ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ

Date: 07-10-2021

Location: ಬೆಂಗಳೂರು


ನಾಡಿನ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ವಲಯದ ಹಲವು ಮಹತ್ವದ ವಿಚಾರಗಳನ್ನು ತಮ್ಮ ಪತ್ರಗಳ ಮೂಲಕ ನಮ್ಮಮುಂದಿಡಲಿದ್ದಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ರಂಗನಾಥರಾವ್. ಅವರ ಹೊಸ ಅಂಕಣ ‘ಪತ್ರತಂತು ಮಾಲಾ’ ದಲ್ಲಿ ಮೊದಲ ಭಾಗವಾಗಿ ರಾಶಿ(ಎಂ.ಶಿವರಾಮ) ಹಾಗೂ ಹಿರಿಯ ಲೇಖಕ ಬುದ್ದಣ್ಣ ಹಿಂಗಮಿರೆ ಅವರೊಂದಿಗಿನ ಪತ್ರಸಂವಾದದ ಕುರಿತು ವಿಶ್ಲೇಷಿಸಿದ್ದಾರೆ.

ಕನಸುಗಳ ನೆನಪಿನಲ್ಲೇ ನಮ್ಮ ಬೆಳಗಾಗುತ್ತದೆ. ಕನಸುಗಳೊಂದಿಗೆ ನಮ್ಮ ಜೀವನ ಪಯಣ ಆರಂಭವಾಗುತ್ತದೆ. ವಾಸ್ತವದಲ್ಲಿ ಅವುಗಳನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವ ನಮ್ಮ ಹೆಜ್ಜೆಗಳು ಕನಸು ಮನಸುಗಳ ಸಮನ್ವಯದಲ್ಲಿ, ಚರಿತ್ರೆ, ಸಮಾಜ, ವ್ಯಕ್ತಿ ಸಮಷ್ಠಿಗಳ ಸಮನ್ವಯದ ಹಾದಿಯಲ್ಲಿ ಸಾಗಬೇಕಿದೆ. ಅಮ್ಮನ ಮಡಿಲಿಂದ ಹೊರಬರುವ ಹಕ್ಕಿಮರಿಯಂತೆ ನಾವು ಹಿರಿಯರ ಅಂಕೆಯಿಂದ ಪಡೆದ ಸ್ವಾತಂತ್ರ್ಯದ ಮೊದಲ ಹೆಜ್ಜೆಯೇ ರೆಕ್ಕೆ ಬಿಚ್ಚಿ ಹಾರುವ ಉತ್ಸಾಹ. ಈ ಮೊದಲ ಅಧ್ಯಾಯದ ಮೊದಲ ಪುಟ ಕನಸು. ಕನಸುಗಳಿಂದಲೇ ಮಾನವ ಅಗಾಧವೂ ಅನಂತವೂ ಆದ ಭವಸಾಗರವನ್ನು ಪ್ರವೇಶಿಸುತ್ತಾನೆ. ವೃತ್ತಿಪ್ರವೃತ್ತಿ ಎರಡನ್ನೂ ಕನಸುಗಳೊಂದಿಗೆ ಪ್ರವೇಶಿಸುವ ಅವನ ಬೆಳವಣಿಗೆ, ಅವನ ಕನಸುಗಳ ಸಾಕ್ಷಾತ್ಕಾರ ಆಯಾ ಕ್ಷೇತ್ರದ ಹಿರಿಯರಿಕಿರಿಯರು ಮೊದಲಾಗಿ ಸಮಸ್ತರ ಕಾರ್ಯಸಾಧನೆ, ಸಹಕಾರ, ಪ್ರೋತ್ಸಾಹ, ಬೆಂಬಲ, ಬುದ್ಧಿಭಾವಗಳ ಸಾಹಚರ್ಯ, ಮನಸ್ಸುಗಳ ಸಂಯೋಗ ಮೊದಲಾದ ಆಶ್ರಯ, ಆಸರೆಗಳಲ್ಲಿ ಸಾಗುತ್ತದೆ. ಹೀಗೆ ನಾನಾ ಮಜಲುಗಳಲ್ಲಿ ವಿಕಾಸದ ಪಥದಲ್ಲಿ ನಮ್ಮ ಪಯಣಕ್ಕೋದು ದಿಗ್ದರ್ಶನವನ್ನು ನೀಡುತ್ತದೆ. ನನ್ನ ಖಾಸಗಿ ಹಾಗೂ ವೃತಿ ಜೀವನಾರಂಭವೂ ಇದೇ ಗತಿಯಲ್ಲಿ ಶುರುವಾದದ್ದು.

ವೃತ್ತಿಪ್ರವೃತ್ತಿ ಎರಡರಲ್ಲೂ ಬರವಣಿಗೆಯೇ ನನ್ನ ಕನಸು, ನನ್ನ ಬದುಕು. ಅಂಬೆಗಾಲಿಕ್ಕುವುದರಿಂದ ಹಿಡಿದು ಸ್ವಂತಶಕ್ತಿಯಿಂದ ನನ್ನ ಕಾಲಮೇಲೆ ನಿಲ್ಲಿವ ವರೆಗಿನ ಈ ಪಯಣದಲ್ಲಿ ನಾನು ಮುಗ್ಗರಿಸಿದಾಗ, ಎಡವಿದಾಗ, ಬಿದ್ದಾಗ, ಬಿದ್ದು ಗಾಯಮಾಡಿಕೊಂಡಾಗ ನನಗೆ ಆಸರೆಯಾಗಿ ನಿಂತು ನನ್ನ ಕನಸುಗಳ ಸಾಕಾರಕ್ಕೆ ಸಹಕಾರ ನೀಡಿದ, ಬೆಂಬಲ ನೀಡಿದ, ಪ್ರೋತ್ಸಾಹಿಸಿದ, ಮೆಚ್ಚಿದ ಗೆಳೆಯರ ಬಳಗ ದೊಡ್ಡದು ಎಂಬುದು, ಅವರ ನೆರವು-ಸಹಕಾರಗಳು ಯಾವ ಮಟ್ಟದವು ಎಂಬುದು ಈಗಷ್ಟೇ, ಎಂಭತ್ತರರ ಇಳಿ ವಯಸ್ಸಿನಲ್ಲಿ ನನಗೆ ಸಾಕ್ಷಾತ್ಕಾರವಾಗಿ ನಾನು ಮೂಕನಾಗಿದ್ದೇನೆ.

ಪತ್ರ ವ್ಯವಹಾರ ನನ್ನ ಹುಟ್ಟು ಜಾಯಮಾನವಲ್ಲ. ನನ್ನ ಬಾಲ್ಯ ಮತ್ತು ವಿದ್ಯಾಭ್ಯಾಸದ ದಿನಗಳು-ಕೆಲವು ತಿಂಗಳುಗಳನ್ನು ಬಿಟ್ಟರೆ-ಕಳೆದದ್ದು ತಂದೆತಾಯಿಯರ ಒಡನಾಟದಲ್ಲೇ. ಹೀಗಾಗಿ ಪತ್ರಬರೆಯುವ ಪ್ರಮೇಯವೇ ಒದಗಿ ಬರಲಿಲ್ಲ ಎಳವೆಯಲ್ಲಿ. ವೃತ್ತಿಜೀವನಕ್ಕೆ ಕಾಲಿರಿಸಿದಂತೆ ನನ್ನ ವೃತ್ತಿಸಹಕಾರ ವಲಯ, ಸ್ನೇಹವಲಯ, ಆಸಕ್ತಿ ವಲಯ ದೊಡ್ಡದಾಗುತ್ತಾ ಹೋಯಿತು, ಬೆಂಗಳೂರು ನಗರದ ಎಲ್ಲೆಗಳನ್ನು ದಾಟಿ ಕರ್ನಾಟಕಾದ್ಯಂತ ವಿಸ್ತರಿಸಿ ಬೆಳೆಯಿತು. ಆಗ ವೈಯಕ್ತಿಕ ಹಾಗೂ ವೃತ್ತಿಕಾರಣವಾದ ಅಫಿಶಿಯಲ್ ನೆಲೆಯಲ್ಲೂ ಈ ಅಸಕ್ತಿಗಳ ಕಾರಣದಿಂದಾಗಿ ಪತ್ರಗಳ ಬರೆಯಲು ಶುರುಮಾಡಿದೆ. ಇದು ಇಲ್ಲಿಯವರೆಗೆ ನಿರಂತರವಾಗಿ ನಡೆದು ಬಂದಿದೆ. ಸಹಜವಾಗಿಯೇ ನನ್ನೀ ಪತ್ರ ಸಂಬಂಧ ಏಕಮುಖವಾಗಿರಲಿಲ್ಲ. ಮಾರುಓಲೆಗಳು ಬರುತ್ತಿದ್ದವು, ಕೆಲವು ಮನೆಯ ವಿಳಾಸಕ್ಕೆ, ಇನ್ನು ಕೆಲವು ಕಚೇರಿಯ ವಿಳಾಸಕ್ಕೆ. ನಾನು ಆಯಾ ಪತ್ರಗಳ ಮೇಲೇ ಏನೇನು ಕ್ರಮ ಕೈಗೊಳ್ಳಬೇಕೋ ಅಷ್ಟಕ್ಕೆ ತಕ್ಷಣ ಕ್ರಮ ಕೈಗೊಂಡು ನಂತರ ಮುಂದಿನ ಕೆಲಸಕದಲ್ಲಿ ಉದ್ಯುಕ್ತನಾಗುತ್ತಿದ್ದೆ. ಆದರೆ ಬಾಳ ಸಂಗಾತಿ ಸರಳಾ ಈ ಎಲ್ಲ ಪತ್ರಗಳನ್ನು ಜೋಪಾನವಾಗಿ ಸಂಗ್ರಹಿಸಿಡುತ್ತಿದ್ದಳು. ಸರಳಾ ಸ್ವರ್ಗವಾಸಿಯಾಗಿ ವರ್ಷ ಕಳೆದ ನಂತರ, ಅಳಿದು-ಉಳಿದುದರ ಜಡ್ತಿ ನಡೆಸುವ ಮನಸ್ಸಾಗಿ ನಮ್ಮ ಟ್ರಂಕಿಗೆ ಕೈಹಾಕಿದಾದ ದೊರೆತ ನಿಧಿ ಈ ಪತ್ರಗಳ ಕಟ್ಟು. ನನ್ನ ನೆನಪುಗಳಿಗೆ ಸಾಣೆ ಹಿಡಿದ ಪತ್ರಗಳು.

ಈ ಪತ್ರಗಳು, ಗೆಳಯರಾದ ಎಚ್.ಎಸ್.ವೆಂಕಟೇಶ ಮೂರ್ತಿ, ಸತೀಶ ಚಪ್ಪೆರಿಕೆ, ದೇವು ಪತ್ತಾರ ಅವರುಗಳ ಗಮನಕ್ಕೆ ಬಂದು ಅವರಿಗೆ ಅವುಗಳಲ್ಲೊಂದು ಸಾಂಸಕೃತಿಕ ಮಹತ್ವ ಹೊಳೆದದ್ದು ನನ್ನ ಪಾಲಿಗೆ, ಎಂಬತ್ತರ ಪ್ರಾಯದಲ್ಲಿ ಪ್ರಿಯವೂ ಪ್ರಯಾಸದ್ದೂ ಆದ ಕೆಲಸವೇ ಸರಿ. ಪತ್ರಗಳ ಸಂಕಲನ ಪ್ರಕಟಿಸೋಣ ಎಂದರು. ಹಾಗೆಂದಾಗ ನಾನು ತುಕ್ಕುಹಿಡಿದ ನನ್ನ ಕೀಲುಗಳಿಗೆಲ್ಲ ನೆನಪಿನ ಆಜ್ಯ ಹೊಯ್ದು ಕಾರ್ಯಸಾಧುವನ್ನಾಗಿಸಿ ಅವುಳನ್ನೆ ಇಂದಿನ ರಾವುಗನ್ನಡಿಯಲ್ಲಿ ನೋಡಲು ತೊಡಗಿದೆ.

ನನಗೆ ಪತ್ರ ಬರೆಯುವ ಹವ್ಯಾಸ ಇರಲಿಲ್ಲ ಎಂದು ಈ ಮೊದಲೇ ತಿಳಿಸದ್ದೇನೆ. ಆದರೆ ನಾನು ಮೊದಲು ಬರೆದ ಪ್ರೇಮ ಪತ್ರ ಹರಿಹರದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದ ಸರಳಾಗೆ ಬರೆದದ್ದು. ಮುಂದೆ ಮೂರುನಾಲ್ಕು ತಿಂಗಳವರೆಗೆ, ಮದುವೆಯಾಗುವರೆಗೆ ನಾವು ಪತ್ರಗಳನ್ನು ಬರೆದುಕೊಂಡೆವು. ನಮ್ಮಿಬ್ಬರ ವಿವಾಹಕ್ಕೆ ಪತ್ರಮುಖೇನ ಸಾಕ್ಷಿಯಾದವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಹಿರಿಯರಾದ 'ಮನೋನಂದನ'ದ `ರಾಶಿ'ಯವರು.

ವೃತ್ತಿಯಿಂದ ವೈದ್ಯರಾದ ಶಿವರಾಮ್ ಪ್ರವೃತ್ತಿಯಿಂದ `ರಾಶಿ', ಲೇಖಕರು, ಪತ್ರಕರ್ತರು. ಮೆಜೆಸ್ಟಿಕ್ ಟಾಕೀಸ್ ಬಳಿ ಇದ್ದ ಅವರ ಚಿಕಿತ್ಸಾಲಯ ನನಗೆ ಸಣ್ಣಪುಟ್ಟ ರೋಗರುಜಿನಗಳಿಂದಾಗಿ ಪರಿಚಿತಾಗಿತ್ತು. ಪತ್ರಕರ್ತನಾದಮೇಲೆ ವೃತ್ತಿಬಾಂಧವ್ಯದಿಂದಾಗಿ 'ಕೊರವಂಜಿ'ಯ ಸಂಪಾದಕ, ಸಾಹಿತಿ ‘ರಾಶಿ' ಅವರೊಂದಿಗೆ ಸ್ವಲ್ಪ ಹೆಚ್ಚಿನ ಸಲುಗೆ ಬೆಳೆಯಿತು. ಆಗಾಗ್ಗೆ ಅವರನ್ನು ಭೇಟಿಯಾಗುವ ಸಂದರ್ಭಗಳೂ ಹಿರಿಯರಾದ ಎಂ.ಬಿ.ಸಿಂಗ್ ಅವರಿಂದಾಗಿ ಒದಗಿಬರುತ್ತಿದ್ದವು ಲೇಖನ, ಅಂಕಣ ಬರಹಗಳ ಕಾರಣದಿಂದಾಗಿ.1984ರ ಜನವರಿ ತಿಂಗಳು, ಒಂದು ಸಂಜೆ ಕಚೇರಿ ಮುಗಿದ ನಂತರ ಆಗ ಪ್ರಜಾವಾಣಿ ಸಂಪಾದಕರಾಗಿದ್ದ ಶ್ರೀ ಎಂ.ಬಿ.ಸಿಂಗ್ ಅವರು "ಬನ್ನಿ ರಾಶಿಯವರನ್ನ ನೋಡಿ ಬರೋಣ" ಎಂದು ನನ್ನನ್ನು ಮಲ್ಲೇಶ್ವರದಲ್ಲಿನ ಅವರ ಮನೆಗೆ ಕರೆದುಕೊಂಡುಹೋದರು. ಆ ಸಂಜೆ ನಾವು ಹೋದಾಗ ಉತ್ತರಾಯಣದ ಆಗಮನದ ನಿರೀಕ್ಷೆಯಲ್ಲಿದ್ದ ಭೀಷ್ಮ ಪಿತಾಮಹನಂತೆ ರಾಶಿಯವರು ಕ್ಲಿನಿಕಲ್ ಟೇಬಲ್ನಂಥ ಸ್ಪಲ್ಪ ದೊಡ್ಡದಾದ ಬೆಂಚಿನ ಮೇಲೆ ಮಲಗಿದ್ದರು. ಮಲಗಿದ್ದಲ್ಲಿಂದಲೇ ನಮ್ಮನ್ನು ಸ್ವಾಗತಿಸಿದರು. ನಾವು ಅವರ ತಲದಿಶೆಯಲ್ಲಿ ನಿಂತುಕೊಂಡೆವು. ಯೋಗಕ್ಷೇಮ ವಿಚಾರಿಸಿದರು. ಪತ್ರಿಕೆ ಬಗ್ಗೆ ಕೇಳಿದರು. ಸಿಂಗ್ ಅವರು ಮುಂದಿನ ‘ತಿಂಗಳ ಉರಿಗಾಳು' ಅಂಕಣದ ಬಗ್ಗೆ ಪ್ರಸ್ತಾಪಿಸಿದರು. ರಾಶಿ ಏನು ಹೇಳಿದೆರೋ ನೆನಪಿಲ್ಲ. ಸ್ವಲ್ಪ ಹೊತ್ತು ಮಾತುಕತೆ, ನಂತರ ಅಲ್ಲಿಂದ ಹೊರಟೆವು. "ನಾವಿನ್ನು ಬರ್ತೇವೆ ಸರ್" ಎಂದಾಗ, 'ಬಾಯಾರಿಕೆಗೆ ಏನಾದರೂ ತಗೊಳ್ಳಿ" ಎದರು ರಾಶಿ "ಒನ್ ಫಾರ್ ದಿ ರೋಡ್" ಎಂಬಂತೆ. ನಮಗೆ ಅಂಥ ಬಾಯಾರಿಕೆ ಏನೂ ಆಗಿರಲಿಲ್ಲ. "ಏನೂ ಬೇಡ ಸರ್" ಎಂದು ನಾವು "ಭೀಷ್ಮರಿಗೆ" ನಮಸ್ಕರಿಸಿ ಅಲ್ಲಿಂದ ತೆರಳಿದೆವು. ಅದಾದ ನಾಲ್ಕೈದು ದಿನಗಳಲ್ಲಿ, ಜನವರಿ 13ರಂದು ‘ಭೀಷ್ಮ'ರು ಸ್ವರ್ಗಸ್ಥರಾದರು.

‘ರಾಶಿ'ಯವರು ಬರೆದ ಪತ್ರದಿಂದಲೇ ನನ್ನ ಪತ್ರ ಸಂವಾದವನ್ನು ಪ್ರಾರಂಭಿಸುವುದು ಸರಳಾಳೋ ನೆನಪಿಗೆ ಸಲ್ಲಿಸುಬಹುದಾದ ಯೋಗ್ಯವಾದ ಪ್ರಿಯ ಶ್ರಧ್ಧಾಂಜಲಿಯಾದೀತು. ‘ರಾಶಿ'ಯವ ಶುಭಾಂಸೆ ಇಂದಲೇ ಶುರುಮಾಡುತ್ತಿದ್ದೇನೆ.

‘ರಾಶಿ' ನನ್ನ-ಸರಳಾಳ ಮದುವೆ ಸಂದರ್ಭದಲ್ಲಿ ಬರೆದ ಪತ್ರವಿದು:

ಬಂಡಾಯ, ದಲಿತ ಸಾಹಿತ್ಯ ಚಳವಳಿ ಮತ್ತು ಸಾಹಿತ್ಯ ಕಲೆಗಳಲ್ಲಿ ಸಾಮಾಜಿಕ ಬದ್ಧತೆ, ಸಾಮಾಜಿಕ ಕಳಕಳಿ ಕುರಿತು ಪ್ರಖರವಾದ ಚರ್ಚೆಗಳು ನಡೆಯುತ್ತಿದ್ದ ದಿನಗಳು. ಇಂಥ ಚರ್ಚೆಗೆ ಪ್ರಜಾವಾಣಿ, ಉದಯವಾಣಿ ಮೊದಲಾದ ಮುಖ್ಯವಾಹಿನಿ ಪತ್ರಿಕೆಗಳಲ್ಲದೆ ಸಾಕ್ಷಿ, ಸಂಕ್ರಮಣ, ದಲಿತ, ಶೂದ್ರ, ಪಂಚಮ, ಬಂಡಾಯ ಸಾಹಿತ್ಯ ಮೊದಲಾದ ಪತ್ರಿಕೆಗಳು ವೇದಿಕೆಯಾದವು. ಬಂಡಾಯ/ದಲಿತ ಸಾಹಿತ್ಯಗಳ ಆಂದೋಲನ ಮಾದರಿ ಚಟುವಟಿಕೆಗಳು, ವಿಚಾರ ಸಂಕಿರಣಗಳು, ಪ್ರಕಟಣೆಗಳು ಕರ್ನಾಟಕದ ಉದ್ದಗಲ ನಡೆಯುತ್ತಿದ್ದರೂ ಹೆಚ್ಚು ತೀವ್ರವಾಗಿದ್ದುದು ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ರಾಯಚೂರುಗಳಂಥ ನಗರ ಕೇಂದ್ರಗಳಲ್ಲಿ. ಉತ್ತರ ಕರ್ನಾಟಕದ ದಲಿತ ಸಾಹಿತ್ಯ ಚಳವಳಿಯಲ್ಲಿ ಆ ಕಾಲಕ್ಕೆ ಮುಖ್ಯರಾದವರಲ್ಲಿ ಕವಿ ಬುದ್ದಣ್ಣ ಹಿಂಗಮಿರೆ ಪ್ರಮುಖರು. ಸ್ವತ: ಕವಿಯಾಗಿದ್ದ ಹಿಂಗಮಿರೆ ಸಾಮಾಜಿಕ ಶೋಷಣೆ, ಅಸ್ಪೃಶ್ಯತೆ, ಪುರೋಹಿತಶಾಹಿ ದಬ್ಬಾಳಿಕೆ ಇಂಥವುಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲದ್ದವರು ಹಾಗೂ ಸಾಹಿತ್ಯ ಸಮಾಜದ ಈ ಅನಿಷ್ಟಗಳ ವಿರುದ್ಧ ದನಿ ಎತ್ತಬೇಕೆಂದು ಗಾಢವಾಗಿ ನಂಬಿದ್ದವರು. ಶಬ್ದ ರಕ್ತ ಮಾಂಸ, ನಿಂಗವ್ವನ ಹಾಡು ಹಿಂಗಮಿರೆಯವರ ಕವನ ಸಂಕಲನಗಳು. ಶೋಕಕಾವ್ಯ (ಸಂಶೋಧನೆ) ಹೊಸ ಕಾವ್ಯ ಹೊಸ ದಿಕ್ಕು (ಸಂಪಾದನೆ), ಕನ್ನಡ ನವ್ಯಕಾವ್ಯಭೂಮಿ ವಿಮರ್ಶಾ ಕೃತಿಗಳು.

ಲಂಕೇಶ್ ಕನ್ನಡ ಕಾವ್ಯದ ಹೊಸ ದನಿಗಳನ್ನು ಕೇಳಿಸುವ ‘ಅಕ್ಷರ ಹೊಸ ಕಾವ್ಯ' (1969) ಸಂಪುಟವನ್ನು ಪ್ರಕಟಿಸಿದಾಗ, ಅದರಲ್ಲಿ ಬುದ್ದಣ್ಣ ಹಿಂಗಮಿರೆ ಹಾಗೂ ಹೊಸ ತಲೆಮಾರಿನ ಇನ್ನೂ ಕೆಲವರು ಕವಿಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಇದಕ್ಕೆ ಪ್ರತಿಭಟಿಸಿ ಸಮಾನಂತರವಾಗಿ ಮತೊಂದು ಆಂಥಾಲಜಿ ಹೊಸ ಜನಾಂಗದ ಕವಿತೆಗಳು (1971) ಪ್ರಕಟಿಸುವ ಸಾಹಸ ಮಾಡಿದರು, ಬುದ್ದಣ್ಣ ಹಿಂಗಮಿರೆ.

ಅದೇ ಕಾಲಘಟ್ಟದಲ್ಲಿ ಜಾಗತಿಕ ಸಾಹಿತ್ಯ ವಲಯದಲ್ಲೂ, ಸಮಾಜದಲ್ಲಿ ಸಾಹಿತ್ಯ ಮತ್ತು ಕಲೆಗಳ ಪಾತ್ರ ಕುರಿತು ಪುನರ್ವಿಮರ್ಶೆಯ ಚರ್ಚೆ-ಚಿಂತನೆಗಳು ನಡೆಯುತಿದ್ದವು. ‘ಸೋಷಿಯಾಲಜಿ, ಲಿಟರೇಚರ್ ಅಂಡ್ ಡ್ರಾಮ', ನಾರ್ತೋಪ್ ಫ್ರೈನ ‘ದಿ ಸೋಶಿಯಲ್ ಕಾಂಟೆಕ್ಸ್ಟ್ ಆರ್ಫ ಲಿಟರರಿ ಕ್ರಿಟಿಸಿಸಮ್',`ವ್ಯಾಪಾರಿ ಸಿನೆಮಾ ಮತ್ತು ಪಲಾಯನಸೂತ್ರ',`ರಂಗಭೂಮಿಯ ತತ್ವ ಪ್ರಣಾಳಿ'' ಇವೇ ಮೊದಲಾದ ಪುಸ್ತಕಗಳು ಪ್ರಕಟವಾಗಿದ್ದವು. ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ, ಸೋಷಿಯಲ್ ರೆಲೆವೆನ್ಸ, ಕಮಿಟ್‍ಮೆಂಟ್, ವಿಮರ್ಶೆ ಇತ್ಯಾದಿ ಮೊದಲಾದ ಲೇಖನಗಳನ್ನು ಬರೆದಿದ್ದೆ. ಕಲೆಗಾಗಿ ಕಲೆ ಎನ್ನುವ ದಂತಗೋಪುರದ ಮಾತಿನಕಾಲ ಮುಗಿಯಿತು ನಿಜ, ಆದರೆ ಸಾಹಿತ್ಯ ಕಲೆಗಳಲ್ಲಿ ಸಾಮಾಜಿಕ ಬದ್ಧತೆಯ ಜೊತೆಗೆ ಶೈಲಿ, ಕಲಾತ್ಮಕತೆ, ರಸಾನುಭೂತಿ ಇವುಗಳ ಸ್ಥಾನವೇನು ಎಂಬುದು ಗಾಢವಾಗಿ ಚರ್ಚೆಯಾಗುತ್ತಿದ್ದ ದಿನಗಳು. ನನ್ನ ಈ ಲೇಖನಗಳು, ಈ ಬಗೆಯ ಚರ್ಚೆಗೆ, ಬಂಡಾಯ/ದಲಿತ ಚಳವಳಿಗಳ ಸಾಮಾಜಿಕ ಬದ್ಧತೆ ಕರೆಗೆ ಪ್ರತಿಕ್ರಿಯಯಾಗಿ ಬರೆದ ಲೇಖನಗಳು ಇವು. ದಲಿತ, ಬಂಡಾಯ ಚಳವಳಿಗಳು ಏನೆಲ್ಲ, ಎಷ್ಟೆಲ್ಲ ಭಾವೋದ್ರೇಕಗಳನ್ನು ಉದ್ದೀಪಿಸಿದ್ದರೂ ಆರೋಗ್ಯತಕರವಾದ ಚರ್ಚೆಗೆ ಬಾಧಕವಿರಲಿಲ್ಲ, ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ನನ್ನ ಲೇಖನವೊಂದಕ್ಕೆ ಪ್ರತಿಕ್ರಿಯಯಾಗಿ ಬುದ್ದಣ್ಣ ಹಿಂಗಮಿರೆಯವರು ಬರೆದ ಪತ್ರವೊಂದು ನನ್ನಲ್ಲಿ ಆರೋಗ್ಯಕರ ಚರ್ಚೆಗೆ ಮತ್ತಷ್ಟು ಆಶಾದಾಯಕವೂ ಉತ್ತೇಜನಕಾರಿಯೂ ಆದ ಟಾನಿಕ್ ಆಗಿತ್ತು.

ದಲಿತ-ಸಾಹಿತ್ಯ-ವಿಚಾರ ವಿಮರ್ಶೆ ದ್ವೈಮಾಸಿಕ,ಧಾರವಾಡ

12-12-1974

ಆತ್ಮೀಯರಾದ ಜಿ.ಎನ್.ರಂಗನಾಥ ರಾವ್ ಅವರಲ್ಲಿ,
‘ಉದಯವಾಣಿ' ವಿಶೇಷ ಸಂಚಿಕೆಯಲ್ಲಿ ‘ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ' ಲೇಖನ ನೋಡಿದೆ. ನಿಮ್ಮ ನಿಷ್ಪಕ್ಷಪಾತ ವಿಮರ್ಶಾ ಧೋರಣೆ ನನಗೆ ಹಾಗೂ ನಮ್ಮಲ್ಲಿಯ ಹಲವರಿಗೆ ಹಿಡಿಸಿತು. ದಲಿತ-4 ಈಗಾಗಲೇ ನಿಮ್ಮ ಕೈ ಸೇರಿರಲು ಸಾಕು. ದಲಿತ-5 ಸಿದ್ಧತೆಯಲ್ಲಿದ್ದು ಅಂಬೇಡ್ಕರ್ ಹಾಗೂ ಹರಿಜನ ಬದುಕು ಸಮಸ್ಯೆಗಳ ಕುರಿತು ಹೆಚ್ಚಿನ ಆದ್ಯತೆ ನೀಡುವ ವಿಚಾರ. ನಮ್ಮ ಧೋರಣೆಗೆ ಸಂಬಂಧಪಟ್ಟ ಹಾಗೆ ಒಂದು ಲೇಖನ ಕಳುಹಿಸುವಿರಾಗಿ ನಂಬಿದ್ದೇನೆ. ನಿಮ್ಮ ಸಲಹೆ ಸೂಚನೆಗಳೇನೆಂಬುದನ್ನು ಬರೆಯಿರಿ. ವೈಕುಂಠರಾಜು, ವ್ಯೆ.ಎನ್.ಕೆ. ಸದಾಶಿವ ಅವರಿಗೆ ನನ್ನ ವಂದನೆ ತಿಳಿಸಿ.

ಬುದ್ಧಣ್ಣ ಹಿಂಗಮಿರೆ,
ಕರ್ನಾಟಕ ಆರ್ಟ್ಸ್ ಕಾಲೇಜು, ಧಾರವಾಡ.

ಸಂಪಾದಕರು:
ಬುದ್ದಣ್ಣ ಹಿಂಗಮಿರೆ-ಸೋಮಶೇಖರ ಇಮ್ರಾಪುರ-ಚನ್ನಣ್ಣ ವಾಲಿಕಾರ..

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...