ಸಂತೋಷಮಯ ಸಂದೇಶವೇ 'ಯುಗಾದಿ' : ಪದ್ಮನಾಭ. ಡಿ

Date: 17-01-2023

Location: ಬೆಂಗಳೂರು


ಪ್ರಕೃತಿಯ ವರ್ಣನೆ ಜೊತೆಗೆ ಸುಂದರ ಸಂದೇಶವೂ ಮಿಳಿತವಾಗಿದೆ. ತಾಯಿಯ ಹಿರಿಮೆಯ ಬಗ್ಗೆ ಬರೆಯದ ಕೈಗಳಿಲ್ಲ. ಪ್ರತೀ ಕವನಸಂಕಲನದಲ್ಲೂ ತಾಯಿಯ ಬಗ್ಗೆ ಕವನ ಇದ್ದೇ ಇರುತ್ತದೆ. ಆದರೆ ಈ ಸಂಕಲನದ "ಜನ್ಮದಾತೆ" ಹೆಚ್ಚು ಆಪ್ತವಾಗಲು ಕಾರಣ ಒಂದು ಮಗು ತಾಯಿಯನ್ನು ಕುರಿತು ಹೇಳುವಂತಹ ಶೈಲಿ. ಸರಳ ಶಬ್ದಗಳಲ್ಲಿ ಭಾವಪೂರ್ಣವಾಗಿ ಪ್ರಾಸಬದ್ಧವಾಗಿ ಈ ಕವಿತೆ ಹುಟ್ಟಿದೆ ಎನ್ನುತ್ತಾರೆ ಪದ್ಮನಾಭ. ಡಿ. ಅವರು ಚೆನ್ನಕೇಶವ ಜಿ.ಲಾಳನ ಕಟ್ಟೆ ಅವರ ಯುಗಾದಿ ಕವನ ಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ....

ಯುಗಾದಿ
ಚೆನ್ನಕೇಶವ ಜಿ.ಲಾಳನ ಕಟ್ಟೆ

ಪ್ರಕಾಶನ: ಗುರು ಪ್ರಕಾಶನ
ಪುಸ್ತಕದ ಬೆಲೆ: 110
ಪುಸ್ತಕದ ಪುಟ: 74

ಸಂತೋಷಮಯ ಸಂದೇಶಮಯ ಯುಗಾದಿ.
ಪದ್ಯಂ ಸಮಸ್ತಜನತಾ ಹೃದ್ಯಂ
ಪದಪಾದ ನಿಯಮ ನಿಬದ್ಧಂ

ಎನ್ನುವ ಕವಿರಾಜಮಾರ್ಗದ ಸಾಲುಗಳು ಲಯಬದ್ಧತೆ ಭಾವಶುದ್ಧಿ ಹಾಗೂ ಭಾಷಾಶುದ್ಧಿಗಳಿರುವ ಕವಿತೆಗಳು ಎಲ್ಲರ ಹೃದಯಗಳನ್ನು ಗೆಲ್ಲುತ್ತವೆ ಎಂದು ಹೇಳುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಶ್ರೀಯುತ ಚನ್ನಕೇಶವ ಲಾಳನಕಟ್ಟೆಯವರ ಕವನಸಂಕಲನ "ಯುಗಾದಿ" . ಇದು ಶ್ರೀಯುತರ ಎರಡನೇ ಕವನಸಂಕಲನ. ಪ್ರತಿಯೊಂದು ಕವನಗಳಲ್ಲೂ ಲಯಬದ್ಧತೆ ಗೇಯತೆ ಸರಾಗವಾಗಿ ಹೊಮ್ಮಿದೆ. ಆರಂಭದ ಕವನ ಯುಗಾದಿಯ ಈ ಸಾಲುಗಳನ್ನು ನೋಡಿ

"ಮಾಸವಿದುವೇ ಮಾಸದಂತೆ
ಸೂಸುತಿಹುದು ಕಂಪನು
ಬಿಸಿಲ ಜಳಕೆ ಬೀಸುತಿಹುದು
ಹೊಂಗೆ ಮರವು ತಂಪನು"
"ಕಹಿಯಬೇವು ಸಿಹಿಯ ಬೆಲ್ಲ
ಹಂಚಿಕೊಂಡು ತಿನ್ನುವ
ನೋವು ನಲಿವು ಎಲ್ಲೆಯೊಳಗೆ
ಎಲ್ಲರೊಳಗೂ ಬಾಳುವ"

ಪ್ರಕೃತಿಯ ವರ್ಣನೆ ಜೊತೆಗೆ ಸುಂದರ ಸಂದೇಶವೂ ಮಿಳಿತವಾಗಿದೆ. ತಾಯಿಯ ಹಿರಿಮೆಯ ಬಗ್ಗೆ ಬರೆಯದ ಕೈಗಳಿಲ್ಲ. ಪ್ರತೀ ಕವನಸಂಕಲನದಲ್ಲೂ ತಾಯಿಯ ಬಗ್ಗೆ ಕವನ ಇದ್ದೇ ಇರುತ್ತದೆ. ಆದರೆ ಈ ಸಂಕಲನದ "ಜನ್ಮದಾತೆ" ಹೆಚ್ಚು ಆಪ್ತವಾಗಲು ಕಾರಣ ಒಂದು ಮಗು ತಾಯಿಯನ್ನು ಕುರಿತು ಹೇಳುವಂತಹ ಶೈಲಿ. ಸರಳ ಶಬ್ದಗಳಲ್ಲಿ ಭಾವಪೂರ್ಣವಾಗಿ ಪ್ರಾಸಬದ್ಧವಾಗಿ ಈ ಕವಿತೆ ಹುಟ್ಟಿದೆ. ಮಕ್ಕಳೂ ಸುಲಭವಾಗಿ ಹಾಡಬಹುದು. "ಜನ್ಮದಾತೆ ಅನ್ನದಾತೆ ನನ್ನ ಪೊರೆದ ತಾಯಿಯೇ" ಎಂದು ಆರಂಭವಾಗಿ ಮುಪ್ಪು ನಿನಗೆ ಬಂದರೂನೂ ಅಪ್ಪಿ ನಿನ್ನ ಸಲಹುವೆ ಎಂಬ ಸದಾಶಯದೊಂದಿಗೆ ಮುಗಿಯುತ್ತಿದೆ. ಚಂದ್ರನೆಂದರೆ ಹಲವು ಕವಿಮನಗಳಿಗೆ ಸ್ಫೂರ್ತಿದಾತ. ಅಂತೆಯೇ ಈ ಕೃತಿಯ ಹಲವಾರು ಕವನಗಳಲ್ಲಿ ಚಂದ್ರಮ .ಸಂಭ್ರಮದಿಂದ ಹೊನಲನ್ನು ಹರಿಸಿದ್ದಾನೆ. ಅವನಿ ಚಂದ್ರ ಎನ್ನುವ ಕವನದ ಈ ಸಾಲುಗಳನ್ನು ನೋಡಿ

"ತಾರೆಗಳಲಿ ನೀರೆಗಳಿರೆ
ಅವನೇ ಅಲ್ಲಿ ಬಂಧಿತ
ಮೀರಿ ತೋರೆ ಪ್ರೀತಿಧಾರೆ
ಇಳಿವನೇನೋ ಖಂಡಿತ"

ಇದೇ ರೀತಿಯ ಚಂದ್ರನನ್ನು ಕುರಿತಾದ ಚಂದಿರ ಕವನ ಷಟ್ಪದಿಯಲ್ಲಿ ಆದಿಪ್ರಾಸದಿಂದ ಸುಂದರವಾಗಿ ಮೂಡಿಬಂದಿದೆ.. ಚಂದಮಾಮ ಕವಿತೆ ಶಿಶುಗೀತೆಯಂತಿದೆ. ಚಂದ್ರ ಇರುಳ ಒಡೆಯ. ಸಹ ಇದೇ ಭಾವದ ಮುಂದುವರಿಕೆಯಾಗಿವೆ. ಅಂತೆಯೇ ದಿನಕರ ನೇಸರ ಕವನಗಳು ಸೂರ್ಯನ ಕುರಿತಾಗಿ ಮೂಡಿಬಂದಿವೆ. ಆದರೆ ಎರಡೂ ವಿಭಿನ್ನ ಶೈಲಿಗಳಲ್ಲಿ ಹೊರಹೊಮ್ಮಿವೆ. ಮುಂಗಾರಿನ ಧಾರೆ, ಭೂರಮೆ ಹಾಗೂ ಸುರಿಮಳೆ ಪ್ರಕೃತಿಗೀತೆಗಳಾಗಿ ಮನಗೆಲ್ಲುತ್ತವೆ.

ಕಸ್ತೂರಿ ನುಡಿ ಕನ್ನಡಾಭಿಮಾನದ ಗೀತೆಯಾದರೆ ನನ್ನ ದೇಶ. ರಾಷ್ಟ್ರಾಭಿಮಾನದ ಗೀತೆಯಾಗಿದ್ದು ವೇದಿಕೆಗಳಲ್ಲಿ ಹಾಡಬಹುದಾಗಿದೆ. ಕೇವಲ ರಮ್ಯತೆಯ ಜಾಡಿನಲ್ಲೇ ಹರಿಯದೆ ಶ್ರೀಯುತರ ಲೇಖನಿ ಹೆಣ್ಣಿನ ಹಿರಿಮೆ, ಮಾನವೀಯತೆ, ಜೀವನ ಮೌಲ್ಯ ಜೀವನಪ್ರೀತಿ ಮುಂತಾದ ಎಲ್ಲಾವಿಷಯಗಳಲ್ಲೂ ಸುಲಲಿತವಾಗಿ ಹರಿದಿದೆ ಎನ್ನಲು ಹಿತನುಡಿಗಳು ಕವನದ ಸಾಲುಗಳನ್ನು ನೋಡಿ.

"ಗುಡಿಯ ಮುಂದೆ ಕಟ್ಟೆ ಕಟ್ಟಿ
ಗಿಡವ ನೆಡಲು ಬೇಕಿದೆ
ಗಡಿಗೆ ನೀರು ದಿನವು ಸುರಿದು
ಬಿಡದೆ ಬೆಳೆಸಬೇಕಿದೆ"
"ಗುರುವ ನೆನೆದು ಅರಿವಿನೊಡನೆ
ಗುರಿಯ ಮುಟ್ಟಬೇಕಿದೆ
ನುಡಿಯುವಾಗ ಎಡವದಂತೆ
ಆಡಿ ನಲಿಯಬೇಕಿದೆ"

ನೀತಿಸಂದೇಶವನ್ನು ನೀಡುವ ಕವಿತೆಗಳಲ್ಲೂ ಪ್ರಾಸ ತ್ರಾಸವಿಲ್ಲದೆ ಹರಿದಿದೆ. ಲಯಬದ್ಧತೆ ಎದ್ದುಕಾಣುತ್ತದೆ.

"ಹೆಣ್ಣು ಕುಲವು
ಕಣ್ಣು ಜಗಕೆ
ಹಣ್ಣು ನೀಡೋ ವೃಕ್ಷವು ಎಂದು ಆರಂಭವಾಗುವ "ಹೆಣ್ಣುಕುಲ" ಕವನದ ಅಂತಿಮ ಚರಣ ನೋಡಿ

"ಕರೆಯುವವಳು
ಬೆರೆಯುವವಳು
ಬಿರಿದ ಹೂವ ಭಾವವು
ಸೊರಗದೇನೆ
ಮಿರುಗುವವಳು
ಹರಿತನುಡಿಯ ಜೀವವು"

ಈ ಕವನದ ಸಾಲುಗಳು ಕವಿಯ ಕಲ್ಪನಾಶಕ್ತಿಗೆ ವರ್ಣನಾ ಶಕ್ತಿಗೆ ಒಂದು ಉದಾಹರಣೆ. ಬಹುತೇಕ ಕವನಗಳಲ್ಲಿ ಶಿಷ್ಟ ಭಾಷೆ ಬಳಸಿರುವ ಕವಿ ನನ್ನಾಕೆ ಹಾಗೂ ನಿನ್ನ ನೆನಪು ಕವನಗಳಲ್ಲಿ ಗ್ರಾಮೀಣ ಭಾಷೆ ಬಳಸಿ ಉತ್ತಮ ಭಾವಲಹರಿ ಹರಿಸಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಗದ್ಯ ಪದ್ಯಗಳ ವ್ಯತ್ಯಾಸ ತಿಳಿಯದೆ ಒಂದು ವಾಕ್ಯವ ತುಂಡರಿಸಿ ಹಲವು ಸಾಲುಗಳಲ್ಲಿ ಬರೆಯುವುದು ಕೆಳಿದರೆ ನವ್ಯ ಎನ್ನುವುದು ಹೆಚ್ಚಾಗಿರುವ ಈ ಕಾಲದಲ್ಲಿ "ಕಾವ್ಯಂ ಆನಂದಾಯ" ಎನ್ನುವ ನಿಟ್ಟಿನಲ್ಲಿ ಸುಂದರ ಸುಮಧುರ ಗೀತೆಗಳನ್ನು ರಚಿಸಿರುವ ಶ್ರೀ ಚನ್ನಕೇಶವ ಜಿ ಲಾಳನಕಟ್ಟೆ ಸಾಹಿತ್ಯ ಲೋಕದಲ್ಲಿ ಮತ್ತಷ್ಟು ಹೆಸರು ಮಾಡಲಿ. ಶಿಶುಗೀತೆಗಳ ಸಂಕಲನ ಅಂತೆಯೇ ಮುಕ್ತಕಗಳ ಸಂಕಲನವೊಂದು ಇವರಿಂದ ಹೊರಬರಲಿ ಎಂದು ಆಶಿಸುವೆ.


-ಪದ್ಮನಾಭ. ಡಿ

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...