’ರತ್ನಗಿರಿ ರಹಸ್ಯ’ ಎಂದಾದ ಉರ್ದುವಿನ ಮೊದಲ ಕಥನ ಕಾವ್ಯ ’ಕದಂರಾವ್-ಪದಂರಾವ್’

Date: 16-09-2020

Location: ಬೆಂಗಳೂರು


’ಮಸ್ನವಿ’ (ಕಥನ ಕಾವ್ಯ) ಎಂದು ಕರೆಯಲಾಗುವ ಕಾವ್ಯಪ್ರಕಾರ ಮೂಲತಃ ಪಾರಸಿ ಭಾಷೆಯದು. ಉರ್ದುವಿನ ಮೊದಲ ಪ್ರಕಾಶಿತ ಮಸ್ನವಿಯ ಕವಿ ಕವಿ ನಿಜಾಮಿ ದಖನ್‌ನ ಬೀದರ ಸಮೀಪದ ಫತೇಪೂರದಲ್ಲಿ ಜನಿಸಿದವ. ’ಕದಂರಾವ್‌ -ಪದಂರಾವ್‌’ ಎಂಬ ಶೀರ್ಷಿಕೆಯಲ್ಲಿ ರಚಿತವಾದ ಈ ಕಥನಕಾವ್ಯದ ಮಹತ್ವ ಹಾಗೂ ಅದರ ಸ್ವರೂಪ-ಭಾಷಿಕ ಮಹತ್ವದ ಬಗ್ಗೆ ಚರ್ಚಿಸಿರುವ ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಅವರು ಕನ್ನಡದ ’ರತ್ನಗಿರಿ ರಹಸ್ಯ’ದ ಜೊತೆಗಿನ ನಂಟನ್ನೂ ಕಟ್ಟಿಕೊಟ್ಟಿದ್ದಾರೆ.

ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣ ಮೂರ್ತಿ ಅವರು ಹುಟ್ಟಿದ್ದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ. ಚಿಕ್ಕಂದಿನಿಂದಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಅವರು ವೃತ್ತಿ ರಂಗಭೂಮಿ ಕಂಪನಿಗಳಲ್ಲಿ ಕೆಲಸ ಹುಡುಕಿ ಬೆಂಗಳೂರಿಗೆ ವಲಸೆ ಬಂದರು. `ಭಾಗ್ಯೋದಯ' ಚಿತ್ರದ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶಿಸಿದ ಇವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ಕುಲಕೇಸರಿ ಹಾಗೂ ನಟ ಸಾಮ್ರಾಟ ಎನ್ನುವ ಬಿರುದು ಪಡೆದ ಈ ನಟನ ಚಿತ್ರರಂಗದ ಹೆಸರು ಹೇಳದಿದ್ದರೆ ಅನೇಕರಿಗೆ ಅವರ ಪರಿಚಯವಾಗೋದಿಲ್ಲ. ಅವರು ಕುಮಾರ ತ್ರಯರಲ್ಲಿ ಒಬ್ಬರಾದ ಉದಯ ಕುಮಾರ್.

ಒಂದೋ - ಎರಡೋ ಡಬ್ಬಿಂಗ್ ಸಿನಿಮಾ ಮಾಡಿ ಬಹುಭಾಷಾ ತಾರೆ ಆಗೋದು ಈಗಿನ ಕಾಲದಲ್ಲಿ ಬಹು ದೊಡ್ಡ ವಿಷಯ. ಅಂತಹದ್ದರಲ್ಲಿ ಉದಯ ಕುಮಾರ್ ಅವರು 60-70 ರ ದಶಕದಲ್ಲಿ ಪಂಚ ಭಾಷೆಯ ತಾರೆಯಾಗಿದ್ದರು. ಅವರ ಅನೇಕ ಸಿನಿಮಾಗಳು ಹಿಟ್ ಆಗಿದ್ದವು. ಬೆಳ್ಳಿತೆರೆ ಮೇಲೆ ಬೆಳ್ಳಿಹಬ್ಬ ಆಚರಿಸಿಕೊಂಡ ಸಿನಿಮಾಗಳೂ ಅನೇಕ. ಅವರ ಚಿತ್ರಗಳು ಕತೆ ಆಧಾರಿತವಾಗಿರುತ್ತಿದ್ದವು. ಈಗಿನಂತೆ ಹೀರೋಗಿರಿ ಅಥವಾ ನಾಯಕಿಯ ಸೌಂದರ್ಯದ ಮೇಲೆ ಅವುಗಳ ಯಶಸ್ಸು ನಿಂತಿರಲಿಲ್ಲ.

ಅಂಥಾ ಸಿನಿಮಾಗಳಲ್ಲಿ ಒಂದು ರತ್ನಗಿರಿ ರಹಸ್ಯ. ಬುಡುಗೂರು ರಾಮಕೃಷ್ಣಯ್ಯ ಪಂತಲು (ಬಿ.ಆರ್‌. ಪಂತುಲು) ಅವರ ನಿರ್ದೇಶನದ ಈ ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ಏಕ ಕಾಲಕ್ಕೆ ತಯಾರಾಯಿತು. ಕನ್ನಡದಲ್ಲಿ ಉದಯ ಕುಮಾರ್ ಅವರೂ ತಮಿಳಿನಲ್ಲಿ ಶಿವಾಜಿ ಗಣೇಶನ್ ಅವರು ನಾಯಕನ ಪಾತ್ರದಲ್ಲಿ ನಟಿಸಿದ್ದರು. ಎರಡೂ ಸಿನಿಮಾಗಳಲ್ಲಿ ನಾಯಕಿಯಾಗಿ ಜಮುನಾ ಅಭಿನಯಿಸಿದ್ದರು. ಈ ಚಿತ್ರದ `ಅಮರ ಮಧುರ ಪ್ರೇಮ' ಎನ್ನುವ ಹಾಡು ಇಂದಿಗೂ ಪ್ರಸಿದ್ಧ. ಇದೆ ಪದಗಳ, ಇದೆ ರಾಗ- ಧಾಟಿಯ `ಅಮುದೈ ಪೋರಿಯಂ ನಿಳವೆ' ಅನ್ನುವ ಹಾಡು ಕ್ಲಾಸಿಕ್ ತಮಿಳು ಗೀತೆಗಳ ಸಾಲಿನಲ್ಲಿ ನಿಂತಿದೆ.

ಶಾಟ್ ಟೂ ಶಾಟ್ ಸಾಮ್ಯ ಇರುವ ಈ ಎರಡೂ ಸಿನಿಮಾಗಳು ಅಭೂತ ಪೂರ್ವ ಯಶಸ್ಸು ಗಳಿಸಿದವು . ಇಂದಿಗೂ ಈ ಚಿತ್ರಗಳು, ಅವುಗಳ ಕತೆ, ಸಂಗೀತ, ಅಭಿನಯ, ಛಾಯಾಗ್ರಹಣ, ಅರಣ್ಯ ದಲ್ಲಿ ತರಬೇತಿ ಪಡೆದ ವನ್ಯ ಪ್ರಾಣಿಗಳನ್ನು ಬಳಸಿದ ರೀತಿ, ಅವುಗಳ ಮೇಕಿಂಗ್ (ಆ ಕಾಲದಲ್ಲೂ ಮೇಕಿಂಗ್ ಅನ್ನೋದು ಇತ್ತು ಸ್ವಾಮಿ, ಅದಕ್ಕೆ ಚಿತ್ರೀಕರಣ ಶೈಲಿ ಅಂತ ಕರಿತಿದ್ದರು ಅಷ್ಟೇ ), ಇವುಗಳ ಚರ್ಚೆ ಆಗುತ್ತದೆ. ತಮಿಳುನಾಡಿನ ಚಿತ್ರಶಾಲೆ ಗಳಲ್ಲಿ ಫಾಂಟಸೀ ಸಿನಿಮಾಗಳ ವಿಷಯ ಬಂದಾಗ ರತ್ನಾಗಿರಿ- ತಂಗಮಲೆ ಜೋಡು ಸಿನಿಮಾಗಳ ಚರ್ಚೆ ಆಗುತ್ತದೆ. ಅವುಗಳನ್ನು ಹೊಸ ಕಾಲದ ನಟ, ನಿರ್ದೇಶಕ- ಸಾಹಿತಿಗಳಿಗೆ ತೋರಿಸಲಾಗುತ್ತದೆ.

ರತ್ನಗಿರಿ ರಹಸ್ಯ, ರಾಜದುರ್ಗದ ರಹಸ್ಯ, ಮೂರೂವರೆ ವಜ್ರಗಳು ಇವೆಲ್ಲ ನಾವು ಟೆಂಟ್ ಸಿನಿಮಾದಲ್ಲಿ ಒಂದೂ ಕಾಲು ರೂಪಾಯಿ ಟಿಕೆಟ್ ಪಡೆದು ನೋಡಿದ ಚಿತ್ರ ಗಳು. ಅವುಗಳಲ್ಲಿನ ಮಾಯವಿಯಗಳ ಕತೆಗಳು ನನ್ನ ಮಗು ಮನಸ್ಸನ್ನು ಅವರಿಸಿದ್ದವು. ಕನ್ನಡ ಸಿನಿಮಾ ರಂಗದ ಮೈಲುಗಲ್ಲು ಗಳು ಎಂದು ಅನಿಸಿಕೊಂಡ ಅನೇಕ ಚಿತ್ರಗಳನ್ನು ಮಾಡಿದ ಪುಟ್ಟಣ್ಣ ಕಣಗಾಲ್ ಅವರು ಸಹ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಸಿನಿಮಾ ರತ್ನಗಿರಿ ರಹಸ್ಯ. ಇದರ ಕತೆ ತುಂಬ ಸ್ವಾರಸ್ಯ ಕರವಾಗಿದೆ

ಅರಮನೆಗೆ ಬಂದ ಕೊರವಂಜಿಯೊಬ್ಬಳನ್ನು ಯಾಮಾರಿಸಬೇಕು ಎನ್ನುವ ಉದ್ದೇಶದಿಂದ ತುಂಟ ರಾಜಕುಮಾರಿ ನಂದಿನಿ ತನ್ನ ದಾಸಿ ಮಂಗಳೆಗೆ ರಾಜಕುಮಾರಿಯ ವೇಷ ಧರಿಸುವಂತೆ ಒತ್ತಾಯಿಸುತ್ತಾಳೆ. ಇವಳೇ ರಾಜಕುಮಾರಿ. ಇವಳ ಭವಿಷ್ಯ ಹೇಳು ಅಂತ ಕೊರವಂಜಿಯನ್ನು ನಂಬಿಸುತ್ತಾಳೆ. ಈ ಛದ್ಮ ವೇಷದ ಕಲ್ಪನೆ ಇಲ್ಲದ ಕೊರವಂಜಿ, ನಾಳೆ ನೀನು ಒಬ್ಬ ರಾಜಕುಮಾರನನ್ನು ಮದುವೆಯಾಗುತ್ತೀ ಅಂತ ಹೇಳಿ ಹೋಗುತ್ತಾಳೆ. ಇವರು ಆ ಭವಿಷ್ಯ ವಾಣಿಯನ್ನು ಅಪಹಾಸ್ಯ ಮಾಡಿ ನಗುತ್ತಾರೆ. ಪಕ್ಕದ ದೇಶದ ರಾಜಕುಮಾರ ಈ ದೇಶಕ್ಕೆ ಕನ್ಯೆ ನೋಡಲು ಬಂದಿರುತ್ತಾನೆ. ಆದರೆ ರಾಜಕುಮಾರಿಯ ವೇಷದಲ್ಲಿ ಇದ್ದ ದಾಸಿಯನ್ನು ನೋಡಿದ ಆತ ಅವಳನ್ನೇ ಮಾಡುವೆಯಾಗುವುದಾಗಿ ನಿರ್ಧರಿಸಿ ಬಿಡುತ್ತಾನೆ. ಮದುವೆಯ ದಿವಸ ಹಾರ ಬದಲಾಯಿಸುವ ವೇಳೆಗೆ ಅವನಿಗೆ ಸತ್ಯ ಗೊತ್ತಾಗುತ್ತದೆ. ಆದರೂ ತನ್ನ ನಿರ್ಧಾರ ಬದಲಿ ಮಾಡದೇ ಆ ದಾಸಿಯನ್ನೇ ವರಿಸುತ್ತಾನೆ. ಅವಮಾನದಿಂದ ಕುದ್ದು ಹೋದ ರಾಜಕುಮಾರಿ ಹಾಗೆ ತೀರಿಸಿಕೊಳ್ಳುವ ಮಾತಾಡುತ್ತಾಳೆ.

ರಾಜಕುಮಾರ ಚಕ್ರವರ್ತಿಯಾಗಿ ಪಟ್ಟ ಏರುತ್ತಾನೆ. ಅವಮಾನ ಅನುಭವಿಸಿದ ನಂದಿನಿ ಅವನ ಹಿಂದೆ ಒಬ್ಬ ಮಂತ್ರವಾದಿಯನ್ನು ಛೂ ಬಿಡುತ್ತಾಳೆ. ಆತ ತನ್ನ ಮಾತುಗಳಿಂದ ರಾಜನಿಗೆ ಮೋಡಿ ಮಾಡುತ್ತಾನೆ. ಒಂದು ದಿನ ಅವನ ಜೀವವನ್ನು ಒಂದು ಗಿಳಿಯೊಳಗೆ ಹಾಕಿ ತಾನು ರಾಜನ ದೇಹವನ್ನು ಪ್ರವೇಶಿಸಿ ಬಿಡುತ್ತಾನೆ. ಇತ್ತ ಮೊದಲು ದಾಸಿಯಾಗಿ ನಂತರ ರಾಣಿಯಾಗಿದ್ದ ಕನ್ಯೆಯನ್ನು ಅರಮನೆಯಿಂದ ಹೊರಹಾಕಿ ಅವಳನ್ನು ಹುಚ್ಚಿ ಎಂದು ಬಿಂಬಿಸಲಾಗುತ್ತದೆ. ಅವಳ ಮಗನನ್ನು ಅಪಹರಿಸಿ ಅಡವಿಯಲ್ಲಿ ಬಿಡಲಾಗುತ್ತದೆ. ಅವನು ಟಾರ್ಜನ್ ರೀತಿಯಲ್ಲಿ ಪ್ರಾಣಿಗಳ ನಡುವೆ ಬೆಳೆದು ದೊಡ್ಡವನಾಗುತ್ತಾನೆ. ಪ್ರಾಮಾಣಿಕನಾಗಿದ್ದ ಆ ರಾಜ್ಯದ ಮಂತ್ರಿಗೆ ಹೊಸ ರಾಜನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದು ಸಂಶಯ ಬೆಳೆಯುತ್ತದೆ.
ಅಷ್ಟರ ನಡುವೆ ನಂದಿನಿಯ ಮಗಳು ಮಂಜುಳಾಳ ಪ್ರಾಣವನ್ನು ಕಾಡುಮನುಷ್ಯ ವಿಕ್ರಮ ಉಳಿಸುತ್ತಾನೆ. ಅವನ ಮುಗ್ಧತೆಗೆ ಮನ ಸೋತ ಮಂಜುಳಾ ಅವನನ್ನು ಪ್ರೀತಿಸಿ ಗಾಂಧರ್ವ ಶೈಲಿಯಲ್ಲಿ ಮದುವೆ ಮಾಡಿ ಕೊಳ್ಳುತ್ತಾಳೆ. ಈ ನವ ದಂಪತಿಗಳಿಗೆ ರಾಣಿ ಮಂಗಳಾ ಅಚಾನಕ ಆಗಿ ಭೇಟಿ ಆಗುತ್ತಾಳೆ. ಮಂತ್ರಿ, ವಿಕ್ರಮ, ಮಂಜುಳಾ ಎಲ್ಲ ಸೇರಿ ಒಬ್ಬ ಯೋಗಿಯ ಮೊರೆ ಹೋಗುತ್ತಾರೆ. ಅವನ ಮಂತ್ರ ಶಕ್ತಿಯ ಅನುಗ್ರಹದಿಂದ ಮಂತ್ರವಾದಿಯ ಕಣ್ಕಟ್ಟು ಕಳೆಯುತ್ತಾರೆ. ಚಕ್ರವರ್ತಿಯನ್ನು ಮತ್ತೆ ಅವನ ಹಿಂದಿನ ರೂಪಕ್ಕೆ ಯೋಗಿ ಮರಳಿಸಿದರೆ, ಮಂತ್ರಿ ವಿಕ್ರಮನನ್ನು ರಾಜಕುಮಾರ ನೆಂದು ಘೋಷಿಸುತ್ತಾನೆ.

ಈ ಕತೆಯನ್ನು ಬರೆದವರು ಚಿನ್ನಮಲೈ ಲಕ್ಷ್ಮಣನ್ ಹಾಗೂ ಚಿತ್ರಾ ಕೃಷ್ಣಸ್ವಾಮಿ . ಇದನ್ನು ಪಂತಲು ಅವರು ಕನ್ನಡ- ತಮಿಳು ಎರಡೂ ಭಾಷೆಗಳಲ್ಲಿ ನಿರ್ದೇಶಿಸಿದರು. ಇದು 1957ರ ಕತೆ.

*
ಈಗ ಐದು ನೂರು ವರ್ಷ ಹಿಂದಕ್ಕೆ ಹೋಗೋಣ.

ಬೀದರಿನ ಹೊರ ವಲಯದ ಹಳ್ಳಿ ಫತೇಪುರ್. ಬಹಮನಿ ಸುಲ್ತಾನರು ಯುದ್ಧವೊಂದನ್ನು ಗೆದ್ದ ಸ್ಥಳ ಕ್ಕೆ ಫತೇಪುರ್ (ವಿಜಯನಗರ ) ಎಂದು ಹೆಸರಿಟ್ಟಿದ್ದರು. ಆ ಊರಿನಲ್ಲಿ ಹುಟ್ಟಿದವನು ಅಮೀರ್ ಫಕ್ರೆದೀನ ನಿಜಾಮಿ. ಅವನು ವಿಶ್ವ ಖ್ಯಾತಿ ಗಳಿಸಿದ ಸಾಹಿತಿಯಾಗಿ ಬೆಳೆದದ್ದರಿಂದ ಅವನಿಗೆ ಫಕ್ರ ಉಲ್ ಮುಲ್ಕ (`ನಾಡಿನ ಹೆಮ್ಮೆ’) ಎಂಬ ಬಿರುದು ಪಡೆದ. ಅವನ ಅತ್ಯಂತ ಮುಖ್ಯ ಕೊಡುಗೆ ಮಸ್ನವಿ ಪದಂ ರಾವ್ ಕದಂ ರಾವ್. ಇದು ಇಡೀ ವಿಶ್ವದಲ್ಲಿಯೇ ಮೊದಲಿಗೆ ಪ್ರಕಾಶಿತವಾದ ಉರ್ದು ಭಾಷೆಯ ಕೃತಿ. ಮಸನವಿ ಎಂದರೆ ಕಥನ ಕಾವ್ಯ. ಪದಂ ರಾವ್ ಹಾಗೂ ಕದಂ ರಾವ್ ಅವರ ಕತೆ ಹೇಳುವ ಕಥನ ಕಾವ್ಯ.

ಇದನ್ನು 1420 ರ ಸುಮಾರಿಗೆ ಬರೆಯಲಾಗಿದೆ ಅಂತ ಭಾಷಾ ಶಾಸ್ತ್ರಜ್ಞರಾದ ಜಮೀಲ ಜಾಲಿಬಿ, ಮಸೂದ್ ಹುಸೇನ್ ಖಾನ್ ಹಾಗೂ ಇತರರು ಅಂದಾಜು ಮಾಡಿದ್ದಾರೆ. ಎಷ್ಟೋ ಶತಮಾನ ಗಳ ಕಾಲ ಅದರ ಪ್ರತಿ ಕಳೆದು ಹೋಗಿತ್ತು. ಅದನ್ನು ಹೈದರಾಬಾದಿನ ನಿಜಾಮ ಕುಲಿ ಕುತುಬ್ ಷಾ ಅವರ ಕಾಲದಲ್ಲಿ ಪತ್ತೆ ಹಚ್ಚಿ ಮತ್ತೆ ಮುದ್ರಿಸಲಾಯಿತು. ಈ ಮಸ್ನವಿಯಿಂದಾಗಿ ನಿಜಾಮಿಯ, ಬೀದರ್ನ, ಕರ್ನಾಟಕದ, ದಖನ್ ಪ್ರದೇಶದ, ಭಾರತದ ಹೆಸರು ವಿಶ್ವ ಸಾಹಿತ್ಯದಲ್ಲಿ ಅಜರಾಮರ ವಾಗಿದೆ.

ಈ ಕೃತಿಯ ಬಗ್ಗೆ ಯೂರೋಪು, ಅಮೆರಿಕಾ, ಮುಂತಾದ ದೇಶಗಳ ವಿವಿಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಇದನ್ನು ಕನ್ನಡಕ್ಕೆ ಭಾಷಾಂತರ ಮಾಡುತ್ತಿರುವ ಕವಿ-ಲೇಖಕ ರಿಯಾಜ ಅಹ್ಮದ್ ಬೋಡೆ ಅವರು ಅದನ್ನು `ಒಂದು ಪರಿಪೂರ್ಣ ಛಂದೋಬದ್ಧ ಕಥನ ಕಾವ್ಯ' ಎಂದು ಕರೆದಿದ್ದಾರೆ. ಮಸ್ನವಿ ಕೃತಿ ಕೇವಲ ಒಂದು ಸಾಹಿತ್ಯ ಕೃತಿ ಅಲ್ಲ. ಅದು ಅಕೆಡೆಮಿಕ್ ಆಗಿ ಬಹಳ ಮಹತ್ವ ಹೊಂದಿದ್ದು ಅಂತ ಅವರು ಪ್ರತಿಪಾದಿಸುತ್ತಾರೆ. ಕನ್ನಡ, ಮರಾಠಿ, ತಮಿಳುಗಳಂತೆ ಉರ್ದು ಕೂಡ ಒಂದು ಭಾರತೀಯ ಭಾಷೆ ಎಂಬುವುದೂ, ಉರ್ದುವಿನ ವಿಕಾಸದಲ್ಲಿ ದಖ್ಖನ್ನಿನ ಪಾತ್ರ ವಿದೆ ಎನ್ನುವ ಸಿದ್ಧಾಂತಗಳಿಗೆ ಇದು ಪುರಾವೆ ಒದಗಿಸುತ್ತದೆ, ಎನ್ನುವುದು ಬೊಡೆ ಅವರ ವಾದ.
ಪದಂ ರಾವ್ನ ಭಾಷಾಂತರಕಾರರಿಗೆ ಎದುರಾಗುವ ಇನ್ನೊಂದು ಸಮಸ್ಯೆ ಎಂದರೆ ಈ ಮಸ್ನವಿಯಲ್ಲಿ ಹೇರಳವಾಗಿ ಕನ್ನಡ ಹಾಗೂ ಮರಾಠಿ, ಗುಜರಾತಿ, ಸಂಸ್ಕೃತ ಮೂಲದ ಶಬ್ದಗಳು ಇರುವುದು. ಇಲ್ಲಿನ ಸಂಭಾಷಣೆ ಸಹಿತ ದಖನ್ ಭಾಷಾ ಶೈಲಿಯಲ್ಲಿ ಇದೆ.

ಬೋಡೆ ಅವರ ಪ್ರಕಾರ ಕತೆಯ ಸಾರಾಂಶ ಹೀಗೆ ಇದೆ.

`ದಖನ್ ಪ್ರದೇಶದ ಹೀರಾ ನಗರದ ರಾಜಾ ಕದಂ ರಾವ್ . ಅವನ ಮಂತ್ರಿ ಪದಂ ರಾವ್. ಅವರಿಬ್ಬರ ಸ್ನೇಹ ಸಂಬಂಧಗಳ ಸುತ್ತ ಈ ಮಸ್ನವಿಯನ್ನು ಹೆಣೆಯಲಾಗಿದೆ. ಮಾಟ ಮಂತ್ರ ಕಲಿಯಬೇಕೆಂಬ ಆಸೆಯಿಂದ ರಾಜಾ ಒಬ್ಬ ಮಂತ್ರವಾದಿಯನ್ನು ಹುಡುಕಿಸಿ ತರುತ್ತಾನೆ. ಅವನ ಕಣ್ಕಟ್ಟು ವಿದ್ಯೆಗಳಿಂದ ಪ್ರಭಾವಿತನಾಗಿ ಆತನನ್ನೇ ತನ್ನ ಗುರುವಾಗಿ ನೇಮಿಸಿಕೊಳ್ಳುತ್ತಾನೆ.

ಆದರೆ ಆ ಮಂತ್ರವಾದಿ ಮಾಯದಿಂದ ರಾಜನನ್ನು ಗಿಳಿಯನ್ನಾಗಿಸಿ ತಾನು ರಾಜನ ರೂಪ ಪಡೆದು ರಾಜ್ಯಭಾರ ನಡೆಸತೊಡಗುತ್ತಾನೆ. ಮಂತ್ರಿಗೆ ಈ ಮಾಯಾಜಾಲದ ಅರಿವು ಆಗುತ್ತದೆ. ತನ್ನ ಸಾಹಸ ಹಾಗೂ ಚಾಣಾಕ್ಷತನದಿಂದ ಆತ ರಾಜನ ಪ್ರಾಣ ಉಳಿಸುತ್ತಾನೆ, ಅವನು ಮೊದಲಿನ ರೂಪ ಧರಿಸಲು ಸಹಾಯ ಮಾಡುತ್ತಾನೆ.

ಮೂಲ ಪುಸ್ತಕದ ಕೆಲವು ಪುಟಗಳು ಜೀರ್ಣವಾಗಿ ಹೋಗಿ ಓದಲು ಅಸಾಧ್ಯವಾಗಿದೆ. ಹೀಗಾಗಿ ಕತೆಯ ನಡುವೆ ಅಲ್ಲಲ್ಲಿ ಅಪೂರ್ಣವಾಗುತ್ತದೆ. ಅರೆ , ಈ ಕತೆಯನ್ನು ಈಗಷ್ಟೇ ಓದಿದೆವೆಲ್ಲ ಅಂತ ನಿಮಗೆ ಅನ್ನಿಸುತ್ತಿಲ್ಲವೇ? ಚಿಕ್ಕಂದಿನಲ್ಲಿ ನೋಡಿದ ರತ್ನಗಿರಿ ರಹಸ್ಯ.

ಇದನ್ನು ನೋಡಿದರೆ ನಮಗೆ `ರತ್ನಗಿರಿ ರಹಸ್ಯ' ಯ ಕತೆ ನೆನಪಾಗುವುದು ಸಹಜ. ಐದು ನೂರು ವರ್ಷ ವ್ಯತ್ಯಾಸ ಇರುವ ಈ ಎರಡು ಕೃತಿ ಗಳ ನಡುವಿನ ಸಾಮ್ಯ ಕುತೂಹಲ ಹುಟ್ಟಿಸುತ್ತದೆ. ಅದು ಯಾಕಿರಬಹುದು? ಯಾವ ಸ್ಪೂರ್ತಿ ರೂಪಿಣಿ ಸರಸ್ವತಿ ಚಿನ್ನಮಲೈ ಹಾಗೂ ನಿಜಾಮಿ ಅವರು ಇಬ್ಬರಿಗೂ ಏಕರೂಪದ ಆಶೀರ್ವಾದ ಮಾಡಿರಬಹುದು?

ಅದು ಇರಲಿ ಈ ಕೆಳಗಿನ ಸಾಮ್ಯಗಳಿಗೆ ಏನನ್ನೋಣ ?

1. ಅಕ್ಷರ ಕಲಿಯಲಾರದವನಿಗೆ ಉರ್ದು ಭಾಷೆಯಲ್ಲಿ ಅಂಗೂಠ ಛಾಪ ಅಂತಾರೆ. ಪರ್ಷಿಯನ್ ಭಾಷೆಯಲ್ಲಿ ಹೆಬ್ಬರಳಿಗೆ ಅಂಗೂಠ ಅಂತ ಕರಿತಾರೆ. ಇದು ಸಂಸ್ಕೃತ ಪದವಲ್ಲವೇ ?

2. ಮೊಹರಂ ಹಬ್ಬದ ದಿನ ಮಾಡುವ ಸಿಹಿಗೆ ಸುರುಕುಂಬಾ ಅಂತಾರೆ. ಹಾಲು ಅಟ್ಟಿಸಿ ಮಾಡುವ ಸಿಹಿಗೆ ಖೀರು ಅಂತೇವಿ. ಇದು ಕ್ಷೀರ ಅನ್ನುವ ಪರ್ಷಿಯನ್ ಭಾಷೆಯ ಪದ. ಆದರೆ ಇದೇ ಪದವನ್ನು ನಾವು ಸಂಸ್ಕೃತದಲ್ಲಿ ಬಳಸುವುದಿಲ್ಲವೇ?

3. ಮಧ್ಯಯುಗದಲ್ಲಿ ದಖನ್ ಪ್ರದೇಶವನ್ನು ಪುನರ್ ನಿರ್ಮಾಣ ಮಾಡಿ ವಿಶ್ವ ದ ಸಾಂಸ್ಕೃತಿಕ ಇತಿಹಾಸದಲ್ಲಿ ಭಾರತ ಬೆಳಗುವಂತೆ ಮಾಡಿದವನು ಖಾಜಾ ಇಮಾದುದ್ದಿನ ಗಿಲಾನಿ. ವಿಶ್ವ ಖ್ಯಾತಿ ಪಡೆದ ಬಹು ಶಿಸ್ತೀಯ ವಿಶ್ವವಿದ್ಯಾಲಯ (ಮದರಸಾ)ವೊಂದನ್ನು ಬೀದರಿನಲ್ಲಿ ನಿರ್ಮಿಸಿ, ವೈಜ್ಞಾನಿಕ ಆಡಳಿತ ವ್ಯವಸ್ಥೆಯೊಂದನ್ನು ಜಾರಿಗೊಳಿಸಿ, ಕೃಷಿ ಸಂಶೋಧನೆಗೆ ಆದ್ಯತೆ ಕೊಟ್ಟು, ಕುಶಲ ಕೈಗಾರಿಕೆಗಳನ್ನು ಬೆಳೆಸಿದ ಈ ಬಹಮನಿ ಪ್ರಧಾನಿ ಮೆಹಮೂದ ಗಾವಾನ ಎಂದೇ ಖ್ಯಾತಿ ಪಡೆದ.
ದನ- ಕರು, ಕುದುರೆಗಳನ್ನು ಮಾರಾಟ ಮಾಡುತ್ತ ಇರಾನ್ ದೇಶದ ಗಿಲಾನ್ ಪ್ರಾಂತ ಮೂಲದ ಈ ಮಧ್ಯವಯಸ್ಕ. ಬೀದರ್ನ ಸೂಫಿ ಸಂತ ನಿಯಾಮತ ಉಲ್ಲಾ ಕಿರಮಾನಿ ಅವರ ದರ್ಶನಕ್ಕೆಂದು ಬೀದರ್ ಗೆ ಬಂದವನು. ಅಲ್ಲಿಯೇ ಉಳಿದ. ರಾಜನ ಆಸ್ಥಾನದಲ್ಲಿ ಲೆಕ್ಕ ಬರೆಯುವುದಕ್ಕೆ ಎಂದು ಸೇರಿಕೊಂಡ ಇಮಾದುದ್ದಿನ ಬಹಮನಿ ರಾಜ್ಯದ ಪ್ರಧಾನಿಯಾಗಿ ಬೆಳೆದು ಅಲ್ಲಿನ ಮೂವರು ಅರಸರು ಬಾಲ್ಯಾವಸ್ಥೆ ಯಲ್ಲಿ ಪಟ್ಟಕ್ಕೆ ಬಂದಾಗ ಅವರನ್ನು ಪಿತೃ ಸಮಾನನಾಗಿ ನೋಡಿಕೊಂಡ.

ಇವನು ದನ- ಕರು ಮಾರಾಟ ಮಾಡಿಕೊಂಡು ಬಂದಿದ್ದ ಎನ್ನುವ ಕಾರಣಕ್ಕೆ ಅವನಿಗೆ ಮೆಹಮೂದ ಗವಾನ (ಜಾನುವಾರುಗಳ ವರ್ತಕ ಮೆಹಮೂದ ) ಎನ್ನುವ ಅಡ್ಡ ಹೆಸರು ಬಂತು ಎನ್ನುತ್ತಾರೆ ಸ್ಲೊವಾಕಿಯಾ ದೇಶದಲ್ಲಿ ನೆಲೆಸಿರುವ ಏಶಿಯ ಅಧ್ಯಯನ ಪೀಠದ ತಜ್ಞ ಪ್ರೊ. ದುಶಾನ ಡೀಕ. `ಗೌ' ಎನ್ನುವ ಪರ್ಷಿಯನ್ ಭಾಷೆಯ ಪದಕ್ಕೆ ಜಾನುವಾರು ಎನ್ನುವ ಅರ್ಥವಿದೆ. ಗವಾನ ಎನ್ನುವುದು ವಿಭಕ್ತಿ ಪ್ರತ್ಯಯ ಎನ್ನುವುದು ಅವರ ವಾದ.

ಗೌ ಎನ್ನುವುದು ಸಂಸ್ಕೃತದ ಅಕ್ಷರ ರೂಪಿ ಪದವಲ್ಲವೇ?

ಮೇಲು ನೋಟಕ್ಕೆ ಎಷ್ಟೊಂದು ವ್ಯತ್ಯಾಸ ಗಳಿವೆ ಎಂದು ತೋರುವ ಈ ಎರಡು ಭಾಷೆ ಗಳಲ್ಲಿ ಇಷ್ಟೊಂದು ಸಾಮ್ಯಗಳು ಎಲ್ಲಿಂದ ಬಂದವು?

ಸಾವಿರಾರು ವರ್ಷಗಳ ಹಿಂದೆ ಸಂಸ್ಕೃತ ಹುಟ್ಟಿದ್ದು ಅಖಂಡ ಭಾರತದ ಸರಹದ್ದಿಗೆ ಸಮೀಪವಾದ ಉಜ್ಬೇಕಿಸ್ತಾನ – ಕಜಾಕಿಸ್ತಾನ ಕಣಿವೆಯ ಪ್ರದೇಶದಲ್ಲಿ ಅನ್ನುವ ಒಂದು ಥಿಯರಿ ಇದೆಯಲ್ಲ, ಅದು ನಿಜವೇ ಮತ್ತೆ? ಕೆಲವು ಲೇಖಕರು ಹೇಳುವಂತೆ ಸಂಸ್ಕೃತ- ಪರ್ಷಿಯನ್ ಭಾಷೆಗಳು ಸಹೋದರ ಭಾಷೆಗಳೆ?

ಈ ಪ್ರಶ್ನೆಗಳು ನಮ್ಮನ್ನು ಗುಂಗಿ ಹುಳದಂತೆ ಮುತ್ತುವುದು ಸಹಜ. ಇದಕ್ಕೆ ಮುಂದೆ ಒಂದು ದಿನ ಸಮರ್ಪಕ ಉತ್ತರಗಳು ದೊರೆಯಬಹುದು.
ಸತ್ವಯುತ ಸಂಶೋಧನೆಯಿಂದ ದೊರಕಬಹುದಾದ ಉತ್ತರಗಳು, ತಿಳಿದವರು ಇತರ ತಿಳಿದವರೊಡನೆ ಚರ್ಚಿಸಿ, ಅಕೆಡೆಮಿಕ ಆದ ಸಿದ್ಧಾಂತಗಳು ಸ್ಥಾಪಿತವಾಗಬಹುದು. ಆ ಪ್ರಶ್ನೆಗಳನ್ನು ಅಕೆಡೆಮಿಕ್ ಮಂದಿಗೆ ಬಿಡೋಣ.

ಸಾಮಾನ್ಯರಿಗೆ ಸಾಮಾನ್ಯ ಜ್ಞಾನದ ಪರಿಹಾರಗಳು ಸಾಕು.

ಈ ಎಲ್ಲ ವಿಷಯಗಳನ್ನು ಶಾಂತ ಮನಸ್ಸಿ ನಿಂದ ನೋಡಿದಾಗ ನಮ್ಮ ಸಾಂಸ್ಕೃತಿಕ ಏಕತೆ ಬಗ್ಗೆ ನಮಗೆ ನಿಧಾನವಾಗಿ ಅರಿವಾಗುತ್ತದೆ. ಬೇರು ಮಟ್ಟದಲ್ಲಿ ನಾವೆಲ್ಲ ಒಂದೇ ಎನ್ನುವ ಸತ್ಯ ಗೋಚರಿಸುತ್ತದೆ. ಆದರೆ ಆ ಶಾಂತಿಯ ಬೆನ್ನಿಗೇ ಮತ್ತಿಷ್ಟೂ ಪ್ರಶ್ನೆಗಳು ಹುಟ್ಟುತ್ತವೆ. ಆ ಐದು ನೂರು ವರ್ಷಗಳುದ್ದಕ್ಕೂ ಸಾಧ್ಯವಾಗಿದ್ದು ಈ ಐವತ್ತು ವರ್ಷ ಗಳಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಅಷ್ಟು ದೊಡ್ಡ ವ್ಯತ್ಯಾಸಗಳನ್ನು ಇಟ್ಟುಕೊಂಡು ಅಷ್ಟು ಸಹನೆಯಿಂದ ಇದ್ದವರು ಈಗ ಸಣ್ಣ ಸಣ್ಣ ವಿಷಯಗಳಿಗೆ ಯಾಕೆ ಅಷ್ಟು ಅಸಹನೆಯಿಂದ ವರ್ತಿಸುತ್ತಿದ್ದೇವೆ? ಯಾಕೆ ಒಬ್ಬರನ್ನೊಬ್ಬರು ಸಂದೇಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದೇವೆ?
ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡಲು ಹೊರಗಿನವರಿಂದ ಸಾಧ್ಯವಿಲ್ಲ. ನಮ್ಮ ಅಂತರಾತ್ಮ ಮಾತ್ರ ನಮ್ಮ ಈ ದುಗುಡದಿಂದ ನಮ್ಮನ್ನು ದೂರವಾಗಿಸಬಲ್ಲದು ಅಂತ ಅನ್ನಿಸುತ್ತದೆ.
---

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...