ಸರಳ ಸೊಬಗಿನ ಮಲೆನಾಡಿನಲ್ಲೊಂದು ‘ಮಂಗನ ಬ್ಯಾಟೆ’:  ಅಶೋಕ್ ಕೆ.ಆರ್. 

Date: 19-01-2023

Location: ಬೆಂಗಳೂರು


"ಒಂದಿಡೀ ಭೂಪ್ರದೇಶದ ಪರಂಪರೆ, ಅಲ್ಲಿಯ ಸಾಂಸ್ಕೃತಿಕ ಸೊಬಗು ಮತ್ತಾ ಸೊಬಗು, ಪರಂಪರೆಯಲ್ಲಿ ನಾನಾ ಕಾರಣಗಳಿಗಾಗಿ ಆಗುತ್ತಿರುವ ನಿರಂತರ ಬದಲಾವಣೆಗಳು. ಬದಲಾವಣೆ ಸಹಜವಾದರೂ ಬದಲಾವಣೆಯ ವೇಗ ಸಹಜವಾಗಿಲ್ಲ. ಅತಿವೇಗದ ಬದಲಾವಣೆ ಪರಿಸರಕ್ಕಾಗಲೀ, ಆ ಪರಿಸರಕ್ಕೆ ಹೊಂದಿಕೊಂಡೇ ಬದುಕುವ ಜನರಿಗಾಗಲೀ ಒಳ್ಳೆಯದನ್ನು ಮಾಡಲಾರದು" ಎಂಬುದು ಈ ಪುಸ್ತಕದ ತುಂಬ ಹಾಸಿಹೊಕ್ಕಿದೆ ಎನ್ನುತ್ತಾರೆ ಅಶೋಕ್ ಕೆ.ಆರ್ . ಅವರು ಲೇಖಕ ಕಲ್ಕುಳಿ ವಿಠಲ್ ಹೆಗಡೆ ಅವರ ಮಂಗನ ಬ್ಯಾಟೆ ಪುಸ್ತಕಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ವಿದ್ಯಾರ್ಥಿಯಾಗಿದ್ದ ದಿನಗಳಿಂದಲೇ ಪುಸ್ತಕ ಓದುವ ಹುಚ್ಚು. ಪುಸ್ತಕದ ನಿರೂಪಣೆ, ವಿಚಾರ ಮೆಚ್ಚುಗೆಯಾಗಿಬಿಟ್ಟರೆ ಕಾಲೇಜು ಕ್ಲಾಸುಗಳೆಲ್ಲವಕ್ಕೂ ಚಕ್ಕರ್! ಪೋಲಿ ತಿರುಗಿದ ವಿದ್ಯಾರ್ಥಿ ದಿನಗಳನ್ನು ಕಳೆದು ಕೆಲಸ ಸೇರಿ ಜವಾಬ್ದಾರಿಯುತ ಪ್ರಜೆಯಾಗಿಬಿಟ್ಟ ಮೇಲೆ ‘ಕೆಲಸ’ಗಳನ್ನು ಮುಗಿಸಿದ ತರುವಾಯವಷ್ಟೇ ಪುಸ್ತಕಗಳನ್ನು ಓದುವ ಸೌಕರ್ಯ. ಒಂದೇ ಏಟಿಗೆ ಓದಿಬಿಡಬೇಕು ಎನ್ನಿಸುವ ಪುಸ್ತಕಗಳನ್ನು ಇತ್ತೀಚಿನ ದಿನಗಳಲ್ಲಿ ಓದಿದ್ದು ಕಡಿಮೆಯೇ. ಬೇಟೆಯ ಬಗೆಗಿನ ಪುಸ್ತಕಗಳು ಯಾವತ್ತಿಗೂ ಆಕರ್ಷಕ. ಜಗದೀಶ್ ಕೊಪ್ಪ ಬರೆದಿರುವ ಜಿಮ್ ಕಾರ್ಬೆಟ್ ಬಗೆಗಿನ ಪುಸ್ತಕ ವಿದ್ಯಾರ್ಥಿ ದೆಸೆಯಲ್ಲಿ ಓದಿದ್ದ ಬೇಟೆಯ ಕಥೆಗಳನ್ನು ನೆನಪಿಸಿತು. ಅದೇ ಗುಂಗಿನಲ್ಲಿ ಲಂಕೇಶರ ಎಂಭತ್ತನೇ ವರುಷದ ವಾರ್ಷಿಕೋತ್ಸವಕ್ಕೆ ಹೋದಾಗ ಕಣ್ಣಿಗೆ ಬಿದ್ದಿದ್ದು ಕಲ್ಕುಳಿ ವಿಠಲ್ ಹೆಗಡೆ ಬರೆದಿರುವ ‘ಮಂಗನ ಬ್ಯಾಟೆ’. ಮೈಸೂರಿನ ಬಳಿಯ ಚಾಮಲಾಪುರದಲ್ಲಿ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಬೇಕೆಂದು ಸರಕಾರ ನಿರ್ಧರಿಸಿದಾಗ ಅಲ್ಲಿನ ರೈತರು ಬಹುದೊಡ್ಡ ಚಳುವಳಿ ನಡೆಸಿದರು. ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಚಳುವಳಿಗೆ ಸಂಬಂಧಪಟ್ಟ ಕರಪತ್ರಗಳನ್ನು ಹಂಚುತ್ತಿದ್ದಾಗ ಕಲ್ಕುಳಿ ವಿಠಲ್ ಹೆಗಡೆ ಮತ್ತು ಗೌರಿ ಲಂಕೇಶರನ್ನು ಮೊದಲ ಬಾರಿಗೆ ಕಂಡಿದ್ದೆ. ಅದಾಗಲೇ ಕಲ್ಕುಳಿ ವಿಠಲ್ ಹೆಗಡೆ ಕುದುರೆಮುಖದಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬಾರದು ಎಂದು ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಹೋರಾಡುತ್ತಿದ್ದರು. ಇದೇ ಹೋರಾಟದಲ್ಲಿ ನಕ್ಸಲರೂ ಸಕ್ರಿಯರಾಗಿದ್ದರು. ಕಲ್ಕುಳಿ ವಿಠಲ್ ಹೆಗಡೆ ಕೂಡ ನಕ್ಸಲ್ ಎಂದು ಹಣೆಪಟ್ಟಿ ಕಟ್ಟುವ ಕೆಲಸ ಜೋರಾಗಿಯೇ ನಡೆದಿತ್ತು. ಇಂತಹ ಕಲ್ಕುಳಿ ವಿಠಲ್ ಹೆಗಡೆಯವರ ಬೇಟೆಯ ಬಗೆಗಿನ ಪುಸ್ತಕವನ್ನು ಕೊಳ್ಳದೆ ಇರಲಾದೀತೇ! ಕೊಂಡು ತಂದು ಓದಲಾರಂಭಿಸಿದ ಮೇಲೆ ‘ನಾನು ಲೇಖಕನಲ್ಲ’ ಎಂದು ವಿನಯದಿಂದಲೇ ಹೇಳಿಕೊಂಡಿರುವ ವಿಠಲ್ ಹೆಗಡೆಯವರ ಲೇಖನಿಯ ಶಕ್ತಿಯ ಅರಿವಾಯಿತು. ದಿನದ ಕೆಲಸಗಳನ್ನು ಮುಗಿಸಿ ಬೇಟೆಯಾಡುವುದೇ ಮೂರು ದಿನದ ಕೆಲಸವಾಯಿತು!

ಹೆಸರಿಗಿದು ಕಾದಂಬರಿಯಾದರೂ ಕಾದಂಬರಿಯ ಲಕ್ಷಣಗಳಿಲ್ಲ. ಮಲೆನಾಡಿನ ಪರಿಸರ ಕಥನ ಎಂಬ ಟ್ಯಾಗನ್ನು ಪುಸ್ತಕದ ಮೇಲೆ ಕಾಣುತ್ತೀವಾದರೂ ನಿರ್ದಿಷ್ಟ ಕಥನಕ್ರಮವಿಲ್ಲ. ಎಡಪಂಥೀಯ ರಾಜಕೀಯ ನಿಲುವುಗಳು ಪಾತ್ರಗಳ ಮೂಲಕ, ಲೇಖಕರ ಸ್ವಯಂ ಮಾತಿನ ಮೂಲಕ ಅಲ್ಲಲ್ಲಿ ಇಣುಕುತ್ತಾದರೂ ಇದು ರಾಜಕಾರಣದ ಪುಸ್ತಕವಲ್ಲ. ಬೇಟೆಯ ಕುರಿತಾದ ಪುಸ್ತಕವೆಂದರೂ ಇಡೀ 272 ಪುಟಗಳಲ್ಲಿ ಬೇಟೆಯ ಚಿತ್ರಣವಿಲ್ಲ. ಈ ಪುಸ್ತಕದ ತುಂಬ ಹಾಸಿಹೊಕ್ಕಿರುವುದು ಒಂದಿಡೀ ಭೂಪ್ರದೇಶದ ಪರಂಪರೆ, ಅಲ್ಲಿಯ ಸಾಂಸ್ಕೃತಿಕ ಸೊಬಗು ಮತ್ತಾ ಸೊಬಗು, ಪರಂಪರೆಯಲ್ಲಿ ನಾನಾ ಕಾರಣಗಳಿಗಾಗಿ ಆಗುತ್ತಿರುವ ನಿರಂತರ ಬದಲಾವಣೆಗಳು. ಬದಲಾವಣೆ ಸಹಜವಾದರೂ ಬದಲಾವಣೆಯ ವೇಗ ಸಹಜವಾಗಿಲ್ಲ. ಅತಿವೇಗದ ಬದಲಾವಣೆ ಪರಿಸರಕ್ಕಾಗಲೀ, ಆ ಪರಿಸರಕ್ಕೆ ಹೊಂದಿಕೊಂಡೇ ಬದುಕುವ ಜನರಿಗಾಗಲೀ ಒಳ್ಳೆಯದನ್ನು ಮಾಡಲಾರದು.

ಪುಸ್ತಕದ ಪ್ರಾರಂಭವಾಗುವುದೇ ಮಂಗನ ಬ್ಯಾಟೆ ಮತ್ತು ಮಂಗ ತಿನ್ನುವವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಹೋದ ಬಗ್ಗೆ ವಿಷಾದ ವ್ಯಕ್ತಪಡಿಸುವ ಬ್ರಾಹ್ಮಣ ರೈತನಿಂದ. ನಗರದಲ್ಲಿ ಮಂಗಗಳ ಹಾವಳಿ ಹೆಚ್ಚಾಯಿತೆನ್ನುವ ಕಾರಣದಿಂದ ವಿಶೇಷ ಬೋನಿನ ಸಹಾಯದಿಂದ ಮಂಗಗಳನ್ನು ಹಿಡಿದು ಹಳ್ಳಿಗಳಿಗೆ, ಹಳ್ಳಿಯ ಸುತ್ತಲಿನ ಕಾಡುಗಳಿಗೆ ಸರಕಾರ ಬಿಟ್ಟುಬಿಡುತ್ತಾರೆ. ಮಂಗನನ್ನು ನಿಯಂತ್ರಿಸುವ ಯಾವ ಉಪಾಯಗಳೂ ಸಿಗದೆ ‘ಕಾಡಿನ ಮಧ್ಯದ ಹಳ್ಳಿ ತೊರೆಯಿರಿ’ ಎಂದ ಸರಕಾರಕ್ಕೆ ಸೆಡ್ಡು ಹೊಡೆದ ಜನರು, ಬಂದೂಕಿಗೆ ಎದೆಯೊಡ್ಡಿದ ಜನರು ಮಂಗನ ಕಾಟಕ್ಕೆ ಹೆದರಿ ಊರು ತೊರೆಯುವ ನಿಸ್ಸಹಾಯಕತೆಯೊಂದಿಗೆ ಮಂಗನ ಬ್ಯಾಟೆ ಪ್ರಾರಂಭವಾಗುತ್ತದೆ. ನಗರದ ಮಂಗಗಳನ್ನು ಹಿಡಿಯಲು ವಿಶೇಷ ಬೋನು ತಯಾರಿಸಿ ಹಿಡಿದ ‘ಸಿದ್ಧ’ ಮಂಗನ ಬ್ಯಾಟೆಯ ನಾಯಕ, ಸರಕಾರದ ನಿರ್ಧಾರಗಳ ಕಾರಣದಿಂದ ಮಂಗನ ಬ್ಯಾಟೆಯ ಖಳನಾಯಕನೂ ‘ಸಿದ್ಧ’ನೇ! ಸಿದ್ಧನ ಹುಟ್ಟು, ಬೆಳವಣಿಗೆ, ಜೀತ, ಬೇಟೆಯ ಚಾತುರ್ಯ, ಅಪರೂಪದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಗುರುತಿಸುವ ಬಗೆ, ದೈತ್ಯಾಕಾರದ ಮರಗಳನ್ನು ಚಕಚಕನೆ ಏರುವ ಚಾಣಾಕ್ಷತೆ – ಹೀಗೆ ಇಡೀ ಪುಸ್ತಕ ಸಿದ್ಧನ ಮೂಲಕ ಮಲೆನಾಡಿನ ಕಳೆದುಹೋಗಿರಬಹುದಾದ ಪರಿಸರವನ್ನು ನಮಗೆ ಪರಿಚಯಿಸುತ್ತ ಸಾಗುತ್ತದೆ. ಮಲೆನಾಡಿನ ಗಂಧಗಾಳಿ ಇಲ್ಲದ ಬಯಲುಸೀಮೆಯವರನ್ನೂ ತನ್ಮಯವಾಗಿಸುವಷ್ಟರ ಮಟ್ಟಿಗೆ ಕಲ್ಕುಳಿ ವಿಠಲ್ ಹೆಗಡೆಯವರ ಲೇಖನಿ ಹರಿತವಾಗಿದೆ, ಸರಳವಾಗಿದೆ. ಲೇಖಕರ ರಾಜಕೀಯ ನಿಲುವುಗಳು ಒಪ್ಪಿತವಾಗದಿದ್ದವರಿಗೂ ಪುಸ್ತಕದ ಓದು ಆಸಕ್ತಿದಾಯಕವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಲೆನಾಡಿನ ಬಗ್ಗೆ, ಬೇಟೆಯ ಬಗ್ಗೆ ಬಂದಿರುವ ಪುಸ್ತಕಗಳಲ್ಲಿ ಉತ್ಕ್ರಷ್ಟವಾದ ಪುಸ್ತಕವಿದೆಂದು ಅನುಮಾನವಿಲ್ಲದೆ ಹೇಳಬಹುದು. ಕನ್ನಡ ಪುಸ್ತಕ ಲೋಕದಲ್ಲೊಂದು ಹೊಸ ಬಗೆಯ ಪುಸ್ತಕವಿದು. ರೈತರ ಬಗೆಗೆ ಕಾರ್ಮಿಕರ ಬಗೆಗೆ ಅನೇಕಾನೇಕ ಪುಸ್ತಕಗಳು, ಕಾದಂಬರಿಗಳು ಬಂದಿವೆ. ಜಾಗತೀಕರಣ, ಬಂಡವಾಳಶಾಹಿತನ ರೈತರ – ಕಾರ್ಮಿಕರ ಜೀವನದಲ್ಲಿ ಉಂಟುಮಾಡುವ ಪಲ್ಲಟಗಳ ಬಗ್ಗೆ ಪುಸ್ತಕಗಳಿವೆ. ಆದರೆ ತತ್ವ ಸಿದ್ಧಾಂತಗಳ ಯಾವ ವರ್ಗಕ್ಕೂ ಸೇರದ ಆದಿವಾಸಿಗಳು – ಬುಡಕಟ್ಟು ಜನಾಂಗಗಳ ಜೀವನ ಪದ್ಧತಿಯ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಇರುವ ಪುಸ್ತಕಗಳು ತುಂಬ ಕಡಿಮೆ. ಒಂದು ನಿರ್ಧಾರವನ್ನು ಇಡೀ ರಾಜ್ಯಕ್ಕೆ/ ದೇಶಕ್ಕೆ ಏಕರೂಪವಾಗಿ ಹೇರುವ ಸರಕಾರ ಹೇಗೆಲ್ಲ ಗೊಂದಲಗಳನ್ನು ಸೃಷ್ಟಿಸುತ್ತದೆ ಎನ್ನುವುದಕ್ಕೆ ಈ ಪುಸ್ತಕದಲ್ಲಿ ಹತ್ತಲವು ಉದಾಹರಣೆಗಳು ಸಿಕ್ಕುತ್ತವೆ. ಸರಕಾರದ, ಊರ ಮುಖ್ಯಸ್ಥರ ಯಾವ ನಿರ್ಧಾರಕ್ಕೂ ಬೇಸರ ಪಟ್ಟುಕೊಳ್ಳದೆ ಪ್ರತಿಯೊಂದರಲ್ಲೂ ಆಶಾವಾದವನ್ನೇ ಕಾಣುವ ಯಾವ ಕೆಲಸವನ್ನಾದರೂ ಮಾಡುವ ‘ಸಿದ್ಧ’ ದೌರ್ಜನ್ಯವನ್ನು ಸಹಿಸುವ ಮೌನಿಯಾಗಿಯೂ ಕಾಣಿಸುತ್ತಾನೆ, ತನ್ನದೇ ರೀತಿಯಲ್ಲಿ ಪ್ರತಿಭಟಿಸುವ ಕ್ರಾಂತಿಕಾರಿಯಾಗಿಯೂ ಕಾಣಿಸುತ್ತಾನೆ.

“ಜಗದ್ಗುರುಗಳಿಗೆ ಸರ್ಕಾರ ಇಷ್ಟೆಲ್ಲ ಹೆದರುತ್ತದೆ ಎಂದು ಅಲ್ಲಿಯತನಕ ಸಿದ್ಧನಿಗೆ ಗೊತ್ತೇ ಇರಲಿಲ್ಲ. ಪ್ಯಾಟೆ ತುಂಬಾ ಮಂಗಗಳು ಅದೆಷ್ಟೋ ಜನರಿಗೆ ಏನೇನೋ ಅನಾಹುತ ಮಾಡಿದರೂ ಯಾರೂ ಕ್ಯಾರೆ ಅಂದಿರಲಿಲ್ಲ. ಆದರೆ ಮಂಗಗಳು ಮಠದ ಗುರುಗಳ ಮೇಲೇ ಹಾರಿದವು ಎಂದಮಾತ್ರಕ್ಕೆ ಸರಕಾರದ ಇಷ್ಟೆಲ್ಲ ಅಧಿಕಾರಿಗಳು ಸೇರಿದ್ದು ಸಿದ್ಧನಲ್ಲಿ ಸೋಜಿಗ ಉಂಟುಮಾಡಿತ್ತು. ಆದರೂ ಮಂಗಗಳ ದೆಸೆಯಿಂದ ತನಗೆ ಒಲಿದ ಭಾಗ್ಯದಿಂದ ಆತ ಒಳಗೊಳಗೇ ಸಂತೋಷಗೊಂಡಿದ್ದ. ಸಿದ್ಧನಿಗೆ ಪುರಸಭೆ ಅಧ್ಯಕ್ಷರು ಎಲ್ಲರೂ ಮಾತನಾಡುವಂತೆ ಒತ್ತಾಯಿಸಿದರು.

ಮಾತಿಗೆ ಎದ್ದುನಿಂತ ಸಿದ್ಧ, ‘ನಾ ಹೇಳೋದೂ ಎಂತದ್ದೂ ಇಲ್ಲ. ನಮ್ಮ ವಡೇರು ಅದಾರೆ. ಅವರೇ ಎಲ್ಲಾ ಹೇಳ್ತಾರೆ’ ಅಂದ. ಆಗ ವಡೇರು, ‘ಮಾತಾಡಿ ಮಾತಾಡಿ. ನಿಮಗೆ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿ’ ಎಂದು ಮೊದಲ ಬಾರಿಗೆ ಸಿದ್ಧನಿಗೆ ಮರ್ಯಾದೆ ಕೊಟ್ಟು ಹೇಳಿದರು.

ಮೊದಲೆಲ್ಲ ಸಿದ್ಧನ ಹತ್ತಿರ ವಡೇರು ಕೂರುವುದು ಕನಸಿನ ಮಾತು. ಸಿದ್ಧನಿಗೆ ಏನಾದರೂ ಹೇಳಬೇಕಿದ್ರೆ ಹೆಚ್ಚೆಂದರೆ ಗೋವಿಂದನ ಹತ್ತಿರ ಹೇಳುತ್ತಿದ್ದರು. ಸಿದ್ಧನ ಹತ್ತಿರ ವಡೇರು ಮಾತಾಡಿದ್ದು ಸಿದ್ಧನಿಗೆ ನೆನಪಿಲ್ಲ. ಇವತ್ತು ಮಂಗಗಳ ದೆಸೆಯಿಂದ ಸಿದ್ಧ ಸಿದ್ಧಯ್ಯ ಆಗಿದ್ದ. ಸಿದ್ಧಯ್ಯ ಅಂತಲೇ ವಡೇರು ಮರ್ಯಾದೆ ಕೊಟ್ಟು ಹೇಳಿದ್ರು. ಸಿದ್ಧನನ್ನು ಗೋವಿಂದ ಹುರಿದುಂಬಿಸಿದ. ಸಿದ್ಧ ಧೈರ್ಯ ಮಾಡಿ ಮಾತಿಗೆ ಶುರುಮಾಡಿದ.

ಆಗ ಆ ಸಭಾಂಗಣದ ಮೂಲೆಯಲ್ಲಿ ನಿಂತಿದ್ದ ಫಾರೆಸ್ಟ್ ಗಾರ್ಡ್ ಸಿದ್ಧನ ಕಣ್ಣಿಗೆ ಬಿದ್ದ. ಅವನನ್ನು ಉದ್ದೇಶಿಸಿ ‘ಮಂಗನ ಬ್ಯಾಟೆ ಮಾಡಬ್ಯಾಡಿ ಅಂತ ನಮಗೆಲ್ಲ ತಾಕೀತು ಮಾಡಿದ್ರಿ. ಕಾಡಿನಲ್ಲಿದ್ದ ಮಂಗಗಳನ್ನು ತಂದು ಪ್ಯಾಟೇಲಿ ಬಿಟ್ರಿ. ಪ್ಯಾಟೆ ಮನುಷ್ಯರು ಮಂಗಗಳಿಗೆ ತಾವು ತಿನ್ನೋದನ್ನು ಕೊಟ್ರು. ಮನುಷ್ಯರ ಬುದ್ಧಿಯನ್ನು ಮಂಗಗಳಿಗೆ ಕಲ್ಸಿದ್ರು. ಅದ್ಕೆ ನೋಡಿ ಅವು ಇಷ್ಟೆಲ್ಲಾ ಜೋರಾಗಿವೆ. ಮಂಗಗಳನ್ನು ಮಠಕ್ಕೂ ಸೇರಿಸಿದ್ರಿ. ಮಠಕ್ಕೆ ಸೇರಿದ ಮ್ಯಾಲೆ ಅವು ಇನ್ನೂ ಕೊಬ್ಬಿ ಹೋಗ್ಯವೆ. ಅದ್ಕೆ ನೋಡಿ ಇವತ್ತು ಕಾಡಿನ ಮಂಗಗಳ ದೆಸೆಯಿಂದ ಊರಾಗ್ಯಾರು ಇರಂಗಿಲ್ಲ. ಹಂಗೆ ಬಂದದೆ ಕಾಲ’ ಎಂದು ಗಾರ್ಡ್ ಗೆ ತಿರುಗು ಬಾಣ ಬಿಟ್ಟ."

ಪರಿಸರವಾದಿ ಮತ್ತು ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆಯವರ “ಮಂಗನ ಬ್ಯಾಟೆ” ಅನುಭವ ಕಥನವು ಓದುಗರಲ್ಲಿ ವಿಸ್ಮಯ, ಬೆರಗು ಹುಟ್ಟಿಸಿದೆ. ಈಗಾಗಲೇ ಹಲವು ಮುದ್ರಣಗಳನ್ನು ಕಂಡಿರುವ ಪುಸ್ತಕ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿಯೂ ಇದಾಗಿದೆ. ಇದನ್ನು ಓದುತ್ತಿದ್ದರೆ ಕಾನೂರು ಹೆಗ್ಗಡತಿಯ ಪುಟ್ಟಣ್ಣ ಮತ್ತು ಕೆಲಸತಪ್ಪಿಸಿ ಹೊಂಡತೊಣಕುವ ಮಾಂಸಬಾಕ ಬೈರನಿಂದ ಹಿಡಿದು ಮಲೆಗಳಲ್ಲಿ ಮದುಮಗಳಿನ ಐತ ಮತ್ತು ಗುತ್ತಿಯರೆಲ್ಲ ನೆನಪಾಗುತ್ತಾರೆ. ಹಾಗೆಯೇ, ತೇಜಸ್ವಿಯರ ಮಂದಣ್ಣ, ಜೇನ್ನೊಣಗಳು, ಏಡಿಗಳೂ ನೆನಪಾಗುತ್ತವೆ. ಆಪಾರ ಎನ್ನಬಹುದಾದ ವಿಷಯಗಳೂ, ವಿವರಗಳೂ, ಉಪಕತೆಗಳೂ, ಹಾಸ್ಯಪ್ರಸಂಗಗಳೂ, ಈ ಕಥನದಲ್ಲಿವೆ. ಮಲೆನಾಡಿನ ತಲ್ಲಣಗಳನ್ನು ಭಿನ್ನವಾಗಿಯೇ ನಿರೂಪಿಸಿರುವ ಅಪರೂಪದ ಕೃತಿ.

-ಅಶೋಕ್ ಕೆ.ಆರ್

ಅಶೋಕ್ ಕೆ.ಆರ್ ಲೇಖಕ ಪರಿಚಯ

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...