ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯ ವತಿಯಿಂದ ಆ. 8, 9, 10 ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2025ʼರ ಎರಡನೇಯ ದಿನದ ಕಾರ್ಯಕ್ರಮಗಳು ಆ. 9 ಶನಿವಾರದಂದು ಕೋರಮಂಗಲದ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ನಡೆಯಿತು.
ಹಲವು ವಿಚಾರಗೋಷ್ಠಿಗಳಿಗೆ ಸಾಹಿತ್ಯ ಉತ್ಸವದ 8 ವೇದಿಕೆಗಳು ಸಾಕ್ಷಿಯಾಗಿದ್ದು, ಅಂಗಳ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯದ ಹಾಸ್ಯ ಚಕ್ರವರ್ತಿ ಡುಂಡಿರಾಜ್, ಬಿ ಆರ್ ಲಕ್ಷ್ಮಣ್ ರಾವ್, ಗುಂಡುರಾವ್‌ರವರ ʻಸಾಹಿತ್ಯ- ಹಾಸ್ಯದ ಹಾಸುಹೊಕ್ಕುʼ ಗೋಷ್ಠಿಯು ಸಾಹಿತ್ಯಾಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿತು.
ಈ ಸಂದರ್ಭದಲ್ಲಿ ಮೂವರು ಹಾಸ್ಯ ದಿಗ್ಗಜರು, ಕವಿಗಳು, "ಹಾಸ್ಯ ಎನ್ನುವಂತಹದ್ದು ನಮ್ಮ ಬದುಕಿನಲ್ಲಿ ಎಲ್ಲ ಕಡೆ ಆವರಿಸಿಕೊಂಡಿರುತ್ತದೆ. ಅದನ್ನ ಅರಿತು ಕೊಂಡಾಗ ಮಾತ್ರ ನಾವು ಯಾವಾಗಲೂ ಹಸನ್ಮುಖಿಗಳಾಗಲು ಸಾಧ್ಯ. ಹಾಗಾಗಿ ಹಾಸ್ಯವೆಂಬುದು ಮನೋರೋಗಕ್ಕೆ ಉಚಿತವಾಗಿ ಸಿಗುವ ಚಿಕಿತ್ಸೆ. ಸಾಹಿತ್ಯದ ಒಳ ಹೊರಗುಗಳಲ್ಲಿ ಹಾಸ್ಯದ ಅವಶ್ಯಕತೆ ಒಬ್ಬ ಓದುಗನಿಗೆ ತುಂಬಾ ಮುಖ್ಯ. ಯಾವುದೇ ಗಂಭೀರ ವಿಷಯಗಳನ್ನು ಹಾಸ್ಯಾತ್ಮಕವಾಗಿ ಕೇಳುಗನಿಗೆ ಮುಟ್ಟಿಸಿದಾಗ ಅದು ಅವನ ಹೃದಯಕ್ಕೆ ನಾಟುತ್ತದೆ. ಹಾಗಾಗಿ ನಮ್ಮ ದಿನ ನಿತ್ಯದ ಬದುಕಿನ ಹಲವು ಚಟುವಟಿಕೆಗಳು ಲವಲವಿಕೆಯಿಂದ ಕೂಡಿರಬೇಕೆಂದರೆ ಸಾಹಿತ್ಯಾತ್ಮಕ ಹಾಸ್ಯದ ಸದಾಭಿರುಚಿ ನಮ್ಮದಾಗಬೇಕು," ಎಂದು ತಿಳಿಸಿದರು.
ನಂತರದಲ್ಲಿ ಹಾಸ್ಯದ ಪರಿಕಲ್ಪನೆಯ ಅಡಿಯಲ್ಲಿ ಕೆಲವೊಂದು ಕವಿತೆಗಳನ್ನ ಹೀಗೆ ಕಟ್ಟಿಕೊಟ್ಟರು;
ಲಾಭ:
ಸಂದರ್ಶಕರೊಬ್ಬರು ಕೇಳಿದರು ನೀವು ಕನ್ನಡ ಸಾಹಿತ್ಯದಲ್ಲಿದ್ದಿದ್ದಕ್ಕೆ ಏನು ಲಾಭ:
"ಬೇರೆಲ್ಲಾ ಬಿಟ್ಟು, ವೃತತೊಟ್ಟು
ಹಗಲಿರುಳು ಕನ್ನಡ ಸಾಹಿತ್ಯ ಓದಿಕ್ಕೆ
ಕನ್ನಡ ಸಾಹಿತ್ಯ ಬರೆದಿದ್ದಕ್ಕೆ
ನನಗೆ ಸಿಕ್ಕ ಜೋಡಿ ಪದಕ
ಇದುವೇ ಕನ್ನಡಕ"
ಚಪ್ಪಾಳೆ:
ಹಾಸ್ಯ ಕವಿತೆ ಓದಿದಾಗ ಸಿಕ್ಕ ಚಪ್ಪಾಳೆ
ನಗಿಸಿದ್ದಕ್ಕೆ,
ಗಂಬೀರ ಕವಿತೆ ಓದಿದಾಗ ಸಿಕ್ಕ ಚಪ್ಪಾಳೆ
ಮುಗಿಸಿದ್ದಕ್ಕೆ.
ಮೇಳ:
"ಇದ್ದವರು, ಇಲ್ಲದವರು, ಇಲ್ಲವಾದವರು
ಎಲ್ಲರೂ ಬಂದರೂ ಬ್ಯಾಂಕಿನ ಸಾಲ ಮೇಳದಲಿ
ಆದರೆ ಇದ್ದವರು ಕೆಲವರು ಎದ್ದು ಹೋದರು
ಸಾಹಿತ್ಯ ಮೇಳದಲಿ"
ದ್ರೌಪದಿ ವಸ್ತ್ರಾಪಹರಣ:
ವಸ್ತ್ರಾಪಹರಣದಲ್ಲಿ ದ್ರೌಪದಿಯ ತಪ್ಪಿಲ್ಲ, ತಪ್ಪು ದ್ರೌಪದಿಯದ್ದೆ
ಏಕೆಂದರೆ ಅವಳು ಸೀರೆ ಉಟ್ಟದ್ದು ಯಾಕೆ?
ಇರಲಿಲ್ಲವೇ ಚೂಡಿದಾರ!
ಪತಿ ಭಕ್ತಿ:
ಪತಿ ಭಕ್ತಿಯಲ್ಲಿ ಗಾಂಧಾರಿಗಿಂತ ಇವಳೇನು ಕಮ್ಮಿ ಹೇಳಿ,
ಗಂಡನಿಗಿಲ್ಲದ್ದು ನನಗೇತಕೆ ಎಂದು ಕಿತ್ತು ಹಾಕಿದಳು ತಾಳಿ.
ಕೂದಲು;
ಯುವಕರು ಬಿಡುತ್ತಿದ್ದಾರೆ ಗಡ್ಡ ಮೀಸೆ,
ತಲೆಯ ಮೇಲಿಲ್ಲ ಮುಖದ ಮೇಲಾದರು ಇರಲಿ ಎನ್ನುವ ಆಸೆ!
ದಾಳಿ:
"ಕೇಳಿತು ಬಾಗಿಲ ಗಂಟೆಯ ಸದ್ದು, ನಾನು ಹೋದೆ ಎದ್ದು
ಬಾಗಿಲ ಬಳಿ ಇತ್ತು ನಾಲ್ಕಾರು ಜನರ ತಂಡ
ಕೇಳಿದೆ ನೀವ್ಯಾರು, ಬಂದದ್ದೇಕೆ, ಯಾವುದಾದರು ಕಾರ್ಯಕ್ರಮಕ್ಕೆ ನಾ ಬರಬೇಕೆ,
ಅವರೆಂದರು ನಾವು ಆದಾಯ ತೆರಿಗೆ ಇಲಾಖೆಯವರು
ನಮಗೆ ಬೇಕಿತ್ತು ನಿಮ್ಮ ಆದಾಯದ ದಾಖಲೆಯ ವಿವರ
ನಾ ಹೇಳಿದೆ ನಾನೊಬ್ಬ ಸಾಹಿತಿ ಎಂದು
ಕ್ಷಣಾರ್ಧದಲ್ಲಿಯೆ ಕಣ್ಣೆರುದುರಿದ್ದವರೆಲ್ಲರು ಮಂಗಮಾಯ"
ನಗಿಸುವುದು ನಮ್ಮ ಧರ್ಮ,
ನಗುವುದು ಬಿಡುವುದು ನಿಮ್ಮ ಕರ್ಮ!
ಒಟ್ಟಾರೆಯಾಗಿ ಅಂಗಳದಲ್ಲಿ ನಡೆದ ಸಾಹಿತ್ಯಿಕ ನಗೆ ಹಬ್ಬದ ಗೋಷ್ಠಿಯು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
- ಕೆ ಎನ್ ರಂಗು ಚಿತ್ರದುರ್ಗ
ಎಸ್.ಡಿ.ಎಂ ಕಾಲೇಜು, ವಿದ್ಯಾರ್ಥಿ
"ಇದು ಕವನದ ಪಲ್ಲವಿ. ಈ ಹಾಡು ಏಕಾಂತಕ್ಕೂ, ಲೋಕಾಂತಕ್ಕೂ ಸೇರಿಯೇ ಸಲ್ಲುವ ಹಾಡು. ಅಂತರಂಗ ಎನ್ನುವುದು ನಮ್ಮೊಳಗಿನದ್...
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
©2025 Book Brahma Private Limited.