ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು

Date: 15-04-2022

Location: ಬೆಂಗಳೂರು


'ಸ್ವರಗಳು-ಋ, ಋೂ, ಲೃ, ಲೂೃ: ಈ ನಾಲ್ಕು ದ್ವನಿಗಳ ವಿಚಾರವಾಗಿ ಹಳೆಯ ಸಂಸ್ಕ್ರುತದ ಪಟ್ಯಗಳಲ್ಲಿ ತುಸು ಬಿನ್ನ ಆಲೋಚನೆಗಳು ಇವೆ. ಇವುಗಳನ್ನು ಸ್ವರಗಳೆಂದು ಪಟ್ಟಿ ಮಾಡುವುದು ಕಾಣುತ್ತದೆಯಾದರೂ ಇವುಗಳು ವ್ಯಂಜನಗಳು, ವ್ಯಂಜನದ ಗುಣವನ್ನು ಹೊಂದಿರುವವು ಎಂದು ಮಾತಾಡಿರುವುದೂ ಸಂಸ್ಕ್ರುತದಲ್ಲಿ ಕಂಡುಬರುತ್ತದೆ' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳ ಕುರಿತು ವಿವರಿಸಿದ್ದಾರೆ.

ಸಂಸ್ಕ್ರುತದಲ್ಲಿ ದ್ವನಿಗಳ ಉಚ್ಚಾರಣೆಯ ಜಾಗ ಮತ್ತು ರೀತಿಯನ್ನು ತಿಳಿದುಕೊಂಡಿದ್ದ ಅಂದಿನ ಅರಿಗರಿಗೆ ಕನ್ನಡದ ಉಚ್ಚರಣೆಯನ್ನು ಅವಲೋಕಿಸುವುದು ಸಾದ್ಯವಾಯಿತು. ಹೀಗೆ ಅವಲೋಕಿಸಿದಾಗ ಕೆಲವು ದ್ವನಿಗಳು ಸಂಸ್ಕ್ರುತದಲ್ಲಿ ಉಚ್ಚಾರವಾಗುತ್ತಿವೆ ಮತ್ತು ಕನ್ನಡದಲ್ಲಿ ಅವುಗಳು ಉಚ್ಚಾರ ಆಗುವುದಿಲ್ಲ ಎಂಬ ತಿಳುವಳಿಕೆಯನ್ನು ಬೆಳೆಸಿಕೊಳ್ಳುವುದಕ್ಕೆ ಸಾದ್ಯವಾಯಿತು. ಅಂದರೆ, ಮಾಹೇಶ್ವರ ಸೂತ್ರದಲ್ಲಿ ವಿವರಿಸಿದ್ದ ಮತ್ತು ಪಾಲಿ ಬಾಶೆಗೆಂದು ರೂಪುಗೊಂಡ ಲಿಪಿಯಲ್ಲಿ ಸೇರಿಕೊಂಡಿದ್ದ ದ್ವನಿಗಳು ಎಲ್ಲವೂ ಕನ್ನಡದಲ್ಲಿ ಇಲ್ಲ ಎಂಬ ತಿಳುವಳಿಕೆ ಬಂದಿತು.

ಹೀಗೆ ಸಂಸ್ಕ್ರುತದಲ್ಲಿ ಉಚ್ಚಾರವಾಗುತ್ತಿದ್ದು ಕನ್ನಡದಲ್ಲಿ ಉಚ್ಚಾರವಾಗದ ಎಂದು ತಿಳಿದುಕೊಂಡ ದ್ವನಿಗಳು ಹೀಗಿವೆ, ಸ್ವರಗಳಾದ ಋ, ಋೂ, ಲೃ, ಲೂೃ ಸ್ವರಗಳ ಜೊತೆಗೆ, ಅವುಗಳ ನಂತರ ಪಟ್ಟಿಸಿ ಓದುತ್ತಿದ್ದ ಮತ್ತು (ಅ) ಸ್ವರದ ಸಹಾಯದಿಂದ ಉಚ್ಚಾರವಾಗುವ ಎಂದು ವಿವರಿಸಿರುವ ಯೋಗಾವಾಹಗಳಾದ ಬಿಂದು, ವಿಸರ‍್ಗ, ಜಿಹ್ವಾಮೂಲೀಯ, ಉಪಾದ್ಮಾನಿಯ, ಅವರ‍್ಗೀಯ ವ್ಯಂಜನಗಳಾದ ಶ್, ಷ್ ಮತ್ತು ವರ‍್ಗದ ಎರಡನೆ ಮತ್ತು ನಾಲ್ಕನೆ ಜಾಗದಲ್ಲಿ ಬರುವ ವ್ಯಂಜನಗಳಾದ, ಮಹಾಪ್ರಾಣಗಳು ಎಂದು ಕರೆಯುವ ದ್ವನಿಗಳು ಕನ್ನಡದಲ್ಲಿ ಉಚ್ಚಾರವಾಗುವುದಿಲ್ಲ ಎಂಬ ತಿಳುವಳಿಕೆಯನ್ನು ಪಡೆದುಕೊಳ್ಳಲಾಯಿತು. ಇಲ್ಲಿ ಬಿಂದು ಮತ್ತು ಮಹಾಪ್ರಾಣ ದ್ವನಿಗಳನ್ನುಳಿದು ಉಳಿದ ದ್ವನಿಗಳ ಬಗೆಗೆ ಚೂರು ಮಾತಾಡಬಹುದು. ಬಿಂದು, ಮಹಾಪ್ರಾಣಗಳನ್ನು ಪ್ರತ್ಯೇಕ ಬರಹದಲ್ಲಿ ಮಾತಿಗೆ ತೆಗೆದುಕೊಳ್ಳಬಹುದು.

ಸ್ವರಗಳು-ಋ, ಋೂ, ಲೃ, ಲೂೃ: ಈ ನಾಲ್ಕು ದ್ವನಿಗಳ ವಿಚಾರವಾಗಿ ಹಳೆಯ ಸಂಸ್ಕ್ರುತದ ಪಟ್ಯಗಳಲ್ಲಿ ತುಸು ಬಿನ್ನ ಆಲೋಚನೆಗಳು ಇವೆ. ಇವುಗಳನ್ನು ಸ್ವರಗಳೆಂದು ಪಟ್ಟಿ ಮಾಡುವುದು ಕಾಣುತ್ತದೆಯಾದರೂ ಇವುಗಳು ವ್ಯಂಜನಗಳು, ವ್ಯಂಜನದ ಗುಣವನ್ನು ಹೊಂದಿರುವವು ಎಂದು ಮಾತಾಡಿರುವುದೂ ಸಂಸ್ಕ್ರುತದಲ್ಲಿ ಕಂಡುಬರುತ್ತದೆ. ಕುತೂಹಲವೆಂದರೆ ಉಳಿದ ದ್ವನಿಗಳ ಬಗೆಗೆ ಹೆಚ್ಚು ಸ್ಪಶ್ಟವಾಗಿ ಚರ‍್ಚಿಸುವುದು ಕಾಣಿಸಿದರೆ ಈ ದ್ವನಿಗಳ ಬಗೆಗೆ ಹೆಚ್ಚು ನಿಕರತೆ ಕಾಣಿಸುವುದಿಲ್ಲ. ಈ ದ್ವನಿಗಳನ್ನು ಹೇಳುವಾಗ ಅವುಗಳ ಲಿಪಿರೂಪವನ್ನು ಬಳಸಿಕೊಳ್ಳುವುದೂ ಕೂಡ ಗಮನ ಸೆಳೆಯುತ್ತದೆ. ಅಲ್ಲದೆ ಇವು ಸ್ವರ ಮತ್ತು ವ್ಯಂಜನಗಳ ಬೆರಕೆ ಎಂಬುದು ಸ್ಪಶ್ಟ. ಈ ಎರಡೂ ದ್ವನಿಗಳ ಒಳಗೆ ರ್ ಮತ್ತು ಲ್ ವ್ಯಂಜನಗಳು ಸೇರಿಕೊಂಡೆ ಇವೆ. ಇದರೊಟ್ಟಿಗೆ ಲೃ ಮತ್ತು ಲೂೃ ದ್ವನಿಗಳನ್ನು ನಾಮಿಗಳ ಪಟ್ಟಿಯಲ್ಲಿ ಸೇರಿಸದಿರುವ ಕ್ರಮವೂ ಪ್ರಾತಿಶಾಕ್ಯ ಮೊದಲಾಗಿ ಕೆಲವೆಡೆ ಸಂಸ್ಕ್ರುತದಲ್ಲಿ ಕಾಣಿಸುತ್ತದೆ. ಲೃ, ಲೂೃ ದ್ವನಿಗಳನ್ನು ಕನ್ನಡದಲ್ಲಿ ಯಾವತ್ತಿನಿಂದಲೂ ಪರಿಗಣಿಸಿಲ್ಲ. ಹಾಗಾಗಿ ಅವುಗಳ ಬಳಕೆಯ ವಿಚಾರ ಎಲ್ಲೂ ಕಾಣಿಸುವುದಿಲ್ಲ.

ಋ ಮತ್ತು ಋೂ ಈ ದ್ವನಿಗಳನ್ನು ಪಾಣಿನಿಯು ಸ್ವರಗಳೆಂದು ಹೇಳುವನಾದರೂ ಅವು ಸಮಾಸವಾಗುವಲ್ಲಿ ಬಂದಾಗ ವ್ಯಂಜನದ ಹಾಗೆ ಉಚ್ಚಾರವಾಗುತ್ತವೆ ಎಂದು ಹೇಳುತ್ತಾನೆ. ‘ಪಿತೃ’, ‘ಮಾತೃ’ ಎಂಬ ಪದಗಳಲ್ಲಿ ‘ಋ’ ದ್ವನಿಯು ಸ್ವರದಂತೆ ಬಂದು, ಈ ಪದಗಳು ಸಮಾಸವಾಗುವಾಗ ‘ಪಿತರ್’, ‘ಮಾತರ್’ ಎಂದು ಉಚ್ಚಾರವಾಗುವಾಗ ಅವು ವ್ಯಂಜನದಂತೆ ಉಚ್ಚಾರವಾಗುತ್ತವೆ ಎಂದು ವಿವರಿಸುತ್ತಾನೆ.

ಋ, ಋೂ ದ್ವನಿಗಳು ಕನ್ನಡದಲ್ಲಿ ಇಲ್ಲ ಎಂಬ ತಿಳುವಳಿಕೆಯನ್ನು ವಿದ್ವಾಂಸರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಶಾಸನಗಳಲ್ಲಿ ಇಡಿಯಾಗಿ ಋ ಬಳಕೆಯಾಗುವ ಸಂಸ್ಕ್ರುತದ ಪದಗಳನ್ನು ಬರೆಯುವಾಗ ಕನ್ನಡದ ವ್ಯಂಜನ ರ್ ಹೆಚ್ಚಾಗಿ ಬಳಕೆಯಾಗಿರುವುದು ಕಾಣಿಸುತ್ತದೆ. ಅಂದರೆ ಋ ಇದರ ವ್ಯಂಜನದ ರೀತಿಯ ಉಚ್ಚರಣೆಯನ್ನು ಕನ್ನಡ ಮೊದಲಿನಿಂದಲೂ ತಿಳಿದುಕೊಂಡಿದೆ. ಆದ್ದರಿಂದಲೆ ಬಳಕೆಯಲ್ಲಿ ಋ ಇದನ್ನು ರ್ ಹೆಚ್ಚಿನ ಕಡೆ ಬದಲಿಸಿ ಬಳಕೆಯಾಗಿದೆ ಮತ್ತು ಅರಿಗರೂ ಕೂಡ ಋ ಕನ್ನಡದಲ್ಲಿ ಇಲ್ಲ ಎಂಬುದನ್ನು ಹೇಳುತ್ತಲೆ ಬಂದಿದ್ದಾರೆ. ಋೂ ಬಳಕೆಯಾಗುವ ಪದಗಳೂ ಕೂಡ ಕನ್ನಡಕ್ಕೆ ಬಂದಿಲ್ಲ.

ಯೋಗಾವಾಹಗಳು- ವಿಸರ‍್ಗ, ಜಿಹ್ವಾಮೂಲೀಯ, ಉಪಾದ್ಮಾನಿಯ: ಯೋಗವಾಹಗಳು ಸ್ವರವನ್ನು ಅನುಸರಿಸಿ ಉಚ್ಚರಿಸುವಂತವು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಹೆಚ್ಚಾಗಿ ‘ಅ’ ಸ್ವರವನ್ನು ಅವಲಂಬಿಸುತ್ತವೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ನಾಲ್ಕೂ ಯೋಗಾವಾಹಗಳನ್ನು ಕನ್ನಡದಲ್ಲಿ ಇಲ್ಲ ಎಂಬುದು ಒಂದು ಸಹಜವಾದ ತಿಳುವಳಿಕೆ. ಕೇಶಿರಾಜನು ಕನ್ನಡಕ್ಕೆ ಬೇಕಿಲ್ಲವೆಂದು ಕಳೆಯುವ ಅಕ್ಶರಗಳಲ್ಲಿ ಬಿಂದು ಹೊರತುಪಡಿಸಿ ಉಳಿದ ಮೂರೂ ಇವೆ. ಕನ್ನಡದಲ್ಲಿ ಬಿಂದುವಿನ ಚರಿತ್ರೆಯೂ ತುಸು ಬಿನ್ನವಾಗಿದೆ. ಇದನ್ನು ಪ್ರತ್ಯೇಕವಾಗಿ ಮಾತಾಡಬಹುದು. ಇವುಗಳನ್ನು ವಿವರಿಸುವಾಗ ಅವುಗಳ ಲಿಪಿರೂಪವನ್ನು ಹೇಳುವುದು ಬಹುಹಿಂದೆಯೆ ಬೆಳೆದಿರುವಂತಿದೆ. ಕನ್ನಡದ ಪಾರಂಪರಿಕ ವ್ಯಾಕರಣಗಳಲ್ಲಿ ಇದನ್ನು ಕಾಣಬಹುದು. ಅಂದರೆ, ಇವುಗಳ ಉಚ್ಚರಣೆಯ ಬಗೆಗೆ ಸ್ಪಶ್ಟನೆ ಇಲ್ಲದಿರುವುದು ಇದರಿಂದ ಗೊತ್ತಾಗುತ್ತದೆ. ಇವುಗಳನ್ನು ಕನ್ನಡದಲ್ಲಿ ಮೊದಲಿನಿಂದಲೂ ಅಕ್ಶರಗಳೆಂದು ಪರಿಗಣಿಸಿಲ್ಲ.

ಅವರ‍್ಗೀಯ ವ್ಯಂಜನಗಳು-ಶ್, ಷ್: ಶ್ ಮತ್ತು ಷ್ ಇವು ಎರಡು ಕಂಪಿತ ದ್ವನಿಗಳಾಗಿವೆ. ಊಶ್ಮನ್ ಎಂದು ಕರೆಯುವ ಈ ದ್ವನಿಗಳಿಗೆ ಸಮೀಪದ ಇನ್ನೊಂದು ದ್ವನಿ ಸ್ ಇದು ಕನ್ನಡದಲ್ಲಿ ಅಂದು ಬಳಕೆಯಲ್ಲಿದ್ದಿತು. ಆದರೆ, ಶ್ ದ್ವನಿ ಕನ್ನಡದಲ್ಲಿ ಬಳಕೆಯಲ್ಲಿ ಇರಲಿಲ್ಲ. ಆನಂತರ, ಬಹುಶಾ ಪ್ರಾಕ್ರುತ-ಸಂಸ್ಕ್ರುತಗಳ ನಿರಂತರ ಸಂಬಂದದಿಂದಾಗಿ ಶ್ ದ್ವನಿ ಬೆಳೆದಿರುವಂತಿದೆ. ಶಾಸನಗಳಲ್ಲಿ ಹೆಚ್ಚಿನ ಕಡೆ ಈ ದ್ವನಿಯ ಬಳಕೆ ಸಾಮಾನ್ಯವಾಗಿ ಸ್ ದ್ವನಿಯೊಂದಿಗೆ ವ್ಯತ್ಯಯದಲ್ಲಿ ಕಂಡುಬರುತ್ತದೆ. ಇಂದಿಗೂ ಕೆಲವು ಕನ್ನಡಗಳಲ್ಲಿ ಈ ದ್ವನಿಯ ಬಳಕೆ ಇಲ್ಲ. ಷ್ ದ್ವನಿಯು ಒಂದು ಮೂರ‍್ದನ್ಯ ದ್ವನಿಯಾಗಿದೆ. ನಾಲಿಗೆಯನ್ನು ಮಡಿಚಿ ಉಚ್ಚರಿಸುವ ದ್ವನಿ. ಕನ್ನಡದಲ್ಲಿ ಅವರ‍್ಗೀಯಗಳಲ್ಲಿ ಳ್ ಮಾತ್ರ ಹೀಗೆ ನಾಲಿಗೆಯನ್ನು ಮೇಲಕ್ಕೆತ್ತಿ ಮಡಿಚಿ ಕೆಳತುದಿಯನ್ನು ಮೇಲಂಗುಳಿಗೆ ತಾಕಿಸಿ ಉಚ್ಚರಿಸುವ ದ್ವನಿ. ಷ್ ದ್ವನಿಯನ್ನು ಇಂದಿನ ಕನ್ನಡದಲ್ಲಿ ಶ್ ದ್ವನಿಯಂತೆಯೆ ಉಚ್ಚರಿಸಲಾಗುತ್ತದೆ. ಕಾಲದುದ್ದಕ್ಕೂ ಶಾಸನಗಳಲ್ಲಿ ಷ್ ಇದರ ಬಳಕೆಯನ್ನು ಸ್ ಇಲ್ಲವೆ ಶ್ ಎಂದು ಬಳಸುವುದು ಹೆಚ್ಚಾಗಿ ಕಾಣಿಸುತ್ತದೆ. ಈ ಎರಡೂ ದ್ವನಿಗಳು ಕನ್ನಡದಲ್ಲಿ ಇಲ್ಲ ಎಂದು ನಾಗವರ‍್ಮ, ಕೇಶಿರಾಜ ಇವರು ತಮ್ಮ ವ್ಯಾಕರಣಗಳಲ್ಲಿ ಸ್ಪಶ್ಟವಾಗಿ ಹೇಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಈ ದ್ವನಿಗಳು ಕನ್ನಡದಲ್ಲಿ ಇಲ್ಲ ಎಂದು ವ್ಯಾಕರಣಗಳು ಆನಂತರ ಹೇಳುತ್ತವೆ. ಈ ದ್ವನಿಗಳಲ್ಲಿ ಕೆಲವು ಕನ್ನಡದಲ್ಲಿ ಮೊದಲಿನಿಂದಲೂ ಬಳಕೆಗೆ ಬಂದೆ ಇಲ್ಲ. ಲೃ, ಜಿಹ್ವಾಮೂಲಿಯ, ಉಪಾದ್ಮಾನಿಯ ಮೊದಲಾದವು. ಇನ್ನು ಕೆಲವು ದ್ವನಿಗಳು ಗೊಂದಲದೊಂದಿಗೆ ಬಳಕೆಗೆ ಬಂದವು, ಋ, ಶ್, ಷ್. ಇವು ಹೀಗೆ ಬಳಕೆಯಲ್ಲಿ ಕಂಡುಬರುವುದಕ್ಕೆ ಈ ದ್ವನಿಗಳ ಬಗೆಗೆ ಅಂದಿನ ಬರಹದ ವಲಯದಲ್ಲಿ ಇದ್ದ ಗೊಂದಲವೆ ಕಾರಣವಾಗಿರಬೇಕು.

ಲೃ, ಜಿಹ್ವಾಮೂಲಿಯ, ಉಪಾದ್ಮಾನಿಯ ಈ ದ್ವನಿಗಳ ಬಗೆಗೆ ಕನ್ನಡದಲ್ಲಿ ಬಹುತೇಕ ಸ್ಪಶ್ಟನೆ ಇದ್ದ ಹಾಗಿದೆ. ಆದರೆ ಉಳಿದ ಋ, ಶ್, ಷ್ ದ್ವನಿಗಳ ಬಗೆಗೆ ಚರ‍್ಚೆ ಮೊದಲಾದ ಹಾಗಿದೆ. ಆ ಚರ‍್ಚೆಯೊಟ್ಟಿಗೆ ಇನ್ನೊಂದೆಡೆ ಬಳಕೆಯೂ ಮೊದಲುಗೊಂಡಿರುವಂತಿದೆ. ಹಾಗಾಗಿ ಇವು ಬಳಕೆಯಲ್ಲಿ ಬಂದವು ಮತ್ತು ಅದರೊಟ್ಟಿಗೆ ಬಳಕೆಯಲ್ಲಿ ಗೊಂದಲ ಮತ್ತು ನಿಲುವಿನಲ್ಲಿ ದ್ವಂದ್ವ ಮುಂದುವರೆದವು.

ಈ ಅಂಕಣದ ಹಿಂದಿನ ಬರೆಹ:
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

ಕನ್ನಡದಾಗ ದ್ವನಿವಿಗ್ನಾನ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...