"ಒಂದು ಕಾಲದಲ್ಲಿ ಕನ್ನಡದ ರಂಗತಂಡಗಳ ಹುರುಪಿಗೆ ತಕ್ಕಂತೆ ಸಾಕಷ್ಟು ನಾಟಕಗಳು ರಚನೆಯಾಗದ ಕಾಲದಲ್ಲಿ ಹಲವು ತಂಡಗಳು ಕನ್ನಡದ ಸೃಜನಶೀಲ ಸಾಹಿತ್ಯ ಕೃತಿಗಳನ್ನೆತ್ತಿಕೊಂಡು ಅವುಗಳಿಗೆ ರಂಗರೂಪ ನೀಡಲು ತೊಡಗಿದ್ದುಂಟು. ಚಂದ್ರು ರವರ ʼರೂಪಾಂತರʼ ತಂಡ ಇಂಥದೇ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದು. ಹೆಸರೇ ಹೇಳುವಂತೆ ಕತೆ, ಕಾದಂಬರಿಗಳಿಗೆ ರಂಗಕೃತಿಯ ರೂಪ ಕೊಟ್ಟು ಅವುಗಳ ಇನ್ನೊಂದು ಓದನ್ನು ಜನರೆದುರು ತೆರೆದಿಟ್ಟ ತಂಡ ಇದು," ಎನ್ನುತ್ತಾರೆ ಕಿರಣ ಭಟ್, ಹೊನ್ನಾವರ. ಅವರು ‘ಚಂದ್ರಯಾನ’ ಕೃತಿ ಕುರಿತು ಬರೆದ ವಿಮರ್ಶೆ.
ಒಂದು ಸಾಮಾನ್ಯ ಕುಟುಂಬದಿಂದ ಬಂದ ಹುಡುಗನೊಬ್ಬ ನಾಟಕದ ಹುಚ್ಚು ಹತ್ತಿಸಿಕೊಂಡು, ಮುಂದೆ ಅದನ್ನೇ ಶಕ್ತಿಯಾಗಿಸಿಕೊಂಡು ಬೆಂಗಳೂರಿನ ರಂಗಭೂಮಿಗೆ ಹಲವು ಹೊಸ ನಾಟಕಗಳನ್ನು ನೀಡುತ್ತ ನಡೆಸಿದ ಸುಮಾರು ಮೂವತ್ತೈದು ವರ್ಷಗಳ ದೀರ್ಘ ಯಾನವೇ ‘ಚಂದ್ರಯಾನʼ.
ನಟ, ನಿರ್ದೇಶಕ ಕೆ.ಎಸ್.ಡಿ. ಎಲ್ ಚಂದ್ರು ರವರ ಅರವತ್ತನೆಯ ವಯಸ್ಸಿನ ಹೊತ್ತಿಗೆ ತಂದ ಹೊತ್ತಿಗೆಯಿದು. ಹಾಗಂತ ಇದು ಅವರ ಆತ್ಮಕಥೆಯಲ್ಲ. ಸುಮಾರು ಐದುನೂರು ಪುಟಗಳ ಈ ಹೊತ್ತಿಗೆಯಲ್ಲಿ ಅವರ ಕುರಿತು ಇರುವದು ಕೆಲವೇ ಪುಟಗಳು ಮಾತ್ರ. ಅದೂ ಅವರ ಗೆಳೆಯರು, ಜೊತೆ ದುಡಿದವರ ಬರಹಗಳು. ಪುಸ್ತಕದುದ್ದಕ್ಕೂ ಕಾಣುವದು ಅವರ ಕಾಣ್ಕೆ. ಕಿರು ತೆರೆ, ಸಿನಿಮಾ, ಸಾಕ್ಷ್ಯಚಿತ್ರ ಮತ್ತು ಮುಖ್ಯವಾಗಿ ಕನ್ನಡ ರಂಗಭೂಮಿಗೆ ಅವರ ಕೊಡುಗೆ.
ಒಂದು ಕಾಲದಲ್ಲಿ ಕನ್ನಡದ ರಂಗತಂಡಗಳ ಹುರುಪಿಗೆ ತಕ್ಕಂತೆ ಸಾಕಷ್ಟು ನಾಟಕಗಳು ರಚನೆಯಾಗದ ಕಾಲದಲ್ಲಿ ಹಲವು ತಂಡಗಳು ಕನ್ನಡದ ಸೃಜನಶೀಲ ಸಾಹಿತ್ಯ ಕೃತಿಗಳನ್ನೆತ್ತಿಕೊಂಡು ಅವುಗಳಿಗೆ ರಂಗರೂಪ ನೀಡಲು ತೊಡಗಿದ್ದುಂಟು. ಚಂದ್ರು ರವರ ʼರೂಪಾಂತರʼ ತಂಡ ಇಂಥದೇ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದು. ಹೆಸರೇ ಹೇಳುವಂತೆ ಕತೆ, ಕಾದಂಬರಿಗಳಿಗೆ ರಂಗಕೃತಿಯ ರೂಪ ಕೊಟ್ಟು ಅವುಗಳ ಇನ್ನೊಂದು ಓದನ್ನು ಜನರೆದುರು ತೆರೆದಿಟ್ಟ ತಂಡ ಇದು. ೧೯೮೯ ರಲ್ಲಿ ಲಂಕೇಶ್ ರ ʼರೊಟ್ಟಿʼ ಯಿಂದ ಮೊದಲುಗೊಂಡು ಇದುವರೆಗಿನ ʼರೂಪಾಂತರʼ ದ ಯಾನ ಚಂದ್ರು ರವರ ಯಾನವೂ ಹೌದು. ಪುಸ್ತಕ ಓದುತ್ತ ಹೋದಂತೆ ಈ ಚಟುವಟಿಕೆಗಳ ಅಗಾಧತೆ ಅರಿವಿಗೆ ಬಾರದಿರದು. ಅದೆಷ್ಟು ವೈವಿಧ್ಯ ಆ ನಾಟಕಗಳಲ್ಲಿ! ಲಂಕೇಶ್, ತೇಜಸ್ವಿಯವರಂಥ ಪ್ರಭೃತಿಗಳ ಕೃತಿಗಳಷ್ಟೇ ಅಲ್ಲ ಶಿವರಾಮ ಕಾರಂತರ ʼಮೈಮನಗಳ ಸುಳಿಯಲ್ಲಿʼ ಯನ್ನು ಕೂಡ ಎತ್ತಿಕೊಂಡ ಇವರ ಧೈರ್ಯಕ್ಕೆ ಮೆಚ್ಚಲೇಬೇಕು. ಜೊತೆ ಜೊತೆಯಲ್ಲೇ ಅನೇಕ ಬರಹಗಾರರೂ ಇವುಗಳನ್ನು ನಾಟಕಕ್ಕೆ ಅಳವಡಿಸಿದ್ದನ್ನೂ ಮೆಚ್ಚಲೇಬೇಕು.
ಪುಸ್ತಕ ಇಷ್ಟವಾಗುವದು ಅದು ತೆರೆದಿಡುವ ಬಹುಪುಟಗಳ ವಿವರಗಳಿಗಾಗಿ. ಮೂಲ ಕೃತಿ, ರಚನೆಕಾರರು, ರೂಪಾಂತರಕಾರರು ಎಲ್ಲರ ಬಗೆಗೂ ಅದು ಮಾತನಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಂಗಪ್ರಯೋಗದ ವಿಮರ್ಶೆಗಳು. ಕನ್ನಡದಲ್ಲಿ ರಂಗ ವಿಮರ್ಶೆಗಳು ಬೆಳೆದು ಬಂದ ಬಗೆಗೂ ಒಂದಿಷ್ಟು ಬೆಳಕು ಚೆಲ್ಲುತ್ತದೆ. ತೊಂಬತ್ತರ ದಶಕದಿಂದೀಚೆ ವಿಮರ್ಶೆಯ ಶೈಲಿಯೂ ವ್ಯಾಕರಣವೂ ಬದಲಾಗುತ್ತ ಹೋಗಿದ್ದನ್ನು ಕಾಣುತ್ತೇವೆ. ಇಂಗ್ಲಿಶ್ ವಿಮರ್ಶೆಗಳ ನಿಷ್ಠುರತೆ ಬೆರಗಾಗಿಸುತ್ತದೆ. ಕನ್ನಡದಲ್ಲಿ ರಂಗ ವಿಮರ್ಶೆಗಳು ಅತಿ ವಿರಳವಾಗಿರುವ ಈ ಕಾಲದಲ್ಲಿ ಆಗ ಪ್ರತಿ ನಾಟಕದ ಕುರಿತು ಬಂದಿರುವ ವಿಮರ್ಶೆಗಳ ಸಂಖ್ಯೆ ಮತ್ತು ವೈವಿಧ್ಯ ಅಚ್ಚರಿ ಹುಟ್ಟಿಸುತ್ತವೆ. ʼರಾಮಧಾನ್ಯʼ ದ ಪ್ರಯೋಗದ ಕುರಿತ ಬರಹಗಳಲ್ಲಿ ರಾ.ಕ. ನಾಯಕರು ನಿರ್ದೇಶಕ, ನಾಟಕಕಾರ, ಮೂಲ ಕೃತಿಗಳ ಸಂಘರ್ಷದ ಕುರಿತೂ ಬರೆಯುತ್ತ ಹೊಸ ಚರ್ಚೆಯೊಂದನ್ನು ಹುಟ್ಟುಹಾಕುತ್ತಾರೆ. ʼಮೋಹನಸ್ವಾಮಿʼ ನಾಟಕದ ಕುರಿತೂ ಇಂಥ ಒಂದು ಚರ್ಚೆಯಿದೆ. ಒಟ್ಟಾರೆ ಒಂದು ಸಂದರ್ಭದ ಹವ್ಯಾಸಿ ರಂಗಭೂಮಿಯ ಕುರಿತಾದ ನೋಟವೊಂದನ್ನು ಕಟ್ಟಿಕೊಡುವ ಮಟ್ಟಿಗಂತೂ ಈ ಪುಸ್ತಕ ಸಾರ್ಥಕ.
ಸ್ವತ: ಒಳ್ಳೆಯ ಫೊಟೋಗ್ರಾಫರ್ ಆಗಿರುವ ಚಂದ್ರು ಅನೇಕ ನಾಟಕಗಳ ಬಣ್ಣದ ಚಿತ್ರಗಳನ್ನೂ ಇಲ್ಲಿ ಹಾಕಿದ್ದಾರೆ. ರಂಗಭೂಮಿಯ ವಿದ್ಯಾರ್ಥಿಗಳಿಗೆ ಇವು ಒಂದು ರೀತಿಯಲ್ಲಿ ಅಭ್ಯಾಸ ಯೋಗ್ಯವಾದವುಗಳು. ಆದರೆ ಹೆಚ್ಚಿನ ಚಿತ್ರಗಳು ಮಿಡ್ ಶಾಟ್ ಮಾದರಿಯವು. ಇಡಿಯ ರಂಗವನ್ನೂ ತೋರಿಸುವ ಬೇರೆ ಬೇರೆ ಕಂಪೋಸಿ಼ನ್ ಗಳ ಚಿತ್ರಗಳನ್ನು ಹಾಕಿದ್ದರೆ ನಾಟಕದ ರಂಗ ಸಜ್ಜಿಕೆಗಳ ಕುರಿತ ಅಭ್ಯಾಸಕ್ಕೂ ಅನುಕೂಲವಾಗುತ್ತಿತ್ತು.
ಒಟ್ಟಾರೆ ಕೆ.ಎಸ್.ಡಿ.ಎಲ್ ಚಂದ್ರು ರವರ ಅರವತ್ತನೆಯ ವರ್ಷಕ್ಕೆ ಬಂದ ಈ ಹಿರಿ ಹೊತ್ತಿಗೆ ರಂಗಾಭ್ಯಾಸಿಗಳಿಗೂ ಅನುಕೂಲವಾಗುವಂತಿದೆ.
ಡಾ. ಎಂ ಭೈರೇಗೌಡರು ಹಿರಿದಾದ ಈ ʼಚಂದ್ರಯಾನʼ ವನ್ನು ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ಕೆ.ವೈ.ನಾರಾಯಣಸ್ವಾಮಿ ಚಂದದ ಬೆನ್ನುಡಿ ಬರೆದಿದ್ದಾರೆ.
"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...
"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...
"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...
©2025 Book Brahma Private Limited.