂದು ಆಜ್ಞಾಪಿಸಿದರೂ ಸೈನಿಕರು ಮಂತ್ರಿಯ ಆದೇಶವನ್ನು ಪಾಲಿಸಲಿಲ್ಲ. ರಾಜನು ಮಂತ್ರಿಯ ಈ ಅವಿವೇಕಿತನವನ್ನು ಕಂಡು ಸಿಟ್ಟಿನಿಂದ ಅದೇ ಸೈನಿಕರಿಗೆ ’ಈ ಮಹಾಮಂತ್ರಿಯನ್ನು ಬಂಧಿಸಿ ಈಗಲೇ ಕಾರಾಗೃಹಕ್ಕೆ ಅಟ್ಟಿ’ ಎಂದು ಆದೇಶ ಮಾಡಿದನು. ತಕ್ಷಣ ಸೈನಿಕರು ಮಹಾಮಂತ್ರಿಯನ್ನು ಹಿಡಿದರು. ಆಗ ಮಹಾಮಂತ್ರಿಗಳು ನಗಹತ್ತಿದರು. ನಗುವ ಕಾರಣವನ್ನು ರಾಜನು ಕೇಳಲಾಗಿ ಮಂತ್ರಿಗಳು

’ಪ್ರಭುಗಳೇ.. ನೀವೇ ಕೇಳಿದಿರಲ್ಲಾ ತಾವು ಮಂತ್ರ ಪಠಣ ಮಾಡುವದರಲ್ಲಿ ತಪ್ಪೇನಿದೆ ಎಂದು ಅದಕ್ಕೆ ಈ ಘಟನೆಯೇ ಉತ್ತರ. ಇಲ್ಲಿ ನಾನು ನೀಡಿದ ಆದೇಶ, ಸೈನಿಕರು ಹಾಗೂ ತಾವು ನೀಡಿದ ಆದೇಶ, ಸೈನಿಕರು ಎಲ್ಲರೂ ಒಂದೇ ಆಗಿದ್ದರೂ ನನ್ನ ಆದೇಶ ಪಾಲನೆ ಆಗಲಿಲ್ಲಾ, ತಮ್ಮ ಆದೇಶ ಪಾಲನೆ ಆಯಿತು.

ಇಲ್ಲಿ ಆದೇಶ ಒಂದೇ ಇತ್ತು, ಆದೇಶ ಪಾಲಿಸುವವರು ಒಬ್ಬರೇ ಇದ್ದರು ಆದರೆ ಆದೇಶವನ್ನು ಕೊಡುತ್ತಿರುವ ವ್ಯಕ್ತಿ, ಅವರ ಅಧಿಕಾರ, ಅರ್ಹತೆ ಭಿನ್ನ ಭಿನ್ನವಾಗಿದ್ದವು. ಹೀಗಾಗಿ ನನ್ನ ಆದೇಶವನ್ನು ಪಾಲಿಸದೇ ಸೈನಿಕರು ತಮ್ಮ ಆದೇಶವನ್ನು ಪಾಲಿಸಿದರು. ಅದೇ ರೀತಿ ಈ ಮಂತ್ರಗಳು ಸಹಿತ.......’ ಎಂದು ಹೇಳಿದನು.

ಇದು ’ಶ್ರೀ ರಮಣ ಮಹರ್ಷಿಯವರೊಂದಿಗೆ ಮಾತುಕತೆ ಅಥವಾ ಸಂಭಾಷಣೆ’ ಕುರಿತು TALKS ಅನ್ನುವ ಇಂಗ್ಲೀಷ ಪುಸ್ತಕದಲ್ಲಿ ಮಹರ್ಷಿಗಳ ಭಕ್ತರೊಬ್ಬರು

’ಸುಮ್ಮನೇ, ಸತತವಾಗಿ ಕೇವಲ ಪವಿತ್ರ ಮಂತ್ರಗಳ ಪಠಣ ಮಾಡುವದರಿಂದ ಏನಾದರೂ ಪ್ರಯೋಜನ ವಿದೆಯೇ?’ ಎಂದು ಮಹರ್ಷಿಗಳಿಗೆ ಕೇಳಿದಾಗ ಶ್ರೀಗಳು ಹೇಳಿದಂತಹ ಕಥೆಯ ಸಾರಾಂಶ.

ಇಲ್ಲಿ, ಯಾವ ಮಂತ್ರವನ್ನು ನಾವು ಪಠಣ ಮಾಡುತ್ತೇವೆ ಅನ್ನುವದಕ್ಕಿಂತ ಯಾರು ಪಠಣ ಮಾಡುತ್ತಾರೆ, ಪಠಣಕ್ಕೆ ಅವರ ಅರ್ಹತೆ, ಯೋಗ್ಯತೆ, ಕ್ಷಮತೆ ಇದೇಯೋ ಇಲ್ಲೋ ಎಂಬುವದು ಆ ಮಂತ್ರದ ಪ್ರಭಾವಕ್ಕೆ, ಪ್ರಯೋಜನಕ್ಕೆ ಕಾರಣವಾಗುತ್ತದೆ. ಅರ್ಹತೆ ಇಲ್ಲದವರ ಮಂತ್ರ ಪಠಣ ಬರೇ ಶಬ್ದ ಆಗುತ್ತದೆಯೇ ಹೊರತು ಆ ಮಂತ್ರದಲ್ಲಿ ಯಾವುದೇ ಶಕ್ತಿ, ಪ್ರಭಾವ ಇರುವದಿಲ್ಲ ಅನ್ನುವದು ನನ್ನ ಗ್ರಹಿಕೆ.

ಈ TALKS with Sri Ramana Maharshi ಪುಸ್ತಕದ ಬಗ್ಗೆ ಹೇಳುವದಾದರೆ, ಇದು ಒಂದು ಆಧ್ಯಾತ್ಮಿಕತೆಯತ್ತ ಒಲವು ಇರುವ ಆಧ್ಯಾತ್ಮಿಕ ಚಿಂತನೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಹೊಸ ದೃಷ್ಟಿಕೋನ ಕೊಡುವ, ಹೊಸ ಚಿಂತನೆಗೆ ಹಚ್ಚಿಸುವ ಪುಸ್ತಕ ಎಂದು ನನಗೆ ಅನಿಸುತ್ತದೆ. ಇದನ್ನು ಬರೆದವರು ಶ್ರೀ ಮುನಗಾಲ ವೆಂಕಟರಾಮಯ್ಯ ( ಸ್ವಾಮಿ ರಮಣಾನಂದ ಸರಸ್ವತಿ) ಅವರು.

ಇದನ್ನ ಕನ್ನಡದಲ್ಲಿ ಡಾ|| ಎ.ಎಸ್‌. ವೇಣುಗೋಪಾಲ ರಾವ್‌ ಅವರು ’ಶ್ರೀ ರಮಣಮಹರ್ಷಿಗಳೊಡನೆ ಮಾತುಕತೆ’ ಎಂದು ಅನುವಾದವನ್ನು ಮಾಡಿದ್ದಾರೆ.

ಶ್ರೀ ರಮಣ ಮಹರ್ಷಿಯರೊಂದಿಗಿನ ಈ ಮಾತುಕತೆಯ TALKS with Sri Raman Maharshi ಪುಸ್ತಕ 1935 ರಿಂದ 1939 ರ ಅವಧಿಯಲ್ಲಿ ರಮಣರು ನಡೆಸಿದ ಉಪದೇಶ, ಪ್ರವಚನದ ಆಧಾರದ ಮೇಲೆ ಬರದಿದ್ದು. ಬಹಳಷ್ಟು ವಿಷಯಗಳು ಈ ಪುಸ್ತಕದೊಳಗೆ ನಮಗೆ ಒಂದು ಆಧ್ಯಾತ್ಮಿಕ ಒಳ ದೃಷ್ಟಿಯನ್ನು ಕೊಡುತ್ತವೆ. ಶ್ರೀ ರಮಣರು ಉಪದೇಶ ಅಥವಾ ಪ್ರವಚನ ಎಂದೂ ವಿಸ್ತಾರವಾಗಿ ಮಾಡಿದವರಲ್ಲಾ, ಎಷ್ಟೋ ಬಾರಿ ಅವರ ಮೌನವೇ ಭಕ್ತರ ಸಮಸ್ಯೆಗಳಿಗೆ ಉತ್ತರವಾಗುತ್ತಿತ್ತು.

ಅವರ ಮಾತುಗಳನ್ನು, ಅವರು ತಮ್ಮನ್ನು ಕಾಣಲು ಬಂದ ಜನರಿಗೆ, ಭಕ್ತರಿಗೆ ಕೊಟ್ಟ ಉತ್ತರಗಳನ್ನೇ ಶ್ರೀ ಮುನಗಾಲ ವೆಂಕಟರಾಮಯ್ಯ ಅವರು ಸಂಗ್ರಹ ಮಾಡಿ ಒಂದು ಪುಸ್ತಕ ಮಾಡಿ ಇವತ್ತಿನ ನಮ್ಮ ತಲೆಮಾರಿನ ಜನರ ವರೆಗೆ ಮುಟ್ಟಿಸಿ ಈ ಪುಸ್ತಕದ ಮುಖಾಂತರ ಶ್ರೀ ರಮಣರ ಸಾಕ್ಷಾತ ದರ್ಶನ ಮಾಡಿಸಿದ್ದಾರೆ ಅನ್ನಬಹುದು. ಎಷ್ಟೊ ಬಾರಿ ಈ ಪುಸ್ತಕದಲ್ಲಿ ಭಕ್ತರು ಕೇಳಿದ ಪ್ರಶ್ನೆಗೂ ಮಹರ್ಷಿಗಳು ಕೊಟ್ಟ ಉತ್ತರಕ್ಕೂ ಸಂಬಂಧವಿಲ್ಲವೇನೋ ಎಂದು ಅನಿಸುತ್ತದೆ ಆದರೆ ಇಲ್ಲಿ ಒಬ್ಬ ಸಾಧಕನಾಗಿ ಓದುವವನಿಗೆ, ಕೇಳುವವನಿಗೆ ರಮಣರ ಪ್ರತಿಯೊಂದು ಉತ್ತರವು ಒಂದು ಅನುಭವ ಕೊಡುತ್ತದೆ, ಅವರ ಉತ್ತರ ಸಾಧಕನನ್ನು ಕುರಿತು ಇರುತ್ತಿದ್ದವೇ ಹೊರತು ಕೇವಲ ಸಾಧಕರ ಪ್ರಶ್ನೆ ಕುರಿತು ಆಗಿರಲಿಲ್ಲ. ನಾವು ಸಹಜವಾಗಿ ನಮ್ಮ ದೃಷ್ಟಿಕೋನದಿಂದ ನಮ್ಮ ಮನದೊಳಗೆ ಹುಟ್ಟಿರುವ ಆಧ್ಯಾತ್ಮಿಕ ಪ್ರಶ್ನೆಗಳನ್ನು, ಮಾನಸಿಕ ಧ್ವಂದ್ವಗಳನ್ನು ಪರಿಹಾರದ ಅಪೇಕ್ಷೆಯಿಂದ ಮಹರ್ಷಿಗಳ ಪುಸ್ತಕದಲ್ಲಿ ಹುಡಕಿದಾಗ ನಮಗೆ ಮಹರ್ಷಿಗಳ ಉತ್ತರ ಅವರದೇ ದೃಷ್ಟಿಕೋನದೊಳಗೆ ಸಿಗುತ್ತವೆ, ಅದನ್ನು ಗ್ರಹಿಸುವ ಸೂಕ್ಷ್ಮತೆ, ಸಾಧಕತೆ ನಮಲ್ಲಿ ಇರಬೇಕು.

ಭಗವಾನರು (ಶ್ರೀ ರಮಣರನ್ನು ಭಗವಾನ ಅಂತಲೂ ಕರೆಯುತ್ತಿದ್ದರು) ಜನರನ್ನು ಸಾಕ್ಷಾತ್ಕಾರದ ಬಗ್ಗೆ, ಪರಮ ಸತ್ಯದ ಬಗ್ಗೆ ಚಿಂತನೆ ಮಾಡಲು ಹಚ್ಚಿಸುತ್ತಿದ್ದರೇ ವಿನಹ ಅವರ ಧೋರಣೆ, ಆಸಕ್ತಿ ಬಗ್ಗೆ ಹಾಗೂ ಅದರಿಂದ ಉದ್ಭವಿಸುವ ಪ್ರಶ್ನೆಗಳ ಬಗ್ಗೆ ಆಗಿರಲಿಲ್ಲ.

ರಮಣರು ಎಂದಿಗೂ ತಾಂತ್ರಿಕ ಶಕ್ತಿ, ಪವಾಡ, ಅದ್ಭುತಗಳಿಗೆ ಮಹತ್ವ ಕೊಟ್ಟವರಲ್ಲ, ಇವೆಲ್ಲ ಆತ್ಮಸಾಧನೆಗೆ ಅವಶ್ಯಕವೂ ಅಲ್ಲ ಎಂದು ಸ್ಪಷ್ಟವಾಗಿ ತಮ್ಮ ಮಾತುಗಳ ಮುಖಾಂತರ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ನಾವು ಇವತ್ತಿನ ದಿವಸಗಳಲ್ಲಿ ಸಮಾಜ ಸೇವೆ ಮಾಡುತ್ತೇವೆ, ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ನೂರಾ ಎಂಟು ಜಂಜಾಟಗಳೊಂದಿಗೆ ಏನೋ ಒಂದು ಸಾಧಿಸಲಿಕ್ಕೆ ಪ್ರಯತ್ನ ಮಾಡುತ್ತಿರುತ್ತೇವೆ. ಒಮ್ಮೊಮ್ಮೆ ನಾವು ಏನು ಸಾಧಿಸಲಿಕ್ಕೆ ಹೋಗುತ್ತಿದ್ದೇವೆ ಅನ್ನುವ ಅರಿವು, ಸ್ಪಷ್ಟತೆ ಸಹಿತ ನಮ್ಮಲ್ಲಿ ಇರುವುದಿಲ್ಲ. ಅದಕ್ಕೆ ಭಗವಾನ ರಮಣರು ’Your own Self-Realization is the greatest service you can render the world ಅಂದರೆ ನಮ್ಮನ್ನ ನಾವ ಅರಿತಕೊಂಡರೆ, ಸ್ವಯಂ ಸಾಕ್ಷತ್ಕಾರ ಮಾಡ್ಕೊಂಡರೆ, ನಮ್ಮ ಆತ್ಮಸಾಧನೆ ನಾವು ಮಾಡಿಕೊಂಡರೆ ಅದೇ ನಾವು ಈ ಜಗತ್ತಿಗೆ ಮಾಡುವ ಅತ್ಯಂತ ದೊಡ್ಡ ಸೇವೆ. ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

ನನಗೆ ಸಮಾಜ ಸೇವೆ ಮಾಡುವದರಿಂದ ತುಂಬಾ ಖುಶಿ ಸಿಗುತ್ತದೆ, I enjoy and feel happy to serve others ಅಂತ ಅಂದುಕೊಂಡು ಏನೇನೊ ಕಸರತ್ತು ಮಾಡುತ್ತಿರುತ್ತೇವೆ ಆದರೆ ಆ ಖುಶಿ ಇರುವದು ಲೌಕಿಕವಾಗಿ ಅಲ್ಲಾ, ಹೊರಗೆ ಇರುವದಿಲ್ಲ, ಅದು ಇರುವದು ನಮ್ಮೊಳಗೆ, ಆ ಖುಶಿ ನಮ್ಮ ಸಹಜಗುಣ, ಹುಟ್ಟು ಗುಣ, ಅದು ನಮ್ಮ ಪ್ರಕೃತಿ. ಆ ಸಂತೋಷ, ಖುಶಿಯನ್ನು ನಾವು ನಮ್ಮೊಳಗೆ ಹುಡುಕ ಬೇಕೆ ಹೊರತು ಹೊರಗಡೆ ಅಲ್ಲ. Happiness is our nature ಅನ್ನುವದನ್ನು ನಾವು ಅರಿತು ಬಾಳಬೇಕಿದೆ. ಅದನ್ನು ಬಿಟ್ಟು ನಾನು ಜಗತ್ತನ್ನು ಸುಧಾರಿಸುತ್ತೇನೆ, ಬದಲಾವಣೆ ಮಾಡುತ್ತೇನೆ ಅನ್ನುವದು ಮೂರ್ಖತನ ಮತ್ತು ನಮ್ಮ ಭ್ರಮೆ ಮಾತ್ರ. ಸುಧಾರಿಸಬೇಕಾಗಿದ್ದು, ಬದಲಾಗ ಬೇಕಾಗಿದ್ದು ಮೊದಲು ನಾವು, ನಮ್ಮನ್ನು ನಾವು ಅರಿಯಲಾರದೇ ಜಗತ್ತನ್ನು ಹೇಗೆ ಬದಲಾಯಿಸುತ್ತೇವೆ?

ಹಿಂತಹ ಅನೇಕ ಪ್ರಶ್ನೆಗಳು ನಮಗೆ ಬಹಳಷ್ಟು ಬಾರಿ TALKS ಪುಸ್ತಕ ಓದುವಾಗ ಕಾಡುತ್ತವೆ. ಪುಸ್ತಕ ಓದಿದಷ್ಟು ಕೆಲವೊಮ್ಮೆ ನಮ್ಮ ಆಧ್ಯಾತ್ಮಿಕ ಚಿಂತನೆಗಳು, ವಿಚಾರಗಳು ಹೊಸ ಹೊಸ ದೃಷ್ಟಿಕೋನ ಪಡೆದುಕೊಳ್ಳುತ್ತ ಹೋಗುತ್ತವೆ. ನಮ್ಮಲ್ಲಿಯೇ ತರ್ಕ- ವಿತರ್ಕಗಳು ಹುಟ್ಟಿಕೊಳ್ಳುತ್ತ ಹೋಗುತ್ತವೆ. ಈ ಎಲ್ಲ ಸಮಸ್ಯೆಗಳು, ಗೊಂದಲಗಳು ನಮ್ಮ ಮನಸ್ಸಿನಿಂದ ಸಂಪೂರ್ಣ ಮುಕ್ತ ಆಗಬೇಕು ಅಂದರೆ ಅದು ಪುಸ್ತಕ ಓದುವದರಿಂದ ಮಾತ್ರವಲ್ಲ ನಮ್ಮ ಆತ್ಮಸಾಧನೆಯಿಂದ, ನಮ್ಮ ಅರಿವಿನಿಂದ, self realizationದಿಂದ.

TALK- with sri ramanmaharshi is very insighful spiritual book. ಆದರೆ ನಾನು ಪ್ರಾರಂಭದ ಕಥೆಯಲ್ಲಿ ಹೇಳಿದಂತೆ ನಾವು ಯಾವಾಗ ನಮ್ಮಲ್ಲಿ ಕ್ಷಮತೆ, ಅರ್ಹತೆ ಬೆಳಸಿಕೊಂಡು ಆತ್ಮಸಾಧನೆಯತ್ತ ನಮ್ಮಷ್ಟಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ ಆವಾಗ ನಮಗೆ ರಮಣರು ಅರ್ಥವಾಗುತ್ತಾ ಹೋಗುತ್ತಾರೆ. ಅವರ ಆಧ್ಯಾತ್ಮಿಕ ಚಿಂತನೆ ಅರ್ಥವಾಗುತ್ತದೆ. ಅಲ್ಲಿಯ ವರೆಗೆ ನಾವು ರಮಣ ಮಹರ್ಷಿಗಳದೇ ಇರಲಿ ಅಥವಾ ಯಾವುದೇ ಆಧ್ಯಾತ್ಮಿಕ ಗುರುಗಳ ಬಗ್ಗೆ ಎಷ್ಟೆ ಓದಿದರು ಅದು ರಾಜನು ಮಂತ್ರ ಪಠಣ ಮಾಡಿದಂತಾಗುವದು ಅಂತ ನನ್ನ ಅನಿಸಿಕೆ.

ರಮಣ ಮಹರ್ಷಿಗಳ ಈ ’talks with sri ramana maharshi' ಪುಸ್ತಕದ ಬಗ್ಗೆ ಎಷ್ಟು ಬರೆದರು ಸಾಲದು. ರಮಣರ ಒಂದೊಂದು ವಿಚಾರವು, ಒಂದೊಂದು ಉತ್ತರವು ಒಂದೊಂದು ಆಧ್ಯತ್ಮಿಕ ಲೇಖನ ಆಗುವ ಮಟ್ಟಿಗೆ ಆಳವಾಗಿ ಇವೆ. ’without understanding yourself what is the use of trying to understand the world’ ಅಂತ ಶ್ರೀ ರಮಣರು ಹೇಳಿದ ಹಾಗೆ ನಾವು ಅದನ್ನು ಅರಿತು ಅದರಿಂದ ನಮ್ಮನ್ನು ನಾವು ಅರಿತುಕೊಂಡು ಈ ಜೀವನವನ್ನು ಆಧ್ಯಾತ್ಮಿಕ ಚಿಂತನೆಯತ್ತ ಮುನ್ನಡೆಸಿಕೊಂಡು ಹೋದರೆ ಅದೇ ನಮ್ಮ ಆತ್ಮಸಾಧನೆ, ಅದೇ ನಾವು ಈ ಜಗತ್ತಿಗೆ ಮಾಡುವಂತಹ ಅತ್ಯಂತ ದೊಡ್ಡ ಸೇವೆ.

*

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...