ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ

Date: 11-08-2022

Location: ಬೆಂಗಳೂರು


“ಶಾಸನ ಪ್ರಕಟಣೆಯ ಇತಿಹಾಸದಲ್ಲಿ ದಶಕಗಳ ಅವಧಿಯಲ್ಲಿ ಆಗೊಂದು ಈಗೊಂದು ಸಂಪುಟಗಳು ಬೆಳಕು ಕಾಣುತ್ತಿದ್ದ ಸಾಂಸ್ಥಿಕ ಪ್ರಕಟಣೆಗಳ ಕ್ಷೇತ್ರಕ್ಕೆ ಈ ಎಂಟು ಸಂಪುಟಗಳ ಏಕಕಾಲಿಕ ಖಾಸಗಿ ಪ್ರಕಟಣೆ ಒಂದು ಮಾದರಿಯಾಗಿದೆ” ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಸಮಕಾಲೀನ ಪುಸ್ತಕ ಲೋಕ ಅಂಕಣದಲ್ಲಿ ಷ. ಶೆಟ್ಟರ್ ಅವರ ’ಮೊದಲ ಸಹಸ್ರಮಾನದ ಕನ್ನಡ ಶಾಸನಗಳು’ ಕೃತಿಯ ಬಗ್ಗೆ ಬರೆದಿದ್ದಾರೆ.

ಮೊದಲ ಸಹಸ್ರಮಾನದ ಕನ್ನಡ ಶಾಸನಗಳು-ಎಸ್. ಶೆಟ್ಟರ್

ಇತಿಹಾಸ ಅಧ್ಯಯನ ಹಾಗೂ ಕಲಾ ಇತಿಹಾಸ ಅಧ್ಯಯನ ಕ್ಷೇತ್ರದ ಜಾಗತಿಕ ವಿದ್ವಾಂಸರ ಸಾಲಿನಲ್ಲಿ ಡಾ. ಷ. ಶೆಟ್ಟರ್ (11.02.1935-28.02.2020) ಅನನ್ಯ ಹೆಸರು. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಶಾಸನಶಾಸ್ತ್ರ, ದರ್ಶನಶಾಸ್ತ್ರ, ಸಾಹಿತ್ಯ ಸೇರಿದಂತೆ ಹಲವು ಅಧ್ಯಯನ ಶಿಸ್ತುಗಳು ಸಂಗಮಿಸಿದ್ದ ಪಾಂಡಿತ್ಯ ಶೆಟ್ಟರ್ ಅವರದು. ಇದೇ ಕಾರಣಕ್ಕೆ ಅವರ ಅಭಿವ್ಯಕ್ತಿಯ ಹರಹು ಕೂಡ ವಿಸ್ತಾರವಾದುದು. ಯಾವುದೇ ವಿಷಯವನ್ನು ಆಯ್ದುಕೊಂಡರೂ ಅವುಗಳ ಸಮಗ್ರ ಸ್ವರೂಪದ ಅಧ್ಯಯನ ಮತ್ತು ಅದರ ಫಲವಾಗಿ ಏಕವಿಷಯ ಗ್ರಂಥಗಳ ರಚನೆ, ಕಲಾ ಇತಿಹಾಸ ಅಧ್ಯಯನಕ್ಕೆ ಸಾಂಸ್ಥಿಕ ರೂಪ ಕೊಡುವ ಪ್ರಯತ್ನ, ಪ್ರಕಟಿತ ಶಾಸನಗಳ ಪುನರಧ್ಯಯನ ಹಾಗೂ ಹೊಸದರ ಶೋಧ, ಜೊತೆಗೆ ಶಿಲ್ಪ-ದೇವಾಲಯಗಳ ಶೋಧನೆ, ಐತಿಹಾಸಿಕ ಆಕರಗಳ ಕ್ರೋಢೀಕರಣ, ಅನುವಾದ-ಸಂಶೋಧನ ಯೋಜನೆಗಳ ಅನುಷ್ಠಾನ, ಹಲವು ಹುದ್ದೆಗಳ ಸಮರ್ಥ ನಿರ್ವಹಣೆ ಹೀಗೆ ಗುರುತರ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಪ್ರೊ. ಶೆಟ್ಟರ್ ಕನ್ನಡ ನಾಡಿನ ಬಹುಶ್ರುತ ಪಂಡಿತರ ಸಾಲಿನಲ್ಲಿ ನಿಲ್ಲುವವರು. ಅವರ ಅಧ್ಯಯನದ ಒಂದು ಮುಖ್ಯ ಎಳೆಯನ್ನಾಗಿ ಗುರುತಿಸಬಹುದಾದುದು; ‘ಮೊದಲ ಸಹಸ್ರಮಾನದ ಕನ್ನಡ ನಾಡು-ನುಡಿ’ಯ ಅಧ್ಯಯನ. ಐದಾರು ದಶಕಗಳ ಅಧ್ಯಯನದ ಫಲಿತವಾಗಿ ಇದನ್ನು ಹಲವು ಹಂತಗಳಲ್ಲಿ ಅವರು ಸಾಧಿಸಿದ್ದಾರೆ.

ಕನ್ನಡ ಪುಸ್ತಕಲೋಕದ ಒಂದು ವಿಸ್ಮಯಕಾರೀ ಘಟನೆಯಾಗಿ ಇದೀಗ ಪ್ರಕಟವಾಗಿರುವ ಅವರ ‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು’ ಕೃತಿಶ್ರೇಣಿ ಯ ಎಂಟು ಸಂಪುಟಗಳಿವೆ. ಮೊದಲನೆಯ ಸಹಸ್ರಮಾನದ ಕಾಲಾವಧಿಯಲ್ಲಿ ಬರೆಯಲಾದ 2020 ಶಾಸನಗಳ ಸಮಗ್ರ ಅಧ್ಯಯನವನ್ನು ಇವು ಒಳಗೊಂಡಿವೆ. ಈ ಮೂಲಕ ಕನ್ನಡ ಶಾಸನಾಧ್ಯಯನ ಕ್ಷೇತ್ರದ ಒಂದು ಹೊಸ ಶಕೆಯನ್ನು ಹಾಗೂ ಶಾಖೆಯನ್ನು ಪ್ರೊ. ಶೆಟ್ಟರ್ ತೆರೆದಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಿಂದ ಈವರೆಗೆ ಪ್ರಕಟವಾಗಿರುವ ಹಳಗನ್ನಡದ ಎಲ್ಲ ಶಾಸನಗಳನ್ನೂ ಸಂಗ್ರಹಿಸಿ ಹೊಸ ವಿಧಾನದಲ್ಲಿ ಸಂಯೋಜಿಸುವ ಪ್ರಯತ್ನ ಇದಾಗಿದೆ. ಕ್ರಿ. ಶ. ಸುಮಾರು ನಾಲ್ಕನೆಯ ಶತಮಾನದಿಂದ ಹತ್ತನೆಯ ಶತಮಾನದವರೆಗೆ ರಚನೆಯಾಗಿರುವ ಇಲ್ಲಿಯ ಶಾಸನಗಳು ಹಳಗನ್ನಡ ಕಾಲಘಟ್ಟದವು. ಇವುಗಳನ್ನು ಬರೆಯಲು ಪ್ರತ್ಯೇಕ ಲಿಪಿ ಇರಲಿಲ್ಲವಾಗಿ ಮೌರ್ಯ ಅರಸ ಅಶೋಕ ಪರಿಚಯಿಸಿದ್ದ ಬ್ರಾಹ್ಮೀ ಲಿಪಿ ಹಾಗೂ ಪ್ರಾಕೃತ ಭಾಷೆಯಲ್ಲಿವೆ. ಆರಂಭ ಕಾಲದ ಕದಂಬರು, ಕೊಲಾಳ ಹಾಗೂ ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು ಮತ್ತು ಮಾನ್ಯಖೇಟದ ರಾಷ್ಟ್ರಕೂಟರಲ್ಲದೇ ಇವರ ಸಾಮಂತರೂ ಸಮಕಾಲೀನರೂ ಬರೆಸಿದ ಶಾಸನಗಳು ಇಲ್ಲಿವೆ. ಈ ಮೂಲಕ ಮೊದಲ ಸಹಸ್ರಮಾನದ ಹಲವು ಮಗ್ಗುಲುಗಳ ಅಧ್ಯಯನಕ್ಕೆ ಆಕರ ಸಾಮಗ್ರಿ ಒಂದೆಡೆ ದೊರೆತಂತಾಗಿದೆ.

ಕನ್ನಡ ಶಾಸನಗಳನ್ನು ಸಂಗ್ರಹಿಸುವ ಕಾರ್ಯ ಕರ್ನಲ್ ಮೆಕೆಂಝಿಯಿಂದ (1800) ಆರಂಭವಾಯಿತಾದರೂ ಅವನ್ನು ವ್ಯವಸ್ಥಿತವಾಗಿ ಪರಿಚಯಿಸುವ ಕೆಲಸ ಶುರುವಾದದ್ದು ವಾಲ್ಟರ್ ಇಲಿಯಟ್ (1830)ನಿಂದ. ಈತ ಕರ್ನಾಟಕ ಮತ್ತು ಆಂಧ್ರದ ಸುಮಾರು 1339 ಶಾಸನಗಳನ್ನು ಸಂಗ್ರಹಿಸಿದ್ದ. ಆದರೆ ಹಡಗಿನಲ್ಲಿ ಅವುಗಳನ್ನು ಇಂಗ್ಲೆಂಡಿಗೆ ಸಾಗಿಸುವಾಗ 735 ಪ್ರತಿಗಳು ನಾಶವಾಗಿ 595 ಮಾತ್ರ ಉಳಿದಿದ್ದವು. ನಾಶವಾದವುಗಳಲ್ಲಿ ಆಂಧ್ರಪ್ರದೇಶದ ಶಾಸನಗಳ ಸಂಖ್ಯೆ ಹೆಚ್ಚು ಎಂದು ಭಾವಿಸಲಾಗಿದೆ. ಉಳಿದವುಗಳ ಮೂರು ನಕಲನ್ನು ಮಾಡಿ ರಾಯಲ್ ಏಸಿಯಾಟಿಕ್ ಸೊಸೈಟಿಯ ಮುಂಬೈ, ಮದ್ರಾಸ್ ಹಾಗೂ ಲಂಡನ್ ಶಾಖೆಗೆ ಒಂದೊಂದು ಪ್ರತಿಯನ್ನು ಕೊಟ್ಟಿದ್ದನು. ಕ್ರಮೇಣ ಅಂದರೆ 1870ರ ಸುಮಾರಿಗೆ ದೇಶೀಯ ಮೂಲದ ಸಂಸ್ಥೆಗಳಲ್ಲಿದ್ದ ಪ್ರತಿಗಳು ಮಾಯವಾಗಿ ಇಂದಿಗೂ ಲಂಡನ್ ಸಂಗ್ರಹ ಮಾತ್ರ ಉಳಿದು ಬಂದಿದೆ. ಹೀಗೆ ಸಂಗ್ರಹಿಸಿದ್ದ ಕೆಲವು ಶಾಸನಗಳನ್ನು ಕುರಿತು ‘ಹಿಂದೂ ಇನ್ಸ್ಕ್ರಿಪ್ಷನ್ಸ್’ ಎಂಬ ಲೇಖನವನ್ನು ‘ಮದ್ರಾಸ್ ಜರ್ನಲ್ ಆಫ್ ಲಿಟರೇಚರ್ ಆಂಡ್ ಸೈನ್ಸ್’ನಲ್ಲಿ ಪ್ರಕಟಿಸುವ ಮೂಲಕ ಹೊರ ಜಗತ್ತಿಗೆ ಮೊದಲ ಬಾರಿಗೆ ಕನ್ನಡ ಶಾಸನಗಳನ್ನು ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಶಾಸನಗಳನ್ನು ಪ್ರಕಟಿಸಲು ಪ್ರತ್ಯೇಕ ಜರ್ನಲ್‍ಗಳು ಇಲ್ಲದಿದ್ದ ಕಾಲದಲ್ಲಿ ರಾಯಲ್ ಏಸಿಯಾಟಿಕ್ ಸೊಸೈಟಿಯ ಜರ್ನಲ್ ಮಾದರಿಯಲ್ಲಿ 1872ರಲ್ಲಿ ‘ದಿ ಇಂಡಿಯನ್ ಆಂಟಿಕ್ವೆರಿ’ ಎಂಬ ಪತ್ರಿಕೆ ಜಾಸ್. ಬರ್ಜಸ್ ಸಂಪಾದಕತ್ವದಲ್ಲಿ ಲೇಖನಗಳ ಜೊತೆಗೆ ಶಾಸನಗಳ ಪ್ರಕಟಣೆಗೆ ಆರಂಭಿಸಿತು.

1892ರಲ್ಲಿ ‘ಎಫಿಗ್ರಾಫಿಯಾ ಇಂಡಿಕಾ’ ಜರ್ನಲ್ ಆರಂಭವಾದಾಗ ಶಾಸನಗಳ ಪ್ರಕಟಣೆಗೆ ಪ್ರತ್ಯೇಕ ವೇದಿಕೆ ಒದಗಿಬಂತು. ಇದು ದೇಶದ ಮೂಲೆ ಮೂಲೆಯಲ್ಲಿಯ ಸಾವಿರಾರು ಶಾಸನಗಳನ್ನು ಬೆಳಕಿಗೆ ತಂದಿತು. ಇದೇ ಮಾದರಿಯಲ್ಲಿ 1877ರಲ್ಲಿ ಆರಂಭವಾದ ‘ಕಾರ್ಪಸ್ ಇನ್ಸ್ಕ್ರಿಪ್ಷನ್ಸ್ ಇಂಡಿಕೇರಮ್’ ಹಾಗೂ 1890ರಲ್ಲಿ ಆರಂಭವಾದ ‘ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್’ ಸಂಪುಟಗಳು ಶಾಸನ ಪ್ರಕಟಣೆಗೆ ಮುಂದಾದವು. 1894ರಲ್ಲಿ ಮೈಸೂರು ಅರಸರ ಕಾಳಜಿಯಿಂದ ‘ಮೈಸೂರು ಪ್ರಾಕ್ತನ ಇಲಾಖೆ’ ಶುರುವಾಗಿ ಶಾಸನ ಸಂಗ್ರಹ ಹಾಗೂ ಅಧ್ಯಯನ ಕ್ಷೇತ್ರ ವಿಸ್ತಾರವಾಯಿತು. ಇಲ್ಲೆಲ್ಲ ಕನ್ನಡ ಶಾಸನಗಳ ಪ್ರಕಟಣೆ ನಡೆಯುತ್ತಲೇ ಬಂದಿತ್ತು. ಜಾಸ್. ಬರ್ಜೆಸ್, ಜೆ. ಎಫ್ï. ಫ್ಲೀಟ್, ಹುಲ್ಷ್, ಮೆಕೆಂಜಿ, ರೈಸ್, ಕಿಟ್ಟೆಲ್ ಮುಂತಾದ ವಿದೇಶೀ ವಿದ್ವಾಂಸರು ಹಾಗೂ ಕೆ. ಜಿ. ಭಂಡಾರ್ಕರ್, ನರಸಿಮ್ಮೈಯ್ಯಂಗಾರ್, ಎಸ್. ಪಾಂಡುರಂಗ ಪಂಡಿತ್ ಮುಂತಾದ ದೇಶೀ ವಿದ್ವಾಂಸರಿಂದ ಕರ್ನಾಟಕದ ಶಾಸನಗಳ ಪ್ರಕಟಣೆ ಉತ್ಕರ್ಷಕ್ಕೆ ಬಂದಿತು.

ಕನ್ನಡ ಶಾಸನಗಳ ಪ್ರಕಟಣೆಯ ಆರಂಭ ಕಾಲದ ಹೆಚ್ಚಿನ ಶ್ರೇಯ ಸಲ್ಲುವುದು ಬಿ. ಎಲ್.ರೈಸ್ ಅವರಿಗೆ. ‘ಮೈಸೂರು ಪ್ರಾಕ್ತನ ವಾರ್ಷಿಕ ವರದಿ’ಗಳೊಂದಿಗೆ ‘ಎಪಿಗ್ರಾಫಿಯಾ ಕರ್ನಾಟಿಕಾ’ದ 12 ಸಂಪುಟಗಳನ್ನು ಪ್ರಕಟಿಸುವ ಮೂಲಕ ಒಂದು ದಶಕದ ಕಾಲಘಟ್ಟದಲ್ಲಿ ಸುಮಾರು ಎಂಟು ಸಾವಿರದ ಎಂಟು ನೂರಾ ಅರುವತ್ತು ನಾಲ್ಕು ಶಾಸನಗಳನ್ನು ಬೆಳಕಿಗೆ ತಂದರು.

ಇದೀಗ ಶಾಸನಗಳ ಪ್ರಕಟಣೆಗೆ ಸಂಬಂಧಿಸಿದಂತೆ ಎರಡು ಮಾದರಿಗಳು ರೂಪುಗೊಂಡಿವೆ. ಒಂದು ‘ಎಪಿಗ್ರಾಫಿಯಾ ಇಂಡಿಕಾ’ ಮಾದರಿ ಹಾಗೂ ಇನ್ನೊಂದು ‘ಎಪಿಗ್ರಾಫಿಯಾ ಕರ್ನಾಟಿಕಾ’ ಮಾದರಿ. ಇಂಡಿಕಾ ಸಂಪುಟಗಳಲ್ಲಿ ಶಾಸನಗಳಲ್ಲಿರುವ ವಿವರಗಳನ್ನು ಅಂದರೆ; ವಂಶಾವಳಿ, ಕಾಲ, ಮುಖ್ಯ ಉದ್ದೇಶ, ಬರಹ ಭಾಷೆ ಮತ್ತು ಲಿಪಿ ಈ ಎಲ್ಲ ವಿಚಾರಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಚರ್ಚಿಸಿ ನಂತರ ಶಾಸನ ಪಠ್ಯದ ಟ್ರಾನ್ಸ್ಕ್ರಿಪ್ಟ್ ಮತ್ತು ಇಂಗ್ಲಿಷ್ ಭಾಷೆಯಲ್ಲಿಯೇ ಅದರ ಅರ್ಥ ನೀಡಲಾಗಿದೆ. ಆದರೆ ಎಪಿಗ್ರಾಫಿಯಾ ಕರ್ನಾಟಿಕಾ ಭಿನ್ನ ಮಾದರಿಯನ್ನು ಅನುಸರಿಸಿತು. ಶಾಸನದ ಪಠ್ಯವನ್ನು ಟ್ರಾನ್ಸ್ಕ್ರಿಪ್ಟ್ (ಇಂಗ್ಲಿಷ್) ಹಾಗೂ ಮೂಲ ಭಾಷೆಯಲ್ಲಿ ಒದಗಿಸಿ, ಅವುಗಳ ಸಂಕ್ಷಿಪ್ತ ಇಂಗ್ಲಿಷ್ ಅನುವಾದವನ್ನು ಇನ್ನೊಂದು ಭಾಗದಲ್ಲಿ ನೀಡಲಾಗಿದೆ. ಆಗಾಗ ಪ್ರಕಟವಾಗುತ್ತಿದ್ದ ‘ಸೌತ್ ಇಂಡಿಯನ್ ಇನ್ಸ್ಕ್ರಿಪ್ಷನ್ಸ್’ ಸಂಪುಟಗಳದೂ ಸುಮಾರು ಇದೇ ಮಾದರಿ. ಆದರೆ ಇದೀಗ ಪ್ರಕಟವಾಗಿರುವ ಪ್ರೊ. ಶೆಟ್ಟರ್ ಮಾದರಿ ಅನನ್ಯವಾದುದು. ಶೀರ್ಷಿಕೆಯ ಭಾಗದಲ್ಲಿ ಶಾಸನ ಸಂಖ್ಯೆ, ಮೂಲೋದ್ದೇಶ, ಸ್ಥಳ, ಊರು, ತಾಲೂಕು, ಜಿಲ್ಲೆಯ ಹೆಸರು, ಈ ಮೊದಲು ಶಾಸನ ಪ್ರಕಟವಾದ ಮೂಲ ಆಕರ, ರಾಜಮನೆತನ ಮತ್ತು ರಾಜರ ಹೆಸರು ಈ ಸಮಸ್ತ ವಿವರಗಳನ್ನೂ ನೀಡಲಾಗಿದೆ. ಪಠ್ಯ ವಿಭಾಗದಲ್ಲಿ; ಮೊದಲಿಗೆ ಶಾಸನದ ಪೂರ್ಣ ಪಾಠ, ಪಠ್ಯದ ವಾಕ್ಯ ಮತ್ತು ಪದಗಳ ವಿಭಜನೆ, ಪ್ರತಿ ಪದ ಅರ್ಥ, ಆಧುನಿಕ ಕನ್ನಡದಲ್ಲಿ ಪಠ್ಯದ ಭಾವಾರ್ಥ ನೀಡಲಾಗಿದೆ. ಇದರಿಂದ ಜನ ಸಾಮಾನ್ಯರೂ ತಮ್ಮ ಶಾಸನದ ಓದಿನ ಕುತೂಹಲವನ್ನು ತಣಿಸಿಕೊಳ್ಳಲು ಸಾಧ್ಯವಾಗಿದೆ. ಶಾಸನದ ಓದನ್ನು ಸರಳಗೊಳಿಸಿ, ವಾಕ್ಯ ಹಾಗೂ ಪದಗಳನ್ನು ಸುಲಭವಾಗಿ ಗುರುತಿಸಿ ಶಾಸನದ ವಿವರಗಳನ್ನು ತೀವ್ರಗತಿಯಲ್ಲಿ ಗ್ರಹಿಸಲು ಇಲ್ಲಿ ಸಾಧ್ಯವಾಗುತ್ತದೆ. ಇದು ಪಂಡಿತರು ಹಾಗೂ ವಿದ್ಯಾರ್ಥಿಗಳು ಎಲ್ಲರಿಗೂ ಸರಳವೆನಿಸುವ ಮಾದರಿಯಾಗಿದೆ. ದೇಶದ ಯಾವ ಭಾಷೆಯ ಶಾಸನಾಧ್ಯಯನ ಕ್ಷೇತ್ರದಲ್ಲೂ ಈ ಸಾಧನೆ ನಡೆದಿಲ್ಲ ಎಂಬುದು ಈ ಸರಣಿಯ ಹೆಚ್ಚುಗಾರಿಕೆ.

ಸಂಪುಟಗಳ ಇನ್ನೊಂದು ಮಹತ್ವದ ಅನುಬಂಧವೆಂದರೆ; ಶಾಸನೋಕ್ತ ಪದಗಳ ಪಟ್ಟಿ. ಪ್ರತಿ ಸಂಪುಟದ ಕೊನೆಯಲ್ಲಿ ಇವುಗಳನ್ನು ನೀಡಲಾಗಿದೆ. ಇದು ಆಯಾ ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಪದಗಳ ಸಮಗ್ರ ಚಿತ್ರಣವನ್ನು ನೀಡುತ್ತವೆ. ನಾನು ಇದೇ ಯೋಜನೆಯಡಿ ಪ್ರೊ. ಶೆಟ್ಟರ್ ಅವರೊಂದಿಗೆ ಕೆಲಕಾಲ ಕೆಲಸ ಮಾಡಿರುವೆ. ಒಂದು ದಿನ ಅವರು ಸಮಗ್ರ ಪದಸೂಚಿಯನ್ನು ಗಮನಿಸಿ; “ನೋಡಿ ಶ್ರೀಧರ್, ಮೊದಲ ಸಹಸ್ರಮಾನದಲ್ಲಿ ದೇವದಾಸಿ ಎಂಬ ಪದ ಎಲ್ಲಿಯೂ ಬಳಕೆಯಾಗಿಲ್ಲ” ಎಂದರು. ಸಾಂಸ್ಕೃತಿಕವಾಗಿ ಇದು ಎಷ್ಟು ಮಹತ್ವದ ಅಂಶವೆಂದರೆ; ಈ ಪದ್ಧತಿ ಯಾವಾಗ ಪ್ರಾರಂಭವಾಯಿತೆನ್ನುವುದು ಶಬ್ದದ ಬೆನ್ನು ಹತ್ತಿದಾಗ ಬಗೆಹರಿಯುತ್ತದೆ. ಇಂತಹ ಅನೇಕ ಸಂಗತಿಗಳನ್ನು ಈ ಸಂಪುಟಗಳ ಒಡಲಿನಲ್ಲಿ ಪತ್ತೆ ಮಾಡಬಹುದು. ಪ್ರತಿಯೊಂದು ಸಂಪುಟದ ಕೊನೆಯ ಪದಸೂಚಿಯ ಸಮಸ್ತ ರೂಪ ಕೊನೆಯದಾದ ಎಂಟನೆಯ ಸಂಪುಟದಲ್ಲಿ ಒಂದೆಡೆ ದೊರಕುತ್ತದೆ. ಆ ಪದಗಳು ಕನ್ನಡ ಮೂಲದವೋ ಸಂಸ್ಕೃತದವೋ ಅಥವಾ ಮಿಶ್ರಭಾಷಾ ಪದಗಳೋ ಎಂಬುದನ್ನೂ ಅಲ್ಲಿಯೇ ಸೂಚಿಸಲಾಗಿದೆ. ಇವುಗಳಿಗೆ ಅರ್ಥ ಬರೆದರೆ ಮೊದಲ ಸಹಸ್ರಮಾನದ ಪದಕೋಶ ಸಿದ್ಧವಾಗುತ್ತದೆ. ಪದಬಳಕೆಯ ಇತಿಹಾಸ ರಚನೆ, ಪದ ಪ್ರಯೋಗ ಕೋಶದ ರಚನೆ ಇದೀಗ ಸುಲಭ ಸಾಧ್ಯವಾಗಿದೆ. ಇದರ, ಅಂದರೆ ಕೊನೆಯ ಸಂಪುಟದ ಮೂಲಕವೇ ಶಾಸನಾಧ್ಯಯನದ ಪ್ರವೇಶವೂ ಸಾಧ್ಯ. ಶೆಟ್ಟರ್ ಅವರೇ ಸೂಚಿಸಿರುವಂತೆ; ಈ ಪದಪ್ರಯೋಗಕೋಶದ ಆಧಾರದ ಮೇಲೆ ಮೊದಲ ಸಹಸ್ರಮಾನದ ಗ್ರಾಮನಾಮ, ವ್ಯಕ್ತಿನಾಮ, ಸಂಸ್ಥೆ-ಸಾಮಾಜಿಕ ಘಟಕಗಳು, ಧರ್ಮ ಸಂಸ್ಥೆಗಳು, ಆಡಳಿತ ಘಟಕಗಳು, ಧರ್ಮ-ಸಂಪ್ರದಾಯಗಳು ಹೀಗೆ ಹಲವಂದದ ಅಧ್ಯಯನ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇವು ಸಾಧ್ಯವಾದಾಗ ಈ ಸಂಪುಟಗಳದು ಸಂಪೂರ್ಣ ಯಶಸ್ಸು.

***

ಮೊದಲ ಸಹಸ್ರಮಾನದ ಶಾಸನ ಸಂಪುಟ ಈಗ ಪ್ರಕಟವಾಗಿದ್ದರೂ ಇದು ಪ್ರೊ. ಶೆಟ್ಟರ್ ಅವರ ಐದು ದಶಕಗಳ ಸಾಧನೆ. ಇದರ ಅಧ್ಯಯನದ ಹಲವು ಸಾಧ್ಯತೆಗಳನ್ನು ಅವರು ಈಗಾಗಲೇ ಬಳಸಿಕೊಂಡಿದ್ದಾರೆ. ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ: ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ’ (ಡೆಮ್ಮಿ1/8, 312 ಪುಟಗಳು, 2008) ದ್ರಾವಿಡ ಜಗತ್ತಿನಲ್ಲಿ ಕನ್ನಡದ ಪ್ರಾಚೀನತೆಯನ್ನು ಪ್ರತಿಷ್ಠಾಪಿಸಿದ ಆಚಾರ್ಯ ಕೃತಿ. ಈ ಕೃತಿಯಲ್ಲಿ ಆನುಷಂಗಿಕವಾಗಿ ಶಾಸನ ಸಂಗತಿಗಳು ಬಳಕೆಯಾಗಿದ್ದವು. ಮುಂದೆ ಮೊದಲ ಸಹಸ್ರಮಾನದ ಶಾಸನಗಳನ್ನು ನೇರವಾಗಿ ಆಧರಿಸಿ ಶೆಟ್ಟರ್ ಹಲವು ಕೃಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’(ಕ್ರೌನ್ 1/4, 528 ಪುಟಗಳು, 2014) ಎಂಬ ಸ್ವತಂತ್ರ ಬೃಹತ್ ಗ್ರಂಥ ಹಾಗೂ ಹಲವು ವಿದ್ವಾಂಸರ ಲೇಖನಗಳ ಸಂಕಲನ ‘ಹಳಗನ್ನಡ: ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ’ ಎಂಬ ಇನ್ನೊಂದು ಹೆಬ್ಬೊತ್ತಿಗೆ ಮುಖ್ಯವಾದವು. ಮೊದಲನೆಯ ಕೃತಿ; ‘ಸಾಹಿತ್ಯ ಚರಿತ್ರೆಯ ಒಂದು ಓದು-ಸಾಮಾಜಿಕ ಚರಿತ್ರೆಯ ಮರು ಓದು’ ಎಂಬ ಉಪಶೀರ್ಷಿಕೆಯನ್ನು ಹೊಂದಿದ್ದು; ಡಾ. ಕಲ್ಬುರ್ಗಿಯವರು ಹೇಳಿರುವಂತೆ; “ಶೀರ್ಷಿಕೆಯನ್ನೂ ಮೀರಿ ಬೆಳೆದ ಅಭ್ಯಾಸವಾಗಿದೆ”. ಅಶೋಕನ ಕಾಲದ ಬ್ರಾಹ್ಮೀ ಲಿಪಿ (ಕ್ರಿಸ್ತಪೂರ್ವ ಮೂರನೆಯ ಶತಮಾನ) ಮತ್ತು ಪ್ರಾಕೃತಭಾಷಾ ಶಾಸನಗಳಿಂದ ಆರಂಭವಾದ ಅಧ್ಯಯನ ನಮ್ಮ ದೇಶದ ಪ್ರಪ್ರಥಮ ಬರೆಹವನ್ನು ಹಾಗೂ ಅದರ ಲಿಪಿಕಾರ ‘ಚಪಡ’ ಕರ್ನಾಟಕದವನು ಎಂಬ ಶೋಧವನ್ನು ಸಮರ್ಥವಾಗಿ ಮಂಡಿಸುವ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದೆ. ಹದಿನೇಳು ಅದ್ಯಾಯಗಳಲ್ಲಿ ಹರಡಿಕೊಂಡಿರುವ ಅಧ್ಯಯನ - ಶೆಟ್ಟರ್ ಅವರು ಯಾವಾಗಲೂ ಹೇಳುತ್ತಿದ್ದ; “ನಾವು ಶಿಲ್ಪಗಳನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ” ಎಂಬ ಎಚ್ಚರಿಕೆಯ ಮಾತಿಗೆ ಪ್ರತಿಕ್ರಿಯೆಯಾಗಿ ಅವರೇ ಒದಗಿಸಿದ ನ್ಯಾಯವಾಗಿದೆ. ಮೊದಲ ಸಹಸ್ರಮಾನದ ಶಾಸನ ಲಿಪಿಕಾರರನ್ನು ಕುರಿತು ಇನ್ನೊಬ್ಬರು ಕೈಯಿಡದಂತಹ ಆಮೂಲಾಗ್ರ ಅಧ್ಯಯನವನ್ನು ಪ್ರೊ. ಷೆಟ್ಟರ್ ಪೂರೈಸಿದ್ದಾರೆ. ಪುಸ್ತಕದ ಪುಟಗಳ ಮೇಲ್ಭಾಗದಲ್ಲಿ ಮೂಲ ಶಾಸನ ಪಠ್ಯದ ಚಿತ್ರಗಳನ್ನು ಕೊಟ್ಟು, ತಾಂತ್ರಿಕವಾಗಿ ಅದ್ಭುತವನ್ನು ಸಾಧಿಸಿದ್ದಾರೆ. ಇದರಿಂದ ಮರೀಚಿಕೆಯಾಗಿದ್ದ ಶಾಸನಗಳ ಲಿಪಿವಿನ್ಯಾಸವನ್ನು ಎಲ್ಲರೂ ನೋಡಲು, ಅನುಭವಿಸಲು ಸಾಧ್ಯವಾಗಿದೆ.

ಮೊದಲ ಸಹಸ್ರಮಾನದ ಶಾಸನಗಳ ಕರಡು ಸಿದ್ಧವಾದ ಮೇಲೆ ನಾಡಿನ ಹಲವು ವಿದ್ವಾಂಸರಿಗೆ ಅವುಗಳನ್ನು ಕಳುಹಿಸಿ, ಈ ಸಂಪುಟಗಳನ್ನು ಅಧಾರವಾಗಿಟ್ಟುಕೊಂಡು ತಮ್ಮ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿ ಲೇಖನಗಳನ್ನು ಬರೆದುಕೊಡುವಂತೆ ಕೇಳಲಾಯಿತು. ಹೀಗೆ ಹುಟ್ಟಿದ 35 ಲೇಖನಗಳ ದೊಡ್ಡ ಗ್ರಂಥ; “ಹಳಗನ್ನಡ; ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ; ಭಾಷೆಗೊಂದು ಬುನಾದಿ: ಬಾಂಧವ್ಯಕ್ಕೊಂದು ಬೆಸುಗೆ” (ಕ್ರೌನ್ 1/4, 504 ಪುಟಗಳು, 2017). ಇದರಲ್ಲಿ ಮೊದಲ ಸಹಸ್ರಮಾನದ ಶಾಸನಗಳನ್ನು ಆಧರಿಸಿ ರಚನೆಗೊಂಡ; 1. ಕನ್ನಡ ನಾಡು ನುಡಿ-ಪ್ರಾಚೀನತೆ, ಪ್ರಭಾವ 2. ಭಾಷಾವಲೋಕನ; ಛಂದಸ್ಸು, ಅಲಂಕಾರ, ಗದ್ಯಪದ್ಯ ವಿಕಾಸ 3. ಲಿಪಿ ವಿಕಾಸ, ವಿಧಾನ, ಶಿಲ್ಪ ವಿನ್ಯಾಸ 4. ಜೈನ ಜಗತ್ತು: ಶುಭೋಕ್ತಿ-ಶಾಪೆÇೀಕ್ತಿ ಎಂಬ ನಾಲ್ಕು ವಿಭಾಗಗಳಲ್ಲಿ ನಾಡಿನ ಸುಪ್ರಸಿದ್ಧ ವಿದ್ವ್ವಾಂಸರ ಲೇಖನಗಳನ್ನು ಪ್ರೊ. ಶೆಟ್ಟರ್ ಸಂಪಾದಿಸಿದ್ದಾರೆ. ಹಲವು ಹೊಸ ವಿಚಾರಗಳ ಮೇಲೆ ಮೊದಲ ಬಾರಿಗೆ ಇಲ್ಲಿ ಬೆಳಕು ಬಿದ್ದಿದೆ.

ಇವುಗಳೊಂದಿಗೆ ಹಲವು ಲೇಖನಗಳು ಹಾಗೂ ಪುಸ್ತಕ ರೂಪದಲ್ಲಿ ಪ್ರಕಟವಾದ; ‘ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ: ಕವಿ-ಲಿಪಿಕಾರ ಅಕ್ಷರಮೇರುವಿನ ಕಾವ್ಯ, ಕಲೆ ಮತ್ತು ಲಿಪಿಯ ಸಮಗ್ರ ಅಧ್ಯಯನ; ಕ್ರಿ.ಶ. ಸು. 740’ (ರಾಯಲ್ ಅಕಾರದ 136 ಪುಟಗಳು), ಪ್ರಾಕೃತ ಜಗದ್ವಲಯ: ಪ್ರಾಕೃತ-ಕನ್ನಡ-ಸಂಸ್ಕೃತ ಭಾಷೆಗಳ ಅನುಸಂಧಾನ (ಡೆಮ್ಮಿ1/8, 248 ಪುಟಗಳು, 2018), ರೂವಾರಿ: ಕನ್ನಡ ನಾಡಿನ ವಾಸ್ತು -ಶಿಲ್ಪಿಗಳ ಚಾರಿತ್ರಿಕ ಹಿನ್ನೆಲೆ (ಡೆಮ್ಮಿ1/8, 336 ಪುಟಗಳು, 2019), ಸ್ಥಪತಿ: ರೂವಾರಿಗಳ ಜತೆ ಷ. ಶೆಟ್ಟರ್ ಪಯಣ (ಡೆಮ್ಮಿ1/8, 344 ಪುಟಗಳು, 2020) ಮುಂತಾದ ಕೃತಿ ಸರಣಿಗಳನ್ನು ಹೆಸರಿಸಬಹುದು.

***

ಮೊದಲ ಸಹಸ್ರಮಾನದ ಕನ್ನಡ ಶಾಸನಗಳು (ಡೆಮ್ಮಿ 1/4 ಆಕಾರದ ಸುಮಾರು 500 ಪುಟಗಳ ಎಂಟು ಸಂಪುಟಗಳು, 2022) ಸರಿ ಸುಮಾರು ನಾಲ್ಕು ಸಾವಿರ ಪುಟಗಳ ಎಂಟು ಸಂಪುಟಗಳಲ್ಲಿ ಪ್ರಕಟವಾಗಿದೆ. ಇದೊಂದು ಸಮಕಾಲೀನ ಪ್ರಕಟಣ ಸಾಹಸ ಎಂದೇ ಹೇಳಬೇಕು. ಪ್ರೊ. ಶೆಟ್ಟರ್ ಅವರ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿರುವ ‘ಅಭಿನವ’; ಬೆಂಗಳೂರಿನ ನಿಯಾಸ್ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಸಂಪುಟಗಳನ್ನು ಪ್ರಕಟಿಸಿದೆ. ಮೊದಲ ಸಹಸ್ರಮಾನದ ಶಾಸ್ತ್ರಕೃತಿ ಕವಿರಾಜಮಾರ್ಗದ ಹೊಸ ಆವೃತ್ತಿ, ಕವಿರಾಜ ಮಾರ್ಗ ಪದಕೋಶ ಇವೆಲ್ಲವೂ ಪ್ರಕಟವಾದಾಗ ಪ್ರೊ. ಶೆಟ್ಟರ್ ಕನಸಿನ ಮೊದಲ ಸಹಸ್ರಮಾನದ ಕೃತಿಶ್ರೇಣಿ ಸಂಪೂರ್ಣವಾಗುತ್ತದೆ. ಶಾಸನ ಪ್ರಕಟಣೆಯ ಇತಿಹಾಸದಲ್ಲಿ ದಶಕಗಳ ಅವಧಿಯಲ್ಲಿ ಆಗೊಂದು ಈಗೊಂದು ಸಂಪುಟಗಳು ಬೆಳಕು ಕಾಣುತ್ತಿದ್ದ ಸಾಂಸ್ಥಿಕ (ಶಾಸನಾಧ್ಯಯನ ಸಂಸ್ಥೆಗಳು, ವಿಶ್ವವಿದ್ಯಾಲಯಗಳು) ಪ್ರಕಟಣೆಗಳ ಕ್ಷೇತ್ರಕ್ಕೆ ಈ ಎಂಟು ಸಂಪುಟಗಳ ಏಕಕಾಲಿಕ ಖಾಸಗಿ ಪ್ರಕಟಣೆ ಒಂದು ಮಾದರಿಯಾಗಿದೆ. ಕನ್ನಡ ಪುಸ್ತಕಲೋಕದಲ್ಲಿ ಇದೊಂದು ಅಘಟಿತ ಘಟನೆಯಾಗಿ ದಾಖಲಾಗಿದೆ.


ಈ ಅಂಕಣದ ಹಿಂದಿನ ಬರಹಗಳು:
ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...