ಸಂಸ್ಕೃತ ಕಾವ್ಯಗಳ ಕನ್ನಡೀಕರಣದ ಮಾದರಿ ‘ಅಂಬಿಕಾತನಯದತ್ತರ ಕನ್ನಡ ಮೇಘದೂತ: ಒಂದು ಸಹ ಪಯಣ’   


ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಹಾಗೂ ಪ್ರಾಚೀನ ಕಾವ್ಯಗಳ ಕನ್ನಡೀಕರಣವು ಬಹುತೇಕವಾಗಿ ಸ್ಥಗಿತಗೊಂಡಿದೆ. ಇಂತಹ ಸಂಕೀರ್ಣ ಸ್ಥಿತಿಗೆ ಮರುಚಾಲನೆಯ ಮಾದರಿ ರೂಪವಾಗಿ ಡಾ.ಜಿ. ಕೃಷ್ಣಪ್ಪ ಹಾಗೂ ಡಾ. ಟಿ.ಎನ್. ವಾಸದೇವಮೂರ್ತಿ ಅವರ ‘ಅಂಬಿಕಾತನಯದತ್ತರ ಕನ್ನಡ ಮೇಘದೂತ: ಒಂದು ಸಹಪಯಣ’ ಕೃತಿಯು ಸಂಶೋಧನಾಧ್ಯಯನದ ಹಲವು ವಿಶೇಷತೆಗಳನ್ನು ಒಳಗೊಂಡು, ದಿಕ್ಸೂಚಿಯಂತಿದೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು.

ಬದುಕಿನ ಸೌಂದರ್ಯವನ್ನು, ಅದರಡಿಯ ಭೀಕರತೆಯನ್ನು, ತೋರುವ ಆದರ್ಶದ ಎತ್ತರವನ್ನು ಒಟ್ಟೊಟ್ಟಿಗೆ ಅನುಭವಕ್ಕೆ ತಂದುಕೊಡುವ ಸಂಸ್ಕೃತ ಕಾವ್ಯಗಳು ಅನೇಕ. ಈ ಎಲ್ಲ ಕಾವ್ಯಗಳಿಗೆ ಕಾಳಿದಾಸನ ಸಾಹಿತ್ಯವು ಕಿರೀಟವೆನಿಸಿದೆ. ಆತನ, ಋತುಸಂಹಾರ, ರಘುವಂಶ ಹಾಗೂ ಕುಮಾರ ಸಂಭವ-ಈ ಮೂರು ಕಾವ್ಯಗಳು ಪುರಾಣದ ವಸ್ತುಗಳನ್ನು ಒಳಗೊಂಡಿದ್ದು, ಆ ಪೈಕಿ, ‘ಮೇಘದೂತ’ ಮಾತ್ರ ವಿರಹದ ಅತೀ ಮಧುರ ಯಾತನೆಯ ರಸಾನುಭೂತಿ ನೀಡುವ ಸುಂದರ ಕಾವ್ಯ. ಈ ಕಾರಣಕ್ಕಾಗಿ, ಕಾಳಿದಾಸನ ಎಲ್ಲ ಸಾಹಿತ್ಯಗಳಲ್ಲಿ ‘ಮೇಘದೂತ’ ವಿಭಿನ್ನವಾಗಿ ಸೆಳೆಯುತ್ತದೆ.

ಉಪಮೆ, ರೂಪಕ, ಅಲಂಕಾರ, ಶೃಂಗಾರ ಹೀಗೆ ಮೈದುಂಬಿದ ಇಂತಹ ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ನವೋದಯ ಕಾಲದಲ್ಲಿ ನಡೆಯಿತು. ಶಾಂತಕವಿ, ಪರಮೇಶ್ವರ ಭಟ್ಟ, ಕುಕ್ಕೆ ಸುಬ್ರಮಣ್ಯ ಶಾಸ್ತ್ರಿಗಳು, ಅಗ್ರಹಾರ ನಾ. ಶರ್ಮ, ಗಣಪತಿ ಮೊಳೆಯಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ ಹೀಗೆ ಕೆಲ ಪ್ರಮುಖರು ಸಂಸ್ಕೃತ ಕಾವ್ಯಗಳತ್ತ ಓದುಗರ ಚಿತ್ತ ಸೆಳೆದಿದ್ದರು. ತದನಂತರ ಅಂದರೆ, ನವ್ಯ ಕಾಲಘಟ್ಟದಲ್ಲಿ, ಸಂಸ್ಕೃತ ಕಾವ್ಯಗಳನ್ನು ಕನ್ನಡೀಕರಿಸುವ ಮತ್ತು ಓದುವ ವರ್ಗವನ್ನು ಸೃಷ್ಟಿಸುವ ಕೆಲಸ ಆಗಲಿಲ್ಲ. ಕನ್ನಡ ಸಾಹಿತ್ಯದ ಇಂತಹ ‘ಬರಗೆಟ್ಟ’ ಎಂದೇ ಹೇಳಬಹುದಾದ ಸನ್ನಿವೇಶದಲ್ಲಿ ‘ಬೇಂದ್ರೆ ಕೃಷ್ಣಪ್ಪ’ ಎಂದೇ ಖ್ಯಾತಿಯ ಡಾ. ಜಿ. ಕೃಷ್ಣಪ್ಪ ಹಾಗೂ ಡಾ. ಟಿ.ಎನ್. ವಾಸುದೇವ ಮೂರ್ತಿ ಅವರ ಸಂಯುಕ್ತ ಕಳಕಳಿಯ ದ್ಯೋತಕವಾಗಿ ‘ಅಂಬಿಕಾತನಯದತ್ತರ ಕನ್ನಡ ಮೇಘದೂತ: ಒಂದು ಸಹಪಯಣ’ ಶೀರ್ಷಿಕೆಯ ವಿದ್ವತ್ ಪೂರ್ಣ ಕೃತಿಯನ್ನು ರಚನೆಗೊಂಡಿದೆ.

ಕೃತಿ ಪ್ರವೇಶಿಕೆಯ ಮಹತ್ವ: ಸಂಸ್ಕೃತ ಕಾವ್ಯವನ್ನು ಬಿಡಿ; ನವೋದಯ ಕಾಲಘಟ್ಟದ ಹಿರಿಯ ತಲೆಮಾರಿನ ಕವಿಗಳು-ಚಿಂತಕರು ರಚಿಸಿದ ಸಂಸ್ಕೃತ ಅನುವಾದಿತ ಕನ್ನಡ ಕಾವ್ಯವನ್ನೂ ಸಹ ಓದಿ ಅರ್ಥ ಮಾಡಿಕೊಳ್ಳಲಾರದವರು, ‘ಅಂಬಿಕಾತನಯದತ್ತರ ಕನ್ನಡ ಮೇಘದೂತ: ಒಂದು ಸಹಪಯಣ’ ಕೃತಿಯನ್ನು ಓದಿ, ಆ ಕಾವ್ಯದ ರಸಾನುಭೂತಿ ಪಡೆಯಬಹುದು. ಈ ನಿಟ್ಟಿನಲ್ಲಿ, ನವ್ಯ ಕಾಲಘಟ್ಟದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಈ ಕೃತಿಯ ಪ್ರವೇಶಿಕೆಯು ಹತ್ತು ಹಲವು ಮಹತ್ವಗಳನ್ನು ಪಡೆದು, ಅರ್ಥಪೂರ್ಣ ಜಿಜ್ಞಾಸೆಗಳನ್ನು ಒಳಗೊಂಡು, ಚಿಂತನೆಗಳಿಗೆ ಪ್ರೇರಣೆ ನೀಡುತ್ತದೆ. ಕೃತಿಯ ಸಂಶೋಧನಾ ಗಟ್ಟಿತನ, ಒಳನೋಟದ ತೀಕ್ಷ್ಣತೆಗಳಿಗೆ ಕನ್ನಡಿ ಹಿಡಿಯುತ್ತದೆ. ಈ ನಿಟ್ಟಿನಲ್ಲಿ, ಕೆಲ ಅಂಶಗಳನ್ನು ಚರ್ಚೆಗೆ ಎತ್ತಿಕೊಳ್ಳಬಹುದು.

  1. ಲೇಖಕರು ಹೇಳುವಂತೆ ‘ಅಂಬಿಕಾತನಯದತ್ತರ ಕನ್ನಡ ಮೇಘದೂತವು ಕೇವಲ ಒಂದು ಅನುವಾದವಲ್ಲ; ಕಾಳಿದಾಸನ ಅನುಸೃಷ್ಟಿಯೂ ಅಲ್ಲ; ಅದು ಕನ್ನಡದ ನುಡಿಯಲ್ಲಿ ಕಾಳಿದಾಸನಿಗೆ ಮರುಜನ್ಮ ದಯಪಾಲಿಸುವ, ಹೊಸ ಧ್ವನಿ ನೀಡುವ ಪ್ರಯತ್ನ’.

ಸಂಸ್ಕೃತ ಕಾವ್ಯವೊಂದರ ವಿಶೇಷವಾಗಿ ‘ಮೇಘದೂತ’ದ ಎಲ್ಲ ರಸಾನುಭವಗಳನ್ನು ಕನ್ನಡಕ್ಕೆ ತರಲಾಗಿಲ್ಲ. ತರಲು ಅಸಾಧ್ಯ. ಕವಿ ಅಂಬಿಕಾತನಯದತ್ತರ ಮನದಿಂಗಿತವಿದು ಎಂಬಂತೆ ಈ ಇಬ್ಬರು (ಡಾ.ಜಿ. ಕೃಷ್ಣಪ್ಪ ಹಾಗೂ ಡಾ. ಟಿ.ಎನ್. ವಾಸುದೇವಮೂರ್ತಿ) ಲೇಖಕರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ, ಕವಿ ಅಂಬಿಕಾತನಯದತ್ತರ ಪ್ರಾಮಾಣಿಕ ಅಭಿವ್ಯಕ್ತಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮಾತ್ರವಲ್ಲ; ‘ಕಾಳಿದಾಸನ ಮೇಘದೂತವು ಒಂದು ಭವ್ಯವಾದ ಲೌಕಿಕ ಕಾವ್ಯ. ಆದರೆ ಅದು ಬೇಂದ್ರೆ ಅವರ ಪ್ರತಿಭೆಯಿಂದಾಗಿ ದಿವ್ಯವಾದ ಅಲೌಕಿಕ ಕಾವ್ಯವಾಗಿ ಪರಿಣಮಿಸಿದೆ’ ಎಂದೂ, ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಶ್ರೇಷ್ಠ ಕಾವ್ಯವು ಸಾಹಿತ್ಯಕ ನೆಲೆಯಲ್ಲಿ ಮಾತ್ರ ಶೋಭಿಸದು; ಅದು, ಅಂತಿಮವಾಗಿ, ಅಗೋಚರ ಕೇಂದ್ರಿತವಾಗಿ, ಸಕಲ ಜೀವ-ಜಡರಾಶಿಗಳನ್ನೂ ತನ್ನ ಪರಿಧಿಯಲ್ಲಿ ಶೋಭಿಸುವಂತೆ ಮಾಡುತ್ತದೆ. ಜಗತ್ತಿನ ಮಹಾಕಾವ್ಯಗಳನ್ನು ಪರಿಶೀಲಿಸಬಹುದು. ಈ ಹಿನ್ನೆಲೆಯಲ್ಲಿ, ‘ಅಂಬಿಕಾತನಯದತ್ತರು ಬರೆದ ‘ಕಾಳಿದಾಸನ ಮೇಘದೂತ’ಕ್ಕೆ ಅಧ್ಯಾತ್ಮಿಕ ಸ್ಪರ್ಶ ನೀಡಿದ್ದು ಸಹ ಸಹಜವೇ ಆಗಿದೆ.

  1. ಕಾಳಿದಾಸನು ಶೈವದರ್ಶನದ ಅನುಯಾಯಿ, ಸಿದ್ಧಯೋಗಿ ಸಂಪ್ರದಾಯದ ಪ್ರತಿಪಾದಕ. ಸ್ತ್ರೀಯು ಪುರುಷನಲ್ಲಿ ಲೀನವಾಗುವ ಹಂಬಲದ ಪ್ರತೀಕವಾಗಿ ‘ಶಿವ-ಶಕ್ತಿ’ ಇದೆ. ಈ ಭಾವವೇ ಮೇಘದೂತದ ಪಯಣ ಎಂಬುದು ಒಂದು ವಾದ. ಆದರೆ, ಪುರುಷನೇ (ಯಕ್ಷ) ಮುಂದಾಗಿ ಸ್ತ್ರೀಗಾಗಿ (ಯಕ್ಷಿ) ಹಂಬಲಿಸುವುದನ್ನೇ ಮುನ್ನೆಲೆಗೆ ತಂದಿದ್ದು ದ.ರಾ. ಬೇಂದ್ರೆ ವಿಶೇಷ ಎಂಬುದು ಲೇಖಕರ ಅಭಿಪ್ರಾಯ..

ಈ ರೀತಿಯ ವಾದ-ಪ್ರತಿವಾದ ಏನೇ ಇರಲಿ; ಕಾವ್ಯದ ಒಟ್ಟು ಭಾವಶೃಂಗಾರಕ್ಕೇನೂ ಧಕ್ಕೆಯಾಗಿಲ್ಲ. ಕಾಳಿದಾಸನ ಮೂಲ ಮೇಘದೂತದಲ್ಲಿ ವಿಜೃಂಭಿಸಿರುವ ಕಾವ್ಯ ವೈಭವಗಳೆಲ್ಲವೂ ಅಂಬಿಕಾತನಯದತ್ತರ ಹೊಸದೃಷ್ಟಿಯ ‘ಮೇಘದೂತ’ದ ಕಾವ್ಯದಲ್ಲೂ ಸಂಭ್ರಮಿಸಿವೆ. ಒಂದು ಶ್ರೇಷ್ಠ ಕಾವ್ಯವು ಹಲವು ನೆಲೆಗಳಲ್ಲಿದ್ದೂ, ಹಲವು ಆಯಾಮಗಳಲ್ಲಿ ಕಂಗೊಳಿಸುವ ಸೂಕ್ಷ್ಮ ಪರಿಯ ಅಧ್ಯಯನಕ್ಕೂ, ಇಂತಹ ಸಂಗತಿಗಳು ಪ್ರೇರಣೆಯಾಗುತ್ತವೆ. ಹೀಗಾಗಿ, ದ.ರಾ. ಬೇಂದ್ರೆ ಅವರ ‘ಯಕ್ಷ ಯಾತನೆ’ಯ ಪಾತ್ರ ಕೇಂದ್ರಿತ ‘ಮೇಘದೂತ’ವನ್ನು ಈ ಇಬ್ಬರು ಲೇಖಕರು ‘ಸಾಧಕನ ಪ್ರಜ್ಞೆ’ ಎಂದು ಬಣ್ಣಿಸಿದ್ದಾರೆ.

  1. ಹೊಸಸೃಷ್ಟಿ-ಮರುಸೃಷ್ಟಿಯ ಜಿಜ್ಞಾಸೆಯು ಸಹ ಈ ಕೃತಿಯ ಮಹತ್ವ. ಹಲವು ರಾಮಾಯಣಗಳಿದ್ದರಿಂದ ಹಲವು ಪ್ರಕ್ಷೇಪಗಳು ಕಾಣುವುದು ಸಹಜ. ಹೀಗಾಗಿ, ಕುವೆಂಪುವಿನ ‘ಶ್ರೀರಾಮಾಯಣ ದರ್ಶನಂ’ -ಒಂದು ಹೊಸಸೃಷ್ಟಿ. ಆದರೆ, ಸಂಸ್ಕೃತ ಮೂಲದ ಮೇಘದೂತವನ್ನುಕನ್ನಡದಲ್ಲಿ ಅನುವಾದಿಸುವುದಲ್ಲ; ಅದನ್ನು ಸಂಸ್ಕೃತದ ಎಲ್ಲವನ್ನೂ ಒಳಗೊಳ್ಳುವ ಹಾಗೆ ಕನ್ನಡಿಕರಿಸುವುದು -ಮರುಸೃಷ್ಟಿ. ಇದು ಸುಲಭಸಾಧ್ಯವಲ್ಲ ಎಂಬುದು ಲೇಖಕರ ಅಭಿಪ್ರಾಯ.

ಕೆಂದರೆ, ಸಂಸ್ಕೃತದ ಮೇಘದೂತ ಯಾವ ಕಾಲಘಟ್ಟದಲ್ಲೂ ರೂಪಾಂತರಕ್ಕೆ ಒಳಗಾಗಿಲ್ಲ. ಹೀಗಾಗಿ, ಪ್ರಕ್ಷೇಪಗಳಿಂದ ಮುಕ್ತ. ಹೊಸಸೃಷ್ಟಿಗೆ ಇಲ್ಲಿ ಅವಕಾಶವೇ ಇಲ್ಲ. ಹೀಗಾಗಿ, ‘ಅಂಬಿಕಾತನದತ್ತರ ಕನ್ನಡ ಮೇಘದೂತ’ವು ಮೂಲ ಸಂಸ್ಕೃತದ ಆದರೆ, ಕನ್ನಡದಲ್ಲಿ ಕಂಗೊಳಿಸಿದ ಕಾವ್ಯ ಎಂಬ ಲೇಖಕರ ಅಭಿಪ್ರಾಯಗಳು ಚಿಂತನಾರ್ಹ. ಇಂತಹ ಹತ್ತು ಹಲವು ಚಿಂತನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಕೃತಿಯು, ತನ್ನ ಸಂಶೋಧನೆಯ ಆಳ-ವಿಸ್ತಾರದೊಂದಿಗೆ ಮಹತ್ವ ಹೆಚ್ಚಿಸಿಕೊಂಡಿದೆ.

ಕನ್ನಡದಲ್ಲಿ ಮೇಘದೂತ, ಹಲವು ವೈಶಿಷ್ಟ್ಯ: ಕಾಳಿದಾಸನ ಮೇಘದೂತದ ಎಲ್ಲ ಸಿರಿವಂತಿಕೆಗಳನ್ನು 1943ರಲ್ಲಿ ದ.ರಾ.ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ತಂದರು. ಬೇಂದ್ರೆ ಮರುಸೃಷ್ಟಿಸಿಯ ಕನ್ನಡ ಮೇಘದೂತವನ್ನು ಸರಳಗನ್ನಡಕ್ಕೆ ತಂದ ಕೀರ್ತಿ, ಹಲವು ವಿಶೇಷತೆಗಳ ಈ ಕೃತಿ-ಅಂಬಿಕಾತನಯದತ್ತರ ಕನ್ನಡ ಮೇಘದೂತ. ಅವುಗಳನ್ನೂ ಸಹ ಹೀಗೆ ಪಟ್ಟಿ ಮಾಡಬಹುದು;

  1. ಓದು ಪ್ರವೇಶ ಸರಳ: ಪೂರ್ವ ಮೇಘ ಹಾಗೂ ಉತ್ತರ ಮೇಘ ಸೇರಿದ ಮೇಘದೂತದಲ್ಲಿ ಒಟ್ಟು 121 ಪದ್ಯಗಳಿವೆ. ಅದಕ್ಕೂ ಮುನ್ನ, ಸುಮಾರು 20 ಪುಟಗಳಷ್ಟು ದೀರ್ಘವಾಗಿ ಕವಿ ಬೇಂದ್ರೆ ಅವರ ‘ಮೇಘದೂತ’ದಲ್ಲಿ ಅಂದರೆ ಯಕ್ಷನ ವಿರಹ, ಪ್ರೇಮ, ಯಾತನೆ, ಬ್ರಹ್ಮಸೃಷ್ಟಿ, ಕಾಮ, ಶಿವ-ಶಿವೆ, ರತಿ-ಮನ್ಮಥ. ಭೂಮಿ-ಆಕಾಶ, ಮಾಯೆ ಹೀಗೆ ಜೀವ-ಜಾಲಕ್ಕೆಲ್ಲ ಮರುಳು ಹಿಡಿಸುವ ಸಕಲ ಶೃಂಗಾರಗಳಿಂದ ಶೋಭಿಸಲು ಪೂರ್ವಭಾವಿಯಾಗಿ ಚಿತ್ರಣವಿದೆ. ಕವಿ ಬೇಂದ್ರೆ ಅವರು ಈ ಕಾವ್ಯವನ್ನು ಬೇರೆ ದೂತಕಾವ್ಯಕ್ಕಿಂತಲೂ ಹೇಗೆ ಭಿನ್ನ, ಈ ಕಾವ್ಯ ಮಂದಾಕ್ರಾಂತ ಎಂತಲೂ ಬಣ್ಣಿಸುತ್ತಾರೆ. ಭೂಮಿಯ ಕಾಮ, ಯಕ್ಷ-ಯಕ್ಷಿ, ದೇವಕಾಮ-ಕಾಮದೇವ, ಯಕ್ಷನ ಮೇಘ, ಕವಿಯ ಮೇಘ ಹೀಗೆ ವೈವಿಧ್ಯಮಯ ಆಯಾಮಗಳಲ್ಲಿ ಮೇಘದೂತ ಕಾವ್ಯದ ಆರಂಭದ ಹೊಳವುಗಳನ್ನು ನೀಡುತ್ತಾ, ಕವಿ ಕಾಳಿದಾಸನ ಅದ್ಭುತ ಕಲ್ಪನಾ ಸೌಂದರ್ಯವನ್ನು ಬಿಂಬಿಸಿದ್ದಾರೆ. ಇಷ್ಟಿದ್ದೂ, ‘ಕವಿ ಕಾಳಿದಾಸನ ಮೇಘದೂತದ ಭಾಷಾಂತರವಲ್ಲ; ಭಾವಗ್ರಹಣ’ ಎಂದು ಕವಿಯು ತಮ್ಮ ವಿನಮ್ರತೆ ಮೆರೆದು ಪೂರ್ವಮೇಘಕ್ಕೆ ಪ್ರವೇಶಿಸುತ್ತಾರೆ. ನಂತರ, ಕವಿ ಬೇಂದ್ರೆ ಅವರ ಭಾವದ ಚುಂಗು ಹಿಡಿದು ಓದುಗರು ಮೇಘದೂತ ಕಾವ್ಯ ಓದಿನ ಪ್ರವೇಶ ಪಡೆಯುವಷ್ಟು ಸರಳವಾಗಿದೆ-ಈ ಕೃತಿ.

  1. ತೊಡಕೆನಿಸಿದ್ದು ತೊರೆದಿದ್ದು: ಕಾಳಿದಾಸನ ಮೇಘದೂತದಲ್ಲಿರುವ ಎಲ್ಲವೂ ಎಲ್ಲ ಕವಿಗಳಿಗೂ ದಕ್ಕಿಲ್ಲ. ಅದರಂತೆ, ಕವಿ ಬೇಂದ್ರೆ ಅವರೂ ಹೊರತಲ್ಲ. ಕವಿ ತಮ್ಮ ಕಲ್ಪನಾಶಕ್ತಿಗೆ ನಿಲುಕದ ಅಂಶಗಳನ್ನು ಕೈಬಿಟ್ಟಿರುವುದೂ ಇದೆ. ಏಕೆ ಹೀಗೆ ಎಂದೆಲ್ಲ ಈವರೆಗೂ ಜಿಜ್ಞಾಸೆ ನಡೆದಿಲ್ಲ.ಉದಾ:

ತ್ವಾಮಾಸಾಧ್ಯ ಸ್ತನಿತ ಸಮಯೇ ಮಾನಯಿಷ್ಯಂತಿ ಸಿದ್ಧಾಃ

ಸೋತ್ಕಂಪಾನಿ ಪ್ರಿಯಸಹಚರೀ ಸಂಭ್ರಮಾಲಂಗಿತಾನಿ ‘ಯೋಗಿಗಳು ಸಿದ್ಧಪುರುಷರು ಮೇಘವನ್ನು ಕಂಡು ಕಾಮಾತುರರಾಗುತ್ತಾರೆ’ ಎಂಬ ಅರ್ಥದ ಈ ಸಾಲುಗಳು ಕಾಳಿದಾಸನ ಮೂಲ ಮೇಘದೂತದಲ್ಲಿವೆ. ಕಾಳಿದಾಸ ಹೀಗೆ ಬರೆದಿರಲಾರ. ಇದು ಪ್ರಕ್ಷೇಪ. ಈ ಕಾರಣಕ್ಕೆ ಕವಿ ಬೇಂದ್ರೆ ಇಂತಹ ಪ್ರಸಂಗಗಳನ್ನು, ಸಾಲುಗಳನ್ನು ಕೈ ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮವಾಗಿ ಗಮನಿಸಿ ಅಧ್ಯಯನಕ್ಕಿಳಿದ ಡಾ. ಜಿ. ಕೃಷ್ಣಪ್ಪ ಹಾಗೂ ಡಾ. ಟಿ.ಎನ್. ವಾಸುದೇವಮೂರ್ತಿ ಅವರ ಪ್ರಯತ್ನಗಳು ಕೃತಿಯ ಹೆಚ್ಚುಗಾರಿಕೆ.

  1. ಹೊಸಪದಗಳ ಸೃಷ್ಟಿ: ‘ಶಬ್ದಗಳ ಗಾರುಡಿಗ’ ಎಂದೇ ಖ್ಯಾತಿಯ ಕವಿ ಬೇಂದ್ರೆ ಅವರು ಅಪರೂಪದ ಶಬ್ದಗಳನ್ನು ಮೇಘದೂತದಲ್ಲಿ ಬಳಸಿದ್ದಾರೆ. ಕೆಲವೆಡೆ ತಾವೇ ಹೊಸ ಪದಗಳನ್ನು ಸೃಷ್ಟಿಸಿದ್ದಾರೆ. ಉದಾಃ ಸಂಸ್ಕೃತದ ‘ಮಾಲಂ’ ಪದವನ್ನು ಬೇಂದ್ರೆ ಅವರು ‘ಮಾಳ’ ಅಂದರೆ ಗೋಮಾಳ, ಬಂಜುಗೆಟ್ಟಿತೊ ಎಂಬುದಕ್ಕೆ ಬಂಜೆಗೆಡು (ಬಂಜರು ಫಲವತ್ತಾಗುವಿಕೆ), ಯೂಥಿಕಾ ಎಂಬ ಪದಕ್ಕೆ ಹೂಜಲ್ಲಿ, ರಸಫಲ ಪದಕ್ಕೆ ಮದಿರೆ, ಆಯಮಿತನಖ ಎಂಬುದಕ್ಕೆ ಬೆಳೆದುಗುರು, ಹಿಗ್ಗಣ್ಣು ಎಂಬುದಕ್ಕೆ ಹಿಗ್ಗಿನ ಕಣ್ಣು, ಮೋಡಕ್ಕೆ ‘ಮಿಂಚಿನವನೆ’ ಎಂಬ ಹೊಸ ಪದ ನೀಡಿದ್ದು ಹೀಗೆ ಅನೇಕ. ಮತ್ತೊಂದು ವಿಶೇಷತೆಯನ್ನು ಗಮನಿಸಿ; ಯಕ್ಷಿಯ ನೆನಪಿನಲ್ಲಿ ಬಸವಳಿದ ಯಕ್ಷನ ಸ್ಥಿತಿಯನ್ನು ಕವಿ ಬೇಂದ್ರೆ ಬಣ್ಣಿಸಿದ್ದು ಅವರ ಕವಿತ್ವ ಸೂಕ್ಷ್ಮ ದರ್ಶಿತ್ವಕ್ಕೂ ಸಾಕ್ಷಿ. ಅದು ಹೀಗಿದೆ; ‘ಕೆಲವೇ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು’ ಕಾಳಿದಾಸ ‘ಆಷಾಡಸ್ಯ ಪ್ರಥಮ ದಿವಸ’ ಎಂದರೆ ಬೇಂದ್ರೆ ಅವರು ಕನ್ನಡದಲ್ಲಿ ಸರಳವಾಗಿ ವಿವರಿಸಿದ ರೀತಿ ನೋಡಿ ‘ಕಾರಹುಣ್ಣಿಮೆಯ ಮಾರನೆಯ ದಿನ’. ಬಯಕೆ -ತಾಳೆ -ಹಾಲನ್ನು ಕುಡಿವರೋ ಕಾಮಕೇಳಿಗಾಗಿ ಎಂಬುದರ ಅರ್ಥ ಬಯಕೆಯನ್ನು ತಾಳೆ, ತಾಳೆಯ ಮರದ ಹಾಲು (ಮದಿರೆ) ಕುಡಿದರು ಎಂಬುದು ಬೇಂದ್ರೆ ಅವರ ಅರ್ಥ.

ಮೇಘದೂತದ ಮರುಸೃಷ್ಟಿಯಲ್ಲಿ ಕವಿ ಬೇಂದ್ರೆ ಅವರು ತಮ್ಮ ಕವಿತ್ವವನ್ನು ಹೊಸ ಹೊಸ ಪದಗಳ ಸೃಷ್ಟಿಯ ಮೂಲಕ ದರ್ಶಿಸಿದ್ದು, ಈ ಇಬ್ಬರು ಲೇಖಕರಂತೆ (ಡಾ. ಜಿ. ಕೃಷ್ಣಪ್ಪ ಹಾಗೂ ಡಾ. ಟಿ.ಎನ್. ವಾಸುದೇವಮೂರ್ತಿ ) ಈ ಹಿಂದೆ ಯಾರೂ ಇಂತಹ ಅಧ್ಯಯನ ಕೈಗೊಂಡಂತಿಲ್ಲ. ಇದೂ ಸಹ ಈ ಕೃತಿಯ ಹೆಗ್ಗಳಿಕೆ. ಸಾಲದ್ದಕ್ಕೆ, ಕಠಿಣ ಪದಗಳ ಸರಳ ಅರ್ಥದ ಕೋಶವೂ ನೀಡಿದ್ದು, ಮೇಘದೂತ ಓದನ್ನು ಮತ್ತಷ್ಟು ಸರಾಗವಾಗಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿ ಪದ್ಯಕ್ಕೂ ಸರಳವಾದ ವಿವರಣೆ ನೀಡಿದ್ದು, ಮತ್ತಷ್ಟು ಸರಳವಾಗಿಸಲು ಪಠ್ಯದ ಕೆಳಗೆ ಅಡಿಟಿಪ್ಪಣಿಗಳನ್ನು ನೀಡಲಾಗಿದೆ. ಈ ಅಡಿಟಿಪ್ಪಣಿಗಳು ಸಂಶೋಧನಾ ಅಧ್ಯಯನಕ್ಕೆ ಹತ್ತು ಹಲವು ರೀತಿಯಲ್ಲಿ ಮಹತ್ವದ ಸುಳಿವುಗಳನ್ನು ನೀಡುವಂತಿವೆ. ಈ ಕೃತಿಯ ಮಹತ್ವದ ಭಾಗವೂ ಆಗಿವೆ. ‘ಕುವೆಂಪು ಶ್ರೀರಾಮಾಯಣ ದರ್ಶನಂ: ವಚನ ದೀಪಿಕೆ’ ಕೃತಿಯನ್ನೂ ನೀಡಿರುವ ಡಾ.ಜಿ. ಕೃಷ್ಣಪ್ಪನವರು ಅಭಿನಂದನಾರ್ಹ. ಅದೇ ರೀತಿ, ಸಂಸ್ಕೃತ ಕಾವ್ಯಗಳ ಸರಳ ಕನ್ನಡದಲ್ಲಿ ಮರುಸೃಷ್ಟಿಸುತ್ತಾ ಹೋದರೆ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚುತ್ತದೆ. ಹಿರಿಯ ಸಾಹಿತಿ ವಿ. ಚಂದ್ರಶೇಖರ ನಂಗಲಿ ಅವರು ‘ಕನ್ನಡ ಮೇಘದೂತ’ಕ್ಕೆ ಹಿಡಿದ ಗ್ರಹಣಬಾಧೆ ಖಂಡಿತವಾಗಿಯೂ ಬಿಡುಗಡೆಯಾಗಿದೆ’ ಎಂದಿದ್ದು, ಇಂತಹ ಕೃತಿಗಳ ಪ್ರಕಟಣೆಗಾಗಿ ಹೆಚ್ಚು ಹೆಚ್ಚು ಶ್ರಮದ ಅಗತ್ಯವನ್ನು ಪ್ರತಿಪಾದಿಸುತ್ತದೆ

(ಪುಟ: 128, ಬೆಲೆ: 130 ರೂ, ವಂಶಿ ಪಬ್ಲಿಕೇಷನ್ಸ್, ಬೆಂಗಳೂರು, 2021)

 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...