ಸಾಹಿತ್ಯ-ಪತ್ರಿಕೋದ್ಯಮಗಳ ಯಾತ್ರೆಯಲ್ಲಿ ಸಿಕ್ಕ ಪ್ರೊತ್ಸಾಹ ಮತ್ತು ಗೌರವ

Date: 13-01-2022

Location: ಬೆಂಗಳೂರು


ನಾಡಿನ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ವಲಯದ ಹಲವು ಮಹತ್ವದ ವಿಚಾರಗಳನ್ನು ತಮ್ಮ ಪತ್ರಗಳ ಮೂಲಕ ನಮ್ಮ ಮುಂದಿಡುತ್ತಿದ್ದಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರ ‘ಪತ್ರತಂತು ಮಾಲಾ’ ಅಂಕಣದಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಯಾತ್ರೆಯಲ್ಲಿ ಅವರಿಗೆ ಸಿಕ್ಕ ಪ್ರೊತ್ಸಾಹ ಮತ್ತು ಆಪ್ತರ ಬೆಂಬಲದ ಕುರಿತು ವಿಶ್ಲೇಷಿಸಿದ್ದಾರೆ.

ಅಕ್ಷರ ಪ್ರಕಾಶನ, ನಿನಾಸಮ್ ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳನ್ನು ಕಟ್ಟಿ ಕನ್ನಡ ಸಾಹಿತ್ಯ, ರಂಗಭೂಮಿ, ಸಿನಿಮಾ ಮೊದಲಾದ ಕರ್ನಾಟಕದ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಿಗೆ ಹೊಸದಿಕ್ಕು, ಹೊಸಸಂಚಲನಗಳನ್ನು ತೋರಿದ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರನ್ನು ನಾನು ಮೊದಲು ಕಂಡದ್ದು 1968ರ ಸುಮಾರಿನಲ್ಲಿ. ಅವರ ಸ್ನೇಹ, ಸಾಹಿತ್ಯದ ತಿಳಿವಳಿಕೆ, ಸಾಂಸ್ಕೃತಿಕ ಕಾಳಜಿಗಳ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದ ನಾನು ಮೊದಲ ನೋಟದಲ್ಲೇ ಅವರು ತೋರಿದ ಪ್ರೀತಿ, ವಾತ್ಸಲ್ಯ, ನನ್ನ ಬರವಣಿಗೆ ಬಗ್ಗೆ ಆಡಿದ ಮಾತುಗಳಿಂದ ಮಾರುಹೋಗಿದ್ದೆ. ಅವರ ವ್ಯಕ್ತಿತ್ವದ ದೊಡ್ಡಗುಣವೆಂದರೆ ಎಲ್ಲರನ್ನು ಸಮಾನವಾಗಿ ಕಾಣುವ, ಮಾನವ ಘನತೆಯನ್ನು ಗೌರವಿಸುವ ಜೀವನದೃಷ್ಟಿ. ಪ್ರಾಮಾಣಿಕವಾಗಿ, ಮುಕ್ತವಾಗಿ ಎಲ್ಲರೊಡನೆ ಬೆರೆಯುವ, ಮಾತನಾಡುವ ಪ್ರವೃತ್ತಿ. ಇವುಗಳಿಂದ ಸುಬ್ಬಣ್ಣ ನನ್ನಂಥವರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದರು. ನನ್ನನ್ನು ಎರಡು ಮೂರು ಸಾಂಸ್ಕೃತಿಕ ಸಂದರ್ಭಗಳಲ್ಲಿ ಹೆಗ್ಗೋಡಿಗೆ ಕರೆಸಿಕೊಂಡಿದ್ದರು. ಒಮ್ಮೆ ಗೆಳೆಯರಾದ ಬಿ.ವಿ.ವೈಕುಂಠರಾಜು ಮತ್ತು ಜಿ.ಎಸ್.ಸದಾಶಿವ ಅವರ ಜೊತೆ ಅವರ ಮನೆಗೆ ಹೋಗಿ ಅಲ್ಲಿ ನಾನು ಸವಿದ ಪ್ರೀತಿವಾತ್ಸಲ್ಯದ ಆತಿಥ್ಯ ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ.1974ರ ಸುಮಾರಿನಲ್ಲಿ ನಾನು ಕನ್ನಡ ನವ್ಯಗದ್ಯದ ಬಗ್ಗೆ, ಹೊಸ ಕಾದಂಬರಿ ಬಗ್ಗೆ ಸಾಕಷ್ಟು ಬರೆದಿದ್ದೆ. ಆ ಲೇಖನಗಳ ಒಂದು ಸಂಕಲನ ಪ್ರಕಟಿಸುವ ಆಸೆ. ಆದರೆ ಪ್ರಕಾಶಕರು ಕಾಣಿಸಿರಲಿಲ್ಲ. ಒಂದು ಸಲ ಸುಬ್ಬಣ್ಣ ಬೆಂಗಳೂರಿಗೆ ಬಂದಾಗ, ಅವರ ಸಾಮಾನ್ಯಾಗಿ ವಾಸ್ತವ್ಯ ಹೂಡುತ್ತಿದ್ದ ಗಾಂಧಿನಗರದ ಹೋಟೆಲಿನಲ್ಲಿ ಭೇಟಿ ಮಾಡಿ ಬಹಳ ಸಂಕೋಚದಿಂದಲೇ ಅಕ್ಷರ ಪ್ರಕಾಶನದಿಂದ ನನ್ನ ಲೇಖನಗಳ ಸಂಕಲನ ಪ್ರಕಟಿಸುವುದು ಸಾಧ್ಯವೇ ಎಂದ ಕೇಳಿಕೊಂಡೆ.'ಲೇಖನಗಳನ್ನು ಕಳುಹಿಸಿಕೊಡಿ ನೋಡೋಣ" ಎಂಬುದು ಅವರ ತಕ್ಷಣದ ಪ್ರತಿಕ್ರಿಯೆಯಾಗಿತ್ತು. ನಾನು ತಡಮಾಡದೆ ಲೇಖನಗಳನ್ನು ಕಳುಹಿಸಿಕೊಟ್ಟೆ. ಒಂದೆರಡು ವಾರಗಳಲ್ಲೇ ಅವರಿಂದ ಪ್ರಕಟಿಸುವ ಉತ್ತರ ಬಂತು. ಹೀಗೆ ನನ್ನ ಪ್ರಪ್ರಥಮ ವಿಮರ್ಶಾ ಸಂಕಲನ "ಹೊಸ ತಿರುವು' ಪ್ರಕಟಗೊಂಡು, ಸಾಕಷ್ಟು ಚರ್ಚೆಗೊಳಪಟ್ಟು ಕನ್ನಡ ನವ್ಯ ವಿಮಶೇಯಲ್ಲಿ ನನಗೊಂದು ಚೂರು ಸ್ಥಳವನ್ನು ಕಲ್ಪಿಸಿಕೊಟ್ಟಿತು. ಇದು ಸಾಧ್ಯವಾದದ್ದು ಕೆ.ವಿ.ಸುಬ್ಬಣ್ಣನವರ ಸಾಹಿತ್ಯ ಪ್ರೀತಿ ಮತ್ತು ವಸ್ತುನಿಷ್ಠ ದೃಷ್ಟಿಯಿಂದ. ಇದಕ್ಕಾಗಿ ಹಾಗೂ ಸಾಹಿತ್ಯ-ಪತ್ರಿಕೋದ್ಯಮಗಳ ಯಾತ್ರೆಯಲ್ಲಿ ಅವರು ನೀಡಿದ ಪ್ರೋತ್ಸಾಹ, ಬೆಂಬಲಗಳಿಗಾಗಿ ನಾನು ಅವರಿಗೆ ಎಂದೆಂದಿಗೂ ಕೃತಜ್ಞ.

‘ಝೆನ್' ಅವರ ಆಸಕ್ತಿಗಳಲ್ಲಿ ಒಂದು ಸಾಕಷ್ಟು ಅಧ್ಯಯನಮಾಡಿ ಒಂದು ಪುಸ್ತಕವನ್ನೂ ಬರೆದಿದ್ದದರು. ನಿವೃತ್ತಿಯ ದಿನಗಳಲ್ಲಿ ನನ್ನ ಆಸಕ್ತಿಯೂ ಅತ್ತ ಹರಿಯಿತು. ಅಧ್ಯಯನ ಮಾಡುತ್ತಿದ್ದಾಗ ಝೆನ್ ಕಥೆ-ಕಾವ್ಯ-ಒಗಟುಗಳನ್ನು ಕನ್ನಡಕ್ಕೆ ಸವಿಸ್ತಾರವಾಗಿ ತರುವ ಆಸೆ ಹುಟ್ಟಿತು. ಇದಕ್ಕೆ ಪೂರಕವಾಗಿಯೋ ಎಂಬಂತೆ ಒಂದು ದಿನ ಸಂಜೆ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರನ್ನು ಭೇಟಿಯಾದಾಗ ಮಾತಿನ ಮಧ್ಯೆ ಅವರ "ಝೆನ್' ಎಂದರೆ ಏನು ಎಂದು ಕೇಳಿದರು. ಇದು ನನ್ನ ಝೆನ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ, ಝೆನ್ ಸಾಹಿತ್ಯ ಕೃತಿಯ ಪ್ರಕಟಣೆಗೆ ನಾಂದಿಯಾಯಿತು..ನಾನು ಸುಮಾರು ಒಂದು ವರ್ಷಕಾಲ ತೆಗೆದುಕೊಂಡು ಝೆನ್ ಬೌದ್ಧ ಪಂಥದ ಸಮಗ್ರ ಪರಿಚಯ, ಝೆನ್ ಕಥೆಗಳು, ಒಗಟುಗಳು ಮತ್ತು ಕವಿತೆಗಳನ್ನು ಒಳಗೊಂಡ ಪುಸ್ತಕ ಬರೆದುಕೊಟ್ಟೆ. 2004 ರಲ್ಲಿ `ಝೆನ್' ಪ್ರಕಟವಾಯಿತು. ಒಂದು ಪ್ರತಿಯನ್ನು ಅಂಜಿಕೆಯಿಂದಲೇ ಶ್ರೀ ಸುಬ್ಬಣ್ಣನವರಿಗೆ ಕಳುಹಿಸಿಕೊಟ್ಟೆ. ನನಗಿಂತ ಮೊದಲು `ಝೆನ್' ಅನ್ನು ಕನ್ನಡಕ್ಕೆ ಪರಿಚಯಿಸಿದ ಹೆಚ್ಚುಗಾರಿಕೆ ಅವರದಾಗಿತ್ತು. ನನ್ನ ಪ್ರಯತ್ನ ಅವರಿಗೆ ಹಿಡಿಸುತ್ತೋ ಇಲ್ಲವೋ ಎಂಬುದೇ ಅಂಜಿಕೆ. ಕೆಲವೇ ದಿನಗಳಲ್ಲಿ ಸುಬ್ಬಣ್ಣ ಅವರಿಂದ ಬಂದ ಈ ಪತ್ರ ನನ್ನಲ್ಲಿ ‘ಗೆದ್ದ’ ಭಾವವನ್ನು ಮೂಡಿಸಿತ್ತು.

ಕೆ.ವಿ.ಸುಬ್ಬಣ್ಣ
ನೀನಾಸಮ್,ಹೆಗ್ಗೋಡು.
ಪ್ರಿಯ ರಂಗನಾಥ ರಾಯರೆ,

ನೀವು ಪ್ರೀತಿಯಿಂದ ಕಳಿಸಿಕೊಟ್ಟ ನಿಮ್ಮ ‘ಝೆನ್' ಬಂತು. ಪೂರ್ತಾ ಓದಿದೆ. ಅಕ್ಷರನೂ ಓದಿದಾನೆ. ಬರವಣಿಗೆ ಸುಲಲಿತವಾಗಿ ಹಿಡಿಸಿತು. ನನ್ನ ಪುಸ್ತಕದಲ್ಲಿ ಝೆನ್ ಬಗ್ಗೆ ತುಂಬ ಚಿಕ್ಕದಾಗಿ ಬರೆದಿದ್ದೆ, ಕಥೆಗಳೂ ಕೆಲವೇ ಇದ್ದವು. ಇದು ಹೆಚ್ಚು ವ್ಯಾಪಕವಾಗಿದೆ, ಹೆಚ್ಚು ಉಪಯುಕ್ತವಾದೀತು. ನನ್ನದು ಹಿಂದೆ ಎರಡು ಮುದ್ರಣವಾಗಿ ಖರ್ಚಾಗಿತ್ತು. ಮತ್ತೆ ಮಾಡಲಿಲ್ಲ. ನೀವು ಮಾಡಿದ್ದು ಒಳ್ಳೆಯದಾಯಿತು. ಚೆನ್ನಾಗಿದ್ದೀರಲ್ಲ? ಈ ಕಡೆ ಬಂದರೆ ಹೆಗ್ಗೋಡಿಗೆ ಬನ್ನಿ. ಅಕ್ಷರ ನಮಸ್ಕಾರ ಹೇಳಿದ್ದಾನೆ.

ವಿಶ್ವಾಸದಿಂದ,
ಸುಬ್ಬಣ್ಣ

‘ಝೆನ್' ಪುಸ್ತಕವನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ನಲ್ಲಿ ನಡೆದ ಸಮಾರಂಭದಲ್ಲಿ ಮಿತ್ರರಾದ ಶ್ರೀ ಮಲ್ಲೇಪುರಂ ವೆಂಕಟೇಶ್ ಬಿಡುಗಡೆ ಮಾಡಿದರು. ರಂಗನಾಥರಾಯರಲ್ಲಿ ಈಗೇಕೆ ಇದ್ದಕ್ಕಿದ್ದಂತೆ ಝೆನ್ ಬೌದ್ಧಪಂಥದಲ್ಲಿ ಆಸಕ್ತಿ ಹುಟ್ಟಿತು ಎಂದು ಸಾಹಿತ್ಯ ವಲಯದ ಕೆಲವರು ಆಗ ಹುಬ್ಬೇರಿಸಿದ್ದುಂಟು. ಬಹುಶ: ಜೋಗಿಯೋ ‘ಜಾನಕಿ'ಯೋ, ಈಗೇಕೆ `ಝೆನ್' ಎಂಬ ಪ್ರಶ್ನೆಯೊಡ್ಡಿ ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇರಲಿ. ಓದು ಬರಹಗಳಿಗೆ ವಯಸ್ಸಿನ ಅಡ್ಡಿ ಇಲ್ಲವಲ್ಲ.`ಝೆನ್' ಮೆಚ್ಚುಗೆ, ಆಸಕ್ತಿಗಳಿಗೆ ಮೀಟುಗೋಲಾಗಿ ಜನಪ್ರಿಯವಾಯಿತು. ಗೆಳೆಯ ಕಲಾವಿದ ಚಂದ್ರನಾಥನ ಅರ್ಥ ಪೂರ್ಣವಾದ ಮುಖಪುಟ ಮತ್ತು ರೇಖಾಚಿತ್ರಗಳು ಪುಸ್ತಕದ ವರ್ಚಸ್ಸನ್ನು ಹೆಚ್ಚಿಸಿದ್ದವು. ಇದುವರೆಗಿನ ನನ್ನ ಪುಸ್ತಕಗಳಲ್ಲಿ ಅತಿ ಹೆಚ್ಚು ಮುದ್ರಣಗಳನ್ನು ಕಂಡ ಕೀರ್ತಿ ‘ಝನ್'ದು. 2021ರಲ್ಲಿ ಮೂರನೆಯ ಮುದ್ರಣ ಪ್ರಕಟವಾಯಿತು.

ಶಾಂತಾರಾಮ ಸೋಮಯಾಜಿ
ಮೇ8,04

ಪ್ರಿಯ ರಂಗನಾಥ ರಾವ್ ಅವರಲ್ಲಿ,

ನಿಮ್ಮ ಕಾಗದ ಬಂತು. ‘ಸಂಡೆ ಇಂಡಿಯನ್'ನಲ್ಲಿ ನಿಮ್ಮ ವಿಮರ್ಶೆ ಓದಿ ನಾನು ಬರೆದ ಪತ್ರ ತಲುಪಿರಬೇಕಲ್ವಾ? ನಿಮ್ಮ ಕಾಗದದಲ್ಲಿ ನೀವು ‘ನನ್ನ ಮರೆತಿಲ್ಲ'ಎಂದು ಅಚ್ಚರಿ ಸೂಚಿಸಿದ್ದೀರಿ. ನಾನು ಕತೆಗಾರನಾಗಿ ಬೆಳೆಯುವುದಕ್ಕೆ (ಸುಧಾ-ಪ್ರಜಾವಾಣಿ ಮೂಲಕ) ನೀವೂ ಕಾರಣರು. ಆ ಋಣ ಇರುವವರೆಗೆ ಮರೆಯುವುದು ಹೇಗೆ?ನಿರ್ಲಕ್ಷ್ಯ ಇರಬಹುದು, ಆದರೆ ಮರೆಯುವುದು ಅಷ್ಟು ಸುಲಭವಲ್ಲ, ಇರಲಿ.

ಕೆಲ ವರ್ಷಗಳ ಹಿಂದೆ ಪ್ರಕಟವಾದ ನನ್ನ ‘ವಾಸ್ತು'ಪುಸ್ತಕ ಪ್ರತಿಗಳು ಮುಗಿದು ಎರಡು ವರ್ಷಗಳಾಗಿವೆ. ಮರು ಮುದ್ರಣ ಮಾಡುತ್ತೇನೆಂದು ಪ್ರಕಾಶಕರು ಹೇಳಿದ ಮೇಲೆ ಸ್ವಲ್ಪ ತಿದ್ದಿ ಕಳಿಹಿಸಿದೆ. ಎರಡು ವರ್ಷಗಳಿಂದ ಅದು ಅವರಲ್ಲೇ(ಸಂವಹನ)ಕೊಳೆಯುತ್ತಿದೆ. ಅದನ್ನು ಪೂರ್ತಿ ರಿಪೇರಿ ಮಾಡಿ ಹೊಸದೊಂದು ಪುಸ್ತಕ ರೆಡಿ ಮಾಡುತ್ತಿದ್ದೇನೆ. ನವ ಕರ್ನಾಟಕ ಸಂಸ್ಥೆ ಪ್ರಕಟಿಸುವರೋ ನೋಡಬೇಕು. ಈಗ ಅದರಲ್ಲೇ ‘ಮುಳುಗಿದ್ದೇನೆ'. ಕತೆಗಳಿಗೆ (ಪತ್ರಿಕೆಗಳಿಂದ)ಗಿರಾಕಿಗಳು ಕಮ್ಮಿಯಾಗಿದ್ದಾರೆ.

ನಿಮ್ಮ
ಶಾಂತಾರಾಮ ಸೋಮಯಾಜಿ
********
ಪ್ರೊ.ಜಿ.ವೆಂಕಟಸುಬ್ಬಯ್ಯ
ಬೆಂಗಳೂರು
3-9-04

ಪ್ರಿಯ ರಂಗನಾಥ ರಾವ್ ಅವರೇ,
‘ಝೆನ್ ಕಥೆಗಳು, ಕವಿತೆಗಳು, ಒಗಟುಗಳ' ಪುಸ್ತಕವನ್ನು ತಾವು ಕೊಟ್ಟು ಬಹು ದಿಗಳಾದವು. ನಾನು ಯಾವುದೋ ಕರ್ತವ್ಯದಲ್ಲಿ ಸಿಕ್ಕಿ ನನ್ನ ಮೇಜಿನ ಮೇಲೇ ಇದ್ದ ಅದನ್ನು ಓದಲಾಗಿರಲಿಲ್ಲ. ನೆನ್ನೆ ಮತ್ತು ಈ ದಿನ ಬಿಡುವು ಸಿಕ್ಕಿ ತಮ್ಮ ಪುಸ್ತಕವನ್ನು ಪೂರ್ತಿ ಓದಿದೆ. ತುಂಬ ಪ್ರಭಾವಶಾಲಿ ಬರಹ.ಕೆ.ವಿ.ಸುಬ್ಬಣ್ಣನವರ ಪುಸ್ತಕಕ್ಕಿಂತ ಇಲ್ಲಿ ಹೆಚ್ಚಿನ ವಿಷಯಗಳಿವೆ. ಝೆನ್ ಬಗ್ಗೆ ತಾವು ಬರೆದಿರುವ ‘ಒಂದು ಅಧ್ಯಯನ'ಸಂಗ್ರಹವಾದರೂ ವಿಸ್ತಾರ ರಚನೆಯ ಸತ್ವಗಳಿಂದ ತುಂಬಿದೆ. ಈ ಗ್ರಂಥವನ್ನು ಒಮ್ಮೆ ಓದಿದರೆ ಸಾಲದು. ಆಗಿಂದಾಗ ಅಲ್ಲಲ್ಲಿ ಓದುತ್ತಿದ್ದರೂ ತುಂಬ ಸ್ವಾರಸ್ಯವಾಗಿ ಕಾಲವನ್ನು ಕಳೆಯಬಹುದು. ತಮ್ಮ ಭಾಷೆ, ಸರಳ, ನೇರ, ಪ್ರಭಾವಶಾಲಿ. ನನಗೆ ಅದನು ಹೇಳಲು ಸಂತೋಷವಾಗುತ್ತದೆ. ಝೆನ್ ಬಗ್ಗೆ ಇತರ ಗ್ರಂಥಗಳನ್ನು ಓದಬೇಕೆಂಬ ಆಸೆಯನ್ನು ನನಗೆ ಉಂಟುಮಾಡಿದೆ. ಒಳ್ಳೆಯ ಬರಹಕ್ಕೆ ಇದಕ್ಕಿಂತ ಮತ್ತೇನು ಪರಿಣಾಮ ಬೇಕು. ನನ್ನ ಅಭಿನಂದನೆಗಳನ್ನು ಸ್ವೀಕರಿಸಿ,

ಇಂತು ತಮ್ಮವ,
ಜಿ. ವೆಂಕಟಸುಬ್ಬಯ್ಯ
******
ತರಂಗ
ಮಣಿಪಾಲ

ಡಿಸೆಂಬರ್ 10,2007

ಮಾನ್ಯ ಶ್ರೀ ರಂಗನಾಥ ರಾವ್ ಅವರಿಗೆ ವಂದನೆಗಳು,
‘ತರಂಗ'ದ ಡಿಸೆಂಬರ್ 20ರ ಸಂಚಿಕೆಯಲ್ಲಿ ಉಡುಪಿ ಸಮ್ಮೇಳನಾಧ್ಯಕ್ಷ ಶ್ರೀ ಶೇಷಗಿರಿ ರಾವ್ ಅವರ ಕುರಿತು ನೀವು ಮಾಡಿದ ಸಂದರ್ಶನ -ಲೇಖನ ಪ್ರಕಟವಾಗಿದೆ. ಸಂಚಿಕೆಯ ಪ್ರತಿಯನ್ನು ಕಳುಹಿಸುತ್ತಿದ್ದೇನೆ.
ನಮ್ಮ ವಿನಂತಿಯ ಮೇರೆಗೆ ಶ್ರೀ ಶೇಷಗಿರಿರಾಯರ ಸುಂದರ ವ್ಯಕ್ತಿತ್ವವನ್ನೇ ‘ತರಂಗ'ಕ್ಕಾಗಿ ಮೊಗೆದು ಕೊಟ್ಟಿದ್ದೀರಿ. ಕೃತಜ್ಞತೆಗಳು. ನಿಮ್ಮ ಮೌಲಿಕ ಲೇಖನ ನಮ್ಮ ಪತ್ರಿಕೆಗೆ ಘನತೆ-ಗೌರವವನ್ನು ತಂದುಕೊಟ್ಟಿದೆ. ‘ತರಂಗ'ಕ್ಕೆ ಇನ್ನು ಮುಂದೆಯೂ ನೀವು ಲೇಖನಗಳನ್ನು ಬರೆದುಕೊಡಬಹುದೆ?

ನಿಮ್ಮ ವಿಶ್ವಾಸಕ್ಕೆ ಮತ್ತೊಮ್ಮೆ ಕೃತಜ್ಞತೆಗಳು

ನಿಮ್ಮ ವಿಶ್ವಾಸಿ
ಸಂಧ್ಯಾ ಎಸ್.ಪೈ
(ವ್ಯವಸ್ಥಾಪಕ ಸಂಪಾದಕರು)

*****
ಶ್ಯಾಮಸುಂದರ ಬಿದರಕುಂದಿ
29-03-2012

ಶ್ರೀ ಜಿ.ಎನ್.ರಂಗನಾಥರಾಯರಿಗೆ,

2011ರ ‘ಟಿ.ಎಸ್.ರಾಮಚಂದ್ರ ರಾವ್ ಪ್ರಶಸ್ತಿ' ನಿಮಗೆ ಪ್ರಾಪ್ತವಾದ ಸುದ್ದಿ ಓದಿ ಅತ್ಯಂತ ಖುಷಿ ಆಯಿತು. 40 ವರ್ಷದ ಹಿಂದೆ ನೀವು ಪತ್ರಿಕೋದ್ಯಮಕ್ಕೆ ಸೇರಿಕೊಂಡು ವಿವಿಧ ಮಟ್ಟಗಳಲ್ಲಿ ದಿನ-ವಾರ-ಮಾಸ ಪತ್ರಿಕೆಗಳನ್ನು ನಿರ್ವಹಿಸುತ್ತ ಬಂದಿದ್ದೀರಿ. ಯಾವುದೇ ತರಬೇತಿಯ, ಪದವಿಯ ಹಿನ್ನೆಲೆ ಇರದೆ ಕೇವಲ ಬರವಣಿಗೆ, ನಿರ್ವಹಣಾ ಸ್ವಂತಿಕೆಯ ಮೇಲೆ ನೀವು ಯಶಸ್ಸು ಸಂಪಾದಿಸುತ್ತ ಬೆಳೆದಿರಿ. ಆರಂಭದಲ್ಲಿ ಟಿಎಸ್ಸಾರ್(ವೈಕುಂಠರಾಜು,ವೈಎನ್ಕೆ) ಅವರ ಕುಲುಮೆಯಲ್ಲಿ ಆಯುಧಗಳನ್ನು ತಯಾರು ಮಾಡಿಕೊಂಡವರು ನೀವು. ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಜಾವಾಣಿ, ಸುಧಾ, ಮಯೂರಗಳು ವಹಿಸಿದ ಪಾತ್ರಕ್ಕೆ ನಿರ್ದೇಶನ ನಿಮ್ಮದೇ. ಸ್ವತ: ವಿಮರ್ಶಕರಾಗಿ ನೀವು ಬರೆದ, ಬೆಳೆಸಿದ ಸಾಹಿತ್ಯ ಕೂಡ ಉಲ್ಲೇಖನೀಯ ಸೇವೆ. ಎಷ್ಟೊಂದು ಶೈಲಿಗಳಲ್ಲಿ ಬರೆದಿರಿ, ವಿನೋದ, ಗಂಭೀರ, ವೈಚಾರಿಕ, ವಿಮರ್ಶೆ, ವ್ಯಕ್ತಿಚಿತ್ರ ಹೀಗೆ.

ಪತ್ರಿಕಾ ಸಾಹಿತ್ಯದ ಘನತೆ ಏರಲು ಕಾರಣರಾದ ನಿಮ್ಮನ್ನು ಹೃತ್ಪೂರ್ವಕ ಅಭಿನಂದಿಸುವೆ. ಅರವತ್ತು ತುಂಬಿದ್ದಕ್ಕೆ ಶುಭಾಶಯ.

ಶ್ಯಾಮಸುಂದರ ಬಿದರಕುಂದಿ,
ಹುಬ್ಬಳ್ಳಿ

*****
ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ

ಧಾರವಾಡ
13-7-2012

ಪ್ರಿಯ ರಂಗನಾಥ ರಾಯರಿಗೆ
ವಂದನೆಗಳು

ನೀವು ತುಂಬ ವಿಶ್ವಾಸ, ಪ್ರೀತಿಯಿಂದ ಎರಡು ಪುಸ್ತಕ- ‘ಅವಳು’ ಮತ್ತು ‘ಸಮುಚ್ಚಯ’-ಕೊಟ್ಟಿದ್ದೀರಿ. ಆಗಾಗ ಓದುತ್ತ ಇಂದು ಮುಗಿಸಿದೆ. ತುಂಬಿದ ಮನಸ್ಸಿನಿಂದ ಇಂದು ಬರೆಯುತ್ತಿದ್ದೇನೆ. ರವೀಂದ್ರನಾಥರ ಕಥೆಗಳ ಆಯ್ಕೆ ಮತ್ತು ನಿಮ್ಮ ಅನುವಾದ ಇಷ್ಟಪಟ್ಟೆ. ರವೀಂದ್ರ ಕಾವ್ಯಾತ್ಮಕ ಶೈಲಿಯಲ್ಲಯೇ ಕನ್ನಡವೂ ಗಂಗೆಯಾಗಿ ಹರಿದಿದೆ ಎಂಬಂಥ ಭಾವ. ಅಚ್ಚಿನ ದೋಷಗಳು ಕೆಲವು ಉಳಿದಿವೆ. ಮುಂದಿನ ಮುದ್ರಣದ ಹೊತ್ತಿಗೆ ತಿದ್ದಿಕೊಳ್ಳಬೇಕು.

‘ಸಮುಚ್ಚಯ' ಅಪರೂಪದ ಸಂಗ್ರಹ. ನಿಮ್ಮ 2-3 ವಿಮರ್ಶಾ ಕೃತಿ ನನ್ನಲ್ಲಿದ್ದವು. ಈಗ ಈ ಸಂಚಯದ ಮೂಲಕ ಎಲ್ಲವೂ ಸಿಕ್ಕಂತಾಯಿತು. ಕನ್ನಡ ಕಥಾ ಸಾಹಿತ್ಯ ಮತ್ತು ನಾಟಕಗಳನ್ನು ಕುರಿತು ನೀವು ಬರೆದ ಅಪರೂಪದ ಲೇಖನಗಳು ಇಲ್ಲಿವೆ. ನಿಮ್ಮ ನಿಷ್ಪಕ್ಷ ಚಿಂತನೆ, ಆಪ್ತ ಬರವಣಿಗೆ ಲೇಖಕರನ್ನೂ ಓದುಗರನ್ನೂ ಒಂದುಗೂಡಿಸುವ, ಹತ್ತಿರಕ್ಕೆ ತರುವ ಸ್ತುತ್ಯ ಪ್ರಯತ್ನ ಎಲ್ಲರೂ ಅನುಸರಿಸಬೇಕಾದ ರೀತಿ.

ಅಕೆಡಮಿಕ್ ವಲಯದವರು ಅಲಕ್ಷಿಸಿದ್ದು ನಿಜ. ಆದರೆ ನಿಮ್ಮ ಬರವಣಿಗೆಯ ಸತ್ವವನ್ನು ಅರಿಯದೆ, ತಮ್ಮ ಸೀಮಿತವರ್ತುಳದಲ್ಲಿಯೇ ಸುತ್ತುತ್ತಿರುವ ಅಂಥ ಅಧ್ಯಾಪಕ ವಿಮರ್ಶಕರೇ ಅಸ್ಪೃಶ್ಯರೆಂದು ನಾವು ಯಾಕೆ ಭಾವಿಸಬಾರದು? ಸಾಹಿತ್ಯ ವಿಮರ್ಶೆಯ ನಿಜವನ್ನು, ವ್ಯಾಪ್ತಿಯನ್ನು, ಸತ್ವವನ್ನು, ವಿಸ್ತಾರವನ್ನು ಅರಿಯದ ಅಂಥ ಕುಬ್ಜರ ಬಗ್ಗೆ ನೀವು ಯೋಚಿಸುವುದು, ಚಿಂತಿಸುವುದು ಅಗತ್ಯವಿಲ್ಲ ಅನಿಸುತ್ತದೆ. ಕೊನೆಗೂ ಉಳಿಯುವುದು ನಿಮ್ಮ ಬರವಣಿಗೆ, ಚಿಂತನೆ, ಕರ್ತೃತ್ವ. ಕಾಲ ಒಮ್ಮೊಮ್ಮೆ, ನಿಧಾನವಾದರೂ ಸರಿಯೇ ಎಲ್ಲವನ್ನೂ ಬೆಳಕಿಗೆ ತರುತ್ತದೆ. ನಿಮ್ಮ ಕೃತಿಯನ್ನು ಪ್ರೀತಿಯಿಂದ ನೋಡಿದ ಅವ್ವ ಈ ಮಧ್ಯೆ ಇಲ್ಲವಾದದ್ದನ್ನ ಇಂದು ಮತ್ತೆ ನೆನಪಿಸಿಕೊಂಡೆ. ಯಾಕೋ ನನಗೂ.. ಕಣ್ಣು ತೇವವಾದಂತೆ...

ಕೆಲವು ಸಂಬಂಧಗಳೇ ಹಾಗಿರುತ್ತವೆ.
ಮನೆಯಲ್ಲಿ ಎಲ್ಲರಿಗೂ ವಂದನೆ.
ನೀವು ಅನುವಾದಿಸಿಕೊಟ್ಟ ಪುಸ್ತಕ ಅಕಾಡೆಮಿಯವರು ಅಚ್ಚಿಗೆ ಕಳಿಸುತ್ತಿದ್ದಾರೆ.

ಮುಂದಿನ ಸಲ ಬೆಂಗಳೂರಿಗೆ ಬರುವಾಗ ತಿಳಿಸುತ್ತೇನೆ.ಸಾಧ್ಯವಾದರೆ ಈ ಸಲ ನಿಮ್ಮನ್ನು ಮನೆಗೆ ಬಂದು ಕಾಣಬೇಕೆಂದಿರುವೆ.

ಆರೋಗ್ಯ ಕಾಪಾಡಿಕೊಳ್ಳಿರಿ
ಎಂದು ಪ್ರೀತಿಯಿಂದ
ಸಿದ್ಧಲಿಂಗ ಪಟ್ಟಣ ಶೆಟ್ಟಿ
****
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು,
ಜಗದ್ಗುರು ಶ್ರೀ ವೀರಸಂಹಾಸನಾ ಮಠ,ಸುತ್ತೂರು ಶ್ರೀ ಕ್ಷೇತ್ರ
ಶ್ರೀ ಸುತ್ತೂರು ಮಠ(ಮೈಸೂರು ಶಾಖೇ)ಮೈಸೂರು-570025

20-4-2012

ಮಾನ್ಯ ಶ್ರೀ ರಂಗನಾಥ ರಾವ್ ಅವರಿಗೆ,
ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ನಿಮಗೆ 2010ನೇ ಸಾಲಿನ ಟಿ.ಎಸ್.ಆರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2012ನೇ ಸಾಲಿನ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ.

ಬಹುತೇಕ ಒಂದೇ ಸಮಯದಲ್ಲಿ ಎರಡು ವಿಭಿನ್ನ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಕ್ಕಾಗಿ ಹೀಗೆ ಪ್ರಶಸ್ತಿ ಪಡೆಯುತ್ತಿರುವ ಪ್ರತಿಭಾಸಂಪನ್ನರು ತುಂಬ ಅಪರೂಪ. ಈ ಸಾಧನೆಗಳಿಗಾಗಿ ನೀವಿ ಸಹಜವಾಗಿ ಅಭಿನಂದನೀಯರಾಗಿದ್ದೀರಿ. ನಿಮ್ಮ ಆಸಕ್ತಿ ವಿಶೇಷವಾದದ ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಅಧಿಕತರವಾಗಿ ಸಾಧನೆ ಮಾಡಲಿ ಅಗತ್ಯವಾದ ಶಕ್ತಿಸಾಮರ್ಥ್ಯಗಳನ್ನು ಭಗವಂತನು ನಿಮಗೆ ಸದಾಕಾಲ ಅನುಗ್ರಹಮಾಡಲೆಂದು ಹಾರೈಸುತ್ತೇವೆ.

ಶುಭಾಶಂಸನೆಗಳೊಂದಿಗೆ,
ಇಂತು ಭಗವತ್ಸೇವೆಯಲ್ಲಿ,
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು

***
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ಬೆಂಗಳೂರು

19-04-2012

ಶ್ರೀ ಜಿ.ಎನ್.ರಂಗನಾಥ ರಾವ್ ಅವರಿಗೆ,

ಪ್ರತಿಷ್ಠಿತ ಟಿ.ಎಸ್.ಆರ್ ಪ್ರಶಸ್ತಿ ಪುರಸ್ಕೃತರಾಗಿರುವ ತಮಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶುಭಾಶಯಗಳು.

ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸಿ ಸಾಹಿತ್ಯ ಲೋಕದಲ್ಲೂ ಪ್ರತಿಭೆ ಮೆರೆದು, ಪತ್ರಿಕೋದ್ಯಮ ಶಿಕ್ಷಣಕ್ಕಾಗಿ ಹಲವಾರು ಪುಸ್ತಕಗಳನ್ನು ರಚಿಸಿ ಸಂಪೂರ್ಣವಾಗಿ ಪತ್ರಿಕಾ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ. ಟಿ.ಎಸ್.ಆರ್ ಪ್ರಶಸ್ತಿ ನಿಮಗೆ ಅರ್ಹ ಪುರಸ್ಕಾರ. ಅದಕ್ಕಾಗಿ ದಯವಿಟ್ಟು ನನ್ನ ಶುಭಾಶಯಗಳನ್ನು ಸ್ವೀಕರಿಸಿ.

ವಂದನೆಗಳು
ನಿಮ್ಮ
ಗಂಗಾದರ ಮೊದಲಿಯಾರ್
ಅಧ್ಯಕ್ಷ

*******
ಉಮಾಶ್ರೀ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು
06-07-2015

ಕ್ಯಾಂಪ್:ಬೆಳಗಾನಿ

ಮಾನ್ಯ ಶ್ರೀ ಜಿ.ಎನ್.ರಂಗನಾಥ ರಾವ್ ಅವರಿಗೆ ವಂದನೆಗಳು.
ತಾವು 2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿರುವುದು ಅತ್ಯಂತ ಸಂತೋಷದ ಸಂಗತಿ. ಅದಕ್ಕಾಗಿ ತಮಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ.

ಅತ್ಯುತ್ತಮ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ತಮಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಎಂಬುದು ಅತ್ಯಂತ ಕಷ್ಟದ ಕೆಲಸ. ಮೂಲ ಕೃತಿಯ ಭಾವ, ಭಾಷೆ ಹಾಗೂ ಅರ್ಥಗಳನ್ನು ಗ್ರಹಿಸಿ ಅನುವಾದ ಮಾಡುವುದು ಸುಲಭವಲ್ಲ. ಅನುವಾದ ಜೊತೆಗೆ ತಮ್ಮ ಸೃಜನಶೀಲ ಕೃತಿಗಳಿಂದಲೂ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ. ಕನ್ನಡಕ್ಕೆ ರಾಷ್ಟ್ರಮಟ್ಟದ ಮನ್ನಣೆ ಸಿಗುವಲ್ಲಿ ನಿಮ್ಮ ಸಾಹಿತ್ಯ ಸೇವೆಯು ಗಮನಾರ್ಹವಾಗಿದೆ. ಕನ್ನಡದ ಯುವ ಬರಹಗಾರರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ನಿಮ್ಮ ಸಾಧನೆ ಸ್ಫೂರ್ತಿ ತುಂಬಲಿ ಎಂದು ಹಾರೈಸುತ್ತೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಪ್ರಶಸ್ತಿಯು ಸಮಸ್ತ ಕನ್ನಡಿಗರಿಗೆ ದೊರೆತ ಗೌರವ ಎಂದು ನಾನು ಭಾವಿಸಿದ್ದೇನೆ. ಸರ್ಕಾರದ ಪರವಾಗಿ ಮತ್ತೊಮ್ಮೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ಆದರಗಳೊಂದಿಗೆ,
ತಮ್ಮ ವಿಶ್ವಾಸಿ,
ಉಮಾಶ್ರೀ

ಈ ಅಂಕಣದ ಹಿಂದಿನ ಬರಹಗಳು:
ನಿವೃತ್ತಿಯ ನಂತರ ಬರವಣಿಗೆಯೇ ನನಗೆ ಆಸರೆಯಾಯಿತು
ಎಂದಿಗೂ ಒಳಗೊಳ್ಳದ ಅಕಾಡೆಮಿಕ್ ವಲಯಗಳು
ಪತ್ರಗಳನ್ನು ಬರೆಯುವುದು ನನ್ನ ವೃತ್ತಿಯ ಒಂದು ಕ್ರಮವನ್ನಾಗಿ ರೂಢಿಸಿಕೊಂಡೆ
ಅಂತ:ಸತ್ವಕ್ಕೆ ಪ್ರಾಣವಾಯು ತುಂಬುತ್ತಿದ್ದ ಪತ್ರಗಳು
‘ಸಾಹಿತ್ಯ ಕೃತಿಯೊಂದರ ವಿಮರ್ಶೆಯ ಮಾನದಂಡ ಅದರಲ್ಲೇ ಅಂತರ್ಗತವಾಗಿರುತ್ತದೆ’
ಹಿರಿಯರ ವಿಮರ್ಶಾತ್ಮಕ ಪತ್ರಗಳಿಂದ ಓದುಗರ ಅಪೇಕ್ಷೆ ತಿಳಿಯುವಲ್ಲಿ ಸಹಾಯವಾಗಿದೆ
‘ಜನಾಭಿಪ್ರಾಯ ರೂಪಿಸುವ ಸಂಪಾದಕೀಯ ಇಲ್ಲದ ಪತ್ರಿಕೆ ಆತ್ಮವಿಹೀನ’: ಜಿ.ಎನ್. ರಂಗನಾಥರಾವ್

‘ಮರಳಿ ಯತ್ನವ ಮಾಡು' ಎನ್ನುತ್ತಾ ಉತ್ಸಾಹ ತುಂಬುವ ಆಪ್ತರ ಪತ್ರಗಳು
ಹೊಸ ರಚನೆಗೆ ಪ್ರೇರಕವಾಗುವ ಪತ್ರಗಳು
ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

 

MORE NEWS

ಚರಿತ್ರೆ ಅಂದು-ಇಂದು...

18-01-2022 ಬೆಂಗಳೂರು

ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ...

ಒಬ್ಬರಲ್ಲ ಮೂವರು : ರಾಕ್ಸ್ ಮೀಡಿಯಾ...

17-01-2022 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ...

16-01-2022 ಬೆಂಗಳೂರು

‘ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟ...