ಸತ್ಯದ ನಿಲುವನ್ನರಿತವಂಗೆ ಇನ್ಯಾವ ಹಂಗು.?

Date: 04-10-2022

Location: ಬೆಂಗಳೂರು


ಅಂತರಂಗ ಮತ್ತು ಬಹಿರಂಗಗಳೆರಡೂ ಸಮಾನಾಂತರದಲ್ಲಿ ಸಿರಿವಂತವೇ ಆಗಿರುವಾಗ ಅದನ್ನು ಬೇರಾವುದೂ ಒಡೆಯುವ ಅಥವಾ ಕೆಡಹುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ ಕವಿ ವಿಜಯಕಾಂತ ಪಾಟೀಲ. ಅವರು ತಮ್ಮ ಹಸಿರು ಬಂಡಿ ಅಂಕಣದಲ್ಲಿ ಆಯ್ದಕ್ಕಿ ಲಕ್ಕಮ್ಮನ ವಚನವೊಂದನ್ನು ಚರ್ಚೆಗೆ ಒಳಪಡಿಸಿದ್ದಾರೆ.

ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೇ?
ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ?
ಘನಶಿವಭಕ್ತರಿಗೆ ಬಡತನವಿಲ್ಲ
ಸತ್ಯರಿಗೆ ದುಷ್ಕರ್ಮವಿಲ್ಲ
ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ
ಆರ ಹಂಗಿಲ್ಲ ಮಾರಯ್ಯ..

ಆಯ್ದಕ್ಕಿ ಮಾರಯ್ಯನ ಪತ್ನಿ ಲಕ್ಕಮ್ಮನ ಇಪ್ಪತ್ತೈದು ವಚನಗಳಷ್ಟೇ ದೊರಕಿವೆಯಾದರೂ ಆ ಅಲ್ಪದರೊಳಗೇ ಅವಳ ಅಗಾಧವಾದ ಆತ್ಮವಿಶ್ವಾಸ, ಕಾಯಕನಿಷ್ಠೆ, ದಾಸೋಹದ ಪ್ರಜ್ಞೆ, ವೈಚಾರಿಕ ದೃಷ್ಟಿ, ವ್ಯಕ್ತಿತ್ವದ ಶುದ್ಧಿ, ಅರಿವಿನ ಆಳ- ಹೀಗೆ ಒಟ್ಟಾರೆ ಒಂದು ನೆಮ್ಮದಿಯಬದುಕಿನ ಅಪೇಕ್ಷೆಗಳು ಒಡೆದು ಕಾಣುತ್ತವೆ. ಸ್ತ್ರೀಸ್ವಾತಂತ್ರ್ಯದ ಪ್ರತಿಪಾದಕಿ, ಪುರುಷರಿಗೂ ಬದುಕಿನ ಮೌಲ್ಯಗಳ ಪಾಠ ಹೇಳುವ ಅರಿವಿನ ಆಗರ ಹಾಗೂ ಆತ್ಮವಿಶ್ವಾಸದ ಭಾವಶ್ರೀಮಂತಿಕೆ- ಈ ಗುಣಗಳ ಖಣಿಯಾಗಿರುವ ಲಕ್ಕಮ್ಮನ ವಚನಾಭಿವ್ಯಕ್ತಿಯಲ್ಲೂ ಇವೇ ಗುಣಗಳು ಘನೀಭೂತವಾಗಿರುವುದು ಒಂದು ವೈಶಿಷ್ಟ್ಯ. ಈ ಕಾರಣಕ್ಕಾಗಿಯೇ ಲಕ್ಕಮ್ಮ ವರ್ತಮಾನದ ಸ್ತ್ರೀಸಂಕುಲಕ್ಕೂ ಮಾರ್ಗದರ್ಶಿಯಾಗಿ ತೋರುತ್ತಾಳೆ.

ವಿಶ್ಲೇಷಣೆಗೆ ಆಯ್ದುಕೊಂಡಿರುವ ಈ ವಚನವೂ ಸೇರಿದಂತೆ ಲಕ್ಕಮ್ಮನ ವಚನಗಳ ವೈಶಿಷ್ಟ್ಯವಿರುವುದು- ಕಾಯ, ಮನ ಮತ್ತು ಕಾಯಕಗಳ ಸಂಬಂಧವನ್ನು ಶುದ್ಧ ಮತ್ತು ಅನುಭಾವಿಕ ನೆಲೆಯಲ್ಲಿ ಕಟ್ಟಿಕೊಡುವುದರಲ್ಲಿಯೇ. ಸಾಧಕನಿಗಿರಬೇಕಾದ ಮನೋಸ್ಥೈರ್ಯ, ಅಂಥ ಮನೋಸ್ಥೈರ್ಯದಿಂದ ಕುದುರಬಹುದಾದ ದೇವರು ಮತ್ತು ಭಕ್ತನ ಸಂಬಂಧ, ಅನುಭಾವದ ವಿಚಾರಗಳು, ಮಾನವನ ಘನತೆ, ಇವನ್ನೆಲ್ಲ ಸಾಧನೆಯ ಪರಿಭಾಷೆಯಲ್ಲಿಯೇ ಅಭಿವ್ಯಕ್ತಿಸಿರುವುದು ಲಕ್ಕಮ್ಮನ ಈ ವಚನದ ವೈಶಿಷ್ಟ್ಯ.

ಅಂಗಕ್ಕೆ ಬಡತನವಿದ್ದರೂ ಮನಕ್ಕೆ ಮಾತ್ರ ಬಡತನವಿಲ್ಲ ಎಂದು ಸಾರುತ್ತಲೇ ಆರಂಭವಾಗುವ ಈ ವಚನ, ಮನಸ್ಸು ಮತ್ತು ದೇಹಗಳ ಕ್ರಿಯೆಯಲ್ಲಿರುವ ವಿಭಿನ್ನ ನೆಲೆಗಳನ್ನು ಸ್ಪಷ್ಟಪಡಿಸುತ್ತದೆ. ಅಂಗದ ಅಥವಾ ದೈಹಿಕ ವೈಕಲ್ಯತೆಯಲ್ಲಿಯೂ ಶ್ರದ್ಧೆಯೊಂದಿದ್ದರೆ, ಮನೋಬಲವಿದ್ದರೆ ಏನಾದರೂ ಘನವಾದದ್ದನ್ನೇ ಸಾಧಿಸಬಹುದು ಅಥವಾ ಗೈಯ್ಯಬಹುದು ಎಂದು ಮಾನವ ಸಾಧ್ಯತೆಯ ಬಾಗಿಲೊಂದನ್ನು ವಚನ ತೆರೆಯುತ್ತದೆ. ನ್ಯೂನತೆಯಿದ್ದಾಗಲೂ ಬಲವಾದದ್ದನ್ನು, ಬಲಿಷ್ಠವಾದದ್ದನ್ನೂ ಎದುರುಗೊಳ್ಳಬಹುದು ಎನ್ನಲಿಕ್ಕೆ ಬೆಟ್ಟದಂಥ ಬಂಡೆಯನ್ನೂ ಚೂಪಾದ ಉಳಿಯ ಮೊನೆಯೂ ಕೆಡುಹಬಹುದೆಂಬ ವಾಸ್ತವ ದೃಷ್ಟಾಂತದ ಮೂಲಕವೂ ಅದು ಸ್ಪಷ್ಠಿಕರಿಸುತ್ತದೆ. ಉಳಿಯ ಮೊನೆಯಲ್ಲಿ ಬಡತನವಿರುವುದೆಂದರೆ ಅದು ಅತ್ಯಂತ ತೆಳ್ಳಗಾಗಿರುವುದು (ಮೊನೆ ಬಡವಾಗಿರುವುದು). ಬೆಟ್ಟ ಬೃಹತ್ತಾದರೂ ಬಡವಾದ ಉಳಿ ಅದನ್ನು ಒಡೆಯಲು ಖಂಡಿತ ಸಾಧ್ಯವಿದೆ ಎನ್ನುವಲ್ಲಿ ವಸ್ತುವಿನ ಗಾತ್ರಕ್ಕಿಂತ ಅದನ್ನು ಎದುರಿಸುವ ಮನಸ್ಸಿನ ಪಾತ್ರ ಘನವಾಗುತ್ತದೆಂಬ ಸತ್ಯ ಒಡೆದು ಕಾಣುತ್ತದೆ. ದೇಹದ ಕಾಳಿಕೆಗಳನ್ನು ಮನದ ಬೆಳಕು ದೂರ ಮಾಡಲು ಖಂಡಿತ ಸಾಧ್ಯವೆಂಬ ಸ್ಪಷ್ಟ ಸತ್ಯವನ್ನು ವಚನ ದಿಟಪಡಿಸುತ್ತದೆ.

ಇದೇ ಸಮೀಕರಣವನ್ನು ಘನಶಿವಭಕ್ತರಿಗೆ ಅನ್ವಯಿಸುವುದಾದರೆ, ಅಲ್ಲಿ ಇನ್ನೂ ಮಹತ್ವದ ಸತ್ಯವೊಂದು ಗೋಚರಿಸುವುದು ಸ್ಪಷ್ಟ. ಘನಶಿವಭಕ್ತರ ಅಂಗಕ್ಕೂ ಬಡತನವಿಲ್ಲ, ಮನಕ್ಕೂ ಬಡತನವಿಲ್ಲ. ಅಂತರಂಗ ಮತ್ತು ಬಹಿರಂಗಗಳೆರಡೂ ಸಮಾನಾಂತರದಲ್ಲಿ ಸಿರಿವಂತವೇ ಆಗಿರುವಾಗ ಅದನ್ನು ಬೇರಾವುದೂ ಒಡೆಯುವ ಅಥವಾ ಕೆಡಹುವ ಸಾಧ್ಯತೆಯೇ ಇಲ್ಲ. ಇದಕ್ಕೆ ಪೂರಕವಾದ ಮತ್ತೊಂದು ಮಾತನ್ನೂ ಲಕ್ಕಮ್ಮ ಸೇರಿಸುತ್ತಾಳೆ: `ಸತ್ಯರಿಗೆ ದುಷ್ಕರ್ಮವಿಲ್ಲ' ಎಂದು. ಘನಶಿವಭಕ್ತರು ಸತ್ಯರೇ ಆಗಿರುವಾಗ ಅವರ ಮನಸ್ಸುಗಳಲ್ಲಿ ದುಷ್ಟಪ್ರವೃತ್ತಿಗಳು ಬೆಟ್ಟಗಟ್ಟಲೂ ಸಾಧ್ಯವಿಲ್ಲ. ಹೀಗಿರುವಾಗ ಶಿವಭಕ್ತರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ವಾಸ್ತವವನ್ನು ಲಕ್ಕಮ್ಮನ ಈ ವಚನ ದೃಷ್ಟಾಂತದ ಮೂಲಕ ಸ್ಪಷ್ಟಪಡಿಸುತ್ತದೆ.

ಶಿವಭಕ್ತನು, ಘನಶಿವಭಕ್ತನಾಗುವುದೆಂದರೆ- ಅದು ಅಂತರಂಗ ಮತ್ತು ಬಹಿರಂಗಗಳಭಿನ್ನತೆಯನ್ನು ದೂರಮಾಡಿದ ಸ್ಥಿತಿಯೇ ಆಗಿದೆ. `ಸತ್ಯ'ದ ನಿಲುವನ್ನರಿತ ಆತ ಯಾವುದೇ ತೆರನಾದ ಬಡತನವಿಲ್ಲದವನು ಮತ್ತು ದುಷ್ಕರ್ಮದಿಂದ ದೂರವಾದವನು. ಅಂಥ ಸ್ಥಿತಿ ತಲುಪಿದಾಗಲೇ ಭಕ್ತ `ಘನಶಿವಭಕ್ತ'ನ ಸ್ಥಾನಕ್ಕೇರುತ್ತಾನೆ. ಅವನ ಆತ್ಮಬಲ ಮತ್ತು ಮನೋಬಲಗಳ ಮುಂದೆ ಅಂಗದ ಬಲ, ಆಕಾರ, ವಿಸ್ತಾರ, ಯಾವುದರ ಆಟವೂ ನಡೆಯಲಾರದು. ಅಂಥ ನಿಷ್ಠೆ ಮತ್ತು ಕರ್ತೃತ್ವಶಕ್ತಿಗಳೆದುರು ಬಡತನ ಎನ್ನುವುದೇ ಒಂದು ಅಸಂಬದ್ಧ ಪದಪ್ರಲಾಪವಾಗುವುದನ್ನು ಈ ವಚನ ಎತ್ತಿ ಹೇಳುತ್ತದೆ. ಆ ಸ್ಥಿತಿ ತಲುಪಿದ ಘನಶಿವಭಕ್ತನ ನಡೆ-ನುಡಿಗಳ ಫಲವೂ ಸತ್ಕರ್ಮವೇ ಹೊರತು ದುಷ್ಕರ್ಮವಲ್ಲ ಎನ್ನುವಲ್ಲಿ ಲಕ್ಕಮ್ಮ ಮನೋದಾಡ್ರ್ಯದ ಸ್ವರೂಪವನ್ನು ಸಾಕ್ಷಾತ್ಕರಿಸಿದಂತಿದೆ. ಇಷ್ಟೆಲ್ಲ ಸಾಧನೆಯ ಮೂಲಕ ಮಾರಯ್ಯಪ್ರಿಯ ಅಮರಲಿಂಗೇಶ್ವರನ ಬಲವನ್ನು ಸಂಪಾದಿಸಿರುವ ನನಗೆ ಉಳಿದ ಯಾರ ಹಂಗೂ ಇಲ್ಲವೆಂದು ಆತ್ಮಸ್ಥೈರ್ಯದಿಂದ ಹೇಳುವಲ್ಲಿ ಅವಳ ಆತ್ಮಬಲದ ದೃಢತೆಯನ್ನು ಗುರುತಿಸಬಹುದಾಗಿದೆ. ಮನದಿಂದ ಶ್ರೀಮಂತನಾದವರು ಏರುವ ಉನ್ನತ ಹಂತವೂ ಅದೇ ಆಗಿದೆ.

ಈ ಜಗದ ನಡುವೆ ನಿಂತು ಈಗಲೂ ಈ ವಚನವನ್ನು ನಾವು ಹಲಬಗೆಯಲ್ಲಿ ಅರ್ಥೈಸಬಹುದು. ಕಾರಣಾಂತರದಿಂದ ಕಿವುಡ-ಕುಂಟ-ಕುರುಡ-ಮೂಗರಾದಿಯಾಗಿ ಕೆಲ ಅಂಗಹೀನರನ್ನು ನಾವೇನು ಅಬಲರೆಂದೆಣಿಸಿರುವೆವೋ, ಇದೀಗ ವಿಕಲಚೇತನರೆಂದು ಕರೆದು ಸಾಂತ್ವನದ ಮಾತು `ಆಡು'ತ್ತಿದ್ದೇವೆಯೋ ಅಂಥವರ ಆಲೋಚನಾಕ್ರಮ, ದಿವ್ಯದೃಷ್ಟಿ, ಚಿಂತನೆ, ಸಾಧನೆ, ಅಗಾಧಕಾಯಕಶೃದ್ಧೆ- ನಿಷ್ಠೆಯ ಒಂದಲ್ಲ ಸಾವಿರಾರು ಘನವ್ಯಕ್ತಿತ್ವ-ಜೀವವೈವಿಧ್ಯತೆಯ ಉದಾಹರಣೆಗಳು ನಮ್ಮ `ಕಾಣುವ ಕಣ್ಣುಗಳ' ಮುಂದಿನ ಆದರ್ಶವಾಗಿ, ಮಾದರಿಯಾಗಿ ಕಾಯಕವನ್ನೇ ಮುಂಚೂಣ ಯಾಗಿರಿಕೊಂಡಂತೆಯೇ ಗೋಚರಿಸುತ್ತಿವೆ; ಗೋಚರಿಸುತ್ತಿದ್ದಾರೆ. ಅಲ್ಪ, ಸಣ್ಣ, ಕನಿಷ್ಟ, ಊನ- ಎಂಬುದೆಲ್ಲವೂ ಮತ್ತೊಂದು ಮಗ್ಗುಲಿನಲ್ಲಿ ಇರುವದಕ್ಕಿಂತಲೂ ಅಂದರೆ `ಇತಿ' ಮೀರಿ ಮಿಗಿಲಾದುದನ್ನೇ ಗೈಯ್ಯುವ, ಏರುವ, ಮಣಿಸುವ ಸುಪ್ತತಾಕತ್ತಿನ ಪ್ರತೀಕವಾಗಿರುವುದನ್ನೂ ನಿಜವಾಗಿರುವುದನ್ನೂ ನಾವೀಗಲೂ ಕಾಣುತ್ತಿದ್ದೇವೆ. ಕಾಣುವ ಕಣ್ಣಿಗಿಂತ, ಕೇಳುವ ಕಿವಿಗಿಂತ, ಆಡುವ ಮಾತಿಗಿಂತಲೂ ಬಲಿಷ್ಟ-ಸ್ವಾದಿಷ್ಟ-ಗರಿಷ್ಟವಾದುದು ಈ `ಬಡ ಅರ್ಥಾತ್ ವೈಕಲ್ಯ' ಎಂದೆಣಿಸಿ ಜರಿದುದರಿಂದಲೇ ಸಾಧಿತವಾಗುತ್ತಿರುವುದು ಕ್ಷಣಕ್ಷಣಕ್ಕೂ ಜರುಗುತ್ತಲೇ ಇದೆ. ಆದರೆ ನಮ್ಮ ಕಾಣುವ `ಕಣ್ಣಿ'ಗೆ ಅದು ಅಷ್ಟಾಗಿ ಗೋಚರಿಸುತ್ತಿಲ್ಲವೇನೋ ಅನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯ್ದಕ್ಕಿ ಲಕ್ಕಮ್ಮನ ಈ ವಚನ ಭವಿಷ್ಯತ್ತಿನ ಯುಗಕ್ಕೂ, ಈ ನೆಲಾನುಬಂಧದ ಆಜನ್ಮ ಋಣಕ್ಕೂ ಪಕ್ಕಾ ಲಾಗೂ ಆಗುತ್ತದೆ.

-ವಿಜಯಕಾಂತ ಪಾಟೀಲ

ಈ ಅಂಕಣದ ಹಿಂದಿನ ಬರಹಗಳು:
ನಮ್ಮ ಬದುಕಿನ ನಿಜ ನೆಂಟರು..
ಕಂಬಾರರ ಈ ಕವಿತೆ ನನ್ನೊಳಗೆ ಅವಿತೂ...
ಚಾಲಕನೆಂಬ ದೊಡ್ಡಪ್ಪನೂ..

ಚಂಪಾ ಎಂಬ ಸಾಲಿಯೂ ಮಠವೂ…
ನೆಲ ನೆಲ ನೆಲವೆಂದು…

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...