ರೋಚಕ ಅನುಭವ ನೀಡುವ ‘ಅರಮನೆ ಗುಡ್ಡದ ಕರಾಳ ರಾತ್ರಿಗಳು’


ಸರಳವಾದ ಬರವಣಿಗೆ ಮುಖಾಂತರವಾಗಿ ಸಾಗುವ ಕಥೆಯ ಶೈಲಿ, ಅಲ್ಲಲ್ಲಿ ತಿರುವು ಪಡೆದುಕೊಳ್ಳುವ ಕಥೆ, ಮುಂದಿನ ಅಧ್ಯಾಯದಲ್ಲಿ ಇನ್ನೇನು ಕಾದಿದೆಯೋ ಅನ್ನುವ ಆತಂಕ, ಇವೆಲ್ಲವುಗಳು ಓದುಗರಾದ ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ ಎನ್ನುತ್ತಾರೆ ಬರಹಗಾರ ರವಿ ಶಿವರಾಯಗೊಳ. ಅವರು ಗಿರಿಮನೆ ಶ್ಯಾಮರಾವ್ ಅವರ ಅರಮನೆ ಗುಡ್ಡದ ಕರಾಳ ರಾತ್ರಿಗಳು ಕೃತಿಯ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ...

ಪುಸ್ತಕ: ಅರಮನೆ ಗುಡ್ಡದ ಕರಾಳ ರಾತ್ರಿಗಳು
ಲೇಖಕರು: ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಮರಾವ್ ಅವರ ನಾನು ಓದಿದ ಮೊದಲ ಕಾದಂಬರಿ ಇದು. ಮಲೆನಾಡೆಂದರೆ ಅದೇನೋ ಒಂದು ಬೆರಗು ನನಗೆ. ಕಾಡು, ಗುಡ್ಡ, ಜಲಪಾತ, ಹಸಿರು, ನದಿ, ಹಳ್ಳ, ಮಳೆ ಗಾಳಿಯ ಒಟ್ಟು ಮಿಶ್ರಣದ ನೆಲವೇ ಮಲೆನಾಡು. ಮಲೆನಾಡಿನ ತಣ್ಣನೆಯ ಊರೆಲ್ಲೇ ಮೂರ್ನಾಲ್ಕು ತಿಂಗಳು ಕೆಲಸಕ್ಕೆ ಸೇರಿ ಅಲ್ಲೇ ಉಳಿದು ಅದರ ಬೀಕರತೆ ಮತ್ತು ಕಾಡಿನ ವೈವಿದ್ಯಮಯ ಬದುಕನ್ನು ಹತ್ತಿರದಿಂದ ನೋಡಲು ಹೋಗಿ ಕಾರಣಾಂತರಗಳಿಂದ ಅಲ್ಲಿಂದ ಅದರ ಸಣ್ಣ ಮಾಹಿತಿಯೂ ಪಡೆದುಕೊಳ್ಳದೆ ಖಾಲಿ ಮರಳಿದ ನೆನಪು ನನಗೆ. ಆಗ ಉಳಿದುಕೊಂಡಿರುವ ಮಲೆನಾಡ ಬಗೆಗಿನ ಆಕರ್ಷಣೆ ಇನ್ನೂ ಹಾಗೆ ಉಳಿದಿದೆ ನನ್ನೊಳಗೆ.‌ ಅಲ್ಲಿನ ಪರಿಸರ, ಅಲ್ಲಿನ ಜನ, ಅಲ್ಲಿಯ ಧಾರಾಕಾರವಾಗಿ ಸುರಿಯುವ ಮಳೆಗಾಲದೊಳಗಿನ ಮಳೆ, ಸಾಲು ಸಾಲು ಬೆಟ್ಟಗಳು. ಮಂಜಿನಿಂದ ಮುಚ್ಚಿ ಹೋದ ಬೆಟ್ಟದ ತುದಿಯ ಭಾಗ ಅಹಾ! ಒಂದೇ ಎರಡೇ ಅದನು ವರ್ಣಿಸಲು.

ಅಂತಹ ಕುತೂಹಲದಲ್ಲಿಯೇ ತರಿಸಿಕೊಂಡ ಪುಸ್ತಕ ’ಅರಮನೆ ಗುಡ್ಡದ ಕರಾಳ ರಾತ್ರಿಗಳು.’ ಪುಸ್ತಕ ಮನೆಗೆ ಬಂದ ಮೊದಲ ರಾತ್ರಿ ಎಪ್ಪತ್ತು ಪುಟ ಓದಿ ಮಲಗಿದ್ದೆ. ಇನ್ನೂ ಮುಂದೆ ಏನಾಗುತ್ತೇನ್ನುವ ಕುತೂಹಲ ಇದ್ದರೂ ಬೆಳಗೆದ್ದು ಮಾಡಬೇಕಾದ ಕೆಲಸ ಕಾರ್ಯಗಳ ನೆನೆದು ಅನಿವಾರ್ಯತೆಯಿಂದ ಮುಚ್ಚಿಡಬೇಕಾಯಿತು. ಮೊದಮೊದಲಿಗೆ ಎರಡು ಜೋಡಿಗಳ ಒಂದು ಟ್ರೆಕ್ಕಿಂಗ್ ಹೋಗುವ ಪ್ಲ್ಯಾನಿಂಗಲ್ಲೇ ಶುರುವಾಗುತ್ತದೆ ಕಾದಂಬರಿ. ಆಗಷ್ಟೇ ಮದುವೆಯಾಗಿ ಹನಿಮೂನ್ ಹೋಗಬೇಕಿದ್ದವ್ರು ಟ್ರೆಕ್ಕಿಂಗ್ ಹೊರಟು ನಿಲ್ಲುತ್ತಾರೆ. ನಾಲ್ಕು ಜನ ಅತ್ಯಂತ ಕುತೂಹಲಿಗಳಾಗಿಯೇ ಕಾಡುಮನೆ ಎಸ್ಟೇಟ್ ತಲುಪುತ್ತಾರೆ. ಅಲ್ಲಿಂದ ಆ ಎರಡು ಜೋಡಿಯ ಜೊತೆ ಓದುಗನಾದ ನಾವೂ ಒಬ್ಬರು; ಇದು ನಮಗೆ ಅರಿವಿಲ್ಲದೆ ಸಾಗುವ ಪ್ರಯಾಣ.‌ ಸಕಲೇಶಪುರ, ಕಾಡುಮನೆ ಎಸ್ಟೇಟ್, ಅಲ್ಲಿರುವ ಖಾಸಗಿ ಹೋಟೆಲಿನಿಂದ ಹಿಡಿದು ಕಾಫಿ ಎಸ್ಟೇಟ್ ಹೀಗೆ ಸಣ್ಣದಾಗಿ ರೋಚಕ ಜಗತ್ತು ತೆರೆದುಕೊಳ್ಳುತ್ತದೆ.‌ ಮೊದಲು ಎಲ್ಲವೂ ಸರಿಯಾಗೇ ಇದ್ದರೂ ಒಂದು ತಪ್ಪು ತಿರುವು , ಒಂದು ತಪ್ಪು ನಿರ್ಧಾರ, ಒಂದು ತಪ್ಪು ಕಲ್ಪನೆಯು ನಮ್ಮನ್ನ ಮುಂದಿನ ಕ್ಷಣದಲ್ಲಿ ಎಂತಹ ವಿಸ್ಮಯ ಮತ್ತು ಸಾವಿನ ಕೊನೆಯ ಅಂಚಿನಲ್ಲಿ ತಂದು ನಿಲ್ಲಿಸುತ್ತದೆಂದು ಹೇಳುವ ಕಥನವೇ ಈ ನಾಲ್ಕು ಜನರ ಬದುಕಿನಲ್ಲೂ ಒದಗುವ ಘಟನೆಗಳು. ಸರಳವಾದ ಬರವಣಿಗೆ ಮುಖಾಂತರವಾಗಿ ಸಾಗುವ ಕಥೆಯ ಶೈಲಿ, ಅಲ್ಲಲ್ಲಿ ತಿರುವು ಪಡೆದುಕೊಳ್ಳುವ ಕಥೆ, ಮುಂದಿನ ಅಧ್ಯಾಯದಲ್ಲಿ ಇನ್ನೇನು ಕಾದಿದೆಯೋ ಅನ್ನುವ ಆತಂಕ, ಇವೆಲ್ಲವುಗಳು ಓದುಗರಾದ ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಬಹುಶಃ ನಮಗೆ ಗೊತ್ತಿರುವ ಅರಮನೆ ಗುಡ್ಡದ ಆ ಪಶ್ಚಿಮ ಘಟ್ಟದ ಶ್ರೇಣಿಗಳ ಆಳವಾದ ಪರಿಚಯ ಕಾದಂಬರಿಯ ಜೊತೆಜೊತೆಗೆ ತಿಳಿಯುತ್ತಾ ಹೋಗುತ್ತದೆ.‌

ಇಂತಹ ಕಾದಂಬರಿಗಳನ್ನು ರಾತ್ರಿಯೇ ಓದುವುದು ಇನ್ನೂ ಉತ್ತಮ. ರೋಚಕ ಅನುಭವವಾಗುತ್ತದೆ ಎನ್ನುವುದು ನನ್ನ ಮಾತು. ಮೊದಲ ದಿನ ಎಪ್ಪತ್ತು ಪುಟ ಓದಿ ಇಟ್ಟವನು ಎರಡನೇ ದಿನ ಓದುವಾಗ ಆಗಷ್ಟೇ ಮಳೆ ಬಂದು ನಿಂತಿತ್ತು. ಮಳೆಯಿಂದಾಗಿ ವಿದ್ಯುತ ದೀಪವೂ ಇಲ್ಲ. ಮನೆಯ ತುಂಬಾ ಎಣ್ಣೆ ಹಾಕಿ ಹಚ್ಚಿಟ್ಟ ಮಂದವಾದ ದೀಪದ ಬೆಳಕು ಬಿಟ್ಟರೆ ಇನ್ನೇನು ಇರಲಿಲ್ಲ. ಓದಬೇಕಿತ್ತು ಓದಲೇಬೇಕು ಎಂಬದು ಒಳಗೊಳಗೆ ಕಾಡುತಿತ್ತು ಅದು ನಿನ್ನೆ ಅರ್ಧ ಓದಿಟ್ಟ ಕಾದಂಬರಿಯ ಪ್ರಭಾವಿತ್ತು. ಹಾಗೆ ಒಂದು ದೀಪವಿಟ್ಟುಕ್ಕೊಂಡು ಓದಲು ಕುಳಿತವನು ಮರಳಿ ಎದ್ದಿದ್ದು ರಾತ್ರಿಯ ಒಂದು ಗಂಟೆಯ ಸುಮಾರಿಗೆ.‌ ಕುಂತ ಜಾಗದಲ್ಲೇ ಬರೊಬ್ಬರಿ 114 ಪುಟ ಓದಿದ್ದೆ.‌ ತಲೆಯತುಂಬ ಅದೆ ದಟ್ಟವಾದ ಕಾಡು, ಕೀರ್ತಿ, ಮಾಯಾ, ದೀಪ್ತಿ, ಶ್ರೀಕರರ ಅಸ್ಪಷ್ಟವಾದ ನನ್ನದೇ ಕಲ್ಪನೆಯಲ್ಲರಳಿದ ಮುಖಗಳು. ಮತ್ತೊಂದು ಕರ್ವಾಲೋ ಓದಿದ ಅನುಭವ.

ಈ ಕೀರ್ತಿ, ಶ್ರೀಕರ, ದೀಪ್ತಿ , ಮಾಯಾ, ಟ್ರೆಕ್ಕಿಂಗ್ ಹೋದ ಇವರೆಲ್ಲ ಏನಾಗುತ್ತಾರೆ ? ಸಿದ್ದರಾಜು ಯಾರು? ಇದನ್ನೆಲ್ಲ ತಿಳಿಯಲು ಅರಮನೆ ಗುಡ್ಡದ ಕರಾಳ ರಾತ್ರಿಗಳು ಓದಬೇಕು ನೀವು. ಮೈಸೂರು ರಾಜರು ಆಗಾಗ ಬಂದು ಹೋದ ಅರಮನೆಯ ಗುಡ್ಡ, ಕುದುರೆ ಕಟ್ಟುವ ಲಾಯ, ಮಣಿಬೀಗತಿ ಗುಡಿ, ಇವೆಲ್ಲವೂ ನಾನೇ ಖುದ್ದು ನೋಡಿದ, ಇವರು ನಮ್ಮರೇ ಅನ್ನುವಷ್ಟರ ಮಟ್ಟಿಗೆ ಆಪ್ತತೆ ಹುಟ್ಟಿಸುವ ಬರವಣಿಗೆ ಕಥಾ ಶೈಲಿ ನಿಜಕ್ಕೂ ಬೆರಗಾಗುವಂತೆ ಮಾಡಿತು.‌ ಹಾಗಾದ್ರೆ ಕ್ಲೈಮ್ಯಾಕ್ಸ್ ಮಾತ್ರ ಥ್ರಿಲ್ ಇದೆ ಅಂತೀರಾ ? ಶುರುವಿನಿಂದ ಕೊನೆಯ ಪುಟದವರೆಗೆ ಎಲ್ಲಿಯೂ ನಿಮಗೆ ಬೋರ್ ಅಂತ ಅನ್ನಿಸಲಿಕ್ಕೆ ಸಾಧ್ಯವೇ ಇಲ್ಲದಂತಹ ಕಾದಂಬರಿ ಇದು.

ಹಾಗದ್ರೆ ಈ ನಾಲ್ಕು ಜನರೊಂದಿಗೆ ಅರಮನೆ ಗುಡ್ಡದ ಟ್ರೆಕ್ಕಿಂಗ್‌ ಹೋಗಲು, ಅದರ ಅನುಭವ ಪಡೆಯಲು ನಿಮಗಿಷ್ಟವಿದ್ದರೆ ದಯವಿಟ್ಟು ಇದೊಂದು ಕಾದಂಬರಿ ಓದಿಬಿಡಿ. ನಿಮ್ಮ ಕಪಾಟಿನ ದಿ ಬೆಸ್ಟ್ ಬುಕ್ ಅನ್ನುವ ಸಾಲಿನಲ್ಲಿ ಇದೂ ಇರುತ್ತದೆ.

ಧನ್ಯವಾದಗಳೊಂದಿಗೆ
- ರವಿ ಶಿವರಾಯಗೊಳ

ಗಿರಿಮನೆ ಶ್ಯಾಮರಾವ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಪ್ರತಿ ಪುಟದಲ್ಲಿಯೂ ಆವರಿಸಿರುವ ಪ್ರ...

01-10-2022 ಬೆಂಗಳೂರು

ಎಚ್.ಎಸ್‌.ಮುಕ್ತಾಯಕ್ಕ ಅವರ ಹೊಸ ಸಂಕಲನ 'ನಿನಗಾಗಿ ಬರೆದ ಕವಿತೆಗಳು'. ಪ್ರೇಮ ಪದ್ಯಗಳ ಈ ಕೃತಿಯನ್ನು ...

ಹೊಸ ಬಗೆಯ ಬರವಣಿಗೆ ಹಾಗೂ ನಿರೂಪಣೆಯ...

30-09-2022 ಬೆಂಗಳೂರು

ದೇಸೀಯ ಭಾಷೆಯ ಬಳಕೆ ಹೆಚ್ಚು ಇಲ್ಲದ ಶಿಷ್ಟ ಭಾಷೆಯ ಸಂತುಲಿತ ಶೈಲಿ ಕಾದಂಬರಿಯ ಆವರಣಕ್ಕೆ ಶೋಭೆ ತಂದಿದೆ.ಇಲ್ಲಿ ಕಾದಂಬರಿಕಾ...

ಮಕ್ಕಳ ಸಾಹಿತ್ಯ ಖುಷಿ ಕೊಡುತ್ತಲೇ ಭ...

30-09-2022 ಬೆಂಗಳೂರು

ನಮ್ಮ ಮಕ್ಕಳಿಗೆ ಸವಿಯಾದ ಮಕ್ಕಳ ಸಾಹಿತ್ಯವನ್ನು ಒದಗಿಸುತ್ತ ಅವರನ್ನು ಕನ್ನಡದತ್ತ ಕೊಂಡೊಯ್ಯಬೇಕಾಗಿದೆ. ಅದು ಮಕ್ಕಳಿಗೆ ಖ...