ಸಾಹಿತ್ಯ ಸಮ್ಮೇಳನ ಮತ್ತು ಅವು ಹುಟ್ಟಿಸುವ ಪ್ರಶ್ನೆಗಳು…

Date: 26-01-2020

Location: ಬೆಂಗಳೂರು


ಈಗಾಗಲೇ 84 ಸಮ್ಮೇಳನ ನಡೆದಿವೆ. ಇವು ಉಳಿಸಿದ ಪ್ರಶ್ನೆಗಳೊಂದಿಗೆ 85ನೇ ಸಾಹಿತ್ಯ ಸಮ್ಮೇಳನವೂ ಮತ್ತಷ್ಟು ಪ್ರಶ್ನೆಗಳನ್ನ ನಮ್ಮ ಮುಂದಿಟ್ಟಿದೆ. ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಾಗ ತಲೆ-ತಲೆಮಾರುಗಳ ಅರಿವು ಅತ್ಯಂತ ಅವಶ್ಯಕ...

ಇಂದಿನ ಸಾಹಿತ್ಯ ಸಮ್ಮೇಳನಗಳು ಬದುಕಿನ ಶವಯಾತ್ರೆಗಳಂತೆ…

ಈ ಮಾತು ಕೇಳಿ ಒಂದರೆಕ್ಷಣ ಅಚ್ಚರಿ ಉಂಟಾಗಬಹುದು. ಹೌದು. ನೀವು ಓದುತ್ತಿರುವುದು ಸರಿಯಾಗಿದೆ. ಕಲಬುರಗಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ವಿವಿಧ ಲೇಖಕರ ಜೊತೆ ಬುಕ್‌ ಬ್ರಹ್ಮದಿಂದ ಮಾತನಾಡಿಸಿದಾಗ ಈ ರೀತಿಯ ಅಭಿಪ್ರಾಯ ವ್ಯಕ್ತವಾಯಿತು. 

ಅಧ್ಯಾಪಕ ಎಚ್‌.ಎಸ್‌. ರೇಣುಕಾರಾಧ್ಯ ಅವರು ಮಾತನಾಡಿ ‘ಇತ್ತೀಚಿನ ಸಾಹಿತ್ಯ ಸಮ್ಮೇಳನಗಳು ಜನರ ಬದುಕನ್ನ ಅಣಕಿಸುತ್ತವೆ. ಅವು ನಿಜಕ್ಕೂ ಬದುಕಿನ ಶವಯಾತ್ರೆಗಳಂತೆ ತೋರುತ್ತವೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಮಾತು ಸುಮ್ಮನೇ ಹುಟ್ಟಿಕೊಳ್ಳುವುದಲ್ಲಾ ಇಡೀ ಉತ್ತರ ಕರ್ನಾಟಕ ಮಳೆಗೆ ತತ್ತರಿಸಿ ಜನರ ಬದುಕು ಬೀದಿಗೆ ಬಂದಿದೆ, ಪ್ರಬುತ್ವದ ಕ್ರೂರ ಕಾಯ್ದೆಗಳ ವಿರುದ್ಧ ಇಡೀ ದೇಶ, ಜೊತೆಗೆ ರಾಜ್ಯದ ಮುಕ್ಕಾಲು ಪಾಲು ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ಅರ್ಧಕ್ಕೆ ನಿಂತ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ ನಮ್ಮ ಕಣ್ಣೆದುರಿಗೆ ಬಹುದೊಡ್ಡ ಆತಂಕವನ್ನೇ ತಂದು ನಿಲ್ಲಿಸಿದೆ. ರಾಜಕಾರಣದ ಕಪಿಮುಷ್ಟಿಯಲ್ಲಿ ಸಿಕ್ಕಿರುವ ಜೀವಪರ ಸಾಹಿತಿಗಳು, ಸಾಹಿತ್ಯಿಕ ಕ್ಷೇತ್ರ ಉಸಿರುಗಟ್ಟುತ್ತಿರುವ ದಿನಗಳಲ್ಲಿ ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 14ಕೋಟಿ ವೆಚ್ಚದಲ್ಲಿ ಜಾತ್ರೆಗೆ ಸಿದ್ಧತೆ ನಡೆಸುತ್ತಿದೆ. 

ಇಡೀ ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಂಸ್ಕೃತಿಕ ರಾಜಕಾರಣ, ಜಾತಿ ರಾಜಕಾರಣ, ಅಧಿಕಾರ ದಾಹ ಕಣ್ಣಿಗೆ ರಾಚುವಷ್ಟು ತೀವ್ರವಾಗಿ ಕಾಣುತ್ತಿದೆ ಎಂಬ ಅಭಿಪ್ರಾಯ ಅವರದು.

 ಒಂದು ಜಿಲ್ಲೆಯ ಸಾಹಿತ್ಯ ಸಮ್ಮೇಳನವನ್ನೇ ರಾಜಕೀಯದ ಕಾರಣಕ್ಕೆ ನಿಲ್ಲಿಸಿದರೂ ಕನ್ನಡ ಸಾಹಿತ್ಯ ಪರಿಷತ್ ತುಟಿಬಿಚ್ಚುವುದಿಲ್ಲ. ಸಾಹಿತಿಗಳ ಪರ ಒಂದು ಮಾತನ್ನೂ ಆಡುವುದಿಲ್ಲ. ಆ ಮಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಂಸ್ಕೃತಿಕ ರಾಜಕಾರಣ ಕಂಡುಬರುತ್ತಿದೆ. ಇಂಥಹದ್ದಕ್ಕೆಲ್ಲಾ ಪ್ರಬುತ್ವದ ಬೆಂಬಲವೂ ಧಾರಾಳವಾಗಿ ಸಿಗುತ್ತಿದೆ. ಇದು ನಿಜಕ್ಕೂ ಕನ್ನಡ ಸಾಹಿತ್ಯ ಲೋಕದ ದುರಂತ ಎನ್ನಬಹುದು ಎಂಬ ನಿಲುವು ವ್ಯಕ್ತಪಡಿಸಿದರು.

ಈ ಬೆಳವಣಿಗೆ ನೋಡುತ್ತಿದ್ದರೆ ದೇವನೂರು ಮಹಾದೇವರ ಮಾತೊಂದು ನೆನಪಾಗುತ್ತದೆ. ಅದು ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಮೌಲ್ಯಗಳನ್ನು ಶೋಧಿಸುವುದೆಂದರೆ ಹೆಣದ ರಾಶಿಯಲ್ಲಿ ಜೀವ ಹುಡುಕುವ ಕೆಲಸ ಮಾಡಿದಂತೆ’ ಎಂಬುದು. ಈ ಮಾತೇ ನಮ್ಮ ಪ್ರಶ್ನೆಗಳನ್ನು ಆತಂಕವನ್ನಾಗಿ ಪರಿವರ್ತಿಸುತ್ತದೆ.

ಸಾಹಿತ್ಯ ಸಮ್ಮೇಳನಗಳಿಗೆ ಪರಂಪರೆಯಿದೆ- ಡಾ. ಬಂಜಗೆರೆ ಜಯಪ್ರಕಾಶ್ 

ಸಾಹಿತ್ಯ ಸಮ್ಮೇಳನವೊಂದು ಸಾಹಿತ್ಯಕ್ಕೆ ಸಂಬಂಧಿಸಿದ, ಮತ್ತು ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಹಾಗೇ ನಾಡು-ನುಡಿಗಳ ಸ್ಥಿತಿ-ಗತಿಗಳ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿಯುತ ಕಾರ್ಯವನ್ನು ನಿರ್ವಹಿಸಬೇಕಿದೆ. ಜೊತೆಗೆ  ಸಾಹಿತಿಯಾದವನೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸಬೇಕಾಗುತ್ತದೆ. ಆ ಕಾರ್ಯವನ್ನು ಹಿಂದಿನ ಸಮ್ಮೇಳನಗಳು ಒಂದಿಷ್ಟು ಮಟ್ಟಿಗೆ ಸರಿದೂಗಿಸುಕೊಂಡು ಬರುತ್ತಿದ್ದವು ಎಂಬುದು ಅವರ ಅಭಿಪ್ರಾಯ. ಆದರೆ ಇತ್ತೀಚಿನ ಸಮ್ಮೇಳನಗಳು ಆ ರೀತಿ ಕಾರ್ಯ ನಿರ್ವಹಿಸುತ್ತಿಲ್ಲ, ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕಣ್ಣಮುಂದೆ ನಿಲ್ಲುವುದು ಸಾಂಸ್ಕೃತಿಕ ರಾಜಕಾರಣ ಮತ್ತು ಸಾಹಿತಿಗಳಲ್ಲಿ ಆದರ್ಶಗಳ ಕೊರತೆ. 

ಅಧಿಕಾರದ ಆಸೆಗೆ ಒಳಗಾಗುತ್ತಿರುವ ಸಾಹಿತಿಗಳು ಪ್ರಬುತ್ವದ ಪರವಾಗಿ, ಆಸ್ಥಾನ ಕವಿಗಳಂತೆ ವರ್ತಿಸುತ್ತಿದ್ದಾರೆ. ಜನಸಾಮಾನ್ಯರ ಮೂಕ ಅಳಲಿಗೆ ಕಿವಿಯಾಗಬೇಕಾಗಿದ್ದ ಸಮ್ಮೇಳನಗಳು ಉಳ್ಳವರ ಮೆರವಣಿಗೆಗಳಂತೆ ದುಂದುವೆಚ್ಚದಲ್ಲೇ ಮುಗಿಯುತ್ತಿವೆ. ಇನ್ನು ಸಾಹಿತ್ಯ ಸಮ್ಮೇಳನಗಳಿಗೆ ಜನರ ದುಡ್ಡನ್ನೇ ಅನುದಾನವನ್ನಾಗಿ ನೀಡುವ ಸರ್ಕಾರಗಳು ಸಮ್ಮೇಳನಗಳ ಮೇಲೆ ಅಧಿಕಾರ ಸಾಧಿಸುತ್ತಿವೆ. 

ಹಾಗೇ ನೋಡಿದರೆ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲೂ ಹಲವು ತೊಡಕುಗಳಿವೆ. ಸಾಹಿತ್ಯ ಸಮ್ಮೇಳನಗಳು ಜನಪರವಾಗಲು ಸರ್ಕಾರದ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಬೇಕಾಗುವ ಒಂದು ಪಾರದರ್ಶಕ ನೀತಿಯನ್ನ, ವಿಧಾನವನ್ನು ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯಕ್ಷೇತ್ರ ರೂಪಿಸಿಕೊಂಡಿಲ್ಲ. ಇಲ್ಲಿ ಕನ್ನಡ ಸಾಹಿತ್ಯ ಲೋಕದ ವಿಫಲತೆ ಕಂಡು ಬರುತ್ತದೆ. ಅದಕ್ಕೆ ಉದಾಹರಣೆ ಎಂದರೆ ಈವೆರೆಗಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಸ್ಥಿತಿ. ಹಾಗೇ ಕೈಗೊಂಡ ಯಾವ ನಿರ್ಣಯಗಳೂ ಪೂರ್ಣವಾಗಿ  ಜಾರಿಯಾಗಿಲ್ಲ. ಸಣ್ಣ ಪುಟ್ಟ ನಿರ್ಣಯ, ತಕ್ಷಣದ ವಿಚಾರಗಳಿಗೆ ಸ್ಪಂದಿಸುವ ಕೆಲ ಸರ್ಕಾರಗಳು ಆ ನಂತರ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳಿಗೆ ಮಹತ್ವವನ್ನೂ ನೀಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸರ್ಕಾರದ ಮೇಲೆ ಒತ್ತಡ ಏರುವಂತಹ, ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯರೂಪಿಸುವಂತಹ ವ್ಯವಸ್ಥಿತ ಸಂಘಟನೆಗಳ ಕೊರತೆ ಇದ್ದೇಇದೆ. ಇದರಿಂದಾಗಿ ಸಾಹಿತ್ಯ ಸಮ್ಮೇಳನ ಜನಪರವಾಗುವುದಕ್ಕಿಂತ ಹೆಚ್ಚು ಪ್ರಭುತ್ವದ ಪರ ನಿಲ್ಲುವ ಅಸಹಾಯಕತೆಗೆ ಒಳಗಾಗಿದೆ. 

ನಿಜವಾದ ಸಾಹಿತ್ಯದ ಗುಣ ಸದಾ ಜನರನ್ನ ಜಾಗೃತ ಗೊಳಿಸುವುದು, ಮತ್ತು ಒಳ್ಳೆಯ ಆಶಯಗಳೆಡೆಗೆ ಮುನ್ನಡೆಸುವಂತಹ, ಹಾಗೂ ಮುಂದಿನ ಚಲನಶೀಲತೆಗೆ ಬೇಕಾಗುವ ಒತ್ತಾಸೆಗಳನ್ನು ರೂಪಿಸುವುದೇ ಆಗಿದೆ. ಇಂತಹ ಸಾಹಿತ್ಯಿಕ ಕ್ಷೇತ್ರ ಒಂದು ಸರ್ಕಾರದ ವ್ಯಾಪ್ತಿಗೆ ಒಳಗಾದರೆ ಉಪಯೋಗವಿಲ್ಲ. ಏಕೆಂದರೆ ಸರ್ಕಾರ ಯಾವಾಗಲೂ ತನ್ನ ದೈನಿಕ ವ್ಯವಹಾರ ನಡೆಸುವ ಕ್ರಿಯಾಯೋಜನೆಯನ್ನು ಮಾತ್ರವೇ ಹೊಂದಿರುತ್ತದೆ.  ಆದರೆ ಅದರ ಆಚೆಗೆ ಕೂಡಾ ಜನರಿಗೆ ಸಿಗಬೇಕಿರುವ ಆಶೋತ್ತರಗಳಿಗೆ ಅವುಗಳನ್ನು ಸಾಕಾರಗೊಳಿಸಲು ಬೇಕಿರುವ ಪ್ರೇರಣೆಯನ್ನು ನೀಡೋದು ಸಾಹಿತ್ಯದ ಕೆಲಸ. ಅಂದರೆ ಸರ್ಕಾರಗಳ ಆಚೆಗೆ ಸಾಹಿತ್ಯ ಕ್ರಿಯಾಶೀಲವಾಗಿರಬೇಕು. ಜೊತೆಗೆ ಅದು ಸದಾ ಅಧಿಕಾರ ರಹಿತ ಜನರ ಪರವಾಗಿರಬೇಕು. ಸಾಹಿತಿಗಳೇ ಆಸ್ಥಾನ ಕವಿಗಳ ರೀತಿ ವರ್ತಿಸಿದರೆ ಇಡೀ ಸಾಹಿತ್ಯ ಕ್ಷೇತ್ರವೇ ದುರ್ಬಲಗೊಳ್ಳುತ್ತದೆ ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್. 

ಇನ್ನಾದರೂ ಸಾಹಿತ್ಯ ಸಮ್ಮೇಳನಗಳು ಸರ್ಕಾರಗಳ ಬಿಗಿಮುಷ್ಠಿಯಿಂದ ಬಿಡಿಸಿಕೊಂಡು, ಜೀವಪರವಾಗಿ ತುಡಿಯುವ ಮತ್ತು ಪ್ರಬುತ್ವದ ತಪ್ಪುಗಳನ್ನು ನೇರವಾಗಿ ತಿಳಿಸಿ ತಿದ್ದುವ, ಪ್ರಭುತ್ವಕ್ಕೆ ವಿರೋಧ ಪಕ್ಷವಾಗಿ  ಕಾರ್ಯ ನಿರ್ವಹಿಸುವ ಗಟ್ಟಿತನವನ್ನೂ, ಪಾರದರ್ಶನ ಯೋಜನೆಗಳನ್ನೂ ರೂಪಿಸಿಕೊಳ್ಳಲಿ ಎಂಬುದೇ ನಮ್ಮ ಆಶಯ.

~ಮಂಜುಳಾ ಹುಲಿಕುಂಟೆ 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...