ಸಮಾಜದ ಓರೆಕೋರೆಗಳ ಕನ್ನಡಿಯಂತಿರುವ ಕವನಗಳು : ಸಾವಿತ್ರಿ ಮುಜುಮದಾರ


“ಕವಿ ಪ್ರೇಮದ ಅಮಲಿನಲ್ಲಿ ಕೊಚ್ಚಿಹೋದವರಲ್ಲ. ಅದಕ್ಕೂ ಅನುಭಾವದ ಸ್ಪರ್ಶ ನೀಡಿದವರು. ಬದುಕಿನ ಆದರ್ಶಗಳನ್ನು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. “ಪರಿಶ್ರಮವಿಲ್ಲದ ಹಾದಿಯಲ್ಲಿ ಅದೃಷ್ಟ ಒಲಿದರೇನು ಫಲ” ಎನ್ನುತ್ತ ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ” ಎನ್ನುತ್ತಾರೆ ಹಿರಿಯ ಲೇಖಕಿ ಸಾವಿತ್ರಿ ಮುಜುಮದಾರ. ಅವರು ಯುವಲೇಖಕ ಚೇತನ್ ಕುಮಾರ್ ನವಲೆ ಅವರ ‘ಭವ್ಯಚೇತನ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ...

ಚೇತನ್ ಕುಮಾರ್ ನವಲೆ ಅವರ 30 ಕವನಗಳ ಸಂಕಲನ 'ಭವ್ಯಚೇತನ ಯುವ ಕವಿಯಲ್ಲಿ ಇರಬಹುದಾದ ಸಹಜ ಪ್ರೀತಿ ಪ್ರೇಮದ ಹಂಬಲ, ರೀತಿ-ನೀತಿಗಳ ಅನುರಣನ, ಆದರ್ಶ ನೈತಿಕತೆಗಳ ಅಪೇಕ್ಷೆ, ಸಮಾಜದ ಕಡು ವಾಸ್ತವದ ಎಚ್ಚರ ಮತ್ತು ಬದುಕಿನ ಏಳುಬೀಳಿನ ಅವಲೋಕನಗಳನ್ನು ಈ ಕವನಗಳಲ್ಲಿ ತುಂಬಿ ಕೊಟ್ಟಿದ್ದಾರೆ.

ವಯೋಸಹಜ ಪ್ರೀತಿಯನ್ನು ಪಕ್ವತೆಯ ಹದದಲ್ಲಿ ಮೀಯಿಸಿ ಕಾವ್ಯಕ್ಕಿಳಿಸಿದ್ದಾರೆ. ಹದಿಹರೆಯದ ದೇಹ ಉನ್ಮಾದಕ್ಕೆ ಅಕ್ಷರಗಳನ್ನು ಬಳಸದೆ ಮನದಾಳದ ಸಾವಿರದ ಪ್ರೀತಿಯ ಸರೋವರವನ್ನು ಕಟ್ಟಿಕೊಟ್ಟಿದ್ದಾರೆ. ಜಕಣಾಚಾರ್ಯನ ಶಿಲ್ಪಕ್ಕಿಂತ, ರವಿವರ್ಮನ ಚಿತ್ರಕ್ಕಿಂತ, ಕಾಳಿದಾಸನ ಶಾಕುಂತಲೆಗಿಂತ, ಇಂದ್ರನ ಸ್ವರ್ಗ ಸುಂದರಿಯರಿಗಿಂತ ಈ ಕವಿಯ ಪ್ರಿಯತಮೆ ಬ್ರಹ್ಮನ ವಿಶಿಷ್ಟ ಸೃಷ್ಟಿ ಎನ್ನುತ್ತಾ ಪ್ರೀತಿಯನ್ನು ಸೃಷ್ಟಿ ಸೊಬಗಿನ ಶ್ರೇಷ್ಟತೆಯೊಂದಿಗೆ ಮೆರೆಸಿದ್ದಾರೆ. ನಕ್ಷತ್ರ ಕ್ಷಿಪಣಿಗಳ, ಬಾಳೆಲೆ ಮೃಷ್ಟಾನ್ನಗಳ, ಹಸಿರೆಲೆ ಆಮ್ಲಜನಕದ ಹಾಗೆ ಪ್ರೀತಿಯನ್ನು ಹೃದಯದ ಪ್ರತಿಬಡಿತದೊಂದಿಗೆ ಸಮೀಕರಿಸಿ, ಪ್ರೀತಿಗೆ ಜಗದುಸಿರಿನ ಹಿರಿಮೆಯನ್ನು ನೀಡಿದ್ದಾರೆ.

ಹೀಗೆಯೇ 'ನೀನಿರದೆ', 'ಅಪ್ಸರೆ', 'ಮೊನಾಲಿಸಾ' 'ನಾಚುತಿಹಳಲ್ಲಿ', 'ಮರಣಮೃದಂಗ', 'ಮನ್ವಂತರದ ಪ್ರೀತಿ' ಮುಂತಾದ ಕವಿತೆಗಳಲ್ಲಿ ಪ್ರೀತಿಯ ಸಹಸ್ರ ಮುಖಗಳನ್ನು ತೆರೆದಿಟ್ಟಿದ್ದಾರೆ. “ಜ್ವಾಲೆಯೇ ಮಳೆಯಾಗಿ ಸುರಿದರೂ ರಕ್ಷಿಸುವ ನಿನ್ನ ನನ್ನಾಣೆ” ಎನ್ನುತ್ತಾ ಪ್ರೀತಿಗೆ ಮನ್ವಂತರದ ಚಿರಾಯುವನ್ನು ಕಲ್ಪಿಸುತ್ತಾರೆ. “ಸುಟ್ಟೆಸದ ಒಲವಿನದಿದು ಮತ್ತೊಂದು ಉದಯ, ಮಗದೊಮ್ಮೆ ಸುಡಲು ಎಂದು ಬರುವೆ?” ಎನ್ನುತ್ತಾ ಪ್ರೀತಿಗೆ ಪುಟವಿಟ್ಟ ಚಿನ್ನದ ಹೊಳಹನ್ನು ನೀಡಿ ಅಜರಾಮರಗೊಳಿಸಿದ್ದಾರೆ. ಈ ಕವಿಗೆ ರವಿಗಿಂತ ಅವಳನ್ನೇ ಧೇನಿಸುವ ಪಾವಿತ್ರ್ಯತೆ ಇದೆ. ಹೀಗೆ ಪ್ರೀತಿಗೆ ನಿರಂತರತೆಯನ್ನು, ಅಮರತ್ವವನ್ನು ಕಲ್ಪಿಸಿ ಕಾವ್ಯ ರಚನೆ ಮಾಡಿ ಕಾವ್ಯಕ್ಕೂ ಅಮರತ್ವವನ್ನು ನೀಡಿದ್ದಾರೆ.

ಈ ಕವಿ ಪ್ರೇಮದ ಅಮಲಿನಲ್ಲಿ ಕೊಚ್ಚಿಹೋದವರಲ್ಲ. ಅದಕ್ಕೂ ಅನುಭಾವದ ಸ್ಪರ್ಶ ನೀಡಿದವರು. ಬದುಕಿನ ಆದರ್ಶಗಳನ್ನು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. “ಪರಿಶ್ರಮವಿಲ್ಲದ ಹಾದಿಯಲ್ಲಿ ಅದೃಷ್ಟ ಒಲಿದರೇನು ಫಲ” ಎನ್ನುತ್ತ ಶ್ರಮ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. ಹಾವು ಮತ್ತು ಮನುಷ್ಯನ ನಡುವಿನ ಭಯವನ್ನು ಸಾವಯವ ಶಿಲ್ಪದಲ್ಲಿ ಕೆತ್ತಿ 'ಭಯವೇ ಧರ್ಮದ ಮೂಲ' ಎನ್ನುವುದು ವಾಸ್ತವದ ಚಿತ್ರಣವೂ ಹೌದು, 'ಸ್ವಾರ್ಥ ಸಮುದ್ರ'ದಲ್ಲಿ ಈಜುವವರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಮೌಲ್ಯಕೆಟುಕದೆ ಮೇಲೇರುವವರ ಬಗ್ಗೆ ಆಕ್ಷೇಪವೆತ್ತುತ್ತಾರೆ. ಧ್ಯೇಯವಿರದೆ ಮಂಡನೆ ಮಾಡುವವರನ್ನು"ರಟ್ಟಿನರಮನೆಯ ಕಟ್ಟಿ ಮೆರೆದಂತೆ' ಎಂದು ಹೀಗಳೆಯುತ್ತಾರೆ. 'ಬದಲಾವಣೆಯೊಂದೇ ಕೊನೆಯ ಆಶಾವಾದವನ್ನು ತಾಳಿದ್ದಾರೆ. “ಜೇನ್ನೊಣವು ನೊಣದೊಂದಿಗೆ ವಾದಿಸದೆಂದೆಂದೂ" ಎನ್ನುತ್ತ ನಡೆ-ನುಡಿಗಳ ಶುದ್ದೀಕರಣಕ್ಕೂ ನಾಂದಿ ಹಾಡುತ್ತಾರೆ.

ಇಲ್ಲಿಯ ಕವನಗಳು ಸಮಾಜದ ಓರೆಕೋರೆಗಳ ಕುರಿತು ಕನ್ನಡಿ ಹಿಡಿದಿವೆ, ಬಯಲಿಗೆಳೆದಿದೆ. “ಅತ್ತು ಇತ್ತ ಒಂದು ನಾಣ್ಯವೂ ತುತ್ತನಿತ್ತು ಎಂದೂ ಪೊರೆಯದು" ಎಂದು ಎಚ್ಚರಿಸುವ ಲಂಚದಾಸೆ ಎಂಬ ಕವನ ಮಾರ್ಮಿಕವಾಗಿದೆ. 'ಬೂಟುಕಾಲಿನಲ್ಲಿ ಉಳಿದ ಕಲ್ಲಿನಂತೆ' ಚರಿತ್ರೆಯಲ್ಲಿನ ಕ್ರೌರ್ಯ ಈ ಕವಿಯನ್ನು ಯಾವತ್ತೂ ಕಾಡುತ್ತಿದೆ. 'ಕಾಂಚಣ ಒಂದೇ ಮುಖ್ಯ' ಎನ್ನುವ ಮನುಜರ ಅರ್ಥರಹಿತ ಬದುಕಿಗೆ ಧಿಕ್ಕಾರ ಹೇಳಿದ್ದಾರೆ. “ಕಳೆದು ಹೋದ ನಮ್ಮನ್ನೇ ಮರಳಿ ಪಡೆಯುವುದು ಹೇಗೆ” ಎಂದು ಚಿಂತಿಸುತ್ತಾರೆ. ಕೃತಕವಾಗಿ ಬದುಕುವ ಬುದ್ಧಿವಂತ ಮೂರ್ಖರ ಲಕ್ಷಣಗಳನ್ನು ಕವನಗಳಲ್ಲಿ ತೆರೆದಿಟ್ಟಿದ್ದಾರೆ.

'ಪುನೀತ ರಾಜಕುಮಾರ' ಬಗ್ಗೆ ಅಪಾರ ಅಭಿಮಾನವನ್ನು ಹೊಂದಿರುವ ಇವರು ಎರಡು ಕವನಗಳಲ್ಲಿ 'ಅಪ್ಪು'ವಿನ ವ್ಯಕ್ತಿತ್ವದರ್ಶನವನ್ನು ಮಾಡಿಸುತ್ತಾರೆ. ರೈತನ ಬಗ್ಗೆ ಧನ್ಯತೆಯನ್ನು ಸೂಚಿಸುತ್ತಾ “ಬೆಳಗಾಗಿದೆ ಎಂದು ಸೂರ್ಯನಿಗೆ ತಿಳಿಹೇಳಿ ಎಚ್ಚರಿಸುವವನೇ ರೈತ” ಎನ್ನುವಲ್ಲಿ ಕೃಷಿಯ ಮಹತ್ವ ಎದ್ದು ಕಾಣುತ್ತದೆ. “ಕಳೆದ ಕೊಂಡಿಯ ಕೀಲಿ ಹುಡುಕಿದ ಆಪತ್ಬಾಂದವ ಅಪ್ಪ” ಎಂದು ತಂದೆಗೆ ಕೃತಕೃತ್ಯರಾಗಿದ್ದಾರೆ.

ಈ ಕವಿಯ ಕಾವ್ಯಬಂಧ ಸದೃಢವಾಗಿದೆ. ಮೂರು-ನಾಲ್ಕು ಸಾಲುಗಳಲ್ಲಿ ಕಾವ್ಯ ಕಟ್ಟಿಕೊಳ್ಳುತ್ತದೆ. ತಾನು ಕಂಡ ಮೂರ್ತ ಪ್ರಪಂಚವನ್ನು ಪ್ರತಿಮೆ ಪ್ರತೀಕಗಳಾಗಿ ಕಟ್ಟಿಕೊಡುವಲ್ಲಿ ಇವರು ಸಿದ್ಧಹಸ್ತರು. ಚಪ್ಪಲಿ, ಕಾಮನಬಿಲ್ಲು, ಹಾವು-ಏಣಿ, ಕರ್ಪೂರ, ಒಡೆದ ಕನ್ನಡಿ, ತೂತಿನ ದೋಣಿ ಹೀಗೆ ಸಹಜ ವಸ್ತುಗಳೇ ಇವರ ಕಾವ್ಯದಲ್ಲಿ ಮಾನವೀಕರಣಗೊಳ್ಳುತ್ತವೆ. ಉಪಮೆ ರೂಪಕಗಳಾಗಿ ಕಾವ್ಯಸೌಧ ನಿರ್ಮಾಣಗೊಳ್ಳುತ್ತದೆ. ನವೋದಯದ ಜಾಡಿನಲ್ಲಿ ರೂಪುಗೊಳ್ಳುವ ಕವನಗಳು ನವ್ಯದ ಅಸಂಗತತೆಯನ್ನು ಪ್ರಗತಿಶೀಲದ ಕಟುವಾಸ್ತವವನ್ನು, ಬಂಡಾಯದ ವೈಚಾರಿಕತೆಯನ್ನು ಮೈದುಂಬಿಕೊಂಡು ಬೆಳೆದು ನಿಂತಿದೆ.

ಕಾವ್ಯಬಂಧದಲ್ಲಿ, ವಸ್ತುವಿಷಯದ ಆಯ್ಕೆಯಲ್ಲಿ, ಸಾಹಿತ್ಯ ಗುಣದಲ್ಲಿ ಸಾರ್ಥಕವನ್ನು ಪಡೆಯುತ್ತಿರುವ ಇವರು 'ಭರವಸೆಯ ಕವಿ' ಎಂದು ಹೇಳಬಯಸುತ್ತೇನೆ.

- ಸಾವಿತ್ರಿ ಮುಜುಮದಾರ

MORE FEATURES

ಮಹಾಭಾರತ ಕೃತಿಯನ್ನು ಓದಲು ಪ್ರೇರೇಪಿಸಿದ ಕಾದಂಬರಿ : ಕಾರ್ತಿಕೇಯ

27-03-2023 ಬೆಂಗಳೂರು

"ಈ ಕಾದಂಬರಿಯನ್ನು ಮುಗಿಸಿ ಎಷ್ಟೋ ದಿವಸಗಳು ಸರಿದುಹೋಗಿದೆ, ಆದರೆ ಮನಸ್ಸಿನಲ್ಲಿರುವ ಯಯಾತಿ, ಶರ್ಮಿಷ್ಠೆಯರನ್ನು ಬೀ...

ಜನರ ಯೋಚನಾ ಶಕ್ತಿ ಬದಲಿಸುವ ಕೇಂದ್ರ ನಾಟಕ : ಮೊಹಮ್ಮದ್ ಅಜರುದ್ದೀನ್

27-03-2023 ಬೆಂಗಳೂರು

" ರಂಗಭೂಮಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಜನರ ಜೀವನಕ್ಕೆ ಅನುಗುಣವಾಗಿರುತ್ತವೆ. ಜನರ ಯೋಚನಾ ಶಕ್ತಿಯನ್ನು ಬದಲಿಸ...

ಹಸ್ತಿನಾವತಿ ಓದಿದ ನಂತರ ಅನೇಕ ಬಯಕೆಗಳು ನನ್ನನು ಕಾಡುತ್ತಿದೆ: ರಂಜನಿ ರಾಘವನ್

26-03-2023 ಬೆಂಗಳೂರು

"ಯಾವುದೇ ಸಮಸ್ಯೆಗೆ ಸೋಶಿಯಲ್ ಮಿಡಿಯಾ ನಮಗೆ ತಕ್ಷಣ ಪ್ರತಿಕ್ರಿಯೆ ಮಾಡಲು ಜಾಗಮಾಡಿಕೊಡುತ್ತದೆ, ಆದರೆ ಅದೇ ಸತ್ಯವಲ್...