ಸಾಹಿತ್ಯ ಯಾವಾಗಲೂ ದೇಸೀಯತೆಯನ್ನ ತುಂಬಿಕೊಂಡು ತೀವ್ರವಾಗಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ...


“ಹೆಣ್ತನ, ಊರು, ಊರಿಗೊಂದು ಕತಿ, ಊರ ಜನ, ಗುಡಿ, ಓದು, ಹಾಡು, ಸಂಬಂಧಗಳ ಹೊಯ್ದಾಟ, ಬದುಕಿನ ಸಂಘರ್ಷ, ಸವಾಲುಗಳು, ಮಡಿ, ಮೈಲಿಗೆ, ಮುಟ್ಟು, ದೇವರು, ಮುಗ್ಧತೆ, ಇನ್ನೂ ಬರ್ತಾ ಹೋಗ್ತಿರತಾವು ಈ ಕತಿಗುಳ್ ಒಳಗಾ… ಒಟ್ನಲ್ಲಿ ವ್ಯಾಪಕವಾದ ಸತ್ಯದ ಕತಿಗಳನ್ನಾ ಹೇಳೋಕ್ ಹೊರಟ ನಂದಕುಮಾರರು ಸಮರ್ಥವಾಗಿ ಹೇಳಿಬಿಟ್ಟಿದ್ದಾರೆ. ನೀವು ಓದೋದೊಂದೇ ಬಾಕಿ ಉಳಿದದ್ದು. ಈ ಕತಿಗಳ ಗುಚ್ಛ ಬಿಳೆ ದಾಸ್ವಾಳ ನಿಜಕ್ಕೂ ನಮ್ಮ ಕಣ್ಣಾದೀತು” ಎನ್ನುತ್ತಾರೆ ರಂಗಕರ್ಮಿ ರಂಗನಾಥ ಶಿವಮೊಗ್ಗ. ಅವರು ನಂದಕುಮಾರ ಜಿ ಕೆ ಅವರ ಬಿಳೆ ದಾಸ್ವಾಳ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.....

ಆತ್ಮೀಯ ಗೆಳೆಯರಾದ ನಂದಕುಮಾರರ ಮೊದಲ ಕಥಾಸಂಕಲನ ‘ಗಾಳೀಕತಿ’ಯಲ್ಲಿನ ಹಲವು ಕತೆಗಳನ್ನಾ ಪ್ರಕಟಣೆಗೂ ಮುಂಚೆಯೇ ನನ್ನೊಟ್ಟಿಗೆ ಚರ್ಚಿಸುತ್ತಿದ್ದಾಗ ಅವರಲ್ಲಿನ ಅದ್ಭುತ ಕತೆಗಾರನನ್ನಾ ಅಂದೇ ಕಂಡಿದ್ದೆ. ನೆಚ್ಚಿನ ಕತೆಗಾರರಾದ ದೇವನೂರು ಮಹಾದೇವರ ಪ್ರಾದೇಶಿಕ ಸೊಗಡಿನ ಕತೆಗಳಲ್ಲಿ ಅವರು ಬಳಸುತ್ತಿದ್ದ ಅಲ್ಲಿನ ಭಾಷಾ ಸೊಗಡು ನನ್ನನ್ನು ಓದಲು ಸಾಕಷ್ಟು ಪ್ರೇರೇಪಿಸಿತ್ತು, ಅಂತಹದ್ದೆ ರೀತಿಯಲ್ಲಿ ತನ್ನೂರಿನ ಭಾಷಾಸೊಗಡಿನಲ್ಲೇ ಕತಿಗಳನ್ನಾ ಕಟ್ಟುತ್ತಾ ಹೋಗಿರುವ ನಂದಕುಮಾರರು, ಓದುಗನಾದ ನನ್ನನ್ನು ಕೂತಲ್ಲಿಯೇ ಅವರೂರನ್ನ ಇನ್ನೊಂದು ಮಜಲಿನಲ್ಲೇ ಪರಿಚಯಿಸಿಕೊಟ್ಟರು, ಸಾಹಿತ್ಯ ಯಾವಾಗಲೂ ಎಷ್ಟು ದೇಸೀಯತೆಯನ್ನ ತುಂಬಿಕೊಂಡು ಪ್ರಸ್ತುತವಾಗುತ್ತಾ ಹೋಗುತ್ತದೆಯೋ, ಅಷ್ಟೇ ತೀವ್ರವಾಗಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತಾ ಹೋಗುತ್ತದೆಂಬುದು ನನ್ನ ನಂಬಿಕೆ. ಆ ನಂಬಿಕೆಯನ್ನ ನಂದಕುಮಾರರು ಜೀವಂತವಾಗಿರಿಸಿದ್ದಾರೆ.

ಅವರ ಇನ್ನೊಂದು ಕಥಾಸಂಕಲನ ಬಿಳೇ ದಾಸ್ವಾಳ ಮೇಲೆ ಹೇಳಿದ ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತಿಗಳನ್ನಾ ಓದಿದ ನನ್ನ ಅನಿಸಿಕೆ. ಆ ಬೆಲೆಬಾಳುವ ಸರಕುಗಳಲ್ಲಿ ನಾ ಕಂಡ ಒಂದಷ್ಟನ್ನ ನಿಮ್ಮ ಮುಂದೆ ಹಂಚಿಕೊಳ್ಳಬಲ್ಲೇ, ನನ್ನ ಕಣ್ಣಿಗೆ ಕಾಣದೇ ಉಳಿದದ್ದು ಓದುವ ನಿಮಗೆ ಹೊಳೆಸೀತು.

ಹಣೆಪಟ್ಟಿ ಹೊತ್ತ ಕತಿ ‘ಬಿಳೇ ದಾಸ್ವಾಳ’. ಹೂವಿನಹಳ್ಳಿ ಅನ್ನೋ ಒಂದು ಊರು, ಆ ಊರಿಗೊಂದು ಹನುಮಪ್ಪನ ಗುಡಿ, ಆ ಗುಡಿಗೊಬ್ಬ ಬಡಪೂಜಾರಿ, ಎಲ್ಲಿ ಹನುಮನೋ ಅಲ್ಲೇ ನಿಂಗಪ್ಪನು ಅನ್ನೋ ಆ ಪೂಜಾರಿಯ ಶುದ್ದಭಕ್ತಿ, ಊರಿನ ದೈವದವರ ನೇಮದ ಕಾರಣದಿಂದ, ಹಾಗೇ ತನ್ನದೇ ನೇಮದ ಕಾರಣದಿಂದ ತಾನು ಆಚರಿಸೋ ಮಡಿ. ಕೆಲಸ ಕೈಬಿಟ್ ಹೋಗ್ತದಂತನೋ, ಮಡಿ ಕೆಟ್ಟರೆ ಭಕ್ತಿಯ ಶುದ್ದತೆ ಹಾಳಾಗತ್ತೆ ಅನ್ನೋಕ್ಕೋಸ್ಕರನೋ ಸಂಕಷ್ಟದ ಸ್ಥಿತಿಯಲ್ಲೂ ಸಂಸಾರವನ್ನೇ ಕಠಿಣವಾಗಿ ಕಾಣೋಕೆ ಹೊರಡೋದು ಬಡಪೂಜಾರಿ. ಆ ನಿಂಗಪ್ಪನ ಮಗಳು ಸಾವಿತ್ರಿಗಾಗಿ ಹೆಣ್ತನವನ್ನೇ ಅರ್ಪಿಸೋ ಬಿಳೇ ದಾಸ್ವಾಳದ ಗಿಡ. ಕತಿಗಾರರೇ ಹೇಳಬೇಕನ್ನೋ ವ್ಯಾಪಕ ಸತ್ಯನಾ ಅನಾವರಣ ಮಾಡಿಬಿಡುತ್ತೆ. ಈ ಕತಿಲೀ ವಿಶಿಷ್ಟವೆನಿಸಿದ್ದೂ ಹೂವಿನ ಗಿಡವೊಂದರ ಬದುಕನ್ನಾ ಹೇಳಿರೋದು, ಅದರಲ್ಲೂ ಅದು ಕಟ್ಟಿಕೊಡೋ ರೂಪಕ ವಿಭಿನ್ನ ಅನ್ನಿಸಿಬಿಡ್ತು. ನಾವು ಕೇವಲವೆನಿಸಿ ಹೊಸಕಿ ಹಾಕೋ, ಕಿತ್ತು ಬಿಸಾಡೋ, ಕಡಿದು ಬಿಸಾಕೋ ಹೂಗಿಡದ ಕತಿಯನ್ನಾ ಸುಂದರ ದುರಂತ ಕತಿಯಾಗಿ ಕಟ್ಟಿಕೊಡೋದು ಸಾಮಾನ್ಯ ಕಲ್ಪನೆಯಲ್ಲಾ.

‘ಗಣಪ್ಪನ ಕತಿ’ಯಲ್ಲಿ ದುರಗ, ಜೋಗವ್ವಾ, ಬಸವಿ, ಒಂದು ಸಮುದಾಯವನ್ನಾ ಪ್ರತಿನಿಧಿಸಿದರೆ, ವ್ಯವಸ್ಥೆ ಎಷ್ಟರ ಮಟ್ಟಿಗೆ ಅವರನ್ನಾ ಶೋಷಿಸುತ್ತದೆಂಬುದನ್ನ ಕತಿ ಗಡದ್ದಾಗಿ ವದರುತ್ತೆ( ಕತಿ ಓದೋರಿಗೆ ಈ ಪದಗಳು ಛಲೋ ಅರ್ಥಾಕವು). ದುರಗ ಪ್ರತಿ ಊರಲ್ಲೂ ಕಾಣಸಿಗ್ತಾನೆ, ಬಹುಶಃ ದೇವರು ಕಂಡರೆ ಈತನ ರೂಪದಲ್ಲೇ ಕಾಣ್ತಾನೇನೋ ಅನ್ನಿಸಿಬಿಡುತ್ತೆ ಅವ್ನ ಮುಗ್ದತೆ. ‘ನವನೀತ’ ಕತಿಯೂ ಕೂಡ, ಅಚಾನಕ್ ಆಗಿ ಬದುಕಲ್ಲಿ ಸಂಭವಿಸೋ ಘಟನೆಗಳು ಮನುಷ್ಯನ ಬದುಕಿನ ಶೈಲಿಯನ್ನಾ ಹೇಗೆಲ್ಲಾ ಬದಲಿಸಿಬಿಡಬಹುದು, ವ್ಯಕ್ತಿ ಹೇಗೆಲ್ಲಾ ಆ ವೈರುಧ್ಯಗಳಿಗೆ ಒಡ್ಡಿಕೊಳ್ಳಬಲ್ಲಾ ಅನ್ನುತ್ತಲೇ ಹೇಗೆಲ್ಲಾ ಒಡ್ಡಿಕೊಳ್ಳಬೇಕು ಅನ್ನೋದನ್ನಾ ತಣ್ಣಗೆ ಮನದ ಮೂಲೆಗೆ ಒಗೆದುಬಿಡುತ್ತೆ. ‘ಸೊನ್ನೆ’ ಕತಿಯಂತೂ ಸರಳವಾಗಿ, ವೀರಭಧ್ರಪ್ಪನೆಂಬ ಸಂಗೀತಗಾರನ ವೈಯಕ್ತಿಕ ಬದುಕಿನ ದುರಂತವನ್ನಾ ಹೆಣೆಯುತ್ತಾ ಕಲಾವಿದರ ಅಶಿಸ್ತು, ಮಾನಸಿಕ ಒತ್ತಡದಲ್ಲಿ ತೊಳಲಾಡೋದು ಆತನನ್ನಾ ದುರಂತ ನಾಯಕನನ್ನಾಗಿಸಿಬಿಡುತ್ತದೆ ಅನ್ನೋದು ಕಲಾವಿದನಾದ ನನಗಂತೂ ತುಂಬ ಹತ್ತಿರವಾಗಿಸಿತು. ಮಠದ ಅಜ್ಜಾರು ವೈರಾಗಿಯಾದರೂ ಕಣ್ಣೀರಿಡುವ ಸಂದರ್ಭವಂತೂ ಆ ಪಾತ್ರದ ವ್ಯಕ್ತಿತ್ವವನ್ನೇ ಎತ್ತರದಲ್ಲಿ ಕೂರಿಸಿಬಿಡುತ್ತದೆ. ಕಡೆಯಲ್ಲಿ ಮಗಾ ಕೇಳೋ ಪ್ರಶ್ನೆಗೆ ಉತ್ತರವೇ ಸಿಗದೇ ಖಾಲಿಯಾಗಿ ಉಳಿಯೋ ಕತಾನಾಯಕನ ದುರಂತ ವಿಚಿತ್ರವಾದ ಆಧ್ಯಾತ್ಮಿಕ ಸತ್ಯವನ್ನಾ ದರ್ಶಿಸುವಂತೆ ಮಾಡಿಬಿಡುತ್ತೆ. ‘ಎಂಟನೇ ಮೈಲಿನ ಗುಡ್ಡಳ್ಳಿ’ ಕತಿ ಕಲ್ಕತ್ತೆಯಿಂದ ಬರೋ ಪೋಸ್ಟ ಮಾಸ್ಟರ್ ಹಾಗೂ ನಿಗೂಢವಾಗಿ ಕಾಣೋ ಭಾಷೆ ಬರದ ಹೆಣ್ಣನ್ನಾ ಊರಿನವರೆಲ್ಲಾ ತಿರಸ್ಕರಿಸೋದು, ವೈಯಕ್ತಿಕ ಬದುಕಿಗೆ ಊರಿನವರು ಹಾಕುವ ನಿಬಂಧನೆಗಳು, ಅಣಕಿಸುವ ಬಗೆಯೆಲ್ಲಾ… ವ್ಯಕ್ತಿಸ್ವಾತಂತ್ರ್ಯ, ಮಾನವೀಯ ಮೌಲ್ಯಕ್ಕೆ ಕೊಡಲಿ ಪೆಟ್ಟಂತಾಗಿ ಕಂಡುಬಿಡುತ್ತೆ. ಆದರೆ ಈ ಕತಿಯಲ್ಲಿ ಬರೋ ಅವರಿಬ್ಬರ (ದುರ್ಗಾ ಮಂಜಣ್ಣ) ಸಂಬಂಧವು, ಅದರಿಂದಾಗೋ ಕತೆಯಲ್ಲಿನ ಬದಲಾವಣೆಗಳಿಗೆ ತಾರ್ಕಿಕವಾದ ಕಾರಣಗಳು ದೊರೆಯದೇ ಹೋದದ್ದು ಕೊಂಚ ಅಸ್ಪಷ್ಟವೆನಿಸಿದಂತೆ ಕಂಡಿತು. ಬಹುಶಃ ಬೇಕಂತಲೇ ಆ ರೀತಿ ಅಸಂಗತವಾಗಿ ಹೆಣೆದಿರಬಹುದೇನೋ ಎನ್ನಿಸಿದರೂ ಸಮಾಧಾನವಾಗೋಲ್ಲಾ. ದೂರದೂರಿಂದ ಆ ಇಬ್ಬರು ಬಂದದ್ದಾದರೂ ಯಾಕೆ? ಕೊಲೆಗೆ ಕಾರಣ? ಪೀಟರ್ ಯಾರು? ಇನ್ನೂ ಏನೇನೋ ಪ್ರಶ್ನೆಗಳು ಹಾಗೇ ಉಳಿದುಬಿಡುತ್ತವೆ. ಮಂಜಣ್ಣ ಮತ್ತು ದುರ್ಗಾರ ಸಂಬಂಧದ ಬಗ್ಗೆ ನಂತರ ಹೇಳುತ್ತೇನೆಂದು ಕತಿಗಾರ ಆರಂಭದಲ್ಲಿ ಹೇಳಿ ನಂತರ ಅಸ್ವಷ್ಟವಾಗಿ ವಿವರಿಸಿದ್ದು ಓದುಗರ ವಿವೇಚನೆಗೇ ಬಿಡಲಿಕ್ಕೆಂದೋ ಗೊತ್ತಿಲ್ಲಾ. ತಾರ್ಕಿಕವಾದ ಹಿನ್ನೆಲೆ ಕೊಟ್ಟಿದ್ದರೆ ಕತಿ ಇನ್ನೂ ಸೊಗಸಾಗಿರ್ತಿತ್ತು. ಆದರೆ ಕತಿಯಲ್ಲಿ ಬರೋ ಜೈಲುವಾಸಿ ಹೆಂಗಸರ ಹಿನ್ನೆಲೆ, ಆ ಗುಂಪಿನಲ್ಲಿ ನಂತರ ದುರ್ಗಾ ಬೆರೆತತದ್ದು, ಕಡೆಯಲ್ಲಿ ಕಾಣೋ ಮಹಿಷಾಸುರ ಮರ್ದಿನಿ ಶ್ಲೋಕ ಹೆಣ್ತನದ ಪರವಾದ ದನಿಯಂತೆ ಕಾಣುವುದಂತೂ ಸತ್ಯ.

ನಂದಕುಮಾರರ ಕತಾನಿರೂಪಣೆ ಈರುಳ್ಳಿ ಸಿಪ್ಪೆ ಸುಲಿದಂಗೆ ಪದರ ಪದರ ಬಿಚ್ಚಿಕೊಳ್ತಾ ಕಡೇಲಿ ಹೊಸದಿಕ್ಕಿನೆಡೆಗೆ ಸಾಗಿಸಿಬಿಡುತ್ತದೆ. ಸರಳವಾಗಿ, ಸಂಕ್ಷಿಪ್ತವಾಗಿ ಕತಿ ಹೇಳೋ ಶೈಲಿ ಸುಲಭವಾಗಿ ಅರ್ಥವಾಗ್ತಾ ಅಷ್ಟೇ ಆಳವಾಗಿ ನಮ್ಮನ್ನು ಕಾಡಿಸ್ತಾ ಹೋಗುತ್ತೆ.

ಹೆಣ್ತನ, ಊರು, ಊರಿಗೊಂದು ಕತಿ, ಊರ ಜನ, ಗುಡಿ, ಓದು, ಹಾಡು, ಸಂಬಂಧಗಳ ಹೊಯ್ದಾಟ. ಬದುಕಿನ ಸಂಘರ್ಷ, ಸವಾಲುಗಳು, ಮಡಿ, ಮೈಲಿಗೆ, ಮುಟ್ಟು, ದೇವರು, ಮುಗ್ಧತೆ, ಇನ್ನೂ ಬರ್ತಾ ಹೋಗ್ತಿರತಾವು ಈ ಕತಿಗುಳ್ ಒಳಗಾ… ಒಟ್ನಲ್ಲಿ ವ್ಯಾಪಕವಾದ ಸತ್ಯದ ಕತಿಗಳನ್ನಾ ಹೇಳೋಕ್ ಹೊರಟ ನಂದಕುಮಾರರು ಸಮರ್ಥವಾಗಿ ಹೇಳಿಬಿಟ್ಟಿದ್ದಾರೆ. ನೀವು ಓದೋದೊಂದೇ ಬಾಕಿ ಉಳಿದದ್ದು. ಈ ಕತಿಗಳ ಗುಚ್ಛ ಬಿಳೇ ದಾಸ್ವಾಳ ನಿಜಕ್ಕೂ ನಮ್ಮ ಕಣ್ಣಾದೀತು…

ಕಡೆದಾಗಿ ಕತಿಗುಳ ಬಗ್ಗೆ ಮುನ್ನುಡಿ ಬರೀ ಅಂತ ಕೊಟ್ಟಿದ್ದಕ್ಕೆ ನಂದಕುಮಾರರಿಗೆ ಧನ್ಯವಾದ ಹಾಗೂ ಶುಭಹಾರೈಕೆ. ಇನ್ನೊಂದಷ್ಟು ಕತಿಗುಳು ನಿಮ್ಮ ಕಡೀಂದ ಬರಲಿ…

ರಂಗನಾಥ ಶಿವಮೊಗ್ಗ ನಟ, ರಂಗಕರ್ಮಿ.

 

 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...