ಸಮ್ಮೇಳನಾಧ್ಯಕ್ಷರಾಗಿ ಎಚ್‌ಎಸ್‌ವಿ ಆಯ್ಕೆ ಸರ್ಕಾರದ್ದೇ? ಪರಿಷತ್ತಿನದ್ದೇ?

Date: 06-02-2020

Location: ಕಲಬುರಗಿ


ಕಲಬುರಗಿ (ಚೆನ್ನಣ್ಣ ವಾಲೀಕಾರ ವೇದಿಕೆ):

ಸಂಸ್ಕೃತಿ ಸಚಿವರ ಸೂಚನೆಯ ಮೇರೆಗೆ ಸಮ್ಮೇಳನದ ಅಧ್ಯಕ್ಷ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಆಯ್ಕೆ ಆಗಿರಬಹುದು ಎಂದು ಲೇಖಕ ಪ್ರೊ. ಆರ್‌.ಕೆ. ಹುಡಗಿ ಅವರು ಸಂದೇಹ ವ್ಯಕ್ತಪಡಿಸಿದರು.

ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳನ್ನು ಒಳಗೊಂಡ ಕಾರ್ಯಕಾರಿ ಸಮಿತಿಯು ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮಾಡುತ್ತದೆ. ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿರುವ ವೆಂಕಟೇಶಮೂರ್ತಿ ಅವರು ಕೂಡ ಅದೇ ರೀತಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಭಾವಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ತಕರಾರು ಮಾಡಿದವರ ಜೊತೆ ಕೈ ಜೋಡಿಸಿದ ಸಂಸ್ಕೃತಿ ಸಚಿವರು ಆಯ್ಕೆ ಕೈ ಬಿಡುವಂತೆ ಒತ್ತಡ ಹೇರಿದ್ದು ನೋಡಿದರೆ ಎಚ್‌ಎಸ್‌ವಿ ಆಯ್ಕೆ ಕೂಡ ಸಂಸ್ಕೃತಿ ಸಚಿವರೇ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ಕಾಪಾಡದ ಅಧ್ಯಕ್ಷ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆ ನೀಡಬೇಕು ಎಂಬ ಅಭಿಪ್ರಾಯ ಎರಡನೆಯ ದಿನವೂ ಕೇಳಿಬಂತು. ಹುಡಗಿ ಅವರು ’ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು. ಸರ್ಕಾರದ ಆಣತಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದೆ. ಎಡವೂ ಅಲ್ಲದ ಬಲವೂ ಅಲ್ಲದವರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ ಅವರು ಸಮ್ಮೇಳನ ಮುಗಿಯುತ್ತಿದ್ದಂತೆಯೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸೌಹಾರ್ದ ದಖನ್‌ನ ಕೊಡುಗೆ:

ಭಾರತದ ಸಂಸ್ಕೃತಿಗೆ ದಖನ್‌ ಅತ್ಯಮೂಲ್ಯ ಕೊಡುಗೆ ಎಂದರೆ ಸಹಿಷ್ಣುತೆ ಮತ್ತು ಸಹಬಾಳ್ವೆ. ಇದು ರಾಜಧಾನಿ ದೆಹಲಿಗೂ ದಖನ್‌ ಕಲಿಸಿದ ಪಾಠ. ಪರಸ್ಪರ ಸೌಹಾರ್ದದಿಂದ ಬಾಳುವುದು ದಖನ್‌ ಪ್ರದೇಶದ ಜನರಿಗೆ ಹೊಸದಾದ ಸಂಗತಿಯೇನಲ್ಲ. ಅದಕ್ಕೆ ಭೌಗೋಳಿಕ, ಐತಿಹಾಸಿಕ, ಆರ್ಥಿಕ, ಸಾಮಾಜಿಕ ಕಾರಣಗಳಿವೆ. ಗುಲ್ಬರ್ಗವು ಕೆಲಕಾಲ ಮಾತ್ರ ದಖನ್‌ನ ರಾಜಧಾನಿ ಆಗಿತ್ತು ಎಂಬುದು ತಾಂತ್ರಿಕವಾಗಿ ಸರಿ. ಆದರೆ, ದಖನ್‌ನ ಚರಿತ್ರೆಯನ್ನು ನಿರ್ವಹಿಸುವಲ್ಲಿ ಕಲಬುರಗಿ- ’ಗುಲ್ಬರ್ಗ’ ಪ್ರಮುಖ ಪಾತ್ರ ವಹಿಸುತ್ತಲೇ ಬಂದಿದೆ ಎಂದು ಭಾವೈಕ್ಯತೆಯ ನೆಲೆಗಳು ಕುರಿತು ಪ್ರಬಂಧ ಮಂಡಿಸಿದ ರಿಜಾಯ್‌ ಅಹ್ಮದ್‌ ಬೋಡೆ ಅವರು ಅಭಿಪ್ರಾಯಪಟ್ಟರು.

ಸಂಸ್ಕೃತಿಯೂ ನಿರ್ವಾತದಲ್ಲಿ ಬದುಕುವುದಿಲ್ಲ. ಬದಲಾಗುತ್ತ-ಬೆಳೆಯುತ್ತ ಇದ್ದದ್ದಕ್ಕೆ ಹೊಸದನ್ನು ಸೇರಿಸುತ್ತ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಹೋಗುವುದು ಜೀವಂತ ಸಂಸ್ಕೃತಿಯ ಲಕ್ಷಣ. ಇದಕ್ಕೆ ದಖನ್‌ ಹೊರತಲ್ಲ. ಹಾಗೆಯೇ ಗುಲ್ಬರ್ಗ ಕೂಡ. ಹಲವು ಭಾಷೆ, ಧರ್ಮ, ನಂಬಿಕೆಗಳು ಒಂದೆಡೆ ನೆಲೆ ನಿಂತ ಪ್ರದೇಶ ಕಲಬುರಗಿ-ಗುಲ್ಬರ್ಗ. ಇದು ಬಹುಸಂಸ್ಕೃತಿ-ನಂಬಿಕೆಗಳು ಒಂದೆಡೆ ಸೇರಿದ ಕುದಿಪಾತ್ರೆ ಎಂದು ಅವರು ವಿವರಿಸಿದರು.

ಕಲ್ಬುರ್ಗಿ-ಗುಲ್ಬರ್ಗ ರೂಪಿಸಿದ -ಕಟ್ಟಿದ- ಬೆಳೆಸಿದ- ವಿವಿಧ ರೂಪಗಳಲ್ಲಿ ದಾಖಲಿಸಿದ ಸಹಬಾಳ್ವೆ-ಸಹಿಷ್ಣುತೆಯ ಪಾಠ ನಿನ್ನೆಗೆ ಮಾತ್ರ ಸೀಮಿತವಾಗಿಲ್ಲ. ಸ್ವಾತಂತ್ರೋತ್ತರ ಭಾರತದಲ್ಲಿಯೂ  ಮುಂದುವರೆದಿದೆ. ಮುಂದುರೆಯುತ್ತದೆ. ಬೆಳೆಯುತ್ತದೆ-ಬದುಕುತ್ತದೆ. ಅದೊಂದೇ ನಮ್ಮ ಮುಂದಿರುವ ಅನಿವಾರ್ಯ ಆಯ್ಕೆ ಎಂದು ಅವರು ಹೇಳಿದರು.

ಡಾ. ಶಂಭುಲಿಂಗ ವಾಣಿ ಅವರು ಐತಿಹಾಸಿಕ ಪರಂಪರೆ, ಶಶಿಶೇಖರ ರೆಡ್ಡಿ ಪ್ರವಾಸೋದ್ಯಮದ ತಾಣಗಳು, ಅಮೃತಾ ಕಟಕೆ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಪ್ರಬಂಧ ಮಂಡಿಸಿದರು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...