ರವೀಂದ್ರನಾಥ್ ಠ್ಯಾಗೂರ್ ನಿರ್ದೇಶಿಸಿದ ಸಿನಿಮಾ!

Date: 28-02-2021

Location: .


ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದ ನಿರ್ದೇಶಕ ಪಿ. ಶೇಷಾದ್ರಿ ಅವರು, ಸಿನಿಮಾದಿಂದ ಸಾಹಿತ್ಯಕ್ಕೆ ಅನುಕೂಲವಾಗದೇ ಇರಬಹುದು ಆದರೆ ಸಾಹಿತ್ಯದ ನೆರವಿಲ್ಲದೆ ಸಿನಿಮಾಗೆ ಅಸ್ತಿತ್ವವಿಲ್ಲ ಎನ್ನುತ್ತಾರೆ. ಚಲನಚಿತ್ರರಂಗದ ಬೆಳವಣಿಗೆಯುದ್ದಕ್ಕೂ ಹಲವು ಪ್ರಾಕಾರಗಳ ಸಾಹಿತ್ಯವನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿ ಮೌಲ್ಯವನ್ನು ಹೆಚ್ಚಿಸಿಕೊಂಡ ಕುರಿತು ಅವರು ತಮ್ಮ ‘ಅಕ್ಕರದ ತೆರೆ’ ಅಂಕಣದಲ್ಲಿ ಚರ್ಚಿಸಿದ್ದಾರೆ.

ಅದೇನೇ ಇರಲಿ, ತಾನು ರಚಿಸಿದ ಕೃತಿ ಮೂಲ ರೂಪದಲ್ಲಿಯೇ ಉಳಿದಿರಬೇಕು,ಅದು ಎಲ್ಲಿಗೂ ರೂಪಾಂತರವಾಗುವುದು ಬೇಡ ಅನ್ನುವುದು ಆಯಾ ಲೇಖಕನ ಮನೋಧರ್ಮಕ್ಕೆ ಬಿಟ್ಟ ವಿಚಾರ. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಆದರೆ ಈ ನಿರ್ಧಾರದಿಂದ ನಷ್ಟವಾಗುವುದು ಮಾತ್ರ ಸಹೃದಯನಿಗೆ ಮತ್ತು ಕಲಾಕ್ಷೇತ್ರಕ್ಕೆ.

ಹಾಗೆಯೇ ಒಂದು ಕೃತಿಯನ್ನು ಇನ್ನೊಂದು ಮಾಧ್ಯಮಕ್ಕೆ ತರುವುದರ ಮೂಲಕ ತಾನು ಅದರ ಮೌಲ್ಯವನ್ನು ಹೆಚ್ಚಿಸುತ್ತೇನೆ ಎಂದು ಯಾರೂ ಭಾವಿಸುವುದಿಲ್ಲ. ಇದರಲ್ಲಿ ಉಪಕಾರದ ಮಾತೆಲ್ಲಿ ಬಂತು? ಪರಸ್ಪರ ಕಲಾ ವಿನಿಮಯ ಅಷ್ಟೇ. ಒಂದು ಉತ್ತಮ ಕೃತಿ ಒಂದು ಪ್ರಾಕಾರದಿಂದ ಇನ್ನೊಂದು ಪ್ರಾಕಾರಕ್ಕೆ ರೂಪಾಂತರಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುವುದು ಮಾಧ್ಯಮಗಳ ವಿಸ್ತರಣೆಯ ದೃಷ್ಟಿಯಿಂದ ಒಳಿತಲ್ಲವೇನೋ.

ಇರಲಿ.

ಯಾವುದೇ ಒಂದು ಬರಹ ಮೊಟ್ಟ ಮೊದಲಿಗೆ ರೂಪ ತಳೆಯುವುದು ಸಾಹಿತ್ಯದ ಒಂದು ಪ್ರಾಕಾರವಾಗಿ. ಅದು ಕತೆ, ಕಾದಂಬರಿ, ಕಾವ್ಯ ಏನೇ ಆಗಿರಲಿ ಅದನ್ನು ದೃಶ್ಯಮಾಧ್ಯಮಕ್ಕೆ ಎಂದು ರಚಿಸಲಾಗಿರುವುದಿಲ್ಲ. ಆದರೆ ನಮ್ಮ ಪರಂಪರೆಯಲ್ಲಿ ಕೊಳ್-ಕೊಡುಗೆ ಎಂಬುದು ನಿರಂತರವಾಗಿ ನಡೆದು ಬಂದಿರುವ ಪ್ರಕ್ರಿಯೆ. ನಾವು ಆಡುವ ಭಾಷೆಯನ್ನೇ ಗಮನಿಸಿದರೆ ಯಾವುದು ಮೂಲವಾದದ್ದು? ಸಂಸ್ಕೃತವೇ? ಕನ್ನಡವೇ? ತಮಿಳೇ? ಯಾವುದೂ ಅಲ್ಲ. ಸಾವಿರಾರು ವರ್ಷಗಳಿಂದ ದ್ರಾವಿಡ, ಸಂಸ್ಕೃತ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆರೆತು ಬೆಳೆದುಕೊಂಡು ಬಂದಿವೆ. ಈಗಲೂ ನಾವು ಬಳಸುವ ಎಷ್ಟೋ ಪದಗಳ ಮೂಲ ಪಾರ್ಸಿ ಎಂಬುದು ಕೂಡ ಮರೆತುಹೋಗುವಷ್ಟು ಒಳಸೇರಿಹೋಗಿವೆ.

ಹೀಗೆಯೇ, ಉದ್ದಕ್ಕೂ ನೋಡುತ್ತಾ ಬಂದರೆ ಸಾಹಿತ್ಯ ಮತ್ತು ದೃಶ್ಯಮಾಧ್ಯಮ ಒಂದಕ್ಕೊಂದು ಪೂರಕವಾಗಿ ಬೆಳೆದುಕೊಂಡು ಬಂದಿವೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಕೃತಿಯೊಂದು ರೂಪಾಂತರವಾದಾಗ ಅದರಲ್ಲಿ ಬದಲಾವಣೆ ಕೂಡ ಅಷ್ಟೇ ಸಹಜ. ಅದು ಅನುವಾದವಲ್ಲ; ರೂಪಾಂತರ. ಅನುವಾದಕ್ಕೂ ರೂಪಾಂತರಕ್ಕೂ ವ್ಯತ್ಯಾಸವಿದೆ. ಅಲ್ಲದೆ ಬಹುಮುಖ್ಯವಾಗಿ ದೃಶ್ಯಮಾಧ್ಯಮ ಮತ್ತು ಸಾಹಿತ್ಯ ಎರಡರ ಭಾಷೆ ಕೂಡ ಬೇರೆ ಬೇರೆ. ಸಾಹಿತ್ಯ ಮಾತಾಡುವುದು ಅಕ್ಷರಗಳಿಂದಾದರೆ ಚಲನಚಿತ್ರ ಚಿತ್ರಿಕೆಗಳಿಂದ. ಇಲ್ಲಿ ಇನ್ನೂ ಒಂದು ಮಾತನ್ನು ಹೇಳಬೇಕಿದೆ. ಸಿನಿಮಾದಿಂದ ಸಾಹಿತ್ಯಕ್ಕೆ ಅನುಕೂಲವಾಗದೇ ಇರಬಹುದು ಆದರೆ ಸಾಹಿತ್ಯದ ನೆರವಿಲ್ಲದೆ ಸಿನಿಮಾಗೆ ಅಸ್ತಿತ್ವವಿಲ್ಲ.ಚಲನಚಿತ್ರರಂಗದ ಬೆಳವಣಿಗೆಯ ಉದ್ದಕ್ಕೂ ನಾಟಕ, ಕತೆ, ಕಾದಂಬರಿ ಮತ್ತು ಕಾವ್ಯಗಳನ್ನು ಆಧರಿಸಿದ ಕೃತಿಗಳು ದೃಶ್ಯಮಾಧ್ಯಮಕ್ಕೆ ಒಂದು ಮೌಲ್ಯವನ್ನು ತಂದುಕೊಟ್ಟಿವೆ.

ಪ್ರಕಟಿತ ಕಥೆಯನ್ನು ಆಧರಿಸಿದ ಜಗತ್ತಿನ ಮೊದಲ ಚಿತ್ರ (ದಿ ಗ್ರೇಟ್ ಟ್ರೈನ್ ರಾಬರಿ) ನಿರ್ಮಾಣವಾದದ್ದು ನೂರಾ ಹದಿನೆಂಟು ವರ್ಷಗಳ ಹಿಂದೆ, 1903ರಲ್ಲಿ. ಆ ಚಿತ್ರವು ಅಂದು ಗಳಿಸಿದ ಯಶಸ್ಸು ಸಿನಿಮಾಕ್ಕಿರುವ ಒಂದು ಬಹುಮುಖ್ಯ ಶಕ್ತಿಯನ್ನು ಅಂದೇ ದಾಖಲಿಸಿತು.

ಚಲನಚಿತ್ರ ಹುಟ್ಟಿದಂದಿನಿಂದ ಇಲ್ಲಿಯ ತನಕ ಜಗತ್ತಿನ ನೂರಾರು ಭಾಷೆಗಳಲ್ಲಿನ ಸಾವಿರಾರು ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿವೆ. ಪುರಾಣಗಳು, ಜಾನಪದ ಕಥೆಗಳು, ಐತಿಹಾಸಿಕ ಘಟನೆಗಳು ಚಲನಚಿತ್ರರೂಪವನ್ನು ಪಡೆದಿವೆ. ಭಾಷೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವುದರಲ್ಲಿ ಮತ್ತು ಅದನ್ನು ಹೆಚ್ಚು ಜನರಿಗೆ ತಲುಪಿಸುವುದರಲ್ಲಿ ಚಲನಚಿತ್ರವು ಯಶಸ್ವಿ ವಾಹಕವಾಗಿ ಕೆಲಸ ಮಾಡುತ್ತಿದೆ.

ಕನ್ನಡ ಚಿತ್ರಗಳ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿಯವರೆಗೆ ಅಂದರೆ ಈ ಎಂಬತ್ತಾರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರಗಳ ಸಂಖ್ಯೆ ಸರಿ ಸುಮಾರು ಮೂರು ಸಾವಿರ. ಇದರಲ್ಲಿ ಕನಿಷ್ಠ ನಾಲ್ಕುನೂರು ಚಿತ್ರಗಳು ಸಾಹಿತ್ಯಲೋಕದ ಪ್ರಕಾರಗಳಾದ ಕಥೆ/ಕಾವ್ಯ/ನಾಟಕ/ಕಾದಂಬರಿಗಳನ್ನು ಆಧರಿಸಿವೆ ಎಂದು ಹೇಳಬಹುದು. ಹಾಗಾಗಿ ‘ಅಕ್ಷರಮಾಧ್ಯಮ’ದ ಪ್ರಭಾವ ‘ದೃಶ್ಯಮಾಧ್ಯಮ’ದ ಮೇಲೆ ನಿರಂತರವಾಗಿ ಇದ್ದೇ ಇದೆ.

ಕನ್ನಡದ ಪೂರ್ಣಪ್ರಮಾಣದ ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಗೊಂಡದ್ದು 1921ರಲ್ಲಿ, ‘ನಿರುಪಮಾ’ ಹೆಸರಿನಲ್ಲಿ. ಇದು ನಾಟಕ ಕೃತಿ ಆಧರಿಸಿದ ಮೂಕಿಚಿತ್ರ. ಆನಂತರ, ಕೈಲಾಸಂರ ‘ವಸಂತಸೇನಾ’ (1929), ಶಿವರಾಮಕಾರಂತರ ‘ಭೂತರಾಜ್ಯ’ (1929) ಬಂದವು.

ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ‘ಧರ್ಮದೇವತೆ’ಯನ್ನು ಆಧರಿಸಿದ ಚಲನಚಿತ್ರ ‘ಕರುಣೆಯೇ ಕುಟುಂಬದ ಕಣ್ಣು’ (1962) ತಾಂತ್ರಿಕವಾಗಿ ಮೊದಲ ಸಾಮಾಜಿಕ ಕಾದಂಬರಿ ಆಧಾರಿತ ಚಿತ್ರ ಎಂದು ಹೇಳಬಹುದು.ನಂತರ ಇದೇ ಲೇಖಕರ ‘ಕುಲವಧು’, ಅನಕೃ ಅವರ ‘ಸಂಧ್ಯಾರಾಗ ಹಾಗೂ ತರಾಸು ಅವರ ‘ಚಂದವಳ್ಳಿಯ ತೋಟ’ ಈ ಪರಂಪರೆಯನ್ನು ಮುಂದುವರಿಸಿದವು. ಒಂದು ದಾಖಲೆಯ ಪ್ರಕಾರ ಇಲ್ಲಿಯವರೆಗೆ ತರಾಸು ಅವರ ಹತ್ತೊಂಬತ್ತು ಕೃತಿಗಳು ಸಿನಿಮಾಗಳಾಗಿವೆ. ಅವರು 1952 ರಲ್ಲಿ ರಚಿಸಿದ ‘ಹಂಸಗೀತೆ ಕಾದಂಬರಿಯನ್ನು ಆಧರಿಸಿ ಹಿಂದಿಯಲ್ಲಿ ‘ಬಸಂತ್ ಬಹಾರ್ (1956) ಮತ್ತು ಕನ್ನಡದಲ್ಲಿ ‘ಹಂಸಗೀತೆ (1975) ಸಿನಿಮಾಗಳು ಬಂದಿರುವುದು ಒಂದು ವಿಶೇಷ. ನಾನು ‘ಕತೆಗಾರ ಧಾರಾವಾಹಿಗಾಗಿ ತರಾಸು ಅವರ ‘ಒಂದು ತುಂಡು ಸುದ್ದಿ ಎಂಬ ಸಣ್ಣ ಕತೆಯನ್ನು ಆಧರಿಸಿ ಒಂದು ಕಿರುಚಿತ್ರ ಕೂಡ ಮಾಡಿದ್ದೆ.

ಕನ್ನಡದಲ್ಲಿ ತರಾಸು ಅವರನ್ನು ಬಿಟ್ಟರೆ, ಭಾರತದಲ್ಲಿ ಅತಿ ಹೆಚ್ಚು ಸಿನಿಮಾಗಳು ತಯಾರಾಗಿರುವುದು ರವೀಂದ್ರನಾಥ ಠ್ಯಾಗೂರ್ ಅವರ ಕೃತಿಗಳಿಂದ.ಬಂಗಾಲಿ, ಹಿಂದಿ ಭಾಷೆಯಲ್ಲಷ್ಟೇ ಅಲ್ಲ ತಮಿಳು, ತೆಲುಗು ಭಾಷೆಗಳಲ್ಲೂ ಕೂಡ ಸಿನಿಮಾಗಳು ಬಂದಿವೆ. ಇಲ್ಲಿಯವರೆಗೆ ಲೆಕ್ಕ ಹಾಕಿದರೆ ಈ ಸಿನಿಮಾಗಳ ಸಂಖ್ಯೆ ಮೂವತ್ತು ಮೀರುತ್ತದೆ!

ಮತ್ತೊಂದು ವಿಶೇಷವೆಂದರೆ ಸ್ವತಃ ರವೀಂದ್ರನಾಥ್ ಠ್ಯಾಗೂರ್ ಅವರು ಒಂದು ಸಿನಿಮಾವನ್ನು ನಿರ್ದೇಶಿಸಿದ ವಿಚಾರ. ಬರಿಯ ಚಿತ್ರನಿರ್ದೇಶನವಷ್ಟೇ ಅಲ್ಲ, ಅವರು ಈ ಚಿತ್ರದಲ್ಲಿ ಪ್ರಮುಖಪಾತ್ರವೊಂದರಲ್ಲಿ ಅಭಿನಯಿಸಿದ್ದಲ್ಲದೆ ಸಂಗೀತವನ್ನು ಕೂಡ ನೀಡಿದ್ದರು.

ಇದು ಜರುಗಿದ್ದು 1931 ರಲ್ಲಿ. ‘ನೋಟಿರ್ ಪೂಜಾ ಎಂಬುದು ಠ್ಯಾಗೂರ್ ರಚಿಸಿದ್ದ ನೃತ್ಯ ಪ್ರಧಾನ ನಾಟಕ. ಅವರ ಎಪ್ಪತ್ತನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತವಾಗಿ ಅದನ್ನು ಆಗಿನ ಕೊಲ್ಕತ್ತಾದಲ್ಲಿ ಪ್ರದರ್ಶಿಸಲಾಗಿತ್ತು. ಇದನ್ನು ಕಂಡು ಉತ್ತೇಜಿತರಾಗಿದ್ದ ಬಿ.ಸಿ.ಸರ್ಕಾರ್ ಎಂಬ ನಿರ್ಮಾಪಕರು ಇದೇ ನಾಟಕವನ್ನು ಚಲನಚಿತ್ರವಾಗಿ ತಯಾರಿಸಲು ಇಚ್ಛಿಸಿದ್ದಲ್ಲದೆ ಸ್ವತಃ ಠ್ಯಾಗೂರ್ ಅವರನ್ನು ನಿರ್ದೇಶಿಸಲು ಆಹ್ವಾನಿಸಿದರು.

ಸಿನಿಮಾದ ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬದಿಗಿರಿಸಿ ನಾಟಕದ ಮಾದರಿಯಲ್ಲೇ ಇದನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ಸುಮಾರು ಎರಡು ಗಂಟೆಯ ಅವಧಿಯ ಈ ಚಿತ್ರ ಕೊಲ್ಕತ್ತಾದಲ್ಲಿ ಬಿಡುಗಡೆ ಕೂಡ ಆಯಿತು. ಆದರೆ ಸೋತಿತು. ನಂತರ ಬೆಂಕಿಯ ಅವಘಡದಲ್ಲಿ ಈ ಚಿತ್ರದ ನೆಗೆಟೀವ್‌ಗಳು ಸುಟ್ಟು ಹೋದವು. ಆದರೆ ಇದರ ಕೆಲವು ತುಣುಕುಗಳನ್ನು ಇತ್ತೀಚೆಗೆ ಸಂಗ್ರಹಿಸಿಡಲಾಗಿದೆ. ಅದರ ಅಪರೂಪದ ಲಿಂಕ್ ಇಲ್ಲಿದೆ, ಗಮನಿಸಿ.

(ಸಶೇಷ)

ಈ ಅಂಕಣದ ಹಿಂದಿನ ಬರಹಗಳು

ಮಾಧ್ಯಮದಿಂದ ಮಾಧ್ಯಮಕ್ಕೆ - ತೆರೆ ಐದು

ವೆತೆಗಳ ಕಳೆಯುವ ಕತೆಗಾರ! - ತೆರೆ ಮೂರು

ವೆತೆಗಳ ಕಳೆಯುವ ಕತೆಗಾರ! - ತೆರೆ ಎರಡು

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...