ರಂಗಭೂಮಿಯ ಅತ್ಯುಪಯುಕ್ತ ಡೈರಿ `ರಂಗಾಂತರಂಗ’ - ಹೆಚ್.ಎಸ್. ವೆಂಕಟೇಶ ಮೂರ್ತಿ

Date: 14-09-2021

Location: ಬೆಂಗಳೂರು


ಲೇಖಕಿ ವೈ.ಕೆ.ಸಂಧ್ಯಾ ಶರ್ಮ ಅವರ  ''ರಂಗಾಂತರಂಗ'' ಕೃತಿಯು ನಾಟಕ ವಿಮರ್ಶೆಗಳ ಸಂಕಲನವಾಗಿದೆ. ಈ ಕೃತಿಗೆ ನಾಡಿನ ಶ್ರೇಷ್ಠ ಹಾಗೂ ಖ್ಯಾತ ಕವಿಗಳು, ಲೇಖಕರು, ನಾಟಕಕಾರರೂ ಆದ ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರು ಮುನ್ನುಡಿ ಬರೆದಿದ್ದು, ನಿಮ್ಮ ಓದಿಗಾಗಿ..  

 ರಂಗಭೂಮಿಯ ಅತ್ಯುಪಯುಕ್ತ ಡೈರಿ

ಶ್ರೀಮತಿ ಸಂಧ್ಯಾಶರ್ಮ ನನ್ನ ಬಹುಕಾಲದ ಆಪ್ತರು. ಅವರು ಬೆಂಗಳೂರಿನಲ್ಲಿ ಕಾಲಕಾಲಕ್ಕೆ ನಡೆದ ರಂಗಪ್ರಯೋಗಗಳನ್ನು ಕುರಿತು ಪ್ರಜಾವಾಣಿ ಪತ್ರಿಕೆಗೆ ಬರೆದ ರಂಗವಿಮರ್ಶೆಯ ಸಂಪುಟವನ್ನೀಗ ಆಸಕ್ತರ ಕೈಗಿಡುತ್ತಿದ್ದಾರೆ.

ಈ ಪುಸ್ತಕದ ಲೇಖನಗಳನ್ನು ಓದುತ್ತಾ ಹೋದಾಗ ರಂಗಭೂಮಿಯ ದಶಕಗಳ ಇತಿಹಾಸವೇ ನನ್ನ ಕಣ್ಮುಂದೆ ಹಾದುಹೋಯಿತು. ಅದೆಷ್ಟು ರಂಗತಂಡಗಳು. ಅದೆಷ್ಟು ಮಂದಿ ರಂಗಾಸಕ್ತರು. ಅವರೆಲ್ಲಾ ರಂಗಭೂಮಿಯ ಬೇರೆ ಬೇರೆ ವಿಭಾಗಗಳಲ್ಲಿ ನಿಸ್ವಾರ್ಥದಿಂದ ದುಡಿಯುವವರು! ನಿರ್ದೇಶಕರು, ನಟ-ನಟಿಯರು, ಸಂಗೀತ, ಬೆಳಕು, ಉಡುಗೆ ತೊಡಿಗೆ, ರಂಗಪರಿಕರ, ಪ್ರಸಾಧನ, ನಾಟಕ ಕರ್ತೃಗಳು....ಅದೊಂದು ವಿಸ್ತೃತ ಪ್ರಪಂಚವೇ ಸರಿ. ಸಂಧ್ಯಾ ಅವರ ರಂಗಪ್ರಯೋಗಗಳನ್ನು ಕುರಿತ ವಿಮರ್ಶೆಯಲ್ಲಿ ಈ ಎಲ್ಲ ಮಹನೀಯರೂ ನಮ್ಮ ಗಮನಕ್ಕೆ ಬರುತ್ತಾರೆ. ರಂಗಭೂಮಿಯ ಬಗ್ಗೆ ತಮಗಿರುವ ಆಳವಾದ ಆಸಕ್ತಿಯಿಂದ ಸಂಧ್ಯಾ ಪ್ರಯೋಗಗಳ ಬಗ್ಗೆ ಹಚ್ಚಿಕೊಂಡು ಬರೆಯುತ್ತಾರೆ. ನಾಟಕ ವಿಮರ್ಶೆ ನಮ್ಮಲ್ಲಿ ಬೆಳೆದಿದೆ.ಆದರೆ ನಾಟಕ ಪ್ರಯೋಗಗಳ ವಿಮರ್ಶೆ ಬೆಳೆದಿಲ್ಲ. ಆ ಅರಕೆಯನ್ನು ಸಂಧ್ಯಾ ಅವರ ಈ ಪುಸ್ತಕ ತುಂಬಿಕೊಡಲು ಪ್ರಾಮಾಣಿಕವಾಗಿ ಹವಣಿಸುತ್ತಿದೆ. ಅದಕ್ಕಾಗಿ ಸಂಧ್ಯಾ ಅವರನ್ನೂ, ಇಂಥ ಕಾಲಂ ಒಂದನ್ನು ಅವರಿಂದ ಬರೆಸಿದ ಪ್ರಜಾವಾಣಿಯನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಕಾಲಂ ಎಂದಮೇಲೆ ಸ್ಥಳದ ಇತಿಮಿತಿ ಇದ್ದೇ ಇರುತ್ತದೆ. ನಿಗದಿತವಾದ ಸ್ಥಳದಲ್ಲಿ ತಾನು ಹೇಳಬೇಕಾದುದನ್ನೆಲ್ಲಾ ಸಂಕ್ಷಿಪ್ತವಾಗಿ ರಿವ್ಯೂಕಾರರು ಹೇಳಬೇಕಾಗಿ ಬರುತ್ತದೆ. ಆ ಕೆಲಸವನ್ನು ಸಂಧ್ಯಾಶರ್ಮ ಸಮರ್ಪಕವಾಗಿ ಮಾಡಿದ್ದಾರೆ. ಅವರ ರಿವ್ಯೂಗಳಲ್ಲಿ ಅಖಂಡವಾಗಿ ರಂಗಭೂಮಿಯನ್ನು ಅವರು ನೋಡುತ್ತಾರೆ. ವೇದಿಕೆಯನ್ನು ಎಷ್ಟು ಆಸಕ್ತಿಯಿಂದ ನೋಡುತ್ತಾರೋ ಅಷ್ಟೇ ಆಸಕ್ತಿಯಿಂದ ಪ್ರೇಕ್ಷಾಂಗಣವನ್ನೂ ಅವರು ನೋಡುತ್ತಾರೆ. ಈವತ್ತು ಒಂದು ರಂಗ ಪ್ರಯೋಗವಾಗುತ್ತಿದ್ದರೆ ಅದರ ಹಿಂದೆ ಅದೆಷ್ಟು ಪೂರ್ವಾಂಗವಿರುತ್ತದೆ ಎಂಬುದನ್ನು ನಾಟಕದ ಹೊಕ್ಕಾಟ ಉಳ್ಳವರಿಗೆ ವಿವರಿಸಬೇಕಾದ ಅಗತ್ಯವಿಲ್ಲ.

ಮೊದಲು ರಂಗಪ್ರತಿ. ಅದು ನಾಟಕವಾಗಿಯೇ ಬಂದಿರಬಹುದು. ಕಥೆಯೋ ಕಾದಂಬರಿಯಾಗಿಯೋ ಕಾವ್ಯವಾಗಿಯೋ ಮೊದಲು ಆವಿರ್ಭವಿಸಿ ನಂತರ ರಂಗಾಸಕ್ತರ ಆಸಕ್ತಿ ಮತ್ತು ಅಗತ್ಯದಿಂದಾಗಿ ನಾಟಕ ರೂಪ ಪಡೆಯಬಹುದು. ಪ್ರಯೋಗಕ್ಕೆ ಒಂದು ನಾಟಕವನ್ನು ಆಯ್ಕೆ ಮಾಡಿಕೊಂಡಮೇಲೆ ನಿರ್ದೇಶಕರು,

ಕಲಾವಿದರು, ರಂಗ ತಜ್ಞರು ಕೂಡಿ ನಡೆಸುವ ಅನೇಕ ದಿನಗಳ ತಾಲೀಮು. ನಿರ್ದೇಶಕ ನಿಧಾನವಾಗಿ ರಂಗಪಠ್ಯವನ್ನು ತನ್ನ ದರ್ಶನದ ಪ್ರತಿಬಿಂಬವಾಗಿ ರೂಪಿಸಿಕೊಳ್ಳುವ ರೋಚಕತೆ! ಯಾವ ಆರ್ಥಿಕ ಲಾಭವೂ ಇಲ್ಲದೆ ಕೇವಲ ಆಸಕ್ತಿಯೊಂದನ್ನೇ ಮೂಲ ಬಂಡವಾಳ ಮಾಡಿಕೊಂಡು ನಡೆಯುವ ನಿರಂತರ ತನ್ಮಯ ಚಟುವಟಿಕೆ! ಕೊನೆಗೊಂದು ದಿನ ರಂಗಭೂಮಿಯೊಂದರಲ್ಲಿ ನಾಟಕ ಪ್ರಯೋಗ. ಪ್ರೇಕ್ಷಕವರ್ಗ. ಥಿಯೇಟರಲ್ಲಿ ಸಂಭವಿಸುವ ಅದ್ಭುತವಾದ ರಂಗಾನುಭವ. ಅದು ನೀಡುವ ಜೀವನ ದರ್ಶನ! ಇದೆಲ್ಲಾ ಅಸಾಮಾನ್ಯ ರೋಚಕ ನಡಾವಳಿ.

ಸಂಧ್ಯಾಶರ್ಮರ ಆಸಕ್ತಿ ಅವರ ಉದ್ದೇಶಕ್ಕೆ ತಕ್ಕಂತೆ ರಂಗಪ್ರಯೋಗವನ್ನು ವಿಮರ್ಶಿಸುವುದು. ಪ್ರೀತಿಯಿಂದ ಹಚ್ಚಿಕೊಂಡು ವಿಮರ್ಶಿಸುವುದು.ಸಾಧ್ಯವಾದಷ್ಟು ಗುಣಪಕ್ಷಪಾತಿಯಾಗಿ ವಿಮರ್ಶಿಸುವುದು. ಹಾಗಂತ ಅವರು ದೋಷಗಳಿಗೆ ಕುರುಡಾಗುವವರಲ್ಲ. ರಂಗಪ್ರಯೋಗದ ಗುಣದೋಷಗಳನ್ನು ಸಮತೋಲ ಕಳೆದುಕೊಳ್ಳದೆ ಅವರು ವಿಮರ್ಶಿಸುತ್ತಾರೆ. ಹಾಗಾಗಿ ಅವರ ವಿಮರ್ಶೆಗೆ ಒಂದು ಅಧಿಕೃತತೆಯ ಮುದ್ರೆ ತನಗೆ ತಾನೇ ದೊರಕುತ್ತದೆ. ಮೊದಲು ನಾಟಕದ ವಸ್ತುವನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸುವುದು. ಆಮೇಲೆ ರಂಗದ ಮೇಲೆ ನಿರ್ದೇಶಕರ ತನ್ಮಯ ತೊಡಗುವಿಕೆಯ ಫಲವಾಗಿ ಕಲಾವಿದರು ಮತ್ತು ರಂಗಕರ್ಮಿಗಳ ಮೂಲಕ ಹೇಗೆ ನಾಟಕ ಮೂಡಿಬಂದಿತು ಎಂಬುದನ್ನು ವಿವರಿಸುವುದು. ಹಾಗೆ ವಿಮರ್ಶಿಸುವಾಗ ಪ್ರೇಕ್ಷಕರ ಸ್ಪಂದನದತ್ತ ಸದಾ ಒಂದು ಕಣ್ಣಿಡುವುದು. ಕೊನೆಗೆ ನಿರ್ದೇಶನ, ಸಂಗೀತ, ಉಡುಪು, ರಂಗಸಾಮಗ್ರಿಯ ಬಳಕೆ, ಪ್ರಸಾದನ, ಬೆಳಕು, ಶಬ್ದ, ಇವುಗಳಿಗೆ ಸಂಬಂಧಿಸಿದ ಕಲಾವಿದರು-ಕಲಾಕರ್ಮಿಗಳು ಹೇಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು ಎಂಬುದನ್ನು ಒಂದು ಪ್ಯಾರಾದಲ್ಲಿ ಸಂಕ್ಷಿಪ್ತವಾಗಿ ವಿವರಿಸುವುದು. ಈವತ್ತಿನ ಸಾಮಾಜಿಕ ಸಂದರ್ಭದಲ್ಲಿ ಈ ಪ್ರಸ್ತುತ ರಂಗಪ್ರಯೋಗದ ಔಚಿತ್ಯವೇನು ಎಂಬುದನ್ನು ಸೂಚಿಸುವುದು-ಇದು ಸಂಧ್ಯಾ ಸಾಮಾನ್ಯವಾಗಿ ತಮ್ಮ ವಿಮರ್ಶೆಯಲ್ಲಿ ಅನುಸರಿಸುವ ಮಾರ್ಗ. ಇವು ಹೆಚ್ಚು ವಿಸ್ತಾರಗೊಂಡಲ್ಲಿ ಬಹು ಉಪಯುಕ್ತವಾದ ರಂಗವಿಮರ್ಶೆಯ ಇತಿಹಾಸದ ದಾಖಲೆಯಾಗುವುದು! ನಿಜ! ಆದರೆ ಕಾಲ ಮತ್ತು ಸ್ಥಳಮಿತಿಯ ಅನಿವಾರ್ಯಗಳಿವೆಯಲ್ಲ! ಹಾಗಾಗಿ ಸಂಧ್ಯಾ ಅವರ ಬರವಣಿಗೆಯನ್ನು ವಿಮರ್ಶೆ ಎನ್ನುವುದಕ್ಕಿಂತ ರಿವ್ಯೂಗಳೆಂದು ಕರೆಯುವುದೇ ಹೆಚ್ಚು ಸೂಕ್ತ. ಅವರು ವಿಸ್ತೃತ ವಿಮರ್ಶೆ ಬರೆಯುವ ಸಾಮರ್ಥ್ಯ ಮತ್ತು ವ್ಯುತ್ಪತ್ತಿ ಉಳ್ಳವರು. ತಾವು ಬರೆದದ್ದನ್ನು ಟಿಪ್ಪಣಿಗಳೆಂದು ತಿಳಿದು ಅವನ್ನು ವಿಸ್ತರಿಸಿ ಸಮಗ್ರ ವಿಮರ್ಶೆಯನ್ನು ರಚಿಸುವ ಗಹನವಾದ ಹೊಣೆಗಾರಿಕೆಯನ್ನು ಅವರು ನಿರ್ವಹಿಸಬೇಕೆಂಬುದು ನನ್ನ ಅಪೇಕ್ಷೆ. ಪೇಪರಿನ ಇತಿಮತಿಯಲ್ಲಿ ಅವರು ಈವರೆಗೆ ಮಾಡಿಕೊಂಡು ಬಂದ ರಂಗದ ಕೆಲಸ ಖಂಡಿತ ಬಹುಮುಖ್ಯವಾದುದು. ಅವರ ರಿವ್ಯೂಗಳನ್ನು ಓದುವಾಗ, ಅರೇ! ಈ ನಾಟಕ ನಾನು ನೊಡಲಿಲ್ಲವಲ್ಲ ಎಂದ ಅನೇಕ ಬಾರಿ ನಾನು ಹಳಹಳಿಸಿದ್ದುಂಟು! ಒಂದು ರಿವ್ಯೂ ಇದಕ್ಕಿಂತ ಹೆಚ್ಚಿನದೇನನ್ನು ನಿರ್ವಹಿಸಬೇಕು?

ಆಧುನಿಕ ರಂಗಚಟುವಟಿಕೆಗಳ ಒಂದು ಸ್ಮೃತಿಕೋಶವೆಂದೂ ಸಂಧ್ಯಾರ ಬರವಣಿಗೆಯನ್ನು ನಾನು ಪರಿಗಣಿಸುತ್ತೇನೆ. ರಂಗ ಚಟುವಟಿಕೆಯಲ್ಲಿ ಆಸಕ್ತರಾಗಿರುವ ನೂರಾರು ಜನ ಕಲಾವಿದರು, ರಂಗಕರ್ಮಿಗಳು ಇಲ್ಲಿ ನಮ್ಮ ಗಮನಕ್ಕೆ ಬರುತ್ತಾರೆ. ಹಳಬರೊಂದಿಗೆ ಹೊಸ ಹೆಸರುಗಳು ಮುಂಚೂಣಿಗೆ ಬರುತ್ತವೆ. ಅದೆಷ್ಟು ಮಂದಿ ಹೆಣ್ಣುಮಕ್ಕಳು ರಂಗ ಚಟುವಟಿಕೆಯಲ್ಲಿ ತೊಡಗಿದ್ದಾರೆ! ಅದನ್ನು ಗಮನಿಸಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ವಂದನೆಗಳು ಮತ್ತು ಅಭಿನಂದನೆಗಳು ಸಂಧ್ಯಾ ಎನ್ನುತ್ತೇನೆ!

ರಂಗಭೂಮಿಯಲ್ಲಿ ಈಚೆಗೆ ಕಾಣುವ ಮುಖ್ಯ ಟ್ರೆಂಡುಗಳನ್ನೂ ಈ ರಿವ್ಯೂಸಂಪುಟ ಸೂಚಿಸುತ್ತಿದೆ. ಸ್ತ್ರೀಪರವಾಣಿಯನ್ನು ಮುನ್ನೆಲೆಗೆ ತರುವ ಅನೇಕ ಮುಖ್ಯ ಪ್ರಯೋಗಗಳು ಈಚಿನ ವರ್ಷಗಳಲ್ಲಿ ನಡೆದಿವೆ. ಕಥೆ ಕಾದಂಬರಿ ಪ್ರಾಚೀನ ಮಹಾಕಾವ್ಯಗಳನ್ನು ನಾಟಕ ರೂಪಕ್ಕೆ ತಂದು ಯಶಸ್ಸು ಪಡೆದ ಅನೇಕ

ಪ್ರಯೋಗಗಳಾಗಿವೆ. ಏಕಪಾತ್ರ ಹೆಚ್ಚೆಂದರೆ ಎರಡು ಪಾತ್ರಗಳ ನಾಟಕ ಪ್ರಯೋಗಗಳು ಈ ವರ್ಷಗಳಲ್ಲಿ ಪ್ರೇಕ್ಷಕರನ್ನು ಸೆರೆಹಿಡಿದಿವೆ. ಸಂಸ್ಕೃತ, ಇಂಗ್ಲಿಷ್, ಗ್ರೀಕ್, ಗುಜರಾತಿ, ಬೆಂಗಾಳಿ, ಮರಾಠಿ- ಹೀಗೆ ಬೇರೆ ಬೇರೆ ಭಾಷಾಮೂಲದಿಂದ ಸಂಸ್ಕೃತಿ ಮೂಲದಿಂದ ಬಂದ ರಂಗಕೃತಿಗಳು (ಕೆಲವು ಅನುವಾದ, ಕೆಲವು ರೂಪಾಂತರ, ಕೆಲವು ಪ್ರಭಾವದಿಂದ ಹೊಸ ರೂಪ ಪಡೆದನಾಟಕಗಳು).

ಸಂಧ್ಯಾರ ಆಸಕ್ತಿಯ ವಿಸ್ತಾರವೂ ಗಮನ ಸೆಳೆಯುತ್ತದೆ. ಎಲ್ಲ ಬಗೆಯ ನಾಟಕಗಳ ಬಗ್ಗೆ ಅವರು ಉತ್ಸಾಹ ಮತ್ತು ಮುಕ್ತ ಮನಃಸ್ಥಿತಿಯಿಂದ ಬರೆಯುತ್ತಾರೆ. ಉದ್ದಕ್ಕೂ ರಂಗಪ್ರೀತಿಯು ನಿರಂತರವಾಗಿ ಪ್ರವಹಿಸುವುದಾದರೂ ನಿಷ್ಠುರ ಮಾತುಗಳನ್ನು ಹೇಳುವುದಕ್ಕೆ ಅವರು ಹಿಂಜರಿಯುವುದಿಲ್ಲ;ಹಿಂಜರಿಯಬೇಕಾಗಿಲ್ಲ ಕೂಡ!

ಇಂಥ ಒಳ್ಳೆಯ ಕೃತಿಯನ್ನು ರಚಿಸಿರುವುದಕ್ಕಾಗಿ ನನ್ನ ಈ ಪ್ರೀತಿಯ ಸೋದರಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂದಿನ ಮುದ್ರಣದಲ್ಲಿ ರಂಗಪ್ರಯೋಗದ ದಿನಾಂಕಗಳನ್ನೂ ಅವರು ನೀಡಲಿ . ಅದು ಕಾಲ-ಕಾಲಕ್ಕೆ ರಂಗಭೂಮಿ ಪಡೆದ ಹೊಸ ಹೊಸ ಆವಿಷ್ಕಾರಗಳನ್ನು ರೇಖೆ ಎಳೆದು ಬಿಡಿಸಿಡುವಲ್ಲಿ ಸಹಾಯಕವಾಗುತ್ತದೆ.

 

MORE NEWS

ಆತ್ಮಕಥೆಯ ವಿಭಿನ್ನ ರೂಪ ‘ವೈದ್ಯ ಅರ...

23-09-2021 ಬೆಂಗಳೂರು

ಸರಳ ಇಲ್ಲವೇ ವಿಶೇಷ ಎನ್ನಿ, ಬದುಕಿನಲ್ಲಿ ಕಂಡು ಅನುಭವಿಸಿದ್ದನ್ನು ಹೇಳುವ ಪ್ರಾಮಾಣಿಕ ಮನಸ್ಸಿನ ಅಭಿವ್ಯಕ್ತಿಯಾಗಿ, ಆತ್ಮ...

ಸುದ್ದಿಯ ಒತ್ತಡದ ನಡುವೆಯೂ ಸಾಹಿತ್ಯ...

20-09-2021 ಐಶ್ವರ್ಯಾ ಫೋರ್ಟ್ ಸಭಾಂಗಣ, ಚಿತ್ರದುರ್ಗ

ಕತೆ, ಕಾದಂಬರಿಗಳನ್ನು ಬರೆದು ಕೃತಿ ರೂಪಕ್ಕೆ ತಂದು ಸಾಹಿತ್ಯ ಲೋಕದಲ್ಲೂ ಹೆಸರು ಮಾಡುವ ಪತ್ರಕರ್ತರು ತುಂಬಾ ವಿರಳ. ಅದರ ನ...

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹ...

18-09-2021 ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಲಪಡಿಸಿ, ಅದರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಚಟುವಟಿಕೆಗಳನ್ನು ಹೆಚ್ಚು ಪರಿಣಾಮ...