ರಾಷ್ಟ್ರಕೂಟರ ರಾಜಧಾನಿಯಲ್ಲಿ ಇತಿಹಾಸವನ್ನು ನೆನೆಯುತ್ತ…

Date: 18-10-2022

Location: ಬೆಂಗಳೂರು


ಇಡೀ ಮಳಖೇಡ ಊರು ಕೋಟೆಯ ಹೊರಗಿದೆ. ಈ ಊರಿನ ಸಂದಿಗೊಂದಿಗಳನ್ನು ದಾಟಿಕೊಂಡು ಕೋಟೆಯ ಬಾಗಿಲಿಗೆ ಬಂದೆವು. ಸರಿಸುಮಾರು ಸಾವಿರ ವರ್ಷಗಳು ಕಳೆದು ಹೋಗಿದ್ದರೂ ಒಂದು ಬಾಗಿಲು ತನ್ನ ಪಳಿಯುಳಿಕೆ ಉಳಿಸಿಕೊಂಡು ಕಾಡುತ್ತಲೆ ನೂರಾರು ಕಲ್ಪನಾ ಚಿತ್ರಗಳನ್ನು ನಮ್ಮೊಳಗೆ ತೆರೆಸುತ್ತದೆ ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಮಳಖೇಡ ಪ್ರವಾಸದ ಅನುಭವ ಹಂಚಿಕೊಂಡಿದ್ದಾರೆ.

ಕಾಗಿಣಾ ಬೆಣ್ಣೆತೊರೆ ಎರಡೂ ನದಿಗಳು ಸಂಗಮವಾಗಿ ಒಂದಾಗಿ ಹರಿದು ಮುಂದೆ ದೊಡ್ಡ ಕೋಟೆಯ ಗೊಡೆಗಂಟಿ ಸಾಗುತ್ತದೆ . ಬೆಳ್ಳಂಬೆಳಗ್ಗೆ ಆ ಜೋಡು ನದಿಗಳ ಕೂಡುವಿಕೆಯ ತಟವನ್ನು ನೋಡುವುದೆ ಚೆಂದ. ಚಳಿಗಾಲದಲ್ಲಂತೂ ಇಲ್ಲಿ ಅದ್ಭುತವಾದ ನವನವೀನ ವಿನ್ಯಾಸದ ತರಂಗಗಳನ್ನು ನದಿಗಳೆರಡೂ ಕ್ಷಣ ಕ್ಷಣಕ್ಕೂ ಕೊಡುತ್ತವೆ. ಜೋಡು ನದಿ ಕೂಡಿ ಹರಿವ ಸಂಗಮ ಕ್ಷೇತ್ರದಲ್ಲಿ ಅತಿ ಶಾಂತವಾಗಿ ನೀರು ತೇಲಿ ಹೋಗುತ್ತದೆ. ನೀರಿನ ಉಷ್ಣಾಂಶ ಹೊರಡಿಸುವ ಹೊಗೆಯಂತ ಒಂದು ನೀರಿನ ಬಾಷ್ಪೀಕರಣ ಇಡೀ ನದಿಯ ಸೊಬಗನ್ನು ದ್ವಿಗುಣಗೊಳಿಸುತ್ತದೆ. ಜೋಡಿಯಾಗಿ ಹರಿಯುವ ನದಿ ಮುಂದೆ ಹೋಗಿ ಗಟ್ಟಿ ಕಿಲದ ಕಲ್ಲು ತೋಯಿಸಿ ಮುಂದೆ ಹೋಗುತ್ತದೆ.

ಕಾವೇರಿಯಿಂದಮಾ ಗೋದಾವರಿವರಮಿರ್ಪನಾಡದ
ಕನ್ನಡದೋಳ್ ಭಾವಿಸಿದ ಜನಪದಂ
ವಸುಧಾವಳಿಯ ವಿಲಿನ ವಿಷಯ ವಿಶೇಷಂ

ಪದನರಿದು ನುಡಿಯಲುಂ ನುಡಿದು ದಾನರಿಯಲ್ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ
ಕಾವ್ಯ ಪ್ರಯೋಗ ಪರಿಣಿತಮತಿಗಳ್

ಸುಭಟರ್ಕಳ್ ಕವಿಗಳ್, ಪ್ರಭುಗಳ್ ಚೆಲ್ವರ್ಕಗಳ್
ಭಾಜನರ್ಕಳ್, ಗುಣಿಗಳ್, ಅಭಿಮಾನಿಗಳ್ ಅತ್ಯುಗ್ರರ್
ಗಂಭೀರಚಿತ್ತರ್, ವಿವೇಕಿಗಳ್, ನಾಡವರ್ಗಳ್

ತಸ್ಯಶ್ರೀಮದ್ ಅಮೋಘವರ್ಷ ನೃಪತಿ
ಅಸದಳ ಇಂದ್ರಪುರಂ ಅಧಿಕಂ
ಇದಂ ಶ್ರೀಮಾನ್ಯಖೇಟ ಅಭಿದಂ, ಏನ್ ಏದಂ

ಮೇಲೆ ಉಲ್ಲೇಖಿಸಿದ ಕವಿತೆ ಕನ್ನಡದ ಶ್ರೇಷ್ಠ ಕಾವ್ಯ. ಅದರ ಕೊನೆಯಲ್ಲಿ ಉಲ್ಲೇಖಿಸಿದ ಮಾನ್ಯಖೇಟದಲ್ಲಿ ಇವತ್ತಿನ ನಡಿಗೆ. ಮಾನ್ಯಖೇಟ ಇವತ್ತಿಗೆ ಅದರ ಹೆಸರು ಮಳಖೇಡ. ಇದು 9ನೇ ಶತಮಾನದಲ್ಲಿ ರಾಷ್ಟ್ರಕೂಟರ ರಾಜಧಾನಿ ಆಗಿತ್ತು. ದಂತಿದುರ್ಗನಿಂದ ಮೊದಲಗೊಂಡ ರಾಜವಂಶ ದೇಶದ ಬೇರೆ ಬೇರೆ ಸ್ಥಾನಗಳನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕೊನೆಗೆ ಮಾನ್ಯಖೇಟವನ್ನೆ ಮುಖ್ಯ ರಾಜಧಾನಿಯನ್ನಾಗಿ ಮಾಡಿದರು.

ಇದು ಕ್ರಿ. ಶ. 818-982ರ ಅವಧಿಯಲ್ಲಿ ರಾಷ್ಟ್ರಕೂಟರ ರಾಜಧಾನಿಯಗಿತ್ತು. ರಾಷ್ಟ್ರಕೂಟರ ರಾಜ ಒಂದನೇ ಅಮೋಘವರ್ಷನ ಕಾಲದಲ್ಲಿ ರಾಷ್ಟ್ರಕೂಟರ ರಾಜಧಾನಿಯನ್ನು ಇವತ್ತಿನ ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು. ರಾಷ್ಟ್ರಕೂಟರ ಪತನದ ನಂತರವೂ ಅವರ ಉತ್ತರಾಧಿಕಾರಿಗಳಾದ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿ ರಾಜಧಾನಿ ಆಗಿಯೇ ಕ್ರಿ.ಶ. 1050ರವರೆಗೂ ಮಾನ್ಯಖೇಟವು ಮುಂದುವರೆಯಿತು. ಹೀಗೆ ಇದರ ಇತಿಹಾಸ ಎಲ್ಲೆಂದರಲ್ಲಿ ನಿಮಗೆಲ್ಲಾ ಸಿಕ್ಕೆ ಸಿಗುತ್ತದೆ.

ಬೆಳ್ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಕಲ್ಬುರ್ಗಿಯಿಂದ ಬೈಕ್ ಶುರುವಿಟ್ಟುಕೊಂಡು ಗೆಳೆಯನೊಟ್ಟಿಗೆ ಹೊರಟೆ. ಅದೆಂಥಾ ಚಳಿ ಎಂದರೆ ಮೈಗೆ ಮೈಯನ್ನೆ ಚೂಪು ಚಳಿಯು ಚುಚ್ಚಿ ಹಿಚುಕುತಿತ್ತು. ಕಲ್ಬುರ್ಗಿ ವಿಮಾನ ನಿಲ್ದಾಣ ದಾಟಿದಾಗ ಕಾಳಗಿ ಕ್ರಾಸ್ ನ ಗೂಡಂಗಡಿಯೊಂದರಲ್ಲಿ ಚಹಾ ಮಾಡುವವನು ಆಗಷ್ಟೆ ಸಿಲಿಂಡರ್ ಕಿವಿ ತಿರುವಿ ನೀಲಿ ಬೆಂಕಿಗೆ ಸ್ಟೀಲ್ ಪಾತ್ರೆಯೊಂದನ್ನು ಒಡ್ಡಿ ಚಹಾ ಕಾಯುಸುತ್ತಿದ್ದ. ಬೈಕ್ ನಿಲ್ಲಿಸಿ ಚಹಾ ಗುಟುಕಿಸಿ ಸ್ವಲ್ಪ ಹೊತ್ತು ಚಳಿಯಿಂದ ಮುಕ್ತಿ ಪಡೆದು ಮತ್ತೆ ಬೈಕ್ ನಲ್ಲಿ ನಮ್ಮ ಪಯಣ ಶುರುವಿಟ್ಟುಕೊಂಡೆವು. ಬೆಳಗಿನ ಆರಕ್ಕೆ ನಮ್ಮ ಬೈಕ್ ನ ಗಾಲಿಗಳು ಮಳಖೇಡದ ಸೇತುವೆ ಮೇಲೆ ತಿರುಗುತ್ತಿದ್ದವು. ಸೀದಾ ನಮ್ಮ ಪಯಣ ಜೋಡು ನದಿ ಸಂಗಮಗೊಳ್ಳುವ ಸ್ಥಳಕ್ಕೆ ದೌಡಾಯಿಸಿ ಹೋದೆವು. ಆಹಾ ಅದೆಷ್ಟು ಅದ್ಭುತ ದೃಶ್ಯ ಅದು. ಏಕಚಿತ್ತದಲ್ಲಿ ಹರಿವ ನೀರು. ಅದರ ಮೇಲಿನಿಂದ ಏಳುವ ಮಂಜಿನಂತ ಹೊಗೆ. ಕ್ಷಣಕ್ಷಣಕ್ಕೂ ಏರಿ ಬರುವ ನೇಸರನ ಕಿರಣಕ್ಕೆ ಮೈ ತಾಕಿಸಿಕೊಂಡು ನವನವೀನ ವಿನ್ಯಾಸದಲ್ಲಿ ತರಂಗಗಳ ರಿಂಗಣ. ಏಕಚಿತ್ತದಲ್ಲಿ ಹರಿವ ನದಿಯ ಆ ದಡದಲ್ಲಿ ಇಡೀ ಪ್ರಕೃತಿಯ ಪ್ರತಿಬಿಂಬ. ನದಿಯ ನಡುವೆ ಬೆಸ್ತಾರ ತನ್ನ ಬಲೆಯನ್ನು ಬೀಸಿ ಮೀನು ಹಿಡಿಯುವ ದೃಶ್ಯ ತುಂಬಾ ರೋಚಕವಾಗಿ ಕಾಣುತ್ತಿತ್ತು. ಅಷ್ಟೊಂದು ಬೆಳಗಿನ ಜಾವಕ್ಕೆ ಅದರಲ್ಲೂ ಇಂಥ ಚಳಿಯಲ್ಲಿ ಅಬ್ಬಾ! ಫ್ರಿಡ್ಜ್ ಲಿ ಇಟ್ಟಿರುವ ನೀರಿನ ಹಾಗೆ ತಣ್ಣನೆಯ ನೀರಲ್ಲಿ ಅದು ದೊಡ್ಡ ಥರ್ಮಾಕೋಲಿನ ಬೋಟಿನಂತೆ ಆ ಕಡೆ ಈ ಕಡೆ ಏನೂ ಇಲ್ಲ ಒಂದು ಸಮತಟ್ಟಾದ ಮಟ್ಟಸವಾದ ಥರ್ಮಾಕೋಲಿನ ತೆಪ್ಪ ಅದು. ಆತ ಹುಟ್ಟುಗೋಲಿನಿಂದ ವಾಲಿಸಿ ವಾಲಿಸಿ ತನ್ನ ದಿಕ್ಕು ಬದಲಿಸಿ ತಾ ಹಾಕಿದ ಬಲೆಯನ್ನು ಅವಲೋಕಿಸಿ ಮೀನು ಸಂಗ್ರಹಿಸುತ್ತಿದ್ದ. ಇನ್ನೊಂದು ಕಡೆ ದೊಡ್ಡ ಕಟ್ಟಿಗೆ ಉದ್ದನೆಯ ಹಡಗು. ಅದರ ಪ್ರತಿಬಿಂಬವೆ ಬೆಕ್ಕಸ ಬೆರಗಾಗುವಂತೆ ಮಾಡುತ್ತಿತ್ತು. ಅವನದೂ ಸಹ ಮೀನು ಬೇಟೆಯ ಕೆಲಸ. ಎಷ್ಟೊಂದು ಚೆಂದದ ಅನುಭವ ಅನ್ನಿಸುತ್ತಿತ್ತು. ಹೀಗೆ ಇಲ್ಲಿಂದ ಬೈಕ್ ತಿರುವಿಸಿಕೊಂಡು ರಾಷ್ಟ್ರಕೂಟರ ರಾಜಧಾನಿಯ ಕೋಟೆಯ ಹೆಬ್ಬಾಗಿಲ ಕಡೆ ಹೊರಟೆವು.

ಈಗ ಇಡೀ ಮಳಖೇಡ ಊರು ಕೋಟೆಯ ಹೊರಗಿದೆ. ಈ ಊರಿನ ಸಂದಿಗೊಂದಿಗಳನ್ನು ದಾಟಿಕೊಂಡು ಕೋಟೆಯ ಬಾಗಿಲಿಗೆ ಬಂದೆವು. ಸರಿಸುಮಾರು ಸಾವಿರ ವರ್ಷಗಳು ಕಳೆದು ಹೋಗಿದ್ದರು ಒಂದು ಬಾಗಿಲು ತನ್ನ ಪಳಿಯುಳಿಕೆ ಉಳಿಸಿಕೊಂಡು ಕಾಡುತ್ತಲೆ ನೂರಾರು ಕಲ್ಪನಾ ಚಿತ್ರಗಳನ್ನು ನಮ್ಮೊಳಗೆ ಕದ ತೆರೆಸುತ್ತದೆ. ಒಳಗೆ ಹೋದ ತಕ್ಷಣ ಬಲಕ್ಕೆ ಮಸೀದಿ ಇದೆ. ಮತ್ತು ಅಲ್ಲಿ ಶಾಲೆಯೂ ಇದೆ. ಅದು ಈಗಿನವರದು. ಮತ್ತು ಅದು ತಲೆಯಿಂದ ತಲೆಗೆ ಹಸ್ತಾಂತರಗೊಂಡಿದೆ ಎಂದು ಅವರು ಉಲ್ಲೇಖಿಸಿದ್ದು. ಸ್ವಲ್ಪ ಮುಂದೆ ಹೋಗಿ ಬಲಕ್ಕೆ ವಾಲಿದರೆ ಕೋಟೆಯ ಒಳಬಾಗಿಲು ದಾರಿ ಎದುರಾಗುತ್ತದೆ. ಮೊದಲೆಲ್ಲಾ ಪೂರಾ ಇದು ಹಾಳುಗೆಡವಿದ್ದರು. ಸಾವಿರಾರು ವಿನಂತಿಗಳ ನಂತರ ಇದು ಈಗ ಜೀರ್ಣೋದ್ಧಾರದ ಕೈಗೆ ಸಿಕ್ಕು ಮತ್ತೆ ಮೊದಲಿನಂತಲ್ಲದಿದ್ದರೂ ಕಾಪಾಡಿಕೊಂಡು ಹೋಗುವಷ್ಟು ಮುಂದಿನ ತಲೆಮಾರಿಗೆ ತಿಳಿಸಿ ಹೇಳುವಷ್ಟು ಜೀರ್ಣೋದ್ಧಾರ ಆಗುತ್ತಿದೆ. ಎಡಬಲಕ್ಕೆ ಸಣ್ಣ ಸಣ್ಣ ಕಪಾಟುಗಳುಳ್ಳ ವ್ಯಾಪಾರ ವಹಿವಾಟುಗಳಿಗೆ ಅನುಕೂಲ ಸಾನಿಧ್ಯ ಎಂದೆನಿಸುವ ರೀತಿಯಲ್ಲಿ ಕೋಟೆಯ ಕಟ್ಟಡ ಇದೆ. ಅಲ್ಲಿಂದ ನೇರಾ ನೇರ ಒಂದು ಹುಣಸೆ ಮರ. ಅದರ ಹಿಂದುಗಡೆ ದೊಡ್ಡ ಕೋಟೆ. ಅಲ್ಲಿಂದ ಇಡೀ ಮಳಖೇಡ ಅಷ್ಟೆ ಅಲ್ಲ ಸುತ್ತಲಿನ ಪ್ರದೇಶಗಳನ್ನು ನದಿಯನ್ನು ಎಲ್ಲವನ್ನೂ ನೋಡಬಹುದು. ಆದರೆ ಸಧ್ಯಕ್ಕೆ ಇದು ಶಿಥಿಲಗೊಂಡು ಒಳಗೆ ಯಾರೂ ಹೋಗುವಂತೆಯೂ ಇಲ್ಲ. ಹೋಗುವುದಕ್ಕೆ ದಾರಿಯೂ ಇಲ್ಲದಂತೆ ಗಿಡಗಂಟಿ ಕಂಟಿ ಮುಳ್ಳು ಬೇಲಿಗಳು ಬೆಳೆದು ಒಕ್ಕರಿಸಿಕೊಂಡಿದ್ದಾವೆ. ಬಲಕ್ಕೆ ಒಂದು ದಾರಿ ಇದೆ. ಇದು ಕೋಟೆಯ ಶಾಲೆಗೆ ತಲುಪಿಸುವ ರಸ್ತೆ. ಸಾವಿರ ವರ್ಷಗಳಷ್ಟು ಹಳೆಯದಲ್ಲದ ಒಂದಷ್ಟು ಕಟ್ಟಗಳು ನಾವು ಇಲ್ಲಿ ಕಾಣಬಹುದು.

ರಾಷ್ಟ್ರಕೂಟರ ಅವನತಿಯ ನಂತರ ಎಷ್ಟೊ ಮನೆತನದ ಒಡೆತನಕ್ಕೆ ಈ ಕೋಟೆ ಊರು ಒಳಪಟ್ಟು ಆಯಾ ಮನೆತನದ ಸಂಪ್ರದಾಯ ಸಂಸ್ಕಾರ ಸಂಸ್ಕೃತಿ ಹೇರಲ್ಪಟ್ಟು ಹಾಗೆ ಈಗ ಕೊನೆಯಲ್ಲಿ ಪ್ರಸ್ತುತ ಇರುವ ಮುಸ್ಲಿಂ ಮನೆತನದ ಒಡೆತನದಲ್ಲಿ ಕೋಟೆಗೆ ಸಂಬಂಧಿಸಿದ ಒಳಪ್ರದೇಶಗಳು ಇವೆ. ಅವರೂ ಸಹ ಕೋಟೆಯ ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಸಾವಿರ ಸಾವಿರ ವಿನಂತಿಗಳ ತರುವಾಯ ಈಗ ಕೋಟೆಗೆ ಹೊಸ ಹೊಳಪನ್ನು ಕೊಡಲು ಪುರಾತತ್ವ ಇಲಾಖೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಮಂಜೂರು ಮಾಡಿವೆ.

ಕೋಟೆಯ ಶಾಲೆಯ ಪಕ್ಕದಲ್ಲಿದ್ದ ಇಡೀ ಮಳಖೇಡನ್ನು ನಾವು ಕಾಣಬಹುದು. ಕೋಟೆಯ ಮುಖ್ಯ ದ್ವಾರ ಸಹ ಇಲ್ಲಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಇವೆಲ್ಲಾ ನೋಡಿ ಇಳಿದು ಅದೇ ಹುಣಸೆ ಮರಕ್ಕೆ ಬಂದು ಇನ್ನೊಂದು ರಸ್ತೆ ಆಯ್ದುಕೊಂಡು ಹೊರಟರೆ ದೊಡ್ಡಕೋಟೆಯ ಕಟ್ಟಡಕ್ಕಾನಿಸಿಕೊಂಡು ಸಾಗುವ ರಸ್ತೆ ಸೀದಾ ರಾಜನ ಆಸ್ಥಾನಕ್ಕೆ ತಂದು ನಿಲ್ಲಿಸುತ್ತದೆ. ಪೂರಾ ಅಕೇಶಿಯಾದಿಂದ ಆವೃತವಾಗಿರುವ ಈ ಜಾಗೆ ಭಯಂಕರ ಶಿಥಿಲಗೊಂಡಿದೆ. ಯಾವ ಕಲ್ಲು ಮುಟ್ಟಿದರೂ ಸಹ ಬಿದ್ದೆ ಬಿಡುತ್ತದೆ ಎನ್ನುವಷ್ಟು ನಾಜೂಕಾಗಿ ಈಗ ನಿಂತುಕೊಂಡಿದೆ. ದೊಡ್ಡ ಪ್ರಾಂಗಣ ಒಳಗುಹೆಗಳು ರಹಸ್ಯ ದಾರಿಗಳೂ ಎಲ್ಲವೂ ಮೊದಲು ಇದ್ದವು. ಈಗೀಗ ಎಲ್ಲವೂ ಮುಚ್ಚಿಹೋಗಿವೆ. ಇವೆಲ್ಲನ್ನು ನೋಡಿ ಕೆಳಗಿಳಿದು ಮತ್ತೆ ನಡಿಗೆ ಮುಂದುವರೆಸಿದರೆ ಅಲ್ಲಿ ಕುದುರೆ ಕಟ್ಟುವ ಸ್ಥಳ ಅಂತಲೆ ಮೊದಲೆಲ್ಲ ಬಾಯಿಂದ ಬಾಯಿಗೆ ಬಂದ ಮಾತು. ಈಗ ಪೂರ್ತಿ ಜೀರ್ಣೋದ್ಧಾರ ಮಾಡಿ ಕಬ್ಬಿಣದ ಸರಳುಗಳ ಹಾಕಿ ಬೀಗ ಜಡಿದು ಚೆನ್ನಾಗಿ ಇಟ್ಟಿದ್ದಾರೆ.

ಇಲ್ಲಿಂದ ಮುಂದೆ ಕೆಳಗಿಳಿದು ಹೊರಟರೆ ಕೋಟೆ ಆಂಜನೇಯ ದೇವಸ್ಥಾನ ಇದೆ. ತುಂಬಾ ಹಳೆಯದಾದ ಒಂದು ಮೂರ್ತಿ ಇಲ್ಲಿತ್ತು. ಇತ್ತೀಚೆಗಷ್ಟೆ ಕೆಲವೇ ವರ್ಷಗಳ ಹಿಂದೆ ಯಾರೊ ದುಷ್ಕರ್ಮಿಗಳು ಆ ಮೂರ್ತಿಯನ್ನು ರಾತ್ರೊ ರಾತ್ರಿ ಧ್ವಂಸಗೊಳಿಸಿದರು. ಈ ಕೋಟೆ ಆಂಜನೇಯ ದೇವಾಸ್ಥಾನದ ಆ ಕಡೆಗೆ ಕಾಗಿಣಾ ನದಿ ಹರಿಯುತ್ತಾಳೆ. ದಂತಿದುರ್ಗನಿಂದ ಹಿಡಿದು ನಾಲ್ವಡಿ ಇಂದ್ರ ನ ವರೆಗೂ ಆಳಿದ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡಕ್ಕೆ ಕೊಟ್ಟ ಬಳುವಳಿ ದೊಡ್ಡದು. ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬಂದಿದೆ. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವಂತೆ. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.

ಈ ಕೋಟೆಯಿಂದ ಅನತಿ ದೂರದಲ್ಲಿ ಒಂದು ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ಉತ್ತರಾದಿ ಮಠ ಇದೆ. ಇಲ್ಲಿ ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯಕ್ಕೆ 'ನ್ಯಾಯಸುಧೆ' ಎಂಬ ಟೀಕೆ ಬರೆದು ಟೀಕಾಚಾರ್ಯ ಎಂದು ಪ್ರಸಿದ್ಧರಾದ ಶ್ರೀ ಜಯತೀರ್ಥರ ಬೃಂದಾವನವು ಇಲ್ಲಿದೆ.

ಇನ್ನೊಂದು ಜೈನ ಭಟ್ಟಾರಕ ಮಠ. ಇದು ನೇಮಿನಾಥ ದೇವಾಲಯ. ಒಂಭತ್ತನೆ ಶತಮಾನದ್ದು. ಇಲ್ಲಿ 24 ಜೈನ ತೀರ್ಥಂಕರರ ಮೂರ್ತಿಗಳು, ನಂದೀಶ್ವರ ದ್ವೀಪ ಮತ್ತು ಯಕ್ಷಿಯ ಮೂರ್ತಿಗಳು ಇವೆ. ಇದು ಪ್ರಸಿದ್ಧ ಪಂಚಧಾತು ಸ್ಥಳವಾಗಿದೆ. ಇಲ್ಲಿ ಅನೇಕ ಐತಿಹಾಸಿಕ ಚಿತ್ರಣಗಳೂ ಇವೆ. ಒಂಬತ್ತನೇ ಶತಮಾನದಲ್ಲಿ ಇಲ್ಲಿ ಆಚಾರ್ಯ ಜಿನಸೇನ ಮತ್ತು ಶಿಷ್ಯ ಗುಣಭದ್ರರು ಮಹಾಪುರಾಣ(ಆದಿಪುರಾಣ ಮತ್ತು ಉತ್ತರಪುರಾಣ) ವನ್ನು ರಚಿಸಿದರು. ಸೋಮದೇವ ಸೂರಿಯು ಯಶಸ್ತಿಲಕ ಚಂಪೂವನ್ನು ಇಲ್ಲಿಯೇ ರಚಿಸಿದನು. ಮಹಾವೀರಾಚಾರ್ಯನು 'ಗಣಿತಸಾರಸಂಗ್ರಹ' ಎಂಬ ಗಣಿತಗ್ರಂಥವನ್ನು ಇಲ್ಲಿಯೇ ಬರೆದನು. ಪ್ರಸಿದ್ಧ ಅಪಭ್ರಂಶ ಕವಿ ಪುಷ್ಪದಂತನು ಇಲ್ಲಿಯೇ ಬಾಳಿದನು.

ಗುಣಭದ್ರ ಆದಿಪುರಾಣಕಾರರಾದ ಜಿನಸೇನರ ಶಿಷ್ಯ; ಉತ್ತರಪುರಾಣದ ಕರ್ತೃ. ತ್ರಿಷಷ್ಟಿಶಲಾಕಾಪುರುಷರ ಚರಿತ್ರೆಯನ್ನು ವಿಸ್ತಾರವಾಗಿ ವರ್ಣಿಸಬೇಕೆಂಬ ಬಯಕೆಯಿಂದ ಗುರು ಜಿನಸೇನರು ಮಹಾಪುರಾಣವನ್ನು ಆರಂಭಿಸಿದರು. ರಾಷ್ಟ್ರಕೂಟ ಅರಸನಾದ ನೃಪತುಂಗನ (ಪ್ರ.ಶ. 9ನೆಯ ಶತಮಾನ) ಆಶ್ರಯದಲ್ಲಿ. ಆದರೆ 42 ಪರ್ವಗಳ 15000 ಶ್ಲೋಕಗಳನ್ನು ಅವರು ರಚಿಸಿದರೂ ಮರಣಕಾಲಕ್ಕೆ ಮೊದಲನೆಯ ತೀರ್ಥಂಕರನಾದ ಆದಿನಾಥನ ಚರಿತ್ರೆಯೇ ಇನ್ನೂ ಮುಗಿದಿರಲಿಲ್ಲ; ಅಷ್ಟು ಬೃಹತ್ತಾದ ಕಲ್ಪನೆ ಜಿನಸೇನರದು. ಗುರುಗಳು ಆರಂಭಿಸಿದ ಮಹಾಕಾರ್ಯವನ್ನು ಸಮರ್ಥವಾಗಿ ಮುಗಿಸಿದ ಮಹಾಕೀರ್ತಿ ಶಿಷ್ಯ ಗುಣಭದ್ರನದು. 23 ತೀರ್ಥಂಕರರ ಚರಿತ್ರೆಯನ್ನೂ ಜೀವಂಧರನೇ ಮುಂತಾದವರ ವೃತ್ತಾಂತವನ್ನೂ ಶಲಾಕಾಪುರುಷರ ಜೀವನವನ್ನೂ ಸಂಕ್ಷಿಪ್ತವಾದರೂ ಸಮಗ್ರವಾಗಿ ನಿರೂಪಿಸಿ, ಮುಂದಿನ ಜೈನಪುರಾಣಕಾರರೆಲ್ಲರಿಗೂ ಏಕಮಾನ್ಯ ಆಕರಗ್ರಂಥವೆನಿಸಿದ ಉತ್ತರಪುರಾಣವನ್ನು ಈತ ಕರ್ನಾಟಕ ಅಂದರೆ ಕನ್ನಡಭಾಷೆಯಲ್ಲಿಯೇ ಬರೆದು ಮುಗಿಸಿದ. ಮುನಿಸುವ್ರತನ ಚರಿತ್ರೆಯ ಅಂಗವಾಗಿ ಜೈನ ರಾಮಾಯಣದ ಕಥಾಭಾಗವೂ ಇಲ್ಲಿಯೇ ಬರುತ್ತದೆ. ಪ್ರಹೀಣಕಾಲದ ಅಭಿರುಚಿಯನ್ನು ಗಮನಿಸಿ, ಈತ ಅತಿ ವಿಸ್ತಾರಕ್ಕೆ ಹೋಗಿಲ್ಲ. ಆದಿಪುರಾಣದ ಕಡೆಯ 4 ಪರ್ವ (ಮತ್ತು ಮೂರು ಶ್ಲೋಕಗಳು), ಮತ್ತು ಉತ್ತರಪುರಾಣದ ಸುಮಾರು 8,000 ಶ್ಲೋಕಗಳು ಗುಣಭದ್ರನ ರಚನೆಯಾಗಿವೆ.

ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಬುನಾದಿಗಳನ್ನೆ ಹಾಕಿಕೊಟ್ಟ ಕೀರ್ತಿ ರಾಷ್ಟ್ರಕೂಟರಿಗೆ ಸಲ್ಲುತ್ತದೆ. ತರಾಸು ಅವರು ಸಹ ನೃಪತುಂಗ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಹೀಗೆ ಎಲ್ಲವನ್ನು ನೋಡಿ ವಾಪಸ್ಸು ನಮ್ಮ ಗಾಡಿ ಅದೇ ಊರಿನಲ್ಲಿ ಇರುವ ಜೋಡು ನದಿ ಸಂಗಮಗೊಳ್ಳುವ ಸ್ಥಳಕ್ಕೆ ಬಂತು. ಅದೇ ನದಿಯ ತಟದಲ್ಲಿರುವ ಶಾಲೆಯಲ್ಲಿ ನಾನು ಐದು ವರ್ಷಗಳ ಕಾಲ ಓದಿದ್ದೆ. ಹಾಗಾಗಿ ತುಂಬಾ ಹತ್ತಿರವಾದ ಊರು ಸ್ಥಳ ಎಲ್ಲವೂ ನೆನಪಾಗಿ ಉಮ್ಮಳಿಸಿ ಬಂದು ಖುಷಿಯಲ್ಲಿ ಕಣ್ಣು ತುಂಬಿತು. ಇಳಿ ಸಂಜೆಗೆ ನೇಸರ ನದಿಯೊಳಗೆ ಮೈತೊಳೆದುಕೊಂಡ ನೀರೆಲ್ಲಾ ಕೆನ್ನೀರಾಗುವ ಹೊತ್ತಿಗೆ ಒಲ್ಲದ ಮನಸ್ಸಿನಿಂದಲೆ ಬೈಕ್ ರಾಜಧಾನಿ ಮಳಖೇಡ ದಾಟಿ ಕಲ್ಬುರ್ಗಿ ದಾರಿಗೆ ಹೊರಡಲು ಸಿದ್ಧವಾಗಿ ನಿಂತಿತ್ತು.

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಜಟಿಲ ಕಾನನದ ಕುಟಿಲ ಪಥಗಳಲಿ…
ಕಡಲ ಕಿನಾರೆಯ ಸಡಗರದ ಚಿತ್ರಗಳು
ಮೌನಕಣಿವೆಯ ದಟ್ಟ ಕಾನನದೊಳಗೆ...
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...