ಸನ್ನತಿ-ಕನಗನಹಳ್ಳಿ :ಬೌದ್ಧ ಸಾಂಸ್ಕೃತಿಕ ದೃಶ್ಯಧ್ಯಾನ

Date: 01-02-2020

Location: ಬೆಂಗಳೂರು


ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಪುಟ್ಟ ಗ್ರಾಮ ಸನ್ನತಿ. ಭೀಮಾನದಿಯ ದಂಡೆಯ ಮೇಲಿರುವ ಸನ್ನತಿಯು ಬೌದ್ಧ-ಶಾಕ್ತ ಕ್ಷೇತ್ರ. ಕಪಟರಾಳ ಕೃಷ್ಣರಾವ ಅವರಿಂದ ಆರಂಭವಾದ ಈ ಪ್ರದೇಶದ ಹುಡುಕಾಟವು ಭಾರತದ ಚರಿತ್ರೆಯ ಮಹತ್ವದ ಸ್ಥಳಗಳಲ್ಲಿ ಒಂದಾಗುವುದಕ್ಕೆ ಕಾರಣವಾಯಿತು. ಸನ್ನತಿಗೆ ಸಮೀಪದ ಕನಗನಹಳ್ಳಿಯಲ್ಲಿ ದೊರೆತ ಮಹಾಸ್ತೂಪದ ಬಗ್ಗೆ ಹಿರಿಯ ಕಲಾ ಇತಿಹಾಸಕಾರ- ಲೇಖಕ ಕೆ.ವಿ. ಸುಬ್ರಹ್ಮಣ್ಯಂ ಅವರು ಶಿಲ್ಪಗಳ ಮಹತ್ವದ ಬಗ್ಗೆ ಚರ್ಚಿಸಿದ್ದಾರೆ.

ಕರ್ನಾಟಕ ಪರಂಪರೆಯ ಔನ್ನತ್ಯಕ್ಕೆ ಕಲ್‌ಬುರ್ಗಿ ಜಿಲ್ಲೆಯ ಕೊಡುಗೆಯೂ ಮಹತ್ವಪೂರ್ಣವಾಗಿದೆ. ಆ ಭಾಗದ ಐತಿಹಾಸಿಕ ಪುಟಗಳು ನಮ್ಮ ಸಮಕಾಲೀನವಾಗಿಯೂ ಜೀವಂತಿಕೆಯನ್ನು ಹೊಂದಿವೆ. ಇನ್ನೂ ಸಂರಕ್ಷಿಸಬೇಕಾಗಿರುವ ಅನ್ವೇಷಿಸಬೇಕಾದ ಹಲವು ನೆಲೆಗಳು ಇವೆ. ಕಳೆದ ಮೂರು ನಾಲ್ಕು ದಶಕಗಳಲ್ಲಿ ಈ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿರುವ ಸನ್ನತಿ (ಕನಗನಹಳ್ಳಿ) ಬಹುತೇಕ ಎಲ್ಲ ಪುರಾತತ್ವ ಪರಿಶೋಧಕರನ್ನು ಆಕರ್ಷಿಸಿದೆ. ಅಲ್ಲಿನ ಮೌರ್ಯ ಶಾತವಾಹನರ ಸಂದರ್ಭದ ಮಹಾಸ್ತೂಪದ ಉತ್ಖನನವು ಇನ್ನೂ ನಡೆಯುತ್ತಲೇ ಇದೆ. ಅಲ್ಲಿನ ವಿಶಿಷ್ಟ ವಾಸ್ತು ಮತ್ತು ಉಬ್ಬು ಶಿಲ್ಪಗಳ ತುಣುಕುಗಳನ್ನು ಸಕ್ರಮವಾಗಿ ಹೊಂದಿಸಿಡಲಾಗಿದೆ. ಈ ನೆಲೆಯ ಒಳಹೊಕ್ಕರೆ ಅದೊಂದು ಅದ್ಭುತ ಅನುಭವ ನೀಡುವ ದೃಶ್ಯಕಲಾ ಲೋಕವೇ ಸರಿ. ಸನ್ನತಿಯ ‘ಪತಿಮಾಪತಿಕ’ (ಉಬ್ಬು ಶಿಲ್ಪದ ಪಟ್ಟಿಕೆಗಳು) ಗಳಲ್ಲಿ ಬುದ್ಧನ ಜಾತಕ-ಪವಾಡಗಳಲ್ಲಿ ದೃಶ್ಯಲೋಕದ ಜತೆಜತೆಗೆ ನೋಡುಗರಿಗೆ ಬ್ರಾಹ್ಮೀಲಿಪಿಯ ಪರಿಚಯವಿದ್ದರೆ ಆಗುವ ಆನಂದವು ಆತ್ಯಂತಿಕವೇ ಸರಿ. 

ಸುರಪುರದ ಕಪಟರಾಳ ಕೃಷ್ಣರಾವ್ 1954ರಲ್ಲಿ ಕನಗನಹಳ್ಳಿಯ ಹತ್ತಿರದ ಸನ್ನತಿಯ ಬೌದ್ಧಮಹಾಸ್ತೂಪದ ಪ್ರಸ್ತಾಪ ಮಾಡಿದರು.ಆ ಮೊದಲು ಅದು ಶಾಕ್ತ ಸಂಬಂಧೀ ಚಂದ್ರಲಾಂಬದೇವಿಯ ದೇವಾಲಯದಿಂದಷ್ಟೇ ಪರಿಚಿತವಾಗಿತ್ತು. 1968ರ ಹೊತ್ತಿಗೆ ಪುರಾತತ್ವ ಶೋಧಕರಾದ ಎಂ.ಶೇಷಾದ್ರಿ, ಎಸ್. ನಾಗರಾಜು, ಪಿ.ಬಿ.ದೇಸಾಯಿ, ಎಂ.ಎಸ್. ನಾಗರಾಜ ರಾವ್, ಅ.ಸುಂದರ ಮೊದಲಾದವರ ಶೋಧನಾಕಾರ್ಯಗಳ ಫಲವಾಗಿ, ಕನಗನಹಳ್ಳಿಯ ಸುತ್ತಮುತ್ತಲಿನ ಭೀಮಾನದಿಯ ಎರಡೂ ಕಡೆಗಳಲ್ಲಿನ ಉತ್ಖನನಗಳ ಫಲವಾಗಿ ಸನ್ನತಿಯ ಕಾಲವು  ಕ್ರಿಸ್ತ ಪೂರ್ವ 1ನೆಯ ಶತಮಾನ ಇರಬಹುದೆಂದು ಊಹಿಸಲಾಯಿತು. ನಮ್ಮ ರಾಜ್ಯದ ಬೃಹತ್ ಬೌದ್ಧಕೇಂದ್ರ ಎನ್ನಿಸಿ ಟೆರಾಕೋಟ ಗೊಂಬೆಗಳು, ನಾಣ್ಯಗಳು ಮತ್ತು ಮಡಿಕೆ ಕುಡಿಕೆಗಳು ದೊರೆತು, ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ಪುನರ್ ರಚಿಸುವ ಅನಿವಾರ್ಯತೆ ಉಂಟಾಯಿತು. ನದಿಗಳ ಅಕ್ಕಪಕ್ಕ ಸಾಂಸ್ಕೃತಿಕ ಬೆಳವಣಿಗೆಯ ಚಹರೆಗಳು ಇರುವುದು ಸಹಜವೆಂಬಂತೆ ಭೀಮಾನದಿಯ ಕಣಿವೆಯ ಸುತ್ತ ಮುತ್ತಲಿನ ಶಿರವಾಳ, ಹುರಸಗುಂಡಗಿ, ಕನಗನಹಳ್ಳಿಗಳಲ್ಲಿ ಹಲವಾರು ಐತಿಹಾಸಿಕ ಪಳೆಯುಳಿಕೆಗಳು ಕಂಡುಬಂದವು ; ಸನ್ನತಿಯಲ್ಲಿ ಅಶೋಕನ ಶಿಲಾಶಾಸನವು ಕಾಣಿಸಿಕೊಂಡಿತು.(1) 

ಸನ್ನತಿಯ ಶೋಧನೆಯು 1997, 2000 ಮತ್ತು 2006ರಲ್ಲಿ ನಡೆದು ವಿಶಿಷ್ಟವಾಗಿ ಕಟ್ಟಲ್ಪಟ್ಟಿದ್ದ ಮಹಾಸ್ತೂಪದ ಅಳಿದುಳಿದ ಪುರಾವೆಗಳು ಕಂಡವು. ಮಹಾಸ್ತೂಪದ ಸುತ್ತಲೂ ಕೆಳಭಾಗದಿಂದ ಎರಡು ಸಾಲುಗಳಲ್ಲಿ ಉಬ್ಬುಶಿಲ್ಪಗಳಿದ್ದುದ್ದಾಗಿಯೂ ಅವುಗಳಲ್ಲಿ ಬುದ್ಧನ ಜಾತಕದ (2) ಮತ್ತು ಇನ್ನಿತರ ಕಥಾನಕಗಳ ಆಯ್ದ ದೃಶ್ಯಲೋಕಗಳನ್ನು ಉಬ್ಬುಶಿಲ್ಪಗಳಾಗಿಸಿ ಪ್ರದರ್ಶಿಸಿಸಲಾಗಿದ್ದಿತು. 

ಇಂದು ಆ ವಿಶಿಷ್ಟ ದೃಶ್ಯಲೋಕವು ಶಿಥಿಲಗೊಂಡಿದ್ದರೂ ನೋಡುಗರ ಕಲ್ಪನೆಗೆ ನಿಲುಕುವಂತಹ ಸಾಕ್ಷಿಗಳಂತೆ ಸ್ತೂಪದ ಹಲವಾರು ಶಿಲ್ಪ, ಉಬ್ಬುಶಿಲ್ಪ, ಇತ್ಯಾದಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಬಹುದು. ಚಿಕ್ಕ, ದೊಡ್ಡ ಕಲ್ಲು, ಇಟ್ಟಿಗೆ ಮತ್ತು ಸುಣ್ದದ ಗಾರೆಗಳ ಆಯಕ(ಚೌಕ)ಗಳು ಇದ್ದ ಕುರುಹುಗಳೂ ಗಮನಾರ್ಹ. ಉಸುಕುಕಲ್ಲಿನ ಸಿಂಹ ಸ್ತಂಭದ ಅವಶೇಷ, ಹೊಳಪಿನ ಕಪ್ಪುಮಡಕೆಯ ತುಣುಕುಗಳನ್ನು ಬೆಳ್ಳಿಯ ಒತ್ತು ನಾಣ್ಯಗಳು, ಸ್ತೂಪದಲ್ಲಿ ಅಶೋಕನ ಭಾವಶಿಲ್ಪಗಳು, ಪ್ರಾಕೃತ ಭಾಷೆಯಲ್ಲಿ ‘ರಾಯ ಅಸೋಕ’ ಎಂಬ ಶಾಸನ ಇತ್ಯಾದಿಗಳು ಈ ಸ್ತೂಪಕ್ಕೂ ಅಶೋಕನಿಗೂ ಇದ್ದ ನಂಟನ್ನು ಬೆಸೆಯಬಲ್ಲವು. 

ಈ  ಸ್ತೂಪದ ವಾಸ್ತುಶಿಲ್ಪ ಸಂಯೋಜನೆಯು ವಿಶಿಷ್ಟವಾದುದು. ಸ್ತೂಪದ ಸುತ್ತಲೂ ಕೆಳಗಿನಿಂದ ಮೇಲಕ್ಕೆ ಎರಡು ಸಾಲುಗಳಲ್ಲಿ ಉಬ್ಬುಶಿಲ್ಪಗಳು ಇದ್ದವು. ಹೀಗಾಗಿ ಶಿಲ್ಪದ ಹಲವು ಆಯಾಮಗಳನ್ನು ಇಲ್ಲಿ ದುಡಿಸಿಕೊಳ್ಳಲಾಗಿದೆ. ಶಿಲ್ಪಿಗಳು ಅವರ ಸಂದರ್ಭದ ಹಲವು ಪರಿಕರಗಳನ್ನು ಬಳಸಿಕೊಂಡಿದ್ದಾರೆ. ರೇಖೆ, ಉಬ್ಬು ಶಿಲ್ಪ, ಮೂರು ಆಯಾಮಗಳ ದುಂಡುಶಿಲ್ಪಗಳೂ ಸ್ತೂಪದ ವಾಸ್ತುಶಿಲ್ಪೀಯ ಅಗತ್ಯಗಳಿಗೆ ಪೂರಕವಾಗಿ ಅಳವಡಿಸಲ್ಪಟ್ಟಿದ್ದವು. ಪಕ್ಕದಲ್ಲಿಯೇ ಹರಿಯುವ ಭೀಮಾ ನದಿಯ ಹರಿವಿನ ಪಾತ್ರ ಬದಲಾವಣೆ ಮತ್ತು ಕಾಲದ ಪ್ರಭಾವದಿಂದ ಕುಸಿದು, ಶಿಥಿಲಗೊಂಡು ಮಣ್ಣಿನಲ್ಲಿ ಮುಚ್ಚಿಹೋದ ಸ್ತೂಪ (ಬುದ್ಧನ ಅವಶೇಷಗಳನ್ನು ಪೂಜಿಸಲು ಇಟ್ಟಿರುವ ವಿಶಿಷ್ಟ ವಾಸ್ತುಶಿಲ್ಪ: ಬೌದ್ಧರ ಮತ ಸಂಬಂಧೀ ಸ್ಮಾರಕ ವಾಸ್ತುಶಿಲ್ಪ)  ಪ್ರಸ್ತುತ ತುಂಡುತುಂಡಾಗಿ ಮುರಿದು ಬಿದ್ದಿದ್ದರೂ ತನ್ನ ಗತವೈಭವವನ್ನು ಬಿಂಬಿಸುವಂತೆ ತಮ್ಮ ಅಪೂರ್ವ ಐತಿಹಾಸಿಕ ಮಹತ್ವಾಕಾಂಕ್ಷೀ ಮನೋಭೂಮಿಕೆಯನ್ನು ಹೊದ್ದು ಉಳಿದುಕೊಂಡಿದೆ.  

ಹಲವು ಸಂದರ್ಭಗಳಲ್ಲಿ ಹಲವು ರೀತಿಗಳಲ್ಲಿ ಬೆಳವಣಿಗೆ ಕಂಡ ಈ ಮಹಾಸ್ತೂಪವು ದೊಡ್ಡ ರೀತಿಯ ಸಂರಕ್ಷಣ ಮತ್ತು ಪ್ರದರ್ಶನಾ ವ್ಯವಸ್ಥೆಗಳಿಗಾಗಿ ಕಾಯುತ್ತಿದೆ.  ನಾಲ್ಕು ಆಯಕ (ಚೌಕಾಕಾರದ ಮಂಟಪದಂತಹ ವಸ್ತು) ಗಳಲ್ಲಿ ಪೂರ್ವದಿಕ್ಕಿನ ಆಯಕದ ವಿಶಿಷ್ಟ ಬೃಹತ್ ಬುದ್ಧನ ನಿಂತ ನಿಲುವಿನ ಶಿಲ್ಪಗಳು ಹಾಗೂ ಸ್ವಾಗತಿಸಲಿದ್ದ ಬೃಹತ್ ಯಕ್ಷಿಯ  ಶಿಲ್ಪವೂ ಮುರಿದು ಬಿದ್ದಿದೆ ಎಂದರೆ, ತೆಳುವಾದ ಶಿಲಾ ಫಲಕಗಳು ತುಂಡುತುಂಡಾಗಿ ಬಿದ್ದಿರುವುದು ಅಸಹಜವೇನೂ ಅಲ್ಲ. ಪ್ರತಿಮಾ ಪಟ ಎಂದರೆ ಶಿಲ್ಪಸದೃಶ ಉಬ್ಬು ಫಲಕ. ಶಿಲ್ಪಿಗಳು ಆಯಾಸ್ಥಳ ನಿರ್ದಿಷ್ಟ ಅವಕಾಶಕ್ಕೆ( space) ಸೂಕ್ತ ರೀತಿಯಲ್ಲಿ ಬುದ್ಧನ ಕಥಾನಕವನ್ನು ರೂಪಿಸಿದ್ದಾರೆ. ಈ ರೂಪ- ಅವಕಾಶಗಳ ಮೇಲ್ಮೈಯನ್ನು ಒಂದು ಕಾಲದಲ್ಲಿ ಬಣ್ಣಗಳೂ ಲೇಪಿಸಲ್ಪಟ್ಟಿದ್ದ ಸೂಚನೆ-ಸಾಧ್ಯತೆಗಳಿವೆ. ಇಂದಿಗೂ ಕೆಲವು ಉಬ್ಬು ಶಿಲ್ಪಗಳಲ್ಲಿ ಕೆಂಗಾವಿ ಬಣ್ಣವನ್ನು ಗಮನಿಸಬಹುದು. ನಾಲ್ಕೂ ದಿಕ್ಕಿನ ಆಯಕಗಳಲ್ಲಿ ವಿಶಿಷ್ಟ ಉಬ್ಬು ಶಿಲ್ಪಗಳಿವೆ. 

ಪೂರ್ವದ ಆಯಕ (ಚೌಕಾಕಾರದ ವೇದಿಕೆ, ಜಗಲಿ)ದಲ್ಲಿ ಬುದ್ಧನ ಬದುಕಿನ 5 ಪ್ರಮುಖ ಘಟನೆಗಳಲ್ಲಿ ನಾಲ್ಕನ್ನು ಪ್ರಾತಿನಿಧಿಸುವಂತೆ ನಾಲ್ಕು ಸ್ತಂಭಗಳಿದ್ದವು. ಪ್ರತಿಯೊಂದೂ ಸರಾಸರಿ 4.50 ಮೀ. ಎತ್ತರದವು 7 ಪ್ಯಾನಲ್‌ಗಳಲ್ಲಿ ಬುದ್ಧನ ಕಥಾನಕದ 5 ಉಬ್ಬು ಶಿಲ್ಪಗಳಿವೆ. ಹೀಗೆಯೇ ಉಳಿದ ನಾಲ್ಕು ಆಯಕಗಳಲ್ಲಿಯೂ ಈ ಕಥಾನಕದ ಹಲವು ಪುಟಗಳಿವೆ. ಇಂತಹ ಕಥಾನಕಗಳ ಹರಿವು ದಕ್ಷಿಣದಲ್ಲಿಯೇ ಒಂದು ವಿಶೇಷ ಎನ್ನಬಹುದು. (ಆಂಧ್ರದ ಅಮರಾವತಿಯಲ್ಲಿಯೂ ಇದೇ ದೃಷ್ಟಿಯನ್ನು ಗಮನಿಸಬಹುದು). ಉತ್ತರದ ಸಾಂಚಿಯಲ್ಲಿನ ಸ್ತೂಪಗಳಲ್ಲಿ ಇಂತಹ ಉಬ್ಬು ಶಿಲ್ಪ ವೈವಿಧ್ಯ ವಿವರಗಳು ಇಲ್ಲ. ಅಲ್ಲಿ ಸ್ತೂಪದ ಪ್ರವೇಶ ದ್ವಾರದಲ್ಲಿ ಗಮನಾರ್ಹ ರೀತಿಯಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟಿವೆ ಅಷ್ಟೇ. ಬುದ್ಧನ ಕಥಾನಕದ ವಿಶಿಷ್ಟ ಉಬ್ಬು ಶಿಲ್ಪಗಳನ್ನು ಎಲ್ಲೆಲ್ಲಿ ಅಗತ್ಯವೋ ಅಲ್ಲೆಲ್ಲವೂ ಜಾಮಿತಿಯ ವೈವಿಧ್ಯಮಯ ವಿನ್ಯಾಸಗಳನ್ನು (design) ನಿಷ್ಕೃಷ್ಟತೆಯಿಂದ ರೇಖಿಸಿ, ಉಬ್ಬುಶಿಲ್ಪವಾಗಿಸಲಾಗಿದೆ. ಒಂದೆಡೆಯಂತೂ ತಾವರೆಯ ಹೂವಿನ ವಿಶ್ವರೂಪವನ್ನು ಕುಶಲತೆಯಿಂದ ರೂಪಿಸಲಾಗಿದೆ. 

ಪ್ರಸ್ತುತ (ಕಲಬುರ್ಗಿ ಮ್ಯೂಸಿಯಂನಲ್ಲಿರುವ ಉಬ್ಬುಶಿಲ್ಪಗಳು ಗಣನೀಯವಾಗಿವೆಯಾದರೂ ಅವುಗಳಲ್ಲಿ ಒಂದನ್ನು ಕೆಟ್ಟ ರೀತಿಯಲ್ಲಿ ಸಂರಕ್ಷಿಸಲಾಗಿರುವುದು ವಿಷಾದನೀಯ) ಸನ್ನತಿಯ ಮಹಾಸ್ತೂಪದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಮುರಿದ ಬುದ್ಧನ ಶಿಲ್ಪಗಳು, ಉಬ್ಬುಶಿಲ್ಪ ಫಲಕಗಳು ಇನ್ನಿತರ ವಾಸ್ತು ಕಲಾರೂಪಗಳನ್ನು ತೆರೆದ ಅವಕಾಶದಲ್ಲಿ ನೆಲದ ಮೇಲೆಯೇ ಇರಿಸಲಾಗಿದೆ.  ನಾವು ಅವು ಇರುವಂತೆಯೇ ನೋಡಬೇಕಾಗಿದೆ. 

ಈ ಆಯಕಗಳನ್ನು ಶಿಲ್ಪ ಸಂಕುಲವೇ ವಿಶಿಷ್ಟ. ಇಲ್ಲಿ ಕುಳಿತ ಬುದ್ಧನ ಪೂರ್ಣಶಿಲ್ಪಗಳೇ ಅಲ್ಲದೇ ಉತ್ತರದ ಆಯಕದ ’ಬುದ್ಧಪಾದ’ದ ಉಬ್ಬುಶಿಲ್ಪವು ಆಕರ್ಷಕ; ಅಧ್ಯಯನಯೋಗ್ಯ. ಚೌಕಾಕಾರದ ಫಲಕದಲ್ಲಿ ವೃತ್ತಾಕಾರದ ವಿಶಿಷ್ಟ ಬದುಕಿನ ಲೋಕದ ಸೂಕ್ಷ್ಮತೆಗಳು ಉಬ್ಬು/ ರೇಖಾಚಿತ್ರ ಲೋಕವನ್ನು ಮೆಟ್ಟಿನಿಂತ ಬುದ್ಧನ ಪಾದಗಳ ಕಲ್ಪನೆ ಇದು. ಎಂಬರಿಗೆ ಎರಡು ಸಾಲಿನ ಬರಹವೂ ಇದೆ. ಉತ್ತರದ ಆಯಕದ ಶ್ರೀಯಕ್ಷಿಯರಿಗಿಂತಲೂ ಒರಟು ಉಬ್ಬು ರೂಪ ನಿರ್ವಹಣೆಯಿಂದ ರೂಪಿಸಲ್ಪಟ್ಟಿವೆ. ಹಲವು ಆಯಕಗಳ- ಬುದ್ಧನ ಪಾದಗಳ ಉಬ್ಬು ಶಿಲ್ಪಗಳು ಶಿಥಿಲವಾಗಿರುವುದು ಮಾತ್ರವೇ ಅಲ್ಲದೆ ಭಾಗಷಃ ಹೂತೂ ಹೋಗಿವೆ. ಪಶ್ಚಿಮದ ಆಯಕದಲ್ಲಿನ ಒಂಬತ್ತು ಹೆಡೆಯ ನಾಗ, ಸ್ತೂಪ ಧರ್ಮಚಕ್ರಗಳ ಉಬ್ಬುಶಿಲ್ಪಗಳು ಇವೆ. 

ಮಹಾಸ್ತೂಪದ ಎರಡು ಸಾಲುಗಳ ಕೆಳಹಂತದ ಉಬ್ಬುಶಿಲ್ಪಗಳಲ್ಲೊಂದರಲ್ಲಿ ಬೌದ್ಧಸನ್ಯಾಸಿಗಳ ಧ್ಯಾನಮಯ ದೃಶ್ಯಲೋಕವಿದೆ. ಇಲ್ಲಿ ವಾಸ್ತುಶಿಲ್ಪಿಯ ಭೂದೃಶ್ಯಲೋಕದ ಕಲ್ಪನೆ, ಸಂಯೋಜನೆಗಳು perspective (ದೃಗ್ ದರ್ಶನ) ದೃಷ್ಟಿಯಿಂದಲೂ ನೋಡಿಸಿಕೊಳ್ಳಬಲ್ಲದು. ಸ್ತೂಪದ ಚಂದ್ರಶಿಲೆಯ ಕಲ್ಪನೆಯೂ ಕೌತುಕಮಯ.

ಮೌರ್ಯದ ಸಂದರ್ಭದ ಶಿಲ್ಪಗಳನ್ನು ಗಮನಿಸಿದರೆ ಮಹಾಸ್ತೂಪದ ಪ್ರಾರಂಭದ ಮೌರ್ಯರ ಇನ್ನಿತರ ನೆಲೆಗಳ ಸ್ತೂಪಗಳಲ್ಲಿ ಇರುವಂತೆ ಸಿಂಹಸ್ತಂಭವು ಇದೆ. ಅಪರೂಪಕ್ಕೆ, ಇನ್ಯಾವ ಸ್ತೂಪಗಳ ನೆಲೆಗಳಲ್ಲಿಯೂ ಕಾಣದಷ್ಟು ಅಶೋಕನ ಉಬ್ಬು ಭಾವಶಿಲ್ಪಗಳು ಮೂಡಿಬಂದಿವೆ. ಇಲ್ಲಿ ಈ ಮೊದಲೇ ಉಲ್ಲೇಖಿಸಿರುವಂತೆ ‘ರಾಯ ಅಸೋಕ’ ಎಂದೂ ಬರೆಯಲಾಗಿದೆ. ಶಾತವಾಹನರ ಪ್ರಾರಂಭದ ಹಂತದಲ್ಲಿ ಮಹಾಸ್ತೂಪದ ವಾಸ್ತುಶಿಲ್ಪವೇ ಅಲ್ಲದೇ ಶಿಲ್ಪಸೃಷ್ಟಿ ಕಲ್ಪನೆಯಲ್ಲಿಯೂ ಹಲವು ರೀತಿಯ ಮಾರ್ಪಾಡು, ದೊಡ್ಡ ರೀತಿಯ ಸೇರ್ಪಡೆಗಳು ಆಗಿರಬಹುದು. ಆಳಿದ ಶಾತವಾಹನ ಅರಸರ ಉಬ್ಬು ಭಾವ ಶಿಲ್ಪಗಳೂ ಶಿಲಾ-ಫಲಕಗಳಲ್ಲಿ ಕಾಣಿಸಿಕೊಂಡವು (3). ಅರಮನೆಯ ಆಸ್ಥಾನಲ್ಲಿ ಚ್ಚಿಮುಖ ಶಾತವಾಹನ, ಶಾತವಾಹನ ಶಾತಕರ್ಣಿ, ಮಾತಲಕ, ಮೊದಲಾದವರ ಉಬ್ಬು ಭಾವಶಿಲ್ಪಗಳು ಶಿಲ್ಪಿಸಲ್ಪಟ್ಟಿವೆ; ಅಂದಿನ ಸಮಕಾಲೀನ ವಾಸ್ತುಶಿಲ್ಪ ವಿಶೇಷತೆಯೂ ಇದೆ. 

ಮಹಾಸ್ತೂಪದ ಕೆಳಗಿನ ಹಂತದ ಉಬ್ಬುಶಿಲ್ಪವೊಂದರಲ್ಲಿ ಬೃಹತ್ತಾಗಿಯೇ ‘ಭವಚಕ್ರ’ವು ಕಥಾನಕವಾಗಿ ಅರಳಿದೆ. ಬದುಕಿನ ಹಲವು ಮುಖಗಳು ಅಚ್ಚರಿಯ ಅಂದಿನ ಗ್ರಹಿಕೆಗಳು ಆದಿಮ ಸತ್ವಕ್ಕೆ ಹತ್ತಿರವಾಗಿ ತೀವ್ರತೆಯಿಂದಲೇ ಕಾಣಿಸಿ ಕೊಂಡಿವೆ. ಆದಿಮ ಕಲೆಯ ಒರಟುತನ, ಸರಳತೆಗಳಿವೆ. ಬದುಕಿನ ಆರಂಭ ಮತ್ತು ಅಂತ್ಯಗಳಿಲ್ಲದ ನಿರಂತರ ಪಯಣವನ್ನು ಗಾಢವಾಗಿ ನೆನಪಿಸುತ್ತವೆ. ಇದೊಂದು ಇಡೀ ಉಬ್ಬುಶಿಲ್ಪಗಳಲ್ಲಿಯೇ ಗ್ರಹಿಕೆಯ ಅನನ್ಯತೆಯ, ಸಂಯೋಜನೆಯ ಸಂಕೀರ್ಣ ಸೌಂದರ್ಯದ ಉಬ್ಬು ಶಿಲ್ಪ ಕಲ್ಪನೆಯಿದು. ಇದರ ಜತೆಜತೆಗೆ ಜಾತಕದ ಕಥಾನಕಗಳು ಹಲವಾರು ಉಬ್ಬು ಶಿಲ್ಪಗಳಲ್ಲಿ ಬಿತ್ತರಗೊಂಡಿವೆ. ಆಯ್ದ ಇನ್ನಿತರ ಕಥಾ ಸಂದರ್ಭಗಳ ದೃಶ್ಯಮತ್ತು ರೂಪ ಸಂಯೋಜನೆಗಳು ಶಿಲಾಫಲಕದ ಆಕಾರವನ್ನು ಅನುಲಕ್ಷಿಸಿ ರೂಪುಗೊಂಡಿರುವಿಕೆಯಲ್ಲಿ ಶಿಲ್ಪಗಳ ಜಾಣ್ಮೆ ಇದೆ. ಬುದ್ಧನ ಜನನ, ವಿದುರ ಪಂಡಿತ ಜಾತಕ, ಸಾಕ್ಯವರ್ಧನನಿಗೆ ಮಗುವನ್ನು ಕೊಡುತ್ತಿರುವಿಕೆ ಇತ್ಯಾದಿ  ಫಲಕಗಳನ್ನಿಲ್ಲಿ ಹೆಸರಿಸಬಹುದು. 

ಅಂದಿನ ನಮ್ಮ ಶಿಲ್ಪಗಳು ತಾವು ಕಂಡ ಸುತ್ತಲಿನ ಪ್ರಾಣಿ, ಪಕ್ಷಿಗಳೇ ಅಲ್ಲದೆ ಹೆಣ್ಣು ಗಂಡಿನ ದೇಹದ ರೂಪ ಗ್ರಹಿಕೆಗಳಲ್ಲಿಯೂ ಸ್ಥಳೀಯತೆಯನ್ನು ಬಿಂಬಿಸಿದಂತೆ ಕಾಣುತ್ತದೆ. ಅರಸಿಯರಿಂದ ಆರಂಭಿಸಿ ಸೇವಕಿಯವರೆಗೆ ಹೆಣ್ಣಿನ ವಿವಿಧ ಪಾತ್ರಗಳನ್ನು ಗ್ರಹಿಸಲಾಗಿದೆ. ದಾನ ನೀಡಿದ ಉಲ್ಲೇಖಗಳಲ್ಲೂ, ತಾಯಿ, ತಂಗಿ, ಮಗಳು, ಪ್ರೀತಿಯ ಪತ್ನಿ, ಮೊಮ್ಮಗಳು, ವಿದ್ಯಾರ್ಥಿನಿಯರು ಹೀಗೆ ಹೆಸರಿಸಲಾಗಿದೆ. 

ಕನಗನಹಳ್ಳಿಯ ಹೆಣ್ಣುಗಳನ್ನು ಶಿಲ್ಪಿಗಳು ವಿಶಿಷ್ಟವಾಗಿ ಗ್ರಹಿಸಿದ್ದಾರೆ. ಭಾವತೀವ್ರ ಕಣ್ಣುಗಳು, ಪುಟ್ಟಬಾಯಿ, ಚಿಕ್ಕ ಹಣೆ, ತ್ರಿಕೋನ/ ಮೊಟ್ಟೆಯಾಕಾರದ ಮುಖ. ಬುದ್ದನ ಬದುಕಿನಲ್ಲಿ ಹಲವು ರೀತಿಗಳಲ್ಲಿ ಕಾಣಿಸಿಕೊಂಡ ಮಹಿಳೆಯರ ಪಾತ್ರ-ಪ್ರಭಾವಗಳನ್ನು ಗ್ರಹಿಸಲಾಗಿದೆ. ಬಹುತೇಕ ಬೆತ್ತಲೆಯಾಗಿ ಗ್ರಹಿಸಿರುವ ಶಿಲ್ಪಿಗಳು ಕಾಲಿನ ಕಡಗ ಆಭರಣ, ಸಾಮಾನ್ಯ ಮಹಿಳೆಯರಲ್ಲಿ ಆದಿಮ ಪ್ರಜ್ಞೆಗೆ ಹತ್ತಿರವಾಗಿದ್ದರೆ, ಉನ್ನತ ವರ್ಗದ ಮಹಿಳೆಯರ ಸುಂದರ ಕುಶಲತೆಯ ಕಡಗ ಆಭರಣಗಳು ಆಲಂಕರಿಸಲ್ಪಟ್ಟಿವೆ. ತಲೆ-ಕುತ್ತಿಗೆ ಇತ್ಯಾದಿಗಳ ಆಭರಣಗಳೂ ವೈವಿಧ್ಯಮಯ. ಭಾರ್ ಹುತ್, ಸಾಂಚಿ, ಅಮರಾವತಿಗಳಿಗಿಂತಲೂ ವಿಭಿನ್ನವಾದ ಮಾನವರೂಪ ಗ್ರಹಿಕೆಗಳು ಇವು. 

ಸಾಂಚಿಯ ’ವೇಶಾಂತರ ಜಾತಕ’, ಕಪಿಲವಸ್ತು, ಕೋಸಲ, ರಾಜಗೃಹ ನಗರಗಳು ಮತ್ತು ಅಮರಾವತಿಯ ರಾಜಗೃಹ, ಛದ್ದಾಂತ ಜಾತಕದ ಕಾಶಿನಗರದ ಉಬ್ಬು ಶಿಲ್ಪಗಳಲ್ಲಿನ ಮಾನವ ರೂಪಗಳಲ್ಲಿ ಸಾಮ್ಯತೆ ಇದೆ. ಸೌಂದರ್ಯಾತ್ಮಕ ನಿರ್ವಹಣೆಯೂ ಒಂದೇ ರೀತಿಯಲ್ಲಿದೆ. ಪಕ್ಕ, ಕಲಾ ವ್ಯಾಕರಣ ಅರಗಿಸಿಕೊಂಡ  ರೂಪಗಳವು. ವಾಸ್ತುಶಿಲ್ಪ ಕಲ್ಪನೆಗಳು ಹಾಗೂ, ದೃಶ್ಯ ಸಂಯೋಜನೆಗಳು ನುರಿತ ಶಿಲ್ಪಿಗಳಿಂದ ಮೂಡಿಬಂದಂತಿವೆ. ದೃಶ್ಯಗಳಲ್ಲಿ ಇಡಿಕಿರಿದ ರೂಪಗಳನ್ನು ತೀವ್ರತೆಯಿಂದ ಸಂಯೋಜಿಸಿ ತುಂಬಲಾಗಿದೆ. ಆದರೆ ಸನ್ನತಿಯ ರೂಪಗಳು ಸ್ಥಳೀಯ ವಿಶಿಷ್ಟ ಒರಟುತನವನ್ನು ಅರಗಿಸಿಕೊಂಡಿವೆ. ಬಹುಷಃ ಮಾಧ್ಯಮವಾಗಿ ಬಳಸಲ್ಪಟ್ಟ, ಸ್ಥಳೀಯ ಶಿಲೆಯ ಗುಣಲಕ್ಷಣಗಳೂ ಈ ಹಿನ್ನೆಲೆಯನ್ನು ಪ್ರಭಾವಿಸಿವೆ. 

ಆದರೆ ಬಹುತೇಕ ಮರಳುಗಲ್ಲಿನಲ್ಲಿ ಮೂಡಿಬಂದಿರುವ ಭಾರ್ ಹುತ್, ಮಧುರಾ, ಸಾಂಚಿ, ಅಮರಾವತಿಗಳಲ್ಲಿ ಸೂಕ್ಷ್ಮ ಕರಕುಶಲತೆಯತೆಯ ಜತೆ ಜತೆಗೇ ಪ್ರೌಢರೂಪಗಾಂಭೀರ್ಯಗಳು ಇವೆ. ವಿಶೇಷವೆಂದರೆ ಈ ಎಲ್ಲ ನೆಲೆಗಳ ಶಿಲ್ಪಸೃಷ್ಟಿ ಸಂಯೋಜನೆಗಳ ಆಕಾರದಲ್ಲಿ ಚಿಕ್ಕವು ಆದರೆ ಸನ್ನತಿಯ ಉಬ್ಬು ಶಿಲ್ಪಗಳು ದೊಡ್ಡ ಆಕಾರದವು, ಹಾಗಾಗಿ ಅಲ್ಲಿ ಸೂಕ್ಷ್ಮ ನಿರ್ವಹಣೆಯ ಸಮಸ್ಯೆಯ ನಡುವೆಯೂ ವಕ್ಷಹಾರಾ, ಕಂಠಹಾರ, ಕುಂಡಲ (ಮಕರ ಕುಂಡಲ, ಸಿಂಹಮುಖ ಸ್ವರ್ಣ ಕುಂಡಲ... ಇತ್ಯಾದಿ) ಗಳು ಕುಶಲತೆಯಿಂದಲೇ ಕೆತ್ತಲ್ಪಟ್ಟಿವೆ. 

ಸುಮಾರು ಹತ್ತು ಬುದ್ಧನ ಶಿಲ್ಪಗಳನ್ನು ಶಿಲ್ಪಿಸಿದ ಸನ್ನತಿಯಲ್ಲಿನ ಶಿಲ್ಪಗಳ ಹೆಸರುಗಳು ಉಲ್ಲೇಖಗೊಂಡಿವೆ(4). ಈ ಸ್ತೂಪದ 13 ಬುದ್ಧನ ಶಿಲ್ಪಗಳಲ್ಲಿ 10 ಶಿಲ್ಪಗಳ ಪೀಠ ಅವಕಾಶದಲ್ಲಿ ಬರಹಗಳಿವೆ. ಆಯಕ ಮತ್ತು ಪ್ರದಕ್ಷಿಣಾ ಪಥದಲ್ಲಿ ಈ ಬುದ್ಧನ ಶಿಲ್ಪಗಳಿಗೆ ಸ್ಥಾನ ಕಲ್ಪಿಸಲಾಗಿತ್ತು 

1. ಕ್ರಕುಚ್ಛಂಡ ಶಿಲ್ಪವು ಭಕ್ತವಾಕಟಿಚದ ವಿಶಾಖನು ಹಾಗೂ ಅವನ ಮಗನೊಂದಿಗೆ ಕೆತ್ತಲ್ಪಟ್ಟಿದೆ ಎಂದಿದೆ. 

2. ಮೈತ್ರೇಯ (ಅನಾಗತ): ವಿಶ್ವಾತೀತ ದೇವ ಬೋಧಿಸತ್ವನು ಇನ್ನೂ ಬುದ್ಧನಾಗಿ ಹುಟ್ಟಲಿರುವ ವಿಶ್ವಾತೀತ ವಿಜಯಶಾಲಿ ದೇವ ಬೋಧಿಸತ್ವನ ಶಿಲ್ಪವು ಎಲ್ಲ ವಿಶ್ವಗಳ ಒಳಿತಿಗಾಗಿ ತಮ್ಮ ಮಗನೊಂದಿಗೆ ವಾಕಾಟಿತದ ವಿಶಾಖನಿಂದ ಕೆತ್ತಲ್ಪಟ್ಟಿದೆ ಎಂದಿದೆ. 

3. ಕನಕ ಮುನಿ: ಪರಿಪೂರ್ಣ ಪ್ರಬೋಧಕ ದೇವ ಕನಕ ಮುನಿಯ ಶಿಲ್ಪವನ್ನು ವಾಕಾಟಿಚ ವಿಶಾಖನು ತನ್ನ ಮಗನೊಂದಿಗೆ ರೂಪಿಸಿದ್ದಾನೆ. 

4. ವಿಪಸಾಯಿನ್ : ಬುದ್ಧದೇವ ವಿಪಸಾಯಿನ್ ಶಿಲ್ಪವನ್ನು ವಾಕಾಟಿಚದ ವಿಶಾಖನು ತನ್ನ ಮಗನೊಂದಿಗೆ, ಮಾಧವನ ಮಗನು ಶಿಲ್ಪಿ ರಾಜಾಮಾತ್ವ ಬೋಧಿಗುಪ್ತನು, ಸ್ವಾಮಿನಾಗನ್ ಮೊಮ್ಮಗನು ಮತ್ತು ವಾಸುದೇವನ ಮರಿಮಗನು ಕೆತ್ತಿದ್ದಾರೆ. 

5. ಸಿಖಿನ್ : ಪರಿಪೂರ್ಣ ಮಹಾಪ್ರಬೋಧಕ ಸಿಖಿನ್ ಶಿಲ್ಪವನ್ನು ವಾಕಾಟಿಚದ ವಿಶಾಖನು ತನ್ನ ಮಗನೊಂದಿಗೆ ಶಿಲ್ಪಿ ನಾಗಬೋಧಿ, ಮಾಧವನ ಮಗನು, ಸ್ವಾಮಿನಾಗನ ಮೊಮ್ಮಗನು ಮತ್ತು ವಾಸುದೇವನ ಮರಿಮಗನು ಕೆತ್ತಿದ್ದಾರೆ. 

6. ವಿಶ್ವಭು: ಈ ವಿಶ್ವಭು ಬುದ್ಧ ದೇವನ ಮೂರ್ತಿ ಶಿಲ್ಪವನ್ನು ವಾಕಾಟಿಚದ ವಿಶಾಖನು ತನ್ನ ಮಗನೊಂದಿಗೆ ಶಿಲ್ಪಿ ಮತ್ತು ರಾಜ ಅಮಾತ್ಯ ಬೋಧಿಗುಪ್ತ ಮಾಧವನ ಮಗನು, ಸ್ವಾಮಿನಾಗನ ಮೊಮ್ಮಗನು, ವಾಸುದೇವನ ಮರಿಮಗನು ಕೆತ್ತಿದ್ದಾರೆ ಎಂದಿದೆ. 

7. ಕಶ್ಯಪ: ಪರಿಪೂರ್ಣ ಪ್ರಬೋಧಕ ಕಾಶ್ಯಪ ದೇವನ ಈ ಮೂರ್ತಿಯನ್ನು ತನ್ನ ಮಗನೊಂದಿಗೆ ವಾಕಾಟಿಚದ ವಿಶಾಖನು ಕೆತ್ತಿದ್ದಾನೆ ಎಂದಿದೆ.

ಕ್ರಿಸ್ತಪೂರ್ವ 3ನೇ ಶತಮಾನ- ಕ್ರಿಸ್ತಶಕ 2-3ನೆಯ ಶತಮಾನಗಳಷ್ಟು ಹಿಂದಿಯೇ ಆಂಧ್ರ ಪ್ರದೇಶ ಮೂಲದ ಶಾತವಾಹನರು ಸನ್ನತಿಯ ಸ್ತೂಪ ಸೃಷ್ಟಿಸಿದಂತೆ ಸುಮಾರು ಅದೇ ಕಾಲಕ್ಕೆ ಅಮರಾವತಿಯಲ್ಲಿಯೂ ಬೌದ್ಧಸ್ತೂಪವೊಂದನ್ನು ನಿರ್ಮಿಸಿದ್ದರು. ಅತ್ಯುತ್ತಮ ಶಿಲ್ಪಿಗಳೇ ಅಲ್ಲದೆ ನೂರಾರು ಸ್ಥಳೀಯ ಸಹಾಯಕಶಿಲ್ಪಿಗಳನ್ನು ನೆರವಾಗಿಸಿಕೊಂಡರು. ಸಾಂಚಿ, ಅಮರಾವತಿ ಮತ್ತು ಸನ್ನತಿಗಳಿಗೆ ಉಬ್ಬು ಶಿಲ್ಪ ಸೃಷ್ಟಿಶೀಲತೆಯಲ್ಲಿ ಹಲವು ಸಾಮ್ಯತೆಗಳಿವೆ. ಪ್ರಮುಖ ಶಿಲ್ಪಗಳು ಕ್ರಿ.ಪೂ. ಮೊದಲ ಮತ್ತು ಎರಡನೆಯ ಶತಮಾನಗಳಿಂದ ಕ್ರಿಸ್ತ ಶಕ 2 ಮತ್ತು 3ನೆಯ ಶತಮಾನಗಳವರೆಗೆ ಕಾಣಿಸಿಕೊಂಡು ತೆರೆಮರೆಗೆ ಸರಿದಿದ್ದಾರೆ. ಮೂರು ತಲೆಮಾರುಗಳು ಹೆಸರುಗಳು ಸನ್ನತಿಯ ಕೆಲವು ಶಿಲ್ಪಗಳಲ್ಲಿವೆ. ಹೀಗಾಗಿ ನಮ್ಮ ಭಾರತೀಯ ಶಿಲ್ಪಿಗಳು ಮೌರ್ಯ-ಶಾತವಾಹನರ ಕಾಲದಿಂದಲೇ ಹೆಸರನ್ನು ಉಲ್ಲೇಖಿಸುವ ಪರಂಪರೆಯನ್ನು ಪ್ರಾರಂಭಿಸಿದ್ದಾರೆ. ನಂತರ ಚಾಲುಕ್ಯ, ಹೊಯ್ಸಳರ ಕಾಲದಲ್ಲಿ ಈ ಪರಂಪರೆ ಮುಂದುವರೆಯಿತು.

 

ಟಿಪ್ಪಣಿಗಳು

(1) ಇಂದು ಚಂದ್ರಲಾಂಬದೇವಿಯ ದೇವಾಲಯದ ಆವರಣದ ಒಂದೆಡೆ ಬಿದ್ದಿರುವ ಕಾಳಿಯ ಶಿಲ್ಪದ ಪೀಠದ ಕೆಳಭಾಗದಲ್ಲಿ ದೊರೆತ ಬ್ರಾಹ್ಮೀಲಿಪಿಯ ಅಶೋಕನ ಶಾಸನವಿದೆ. ಸನ್ನತಿಯ ಬೌದ್ಧ ಮಹಾಸ್ತೂಪದ ಆವರಣದಲ್ಲಿ ಅದನ್ನು ಪ್ರದರ್ಶಿಸಲಾಗಿದೆ.

(2) ಜಾತಕದ ಮತ್ತಿತರ ಕತೆಗಳು  ಹತ್ತು ಉಬ್ಬು ಫಲಕಗಳಲ್ಲಿ ಹೇಳಲ್ಪಟ್ಟಿವೆ. ವೇಶಾಂತರ ಜಾತಕ, ಹಂಸ, ಶುಖ , ಛದ್ದಾಂತ ಜಾತಕ, ನಳಪಾನ ಜಾತಕ, ಮಹಾಕಪಿ ಜಾತಕ, ರಾಜಾ ಉದಯನ ಕಥೆ, ವಿದುರ ಪಂಡಿತ ಇತ್ಯಾದಿಗಳ ಆಯ್ದ ದೃಶ್ಯಲೋಕಗಳಿವೆ.

(3) ಯಜ್ಞಶ್ರೀ ಶಾತಕರ್ಣಿಯ ತಲೆಯ ಭಾವಶಿಲ್ಪ, ಭಾವಪೂರ್ಣ, ಗಾಂಭೀರ್ಯದಿಂದ ಕೂಡಿದೆ. 

(4) ಕುಳಿತ ಬುದ್ಧನ ಶಿಲ್ಪಗಳಲ್ಲಿ ಕಾಶ್ಯಪ, ಸಾಖ್ಯಪತ, ಸಿದ್ಧಾರ್ಥ, ಮೈತ್ರೇಯ, ವಿಪಾಸಿನ್‌. ವಿಶ್ವಭು, ಕ್ರಕುಚ್ಚಾಂಡ, ಕನಕ ಮುನಿಯ ಶಿಲ್ಪಗಳು ಭಿನ್ನಗೊಂಡಿವೆ. ಸಿಖಿನ್ ಶಿಲ್ಪವೊಂದರ ಮುಖವು ಉಳಿದುಕೊಂಡಿದೆ. 

ಹೆಚ್ಚಿನ ವಿವರಗಳಿಗೆ ನೋಡಿ

  1. M. Sheshadri: Buddhist Monuments of Sannati, Quarterly Journal of Mythic Society, QJMS Vol. LV-1 No 1-4, Bangalore, 1965, pp 35-37

  2. ಕಪಟರಾಳ ಕೃಷ್ಣರಾವ್‌: ಚಂದ್ರಲಾ ಪರಮೇಶ್ವರಿ, ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಉಷಾ ಸಾಹಿತ್ಯ ಮಾಲೆ, ಮೈಸೂರು, 1970, pp 257-261

  3. PB Desai: The New Biddhist Center, The Journal of Karnataka University, Social Sciences, Vol. IV, pp 3-8

  4. K.V. Ramesh and M.S. Nagarajarao: Brahmi Inscriptions and their Bearings on the Great Stupa a Sannati.

  5. F.M. Asher and G.S. Gai (eds), Indian Epigraphy, New Delhi, 1985, pp 41-45

  6. A. Sundara: Excavations at Sannati, 1986-87, Puratatva No. 17, 1987 pp 22-26 26 (a)

  7. S. Nagaraju: Vestiges of Buddhist Art, Marg, Heritage of Karnataka Volume, Bombay, 1982, pp 27

  8. K.P. Poonacha: Excavation at Kanaganahalli (Sannati) Dist Gulbarga ASI 2011

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...