Sanju Weds Geetha 2; ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಕಥೆ ಕೊಟ್ಟಿದ್ದು ಯಾರು?

Date: 09-01-2025

Location: ಬೆಂಗಳೂರು


ನಾಗಶೇಖರ್‍ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ನಾಳೆ (ಜನವರಿ 10)ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹೀಗಿರುವಾಗಲೇ ಚಿತ್ರಕ್ಕೆ ನಿಜಕ್ಕೂ ಕಥೆ ಕೊಟ್ಟಿದ್ದು ಯಾರು? ಎಂಬ ಪ್ರಶ್ನೆಯೊಂದು ಕೇಳಿಬರುತ್ತಿದೆ.

‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ  ಹಲವಾರು ಸಮಸ್ಯೆಗಳ ಜತೆಗೊಂದು ಪ್ರೇಮ ಕಾವ್ಯವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರದ ಎಳೆಯನ್ನು ಕೊಟ್ಟವರು ಸುದೀಪ್‍ ಎಂದು ನಾಗಶೇಖರ್‍ ಕಳೆದ ವಾರ ನಡೆದ ಚಿತ್ರದ ಹಾಡು ಬಿಡಗುಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದರು. ಆದರೆ, ಇದೀಗ ಈ ಚಿತ್ರದಕ್ಕೆ ಕಥೆಯ ಎಳೆ ಕೊಟ್ಟಿದ್ದು ತಾವೇ ಎಂದು ಚಕ್ರವರ್ತಿ ಚಂದ್ರಚೂಡ್‍ ಹೇಳಿಕೊಂಡಿದ್ದಾರೆ.

ಬಿಡುಗಡೆಗೂ ಮುನ್ನ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದ ಚಂದ್ರಚೂಡ್ ಮಾತನಾಡುತ್ತ, ‘ಒಮ್ಮೆ ನನ್ನ ಗೆಳೆಯ, ನಿರ್ದೇಶಕ ಆರ್.ಚಂದ್ರು ಅವರ ಜತೆ ಶಿಡ್ಲಘಟ್ಟಕ್ಕೆ ಹೋಗಿದ್ದೆ. ಆಗ ಅಲ್ಲಿನ ರೇಶ್ಮೆ ಮಾರುಕಟ್ಟೆ, ಆ ರೇಶ್ಮೆ ಬೆಳೆಯುವ ರೈತರು, ಅವರು ಎದುರಿಸುವ ಸಮಸ್ಯೆಗಳೆಲ್ಲವನ್ನೂ ಕಣ್ಣಾರೆ ನೋಡಿದೆ. ಅವರು ಎಷ್ಟು ರೇಶ್ಮೆ ಬೆಳೆಯುತ್ತಾರೆ, ಅದೆಲ್ಲಾ ಎಲ್ಲಿಗೆ  ಹೋಗುತ್ತದೆ, ಬೆಳೆಗಾರರಿಗೆ ಅದರಿಂದ ಎಷ್ಟು ಪ್ರತಿಫಲ ಸಿಗುತ್ತಿದೆ… ಇದನ್ನೆಲ್ಲ  ನೋಡಿದಾಗ ಈ ಬಗ್ಗೆಯೇ ಒಂದು ಕಥೆ ಮಾಡಬಾರದೇಕೆ ಅನಿಸಿತು. ಒಮ್ಮೆ ನಾಗಶೇಖರ್ ಸಿಕ್ಕಾಗ  ‘ಸಂಜು  ವೆಡ್ಸ್ ಗೀತಾ 2’ ಮಾಡುತ್ತಿದ್ದೇನೆ ಎಂದರು. 

ಕಿಟ್ಟಿ, ನಾಗಶೇಖರ್, ನಿರ್ಮಾಪಕ ಕುಮಾರ್ ಎಲ್ಲರೂ ಸೇರಿ ಕಥೆಯನ್ನು ಚರ್ಚಿಸುತ್ತಿರುವಾಗ, ಈ ಅಂಶವನ್ನು ಹೇಳಿದೆ. ಎಲ್ಲರಿಗೂ ಇಷ್ಟವಾಯ್ತು. ಕೊನೆಯ ಹಂತದಲ್ಲಿದ್ದ ಕಥೆಗೆ ಹೊಸ ರೂಪ ಸಿಕ್ಕಿತು. ರೇಶ್ಮೆ ಬೆಳೆಯುವ ರೈತರು ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ರಾಣಿ ಮತ್ತು ಸೈನಿಕನ ಕಥೆ ಇವೆರಡನ್ನೂ ಸೇರಿಸಿ ಹೊಸದೊಂದು ಚಿತ್ರಕಥೆ ರೆಡಿಯಾಯಿತು. ರೇಶ್ಮೆ ಬೇಳೆಯುವ ಸಾಕಷ್ಟು ರೈತರು ಸಿಲ್ಕೋಸಿಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಅವರನ್ನು ಹೇಗೆಲ್ಲಾ ತುಳಿಯುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನೂಲಿನ ಮಹತ್ವದ ಜತೆಗೊಂದು ಮಧುರ ಪ್ರೇಮ ಕಾವ್ಯವನ್ನು ಈ ಚಿತ್ರ ಹೇಳುತ್ತದೆ’ ಎಂದರು.

ನಟ ಶ್ರೀನಗರ ಕಿಟ್ಟಿ ಮಾತನಾಡಿ, ‘ನಿರ್ಮಾಪಕ  ಕುಮಾರ್ ಈ ಚಿತ್ರಕ್ಕೆ 16 ಕೋಟಿ ರೂ. ಬಂಡವಾಳ ಹಾಕಿ ನಿರ್ಮಿಸಿದ್ದಾರೆ. 60 ರಿಂದ 65 ರಷ್ಟು ಸಿನಿಮಾಕಥೆ  ಸ್ವಿಟ್ಜರ್ ಲ್ಯಾಂಡ್‌ನಲ್ಲೇ  ನಡೆಯುತ್ತದೆ. ಈಗಾಗಲೇ 180 ರಿಂದ 200 ಏಕಪರದೆಯ ಚಿತ್ರಮಂದಿರಗಳು ಫೈನಲ್ ಆಗಿದ್ದು, ಮಲ್ಟಿಪ್ಲೆಕ್ಸ್ ಸಂಖ್ಯೆ ಏರುತ್ತಲೇ  ಇದೆ. ಇದಲ್ಲದೆ ಅಮೇರಿಕಾದ 31 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಮೊದಲು ಐದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದ ವಿತರಕರು, ಹಾಡು ನೋಡಿ ಚಿತ್ರಮಂದಿರಗಳನ್ನು ಹೆಚ್ಚಿಸಿದ್ದಾರೆ’ ಎಂದರು.

ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ರೇಶ್ಮೆ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾ ನಾಣಿ, ಸಂಪತ್, ರಾಗಿಣಿ, ಚೇತನ್‍ ಚಂದ್ರ ಮುಂತಾದವರು ನಟಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಶ್ರೀಧರ್‍ ಸಂಭ್ರಮ್‍ ಸಂಗೀತ ಈ ಚಿತ್ರಕ್ಕಿದೆ.

MORE NEWS

2022 ಹಾಗೂ 2023ನೇ ಸಾಲಿನ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿ ಪ್ರಕಟ

16-01-2025 ಬೆಂಗಳೂರು

ಮಂಗಳೂರು: ಪ್ರತಿಷ್ಠಿತ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿಯನ್ನು 2022ನೆಯ ಸಾಲಿಗೆ ಹಿರಿಯ ವಿದ...

ಗಿರೀಶ್ ಕಾಸರವಳ್ಳಿ, ಬಿ.ಆರ್. ಲಕ್ಷ್ಮಣರಾವ್ ಸೇರಿದಂತೆ ಹಲವರಿಗೆ ಪ್ರತಿಷ್ಠಿತ `ಸಂದೇಶ ಪ್ರಶಸ್ತಿ'

16-01-2025 ಬೆಂಗಳೂರು

ಬೆಂಗಳೂರು: ಸಂದೇಶ ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕಳೆದ ಮೂವತ್ತಮೂರು ವರ್ಷಗಳಿಂದ ಸಂದೇಶ ಪ್ರಶಸ್ತಿಯನ್ನ...

‘ಡಾ.ಜಿ.ಎಸ್. ದೀಕ್ಷಿತ್ ನೆನಪಿನ ದತ್ತಿ ಉಪನ್ಯಾಸ’ ಕಾರ್ಯಕ್ರಮ

15-01-2025 ಬೆಂಗಳೂರು

ಬೆಂಗಳೂರು: ಕರ್ನಾಟಕ ಇತಿಹಾಸ ಅಕಾದೆಮಿಯ ವತಿಯಿಂದ ‘ಡಾ.ಜಿ.ಎಸ್. ದೀಕ್ಷಿತ್ ನೆನಪಿನ ದತ್ತಿ ಉಪನ್ಯಾಸ’ ಕಾರ...