ಸಂಶೋಧನೆಗೆ ಹೊಸ ನೋಟದ ಮಾರ್ಗಗಳು  ‘ಕರ್ನಾಟಕ ಇತಿಹಾಸದ ಅನ್ವೇಷಣೆಗಳು’  


‘ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ’ ಸಂಬಂಧಿಸಿ ಇತಿಹಾಸ ಕೇಂದ್ರಿತ ಅಧ್ಯಯನಗಳು ವಿರಳ. ನಕ್ಷೆ, ಛಾಯಾಚಿತ್ರ, ಪೇಂಟಿಂಗ್ ಹೀಗೆ ಲಭ್ಯವಿದ್ದ ಸಾಕ್ಷ್ಯಾಧಾರಗಳ ಮೂಲಕ ಸವಾಲಿನ ಈ ವಿಷಯವನ್ನು ಚರ್ಚಿಸಿದ ಲೇಖಕ ಡಾ. ಎಸ್.ಕೆ. ಅರುಣಿ ಅವರ ‘ಕರ್ನಾಟಕ ಇತಿಹಾಸದ ಅನ್ವೇಷಣೆಗಳು’ ಕೃತಿಯು ಇತಿಹಾಸ ಸಂಶೋಧನೆಗೆ ಹಲವು ಹೊಸ ನೋಟದ ಹಾದಿಗಳನ್ನು ತೋರುತ್ತದೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ್ದಾರೆ.

ಆಯಕಟ್ಟಿನ ಸ್ಥಳದಲ್ಲಿ ಸುಭದ್ರ ಕೋಟೆ ಹಾಗೂ ತಮ್ಮನ್ನು ಅವಲಂಬಿಸಿರುವ ಜನರಿಗಾಗಿ ಸುರಕ್ಷಿತ ಪ್ರದೇಶ- ಈ ಎರಡೂ ಪರಿಕಲ್ಪನೆಗಳು ಅರಸು ಮನೆತನಕ್ಕೆ ಸದಾ ಸವಾಲೊಡ್ಡುವ ಸಂಗತಿಗಳು ಮಾತ್ರವಲ್ಲ; ಈ ಎರಡರ ನಿರ್ಮಾಣದಲ್ಲೂ ಭದ್ರತಾ ನಿರ್ವಹಣೆಯ ಹೊಣೆಗಾರಿಕೆ ಇರುತ್ತದೆ ಎಂಬುದು ಇತಿಹಾಸದ ಎಚ್ಚರ. ಸಾಮ್ರಾಜ್ಯಗಳ ವಿಸ್ತರಣೆಗೆ ಮಾಡಿದ ಯುದ್ಧಗಳು ಇತಿಹಾಸ ಬರಹದ ಬಹುಪಾಲನ್ನು ಆಕ್ರಮಿಸುತ್ತವೆ ವಿನಃ ಒಂದು ಪ್ರದೇಶವನ್ನು ರಾಜಧಾನಿಯನ್ನಾಗಿಸುವ, ಕೋಟೆ ನಿರ್ಮಾಣ, ವ್ಯಾಪಾರ-ವಹಿವಾಟು ಸೇರಿದಂತೆ ಸಾಮಾನ್ಯ ಜನರ ವಾಸಕ್ಕೆ ನಿಗದಿಪಡಿಸುವ ಪ್ರದೇಶವೊಂದರ ಆಯ್ಕೆಯ ಹಿಂದಿನ ಅಂಶಗಳು ಅಂದರೆ ನಗರೀಕರಣ ಹಾಗೂ ರಕ್ಷಣಾ ವ್ಯವಸ್ಥೆ ಕೇಂದ್ರೀಕರಿಸಿದ ಸಂಶೋಧನಾ ಬರಹಗಳು ತೀರಾ ವಿರಳ. ಈ ಅಂಶಗಳು, ಸಾಮ್ರಾಜ್ಯ ವಿಸ್ತರಣೆ ಹಾಗೂ ಯೋಜನೆಯ ದೂರದೃಷ್ಟಿ, ಯೋಚನೆಯ ತೀಕ್ಷ್ಣತೆ ಮತ್ತು ಜನಜೀವನದ ಆರೋಗ್ಯಕಾರಿ ನಿಲುವುಗಳನ್ನು ಒಳಗೊಂಡ ನಾಗರಿಕ ಪ್ರಜ್ಞೆ-ಎಲ್ಲವೂ ಆಯಾ ಅರಸರ ಆಳ್ವಿಕೆಯ ವೈಖರಿಯನ್ನು ಸಾಂಕೇತಿಸುತ್ತವೆ. ವಿವಿಧ ಆಯಾಮಗಳಲ್ಲಿ ಇತಿಹಾಸವನ್ನು ವಿಶ್ಲೇಷಿಸಲು ಸಾಮಗ್ರಿ ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ, ‘ಕರ್ನಾಟಕ ಇತಿಹಾಸದ ಅನ್ವೇಷಣೆಗಳು’ ಶೀರ್ಷಿಕೆಯ ಕೃತಿ ಮಹತ್ವ ಪಡೆಯುತ್ತದೆ.

ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು (ಐಸಿಎಚ್ಆರ್) ದಕ್ಷಿಣ ಪ್ರಾದೇಶಿಕ ಕೇಂದ್ರ (ಬೆಂಗಳೂರು) ಉಪನಿರ್ದೇಶಕ ಡಾ. ಎಸ್.ಕೆ. ಅರುಣಿ ಅವರ ಈ ಕೃತಿಯು, ಮಧ್ಯಕಾಲಿನ ನಗರೀಕರಣ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ವಿಶ್ಲೇಷಿಸುತ್ತದೆ. ಭೂವಿಸ್ತಾರ ಹೆಚ್ಚಿರುವ, ಪ್ರಕೃತಿವಿಕೋಪಗಳು ಕಡಿಮೆ ಇರುವ ಭಾರತದಂತಹ ದೇಶದಲ್ಲಿ ಸಹಸ್ರಾರು ಅರಸು ಮನೆತನಗಳು ಆಳ್ವಿಕೆ ನಡೆಸಿದ್ದು ಅಚ್ಚರಿಯಲ್ಲ. ಒಂದು ಸಾಮ್ರಾಜ್ಯದ ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣದ ಪ್ರಯತ್ನ ಮತ್ತೊಂದು ಸಾಮ್ರಾಜ್ಯ ವಿಸ್ತರಣೆ ಹಾಗೂ ನಗರೀಕರಣದ ಮೇಲೆ ಪ್ರಭಾವ ಬೀರುವುದು ಸಹಜ. ಬಹುತೇಕ ವೇಳೆ, ಈ ಅಂಶಗಳು ಸಾಮಾನ್ಯವಾಗಿ ಏಕರೂಪತೆಯನ್ನು, ಕೆಲವೊಮ್ಮೆ, ವೈವಿಧ್ಯತೆಯನ್ನು ಪಡೆಯುತ್ತವೆ. ಮುಖ್ಯವಾಗಿ ಈ ಅಂಶಗಳು ಆಯಾ ಭೂಪ್ರದೇಶದ ಗುಣವಿಶೇಷಗಳನ್ನು ಅವಲಂಬಿಸಿರುತ್ತದೆ ಎಂಬುದು ಆಸಕ್ತಿಕರ ಅಂಶ.

ಅಧ್ಯಯನ ಪ್ರವೇಶ: ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ-ಈ ಎರಡರ ಸ್ಥಾಪನೆಯಲ್ಲಿ ಸಾಮಾನ್ಯ ಅಂಶಗಳೇ ಹೆಚ್ಚಿರುವದರಿಂದ ಲೇಖಕರು ಭಾರತ ಭೂ ಪ್ರದೇಶವನ್ನು ಕೇಂದ್ರೀಕರಿಸಿ ವಿಷಯವನ್ನು, ಭಾಗ-1ರಲ್ಲಿ, ಸ್ಥೂಲವಾಗಿ ವಿವರಿಸಿ, ಉತ್ತಮ ಪ್ರವೇಶಿಕೆ ನೀಡಿದ್ದಾರೆ. ನಂತರ ಕರ್ನಾಟಕವನ್ನು ಕೇಂದ್ರೀಕರಿಸಿ, ತದನಂತರ, ಕಲಬುರಗಿ, ನಂದಿದುರ್ಗ, ದೇವರಾಯನದುರ್ಗದಲ್ಲಿ ಕೋಟೆಗಳು ಹಾಗೂ ಅಲ್ಲಿಯ ಸ್ಥಾಪಿತ ನಗರೀಕರಣದ ವ್ಯವಸ್ಥೆ ರೂಪುಗೊಂಡಿದ್ದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕೋಟೆಗಳ ರಚನಾ ವೈವಿಧ್ಯತೆ ಹಾಗೂ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ.

ಈ ಭಾಗದ ಕೊನೆಯ ಲೇಖನವು ‘ಹುಡೇವು’ಗಳಿಗೆ ಸಂಬಂಧಿಸಿದ್ದು, ಶತ್ರು ದಾಳಿ ಎದುರಿಸುವ ಕೋಟೆಯ ಬೃಹತ್ ಉದ್ದೇಶವೂ ಅಲ್ಲದ ಮತ್ತು ದಾಳಿಯ ಸಾಧ್ಯತೆಯನ್ನೂ ನಿರ್ಲಕ್ಷಿಸಲಾಗದ ಭದ್ರತಾ ತಾಣಗಳಿವು. ನಗರೀಕರಣದ ಆಂತರಿಕ ಕ್ಷೋಭೆ-ಗೊಂದಲಗಳ ಮೇಲೂ ಹುಡೇವುಗಳ ಕಣ್ಣು ಕಾವಲಿರುತ್ತಿತ್ತು. ಈ ಕುರಿತ ವಿಸ್ತೃತ ಬರಹವು ಇದೆ. ಭಾಗ-2ರಲ್ಲಿ, ಬಹಮನಿ ರಾಜ್ಯದ ರಾಜಧಾನಿ ನಗರಗಳು, ಬೀದರ ನಗರ ರಚನೆ ಹಾಗೂ ಇತರೆ ನಗರಗಳ ಮೇಲೆ ಅದರ ಪ್ರಭಾವ, ಬಹಮನಿ ವಾಸ್ತುಶಿಲ್ಪ: ಹೊಸ ಶೋಧನೆಗಳು ಹೀಗೆ ವಿಷಯದ ಹರವು ರಭಸವಾಗಿದೆ. ಕೊನೆಯಲ್ಲಿ, ‘ಜೇಮ್ಸ್ ವೆಲ್ಷ್ ಕಂಡ ಬಿಜಾಪುರ’ ಲೇಖನವಿದೆ. 1828 ಅಕ್ಟೋಬರ್ ನಲ್ಲಿ ಬಿಜಾಪುರಕ್ಕೆ ಭೇಟಿ ನೀಡಿ, ಸ್ಮಾರಕಗಳು, ಗುಂಬಜಗಳು, ಉಪ್ಪಲಿ ಬುರುಜುಗಳು, ಮಾರುಕಟ್ಟೆ, ಮೈದಾನ ಇರುವ ಸ್ಥಳದ ಮಹತ್ವವನ್ನು ಹಾಗೂ ಇವುಗಳ ನಿರ್ಮಾಣ ಹಿಂದಿನ ನಗರೀಕರಣದ ಸೌಂದರ್ಯವನ್ನು ಗುರುತಿಸಿದ್ದಾನೆ. ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ ಕುರಿತ ಇತಿಹಾಸ ತಿಳಿಯಲು ಪ್ರೇರಣೆ ನೀಡುವ ಲೇಖನವಿದು.

ಕೃತಿಯ ವೈಶಿಷ್ಟ್ಯ: ಇತಿಹಾಸದಲ್ಲಿ ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ ಸ್ಥಾಪನೆ ವಿಷಯ ಅಧ್ಯಯನವು ಪುರಾವೆ ಹಾಗೂ ದಾಖಲೆಗಳ ಕೊರತೆಯಿಂದ ಇಂದಿಗೂ ಸವಾಲಿನ ಕೆಲಸವೆ. ಈ ರೀತಿಯ ಅಧ್ಯಯನವನ್ನು ಬಹುತೇಕವಾಗಿ ನಿರ್ಲಕ್ಷಿಸಲಾಗಿದೆ. ಆದರೆ, ನಕ್ಷೆಗಳು, ಛಾಯಾಚಿತ್ರಗಳು, ಪೇಂಟಿಂಗ್ ಗಳು ಸೇರಿದಂತೆ ಲಭ್ಯವಿದ್ದ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ, ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ’ ಕುರಿತ ಅಧ್ಯಯನವು ಈ ಕೃತಿಯ ಹೆಚ್ಚುಗಾರಿಕೆಯೇ ಆಗಿದೆ. ವಿವಿಧ ಕೋಟೆ ಹಾಗೂ ನಗರಗಳ ಅಪರೂಪದ ನಕ್ಷೆಗಳು, ಸ್ಮಾರಕಗಳ ಪೇಂಟಿಂಗ್ ಗಳು ಹಾಗೂ ಛಾಯಾಚಿತ್ರಗಳು, ಜನಜೀವನದ ಚಿತ್ರಣ, ಉಪ್ಪಲಿ ಬುರುಜುಗಳ ಹಾಗೂ ಹುಡೇವುಗಳ ರಚನಾ ವೈವಿಧ್ಯತೆ ಎಲ್ಲವೂ ಅಚ್ಚರಿಯ ಅಂಶಗಳಾಗಿ ಗಮನ ಸೆಳೆಯುತ್ತವೆ. ಪ್ರತಿ ಚಿತ್ರಕ್ಕೂ ಅಧಿಕೃತತೆ (ಚಿತ್ರ ಯಾರದು ಮತ್ತು ರಚಿಸಿದ ಕಾಲ ಇತ್ಯಾದಿ ಮಾಹಿತಿ) ಇದೆ. ಈ ಆಧಾರಗಳ ಹಿನ್ನೆಲೆಯಲ್ಲಿ, ಒಂದು ಅರಸು ಮನೆತನವು ಮತ್ತೊಂದು ಅರಸು ಮನೆತನದ ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣದ ಮೇಲೆ ಹೇಗೆ ಪ್ರಭಾವ ಬೀರಿತ್ತು ಎಂಬುದು ತೀಕ್ಷ್ಣ ಒಳನೋಟಗಳನ್ನು ಲೇಖಕರು ನೀಡುತ್ತಾ ಹೋಗುತ್ತಾರೆ. ಹೀಗಾಗಿ, ಸಾಮ್ರಾಜ್ಯಗಳ ವಿಸ್ತರಣೆಯಲ್ಲಿ ಅರಸು ಮನೆತನಗಳ ಪಾತ್ರವನ್ನು ತೌಲನಿಕವಾಗಿ ಅಧ್ಯಯನ ಮಾಡುವಲ್ಲಿಯೂ ಈ ಕೃತಿಯು ಹತ್ತು ಹಲವು ಮಹತ್ವದ ಆಕರಗಳ ರೂಪದಲ್ಲಿ ಸುಳಿವುಗಳನ್ನು ನೀಡುತ್ತದೆ. ಕೋಟೆಗಳ ಹಾಗೂ ನಗರೀಕರಣದ ರಚನಾ ವಿನ್ಯಾಸ-ವಿಕಾಸ-ಅವನತಿಯ ಮಾಹಿತಿ ಪೂರೈಸುತ್ತದೆ. ಇಲ್ಲಿಯ ಯಾವುದೇ ಸಾಕ್ಷಾಧಾರಗಳು ‘ಇಂದಿನ ಈ ಪ್ರದೇಶ ಹಿಂದೆ ಹೀಗಿತ್ತೇ?’ ಎಂದು ಅಚ್ಚರಿ ಮೂಡಿಸುತ್ತವೆ ಮತ್ತು ಮತ್ತಷ್ಟು ತಿಳಿಯುವ ಕುತೂಹಲ ಕೆರಳಿಸುತ್ತವೆ. ವಿಷಯ ವೈಶಾಲ್ಯತೆ ದೃಷ್ಟಿಯಿಂದ ಹೇಳುವುದಾದರೆ ಈ ಕೃತಿಯು ಗಾತ್ರದಲ್ಲಿ ಚಿಕ್ಕದು. ಆದರೆ, ಹತ್ತು ಹಲವು ಆಯಾಮಗಳಲ್ಲಿ ರಕ್ಷಣಾ ವ್ಯವಸ್ಥೆ ಹಾಗೂ ನಗರೀಕರಣ ಕುರಿತು ಇತಿಹಾಸವನ್ನು ಸಂಶೋಧಿಸುವ ಆಸಕ್ತರಿಗೆ ಉತ್ತಮ ಆಕರ ಗ್ರಂಥ. ಪ್ರತಿ ಅಧ್ಯಾಯಕ್ಕೂ ಆಧಾರ ಗ್ರಂಥಗಳ ಸೂಚಿ ಇದ್ದು, ಲೇಖಕರ ಅಧ್ಯಯನದ ಆಳ ಹಾಗೂ ಕ್ಷೇತ್ರ ಕಾರ್ಯಗಳ ಶ್ರಮವನ್ನು ಸಾಂಕೇತಿಸುತ್ತದೆ.

(ಪುಟ: 132, ಬೆಲೆ: 125, ಇತಿಹಾಸ ದರ್ಪಣ ಪ್ರಕಾಶನ-2019)

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...