ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆ-ಭಾಗ೨


ಕನಸದಾಸ ಜಯಂತಿಯ ಪ್ರಯುಕ್ತ ಯುವ ಚಿಂತಕ, ಲೇಖಕ ಸುರೇಶ್ ನಾಗಲಮಡಿಕೆ ಅವರು ‘ಸಾಂಸ್ಕೃತಿಕ ನಾಯಕತ್ವ’ದ ಕುರಿತು ವಿಶ್ಲೇಷಿಸಿರುವ ವಿಶೇಷ ಲೇಖನ (ಭಾಗ-೨) ಇಲ್ಲಿದೆ.

ಈ ಲೇಖನದ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಎಲ್ಲರೂ ಅಂದುಕೊಂಡ ಹಾಗೆ ಕನಕದಾಸ ಕೇವಲ ವೈಷ್ಣವಕ್ಕೆ ಅಂಟಿಕೊಂಡಿದ್ದ, ಅವನು ವಿಷ್ಣುವನ್ನು ಮತ್ತು ಕೃಷ್ಣನನ್ನು ಬಿಟ್ಟು ಬೇರೆ ದೇವರನ್ನು ಪೂಜಿಸಲೂ ಇಲ್ಲ ಎಂಬುದು ಸತ್ಯಕ್ಕೆ ಹತ್ತಿರವಲ್ಲ. ಯಾವುದೇ ಕೆಳ ಸಮುದಾಯಗಳು ಕೇವಲ ಒಂದು ದೇವರಿಗೆ ಮಾತ್ರ ನಡೆದುಕೊಂಡ ಹಾಗೆ ಚರಿತ್ರೆಯಲ್ಲಿ ದಾಖಲಾಗಿದೆಯೇ? ಇಲ್ಲವೆಂದೇ ಹೇಳಬೇಕು. ಜನಪದರಿಗೆ ಕೃಷ್ಣ ತಮ್ಮ ಪುರಾಣಗಳಲ್ಲಿ ಜುಂಜಪ್ಪನಾಗಿ ಬರುತ್ತಾನೆ, ಆಂಜನೇಯ ಬೇರೆ ರೀತಿ ಇರಬಹುದು. ಶಿವನಂತೂ ಕುರುಬರಿಗೆ ಬೀರಪ್ಪನೇ ಆಗಿದ್ದಾನೆ. ಇಷ್ಟಕ್ಕೂ ಕುರುಬರ ಹಾಲುಮತ ಪುರಾಣ, ಮಾಳಿಂಗರಾಯನ ಪುರಾಣ, ಮೈಲಾರ ಲಿಂಗ ಪುರಾಣ, ತಗರ ಪವಾಡ ಮುಂತಾದ ಕತೆಗಳನ್ನು ಗಮನಿಸಿದರೆ ಅವರು ಮೂಲತಃ ಶೈವರಾದರೂ ಕೃಷ್ಣನನ್ನು ತಿರಸ್ಕರಿಸುವುದಿಲ್ಲ. ಹಾಲುಮತ ಪುರಾಣದಲ್ಲಿ ಪಾಂಡುರಂಗನ ವೃತ್ತಾಂತವಿದ್ದೇ ಇದೆ. ಅವರು ಕಾಲ ಕಾಲಕ್ಕೆ ಎಲ್ಲ ದೇವರನ್ನೂ ಪೂಜಿಸಿದ್ದಾರೆ. ಹೀಗಿರುವಾಗ ವೈಷ್ಣವ ದೀಕ್ಷೆಯ ಮಾತು ಎಲ್ಲಿ ಬಂತು? ಪೇಜಾವರರ ಮಾತುಗಳು ಕೆಳಸಮುದಾಯಗಳನ್ನು ಒಡೆಯುವ ಮಾತೇ ಆಗಿದೆ. ``ಜನಪದರ ಮಾದಪ್ಪ ಮಾದೇಶ್ವರನಾದ, ಹಾಗಾಗಿ ಕುರುಬರು ಶೈವರಾಗಿ ಕಾಣಿಸಿಕೊಳ್ಳುತ್ತಾರೆ. ಜನಪದರು ತಮ್ಮ ಜನಪದ ದೇವರುಗಳನ್ನು ಪೂಜಿಸುವುದಲ್ಲದೇ ಇತರರ ದೇವರುಗಳಿಗೂ ನಡೆದುಕೊಳ್ಳುತ್ತಾರೆ. ವೆಂಕಟೇಶ್ವರ, ಮಂಜುನಾಥ, ಉಡುಪಿ ಕೃಷ್ಣ ಇವೆಲ್ಲಾ ರಾಜಾಶ್ರಯದಿಂದ ಬೆಳೆದು ನಿಂತಾಗ ಆ ದೇವರುಗಳಿಗೆ ಜನಪದರು ನಡೆದುಕೊಳ್ಳತೊಡಗಿದರು. ಅದರ ಅರ್ಥ ಅವರು ಶೈವರೆಂದಾಗಲೀ ವೈಷ್ಣವರೆಂದಾಗಲೀ ಅಲ್ಲ. ಹೆಚ್ಚೆಂದರೆ ಶಿವನಿಗೆ ನಡೆದುಕೊಳ್ಳುವವರು ಸೋಮವಾರವನ್ನು, ಶ್ರೀನಿವಾಸನಿಗೆ ನಡೆದುಕೊಳ್ಳುವವರು ಶನಿವಾರವನ್ನು ವಾರವಾಗಿ ಆಚರಿಸುತ್ತಾರೆ. ಅದರಾಚೆಗೆ ಬದುಕಿನ ಕ್ರಮದಲ್ಲಿ ಹೆಚ್ಚೇನೂ ಅಂತರಗಳಿರುವುದಿಲ್ಲ. ಮಂಜುನಾಥ-ರಂಗನಾಥರಿಗೆ ಮಾತ್ರವಲ್ಲ ಹಾಸನ ಜಿಲ್ಲೆಯಲ್ಲಿ ಜಿನನಾಥನಿಗೂ ಪೂಜೆ ಮಾಡುತ್ತಾರೆ. ಉತ್ತರ ಕರ್ನಾಟಕದಾದ್ಯಂತ ಉರುಸ್, ಬಸವ ಜಯಂತಿಗಳನ್ನು ತಪ್ಪದೇ ಆಚರಿಸುತ್ತಾರೆ. ಹಾಗೆಂದು ಅವರು ಮುಸಲ್ಮಾನರೂ ಅಲ್ಲ ಅಥವಾ ವೀರಶೈವ ದೀಕ್ಷೆಯನ್ನು ಸ್ವೀಕರಿಸಿದವರೂ ಅಲ್ಲ. ಜನಪದರಲ್ಲಿ ಪಂಥ ಸಿದ್ಧಾಂತಗಳನ್ನು ಮೀರಿದ ಸಿದ್ಧಾಂತ ಸಹಜವಾಗಿ ಕಾಣುತ್ತದೆ.’’

ಹಾಗಾಗಿ ಇಂದಿನ ಧಾರ್ಮಿಕ ಪರಿವೇಷಗಳಿಗೆ ಯಾವುದೇ ಒಂದು ಚೌಕಟ್ಟನ್ನು ನಿರ್ಮಿಸಿದರೆ ಕಷ್ಟವಾಗುತ್ತದೆ. ಹಳೆಯ ಆಚರಣೆಗಳೂ ಚಾಲ್ತಿಯಲ್ಲಿವೆ. ವೈದಿಕೀಕರಣಗೊಂಡ ಪೂಜೆಗಳೂ ಇವೆ. ಇಷ್ಟರ ನಡುವೆ ಎಲ್ಲ ಸಮುದಾಯಗಳೂ ಸಾಂಸ್ಕೃತಿಕ ನಾಯಕತ್ವಕ್ಕೆ, ಐಡೆಂಟಿಟಿಗೆ ಹಾತೊರೆದಿವೆ. ಆಗಲೇ ಸ್ಪಷ್ಟಪಡಿಸಿದ ಹಾಗೆ ನಾಯಕತ್ವವನ್ನು ಆರಿಸಿಕೊಳ್ಳುವಾಗಲೂ ಒಟ್ಟು ಜನಪದರನ್ನು ಗಮನದಲ್ಲಿಟ್ಟುಕೊಂಡು ಮಾಡುವುದೇನೂ ಇಲ್ಲ. ಅಥವಾ ಹಾಗೆ ನಾಯಕನನ್ನು ನಿರ್ಮಿಸಿಕೊಂಡರೂ ಆತನಿಂದಲೇ ಆ ನಾಯಕನನ್ನು ಮಾತ್ರ ಪೂಜಿಸುತ್ತಾರೆ, ಇತರ ಜನಪದ ದೈವಗಳನ್ನು ಮರೆಯುತ್ತಾರೆ ಎಂದರೆ ಅದು ಸುಳ್ಳು. ಆದರೆ ಅವರ ಐಡೆಂಟಿಟಿಗೆ ಹಾತೊರೆದಿದ್ದು ಅಸ್ಸಾದಿಯವರು ಸರಿಯಾಗಿಯೇ ಗುರುತಿಸಿರುವ ಹಾಗೆ ``ಭಾರತದ ಸಂದರ್ಭದಲ್ಲಿ ಎಷ್ಟೋ ಸಮುದಾಯಗಳು ತಮ್ಮ ಐಡೆಂಟಿಟಿಯನ್ನು ನಿರ್ಮಿಸುವ ಸಂದರ್ಭದಲ್ಲಿ ತಾವು `ಬೇರೆ’ ಸಮುದಾಯಗಳಿಂದ ಹೇಗೆ ವಿಭಿನ್ನವಾಗುತ್ತವೆ. ಚಾರಿತ್ರಿಕ ಸಂದರ್ಭದಲ್ಲಿ ಹೇಗೆ `ಬೇರೆ’ ಸಮುದಾಯಗಳು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತವೆ ಮತ್ತು `ಬೇರೆ’ ಸಮುದಾಯಗಳು ತಮ್ಮನ್ನು ವಂಚಿಸುತ್ತವೆ ಹಾಗೂ `ಬೇರೆ’ಯವರು ತಮ್ಮನ್ನು ವ್ಯವಸ್ಥಿತವಾಗಿ ಹೇಗೆ ತುಳಿಯುತ್ತದೆ ಎಂಬಿತ್ಯಾದಿ ವಾದಗಳನ್ನು, ಸಂವಾದಗಳನ್ನು ನಿರ್ಮಿಸುವುದನ್ನು ನಾವು ಕಾಣುತ್ತೇವೆ. ಈ ವಾದಗಳನ್ನು ನಾವು ಕೆಲವು ಸಾಮಾಜಿಕ ಚಳುವಳಿಗಳಲ್ಲಿ ಕಾಣಬಹುದಾಗಿದೆ. ಈ ಬಗೆಯ ಭಾವನೆಗಳು ಹುಟ್ಟಿದಾಗ ಪ್ರತಿಯೊಂದು ಜಾತಿಗಳೂ ಸಾಂಸ್ಕೃತಿಕ ನಾಯಕನನ್ನು ಕಟ್ಟಿಕೊಂಡು ತಮ್ಮ ಅಸ್ಮಿತೆಗಾಗಿ ಹುಡುಕಾಟ ಪ್ರಾರಂಭಿಸುತ್ತವೆ. ಆದರೆ ಇವರು ರೂಪಿಸಿಕೊಂಡ ಸಾಂಸ್ಕøತಿಕರೆನ್ನಲಾಗುವ ಕನಕದಾಸ, ಮಾದಾರ ಚೆನ್ನಯ್ಯ, ಕೈವಾರ ತಾತಯ್ಯ (ಬಣಜಿಗರು), ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದವರೇ. ಆಧುನಿಕ ಸಂದರ್ಭದಲ್ಲಿ ಮಾತ್ರ ಇವರ ತತ್ವ ಚಿಂತನೆಗಿಂತ `ನಮ್ಮವರು’ ಎಂಬ ವಾದಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ತಳ ಸಮುದಾಯಗಳಿಗೆ ಈ ರೀತಿ ಒಗ್ಗೂಡುವುದನ್ನು ತಪ್ಪಿಸಿವುದು ಕೂಡ ದೌರ್ಜನ್ಯ ಎಂಬ ಮಾತುಗಳಿವೆ. ಆದರೆ ತಮ್ಮ ನಾಯಕತ್ವದ ಗೊತ್ತುಗುರಿಗಳೇನು ಎಂಬುದನ್ನು ಸರಿಯಾಗಿ ಅರಿಯಬೇಕಷ್ಟೆ. ಇಲ್ಲದಿದ್ದರೆ ಸ್ವಾಮಿ ವಿವೇಕಾನಂದರಿಗೆ ಆಗುತ್ತಿರುವ ಅನ್ಯಾಯಗಳು ಎಲ್ಲರಿಗೂ ಆಗುತ್ತವೆ. ಇಂದು ಕೆಲವು ಗುಂಪುಗಳು ವಿವೇಕಾನಂದರನ್ನು ಕೇವಲ ಹಿಂದುತ್ವದ ಆಧಾರದ ಮೇಲೆ ಗುರುತಿಸುತ್ತಿರುವುದನ್ನು ಕಂಡರೆ ಇದು ತಿಳಿಯುತ್ತದೆ. ವಾಸ್ತವವಾಗಿ ಪುರೋಹಿತಶಾಹಿಯನ್ನು ವಿರೋಧಿಸಿದ ವಿವೇಕಾನಂದರು ಅಸ್ಪೃಶ್ಯತೆಯ ಆಚರಣೆಯನ್ನು ಒಂದು ಪಿಡುಗು ಎಂದು ಭಾವಿಸಿದ್ದರು. ಅವರ ತತ್ವಗಳನ್ನು ಹಿಂದೂವಾದಿಗಳು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ವಿವೇಕಾನಂದರನ್ನು ಕೇವಲ ಹಿಂದೂ ಧರ್ಮದ ಆವರಣದಲ್ಲಿ ಗುರುತಿಸಿ ಭಾರತೀಯ ಯುವ ಮನಸ್ಸುಗಳ ಆರೋಗ್ಯವನ್ನು ಕೆಡಿಸುವುದು ಇಂದು ನಡೆಯುತ್ತಿದೆ. ಮುಸ್ಲಿಮರು ಕೂಡ ಟಿಪ್ಪು ಸುಲ್ತಾನನನ್ನು ತಮ್ಮವನು ಎಂಬ ಕಾರಣಕ್ಕೆ ಆತನಿಗೆ ನಾಯಕತ್ವ ನೀಡಿದರೂ ಇನ್ನೂ ಅದು ಸ್ಪಷ್ಟವಾಗಿಲ್ಲ. ಟಿಪ್ಪು ಕನ್ನಡ ನೆಲದ ಸಾಂಸ್ಕೃತಿಕ ನಾಯಕನೆಂದೇ ಬಿಂಬಿತನಾಗಿದ್ದಾನೆ. ಇವನ ಕುರಿತು ಜನಪದರು ಅನೇಕ ಲಾವಣಿಗಳನ್ನು ಕಟ್ಟಿದ್ದಾರೆ. ಮುಸ್ಲಿಮರು ತಮ್ಮ ಕುರಾನ್ ಗ್ರಂಥವನ್ನೇ ಇಂದಿಗೂ ಪವಿತ್ರವೆಂದು ಭಾವಿಸಿದ್ದಾರೆ. ಆದರೆ ಮುಸ್ಲಿಂ ಮೂಲಭೂತವಾದ ಕೆಲವೊಮ್ಮೆ ಅಪಾಯಕಾರಿಯೂ ಆಗಿದೆ. ಹಾಗಾಗಿ ನಾಯಕತ್ವದ ಪರಿಕಲ್ಪನೆ ತುಂಬಾ ಸಂಕೀರ್ಣವಾದುದು. ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಇದು ಅವಲಂಬಿತಗೊಂಡಿದೆ. ಅದು ಸಂಪೂರ್ಣ ರಾಜಕೀಯ ವೇಷ ತೊಟ್ಟರೆ ಇನ್ನೂ ಅಪಾಯ. ಭಾರತದ ದೊಡ್ಡ ಚಿಂತಕರೆನಿಸಿರುವ ಲೋಹಿಯಾ ಅವರ ಬಯಕೆ ಹೀಗಿತ್ತು. ``ನಮ್ಮ ದೇಶದಲ್ಲಿ ವರ್ಗ ಮತ್ತು ಜಾತಿ ಜೊತೆಜೊತೆಗೇ ಇರುವುದರಿಂದ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ಕೂಲಿಕಾರರು ತಮ್ಮ ನಗರದ ಸಂಘಟನೆಗಳನ್ನು ಕಟ್ಟಿಕೊಂಡಿರುವಂತೆಯೇ ಸಮಾನತೆಯ ಧೋರಣೆಯ ಬ್ರಾಹ್ಮಣ ಯುವಕರ ಜೊತೆ ಹರಿಜನರು, ಆದಿವಾಸಿಗಳು, ಮಹಿಳೆಯರು ಮತ್ತು ಇತರ ದುರ್ಬಲ ವರ್ಗಗಳು ಸೇರಿ ಒಂದು ರಾಜಕೀಯ ಸಂಘಟನೆಗೆ ಸಮನಾದ ವೇದಿಕೆಯನ್ನು ರೂಪಿಸಿಕೊಳ್ಳುವ ಅವಶ್ಯಕತೆ ಇದೆ.’’

ಜನಪದ ಕಥನಗಳಲ್ಲಿ ಮೂಡಿಬಂದಿರುವ `ನಾಯಕತ್ವ ಈಗಾಗಲೇ ಈ ವಿಷಯ ಕುರಿತು ಹಿಂದೆ ಅಲ್ಲಲ್ಲಿ ಚರ್ಚೆ ಮಾಡಿದ್ದರೂ ತಾತ್ವಿಕವಾಗಿ ಮತ್ತಷ್ಟು ವಿಸ್ತರಿಸುವುದು ಸೂಕ್ತ. `ಜನಪದ’ ಎಂಬ ಪದಕ್ಕೆ ಇರುವ ಅರ್ಥವೇ ವ್ಯಾಪಕವಾದುದು. ಯಾವುದೇ ಒಂದು ಆಚರಣೆಯನ್ನು, ಪವಾಡವನ್ನು, ದೈವವನ್ನು ಅದು ಸ್ವೀಕಾರ ಮಾಡಿದಾಗ ಅಲ್ಲಿ ಸಮಷ್ಟಿಯ ಲೋಕದೃಷ್ಟಿ ಕೆಲಸ ಮಾಡುತ್ತಿರುತ್ತದೆ. ಹಾಗೆಯೇ ಅದು ಎಷ್ಟೋ ಸಂದರ್ಭಗಳಲ್ಲಿ ಹೆಚ್ಚು ಜೀವಪರವೂ ಆಗಿರುತ್ತದೆ. ಎಲ್ಲ ಕಾಲಕ್ಕೂ ತಮಗೆ ಸರಿ ಎನಿಸಿದ್ದನ್ನು ಸ್ಮೃತಿಕೋಶದಲ್ಲಿ ಅಥವಾ ನೆನಪಿನ ಜಗತ್ತಿನಲ್ಲಿ ಕಾಪಾಡಿಕೊಳ್ಳುವಾಗ ಅದು ಅನುಸರಿಸುವ ದಾರಿ ಮೌಖಿಕದ್ದೇ ಆಗಿರುತ್ತದೆ. ಇದು ಎಲ್ಲಾ ಕಾಲಕ್ಕೂ ಸಂಬಂಧಿಸಿದೆ. ಒಮ್ಮೆ ಪುರಾಣಗಳನ್ನು ಸೃಷ್ಟಿಸಿಕೊಳ್ಳುತ್ತದೆ; ಮತ್ತೊಮ್ಮೆ ಲಾವಣಿಗಳು, ಒಗಟುಗಳಲ್ಲಿ, ಗಾದೆಗಳಲ್ಲಿ ಅಭಿವ್ಯಕ್ತಿಸುತ್ತಿರುತ್ತದೆ. ಇದರಲ್ಲಿ ಜನಪದ ನಾಯಕರೂ ಸೇರುತ್ತಾರೆ. ಜನಪದರು ಕೇವಲ ಕುಲಮೂಲ ಪುರಾಣಗಳಲ್ಲಿ ತಮ್ಮ ಸಾಂಸ್ಕøತಿಕ ನಾಯಕರನ್ನು ಗುರುತಿಸಿಕೊಳ್ಳದೆ ಆಚರಣೆಗಳಲ್ಲೂ ಲಾವಣಿ ರೂಪದಲ್ಲೂ ಹರಿಕಥೆ ರೂಪದಲ್ಲೂ ನೆನಪಿಸಿಕೊಂಡಿದ್ದಾರೆ.

ಈ ಸಾಲಿಗೆ ರೇವಣ್ಣಸಿದ್ಧ, ಬಸವಣ್ಣ, ಸಂಗೊಳ್ಳಿ ರಾಯಣ್ಣ ಟಿಪ್ಪು ಸುಲ್ತಾನ, ಕೈವಾರ ತಾತಯ್ಯ, ಸ್ವಲ್ಪಮಟ್ಟಿಗೆ ಕನಕದಾಸ ಹೀಗೆ ಅನೇಕರು ಜನಪದರ ನೆನಪುಗಳಲ್ಲಿ ಇದ್ದಾರೆ. ರೇವಣ್ಣಸಿದ್ಧನನ್ನು ಕುರುಬ ಸಮುದಾಯವಲ್ಲದೇ ಹಲವು ಸಮುದಾಯಗಳು ತಮ್ಮ ಜನಪದ ಕತೆಗಳಲ್ಲಿ ಇಂದಿಗೂ ನಾಯಕತ್ವಕ್ಕೆ ಏರಿಸಿ ಕಾಪಿಟ್ಟುಕೊಂಡಿವೆ. ಅವರ ಸಾಮಾಜಿಕ ಸ್ಥಾನಮಾನದ ಹಕ್ಕಿಗಾಗಿ ರೇವಣಸಿದ್ಧ ತಪಸ್ಸು ಮಾಡಲು ಸಿದ್ಧನಾಗಿದ್ದಾನೆ. ಅವನ ಘೋರ ತಪಸ್ಸಿನ ವಿವರವನ್ನು ಜನಪದರು ಹೀಗೆ ಕಟ್ಟಿದ್ದಾರೆ-

ವೊಡಿವುತ್ತವೊಡೆದು ಜಡೆ ಬೇರಿಗಳಿದಾವು

ತಲೆಯಾಗುಳಲ್ಲ ಕರ ಮೇಡು | ರೇವಣುನೋರ

ಅಣೆಯ ಮ್ಯಾಲಳ್ಳಿ ಪಲವಾದು | ರೇವಣುನೋರ

ಉಬ್ಬಿನಾಗೆ ಗುಬ್ಬಿ ಚಿಗುತಾವು | ರೇವಣುನೋರ

ರೆಪ್ಪೆಯಾಗೆ ಇಪ್ಪೆ ತಲವಾದು | ರೇವಣುನೋರ

ಕಣ್ಣಾಗೆ ಕಳುವೆ ವೊಡುದಾವು | ರೇವಣುನೋರ

ಪಾದ್ದಲ್ಲಿ ಪದಮು ಬೆಳೆದಾವು

ಈ ಘೋರ ತಪಸ್ಸಿಗೆ ಶರಣಾದ ಶಿವನಾರಾಯಣರು ಏನು ಬೇಕು ಎಂದು ಕೇಳಿದಾಗ ಹಾಲುಮತವನ್ನು ಒಳಗೊಳ್ಳಬೇಕು ಎಂದು ರೇವಣ್ಣಸಿದ್ಧ ಕೇಳುತ್ತಾನೆ. ಅವರು `ಊರು ಪಡೆಯಲಿಲ್ಲ, ಒಕ್ಕಲು ಪಡೆಯಲಿಲ್ಲ, ಜಿಡ್ಡು ಕುರುಬರನ್ನು ಪಡೆದೆಯಲ್ಲ ಎಂದು ಹೇಳುತ್ತಾರೆ. ಆದರೂ ರೇವಣ್ಣ ಅವರಲ್ಲೇ ನೆಲೆಗೊಳ್ಳುತ್ತಾನೆ. ಹಾಗಾಗಿಯೇ ಇಂದಿಗೂ ಕುರುಬರು ಅವನನ್ನು ಕುಲಗುರುವನ್ನಾಗಿ, ನಾಯಕನನ್ನಾಗಿ ಸ್ವೀಕರಿಸುತ್ತಾರೆ. ಇಂದಿಗೂ ಇವನ ಹೆಸರಿನ ಹಲವು ಗದ್ದುಗೆಗಳು ಇವೆ. ಇವನ ಹೆಸರಿನಲ್ಲಿ ಜಾತ್ರೆಗಳು ನಡೆಯುತ್ತವೆ. ನಾಥ ಮತ್ತು ಸಿದ್ಧ ಪರಂಪರೆಗೆ ಹೆಚ್ಚು ಒಲಿದಿದ್ದ ಈ ಸಮುದಾಯವು ತಮ್ಮ ಪುರಾಣಗಳಲ್ಲಿ ಸಿದ್ಧರಾಮ ಮತ್ತು ಗೋರಖನಾಥರನ್ನು ನೆನಪಿಸಿಕೊಂಡು ಅವರ ಬಳಿ ವಿದ್ಯೆ ಕಲಿತಿರುವ ಪ್ರಸಂಗಗಳನ್ನು ತಂದಿದ್ದಾರೆ. ಇದಕ್ಕೆ ಸಮರ್ಥನೆ ಎನ್ನುವ ಹಾಗೆ ಕಲಬುರ್ಗಿಯವರು ಸಿದ್ಧರಾಮನ ವಿಚಾರದಲ್ಲಿ ನಾಥಪಂಥವನ್ನು ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬರುತ್ತಾರೆ. ``ಸೊಲ್ಲಾಪುರದ ಸಿದ್ಧರಾಮನ ಸಮಾಧಿಯ ಅರ್ಚಕರು ಇಂದು ಲಿಂಗಾಯತರಾಗಿದ್ದರೂ ಮೂಲತಃ ಹಂಡೇ ಕುರುಬರೆಂದು ಜನ ಹೇಳುತ್ತಾರೆ. ಬಳ್ಳಾರಿ-ಅನಂತಪುರಗಳಲ್ಲಿ ಆಳಿದ ಹಂಡೇ ಕುರುಬ ಜಾತಿಯ ಮಲನಾಯಕನ ಮನೆದೇವರು ಸೊಲ್ಲಾಪುರದ ಸಿದ್ಧರಾಮನಾಗಿರುವುದು ಇಲ್ಲಿ ಲಕ್ಷಿಸಬೇಕಾದ ಸಂಗತಿಯಾಗಿದೆ. ಸಿದ್ಧರಾಮನ ಜನನಕ್ಕೆ ಆಶೀರ್ವದಿಸಿದ ರೇವಣಸಿದ್ಧನೂ ನಾಥಪಂಥೀಯನಾಗಿದ್ದು, ಜಾತಿಯಿಂದ ಕುರುಬನೇ ಆಗಿರುವಂತಿದೆ. ಕುರುಬ ಸಮಾಜದಲ್ಲಿ ರೇವಣ್ಣಸಿದ್ಧನ ಹೆಸರಿನ ಮಠಗಳಿರುವುದು, ಈ ಹೆಸರನ್ನು ಭಕ್ತಿಯಿಂದ ಅವರು ಸ್ಮರಿಸುವುದು ಈಗಲೂ ಕಂಡುಬರುತ್ತದೆ.

ಈ ಬಗೆಯಲ್ಲಿ ಜನಪದರು ರೇವಣ್ಣನನ್ನು, ಸಿದ್ಧರಾಮನನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಟಿಪ್ಪುವನ್ನು ಮುಸ್ಲಿಂರಿಗಿಂತ ಜನಪದರೇ ಹೆಚ್ಚು ತಮ್ಮ ಲಾವಣಿಗಳಲ್ಲಿ ಹಿಡಿದಿಟ್ಟಿದ್ದಾರೆ. ಅವನನ್ನು ಸಾಮರಸ್ಯದ ಸಂಕೇತವಾಗಿ, ಮತ್ತು ನಾಡಪ್ರೇಮಿಯಾಗಿ ಅನಾವರಣಗೊಳಿಸಿಕೊಂಡಿದ್ದಾರೆ. ಟಿಪ್ಪುವನ್ನು ಕೆಲವರು ಚರಿತ್ರೆಯಲ್ಲಿ ಅವನಿಗೆ ಜಾಗವಿಲ್ಲ ಎಂದು ಬಗೆದು ಹಿಂದೂ ವಿರೋಧಿ ನಿಲುವುಗಳನ್ನು ಪ್ರತಿಪಾದಿಸಿದ ಎಂಬ ಕಾರಣಕ್ಕೆ ದೂರವಿಡುವ ಪ್ರಯತ್ನಗಳು ನಡೆದವು. ಆದರೆ ಜನಪದರು ಹಾಗೆ ಕಂಡಿಲ್ಲ. ಲಿಂಗದೇವರು ಹಳೆಮನೆ ಅವರ `ಜನಪದರು ಕಂಡ ಟಿಪ್ಪು’ ಎಂಬ ಲೇಖನದಲ್ಲಿ ಲಾವಣಿ ಪದಗಳನ್ನು ಸಂಗ್ರಹಿಸಿದ್ದಾರೆ. ಅವರ ಕಂಡ ಟಿಪ್ಪು ಹೀಗಿದ್ದಾನೆ.

ಟಿಪ್ಪುವಿನ ರಾಜ್ಯದೊಳು ಶರಾಬು, ಶೇಂದಿ

ಗಾಂಜಾ ಅಫೀಮು ಇರಲಿಲ್ಲ

ಟಿಪ್ಪುವಿನ ಕಾಲದೊಳು ಜೂಜಿನಾಟ

ಮೇಣ್ ವ್ಯಭಿಚಾರದ ಸುಳಿವಿರಲಿಲ್ಲ

ಜ್ಞಾಪಕವಿದ್ದಿತು ಸಬ್ಬಲ್ ರಾಣಿಯ

ದಿಣ್ಣೆಯ ಭೀತಿಯ ಜನಕ್ಕೆಲ್ಲ

ಜೋಡಿ ಸುತ್ತಿನ ಕೋಟೆಗೆ

ಟೈಗರ್ ಆಗಿ ಕಾದಿದ್ದ

ಬೇಡಿನ ದ್ವಿಜರಿಗೆ ಬಿಡದೆ

ದಾನ ನೀಡಿದ್ದ

ಟಿಪ್ಪು ಸುಲ್ತಾನ ಹಿಂದೂ-ಮುಸಲ್ಮಾನರ

ಉದ್ದಾರ ದೊರೆಯಾಗಿದ್ದ.

ಜನಪದರು ಎಂದಿಗೂ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡಲಾರರು. ಟಿಪ್ಪು ಆಗಬಹುದು, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರಾಗಬಹುದು. ಹೀಗೆ ಎಲ್ಲರನ್ನೂ ಕುರಿತು, ತಮ್ಮನ್ನು ರಕ್ಷಿಸಿದ ನಾಯಕರನ್ನು ಕುರಿತು ಪದಗಳನ್ನು, ಲಾವಣಿಗಳನ್ನು ಕಟ್ಟಿ ಅವರನ್ನು ನಾಯಕತ್ವಕ್ಕೆ ಏರಿಸಿದ್ದಾರೆ. ಅವರ ವೀರತ್ವವನ್ನು ಜನಪದರು ತಮ್ಮ ಬದುಕಿನಲ್ಲಿ ಎಂದಿಗೂ ಮರೆಯುವುದಿಲ್ಲ. ಉತ್ತರಕರ್ನಾಟಕದ ಅನೇಕ ಲಾವಣಿಗಳಲ್ಲಿ ಈ ಬಗೆಯ ನಾಯಕರನ್ನು ಕಾಣಬಹುದು. ಬಯಲುಸೀಮೆಯಲ್ಲಿ (ಮಧುಗಿರಿ, ಪಾವಗಡ, ಕೊರಟಗೆರೆ) ವೀರಚೆನ್ನಯ್ಯನೆಂಬ ಗೊಲ್ಲನಾಯಕನನ್ನು ಕುರಿತು ಈಗಲೂ ನಮ್ಮ ಜನಪದರ ಲಾವಣಿಗಳಿವೆ. ಅವು ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲೂ ಲಭ್ಯ. ಊರಿನ ದನಗಳನ್ನು ರಕ್ಷಿಸಿ ವೀರಮರಣವನ್ನಪ್ಪಿದ ಚೆನ್ನಯ್ಯನನ್ನು ದಲಿತರು, ಗೊಲ್ಲರು ಇಂದಿಗೂ ನೆನಪಿಸಿಕೊಂಡು ಜಾತ್ರೆಯನ್ನು ಮಾಡುತ್ತಾರೆ. ಜನಪದ ಪುರಾಣಗಳಲ್ಲಿ ಕಾಣುವ ಆಯಾ ಸಮುದಾಯಗಳ ನಾಯಕರಲ್ಲದೆ ಇನ್ನೂ ಅನೇಕ ಜನಪದ ಕಥೆಗಳಲ್ಲಿ, ಲಾವಣಿಗಳಲ್ಲಿ ನಾಯಕರಿದ್ದಾರೆ. ಅವರು ಹೆಚ್ಚು ಪ್ರಾದೇಶಿಕರಾಗಿದ್ದಾರೆ, ಕೋಟೆ-ಚೆನ್ನಯ್ಯರಿದ್ದ ಹಾಗೆ. ಆದರೆ ಈ ಬಗೆಯ ಜನಪದ ನಾಯಕರಿಗೂ ಆಧುನಿಕ ಸಂದರ್ಭದಲ್ಲಿ `ಆಯ್ಕೆ’ ಮಾಡಿಕೊಂಡ ಸಾಂಸ್ಕøತಿಕ ನಾಯಕರಿಗೂ ಸಾಕಷ್ಟು ಭಿನ್ನತೆಗಳು ಇವೆ. ವಚನಕಾರರಲ್ಲಿ ಬಸವಣ್ಣ ಮತ್ತು ಅಲ್ಲಮನನ್ನು ಬಿಟ್ಟರೆ ಹೆಚ್ಚು ಜನಪದ ಕತೆಗಳು ನಮಗೆ ಸಿಗುವುದಿಲ್ಲ. ಅಲ್ಲಮ, ಮಂಟೇಸ್ವಾಮಿಯವರ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಬಸವಣ್ಣನನ್ನು ಉತ್ತರ ಕರ್ನಾಟಕದ ಜನತೆ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡಿರುವ ಬಗೆ ದಂಗುಪಡಿಸುವಂತಹದು. ಇವೆಲ್ಲವೂ ಶ್ರಮಿಕ ಸಮುದಾಯಗಳೇ.

ಈಶರನ ನೆನಸಿದವರ ವಿಸವೆಲ್ಲ ಅಮೃತ

ಬಿಸಿಲೆಂಬ ದಾರಿ ನೆರಲಾಗಿ ಎಲೆ ಮನವೆ

ಬಸವಯ್ಯ ನೆನಸು ಕೈಲಾಸ

ಎಲ್ಲಿ ಬಲ್ಲಿದವಯ್ಯ ಕಲ್ಯಾಣ ಬಸಯ್ಯ

ಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆ

ಸೊಲ್ಲೆತ್ತಿ ಜನವು ಹಾಡುವುದು

ಮುಂತಾಗಿ ಹಾಡು ಕಟ್ಟಿದ್ದಾರೆ. ಒಂದು ಕಾಲಕ್ಕೆ ಬಸವನನ್ನು ಶಿವನ ಅವತಾರವೇ ಎಂದು ನಮ್ಮ ಜನಪದರು ನಂಬಿದ್ದರು. ಆದರೆ ಇಂದು ಕೇವಲ ಒಂದು ಸಮುದಾಯಕ್ಕೆ ಬಸವ ಸೀಮಿತಗೊಂಡಿರುವುದು ವಿಪರ್ಯಾಸ. ಬಸವಣ್ಣನ ಹಿರಿಮೆಯನ್ನು ಮಂಟೇಸ್ವಾಮಿ ಪುರಾಣವೂ ಚೆನ್ನಾಗಿ ಕಟ್ಟಿಕೊಟ್ಟಿದೆ. ಬಸವಣ್ಣನನ್ನು ಬಿಟ್ಟರೆ ಈ ಮಟ್ಟದಲ್ಲಿ ಉಳಿದ ವಚನಕಾರರನ್ನು ಜನಪದ ಪಠ್ಯಗಳು ನಿರೂಪಿಸಿರುವುದು ಕಡಿಮೆ. ಆದರೂ ಅವರು ರಚಿಸಿದ ವಚನಗಳೇ ಒಂದು ಕಾಲಕ್ಕೆ ಜನಪದ ಪಠ್ಯಗಳು ಆಗಿದ್ದವು ಎನ್ನುವುದನ್ನು ಮರೆಯಬಾರದು. ಅನುಭವಮಂಟಪ ಒಂದು ರೀತಿಯಲ್ಲಿ ಜನಪದ ಅಂಗಳ ಆಗಿತ್ತು. ಏಕೆಂದರೆ ಅಲ್ಲಿ ಹಾಡುತ್ತಿದ್ದ ಅನೇಕ ವಚನಗಳು ಜನಪದರ ಬಾಯಲ್ಲಿ ಇರುತ್ತಿದ್ದವು. ಅಲ್ಲಿ ಚರ್ಚೆ ಮಾತ್ರ ನಡೆಯುತ್ತಿರಲಿಲ್ಲ ಎಂಬುದು ತಿಳಿದ ಸಂಗತಿ. ಈ ಬಗೆಯ ಸಮಷ್ಟಿಯ ಅನುಕೂಲ ಕೀರ್ತನಕಾರರಿಗೆ ದಕ್ಕಲಿಲ್ಲವೆನಿಸುತ್ತದೆ. ವಚನಕಾರರು ಕಾಯಕ ಜೀವಿಗಳೂ ಆಗಿದ್ದರಿಂದ ಆ ಪ್ರಜ್ಞೆಯಿಂದ ಅವರು ಹೆಚ್ಚು ಜನಪದೀಯಗೊಂಡರು. ಈ ಬಗೆಯ ಕಾಯಕ ಪ್ರಜ್ಞೆಯಿಂದ ಪ್ರಚಲಿತದಲ್ಲಿರುವ ಮತ್ತೊಬ್ಬ ವಚನಕಾರ ವೀರಗೊಲ್ಲಾಳ ಗೊಲ್ಲ ಇಲ್ಲವೇ ಕುರುಬ ಕುಲಕ್ಕೆ ಸೇರಿದವನೆಂದು ಹೇಳಲಾಗಿದೆ. ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಭಾವಿಸಿದ ಗೊಲ್ಲಾಳ, ಜನಪದರ ಕಣ್ಣಲ್ಲಿ ಈಗಲೂ ಇದ್ದಾನೆ. ಈತನ ಹೆಸರಿನಲ್ಲಿ ಜಾತ್ರೆಯೂ ನಡೆಯುತ್ತದೆ. ಆದರೆ ಈತ ಗೊಲ್ಲರಿಗಾಗಲೀ ಕುರುಬರಾಗಲೀ ಸಾಂಸ್ಕøತಿಕ ನಾಯಕನಾಗಲಿಲ್ಲ. ದಾಸ ಸಾಹಿತ್ಯದಲ್ಲಿ ಕನಕದಾಸರನ್ನು ಕುರಿತು ಜನಪದರು ಕಡಿಮೆ ಹಾಡಿದ್ದಾರೆ. ಬಹುಶಃ ಮೊದಲ ಬಾರಿಗೆ ನಿಂಗಣ್ಣ ಸಣ್ಣಕ್ಕಿಯವರು ಬಾಡ-ಹಾವೇರಿ, ಬೆಳಗಾವಿ ಮುಂತಾದ ಊರುಗಳಿಂದ, ಜನಪದರಿಂದ ಕನಕದಾಸರನ್ನು ಕುರಿತಾದ ಕೆಲವು ಜನಪದ ಹಾಡುಗಳನ್ನು, ತ್ರಿಪದಿಗಳನ್ನು, ಡೊಳ್ಳು ಪದಗಳನ್ನು ಸಂಗ್ರಹಿಸಿದ್ದಾರೆ. ಇವೆಲ್ಲವೂ ಕನಕದಾಸರನ್ನು ಕುರಿತಾದ ಮಾಹಿತಿ ರೂಪದ ಪದಗಳೇ ಆಗಿವೆ. ಇಲ್ಲಿ ಅಂತಹ ಕೆಲವು ಆಯ್ದ ಪದಗಳನ್ನ ನೀಡಲಾಗಿದೆ-

ಹಲವು ಮತ ತಿಳಿದವನವನೂ

ಒಂದೇ ಒಂದು ಮತ ಎಂದವನೂ

ಒಂದೇ ಮತ ತಿಳೀದ್ಹೇಳಿದವನ

ಭೂಮಿಗೆ ಇಲ್ಲ ಜಾತಿಯನೂ

ಗುರು ವ್ಯಾಸರಾಯನ ಹರಕೆ ಪಡೆದವನೂ

ದಾಸ ಮತದಲಿ ಮೊದಲಿಗನೂ

ಬಕುತಿ ಭಾವದಲಿ ಬಲ್ಲಿದನವನೂ

ದಾಸರಲಿಸರವ ಹೆಚ್ಚಿನ ಬಕುತನೂ (ಏಕತಾರಿ ಹಾಡಿನಲ್ಲಿ)

... ... ... ... ... ... ... ...

ಬಸವಣ್ಣ ಅಲ್ಲಮ ಪ್ರಭುವರಾ ಹರಾ

ತಿಳಿಸಿದಾರ ಮಾನವರಿಗೆಲ್ಲ ಜೀವಾಧಾರಾ

ಕುರುಬನೆಂದರೂ ಕನಕದಾಸ ಮಹಾ ಬಹಾದೂರಾ

ತಿಳಿಸಿದಾನ ಸರವರಿಗೆಲ್ಲ ಬೇವರಿರುವ ಕಳಾ (ಗೀಗಿಪದ)

ಅರಸೊತ್ತಿಗೆಯ ಕಡೆಗೊಮ್ಮೆ ಹೊರಳ್ಯಾನೋ

ಅರಸೊತ್ತಿಗೆಯ ಕಡೆಗೊಮ್ಮೆ ಹೊರಳ್ಯಾನಯ್ಯ

ವೇದಿಕಹಾದಿ ಕಂಡಾನವನೋ

ಅಲ್ಲಿಗಿಲ್ಲಿಗೆ ಇದೊಂದ ಸಂಧಿ ಸಂಧಿಗೇಳ ಬಳ್ ಮುಂದ್ಹೇಳೋ||

(ಡೊಳ್ಳುಪದ)

ಕನದಾಸರ ಬಗೆಗಿನ ಈ ಜನಪದ ಪಠ್ಯಗಳು ಹಾಲುಮತ ಪುರಾಣ, ಮಾಳಿಂಗರಾಯ ಪುರಾಣ, ರೇವಣ್ಣಸಿದ್ಧ ಪುರಾಣಗಳಷ್ಟು ಗಟ್ಟಿತನವನ್ನು ಪಡೆದಿಲ್ಲವಾದರೂ ಅವರ ಬಗ್ಗೆ ಕೆಲವು ಒಳನೋಟಗಳನ್ನು ತೋರಬಲ್ಲವಷ್ಟೆ. ಈ ಮಾತು ಕನಕದಾಸರಿಗಷ್ಟೇ ಅಲ್ಲ, ಆಧುನಿಕ ಸಂದರ್ಭದಲ್ಲಿ ಯಾವ ಯಾವ ಸಮುದಾಯಗಳು ಸಾಂಸ್ಕೃತಿಕ ನಾಯಕರನ್ನಾಗಿ ಆರಿಸಿಕೊಂಡಿದ್ದಾರೋ ಅವರೆಲ್ಲರಿಗೂ ಅನ್ವಯಿಸುತ್ತದೆ. ಇಷ್ಟು ಹೇಳಿದರೂ ಕುಲಮೂಲ ನಾಯಕರ ಬಗ್ಗೆ ಜನಪದರಿಗೆ ಇದ್ದಷ್ಟು ವ್ಯಾಮೋಹ ಆಧುನಿಕ ಸಂದರ್ಭದ ಸಾಂಸ್ಕøತಿಕ ನಾಯಕರ ಮೇಲೆ ಇದೆಯೇ ಎಂಬ ಪ್ರಶ್ನೆ ಇದ್ದೇ ಇದೆ.

ಅಡಿ ಟಿಪ್ಪಣಿಗಳು

1. ಭೀಮಯಾನ, ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು ಅನು. ಡಾ.ಎಚ್.ಎಸ್. ಅನುಪಮಾ ಪುಟ-27

2. ಡಾ. ಆನಂದ ತೇಲ್ತುಂಬ್ಡೆ, `ಅಂಬೇಡ್ಕರ್‍ವಾದಿಗಳ ಬಿಕ್ಕಟ್ಟು’ ಮತ್ತು ಭವಿಷ್ಯದ ಸವಾಲುಗಳು (ಅನು) ಪುಟ-38-39

3. ಎಂ. ಚಂದ್ರ ಪೂಜಾರಿ, ಅಭಿವೃದ್ಧಿ ಮತ್ತು ರಾಜಕೀಯ ಪುಟ-46

4. ಅದೇ ಪುಟ-110

5. ಡಾ. ವಸು.ಎಂ.ವಿ. ಕೃಷ್ಣ, ಕನಕ ಮತ್ತು ಪ್ರಸ್ತುತ ರಾಜಕೀಯ, ಪ್ರಜಾವಾಣಿಯ ಅಂಕಣದ ಲೇಖನ, ದಿನಾಂಕ 11-12-13

6. ಡಾ. ವಸು.ಎಂ.ವಿ. ಅದೇ ಅಂಕಣದ ಲೇಖನದಲ್ಲಿ

7. ಡಾ. ಮುಜಾóಫರ್ ಅಸ್ಸಾದಿ, `ಹೊಸತು’ ವಿಶೇಷ ಸಂಚಿಕೆ (2009), ಲೇಖನ-ಐಡೆಂಟಿಟಿ (ಅಸ್ಮಿತೆ) ರಾಜಕೀಯ ಒಂದು ಅವಲೋಕನ.

8. ರಾಮಮನೋಹರ ಲೋಹಿಯಾ ಚಿಂತನೆ, ಸಂಪಾದಕ : ನಟರಾಜ್ ಹುಳಿಯಾರ್, ಪುಟ-71

9. ಎಸ್.ಜಿ.ಸಿದ್ಧರಾಮಯ್ಯ, ಯಡೆಸಾಲು, ಜನಪದಕವಿ ಕಂಡ ರೇವಣ್ಣಸಿದ್ಧ (ಲೇಖನ), ಪುಟ-90-91

10. ಡಾ. ಎಂ.ಎಂ. ಕಲಬುರ್ಗಿ, ಮಾರ್ಗ-4, ಪುಟ-79

11. ಡಾ.ಲಿಂಗದೇವರು ಹಳೆಮನೆ, ಜನಪದರು ಕಂಡ ಟಿಪ್ಪು, ಕರ್ನಾಟಕ ಸಂಶೋಧನಾ ಜಾನಪದ (ಸಂ-ಎಂ.ವಿ.ನಾವಡ) ಪುಟ-807

12. ಹಿ.ಚಿ.ಬೋರಲಿಂಗಯ್ಯ, ದೇಸಿ ಸಂಸ್ಕøತಿ ಸಂಕಥನ, ಪುಟ-97

13. ಡಾ. ದೇ.ಜವರೇಗೌಡ(ಸಂ) ಕನಕ ಸಾಹಿತ್ಯ ದರ್ಶನ, ಸಂಪುಟ-7 ಲೇಖನ-ಜನಪಪದದ ಕಣ್ಣಲ್ಲಿ ಶ್ರೀ ಕನಕದಾಸರು, ಪುಟ-108-109-110-112

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...