ಸಂಪಾದಕತ್ವದ ಹೊಣೆ ಮತ್ತು ಆಪ್ತರ ಕಾತರಗಳು

Date: 04-11-2021

Location: ಬೆಂಗಳೂರು


‘ಹೊಸಸಂಪಾದಕನಿಗೂ ಪತ್ರಿಕೆಯ ಸತ್ತ್ವ-ಸೌಂದರ್ಯಗಳನ್ನು ಹೆಚ್ಚಿಸುವ ಮೂಲಕ ತನ್ನ ಛಾಪನ್ನು ಮೂಡಿಸಬೇಕೆಂಬ ಹುಮ್ಮಸ್ಸು, ಕಾತರಗಳಿರುತ್ತವೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್.ರಂಗನಾಥರಾವ್. ಅವರ ಪತ್ರತಂತು ಮಾಲಾ ಅಂಕಣದಲ್ಲಿ ಅವರು ಸುಧಾ ಹಾಗೂ ಮಯೂರ ಪತ್ರಿಕೆಗಳ ಸಂಪಾದಕತ್ವದ ಹೊಣೆ ವಹಿಸಿಕೊಂಡ ಸಂದರ್ಭದಲ್ಲಿ ಹಿರಿಯ ಅಂಕಣಕಾರ ಎಚ್ಚೆಸ್ಕೆ ಅವರು ಬರೆದ ಪತ್ರಗಳ ಕುರಿತು ಚರ್ಚಿಸಿದ್ದಾರೆ.

ಪತ್ರಿಕೆಯೊಂದರಲ್ಲಿ ಸಂಪಾದಕನು ಬದಲಾದಂತೆ, ಬರಹಗಾರರಲ್ಲಿ, ಓದುಗರಲ್ಲಿ ಅನೇಕ ಕುತೂಹಲಗಳು, ನಿರೀಕ್ಷೆಗಳು, ತವಕಗಳು ಹುಟ್ಟಿಕೊಳ್ಳುತ್ತವೆ. ಹೊಸಸಂಪಾದಕನಿಗೂ ಪತ್ರಿಕೆಯ ಸತ್ತ್ವ-ಸೌಂದರ್ಯಗಳನ್ನು ಹೆಚ್ಚಿಸುವ ಮೂಲಕ ತನ್ನ ಛಾಪನ್ನು ಮೂಡಿಸಬೇಕೆಂಬ ಹುಮ್ಮಸ್ಸು, ಕಾತರಗಳಿರುತ್ತವೆ. ಅಂಕಣಕಾರರು/ಲೇಖಕರು ಹೊಸ ಸಂಪಾದಕರ ಇಷ್ಟ-ಅನಿಷ್ಟಗಳೇನೋ, ತಮ್ಮ ಅಂಕಣ ಮುದುವರಿಯುವೊದೋ ನಿಲ್ಲುವದೋ ಎಂದು ಯೋಚಿಸುವಂತಾಗುತ್ತದೆ. ನಾನು 1990ರಲ್ಲಿ ಸುಧಾ/ಮಯೂರಗಳ ಸಂಪಾದಕತ್ವದ ಹೊಣೆ ವಹಿಸಿಕೊಂಡಾಗ ಅಂಕಣಕಾರ ಎಚ್ಚೆಸ್ಕೆಯವರು ಬರದಿರುವ ಒಂದು ಪತ್ರ:

ಮೈಸೂರು
20-4-1990
ಪ್ರಿಯ ಶ್ರೀರಂಗನಾಥ ರಾವ್ ಅವರೆ,

ನಿಮ್ಮ ಪತ್ರ ಕೈಸೇರಿತು. ಸುಧಾ-ಮಯೂರ ಪತ್ರಿಕೆಗಳ ಸಹಾಯಕ ಸಂಪಾದಕರ ಹುದ್ದೆಗೆ ನಿಮಗೆ ಬಡ್ತಿ ದೊರಕಿದ ವಿಷಯ ತಿಳಿದು ಬಹಳ ಸಂತೋಷವಾಯಿತು. ಈ ಹಲವು ವರ್ಷಗಳಲ್ಲಿ ‘ಪ್ರಜಾವಾಣಿ’ಸಾಪ್ತಾಹಿಕ ಪುರವಣಿ ತುಂಬ ಆಕರ್ಷಕವೂ ಉಪಯುಕ್ತವೂ ವೈವಿಧ್ಯಪೂರ್ಣವೂ ಆಗಿ ಬೆಳೆದಿದೆ. ಈ ಅವಧಿಯಲ್ಲಿ ಅದಕ್ಕಾಗಿ ನಾನೂ ಕೆಲವು ಲೇಖನಗಳನ್ನು ಬರೆದೆನೆಂಬುದು ನನಗೆ ಸಂತೋಷ ನೀಡುತ್ತದೆ. ಹೊಸ ಹುದ್ದೆಯನ್ನು ನೀವು ಯಶಸ್ವಿಯಾಗಿ ನಿರ್ವಹಿಸುವಿರೆಂಬ ಭರವಸೆ ನನಗೆ ಇದೆ. ನಿಮಗೆ ಅಭಿನಂದನೆಗಳು. ನಿಮಗೆ ಎಲ್ಲ ಯಶಸ್ಸನ್ನೂ ಕೋರುತ್ತೇನೆ. ನನ್ನ ಸಂಪೂರ್ಣ ಸಹಕಾರದ ಭರವಸೆ ನೀಡುತ್ತಿದ್ದೇನೆ. ಮೈಸೂರಿಗೆ ಬಂದಾಗ ಖಂಡಿತ ಮನೆಗೆ ಬನ್ನಿ. ಅಥವಾ ನೀವು ತಿಳಿಸಿದರೆ ನಿಮ್ಮನ್ನೇ ನಾನು ನೋಡುತ್ತೇನೆ. ಬೆಂಗಳೂರಿಗೆ ಬಂದಾಗ ನೋಡುತ್ತೇನೆ.

ಮತ್ತೊಮ್ಮೆ ಶುಭಾಶಯಗಳು
ನಿಮ್ಮ ವಿಶ್ವಾಸದ,
ಎಚ್ಚೆಸ್ಕೆ

ಸುಧಾ/ಮಯೂರಗಳಲ್ಲಿ ನಾನು ಅಂದುಕೊಡಂತೆ ಹೊಸರೀತಿಯ ಸತ್ವಯುತ ಬರಹಗಳು, ಹೊಸ ಅಂಕಣಗಳನ್ನು ಶುರುಮಾಡಿಲು, ಪುನರ್ ವಿನ್ಯಾಸಗೊಳಿಸಲು ಸ್ವಲ್ಪ ಕಾಲವೇ ಹಿಡಿಯಿತು. ಎಚ್ಚೆಸ್ಕೆ, ಎಸ್.ಕೆ.ರಾಮಚಂದ್ರ ರಾವ್ ಅವರಂಥವರ ಜನಪ್ರಿಯ ಅಂಕಣಗಳನ್ನೂ ಧಾರಾವಾಹಿ ಕಾದಂಬರಿಗಳನ್ನು ಮುಂದುವರಿಸಿಕೊಂಡು ಹೋಗಿ ಮುಖಪುಟ ಲೇಖನದಂಥ ಪ್ರಚಲಿತ ವಿಷಯಗಳ ಮೇಲೆ ವಿಶೇಷ ಲೇಖನಗಳು, ವಿಶೇಷ ಆಹ್ವಾನಿತ ಕಥೆಗಳೂ, ಲಲಿತ ಪ್ರಬಂಧಗಳನ್ನು- ಹೀಗೆ ಹೊಸ ಸಂವೇದನೆಯ ಬರಹಗಳನ್ನು ಕೊಡಲರಾಂಭಿಸಿದೆ. ಇದಾದ ಒಂದು ವರ್ಷದ ನಂತರ ಎಚ್ಚೆಸ್ಕೆಯವರು ಬರೆದ ಇನ್ನೊಂದು ಪತ್ರವನ್ನು ಗಮನಿಸಿ.

ಮೈಸೂರು
2-1-1991
ಪ್ರಿಯ ಶ್ರೀ ರಂಗನಾಥ ರಾವ್ ಅವರೆ,
ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು.
‘ಸುಧಾ’ ಹೊಸ ವರ್ಷದಲ್ಲಿ ಹೊಸ ರೂಪು-ರಂಗು- ತಾಳಿ ಹೊರ ಬಂದಿದೆ. ಬದಲಾಗುತ್ತಿರುವ ರುಚಿಧರ್ಮಗಳಿಗೆ ತಕ್ಕಂತೆ ಕಾಲಕಾಲಕ್ಕೆ ಹೊಂದಿಕೊಳ್ಳತ್ತ, ಆದರೆ ಮೂಲ ಸತ್ತ್ವವನ್ನು ಬಿಟ್ಟುಕೊಡದೆ ಬೆಳೆಸಿಕೊಳ್ಳುತ್ತ, ಬೆಳೆಯುತ್ತಿರುವುದು ‘ಸುಧಾ'ದ ಹೆಚ್ಚುಗಾರಿಕೆ. ಅಂತೆಯೇ ಈಗ ಸುಧಾ ಹೊಸ ಬೆಡಗು ತಳೆದಿದೆ, ಹೆಚ್ಚು ವೈಶಿಷ್ಟ್ಯಪೂರ್ಣವಾಗಿದೆ, ವೈವಿಧ್ಯವನ್ನು ಹೆಚ್ಚಿಸಿಕೊಂಡಿದೆ. ಹೊಸ ಅಂಕಣಗಳು ಉಪಯುಕ್ತ ಹಾಗೂ ಆಕರ್ಷಕ. ಶ್ರೀಧರ ಆಚಾರ್ ಅವರದು ಪಳಗಿದ ಶೈಲಿ. ಬಿ.ವಿ.ನಾಗರಾಜು ಅವರದು ನೇರ ಸರಳ ಆಕರ್ಷಕ ಬರವಣಿಗೆ. ವೆಂಕಟೇಶ ಮೂರ್ತಿ ಅವರು ಲಲಿತ ಪ್ರಬಂಧವನ್ನು ಆಯ್ದುಕೊಡತ್ತಿರುವುದು ನನ್ನ ಮೆಚ್ಚುಗೆ ಗಳಿಸಿದೆ. ಒಳ್ಳೆಯ ರುಚಿಯಿರುವ ಓದುಗರೆಲ್ಲ ಮೆಚ್ಚಿಯಾರು. ಇಂಥವರ ಸಂಖ್ಯೆ ಬೆಳೆಯುತ್ತಲೇ ಇದೆ. ‘ಸಂಪದ'ದ ಅಡಿಯಲ್ಲಿ ಟಿ.ಪಿ.ಅಶೋಕರು ಬರೆದಿರುವ ದೇವನೂರರ ಸಾಹಿತ್ಯದ ಪರಿಚಯ ಸಮರ್ಥವಾದ್ದು. ಪತ್ರಿಕೆಯ ವಿನ್ಯಾಸವೂ ಹೊಸದಾಗಿದೆ. ‘ಸುಧಾ'ಬಳಗದ ಸತತ ಶ್ರಮ ಹಾಗೂ ಪ್ರಯೋಗಶೀಲತೆಯಿಂದ ಇದೆಲ್ಲ ಸಾಧ್ಯವಾಗಿದೆ. ನಿಮಗೆ ಹಾಗೂ ಇತರ ಗೆಳೆಯುರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ವಂದನೆಗಳೊಂದಿಗೆ,
ನಿಮ್ಮ ವಿಶ್ವಾಸದ,
ಎಚ್ಚೆಸ್ಕೆ

ಈ ಅಂಕಣದ ಹಿಂದಿನ ಬರಹಗಳು:
ಆಪ್ತರ ಚರ್ಚೆ ಮತ್ತು ಅನುಸಂಧಾನ:
ಸಂಬಂಧಗಳ ಪೋಣಿಸುವ ಕಥನ ತಂತುಗಳ ಮಾಲೆ:
ಹೊಸ ಸಂವೇದನೆಗಳ ಸಂದರ್ಭದಲ್ಲಿ ಸಂಪಾದಕನಾದವನು ಧೈರ್ಯಮಾಡಬೇಕಾಗುತ್ತದೆ: ಜಿ.ಎನ್. ರಂಗನಾಥರಾವ್

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...