ಸಮಾಜದ ಬಗೆಗೆ ಕಾಳಜಿಯುಳ್ಳವರೆಲ್ಲಾ ಓದಬೇಕಾದ ಕೃತಿ ಬದುಕೇ ಒಂದು ಸವಾಲು


ಯುವ ಲೇಖಕಿ ವಿಹಾರಿಕಾ ಅಂಜನಾ ಹೊಸಕೇರಿ ಅವರ ಹೊಸ ಕೃತಿ ‘ಬದುಕೇ ಒಂದು ಸವಾಲು’. ಈ ಕೃತಿಗೆ ಲೇಖಕ ಡಾ. ಗುರುರಾಜ ಕರಜಗಿ ಅವರು ಬರೆದ ಮುನ್ನುಡಿ ಹಾಗೂ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರು ಬರೆದ ಬೆನ್ನುಡಿಯ ಮಾತುಗಳು ನಿಮ್ಮ ಓದಿಗಾಗಿ.

ಅತ್ಯಂತ ಒಲವಿನ ವಿಹಾರಿಕಾ ಅಂಜನಾ,
ನೀನು ನನ್ನನ್ನು ಗೋಖಲೆ ಸಂಸ್ಥೆಯಲ್ಲಿ ಭೆಟ್ಟಿಯಾದದ್ದು, ನಿನ್ನ ಕನಸಿನ ಕೂಸು “ಬದುಕೇ ಒಂದು ಸವಾಲು” ಕೊಟ್ಟಿದ್ದು, ಮಾತನಾಡಿದ್ದು ತುಂಬ ಹಸಿರಾಗಿದೆ.
ನಿನ್ನ ಈ ಚೊಚ್ಚಲ ಕೃತಿ ನನ್ನ ಮನಮುಟ್ಟಿದೆ, ಮನಗೆದ್ದಿದೆ. ಇಪ್ಪತ್ತು ಲೇಖನಗಳಲ್ಲಿ ಇಪ್ಪತ್ತು ಭಾವಗಳ ಚಿತ್ರಣ. ವಯಸ್ಸಿಗೆ ಮೀರಿದ ಚಿಂತನೆಗಳ ಚಿತ್ತಾರ. ಕೆಲವಕ್ಕೆ ಭಾವದ ವೇಗ, ಮತ್ತೆ ಕೆಲವಕ್ಕೆ ಚಿಂತನೆಯ ನಿಧಾನ.

ವಿಷಯಗಳ ಆಯ್ಕೆ ಗಗನ ತುಂಬಿದ ಕಾಮನಬಿಲ್ಲಿನಂತೆ ವಿಸ್ತಾರ. ಪ್ರತಿಯೊಂದು ವಿಷಯದಲ್ಲಿ ಪುಟಿಯುವ ಆತ್ಮವಿಶ್ವಾಸ. ಇಲ್ಲಿ ಮೌಲ್ಯಗಳ ಮೆರವಣಿಗೆ ನಡೆದಿದೆ. ಆದರ್ಶಗಳ ಜೇನು ಸುರಿದಿದೆ. ಐವತ್ತರ ಮಾಗಿದ ಮಾತು ಹದಿನಾಲ್ಕಕ್ಕೇ ಮೂಡಿದೆ.

ಇದು ಭವಿಷ್ಯದ ಅನೇಕ ಗ್ರಂಥಗಳ ಸಾಧ್ಯತೆಗೆ ಬೆರಳು ತೋರಿದೆ.

ಮಗೂ, ನಿನಗೆ ಭಾಷೆ ಸಿದ್ಧಿಸಿದೆ, ಬರವಣಿಗೆಯ ಶೈಲಿ ಕುಶಲವಾಗಿದೆ.

ಇನ್ನು ಸರಳವಾಗಿ, ಸುಲಭವಾಗಿ ಬರೆಯಲು ಸಾಧ್ಯವೆ? ಯೋಚಿಸು, ಸರಳವಾಗಿ ಬರೆಯುವುದು ಬಲುಕಷ್ಟ. ಬರಹದಲ್ಲಿ ಸರಳತೆ ಬರುವುದಕ್ಕೆ ಮನದ ಸ್ಪಷ್ಟತೆ ಮುಖ್ಯ. ಸ್ವಂತ ಅನುಭವಗಳಿಗೆ ಧ್ವನಿಯಾಗುವ, ಮಾತಾಗುವ ಪ್ರಕ್ರಿಯೆ ಆನಂದದಾಯಕ.

ನಿನ್ನ ಈ ಮೊದಲ ಬರಹ ಅನೇಕ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಭರವಸೆ ಮೂಡಿಸಿದೆ. ನೀನು ಕಾಣುವ, ಓದುವ, ಅನುಭವಿಸುವ ಎಲ್ಲ ವಿಷಯಗಳ ಬಗ್ಗೆ ಮನದಲ್ಲಿ ಮಂಥನ ನಡೆಸು. ಬಂದ ನವನೀತವನ್ನು ಶೋಧಿಸಿ, ಪರಿಷ್ಕರಿಸಿ, ಬರಹಕ್ಕೆ ಇಳಿಸು. ಅದು ನಿನ್ನ ಎದೆಭಾರವನ್ನು ಇಳಿಸುವುದರೊಂದಿಗೆ, ಕೆಲವು ಓದುಗರ ಮನದ ತುಮುಲಗಳನ್ನು ಕಳೆದೀತು. ಅದೇ ಒಬ್ಬ ಲೇಖಕಿಯ ಬದುಕಿನ ಧನ್ಯತೆ.

ನಿನ್ನ ಬರಹದ ಯಾನ ತಡೆಯಿಲ್ಲದೆ ಸಾಗಲಿ.
ಸದಾ ಶುಭವಾಗಲಿ. ಇದು ಹಾರೈಕೆ, ಆಶೀರ್ವಾದ.
ಡಾ. ಗುರುರಾಜ ಕರಜಗಿ

ಅಧ್ಯಕ್ಷರು, ಸೃಜನಶೀಲ ಅಧ್ಯಾಪನಾ ಕೇಂದ್ರ

********
ನೀವು ಕೈಯಲ್ಲಿ ಹಿಡಿದಿರುವ ಈ ಪುಸ್ತಕ ಬದುಕೇ ಒಂದು ಸವಾಲು ಹದಿನೈದರ ಪ್ರಾಯದ ಕು.ವಿಹಾರಿಕ ಅಂಜನಾ ಹೊಸಕೇರಿ ಎಂಬುವಳದ್ದು, ಈಕೆಯ ಬರೆಹವನ್ನು ಓದುತ್ತಿದ್ದರೆ, ನಮಗೆ ಅಚ್ಚರಿ ಉಂಟಾಗುತ್ತದೆ. ‘ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ’ ಎಂಬ ಹಿರಿಯರ ಮಾತೊಂದುಂಟು. ಈಕೆಯ ಪ್ರಾಯ ಚಿಕ್ಕದಾದರೂ ಅಭಿಪ್ರಾಯ ಸಣ್ಣದಲ್ಲ ಎಂಬುದನ್ನು ಇಲ್ಲಿಯ ಬರೆಹಗಳು ಸಾಕ್ಷೀಕರಿಸುತ್ತವೆ. ಇದು ವಿಹಾರಿಕಾಳ ಚೊಚ್ಚಲ ಪುಸ್ತಕ. ಆದರೆ ಓದಿದ, ಚಿಂತಿಸಿದ ಮಾತುಗಳನ್ನು ತನ್ನ ಅನುಭವದ ಮೂಸೆಯಲ್ಲಿ ಒರೆಹಚ್ಚುವ ಸಾಹಸವನ್ನು ಇಲ್ಲಿ ಮಾಡಿದ್ದಾಳೆ. ವಿಚಾರಗಳ ಅಭಿವ್ಯಕ್ತಿ, ಪ್ರಬಂಧಗಳ ಒಟ್ಟು ಬಂಧ, ಭಾಷೆಯನ್ನು ಬಳಸುವಾಗಿನ ಎಚ್ಚರ ಮತ್ತು ಸಂಯಮ ಇವುಗಳನ್ನು ನಾವು ದಿಟಕ್ಕೂ ಮೆಚ್ಚಲೇ ಬೇಕು.

ಕು.ವಿಹಾರಿಕಾ ಅಂಜನಾ ಹೊಸಕೇರಿಯ ಈ ಪುಸ್ತಕವು ಆ ವಯಸ್ಸಿನ ಮಕ್ಕಳು ಓದುವುದಲ್ಲದೆ: ಸಮಾಜದ ಬಗೆಗೆ ಕಾಳಜಿಯುಳ್ಳವರೆಲ್ಲಾ ಓದಬೇಕೆಂದು ನಾನು ಬಯಸುತ್ತೇನೆ. ನಾವೆಲ್ಲರೂ ಓದಬಹುದಾದ ಬರೆಹಗಳನ್ನು ಈಕೆ ಬರೆದಿದ್ದಾಳೆ. ಈಕೆಯ ಬರೆಹದ ಶಕ್ತಿ ಎಂದೂ ಉಡುಗದಿರಲಿ: ಅದು ಉದಿತೋದಿತವಾಗಿ ಬೆಳೆಯುತ್ತಿರಲೆಂದು ಹಾರೈಸುತ್ತೇನೆ.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ವಿಶ್ರಾಂತ ಕುಲಪತಿ

ಬದುಕೇ ಒಂದು ಸವಾಲು ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...