ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

Date: 27-12-2020

Location: .


ತಮ್ಮ ಜೇನದನಿಯ ಸ್ವರಮಾಧುರ್ಯದಿಂದ ಮತ್ತು ಸಂತನಂತಹ ವ್ಯಕ್ತಿತ್ವದ ಗುಣಗಳಿಂದ ಸಂಗೀತ ಲೋಕದ ಉದಾತ್ತ ಧ್ಯೇಯಗಳನ್ನು ಎತ್ತಿ ಹಿಡಿದ ಮಹಾನ್ ಕಲಾವಿದ ಉಸ್ತಾದ್ ಬಡೇ ಗುಲಾಂ ಆಲಿಖಾನ್. ಅವರ ಅಪ್ರತಿಮ ಸಂಗೀತ ಪ್ರೇಮ, ಮಾನವೀಯ ಗುಣವನ್ನು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಪರಿಚಯಿಸಿದ್ದು ಇಲ್ಲಿದೆ.

ಭಾರತದ ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದರಲ್ಲಿ ಒಬ್ಬರಾದ ಉಸ್ತಾದ್ ಬಡೇ ಗುಲಾಂ ಆಲಿಖಾನ್ ಅವರನ್ನ ಭಾರತದ ಸಂಗೀತ ಲೋಕ ಇಪ್ಪತ್ತನೆಯ ಶತಮಾನದ ತಾನ್ ಸೇನ್ ಎಂದು ಬಣ್ಣಿಸಲಾಗಿದೆ. ತಮ್ಮ ಜೇನದನಿಯ ಸ್ವರಮಾಧುರ್ಯದಿಂದ ಮತ್ತು ಸಂತನಂತಹ ವ್ಯಕ್ತಿತ್ವದ ಗುಣಗಳಿಂದ ಸಂಗೀತ ಲೋಕದ ಉದಾತ್ತ ಧ್ಯೇಯಗಳನ್ನು ಎತ್ತಿ ಹಿಡಿದ ಈ ಮಹಾನ್ ಕಲಾವಿದನ ಹೆಸರು ರಸಿಕರ ಮನದಲ್ಲಿ ಇಂದಿಗೂ ಹಸಿರಾಗಿದೆ. ಇಪ್ಪತ್ತನೆಯ ಶತಮಾನದ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಮಹಾರಾಜರುಗಳ ಆಸ್ಥಾನಕ್ಕೆ ಮತ್ತು ಶ್ರೀಮಂತರ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಮೆಹಫಿಲ್ ಎಂದು ಕರೆಯಲಾಗುತ್ತಿದ್ದ ಖಾಸಗಿ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ಹಿಂದೂಸ್ತಾನಿ ಸಂಗೀತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ದ ಮೇರು ಕಲಾವಿದರಲ್ಲಿ ಉಸ್ತಾದ್ ಬಡೇ ಗುಲಾಂ ಆಲಿ ಖಾನ್ ಪ್ರಮುಖರು.
ಸಂಗೀತವೆಂಬುದು ಹೃದಯದ ಭಾಷೆ. ಅದಕ್ಕೆ ಬಣ್ಣವಿಲ್ಲ, ವಾಸನೆಯಿಲ್ಲ, ಆಕಾರವೆಂಬುದು ಮೊದಲೇ ಇಲ್ಲ, ಜಾತಿ,ಧರ್ಮ ಎಂಬ ಭೇದ- ಭಾವಗಳಿಲ್ಲ ಎಂದು ನಂಬಿ ಬದುಕಿದ ಭಾರತದ ಹಿರಿಯ ಕಲಾವಿದರಲ್ಲಿ ಗುಲಾಂ ಆಲಿಖಾನ್ ಅವರದು ಎದ್ದು ಕಾಣುವ ವ್ಯಕ್ತಿತ್ವ. ಹಿಂದುಸ್ತಾನಿ ಸಂಗೀತದ ಪಟಿಯಾಲ ಘರಾಣೆ ಶೈಲಿಯ ಸಂಗೀತದಲ್ಲಿ ಭಜನ್, ಠುಮ್ರಿ, ಖಯಾಲ್, ಮತ್ತು ದ್ರುಪದ್ ಎಂಬ ಶಾಸ್ತ್ರೀಯ ಹಾಗೂ ಲಘು ಸಂಗೀತದ ರಸದೌತಣವನ್ನು ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಭಾರತದ ಉದ್ದಗಲಕ್ಕೂ ಸಂಗೀತ ರಸಿಕರಿಗೆ ಉಣಬಡಿಸಿದ ಮಹಾನ್ ಕಲಾವಿದ ಇವರು. ಬದುಕಿನುದ್ದಕ್ಕೂ ಸಂಗೀತವನ್ನು ಉಸಿರಾಡುತ್ತಾ ಅದರ ಉದಾತ್ತ ಪರಂಪರೆಯನ್ನು ತಮ್ಮ ನಂತರದ ತಲೆಮಾರಿಗೆ ದಾಟಿಸಿಹೋದ ಈ ಶ್ರೇಷ್ಠ ಕಲಾವಿದನ ಬದುಕು ಒಂದು ರೀತಿಯಲ್ಲಿ ಸುಂದರ ಮಹಾ ಕಾವ್ಯವಿದ್ದಂತೆ. ನಾವು ಬದುಕುತ್ತಿರುವ ಈ ವರ್ತಮಾನದ ಜಗತ್ತಿನಲ್ಲಿ ಕೇವಲ ವಿಷಜಂತುಗಳು ಮಾತ್ರವಲ್ಲ, ಮನುಷ್ಯರು ಮತ್ತು ಅವರು ಹಿಡಿದ ಲೇಖನಿಗಳೂ ಸಹ ವಿಷಕಾರುತ್ತಿರುವ ವಿಷಮ ಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಕಲಾವಿದನಾಗಿ ಗುಲಾಂ ಆಲಿಖಾನ್ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮತ್ತು ಮನುಕುಲಕ್ಕೆ ಮದ್ದಾಗಬಲ್ಲ ಮಾನವೀಯ ಗುಣಗಳು ಮತ್ತು ಧರ್ಮಾತೀತ ಹಾಗೂ ಜಾತ್ಯತೀತ ನಿಲುವುಗಳು ಎಲ್ಲ ಕಲಾವಿದರಿಗೆ ಇಂದಿಗೂ ಮಾದರಿಯಾಗಿವೆ.
ಬಡೇ ಗುಲಾಮ್ ಆಲಿಖಾನ್ ಅವರು ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ ಬಳಿಯ ಕೌಸೂರ್ ಎಂಬಲ್ಲಿ 1902ರಲ್ಲಿ ಸಂಗೀತವನ್ನು ವೃತ್ತಿಯಾಗಿಸಿಕೊಂಡಿದ್ದ ಕುಟುಂಬವೊಂರದಲ್ಲಿ ಜನಿಸಿದರು. ಬಾಲ್ಯದ ತಮ್ಮ ಐದನೆಯ ವಯಸ್ಸಿನಲ್ಲಿ ತನ್ನ ಚಿಕ್ಕಪ್ಪನವರಾದ ಖಾಲೇಖಾನ್ ಅವರ ಬಳಿ ಸಾರಂಗಿ ವಾದನವನ್ನು ಮತ್ತು ಗಾಯನದ ಶಿಕ್ಷಣವನ್ನು ಪಡೆದ ಅವರು, ನಂತರ ತನ್ನ ತಂದೆ ಉಸ್ತಾದ್ ಆಲಿಭಕ್ಷ್ ಖಾನ್ ಬಳಿ ಹಾಗೂ ಇನ್ನೊಬ್ಬ ಸಂಗೀತದ ಗುರುಗಳಾದ ಬಾಬಾ ಸಿಂದೆ ಖಾನ್ ಅವರ ಬಳಿ ಪಟಿಯಾಲ ಘರಾಣೆ ಶೈಲಿಯ ಹಿಂದುಸ್ಥಾನಿ ಸಂಗೀತದಲ್ಲಿ ಗಾಯನವನ್ನು ಅಭ್ಯಾಸ ಮಾಡಿದರು. ಪಟಿಯಾಲ ಘರಾನಾ ಅಥವಾ ಘರಾಣೆ ಎಂದು ಕರೆಯಲಾಗುವ ಹಿಂದುಸ್ತಾನಿ ಸಂಗೀತ ಶಾಲೆಯ ವೈಶಿಷ್ಟವೆಂದರೆ, ಅದು ಅಂದಿನ ಅವಿಭಜಿತ ಭಾರತದ ಪಂಜಾಬ್, ಕಾಶ್ಮೀರ ಮತ್ತು ಆಫ್ಘನಿಸ್ತಾನದ ಗುಡ್ಡಗಾಡು ಪ್ರದೇಶದ ಜನಪದ ಸಂಗೀತದಿಂದ ಪ್ರಭಾವಗೊಂಡ ಸಂಗೀತ ಪ್ರಕಾರವಾಗಿತ್ತು. ಈ ಪಟಿಯಾಲ ಘರಾಣೆಯ ಶೈಲಿಯು ಮುಂದಿನ ದಿನಗಳಲ್ಲಿ ಬಡೇ ಗುಲಾಂ ಆಲಿಖಾನ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಕೀರ್ತಿ ತಂದುಕೊಡುವುದರ ಜೊತೆಗೆ ಅವರ ಹಾಡುಗಾರಿಕೆಗೆ ಶ್ರೇಷ್ಠತೆಯ ಮುದ್ರೆಯೊನ್ನೊತ್ತಿತು.
ಲೋಕಸಂಗೀತ ಎಂದು ಭಾರತದಾತ್ಯಂತ ಜನಪ್ರಿಯವಾಗಿರುವ ಜನಪದ ಗಾಯನಕ್ಕೆ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಮಾನವನ ಮನದ ಸಹಜ ಅಭಿವ್ಯಕ್ತಿಗೆ ಪೂರಕವಾಗಿರುವ ಜನಪದ ಗಾಯನ ತನ್ನ ಇತಿಹಾಸದುದ್ದಕ್ಕೂ ಭಾರತದ ಎರಡು ಸಂಗೀತ ಪ್ರಕಾರಗಳಾದ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಇವುಗಳನ್ನು ಶ್ರೀಮಂತಗೊಳಿಸುತ್ತಾ ಬಂದಿದೆ. ರಾಗಗಳಿಂದ ಹಿಡಿದು, ಸಾಹಿತ್ಯ, ವಿಷಯ, ವಸ್ತು, ಸಂಗೀತದ ಅಭಿವ್ಯಕ್ತಿಗೆ ನೀಡಿರುವ ಸ್ವಚ್ಛಂದತೆ, ಅದರ ದುನ್ ಎಂದು ಕರೆಯಲಾಗುವ ರಾಗದ ಮಟ್ಟುಗಳು, ಸಂಗೀತದ ಲಯ ಇವುಗಳು ಪ್ರತಿಯೊಬ್ಬ ಶಾಸ್ತ್ರೀಯ ಸಂಗೀತಗಾರನಿಗೆ ಪ್ರೇರಣೆಯಾಗಿವೆ. ನನಗೆ ಹತ್ತು ಅಥವಾ ಹದಿನೈದು ಹಿಂದುಸ್ತಾನಿ ರಾಗಗಳನ್ನು ಹೊರತು ಪಡಿಸಿದರೆ, ಉಳಿದವುಗಳ ಪರಿಚಯವಿಲ್ಲ, ಅವುಗಳ ಅಗತ್ಯವೂ ನನಗಿಲ್ಲ, ನಾನೊಬ್ಬ ಸಾಧಾರಣ ಮಟ್ಟದ ಲೋಕ ಸಂಗೀತದ ಪ್ರತಿನಿಧಿ ಎಂದು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುತ್ತಿದ್ದ ಉಸ್ತಾದ ಬಡೇ ಗುಲಾಮ ಆಲಿಖಾನ್ ಅವರು ಕೆಲವು ಸೀಮಿತ ರಾಗಗಳಿಗೆ ಲೋಕ ಸಂಗೀತದ ಶೈಲಿಯನ್ನು ಅಳವಡಿಸಿಕೊಂಡು ಭಜನ್, ದ್ರುಪದ್, ಠುಮ್ರಿ ಮತ್ತು ಖ್ಯಾಲ್ ಸಂಗೀತದಲ್ಲಿ ಅನಭಿಷಕ್ತ ದೊರೆ ಎನಿಸಿಕೊಂಡರು. ತಮ್ಮ ದೈತ್ಯ ದೇಹದ ಆಕಾರದಿಂದಾಗಿ ಬಡೇ ಗುಲಾಮ ಆಲಿಖಾನ್ ಎಂದು ಕರೆಸಿಕೊಳ್ಳುತ್ತಿದ್ದ ಅವರಿಗೆ ಕೋಮಲವಾದ ಕಂಠಸಿರಿಯಿತ್ತು, ಜೊತೆಗೆ ಕಂಠದಲ್ಲಿ ಜೇನದನಿಯ ಮಾಧುರ್ಯವಿತ್ತು. ರಾಗಗಳಿಗೆ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಯಾಗುತ್ತಿದ್ದ ಅವರ ಧ್ವನಿಯ ಏರಿಳಿತವು ಸಂಗೀತ ರಸಿಕರಲ್ಲಿ ಮೋಡಿಯನ್ನುಂಟು ಮಾಡಿತ್ತು.
ಈಗ ಕೊಲ್ಕತ್ತ ಎಂದು ಕರೆಸಿಕೊಳ್ಳುತ್ತಿರುವ ಅಂದಿನ ಕಲ್ಕತ್ತ ನಗರದಲ್ಲಿ 1938 ರಲ್ಲಿ ತಮ್ಮ ಮುವತ್ತಾರನೆಯ ವಯಸ್ಸಿನಲ್ಲಿ ಸಂಗೀತ ಕಚೇರಿಯನ್ನು ನೀಡುವುದರ ಮೂಲಕ ಗುಲಾಂ ಆಲಿಖಾನ್ ಭಾರತದಲ್ಲಿ ಮನೆ ಮಾತಾದರು. ಆನಂತರ 1944 ರಲ್ಲಿ ಮುಂಬೈ ನಗರದಲ್ಲಿ ನಡೆದ ಅಖಿಲ ಭಾರತದ ಸಂಗೀತ ಸಮ್ಮೇಳನದಲ್ಲಿ ನೀಡಿದ ಸಂಗೀತ ಕಚೇರಿಯ ಮೂಲಕ ಭಾರತದ ಸರ್ವ ಶ್ರೇಷ್ಠ ಕಲಾವಿದರ ಗುಂಪಿಗೆ ಸೇರ್ಪಡೆಯಾದರು. 1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ತನ್ನ ತಾಯ್ನಾಡಿನಲ್ಲಿ ನೆಲೆಸಲು ನಿರ್ಧರಿಸಿ ಪಾಕಿಸ್ತಾನಕ್ಕೆ ಹಿಂತಿರುಗಿದರು. ಆದರೆ 1948 ಮತ್ತು 49 ರಲ್ಲಿ ಪಾಕಿಸ್ತಾನದ ಸಂಗೀತ ಕಛೇರಿಗಳಲ್ಲಿ ಜರುಗಿದ ಎರಡು ಕಹಿ ಘಟನೆಗಳಿಂದಾಗಿ ಅವರು ಹುಟ್ಟಿ ಬೆಳೆದ ನೆಲವನ್ನು ತಿರಸ್ಕರಿಸಿ ಭಾರತಕ್ಕೆ ಬಂದು ನೆಲೆಸುವಂತಾಯಿತು. 1948 ರಲ್ಲಿ ಕರಾಚಿ ನಗರದ ಆಕಾಶವಾಣಿ ಕೇಂದ್ರದಲ್ಲಿ ದ್ರುಪದ್ ಗಾಯನವನ್ನು ಹಾಡುತ್ತಿದ್ದ ಸಂದರ್ಭದಲ್ಲಿ ‘ಬಂದಿಶ್’ ಎಂದು ಕರೆಯಲಾಗುವ ಸಂಗೀತದ ಸಾಹಿತ್ಯದಲ್ಲಿದ್ದ ‘ಕನಯ್ಯ’ ಅಂದರೆ, ಕೃಷ್ಣ ಎಂಬ ಶಬ್ಧವನ್ನು ಬಳಸದಂತೆ ಅಧಿಕಾರಿಗಳು ಹೇಳಿದಾಗ ಗುಲಾಮ್ ಆಲಿಖಾನ್ ಸಿಡಿಮಿಡಿಗೊಂಡಿದ್ದರು. ಆನಂತರ ನಡೆದ ಇನ್ನೊಂದು ಸಾರ್ವಜನಿಕ ಸಂಗೀತ ಕಾರ್ಯಕ್ರಮದಲ್ಲಿ ಮಿಲಿಟರಿ ಅಧಿಕಾರಿಗಳಿಂದ ಹಿಂದೂ ದೇವತೆಗಳ ಹೆಸರು ಬಳಸಬಾರದು ಎಂಬ ಆದೇಶ ಬಂದಾಗ ಸಂಗೀತ ಅರ್ಥವಾಗದವರ ನಾಡಿನಲ್ಲಿ ನಾನಿರಲಾರೆ ಎಂದು ಘೋಷಿಸಿ, ಇಸ್ಲಾಮಾಬಾದ್ ನಗರದಲ್ಲಿದ್ದ ಭಾರತದ ರಾಯಭಾರಿ ಕಛೇರಿಯ ಮೂಲಕ ಭಾರತದ ಆಶ್ರಯ ಕೋರಿ ಮುಂಬೈ ನಗರಕ್ಕೆ ಬಂದು ನೆಲೆಸಿದರು. ಭಾರತಕ್ಕೆ ಮರಳಿದ ನಂತರ ಅವರು ನುಡಿದ ‘ಈ ಜನಗಳಿಗೆ ಸಂಗೀತ ಅರ್ಥವಾಗಿದ್ದರೆ, ಭಾರತ ಮತ್ತು ಪಾಕ್ ಎಂಬ ಎರಡು ರಾಷ್ಟ್ರಗಳು ವಿಭಜನೆಯ ಮೂಲಕ ಉದ್ಭವವಾಗುತ್ತಿರಲಿಲ್ಲ’ ಎಂಬ ಮಾರ್ಮಿಕವಾದ ನುಡಿ ಎಲ್ಲಾ ಪ್ರಜ್ಞಾವಂತರ ಹೃದಯವನ್ನು ಮೀಟಿತು. 1957 ರಲ್ಲಿ ಮಹಾರಾಷ್ಟ್ರದ ಮುಖ್ಯ ಮಂತ್ರಿಯಾಗಿದ್ದ ಮುರಾರ್ಜಿ ದೇಸಾಯಿ ಅವರು ಗುಲಾಂ ಆಲಿಖಾನ್ ಅವರಿಗೆ ಮುಂಬೈ ನಗರದ ಮಲಬಾರ್ ಹಿಲ್ ಎಂಬ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನವನ್ನು ಉಡುಗೊರೆಯಾಗಿ ನೀಡುವುದರ ಜೊತೆಗೆ, ಕೇಂದ್ರ ಸರ್ಕಾರದ ಮೂಲಕ ಅವರಿಗೆ ಭಾರತದ ಪೌರತ್ವವನ್ನು ಕೊಡಿಸಿದರು.
ಮುಂಬೈ ನಗರದಲ್ಲಿ ವಾಸವಾಗಿದ್ದುಕೊಂಡು, ಭಾರತದ ಬಹುತೇಕ ನಗರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಬಡೇ ಗುಲಾಂ ಆಲಿ ಖಾನ್ ಬಹು ಬೇಡಿಕೆಯ ಕಲಾವಿದರಾಗಿದ್ದರು. ಭಾರತದ ಚಲನ ಚಿತ್ರರಂಗದ ಇತಿಹಾಸದಲ್ಲಿ ಚಲನ ಚಿತ್ರ ರಂಗಕ್ಕೆ ಹಾಡಿದ ಮೊದಲ ಶಾಸ್ತ್ರೀಯ ಸಂಗೀತದ ಕಲಾವಿದ ಎಂಬ ಬಿರುದಿಗೆ ಅವರು ಪಾತ್ರರಾದರು. 1970 ರಲ್ಲಿ ಪ್ರಖ್ಯಾತ ಹಿಂದಿ ಚಿತ್ರರಂಗದ ಗಾಯಕ ಗಾಯಕಿಯರಾಗಿದ್ದ ಮಹಮ್ಮದ್ ರಫಿ ಮತ್ತು ಲತಾ ಮಂಗೆಶ್ಕರ್ ಅವರು ಪ್ರತಿ ಹಾಡಿಗೆ ಐನೂರು ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಸಮಯದಲ್ಲಿ ಗುಲಾಂ ಆಲಿಖಾನ್ ಅವರು ಕೆ. ಆಸಿಫ್ ಎಂಬುವರ ‘ಮೊಗಲ್ ಎ ಅಜಾಮ್ ’ ಎಂಬ ಹಿಂದಿ ಚಿತ್ರಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ ಸಂಭಾವನೆ ಪಡೆದು ಎರಡು ಹಾಡುಗಳನ್ನು ಹಾಡಿದ್ದರು. ಸದಾ ಸಂಗೀತದ ಶ್ರೇಷ್ಠತೆಗಾಗಿ ತುಡಿಯುತ್ತಿದ್ದ ಅವರು ಹಿಂದುಸ್ತಾನಿ ಸಂಗೀತದ ಹೊಸ ಹೊಸ ರಾಗಗಳ ಅನ್ವೇಷಣೆ ಕುರಿತಂತೆ ಹೆಚ್ಚಿನ ಒಲವು ತೋರಿಸುತ್ತಿರಲ್ಲ. ಇರುವ ರಾಗಗಳನ್ನು ತಮ್ಮ ಪ್ರತಿಭೆಯ ಮೂಲಕ ವಿಭಿನ್ನ ಹಾಡುಗಾರಿಕೆಯ ಮೂಲಕ ಜನಪ್ರಿಯಗೊಳಿಸಬೇಕೆಂಬುದು ಅವರ ನಿಲುವಾಗಿತ್ತು. ಅದೇ ರೀತಿ, ಅವರು ಸಂಗೀತದಲ್ಲಿ ದೀರ್ಘ ಸಮಯದ ಆಲಾಪನೆಯ ಕಡು ವಿರೋಧಿಯಾಗಿದ್ದರು.
ತಮ್ಮ ಹಾಡುಗಾರಿಕೆಯಲ್ಲಿ ಅದರಲ್ಲೂ ವಿಶೇಷವಾಗಿ ದ್ರುಪದ್, ಠುಮ್ರಿ ಮತ್ತು ಖ್ಯಾಲ್ ಗಾಯನದಲ್ಲಿ ಅವರು ಆಚರಣೆಗೆ ತಂದ ನಾವಿನ್ಯತೆ ಮತ್ತು ಸ್ವರಗಳ ಬಳಕೆಯಲ್ಲಿ ಧ್ವನಿಯ ಏರಿಳಿತ, ಸಾಹಿತ್ಯದ ಸ್ಫಷ್ಟ ಉಚ್ಚಾರಣೆ ಮತ್ತು ರಾಗಗಳನ್ನು ಸಾಹಿತ್ಯಕ್ಕೆ ತಕ್ಕಂತೆ ವಿಸ್ತರಿಸುತ್ತಿದ್ದ ವೈಖರಿ ಇವುಗಳಿಂದಾಗಿ ಅವರನ್ನು ಹಿಂದೂಸ್ತಾನಿ ಸಂಗೀತ ಲೋಕದ ಅನಭಿಷಕ್ತ ದೊರೆ ಎಂದು ಕರೆಯಲಾಗುತ್ತಿತ್ತು. ಅವರು ಒಂದು ಕಚೇರಿಯಲ್ಲಿ ನೀಡಿದ ಗಾಯನ ಮತ್ತೊಂದು ಕಚೇರಿಯಲ್ಲಿ ಪುನರಾವರ್ತನೆಯಾಗುತ್ತಿರಲಿಲ್ಲ. ಅವರ ಸಂಗೀತವೆಂದರೆ ಸಮುದ್ರದಿಂದ ಮೂಡಿ ಬರುವ ಎಂದೂ ನಿಲ್ಲದ ಅಲೆಗಳಂತೆ ಶ್ರೋತೃಗಳಿಗೆ ಭಾಸವಾಗುತ್ತಿತ್ತು. ಅವರ ಇಂತಹ ದೈತ್ಯ ಪ್ರತಿಭೆಯ ಹಿಂದೆ ಲೋಕಸಂಗೀತದ ಪ್ರಭಾವವಿತ್ತು. ಒಂದು ಸಂಗೀತ ಕಚೇರಿಯು ಪಡೆಯುವ ನಿರ್ದಿಷ್ಟ ಸ್ವರೂಪ ಆ ಕ್ಷಣದಲ್ಲಿ ಕಲಾವಿದ ಮತ್ತು ಶ್ರೋತೃಗಳ ನಡುವೆ ಏರ್ಪಡುವ ಪರಸ್ಪರ ಸಂಹವನ ಹಾಗೂ ಪ್ರತಿಕ್ರಿಯೆಗಳ ಆಧಾರದ ಮೇಲೆ ನಿಂತಿರುತ್ತದೆ. ಉಸ್ತಾದ್ ಗುಲಾಂ ಆಲಿಖಾನ್ ಅವರು ತಮ್ಮ ಭಾವಪೂರ್ಣ ಧ್ವನಿಯ ಮೂಲಕ ಎಲ್ಲಾ ಶ್ರೋತೃಗಳ ಮನಸ್ಸನ್ನು ಸೂಜಿಗಲ್ಲಿನಂತೆ ಹಿಡಿದಿಡುವ ಕಲೆಯನ್ನು ಬಲ್ಲವರಾಗಿದ್ದರು. ಇದಕ್ಕೆ ಪೂರಕವಾಗಿ, ಅವರು ಪ್ರಸ್ತುತ ಪಡಿಸುತ್ತಿದ್ದ ಭಜನ್, ದ್ರುಪದ್ ಆಗಲಿ, ಠುಮ್ರಿ ಅಥವಾ ಖ್ಯಾಲ್ ಗಾಯನದ ಬಂದಿಶ್ ಅಥವಾ ಸಾಹಿತ್ಯ ರಚನೆಗಳು ಅವರ ಸಂಗೀತದ ಸಾಮರ್ಥ್ಯಕ್ಕೆ ನೆರವಾಗುತ್ತಿದ್ದವು. ರಾಗದ ಲಕ್ಷಣಗಳು, ಸ್ವರೂಪ ಇಲ್ಲವೆ, ಅವುಗಳ ಚೌಕಟ್ಟು ಒಂದೇ ಆಗಿದ್ದರೂ ಸಹ ಪ್ರತಿಯೊಬ್ಬ ಕಲಾವಿದ ಅವುಗಳನ್ನು ಪ್ರಸ್ತುತಪಡಿಸುವ ರೀತಿಯಿಂದಾಗಿ ಕೇಳುಗರಿಗೆ ಭಿನ್ನವಾದ ಅನುಭವವನ್ನು ನೀಡುತ್ತವೆ. ಇದು ಆಯಾ ಕಲಾವಿದನ ಮನೋಧರ್ಮ, ಸೃಜನಶೀಲತೆಯ ಮನಸ್ಸನ್ನು ಇವುಗಳನ್ನು ಅವಲಂಬಿಸುತ್ತದೆ. ಖ್ಯಾಲ್ ಗಾಯನದ ಪ್ರಕಾರದಲ್ಲಿ ಕಲಾವಿದರಿಗೆ ಅಭಿವ್ಯಕ್ತಿಗೆ ಮುಕ್ತ ಅವಕಾಶಗಳಿದ್ದುದರಿಂದ ಬಡೇ ಗುಲಾಂ ಆಲಿಖಾನ್ ಅವರು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಭಾರತದ ಸಂಗೀತ ಶ್ರೋತೃಗಳ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡರು.
ಖ್ಯಾಲ್ ಗಾಯನದ ಬಂದಿಶ್ ನಲ್ಲಿ ಸ್ಥಾಯಿ ಮತ್ತು ಅಂತರಾ ಎಂಬ ಎರಡು ಭಾಗಗಳಿದ್ದು, ವಿಲಂಬಿತ್ ಖ್ಯಾಲ್ ಗಾಯನದಲ್ಲಿ ಸ್ವರ ಮತ್ತು ರಾಗಗಳ ವಿಸ್ತರಣೆ ಹಾಗೂ ಭಾವಗಳ ಅಭಿವ್ಯಕ್ತಿಗೆ ಹೆಚ್ಚು ನ್ಯಾಯ ಒದಗಿಸಿಕೊಡುವುದರಿಂದ ಖ್ಯಾಲ್ ಗಾಯನ ಪ್ರಕಾರವು ಹಿಂದೂಸ್ತಾನಿ ಸಂಗೀತದಲ್ಲಿ ಹೆಚ್ಚು ಜನಪ್ರಿಯವಾಯಿತು. ಪ್ರಬಂಧಗಳ ಮೇಲೆ ಅವಲಂಬಿತವಾಗಿರುವ ದ್ರುಪದ್ ಗಾಯನ ಹಿಂದುಸ್ಥಾನಿ ಸಂಗೀತದಿಂದ ಹಿನ್ನಲೆಗೆ ಸರಿಯುತ್ತಾ, ಖ್ಯಾಲ್, ಠುಮ್ರಿ, ದಾದ್ರಾ, ಕಜರಿ ಹಾಗೂ ಟಪ್ಪಾ ಅರೆ ಶಾಸ್ತ್ರೀಯ ಗಾಯನ ಪ್ರಕಾರಗಳು ಕಚೇರಿಯ ಕೇಂದ್ರ ಬಿಂದುಗಳಾದವು. ದ್ರುಪದ್ ಗಾಯನವು ಧೀಮಂತವಾದ ರಾಜಗಾಂಭೀರ್ಯದಿಂದ ಕೂಡಿದ ಗಾಯನ ಶೈಲಿಯಾಗಿದ್ದು ಇದರಲ್ಲಿ ದೇವರ ಸ್ತುತಿ ಮತ್ತು ರಾಜಾಶ್ರಯವನ್ನು ನೀಡಿದ ರಾಜರನ್ನು ಹೊಗಳುವ ರಚನೆಗಳನ್ನು ಒಳಗೊಂಡಿದ್ದವು. ಅದರೆ, ಖ್ಯಾಲ್ ಗಾಯನದ ರಚನೆಗಳಲ್ಲಿ ಮನದ ಭಾವನೆಗಳ ಅಭಿವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದುದರಿಂದ ಅದು ಎಲ್ಲ ಕಲಾವಿದರ ಪ್ರಿಯವಾದ ಗಾಯನವಾಯಿತು. ದೈವದತ್ತ ಕೊಡುಗೆಯಾಗಿ ಬಂದಿದ್ದ ತಮ್ಮ ಕಂಠಸಿರಿಗೆ ಹೇಳಿ ಮಾಡಿಸಿದಂತಿದ್ದ ಖ್ಯಾಲ್ ಮತ್ತು ಠುಮ್ರಿ ಗಾಯನ ಪ್ರಕಾರವನ್ನು ಗುಲಾಂ ಆಲಿ ಖಾನ್ ಅವರು ಪರಿಣಾಮಕಾರಿಯಾಗಿ ಬಳಸಿಕೊಂಡರು. ಠುಮ್ರಿಯ ಗಾಯನ ಪ್ರಕಾರದ ಬೋಲ್ ಬನಾವ್ ಎಂಬ ಸಂಪ್ರದಾಯವನ್ನು ಮುರಿದು ಕಡಿಮೆ ಶ್ರಮ ಬೇಡುವ ವೈವಿಧ್ಯಮಯ ಧ್ವನಿ ಮಾಧುರ್ಯದ ಮೂಲಕ ಸಂಗೀತದ ಸಂಗತಿಗಳನ್ನು ( ನೋಟ್ಸ್) ಪ್ರಸ್ತುತ ಪಡಿಸುವದರ ಜೊತೆಗೆ ಭವಿಷ್ಯದ ಕಲಾವಿದರಿಗೆ ದಾರಿ ದೀಪವಾದರು. ಈ ಪ್ರಯೋಗವವನ್ನು ಮುಂದಿನ ದಿನಗಳಲ್ಲಿ ಸಿದ್ದೇಶ್ವರಿದೇವಿ ಮತ್ತು ಬೇಗಂ ಅಕ್ತರ್, ಪ್ರಭಾ ಅತ್ರೆ, ಕಿಶೋರಿ ಅಮೋಣ್ ಕರ್ ರಂತಹ ಮೇರು ಕಲಾವಿದೆಯರು ಇನ್ನಷ್ಟು ಅಭಿವೃದ್ಧಿ ಪಡಿಸಿ, ಠುಮ್ರಿ ಗಾಯನ ಪ್ರಕಾರವನ್ನು ಹಿಂದೂಸ್ತಾನಿ ಸಂಗೀತದಲ್ಲಿ ಜನಪ್ರಿಯಗೊಳಿಸಿದರು.
ಅರವತ್ತನಾಲ್ಕನೆಯ ವಯಸ್ಸಿನವರೆಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಗುಲಾಂ ಆಲಿಖಾನ್ ಅವರು 1966 ರಲ್ಲಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾದರು. ತಮ್ಮ ದೈಹಿಕ ನ್ಯೂನ್ಯತೆಯ ನಡುವೆಯೂ ತಮ್ಮ ಕಿರಿಯ ಪುತ್ರ ಮುನಾವರ್ ಆಲಿಖಾನ್ ಜೊತೆಗೂಡಿ ಸಂಗೀತ ಕಛೇರಿ ನೀಡುತ್ತಿದ್ದ ಅವರು 1968 ರ ಏಪ್ರಿಲ್ 23 ರಂದು ಹೈದರಾಬಾದ್ ನಗರದಲ್ಲಿ ನಿಜಾಮರಿಗೆ ಸೇರಿದ ಬಶೀರ್ ಬಾಗ್ ಅರಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ನಿಧನರಾದರು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅವಧ್ ಸಂಸ್ಥಾನದ ನವಾಬನಾಗಿದ್ದ ವಾಜಿದ್ ಆಲಿ ಷಹಾ ಎಂಬಾತ ಸಂಗೀತ ಮತ್ತು ನೃತ್ಯಗಳ ಕಡು ವ್ಯಾಮೋಹಿಯಾಗಿದ್ದ. ಬ್ರಿಟಿಷ್ ಈಸ್ಟ್ ಕಂಪನಿಯು ಅತನಿಂದ ಅರಸೊತ್ತಿಗೆಯನ್ನು ವಶಪಡಿಸಿಕೊಂಡು ರಾಜಧನವನ್ನು ನಿಗದಿ ಪಡಿಸಿತು. ಆನಂತರ ಕೊಲ್ಕತ್ತಾ ನಗರಕ್ಕೆ ಬಂದು ನೆಲೆಸಿದ ಈ ನವಾಬ ತನಗೆ ಬರುತ್ತಿದ್ದ ರಾಜಧನದ ಹಣವನ್ನು ಸಂಗೀತ ಮತ್ತು ನೃತ್ಯ ಕಲಾವಿದರಿಗೆ ನೀಡಿ ಪ್ರೊತ್ಸಾಹಿಸುತ್ತಿದ್ದ. ಸ್ವತಃ ಕವಿ ಮತ್ತು ಒಳ್ಳೆಯ ಗಾಯಕನಾಗಿದ್ದ ವಾಜಿದ್ ಅಲಿ ಷಾ ಧರ್ಮಾತೀತನಾಗಿ ಬದುಕಿದ್ದು ವಿಶೇಷವಾಗಿತ್ತು. ಹಮ್ ಇಶ್ಕ್ ಕೆ ಬಂದೆ ಹೈ/ ಮಜಹಬಸೆ ನಹೀ ಮಸ್ತಾ ( ನಾವು ಪ್ರೇಮದ ದಾಸರು, ನಮಗೆ ಧರ್ಮದ ಹಂಗಿಲ್ಲ) ಎಂಬುದು ಈತನ ವೇದ ವಾಕ್ಯವಾಗಿತ್ತು. ಇಂತಹದ್ದೇ ಉದಾತ್ತವಾದ ಬದುಕನ್ನು ಬದುಕಿದ ಕಲಾವಿದರಲ್ಲಿ ಉಸ್ತಾದ್ ಬಡೇ ಗುಲಾಮ್ ಆಲಿ ಖಾನ್ ಸಹ ಮುಖ್ಯರಾದವರು.
ಹಿಂದೂಸ್ತಾನಿ ಸಂಗೀತವು ತನ್ನ ಇತಿಹಾಸದುದ್ದಕ್ಕೂ ಧರ್ಮ, ಜಾತಿ, ಅಥವಾ ಪ್ರಾದೇಶಿಕತೆ, ಭಾಷೆ ಇವುಗಳ ಗಡಿಯನ್ನು ಮೀರಿ ಭವ್ಯವಾದ ಮನುಕುಲದ ಪ್ರೀತಿಯ ಸಂವಹನದ ಭಾಷೆಯ ರೂಪದಲ್ಲಿ ಗುಪ್ತಗಾಮಿನಿಯಂತೆ ಹರಿದು ಬಂದಿದೆ. ಇದರ ಫೋಷಕರು, ಕಲಾವಿದರು ಬಹುತೇಕ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ ಸಹ ಅವರೆಂದೂ ಹಿಂದೂ ಸಂಗೀತವನ್ನು ಧರ್ಮ ಅಥವಾ ಜಾತಿಯ ಸರಪಳಿಯಿಂದ ಬಂಧಿಸಲಿಲ್ಲ. ಈ ಕಾರಣಕ್ಕಾಗಿ, ಕೊಲ್ಲಾಪುರದ ಸಾಹು ಮಹಾರಾಜ್ ನ ಆಸ್ಥಾನದಲ್ಲಿ ಗಾಯಕರಾಗಿದ್ದ ಉಸ್ತಾದ್ ಅಲ್ಲಾದಿಯಾಖಾನ್ ಪ್ರತಿ ದಿನ ಬೆಳಿಗ್ಗೆ ಎದ್ದು ಅಲ್ಲಿನ ಮಹಾಲಕ್ಷ್ಮಿ ದೇಗುಲದ ಗರ್ಭಗುಡಿಯ ಎದುರು ಕುಳಿತು ಮೈ ಮರೆತು ಭಜನ್ ಗಳನ್ನು ಹಾಡುತ್ತಿದ್ದರು. ಖ್ಯಾತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಗುರು ಮತ್ತು ಸಹೋದರಮಾವ ಅಲ್ಲಾ ಭಕ್ಷ್ ಖಾನರು ಬೆಳಗಿನ ಐದು ಗಂಟೆಯ ಸಮಯದಲ್ಲಿ ದೂರದ ಮಸೀದಿಯಿಂದ ಕೇಳಿಬರುತ್ತಿದ್ದ ಪ್ರಾರ್ಥನೆಗೆ ಕಿವಿಗೊಡದೆ ವಾರಣಾಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಕುಳಿತು ಶಹನಾಯ್ ನುಡಿಸುತ್ತಿದ್ದರು. ತನ್ನ ಶಿಷ್ಯ ಬಿಸ್ಮಿಲ್ಲಾ ಖಾನರಿಗೆ ಗಂಗಾ ನದಿಯ ತಟದಲ್ಲಿರುವ ಬಾಲಾಜಿ ಮಂದಿರದಲ್ಲಿ ಇಂತಹದ್ದೇ ಕಾಯಕಕ್ಕೆ ನೇಮಕ ಮಾಡಿದರು. ಸೀತಾರ್ ವಾದಕ ಪಂಡಿತ್ ಅಲ್ಲಾವುದ್ದೀನ್ ಖಾನರು ತಮ್ಮ ಪುತ್ರಿಗೆ ಅನ್ನಪೂರ್ಣಾ ( ರವಿಶಂಕರ್ ಅವರ ಮೊದಲ ಪತ್ನಿ) ಎಂದು ನಾಮಕರಣ ಮಾಡುವುದರ ಜೊತೆಗೆ ಪ್ರತಿ ದಿನ ಎರಡು ಬಾರಿ ಸರಸ್ವತಿ ಪೂಜೆಯನ್ನೂ ಸಹ ಮಾಡುತ್ತಿದ್ದರು. ಸಂಗೀತ ಲೋಕದ ಇಂತಹ ಮಹಾನ್ ಕಲಾವಿದರ ಹೃದಯ ವೈಶಾಲ್ಯದಿಂದಾಗಿ ಹಿಂದುಸ್ತಾನಿ ಸಂಗೀತದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಜಗದ್ವಿಖ್ಯಾತ ಕಲಾವಿದರು ಉದಯಿಸುವಂತಾಯಿತು. ಕೇಸರಿಬಾಯಿ ಕೇರ್‍ಕರ್, ಮುಗುಬಾಯಿ ಕುರ್ಡಿಕರ್, ಮಲ್ಲಿಕಾರ್ಜುನ ಮನಸೂರ್, ಸವಾಯಿ ಗಂಧರ್ವರು, ಪಂಡಿತ್ ರವಿಶಂಕರ್, ದೊಂಡುತಾಯಿ ಕುಲಕರ್ಣಿ ಹೀಗೆ ಹಲವಾರು ಕಲಾವಿದ/ ಕಲಾವಿದೆಯರು ಮುಸ್ಲಿಂ ಗುರುಗಳಿಂದ ಸಂಗೀತದ ದೀಕ್ಷೆ ಪಡೆದವರಾಗಿದ್ದಾರೆ. ಇಂತಹದ್ದೇ ಉದಾರ ಮನೋಭಾವ ಉಸ್ತಾದ್ ಗುಲಾಂ ಆಲಿ ಖಾನ್ ಅವರಿಗೂ ಇತ್ತು. ಮುಂಬೈ ನಗರದಲ್ಲಿ ಜರುಗಿದ ಸಂಗೀತ ಸಮ್ಮೇಳನದಲ್ಲಿ ಕರ್ನಾಟಕ ಸಂಗೀತದ ಧ್ರುವತಾರೆಯಂತಿದ್ದ ಎಂ.ಎಸ್. ಸುಬ್ಬುಲಕ್ಷ್ಮಿಯವರ ಸಂಗೀತವನ್ನು ಕೇಳಿ ‘ಮಗಳೇ ನೀನು ಸುಬ್ಬುಲಕ್ಷ್ಮಿಯಲ್ಲ, ಸ್ವರಲಕ್ಷ್ಮಿ’ ಎಂದು ಹೇಳುವುದರ ಮೂಲಕ ಅವರಿಗೆ ಶುಭ ಹಾರೈಸಿದ್ದರು. ದಕ್ಷಿಣ ಭಾರತದ ಅನೇಕ ಕಲಾವಿದರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದ ಗುಲಾಮ ಆಲಿಖಾನ್ ಅವರು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮದ್ರಾಸ್ ನಗರಕ್ಕೆ ಭೇಟಿ ನೀಡುವುದರ ಜೊತೆಗೆ ಸಂಗೀತ ಕಚೇರಿ ನಡೆಸಿ ಕೊಡುತ್ತಿದ್ದರು. ಕರ್ನಾಟಕ ಸಂಗೀತದ ಅನೇಕ ಹಿರಿಯ ಕಲಾವಿದರು, ವಿದ್ವಾಂಸರ ಜೊತೆಗೂಡಿ ನಗರದಲ್ಲಿ ನಡೆಯುತ್ತಿದ್ದ ಕರ್ನಾಟಕ ಸಂಗೀತದ ಕಚೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಸಂಗೀತ ಲೋಕದ ಹಾಡುಹಕ್ಕಿಗಳನ್ನು ಧರ್ಮದ ಹೆಸರಿನಲ್ಲಿ ಪ್ರತಿಬಂಧಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಉಸ್ತಾದ್ ಬಡೇ ಗುಲಾಂ ಆಲಿಖಾನ್ ಅವರಂತಹ ಸಂಗೀತ ಲೋಕದ ಸಂತರ ಬದುಕು ನಮಗೆ ಆದರ್ಶವಾಗುವುದರ ಜೊತೆಗೆ, ನಮ್ಮೊಳಗಿನ ಮನೋವಿಕಾರವನ್ನು ಮತ್ತು ಮಾನಸಿಕ ಕುಬ್ಜತೆಯನ್ನು ನೀಗಿಸಬಲ್ಲದು.

ಇದನ್ನು ಓದಿ:

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

 

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...