ಸಹಜ ಕವಚ ಕುಂಡಲಗಳನ್ನೂ ಅಮೃತ ಕಲಶವನ್ನೂ ಕಿತ್ತು ಹಾಕುವುದು ಕಷ್ಟ…


“ಹಳ್ಳಿಯಲ್ಲಿ ಯಾರೂ ವಾಕ್ಯವನ್ನು ಅರ್ಧಕ್ಕೆ ನಿಲ್ಲಿಸಿ ಓಡಿಹೋಗುವುದಿಲ್ಲ. ವಾಕ್ಯ ಪೂರ್ಣವಾಗದೆ ಯಾವ ಅರ್ಥವೂ ಪೂರ್ಣವಾಗಲಾರದು.. ಅರ್ಧವಾಕ್ಯಗಳು ಬದುಕಿನ ಭಗ್ನತೆಯ ಗುರುತುಗಳು” ಎನ್ನುತ್ತಾರೆ ಕವಿ ಎಚ್.ಎಸ್. ವೆಂಕಟೇಶಮೂರ್ತಿ. ಇಂದು (ಜೂನ್ 23) ಅವರ ಜನ್ಮದಿನ. ಈ ಸಂದರ್ಭದಲ್ಲಿ, ಅವರ ಕೆಲವು ಮಾತುಗಳು (ಅವರ ‘ಮೂವತ್ತು ಮಳೆಗಾಲ’ ಸಮಗ್ರ ಕಾವ್ಯಸಂಪುಟದಲ್ಲಿನ ಬರಹದಿಂದ ಆಯ್ದುಕೊಂಡದ್ದು) ನಿಮ್ಮ ಓದಿಗಾಗಿ…

ನಾನು ಹುಟ್ಟಿದ್ದು ಸಾಮಾನ್ಯವಾದ ಒಂದು ಕೆಳಮಧ್ಯಮ ವರ್ಗದ ಕುಟುಂಬದಲ್ಲಿ, ತಂದೆ ಕಣ್ಣು ಮುಚ್ಚಿದ ಮೂರು ತಿಂಗಳ ನಂತರ ಕಣ್ಣು ಬಿಚ್ಚಿದ ಪುಣ್ಯ ಪುರುಷ ನಾನು! ತಂದೆ ಇಲ್ಲದ್ದು ಒಂದು ಅರಕೆಯಾಗದ ಹಾಗೆ ನನ್ನನ್ನು ಬೆಳೆಸಿದ್ದು ನನ್ನ ಅಜ್ಜಿ-ಅಜ್ಜ- ದೊಡ್ಡಜ್ಜಿ- ಅಮ್ಮ, ನನ್ನ ಆರೋಗ್ಯ, ಕ್ಷೇಮದ ಬಗ್ಗೆ ಅವರ ಅತಿಯಾದ ಕಾಳಜಿ ನನ್ನ ದೇಹದ ಸೂಕ್ಷ್ಮತೆಗೆ ಕಾರಣವಾದಂತೆ ಮನಸ್ಸಿನ ಸೂಕ್ಷ್ಮತೆಗೂ ಕಾರಣವಾಯಿತು, ನನ್ನ ಗೆಳೆಯರೆಲ್ಲಾ ಈಜು ಕಲಿಯುವುದಕ್ಕೆ ತೋಟದ ಬಾವಿಗೆ ಹೋದರೆ, ನಾನು ಒಬ್ಬನೇ. ನಮ್ಮ ಐದಂಕಣದ ಚಿನ್ನದಂಥ ಮನೆಯಲ್ಲಿ, ಜೋಲಿ ಜೀಕುತ್ತಾ, ನೀರನ್ನೂ ಅಲೆಯನ್ನೂ ಕಲ್ಪಿಸುತ್ತಾ ಕಾಲ ಕಳೆಯುತ್ತಿದ್ದೆ. ಇದು ನನಗೆ ನಿರ್ವಾತದಲ್ಲಿ ಏನೇನನ್ನೋ ಹುಟ್ಟಿಸುವುದನ್ನು ಕಲಿಸಿತು. ಅನೇಕ ಬಾರಿ ನನಗೆ ನಾನೇ ಮಾತಾಡಿಕೊಳ್ಳುತ್ತಿದ್ದೆ. ಅಥವಾ ಕೆಲವು ಗೆಳೆಯರನ್ನು ಸೃಷ್ಟಿಸಿಕೊಂಡು ಸಂವಾದಕ್ಕೆ ತೊಡಗುತ್ತಿದ್ದೆ. ಗಳಗನಾಥರ ಭಾರತ (ಸಭಾಪರ್ವ, ವನಪರ್ವ ಈ ಎರಡು ಸಂಪುಟಗಳು ನಮ್ಮ ಮನೆಯಲ್ಲಿದ್ದವು, ಸೌಗಂಧಿಕಾ ತರಲು ಹೊರಟ ಭೀಮ ಆಂಜನೇಯನನ್ನು ಸಂಧಿಸಿದ ಕ್ಷಣವನ್ನು ಚಿತ್ರಿಸಿದ ಒಂದು ವರ್ಣಚಿತ್ರವಂತೂ ನನ್ನ ಕಣ್ಣಿಗೆ ಕಟ್ಟಿದೆ) ವೆಂಕಟಾಚಾರ್ಯರ ಕಾದಂಬರಿಗಳು, ಬಿ.ಪಿ. ಕಾಳೆಯವರ ಪತ್ತೇದಾರಿಗಳು ನನ್ನ ಏಕಾಂತವನ್ನು ದೂರಮಾಡುತ್ತಿದ್ದವು. ಗಂಟೆಗಟ್ಟಲೆ ನಾನು ಮತ್ತು ಈಶ್ವರಚಂದ್ರ, ಅವರ ಮನೆಯ ಕತ್ತಲ ಅಟ್ಟದಲ್ಲಿ ಕೂತು ಬಿಸಿಲು ಕೋಲಿನ ಕೊಳವೆಲೈಟಿನಲ್ಲಿ ಚದುರಂಗ ಆಡುತ್ತಿದ್ದ ನೆನಪೂ ಹಸಿಯಾಗಿದೆ. ಸಂಕೋಚ, ನಾಚಿಕೆ, ಹಿಂಜರಿಕೆ -ಇವು ನನ್ನ ಬಾಲ್ಯದ ಸ್ವಭಾವಗಳಾಗಿದ್ದವು. ನನ್ನ ತಂದೆ ಯಾವುದೋ ಊರಿಗೆ ಹೋಗಿದ್ದಾರೆ. ಅವರು ಮತ್ತೆ ಬರುತ್ತಾರೆ ಎಂದು ನಾನು ನಂಬಿದ್ದೆ. ಹೀಗಾಗಿ ನಿರಂತರ ನಿರೀಕ್ಷೆ ನನ್ನ ಒಳಮನಸ್ಸಿನ ತುಡಿತವಾಗಿಬಿಟ್ಟಿತು. ಈಗಲೂ ನಾನು ಕಾಯುತ್ತಾ ಇರುತ್ತೇನೆ. ಪತ್ರಕ್ಕಾಗಿ, ಗೆಳೆಯನ ಆಗಮನಕ್ಕಾಗಿ. ಇದ್ದಕ್ಕಿದ್ದಂತೆ ನೆಂಟರು ಬರಬಹುದು ಎಂಬ ನಿರೀಕ್ಷೆಯಲ್ಲಿ, ಒಂದು ಘನವಾದ ಕವಿತೆಗಾಗಿ, ಕಡೇಪಕ್ಷ ಪ್ರತಿಮೆಗಾಗಿ ಪಾತ್ರಕ್ಕಾಗಿ, ಮಾತ್ರಧಾರಿಗಾಗಿ ಆತಂಕದಿಂದ, ಭಯದಿಂದ ಕಾಯುತ್ತೇನೆ. ನನ್ನನ್ನು ಜರ್ಝರಿತಗೊಳಿಸಬಲ್ಲ ಒಂದು ವಾರ್ತೆಗಾಗಿ ಕೂಡ. ಈ ನಿರೀಕ್ಷೆಯ ಮೂರ್ತರೂಪ. ನನ್ನ ನೇರ ಸಂಪರ್ಕಕ್ಕೆ ಬರದೆ, ಕಷ್ಟದ ದಿನಗಳಲ್ಲಿ ನಮ್ಮ ಅಜ್ಜನ ಆಸರೆಗೆ ಒದಗುತ್ತಿದ್ದ 'ಮದ್ರಾಸ್ ಮಾವ' ಈ ಮದ್ರಾಸ್ ಮಾವ ಒಬ್ಬ ವ್ಯಕ್ತಿಯೋ, ಒಂದು ರೂಪಕವೋ ಎಂಬುದು ಇನ್ನೂ ಬಗೆಹರಿದಿಲ್ಲ.

ನನ್ನ ಬದುಕಿನ ಪ್ರಥಮಾರ್ಧವೆಲ್ಲಾ ಹಳ್ಳಿಯಲ್ಲೇ ಕಳೆಯಿತು. 1973ರಲ್ಲಿ ನಾನು ಬೆಂಗಳೂರಿಗೆ ಬಂದು ನೆಲೆಸಿದೆ. ಸುಮಾರು ಮೂರು ದಶಕದ ಈ ನಗರ ಜೀವನ ನನ್ನ ಗ್ರಾಮೀಣ ವ್ಯಕ್ತಿತ್ವವನ್ನು ಪಳಗಿಸುವಲ್ಲಿ ವಿಫಲವಾಗಿದೆಯೆಂದೇ ನನ್ನ ಭಾವನೆ, ಬೆಂಗಳೂರಿಗೆ ನಾನು ಮಾತ್ರ ಬರಲಿಲ್ಲ. ನನ್ನೊಂದಿಗೆ ನನ್ನ ಹಳ್ಳಿಯೂ ಬಂತು, ಹಬ್ಬ, ಹರಿದಿನ, ಊಟ ತಿಂಡಿ, ಮಾತುಕಥೆ ಎಲ್ಲದರಲ್ಲೂ ಈವತ್ತೂ ನಮ್ಮ ಮನೆಯಲ್ಲಿ ನನ್ನ ಹಳ್ಳಿಯೆ ಉಳಿದುಕೊಂಡಿದೆ. ಇಂದಿಗೂ ನನ್ನೂರಿನ ಕನ್ನಡವೇ ನನ್ನ ಏಕೈಕ ಅಭಿವ್ಯಕ್ತಿ ಮಾಧ್ಯಮ, 27 ವರ್ಷ ನಾನು ಸೇಂಟ್ ಜೋಸೆಪ್ಸ್‌ನಲ್ಲಿ ಕೆಲಸ ಮಾಡಿದರೂ ಇಂಗ್ಲಿಷ್ ಆಡುವ ಮಾತಾಗಿ ನನ್ನೊಳಗೆ ಇಂಗಲೆ ಇಲ್ಲ. ಇಂಗ್ಲಿಷ್ ಇವತ್ತಿಗೂ ನನಗೆ ಸಾಹಿತ್ಯದ ಭಾಷೆ ಮಾತ್ರ. ನಗರ ಜೀವನದ ನಯಗಾರಿಕೆ, ನಾಜೂಕುಗಳನ್ನು ರೂಢಿಸಿಕೊಳ್ಳುವುದರಲ್ಲಿ ನಾನು ವಿಫಲವಾಗಿದ್ದೇನೆ, ಸೋಫಾದ ಮೇಲೆ ಕೂತಾಗಲೂ ಕಾಲುಮಡಿಸಿ ಕೂಡುವುದರಲ್ಲೇ ನನಗೆ ನೆಮ್ಮದಿ, ಪಲಾವ್ ಕಟ್ಲೆಟ್ಟಿಗಿಂತ ತಾಲೀಪಟ್ಟು ತಂಬುಳಿಗಳೆ ನನಗೆ ಪ್ರಿಯ.

ನಗರ ನನ್ನ ಪಾಲಿಗೆ ಶತ್ರುವೇನೂ ಅಲ್ಲ, ಸಮಾನತೆ, ಸ್ವಾತಂತ್ರ್ಯ, ಈ ಮೌಲ್ಯಗಳನ್ನು ಬೆಳೆಸುವಲ್ಲಿ ನಗರ ಜೀವನದ್ದು ಮಹತ್ವದ ಕೊಡುಗೆ ಎಂಬುದನ್ನು ನಾನು ಬಲ್ಲೆ, ನಗರದ ಇಕ್ಕಟ್ಟು ಮಡಿಗಿಡಿಯ ಕಂದಾಚಾರಗಳನ್ನು ಉಡಾಯಿಸಿ ಬಿಡುತ್ತದೆ. ಯಾವ ಸಿಟಿಬಸ್ಸಿನಲ್ಲಿ ನೀವು ನಿಮ್ಮ ಮಡಿ ಹುಡಿ ಉಳಿಸಿಕೊಳ್ಳುವುದು ಸಾಧ್ಯ? ಯಾವ ಹೋಟೆಲಿನಲ್ಲಿ ನೀವು ಸಹಪಂಕ್ತಿಯ ಸಮಾನತೆಯನ್ನು ಧಿಕ್ಕರಿಸುವುದು ಸಾಧ್ಯ? ಸ್ವತಂತ್ರ ಭಾರತದ ಘನವಾದ ಮೌಲ್ಯಗಳನ್ನು ತನ್ನ ಅರಿವಿಲ್ಲದೆಯೇ ಹೋಟೆಲ್ ಉದ್ಯಮ, ಸಾರಿಗೆ ವ್ಯವಸ್ಥೆ, ಕಲಾಭವನಗಳು ಆಚರಣೆಗೆ ತರುತ್ತಿವೆ. ಇದಕ್ಕಾಗಿ ನಾನು ನಗರಕ್ಕೆ ಭೇಷ್' ಎನ್ನುತ್ತೇನೆ, ಆದರೆ ನಗರದಲ್ಲಿ ಕಾಣುವ ಅಮಾನವತೆ, ಯಾಂತ್ರಿಕ ಬದುಕು, ಬಿಡುವಿಲ್ಲದ ಓಟ, ಆತ್ಮವಿಲ್ಲದ ಆಡಂಬರ ನನಗೆ ಹಿಂಸೆ ನೀಡುತ್ತಾ ಬಂದಿವೆ. ಬಹಳ ಕಾಲದ ಬಳಿಕ ಗೆಳೆಯರಿಬ್ಬರು ಸಂಧಿಸುತ್ತಾರೆ. ಎರಡು ಮಾತು ಆಡಿರುವುದಿಲ್ಲ. ಅಷ್ಟರಲ್ಲಿ ಬಸ್‌ ಬಂದು, ವಾಕ್ಯವನ್ನೂ ಪೂರ್ತಿಮಾಡದೆ ಒಬ್ಬ ಗೆಳೆಯ ಬಸ್ಸಿನೊಳಗೆ ನುಗ್ಗಿ ಅಂತರ್ಧಾನನಾಗಿ ಬಿಡುತ್ತಾನೆ.

ಹಳ್ಳಿಯಲ್ಲಿ ಯಾರೂ ವಾಕ್ಯವನ್ನು ಅರ್ಧಕ್ಕೆ ನಿಲ್ಲಿಸಿ ಓಡಿಹೋಗುವುದಿಲ್ಲ. ವಾಕ್ಯ ಪೂರ್ಣವಾಗದೆ ಯಾವ ಅರ್ಥವೂ ಪೂರ್ಣವಾಗಲಾರದು.. ಅರ್ಧವಾಕ್ಯಗಳು ಬದುಕಿನ ಭಗ್ನತೆಯ ಗುರುತುಗಳು. ಈಗೀಗ ಬೆಂಗಳೂರಿನಲ್ಲಿ ಬಹಳ ಜನ ಹಾಯ್, ಹೇ, ಬಾಯ್ ಎಂಬ ತುಂಡುಪದಗಳಲ್ಲೇ ಸಂಬಂಧಗಳಿಗೆ ವಿದಾಯ ಹೇಳಿಬಿಡುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಮಾತಾಡು, ಮುಖಕ್ಕೆ ಮುಖ ಕೊಟ್ಟು ಮಾತಾಡು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಈಗ ಕಣ್ಣು, ಮುಖ ಯಾವುದನ್ನೂ ನೋಡದೆ ದೂರವಾಣಿಯ ಮೂಲಕ ಮಾತನಾಡುವುದು ನಮಗೆ ರೂಢಿಯಾಗಿಬಿಟ್ಟಿದೆ. ಮುಖ ಕೆಡಿಸಿಕೊಂಡದ್ದು ಅರಿವಿಗೇ ಬರದಂತೆ ಯಾರೊಂದಿಗೂ ವ್ಯವಹಾರ ನಡೆಸಬಹುದು. ಮೂವತ್ತು ವರ್ಷಗಳಿಂದ ಇಲ್ಲಿದ್ದರೂ ಬೆಂಗಳೂರಿನ ಅನೇಕ ಭಾಗ ನನಗೆ ಪರಸ್ಥಳವೇ. ಬಾರಿಬಾರಿಯೂ ನಾನು ಗೆಳೆಯರ, ಆಪ್ತರ ಮನೆ ಸಿಕ್ಕದೆ ದಿಕ್ಕು ತಪ್ಪಿ ದಾರಿ ದಾರಿ ಅಲೆಯುತ್ತಲೇ ಇರುತ್ತೇನೆ.

ನನ್ನ ಹಳ್ಳಿತನ ಬಿಚ್ಚಿ ಬಿಸಾಕದೆ ಬೆಂಗಳೂರಿನಲ್ಲಿ ಬೆರೆಯಲಿಕ್ಕಾಗುವುದಿಲ್ಲ ಎಂಬುದು ನನಗೆ ಗೊತ್ತು. ಆದರೆ ಸಹಜವಾದ ಕವಚ ಕುಂಡಲಗಳನ್ನೂ, ಅಮೃತ ಕಲಶವನ್ನೂ ಕಿತ್ತು ಹಾಕುವುದು ಕಷ್ಟ.

ಕೃಪೆ: ‘ಮೂವತ್ತು ಮಳೆಗಾಲ’ ಸಮಗ್ರ ಕಾವ್ಯಸಂಪುಟ

ಎಚ್. ಎಸ್. ವೆಂಕಟೇಶಮೂರ್ತಿ ಇವರ ಲೇಖಕ ಪರಿಚಯ..
ಮೂವತ್ತು ಮಳೆಗಾಲ ಕೃತಿ ಪರಿಚಯ...

MORE FEATURES

ಮೆಲುಕು ಹಾಕಿದಷ್ಟೂ ಹೊಸ ರುಚಿ`ಬಿಂಗ...

01-07-2022 ಬೆಂಗಳೂರು.

ವರ್ಷಗಳ ಹಿಂದೆ ಬರೆದ ಈ ಕೃಷಿಕಥನಗಳು ಬೇಗನೆ ಸುವಾಸನೆ ಕಳೆದುಕೊಳ್ಳುವಂಥದ್ದೇ ಅಲ್ಲ. ಮತ್ತು ಫಿಲಿಪ್ಪೈನ್ಸಿಗೆ ಹೋಗಿರುವಾಗ...

ಪ್ರೀತಿ ಪ್ರಣಯ ಪುಕಾರು ಸುತ್ತಲೂ ಹೆ...

01-07-2022 ಬೆಂಗಳೂರು

ಲೇಖಕಿ ವೈಶಾಲಿ ಹೆಗಡೆ ಅವರು ಬರೆದಿರುವ ಪ್ರೀತಿ ಪ್ರಣಯ ಪುಕಾರು ಸಣ್ಣ ಕತೆಗಳ ಸಂಕಲದ ಬಗ್ಗೆ ಲೇಖಕಿ ಸಂಗೀತಾ ಚಚಡಿ ಅವರು ಬ...

ನನ್ನ ಕೆಲವು ಸ್ತ್ರೀ ಪಾತ್ರಗಳು : ಸ...

30-06-2022 ಬೆಂಗಳೂರು

"ನನ್ನ ಸ್ತ್ರೀಪಾತ್ರಗಳು ಸಮಾಜವನ್ನು ಪ್ರಶ್ನಿಸಬೇಕು; ಅರ್ಥವಿಲ್ಲದ ನಿಯಮಗಳನ್ನು ತಲೆ ತಗ್ಗಿಸಿ ಒಪ್ಪಿಕೊಳ್ಳದೆ ಅವು...