‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’

Date: 09-12-2021

Location: ಬೆಂಗಳೂರು


'ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ. ಸೃಜನಶೀಲ ಲೇಖಕನೊಳಗೆ ಒಬ್ಬ ವಿಮರ್ಶಕ ಇರುತ್ತಾನೆ ಎಂಬುದು ಆಧುನಿಕ ವಿಮರ್ಶೆಗೆ ಸಮ್ಮತವಾಗಿರುವ ಸಂಗತಿ ಎಂದೇ ಒಬ್ಬ ಬರಹಗಾರನಿಗೆ ತನ್ನ ಕೃತಿ ಪ್ರಕಟಣಾರ್ಹವೇ ಇಲ್ಲವೇ ಎಂಬುದು ಸ್ವಯಂವೇದ್ಯವಾಗಿರಬೇಕು' ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರು ತಮ್ಮ ಪತ್ರತಂತು ಮಾಲಾ ಅಂಕಣದಲ್ಲಿ ಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸುವಾಗ ತಮಗೆ ಬಂದ ಹಲವು ಗಣ್ಯರ ಪತ್ರಗಳ ಕುರಿತು ವಿಶ್ಲೇಷಿಸಿದ್ದಾರೆ.

ನಾನು ಬರವಣಿಗೆ ಶುರುಮಾಡಿದ್ದು ಕಥಾಸಾಹಿತ್ಯದಿಂದ. ನನ್ನ ಮೊದಲ ಕಾದಂಬರಿ ‘ಬಂಗಾರದ ಕನಸು'. ಆಗ ನನಗೆ ಸುಮಾರು 24ರ ಪ್ರಾಯ. ಸರಸ ಸಾಹಿತ್ಯದ ಶ್ರೀ ಗೋಪಾಲ್ ಇದನ್ನು ಪ್ರಕಟಿಸದರು. ಅದೇ ವರ್ಷ ನಾನು ‘ನಂಬಿಕೆಟ್ಟವರು', ‘ಸುಮಂಗಲಿ' ಕಾದಂಬರಿಗಳನ್ನು ಬರೆದೆ. ಪತ್ರಿಕಾ ವ್ಯವಸಾಯಕ್ಕೆ ಸೇರಿಕೊಂಡರೆ ನನ್ನ ಕಥಾಸಾಹಿತ್ಯ ರಚನೆಗೆ ಪ್ರೋತ್ಸಾಹ/ಅವಕಾಶಗಳು ಸಿಗಬಹುದೆಂದು ಪತ್ರಿಕೋದ್ಯಮದಲ್ಲಿ ವೃತ್ತಿಯನ್ನು ಅರಸಿ ಹೊರಟೆ. ಪತ್ರಕರ್ತನಾದೆ. ಆದರೆ ಅಲ್ಲಿ ನನಗೆ ಬಲುಬೇಗ ಭ್ರಮನಿರಸನವಾಯಿತು. ಸುದ್ದಿ ಕಥನಗಳ ಬರಹವೂ ಸೃಜನಶಿಲವಾದರೂ ಅವು ನಮ್ಮ ಪ್ರತಿಭೆಯನ್ನೆಲ್ಲ ದುಡಿಸಿಕೊಂಡ ಅಲ್ಪಾಯು ಬರಹಗಳಾಗಿರುತ್ತಿದ್ದವು. ಅಥವಾ ಮುಂದೆ ಎಂದೋ ಚರಿತ್ರೆಯ ಸಣ್ಣ ದಾಖಲೆಗಳಾಗಿರುತ್ತಿದ್ದವು. ಇವೆಲ್ಲದರ ಮಧ್ಯೆಯೂ ನನ್ನ ಕಥೇ ಬರೆಯುವ ತುಡಿತ ಕಡಿಮೆಯಾಗಿರಲಿಲ್ಲ. ಒಂದಷ್ಟು ಕಥೆಗಳನ್ನು ಬರೆದಿದ್ದೆ. ಒಂದೆರಡು ‘ಸಾಕ್ಷಿ', ‘ಸಂಕ್ರಮಣ'ಗಳಲ್ಲಿ ಪ್ರಕಟವಾಗಿದ್ದವು. ನಾನು ಪ್ರಜಾವಾಣಿ ಸೇರುವ ವೇಳೆಗೆ ‘ಸಾಕ್ಷಿ', ‘ಸಂಕ್ರಮಣ'ಗಳಲ್ಲಿ ಕನ್ನಡ ಕಾದಂಬರಿ ಕುರಿತ -ಎಂ.ಎಸ್.ಪುಟ್ಟಣ್ಣ, ದೇವುಡು, ಪ್ರಗತಿಶೀಲ, ನವ್ಯ ಕಾದಂಬರಿಗಳ ತಲಸ್ಪರ್ಶಿ ವಿಮರ್ಶಾ ಲೇಖನಗಳು ಪ್ರಕಟವಾಗಿದ್ದವು. ಈ ಕಾರಣದಿಂದಾಗಿಯೋ ಎನೋ ‘ಪ್ರವಾ' ಸೇರಿದಾಗ ನನಗೆ ದೈನಂದಿನ ವರದಿಗಾರಿಕೆ ಅಥವಾ ಜನರಲ್ ನ್ಯೂಸ್ ಡೆಸ್ಕ್ ಕೆಲಸದ ನಂತರ, ಪುಸ್ತಕ ವಿಮರ್ಶೆ ಹಾಗೂ ರಂಗಭೂಮಿ/ಸಿನಿಮಾ ವಿಮರ್ಶೆಯ ಅವಕಾಶಗಳು ಹೆಚ್ಚಾಗಿ ಒದಿಬರುತ್ತಿದ್ದವು. ನನ್ನ ವಿಮರ್ಶೆಯ ಬಗ್ಗೆ ಒಳಗಿನಿಂದ/ಹೊರಗಿನಿಂದ ‘ಪರವಾಗಿಲ್ಲ' ಎನ್ನುವ ಮಾನ್ಯತೆಯೂ ಬರಲಾರಂಭಿಸಿತು. ಹೀಗಾಗಿ ವಿಮರ್ಶೆ ಕಥಾ ಸಾಹಿತ್ಯವನ್ನು ಹಿಂದಿಕ್ಕಿತು. ನನ್ನ ಅರಿವಿಗೆ ಖಾತ್ರಿಯಾಗುವುದಕ್ಕು ಮೊದಲೇ ವಿಮರ್ಶಕ ಎನ್ನುವ ಹಣೆಪಟ್ಟಿ ನನ್ನ ಹೆಸರಿಗೆ ಅಂಟಿಕೊಂಡಿತ್ತು. ಈ ಮಧ್ಯೆ 1977ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ (ಆಗ ಡಾ.ಕೆ.ಮರುಳಸಿದ್ದಪ್ಪ ಅಧ್ಯಕ್ಷರಾಗಿದ್ದರು) ಫೆಲೋಶಿಪ್ ನೀಡಿ ನನ್ನ ವಿಮರ್ಶಕ ಪಟ್ಟವನ್ನು ಗಟ್ಟಿಗೊಳಿಸಿತ್ತು. ಪತ್ರಿಕೆಯ ಕೆಲಸ ಬೊಗಸೆಗಳ ಮಧ್ಯೆ ಕಥಾ ರಚನೆ ಹಿಂದೆ ಸರಿದಿತ್ತು. ನನ್ನ ಕಥೆಗಳು ಅಟ್ಟದ ಮೂಲೆ ಸೇರಿದ್ದವು.

1997ರಲ್ಲಿ ಇರಬೇಕು. ಮನೆಗೆ ಸುಣ್ಣಬಣ್ಣ ಮಾಡಿಸುವ ಕೆಲಸ ಸಾಗಿದ್ದಾಗ ನನ್ನ ಅಪ್ರಕಟಿತ ಬರಹಗಳ ಎರಡು ಕಟ್ಟುಗಳು ಹೊರ ಬಂದವು. ನಾನು ಆ ಕಟ್ಟುಗಳನ್ನು ಅವು ‘ಈ ದಿನಗಳಿಗೆ ಸಲ್ಲುವುದಿಲ್ಲ' ಎಂಬ ಭಾವನೆಯಿಂದ ವಿಲೇವಾರಿ ಮಾಡುವ ವಸ್ತುಗಳತ್ತ ಎಸೆದೆ, ಆದರೆ ಮೊದಲೇ ಇದನ್ನು ಗಮನಿಸಿದ್ದ ಸರಳಾ ಅದನ್ನೇಕೆ ಎಸೆಯುತ್ತೀರಿ, ನಿಮಗೆ ಬೇಡವಾದರೆ ನನಗಿರಲಿ " ಎಂದು ತೆಗೆದಿಟುಕೊಂಡಳು. ಸ್ವಲ್ಪ ದಿನಗಳ ನಂತರ ಗೆಳೆಯರ ಜೊತೆ ಮಾತನಾಡುತ್ತಿದ್ದಾಗ ನಾನು ಈ ಅಪ್ರಕಟಿತ ಆಸ್ತಿಯ ಗುಟ್ಟನ್ನು ರಟ್ಟು ಮಾಡಿದೆ. ಈ ಗೆಳೆಯರು ಅದನ್ನು ನಮ್ಮ ಕಡೆ ಕೊಡಿ ನೋಡೋಣ ಎಂದರು. ವಿಮರ್ಶಾ ಲೇಖನಗಳ ಕಟ್ಟನ್ನು ನರಹಳ್ಳಿಯವರೂ ಕಥೇಗಳ ಕಟ್ಟನ್ನು ಎಚ್ಚೆಸ್ವಿಯವರೂ ಒಯ್ದರು. ನಾನು ನಿಶ್ಚಿಂತನಾದೆ. ಕೆಲವು ದಿಗಳ ನಂತರ ಒಂದು ಮುಂಜಾನೆ ನರಹಳ್ಳಿಯವರು ಫೋನ್ ಮಾಡಿ "ಲೇಖನಗಳನ್ನು ಓದಿದ್ದಾಗಿಯೂ ಅವುಗಳನ್ನು ಸಂಕಲಿಸಿ ಪುಸ್ತಕರೂಪದಲ್ಲಿ ತರುವ ಅಗತ್ಯವಿದೆಯೆಂದೂ" ತಿಳಿಸಿದರು. ಅನಂತಮೂರ್ತಿಯವರ ‘ಭಾರತೀಪುರ' ಮತ್ತು ಭೈರಪ್ಪನವರ ‘ದಾಟು' ಕುರಿತ ಒಂದು ಲೇಖನವನ್ನು ಅವರು 'ಬೇಡ' ಎಂದಿದ್ದರು. ಸಪ್ನಾ ಈ ವಿಮರ್ಶಾ ಸಂಕಲನವನ್ನು ಪ್ರಕಟಿಸಲು ಮುಂದಾಯಿತು. ಹೀಗೆ ‘ಹಿಂದಣ ಹೆಜ್ಜೆ'ಬೆಳಕಿಗೆ ಬಂದಿತು.

ಎಚ್ಚೆಸ್ವಿ ಅವರೂ ನನ್ನ ಕಥೆಗಳ ಬಗ್ಗೆ ಪತ್ರ ಬರೆದಿದ್ದರು.
ಪ್ರಿಯ ಶ್ರೀ ಜಿ ಎನ್ ಆರ್
20-2-98

ನಿಮ್ಮ ಕಥೆಗಳನ್ನು ಓದಿದ ಮೇಲೆ ಬರೆಯೋಣ ಎಂದುಕೊಂಡೇ ಇಷ್ಟು ದಿನ ಆಯಿತು. ಮಧ್ಯೆ ಮಧ್ಯೆ ಬೇರ ಬೇರೆ ಒತ್ತಡ, ತಾಪತ್ರಯ ಕಾರಣ. ‘ನವ್ಯತೆ' ಈ ಎಲ್ಲ ಕಥೆಗಳ ಪ್ರಧಾನ ಭೂಮಿಕೆ. ಮನಸ್ಸನ್ನು ಬಿಚ್ಚುತ್ತಾ ಬಿಚ್ಚುತ್ತಾ ಹೋಗುವ ರೀತಿ ಪ್ರಧಾನವಾದೆ. ಜೊತೆಗೆ ಸಂಬಂಧಗಳ ಬಗೆಗೆ, ತನ್ನ ಅಸ್ತಿತ್ವದ ಮೂಲದ ಬಗ್ಗೆ ವ್ಯಕ್ತಿಯ ತಳಮಳ, ಬಗೆಯುವಿಕೆ ಮುಖ್ಯವಾಗಿದೆ. ಲೈಂಗಿಕ ಉದ್ವಿಗ್ನತೆ, ಬಯಕೆ, ಹತಾಶೆ ಇದೂ ಒಂದು ಪ್ರಧಾನ ಎಳೆ. ನಾರತೊಡಗಿರುವ ವ್ಯವಸ್ಥೆ, ಪರಂಪರೆಯ ಬಗೆಗಿನ ಅಸಹ್ಯ, ತಿರಸ್ಕಾರ ಇನ್ನೊಂದು ಮುಖ್ಯ ಎಳೆ. ಆದರೆ ಈ ಎಲ್ಲ ಸಂಗತಿಗಳನ್ನೂ ವ್ಯಕ್ತಿ ಕೇಂದ್ರದಲ್ಲಿಯೇ ಕೆದಕಲಾಗುತ್ತದೆ. ಇವು ಮುಖ್ಯವಾಗಿ ಅಂತರಂಗದ ಕಥೆಗಳಾದ್ದರಿಂದ ವಾಸ್ತವ, ಕಲ್ಪನೆ ಉದ್ದಕ್ಕೂ ತೆಕ್ಕೆ ಬೀಳುತ್ತವೆ.

ನನಗೆ ಹೆಚ್ಚು ಹಿಡಿಸಿದ ಕಥೆ: ‘ಹೆಜ್ಜೆಗಳು'. ಈಗಾಗಲೇ ತಡವಾಗಿದೆಯಾದರೂ, ಇದನ್ನು ಈಗಲೂ ಒಂದು ಪುಸ್ತಿಕೆಯಾಗಿ ಹೊರತರಬಹುದು ಎನ್ನಿಸುತ್ತದೆ. ಇಲ್ಲೂ ಭಾಷೆ ಕವಿತೆಯ ನೆಲೆಯಲ್ಲಿ ಸೂಕ್ಷ್ಮಗೊಳ್ಳುತ್ತಾ ವ್ಯಗ್ರತೆಯಲ್ಲಿ ಕಂಪಿಸುತ್ತಾ ಸಾಗುತ್ತದೆ. ಸ್ವರೂಪ, ಹಳದಿ ಮೀನು ಇಂಥವನ್ನು(ಗತಿಸ್ಥಿತಿ)ನೆನಪಿಸುವಂಥ ಭಾಷಾ ಶೈಲಿ. ದಾರಿ ಯಾವುದಯ್ಯ ಪರಾರಿಗೆ, ಇಂಡಿಯಾ ಮೈ ಇಂಡಿಯಾ ಇದಕ್ಕೆ ಉಪಷ್ಟಂಭಕಗಳಿದ್ದಂತೆ ಇವೆ.

ಭಾಷೆ ಮತ್ತು ಓಟದ ದೃಷ್ಟಿಯಿಂದ ‘ಋಣ' ತುಂಬ ಚೆನ್ನಾಗಿದೆ. ಬನ್ನಿ ದೀಪಗಳೇ ಭಾಷಾ ಶೈಲಿ ಮತ್ತು ವಸ್ತು ವಿನ್ಯಾಸದಲ್ಲಿ ಇದಕ್ಕೆ ಹತ್ತಿರವಾಗುವಂಥ ರಚನೆ. ‘ಆನಂದ ಮಠ' ಬಹಿರಂಗ ಜಗತ್ತಿನಲ್ಲಿ ಆಸಕ್ತಿತೋರುವ ವಿಭಿನ್ನ ಶೈಲಿಯ ಕಥೆ. ಗಟ್ಟಿಮುಟ್ಟಾದ ಕಥಾ ಹಂದರ ಇಲ್ಲಿದೆ. (ನಿಮ್ಮ ಬೇರೆ ಕಥೆಗಳಲ್ಲಿ ಇಲ್ಲದ್ದು).

‘ಜೋಕೆ ಕ್ರಾಂತಿಕಾರಿಗಳು ಬರುತ್ತಿದ್ದಾರೆ..' ಕ್ರೂಡಾಗಿದೆ,ಆಬ್ವಿಯಸ್ ಕೂಡ. ಸಂಗ್ರಹ ಹಾಕುವುದಾದರೆ ನೀವೇ ಇದನ್ನು ಬಿಡುತ್ತೀರಿ ಎಂದುಕೊಂಡಿದ್ದೇನೆ. ಈ ವ್ಯಕ್ತಿ ವ್ಯಂಗ್ಯ ಈಗಿನ ನಿಮ್ಮ ಮಾಗಿದ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಕಥೆಗಳನ್ನು ಓದಿದಾಗ ಸ್ಪಷ್ಟ ತೋರಿದ್ದು ಇಷ್ಟು. ನಿಮ್ಮ ಕಥೆಗಾರ ಶಕ್ತಿವಂತ. ಕವಿಯ ಭಾವಸೂಕ್ಷ್ಮ, ಭಾಷಾ ಸೂಕ್ಷ್ಮ ಉಳ್ಳವನು. ಈಗಿನ ನಿಮ್ಮ ಮನಸ್ಸಿನ ‘ಹದ'ದಲ್ಲಿ ನೀವು ಹೊಸ ಕಥೆಗಳನ್ನು ಬರೆದರೆ...?

ಇದು ನನ್ನ ತೀವ್ರ ಆಶೆ.
ಖಂಡಿತಾ ಬರೆಯಿರಿ.
ನಿಮ್ಮ ಪ್ರೀತಿಯ ಗೆಳೆಯ
ಎಚ್.ಎಸ್.ವೆಂಕಟೇಶ ಮೂರ್ತಿ

ಆದರೆ ವಿಮರ್ಶೆಗೆ ಕೂಡಿ ಬಂದ ಪ್ರಕಟಣ ಭಾಗ್ಯ ಕಥೆಗಳಿಗೆ ಕೂಡಿ ಬರಲಿಲ್ಲ. ಕಥೆಗಳು ಮತ್ತೆ ಮೂಲೆ ಸೇರಿದವು. ನಿವೃತ್ತಿಯ ನಂತರ ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ಅವರ ಪುಸಲಾವಣೆಯಿಂದ (ಆ ವೇಳೆಗೆ ಕಾಯ್ಕಿಣಿ ಮುಂಬಯಿ ನೌಕರಿ ತೊರೆದು ಬೆಂಗಳೂರಿಗೆ ಬಂದು 'ಭಾವನಾ' ಸಂಪಾದಕರಾಗಿದ್ದರು) ಕೆಲವು ಕಥೆಗಳನ್ನು ಬರೆದೆ. ಸುಪ್ತ ಚಿತ್ತದಲ್ಲಿ ಅಡಗಿಕೊಂಡಿದ್ದ ಕಥೆಗಾರನ ಕಾಟ ಜಾಸತಿಯಾಗಿ, ಒಮ್ಮೆ ನನ್ನ ಕಥಾ ಸಂಕಲನವೊಂದನ್ನು ಪ್ರಕಟಿಸಲು ಸಾಧ್ಯವೇ ಎಂದು ‘ಅಂಕಿತ'ದ ಮೊರೆ ಹೋದೆ. ಪ್ರಕಾಶ್ ಕಂಬತ್ತಳ್ಳಿ ಅಸ್ತು ಎಂದರು. 2011ರಲ್ಲಿ ನನ್ನ ಪ್ರಥಮ ಕಥಾ ಸಂಕಲನ ‘ಇವತ್ತು-ನಿನ್ನೆ' ಪ್ರಕಟವಾಯಿತು. ಇದರಲ್ಲಿ ಎಚ್ಚೆಸ್ವಿ ಆರಿಸಿದ ಕಥೆಗಳೂ ಇವೆ.

ಮುಂಬಯಿ ವಾಣಿ
2-3-98

ಪ್ರಿಯ ಶ್ರೀ ರಂಗನಾಥ ರಾವ್ ಅವರಿಗೆ,

ಇಂದಿನ ಪ್ರಜಾವಾಣಿಯಲ್ಲಿ 1997-98ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶೀಪ್ ಲಭಿಸಿರುವುದು ಓದಿದೆ. ಈ ಹಿಂದೆ ತಮ್ಮ ಕೆಲವು ವಿಮರ್ಶಾ ಬರಹಗಳನ್ನು ಚಿತ್ತಾಲರ ಮನೆಯಲ್ಲಿ ಓದಿದ್ದೆ. ಆಗಲೇ ತಮ್ಮ ಬರಹಗಳನ್ನು ಕುರಿತಂತೆ ಮೆಚ್ಚಿಕೊಂಡಿದ್ದೆ. ಇದೀಗ ತಮಗೆ ನಾಟಕ ಅಕಾಡೆಮಿಯ ಫೆಲೋಶಿಪ್ ಲಭಿಸಿರುವುದು ತುಂಬ ಸಂತೋಷವಾಯಿತು. ಅಭಿನಂದನೆಗಳು

ವಿಶ್ವಾಸಿ
ಶ್ರೀನಿವಾಸ ಜೋಕಟ್ಟೆ
ಸಹ ಸಂಪಾದಕ
ಮುಂಬಯಿ ವಾಣಿ

ಉಜಿರೆ
27-2-97

ಪ್ರಿಯ ಶ್ರೀ ರಂಗನಾಥ ರಾವ್ ಅವರಿಗೆ,

ನಾನು ಕಳಿಸಿರುವ ‘ನಿನ್ನೆ ನಾಳೆ ನಡುವೆ' ಲೇಖನ ಸಂಕಲನದ ಪ್ರತಿಗಳು ತಲುಪಿವೆಯಷ್ಟೆ. ಇಷ್ಟರಲ್ಲೇ ನೀವು ತ್ರಿ ಶಂಕು ಮತ್ತು ಇತರರು'ಗೆ ಮುನ್ನುಡಿ ಬರೆದಿರಬಹುದೆಂದು ಭಾವಿಸುತ್ತ, ನಿಮ್ಮ ಮುನ್ನುಡಿ ಮತ್ತು ನಾಟಕದ ಹಸ್ತಪ್ರತಿಯ ನಿರೀಕ್ಷೆಯಲ್ಲದ್ದೇನೆ.

ಕ್ಷೇಮವಲ್ಲವೆ?

ನಿಮ್ಮವನೇ,
ಕೆ.ಟಿ.ಗಟ್ಟಿ

ಸಣ್ಣಕಥೆ, ಕಾದಂಬರಿ, ಅಸಂಗತ ನಾಟಕಗಳ ಮಾತು ಬಂದಾಗ ಚದುರಂಗರನ್ನು ಮರೆತು ದಾರಿ ಸಾಗದು. ಅವರೊಂದು ಮೈಲಿಗಲ್ಲು. ಹಿರಿಯ ಸಾಹಿತಿಗಳ ಪೈಕಿ ಚದುರಂಗರಲ್ಲಿ ನನಗೆ ಹೆಚ್ಚಿನ ಸಲುಗೆ ಇತ್ತು. ಬಹುಶ: ಇದಕ್ಕೆ ಅವರು ನಮ್ಮ ಮೈಸೂರಿನವರು ಎನ್ನುವ ಕಾರಣದಿಂದಾಗಿ ಅಥವಾ ಅವರು ತೋರುತ್ತಿದ್ದ ಅಂತ:ಕರಣಪೂರ್ವಕ ಪ್ರೀತಿಯಿಂದಲೂ ಇರಬಹುದು. ಮೈಸೂರಿನ ಒಂಟಿಕೊಪ್ಪಲಿನಲ್ಲಿ ನಾನು ಮತ್ತು ಸರಳಾ ನಮ್ಮಿಬ್ಬರಿಗೂ ಸ್ವಾಗತವೀಯುತ್ತಿದ್ದ ಪೂರ್ವಿಕರ ಮನೆಯೊಂದಿತ್ತು. ಈ ಮನೆಗೆ ಎರಡು ಅಡ್ಡರಸ್ತೆ ಸಮೀಪದಲ್ಲೇ ಚದುರಂಗರ ಮನೆ. ನಾನು ಮೈಸೂರಿಗೆ ಹೋದಾಗಲೆಲ್ಲಾ ಚದುರಂಗ, ಹಾಮಾನಾ, ಜಿ.ಎಚ್.ನಾಯಕ್, ಡಿ.ಎ.ಶಂಕರ ಈ ಮೂವರನ್ನು ಭೇಟಿಯಾಗದೇ ಇರುತ್ತಿರಲಿಲ್ಲ. ಚದುರಂಗರ ಮನೆಗೆ ಹೋದಾಗ ಕಾಫಿಯೊಂದಿಗೆ ಸಾಹಿತ್ಯಕ ಚರ್ಚೆ ಸಾಗುತ್ತಿತ್ತು. ಹಿರಿಯರ ಅನುಭವದ ಮಾತುಗಳನ್ನು, ಸೃಜನಶೀಲತೆಯ ಪಲುಕುಗಳನ್ನು ನಾನು ತನ್ಮಯನಾಗಿ ಕೇಳಿ ಹೀರಿಕೊಳ್ಳುತ್ತಿದ್ದೆ. ಬೆಂಗಳೂರಿಗೆ ಬಂದಾಗ ಅವರು ನನಗೆ ಫೋನ್ ಮಾಡುತ್ತಿದ್ದರು. ಚಾಮರಾಜಪೇಟೆಯ ಚಂದ್ರಣ್ಣನ ಹೋಟೆಲಿನಲಿ ನಾವು ಭೇಟಿಯಾಗುತ್ತಿದ್ದೆವು. ಚದುರಂಗರು ಇತ್ತೀಚಿನ ಕೃತಿಗಳ ಬಗ್ಗೆ, ಕಲೆ ಸಾಹಿತ್ಯ ಸಿನಿಮಾಗಳಲ್ಲಿ ಹೊಸ ಪ್ರವೃತ್ವತಿಯ ಬಗ್ಗೆ, ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದರೇ ಹೊರತು ಅವರಿವರ ‘ಪರ'ವಹಿಸಿ ಮಾತನಾಡುತ್ತಿರಲಿಲ್ಲ. ಹೀಗಿರಲು ಒಮ್ಮೆ ಅವರಿಂದ ಬಂದ ಪತ್ರತವೊಂದು ನನ್ನನ್ನು ಚಕಿತಗೊಳಿಸಿತು.

ಡಾ.ಸುಬ್ರಮಣ್ಯರಾಜೇ ಅರಸ್
(ಚದುರಂಗ)

ಮೈಸೂರು

‘ಸುಧಾ' ಪತ್ರಿಕೆಯ ಸಂಪಾದಕರೂ ನನ್ನಾತ್ಮೀಯ ಗೆಳೆಯರೂ ಆದ ಶ್ರೀರಂಗನಾಥ ರಾಯರಿಗೆ ವಂದನೆಗಳು. ನನಗೆ ಹಾರ್ಟ್ ತೊಂದರೆಯಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯ ಇಂಟೆನ್ಸಿವ್ ಕೇರ್ ಯೂನಿಟ್‍ನಲ್ಲಿ ಸುಮಾರು ಒಂದು ತಿಂಗಳು ಶುಶ್ರೂಷೆ ಪಡೆಯುತ್ತಿದ್ದುದು ಮುಗಿದು ಈಗ ಮೈಸೂರಿನಲ್ಲಿದ್ದೇನೆ. ಈಗಲೂ ಎದೆಯ ಎರಡು ಭಾಗದಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತಲೇ ಇದೆ. ವೈದ್ಯರೇನೋ ಹೃದಯಕ್ಕೂ ಈ ನೋವಿಗೂ ಸಂಬಂಧವಿಲ್ಲ ಎಂದು ಧೈರ್ಯ ಹೇಳುತ್ತಾರೆ. ಗುಳಿಗೆಗಳನ್ನೂ ನುಂಗಿಸುತ್ತಾರೆ. ನೋವು ಮಾತ್ರ ಹೋಗಿಲ್ಲ. ಐ ಥಿಂಕ್ ಐ ವಿಲ್ ಹ್ಯಾವ್ ಟು ಲಿವ್ ವಿತಿಟ್. ನನ್ನ ಜೀವನದಲ್ಲಿ ಏನೇನೋ ಅನುಭವಿಸಿದ್ದೇನೆ. ಅವುಗಳಲ್ಲಿ ಇದೂ ಒಂದು ಎಂದು ಕೊಳ್ಳುತ್ತೇನೆ. ಬೇಸರವೆಂದರೆ ನಿಶ್ಶಕ್ತಿ. ಅಷ್ಟು ದೂರ ನಡೆದರೆ ಏದುಸಿರು ಬರುತ್ತದೆ. ಇರಲಿ ಬಿಡಿ. ನನಗೂ 82 ವರ್ಷ ಮುಗಿಯಿತಲ್ಲ!

ನನ್ನ ಕೋಟಲೆಗಳನ್ನು ಹೇಳಿ ನಿಮಗೆ ಬೇಸರಪಡಿಸಿದ್ದಕ್ಕಾಗಿ ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತೇನೆ...ನಾನೂ ನೀವೂ ಭೇಟಿಯಾಗಿ ಸುಮಾರ ಸಮಯವೇ ಕಳೆಯಿತಲ್ಲ. ನೆನಪಿದೆಯೇ-ಮಂಗಳೂರಿನ ಸಮಾರಂಭದಲ್ಲಿ ನಿಮಗೆ ಪ್ರೀತಿಪೂರ್ವಕ ಶಾಲು ಹೊದ್ದಿಸಿ ಸನ್ಮಾನ ಮಾಡಿದ್ದು! ಅದೊಂದು ರಸ ಗಳಿಗೆ. ಅನಂತರ ನನ್ನ ನಿಮ್ಮ ಭೇಟಿ ಆಗಲೇ ಇಲ್ಲ. ಈಗ ನಾನು ಬೆಂಗಳೂರಿಗೆ ಬರಲು ತೊಂದರೆಯಿದೆ, ನೀವೇ ಯಾಕೆ ಮೈಸೂರಿಗೆ ಬಂದು ಹೋಗಬಾರದು.

ಇರಲಿ. ಈಗ ನಿಮ್ಮಲ್ಲಿ ನನ್ನದೊಂದು ಅಹವಾಲು. ನನಗೆ ಬಂಧುವಿನಂತಿರುವ ಲೇಖಕಿಯೊಬ್ಬರಿದ್ದಾರೆ. ನೀವೂ ಕೇಳಿರಬೇಕು-ಶ್ರೀಮತಿ ಲತಾ ರಾಜಶೇಖರ್. ಇವರು ಈಗಾಗಲೇ ಕವಿಯಾಗಿ, ಕಾದಂಬರಿಕಾರ್ತಿಯಾಗಿ ಹೆಸರುಮಾಡಿದ್ದಾರೆ. ಮೂರು ಕವನ ಸಂಕಲನಗಳನ್ನೂ ಮೂರು ಕಾದಂಬರಿಗಳನ್ನೂ ಹೊರತಂದಿದ್ದಾರೆ. ಸುಜನಾ ಅವರು, ಇವರ ಕವನಗಳನ್ನು ಬಹುವಾಗಿ ಮೆಚ್ಚಿದ್ದಾರೆ. ಪ್ರೇಮಕ್ಕೆ ಸಂಬಂಧಪಟ್ಟ ಹಾಗೆ ಕವನಗಳನು ಗುರುತಿಸುವಾಗ. ಕೆ.ಎಸ್.ನರಸಿಂಹಸ್ವಾಮಿಯವರ ನಂತರ ಇವರೇ ಪ್ರಮುಖರು ಎಂದು ಪ್ರಶಂಸಿದ್ದಾರೆ. ಅನೇಕ ಕ್ಯಾಸೆಟ್‍ಗಳು ಹೊರಬಂದು ಜನಪ್ರಿಯವಾಗಿವೆ...ಕಾದಂಬರಿ ಕ್ಷೇತ್ರದಲ್ಲೂ ಇವರ ಸಾಧನೆ ಗಣನೀಯ. ಮೂರು ಕಾದಂಬರಿಗಳೂ ಒಂದಕ್ಕಿಂತ ಇನ್ನೊಂದು ಚೆನ್ನಾಗಿದ್ದು ವಸ್ತು ಹಾಗೂ ವಿನ್ಯಾಸದಲ್ಲಿ ಶ್ರೇಷ್ಠಮಟ್ಟದ್ದಾಗಿವೆ. ಇವನ್ನು ಜನತೆ ಹಾಗೂ ವಿಮರ್ಶಕರು ಮೆಚ್ಚಿದ್ದಾರೆ. ಇವರ ಕಾದಂಬರಿಗಳು ಬಹಳ ಮುಖ್ಯವಾಗಿ ಸಾಹಿತ್ಯದ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಜನಪ್ರಿಯತೆಯನ್ನು ಗಳಿಸಿವೆ.

ಈಗ ಇವರ ಲೇಖನಿಯಿಂದ ಇನ್ನೊಂದು ವಿಶಿಷ್ಟ ಕಾದಂಬರಿ ಹೊರಬಂದಿದೆ. ಇದು ಇವರು ಈ ಕಾದಂಬರಿ ಕ್ಷೇತ್ರದಲ್ಲಿ ಇಟ್ಟಿರುವ ಇನ್ನೊಂದು ದಿಟ್ಟ ಹೆಜ್ಜೆ. ಹೆಸರೂ ಕೂಡ ವಿಶಿಷ್ಟವಾಗಿದೆ- ‘ಸೂರ್ಯನ ನೆರಳು'!. ಇದನ್ನು ನಿಮ್ಮ ‘ಸುಧಾ'ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರೆ ನನಗೆ ಸಂತೋಷವಾಗುತ್ತದೆ.

ನಿಮ್ಮ ಮನೆಯವರಿಗೆ ನನ್ನ ಪ್ರೀತಿಯ ನೆನಕೆಗಳು.

ಇದರ ಬಗ್ಗೆ ನನಗೆ ಪತ್ರ ಬರೆಯಬೇಡಿ. ಬೇರೆಯವರಿಗೆ ನಾನು ಪತ್ರ ಬರೆದದ್ದು ತಿಳಿಯಬಾರದು, ಅಷ್ಟಕ್ಕೆ. ಇಷ್ಟೆಲ್ಲ ಯಾಕೆ ಬರೆದರೆಂದು ಬೇಸರಪಟ್ಟುಕೊಳ್ಳುವವರೂ ಇದ್ದಾರೆ. ಯಾಕೆಂದರೆ ಇಲ್ಲಿಯವರೆಗೆ ಯಾರ ಬಗ್ಗೆಯೂ ಈ ರೀತಿ ಬರೆದಿಲ್ಲ. ನಿಮ್ಮಿಂದ ಬಂದರೆ ಮುಚ್ಚಿಡಲಾಗುವುದಿಲ್ಲ. ಅವರೊಬ್ಬರಿಗೇ ಯಾಕೆ ಬರೆದಿರಿ, ನಮಗೂ ಬರೆಯಿರಿ ಎಂದು ದುಂಬಾಲು ಬೀಳುತ್ತಾರೆ, ಅದಕ್ಕೆ!

ನಿಮಗೂ ನಿಮ್ಮ ಸಂಸಾರಕ್ಕೂ ಯುಗಾದಿ ಸಕಲ ಸೌಭಾಗ್ಯಗಳನ್ನೂ ತರಲಿ ಎಂದು ಹಾರೈಸುವೆ ಪ್ರೀತಿಯಿಂದ
ನಿಮ್ಮ
ಚದುರಂಗ.

ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ. ಸೃಜನಶೀಲ ಲೇಖಕನೊಳಗೆ ಒಬ್ಬ ವಿಮರ್ಶಕ ಇರುತ್ತಾನೆ ಎಂಬುದು ಆಧುನಿಕ ವಿಮರ್ಶೆಗೆ ಸಮ್ಮತವಾಗಿರುವ ಸಂಗತಿ ಎಂದೇ ಒಬ್ಬ ಬರಹಗಾರನಿಗೆ ತನ್ನ ಕೃತಿ ಪ್ರಕಟಣಾರ್ಹವೇ ಇಲ್ಲವೇ ಎಂಬುದು ಸ್ವಯಂವೇದ್ಯವಾಗಿರಬೇಕು, ಪ್ರಕಟಣಾರ್ಹ ಎನ್ನುವ ಆತ್ಮವಿಶ್ವಾಸ ಅವರಲ್ಲಿ ಮೂಡಿರಬೇಕು. ಅಂಥ ಆತ್ಮವಿಶ್ವಾಸ ಮೂಡಿದವರು ಯಾರ ಶಿಫಾರಸು/ಪ್ರಭಾವಗಳಿಗೂ ಎಡತಾಕುವುದುದಿಲ್ಲ. ಶಿಫಾರಸು/ಪ್ರಭಾವಗಳ ಹಾದಿ ಹಿಡಿದವರನ್ನು ಅಪಕ್ವ(ಇಮ್ಮೆಚೂರ್ಡ್) ಎಂದೇ ಕರೆಯಬೇಕಾಗುತ್ತದೆ. ಪತ್ರಿಕೆಗಳಲ್ಲಿ ಪ್ರಭಾವ ನಡೆಯುತ್ತದೆ ಎಂಬುದು ತಪ್ಪು ಕಲ್ಪನೆ. ಯಾವುದೇ ಪತ್ರಿಕೆಗೆ ಸಾಹಿತ್ಯ ಕೃತಿಯೊಂದನ್ನು ಪ್ರಕಟಣೆಗೆ ಸ್ವೀಕರಿಸುವುದರಲ್ಲಿ ಕಾವ್ಯವೀಮಾಂಸೆಯಂಥ ಸ್ಥಾಪಿತ ಮಾನ ದಂಡಗಳ ಜೊತೆ ತನ್ನದೇ ಆದ ಮಾನದಂಡವಿರುತ್ತದೆ. ಪತ್ರಿಕೆಯ ನೀತಿ, ಅದರ ಓದುಗ ವರ್ಗ, ಆ ಓದುಗರ ‘ಬೇಕು-ಬೇಡ' ಇತ್ಯಾದಿ ಪ್ರೊಫೈಲ್, ಆಗಿನ ಸಾಮಾಜಿಕ ಸ್ಥಿತಿ, ಆ ಕಾಲದ ಒತ್ತಡಗಳು ಇವೆಲ್ಲವನ್ನು ಸಂಪಾದಕನಾದವನು ಗಮನಿಸಬೇಕಾಗುತ್ತದೆ. ಕಾವ್ಯಮಿಮಾಂಸೆಯ ಮಾನದಂಡಗಳ ಪ್ರಕಾರ ಸಾಹಿತ್ಯ ಕೃತಿಯಾಗಿ ಉತ್ತಮ, ಪ್ರಕಟಣಾಯೋಗ್ಯವೆನಿಸಿದರೂ ಸಂಪಾದಕನಿಗೆ ಬೇರೆ ಕಾರಣಗಳಿಂದಾಗಿ ತನ್ನ ಪತ್ರಿಕೆಯಲ್ಲಿ ಪ್ರಕಟಣೆಗೆ ಯೋಗ್ಯವಲ್ಲ ಎನ್ನಿಸಬಹುದು. ಇಂಥ ಸಂದರ್ಭದಲ್ಲಿ ಸಂಪಾದಕ, ಶಿಪಾರಸು ಮಾಡಿದವರು ಇಬ್ಬರಿಗೂ ಮುಜುಗರವಾಗುತ್ತದೆ. ಚದುರಂಗರಂತೆ ಇನ್ನೂ ಒಬ್ಬಿಬ್ಬರು ನನಗೆ ಶಿಫಾರಸು ಮಾಡಿದ್ದಿದೆ. ಅವರೆಲ್ಲರಿಗೂ ನಾನು ಇದನ್ನೇ ತಿಳಿಸಿದ್ದೇನೆ. ಚದುರಂಗರು ಎಂಥ ಒತ್ತಡ, ಸಂಕೋಚಗಳಿಂದ ಮೇಲಿನ ಪತ್ರ ಬರೆದಿದಾರೆ ಎನ್ನುವುದು ಅವರ ಪತ್ರದ ಕೊನೆಯ ಪ್ಯಾರಾದಿಂದ ವ್ಯಕ್ತವಾಗುತ್ತದೆ.

ಅಂಕಣದ ಹಿಂದಿನ ಬರಹಗಳು:
​​​​​​​
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...