ಸಂಪರ್ಕ ಭಾಷೆಯಾಗಿ ಹಿಂದಿ ಬೇಡ-ಇಂಡಿಯನಿಂಗ್ಲಿಷ್‌ ಬೇಕು- ಎಚ್‌ಎಸ್‌ವಿ

Date: 05-02-2020

Location: ಕಲಬುರಗಿ


ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರಗಿ): ಭಾರತದ ಒಗ್ಗೂಡಿಕೆ ಮತ್ತು ಪ್ರಾಂತ್ಯಗಳ ನಡುವಣ ವ್ಯವಹಾರಕ್ಕಾಗಿ ’ಹಿಂದಿ’ಯ ಬದಲು ಇಂಗ್ಲಿಷ್‌ಅನ್ನು ಸಂಪರ್ಕ ಭಾಷೆಯಾಗಿ ಬಳಸಬೇಕು ಎಂದು ಹಿರಿಯ ಕವಿ ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸಲಹೆ ಮಾಡಿದರು.

ಭಾರತದ ವೈಚಾರಿಕ ಸಾಹಿತ್ಯಕ ಮತ್ತು ಚಿಂತನೆಯ ಭಾಷೆಯಾಗಿದ್ದ ಸಂಸ್ಕೃತ ಅಥವಾ ಜನಸಾಮಾನ್ಯರ ವ್ಯವಹಾರದ ಭಾಷೆಯಾಗಿದ್ದ ಪ್ರಾಕೃತವನ್ನು ಸೇತುವೆಯಾಗಿ ಬಳಸಲು ಬಹುವಾರ್ಷಿಕ ಯೋಜನೆ ಸಂಕಲ್ಪಿಸಬೇಕು ಎಂದು ಪ್ರತಿಪಾದಿಸಿದ ಅವರು ಸಂವಹನ-ಸಂಪರ್ಕ ಭಾಷೆಯಾಗಿ ’ಭಾರತೀಯರ ನಾಲಗೆಗೆ ಒಗ್ಗುವ ಇಂಡಿಯನಿಂಗ್ಲಿಷ್‌ ಆಗಬೇಕು’ ಎಂದರು.

ಭಾಷೆಯಲ್ಲಿ ವ್ಯಾಕರಣಕ್ಕಿಂತ ವ್ಯವಹರಣ, ಪ್ರೌಢಿಮೆಗಿಂತ ಸಂವಹನ, ಪರಿಶುದ್ಧಿಗಿಂತ ಪ್ರಯೋಜನ ಮುಖ್ಯವಾಗಬೇಕು ಎಂದು ಅವರು ಹೇಳಿದರು.

ನಮಗೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಇಂಗ್ಲಿಷ್‌ ಸಾಕು. ಷೇಕ್ಸ್‌ಪಿಯರ್‌ ಬೇಕು ಎನ್ನುವ ಸಾಹಿತ್ಯ ಜಿಜ್ಞಾಸುಗಳು ಆಳವಾಗಿ ಇಂಗ್ಲಿಷನ್ನು ಒಂದು ಐಚ್ಚಿಕ ಭಾಷೆಯಾಗಿ ಕಲಿಯಬಹುದು ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯ ಸಾಹಿತ್ಯ ಕೃತಿಗಳು ಸಂಸ್ಕೃತದಿಂದ ಬಂದ ಪುನರವತರಣದ ಫಲಗಳಾಗಿವೆ ಎಂದ ಅವರು ಇಂಗ್ಲಿಷಿಗೆ ಸಂಬಂಧಿಸಿದಂತೆಯೂ ಇದೇ ಆಗಬೇಕು. ಕನ್ನಡದಲ್ಲಿ ಅನುವಾದ ಎಂದರೆ ತತ್ಸಮವಲ್ಲ; ತದ್ಭವ ಎಂದು ವಿವರಿಸಿದರು.

ಶಿಕ್ಷಣ ಮಾಧ್ಯಮದ ಭಾಷೆ ಮತ್ತು ಸಾಹಿತ್ಯ-ಸಂಸ್ಕೃತಿಯ ಸಂಬಂಧ ಅನುಪಮವಾದದ್ದು. ಸಂಸ್ಕೃತಿ ಹಾಗೂ ಭಾಷೆಗಳೆರಡೂ ಒಂದಕ್ಕೊಂದು ಪೂರಕವಾಗಿತ್ತು. ಈಗ ಯೋಚನೆ ಮತ್ತು ಕಲಿಯುವ ಭಾಷೆಗಳ ನಡುವಿನ ಅಂತರ-ಕಂದಕ ಆಗಿದೆ. ಪುಸ್ತಕವನ್ನು ಕಪಾಟಿನಲ್ಲಿ ಜೋಡಿಸಬಹುದು. ವಾತಾಪಿ ಜೀರ್ಣೋಭವ ಎಂಬಂತೆ ಮನೋಗತ ಆಗಲಾರದು ಎಂದು ಅವರು ನುಡಿದರು.

ಕರ್ನಾಟಕದಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕು. ಅನ್ನ ಸಂಪಾದನೆಯು ಕೈಂಕರ್ಯದ ಭಾಗವಾಗಬೇಕು ಎಂದು ಎಚ್‌ಎಸ್‌ವಿ ಹೇಳಿದರು.

ಕಲಬುರ್ಗಿ ನೆಲವು ಕನ್ನಡ ಮತ್ತು ಉರ್ದುವನ್ನು ಹೇಗೆ ಬೆರೆಸಿ-ಬಳಸಿ ಹೇಗೆ ಹೊಸ ಜೀವ ಭಾಷೆಯನ್ನು ನಿರ್ಮಿಸಿ ಸಾರ್ಥಕ್ಯ ಪಡೆಯಿತು ಎಂಬುದನ್ನು ತತ್ವಪದಕಾರರ ಭಾಷಾ ನಿಯೋಗದಲ್ಲಿ ಬಲ್ಲವರಾಗಿದ್ದೇವೆ. ಭಾಷೆಗಳ ಬೆರೆಯುವಿಕೆಯು ಅರ್ಥ, ಪರಮಾರ್ಥ, ಪ್ರಯೋಗಾರ್ಥಗಳೆಲ್ಲಾ ಈ ಸಂಯುಕ್ತ ಸಂಗಮದಲ್ಲಿ ಒಡನಾಡಿ ಬೆರೆಯುವೆವು. ಬೆರೆತೂ ತಮ್ಮ ಮೂಲ ರೂಪವನ್ನು ಜತನವಾಗಿ ಕಾಯ್ದುಕೊಂಡವು ಎಂದು ಅವರು ಹೇಳಿದರು.

ಇಂದು ಬಡತನ ನಿರ್ಮೂಲನೆ ಮುಖ್ಯವಾಗಿಲ್ಲ. ಐಶ್ವರ್ಯದ ಧ್ರುವೀಕರಣದತ್ತ ಕೇಂದ್ರೀಕರಣಗೊಂಡಿದೆ. ಇಂದು ಆರ್ತರಕ್ಷಣೆಗೆ ಆದ್ಯತೆ ದೊರೆಯದೇ ಆತ್ಮರಕ್ಷಣೆಯೇ ಮುಖ್ಯವಾಗಿದೆ. ಪ್ರಾಣಿ-ಪಕ್ಷಿಗಳಾದಿಯಾಗಿಆಶ್ರೀತರ-ಪ್ರಜೆಗಳನ್ನು ರಕ್ಷಿಸಲ್ಲವನೇ ನಿಜವಾದ ಮಹಾರಥಿ ಆಗಬೇಕು. ಅಂತಹವರು ಇಲ್ಲ ಅಂತೇನಿಲ್ಲ. ಹಾಗೇ ಇರುವವರ ಸಂಖ್ಯೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದು ಅವರು ಹೇಳಿದರು.

ಬಹುಳ ಸಂಸ್ಕೃತಿಯನ್ನು ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿದರು.

ಕಲಾಪ್ರಕಾರಗಳು ಈಗ ಆತ್ಮಾಭಿವ್ಯಕ್ತಿಗಿಂತ, ಸಾಮಾಜಿಕ ಬದ್ಧತೆಗಿಂತ ಹೆಚ್ಚಾಗಿ ಹಣ ಮಾಡುವ ಉದ್ಯಮಗಳಾಗುತ್ತಿವೆಯೆಂಬ ಕಠೋರ ಸತ್ಯ ಎದೆಗೆಡಿಸುವಂತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಸದಭಿರುಚಿಯ ಚಿತ್ರಗಳ ವೀಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಕಿರುಚಿತ್ರಮಂದಿರಗಳ ನಿರ್ಮಾಣ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಪುಸ್ತಕ ಪ್ರಕಾಶನ ಮತ್ತು ಮುದ್ರಣದ ಗುಣಮಟ್ಟ ನಿಜಕ್ಕೂ ಸಾಹಿತ್ಯಾಭಿಮಾನಿಗಳು ಹೆಮ್ಮೆ ಪಡುವಂತಿದೆ. ಪುಸ್ತಕ ಪ್ರಕಾಶನವು ದಂಡಿಯಾಗಿ ಹಣ ತರುವ ದಂಧೆಯಲ್ಲ. ಆದಾಗ್ಯು ಕೇವಲ ಸಾಹಿತ್ಯ ಪ್ರೀತಿಯಿಂದ ಹತ್ತಾರು ಪ್ರಕಾಶನ ಸಂಸ್ಥೆಗಳು ಈಗ ಪ್ರಕಟಣ ಸಾಹಸದಲ್ಲಿ ತೊಡಗಿಕೊಂಡಿವೆ. ಕನ್ನಡ ಸಾಹಿತ್ಯದಲ್ಲೀಗ ಪ್ರವಾಹರೂಪಿಯಾದ ಸಾಹಿತ್ಯ ಚಳುವಳಿಯು ಉಕ್ಕು ಕಾಣುತ್ತಿಲ್ಲವಾದರೂ ಸಮರ್ಥರಾದ ಬೇರೆ ಬೇರೆ ಮನೋಧರ್ಮದ ಅನೇಕ ಹೊಸ ಪೀಳಿಗೆಯ ಲೇಖಕರು ಹೊಸ ವಸ್ತು ವಿಷಯಪ ಹೊಸ ಸಂವೇದನೆ ಹೊಸ ಆಶಯಗಳ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...