ಸತಿ-ಪತಿ ಭಾವ

Date: 11-01-2023

Location: ಬೆಂಗಳೂರು


''ಅಕ್ಕ, ತನ್ನ ಮದುವೆಯೆಲ್ಲಿ ನಡೆಯಿತು, ಅದನ್ನು ಹೇಗೆ ಮಾಡಿದರೆಂಬುದನ್ನು ಇಲ್ಲಿ ವರ್ಣಿಸಿದ್ದಾಳೆ. ಅಕ್ಕನನ್ನು ಮದುವೆಯಾದವ ಕೌಶಿಕರಾಜ. ಆದರೆ ಅಕ್ಕನಿಗೆ ಕೌಶಿಕರಾಜ ತನ್ನ ಪತಿಯೆಂದು ಹೇಳಿಕೊಳ್ಳುವುದು ಬೇಕಾಗಿರಲಿಲ್ಲ. “ಸುಲಿಪಲ್ಲಗೊರವ ತನ್ನ ಪತಿ, ಭಿಕ್ಷಕ್ಕೆ ಮನೆಗೆ ಬಂದನಲ್ಲಾ ಅವನು ನನ್ನ ಪತಿ” ಎಂದು ಹೇಳಿಕೊಳ್ಳುತ್ತಾಳೆ. ರಾಜನಾದವನನ್ನು ಧಿಕ್ಕರಿಸಿ, ಭಿಕ್ಷುಕನಾದವನನ್ನು ಅಪ್ಪಿಕೊಳ್ಳುವದಿದೆಯಲ್ಲ, ಇದೇ ನಿಜವಾದ ಕ್ರಾಂತಿ'' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಸತಿ-ಪತಿ ಭಾವ’ ಕುರಿತು ತಿಳಿಸಿದ್ದಾರೆ.

ಸತಿ-ಪತಿ ಭಾವ ಶರಣರ ಹೊಸ ಚಿಂತನೆ. ಗಂಡಿರಲಿ-ಹೆಣ್ಣಿರಲಿ ತಾನು ಸತಿಯೆಂದು ಭಾವಿಸುವುದು, ದೇವರನ್ನು, ದೈವವನ್ನು ಪತಿಯೆಂದು ಭಾವಿಸುವುದು. ದೇವರು-ದೈವವೆಂದರೆ ಸಮಾಜ. ತನಗಿಂತ ಸಮಾಜ ದೊಡ್ಡದು, ತಾನಿರುವುದು ಸಮಾಜದ ಜನಸಮುದಾಯದ ಬೆಳವಣಿಗೆಗೇ ಹೊರತು, ಅದರ ನಾಶಕ್ಕಲ್ಲವೆಂದು ತಿಳಿಸುವ ತತ್ವವೇ ಸತಿ-ಪತಿ ತತ್ವ. ಇಲ್ಲಿ ಮಧುರ ಭಕ್ತಿಯಿದೆ; ಸಮರ್ಪಣಾ ಭಾವವಿದೆ. “ಶರಣಸತಿ” ಎಂದರೆ, ಸತಿಯಾದಾಗಲೇ ಶರಣನಾಗಲು ಸಾಧ್ಯವೆಂಬುದು ಹೊಸ ಚಿಂತನೆಯಾಗಿದೆ. ಶಿವನು, ಅರ್ಧನಾರೀಶ್ವರ. ಈ ಅರ್ಧನಾರೀಶ್ವರ ಪರಿಕಲ್ಪನೆಯೆಂದರೆ, ಪ್ರತಿಯೊಂದು ಜೀವಿಯೂ ಅರ್ಧನಾರಿ-ಅರ್ಧಪುರುಷ ಇರುತ್ತದೆ. ಗಂಡಿನಲ್ಲಿ ಹೆಣ್ಣಿನ ಅಂತಃಕರಣ, ಹೆಣ್ಣಿನಲ್ಲಿ ಗಂಡಿನ ಪರಾಕ್ರಮ ಎರಡೂ ಇರುತ್ತವೆಂದು ಅರ್ಧನಾರೀಶ್ವರ ಪರಕಲ್ಪನೆ ಹೇಳುತ್ತದೆ. ಮನುಷ್ಯ ಅರ್ಧ ಹೆಣ್ಣು-ಅರ್ಧ ಗಂಡು ಎಂದು ಶಿವ ಸಂಸ್ಕøತಿ ಹೇಳಿದರೆ, ಪೂರ್ತಿ ಹೆಣ್ಣಾದಾಗಲೇ ಶರಣನಾಗಲು ಸಾಧ್ಯವೆಂದು ಶರಣ ಸಂಸ್ಕøತಿ ಹೇಳುತ್ತದೆ. ಪೂರ್ತಿ ಹೆಣ್ಣಾಗುವದೆಂದರೆ, ಪೂರ್ಣವಾಗಿ ಅಂತಃಕರಣಿಯಾಗಿರುವುದು.

ಹೀಗೆ ಪೂರ್ಣ ಅಂತಃಕರಣೆಯಾದವನೇ ನಿಜವಾದ ಶರಣನೆಂದು ವಚನಕಾರರು ಹೇಳಿದ್ದಾರೆ.

“ಇಹಕ್ಕೊಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ
ಮಿಕ್ಕಿನ ಗಂಡರೆಲ್ಲ ಮುಗಿಲ ಮರೆಯ ಬೊಂಬೆಯಂತೆ”
- ಅಕ್ಕಮಹಾದೇವಿ (ಸ.ವ.ಸಂ. 5, ವ - 77)

ಎಂದು ಹೇಳುವ ಅಕ್ಕಮಹಾದೇವಿಯ ಈ ನುಡಿಗಳು ಸತಿ-ಪತಿ ಭಾವದ ಉದಾತ್ತ ತತ್ವವನ್ನು ಪ್ರತಿಪಾದಿಸುತ್ತವೆ. ಇಹಕ್ಕೊಬ್ಬ - ಪರಕ್ಕೊಬ್ಬ ಪತಿ ಇರುವುದುದಿಲ್ಲ. ಇಹದ ಮೂಲಕವೇ ಪರವು ಬೆಳೆದು ನಿಲ್ಲುತ್ತದೆ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುತ್ತಾರೆಂದು ನುಡಿದ ಶರಣರ ಈ ಸಿದ್ಧಾಂತ ಸಮುದಾಯದ ಪರವಾಗಿದೆ, ಜನಪರವಾಗಿದೆ. ಇಲ್ಲಿ ಅಕ್ಕ ಚೆನ್ನಮಲ್ಲಿಕಾರ್ಜುನನ ಮೂಲಕ ಇಹವನ್ನರಿಯಲು ಪ್ರಯತ್ನಿಸಿದ್ದಾಳೆ.

“ಕೆಳದಿ ಕೇಳವ್ವಾ ನಾನೊಂದು ಕನಸ ಕಂಡೆ” ಎಂದು ಕನಸನ್ನು ಬಿಡಿಸುವ ಅಕ್ಕ, ಗಿರಿಯ ಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆನೆಂದು ಹೇಳುತ್ತಾಳೆ. ಚಿಕ್ಕ-ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಬಂದು ತನ್ನನ್ನು ನೆರೆದನು ನೋಡವ್ವಾಯೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಆತನನ್ನು ಅಪ್ಪಿಕೊಂಡು ತನುವೆಳಗಾದೆನು, ಚೆನ್ನಮಲ್ಲಿಕಾರ್ಜುನನ ಕಂಡೆ ಎಂದು ವಿವರಿಸುತ್ತಾಳೆ.

ಭಾವನೇಕೆ ಬಾರನೆನ್ನ ಮನೆಗೆ? ಎಂದು ಕೇಳುವ ಸತ್ಯಕ್ಕ, “ಆತನ ಕರೆದು ತಾರವ್ವಾ, ಶಂಭುಜಕ್ಕೇಶ್ವರನ ನೆರೆದು ನೋಡುವೆನು!” ಎಂದು ಪರಿತಪಿಸುತ್ತಾಳೆ. ಉಳಿದ ಧರ್ಮಗಳಲ್ಲಿ ದೇವರನ್ನು ತಂದೆಯೆಂದು ಪರಿಭಾವಿಸಿದರೆ, ಶರಣ ಧರ್ಮದಲ್ಲಿ ದೇವರನ್ನು ಪತಿಯೆಂದು ಪರಿಭಾವಿಸಲಾಗಿದೆ. ಸತಿ-ಪತಿಯಾಗುವ ಪತಿ-ಸತಿಯಾಗುವ ಸಮಾನತೆಯ ತತ್ವ ಇಲ್ಲಿದೆ.

“ಎಲ್ಲ ಗಂಡಂದಿರು ಪರದಳ ವಿಭಾಡರು ಎನ್ನಗಂಡ ಮನದಳ ವಿಭಾಡ
ಎಲ್ಲರ ಗಂಡಂದಿರು ಗಜವೇಂಟೆಕಾರರು ಎನ್ನ ಗಂಡ ಮನವೇಂಟೆಕಾರ...”
- ಕದಿರ ರೆಮ್ಮವ್ವೆ (ಸ.ವ.ಸಂ. 5, ವ-745)

ಎನ್ನುವ ಕದಿರ ರೆಮ್ಮವ್ವೆ ಶರಣಸತಿ-ಲಿಂಗಪತಿಯ ಮಹತ್ವವನ್ನು ಇಲ್ಲಿ ವಿವರಿಸಿದ್ದಾಳೆ. ಎಲ್ಲ ಗಂಡಂದಿರು ಪರದಳ ವಿಭಾಡರೆಂದರೆ, ಅವರೆಲ್ಲ ಬೇರೆಯವರ ಸೈನ್ಯವನ್ನು ನಾಶಮಾಡುತ್ತಾರೆ. ಆದರೆ ತನ್ನ ಗಂಡ ತನ್ನ ಮನದೊಳಗಿರುವ ಸೈನ್ಯವನ್ನು ನಾಶಮಾಡುತ್ತಾನೆ. ಹೊರಗೆ ಹೇಗೆ ಆನೆ-ಒಂಟೆ-ಕುದುರೆಯ ಸೈನ್ಯವಿರುತ್ತದೆಯೋ, ಒಳಗೂ ಕೂಡ ಪ್ರಾಣಿ ಸ್ವಭಾವಗಳ ಮನಸ್ಸೆಂಬ ಸೈನ್ಯವಿರುತ್ತದೆ. ದೇವರು ಅಂದರೆ, ಲಿಂಗಪತಿ ತನ್ನ ಮನದೊಳಗಿನ ವೈರಿಸೈನ್ಯವನ್ನು ನಾಶ ಮಾಡುವುದರಿಂದ ತಾನು ಬೆಳೆದು ನಿಲ್ಲಲು ಸಾಧ್ಯವಾಗುತ್ತದೆಂದು ಈ ಶರಣೆ ಹೇಳಿದ್ದಾಳೆ. ಮುಂದಿನ ಸಾಲು ಅದೇ ಭಾವವನ್ನು ವಿಸ್ತರಿಸುತ್ತದೆ. ಎಲ್ಲ ಗಂಡಂದಿರು ಆನೆ ಬೇಟೆಯಾಡಿದ್ದಾರೆ. ತನ್ನ ಗಂಡ ಮನದ ಬೇಟೆಯಾಡುತ್ತಾನೆಂದು, ಪ್ರಾಣಿ ರೂಪಕಗಳ ಮೂಲಕ ರೆಮ್ಮವ್ವೆ ಇಲ್ಲಿ ಹೊಸ ಚಿಂತನೆಯೊಂದನ್ನು ಕಟ್ಟಿಕೊಟ್ಟಿದ್ದಾಳೆ. ಮುಂದಿನ ಸಾಲುಗಳು ಬೆಡಗಿನ ಶೈಲಿಯಲ್ಲಿವೆ. `ಎಲ್ಲರ ಗಂಡಂದಿರಿಗೆ ಮೂರು, ತನ್ನ ಗಂಡಂಗೆ ಒಂದೇ’ ಎಂದು ಹೇಳುವಲ್ಲಿ ಅರ್ಥಗರ್ಭಿತವಾದ ವಿವರಗಳಿವೆ. ಎಲ್ಲರನ್ನೂ ಮೂರು ಮಲತ್ರಯಗಳು (ಆಣವಮಲ-ಮಾಯಾಮಲ-ಕಾರ್ಮಿಕಮಲ) ಕಾಡಿದರೆ, ದೇವರನ್ನು ಇವು ಕಾಡಲಾರವು. ಹೀಗಾಗಿ ಇಲ್ಲಿಯ ಸತಿ-ಪತಿ ಭಾವ ಇನ್ನೂ ಬೆಳೆಯುತ್ತ ಹೋಗುತ್ತದೆ.

ಸತಿ-ಪತಿ ಭಾವದ ಹೆಚ್ಚಿನ ಸಂಖ್ಯೆಯ ವಚನಗಳು ಸಿಗುವುದು ಅಕ್ಕಮಹಾದೇವಿಯಲ್ಲಿ. ಈ ವಿಷಯಕ್ಕೆ ಸಂಬಂಧಿಸಿದ ಅಕ್ಕನ ವಚನಗಳಲ್ಲಿ ಅದ್ಭುತವಾದ ಕಾವ್ಯ ಸೌಂದರ್ಯವಿದೆ.

1) “ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ದೇವಾಂಗವನುಟ್ಟೆಲೆ ಪುರುಷ ಬಾರಾ
ಪುರುಷ ರತ್ನವೆ ಬಾರಾ....” (ವ-45)

2) “ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ!...” (ವ-398)

3) ” ಹೊಳೆವ ಕೆಂಜೆಡೆಗಳ ಮಣಿಮಕುಟದ, ಒಪ್ಪುವ ಸುಲಿಪಲ್ಗಳ ನಗೆಮೊಗದ
ಕಂಗಳ ಕಾಂತಿಯ
ಈರೇಳು ಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು”
- ಅಕ್ಕಮಹಾದೇವಿ (ವ-432)

ಅಕ್ಕನ ಚೆನ್ನಮಲ್ಲಿಕಾರ್ಜುನನ ವಿವಿಧ ಭಂಗಿಗಳಿವು. ಆತ ಸಾವಿಲ್ಲದ ರೂಹಿಲ್ಲದ ಚೆಲುವ, ಸುಲಿಪಲ್ಗಳ ಸುಂದರ, ನಗೆಮೊಗದ ಸರದಾರ. ಹೀಗೆ ಈ ವರ್ಣನೆ ಬೆಳೆಯುತ್ತ ಹೋಗುತ್ತದೆ. ದೇವನನ್ನೇ ಗಂಡನನ್ನಾಗಿ ಪಡೆಯುವ ಶಕ್ತಿ ಬೇರೆ ಯಾರಿಗೂ ಇಲ್ಲ, ಅದು ಶಿವಶರಣೆಯರಿಗೆ ಮಾತ್ರವಿದೆ. ಅಕ್ಕನಂತಹ ಶರಣೆಯರು ಅಮೂರ್ತವನ್ನೇ ವಿಜ್ರಂಭಿಸಿಕೊಂಡು, ಅದರಲ್ಲಿ ಬಣ್ಣಬಣ್ಣದ ಹೂಗಳನ್ನು ಕಂಡುಕೊಂಡು ಬದುಕಿದ ರೀತಿ ಅದ್ಬುತವಾದುದಾಗಿದೆ. ಅಕ್ಕ ಕಂಡ ಕನಸುಗಳಂತೂ ವರ್ಣನೆಗೆ ಮೀರಿದವುಗಳು. ಆಕೆಯ ಕನಸಿನಲ್ಲಿ ಅಕ್ಕಿ- ಅಡಕೆ-ಓಲೆ-ತೆಂಗಿನಕಾಯಿಯಂತಹ ಸುಮಂಗಲೆಯರ ವಸ್ತುಗಳು ಅರ್ಥಪೂರ್ಣ ಸಂಕೇತಗಳಾಗಿ ಬೆಳೆದು ನಿಲ್ಲುತ್ತವೆ. ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲಗೊರವ ಭಿಕ್ಷಕ್ಕೆ ಬರುತ್ತಾನೆ.

ಅಕ್ಕನ ಮತ್ತೊಂದು ಕನಸಿನಲ್ಲಿ ಗಿರಿಯ ಮೇಲೊಬ್ಬ ಗೊರವ ಕುಳಿತಿರುತ್ತಾನೆ. “ಆತ ಬಂದೆನ್ನ ನೆರೆದ ನೋಡವ್ವಾ ಆತನನ್ನಪ್ಪಿಕೊಂಡು ತನುವೆಳಗಾದೆನು” ಎನ್ನುತ್ತಾಳೆ. ಆತನೇ ಚೆನ್ನಮಲ್ಲಿಕಾರ್ಜುನ, ಆತನೇ ತನ್ನ ನಿಜವಾದ ಪತಿ, ಆತನೊಂದಿಗೆ ತನ್ನ ಮದುವೆ ಹೇಗಾಯಿತೆಂಬುದನ್ನು ಅಕ್ಕ ಹೀಗೆ ವರ್ಣಿಸಿದ್ದಾಳೆ:

“ಜಲದ ಮಂಟಪದ ಮೇಲೆ ಉರಿಯ ಚಪ್ಪರವನ್ನಿಕ್ಕಿ ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರೆಲೆ ಅವ್ವಾ...”

- ಅಕ್ಕಮಹಾದೇವಿ (ಸ.ವ.ಸಂ. 5, ವ-214)

ಅಕ್ಕ, ತನ್ನ ಮದುವೆಯೆಲ್ಲಿ ನಡೆಯಿತು, ಅದನ್ನು ಹೇಗೆ ಮಾಡಿದರೆಂಬುದನ್ನು ಇಲ್ಲಿ ವರ್ಣಿಸಿದ್ದಾಳೆ. ಅಕ್ಕನನ್ನು ಮದುವೆಯಾದವ ಕೌಶಿಕರಾಜ. ಆದರೆ ಅಕ್ಕನಿಗೆ ಕೌಶಿಕರಾಜ ತನ್ನ ಪತಿಯೆಂದು ಹೇಳಿಕೊಳ್ಳುವುದು ಬೇಕಾಗಿರಲಿಲ್ಲ. “ಸುಲಿಪಲ್ಲಗೊರವ ತನ್ನ ಪತಿ, ಭಿಕ್ಷಕ್ಕೆ ಮನೆಗೆ ಬಂದನಲ್ಲಾ ಅವನು ನನ್ನ ಪತಿ” ಎಂದು ಹೇಳಿಕೊಳ್ಳುತ್ತಾಳೆ. ರಾಜನಾದವನನ್ನು ಧಿಕ್ಕರಿಸಿ, ಭಿಕ್ಷುಕನಾದವನನ್ನು ಅಪ್ಪಿಕೊಳ್ಳುವದಿದೆಯಲ್ಲ, ಇದೇ ನಿಜವಾದ ಕ್ರಾಂತಿ. ಅಕ್ಕ ಅಂತಹ ಕ್ರಾಂತಿಕಾರಿಯಾಗಿದ್ದಳು. ಅರಸ ಬೇಕಾಗಿರುವುದು ಹೇಡಿಗಳಿಗೆ, ಅರಸೊತ್ತಿಗೆ ಬೇಕಾಗಿರುವುದು ಅಸಹಾಯಕರಿಗೆ. ವೀರರೆಂದೂ ಅಂತಹದನ್ನು ಬಯಸುವದಿಲ್ಲ. ಶರಣರೂ ಕೂಡ ಅಂತಹ ವೀರರಾಗಿದ್ದರು. “ಊರ ಮುಂದೆ ಹಾಲಹಳ್ಳ ಹರಿಯುತ್ತಿರಲು ಬಿಜ್ಜಳನ ಹಂಗೇಕಯ್ಯಾ?” ಎನ್ನುವ ಬಸವಣ್ಣ, ಭಿಕ್ಷಕ್ಕೆ ಬಂದಿರುವ ಸುಲಿಪಲ್ಲ ಗೊರವನೇ ತನ್ನ ಪತಿಯೆಂದು ಪೂಜಿಸುವ ಅಕ್ಕಮಹಾದೇವಿ ಇಂದಿಗೂ ಆದರ್ಶವಾಗಿದ್ದಾರೆ. ಅಕ್ಕನಲ್ಲಿ ಬೆಳೆದು ನಿಂತಿರುವ ಚೆನ್ನಮಲ್ಲಿಕಾರ್ಜುನನ ನಿಷ್ಠೆ ಅದ್ಭುತವಾದುದಾಗಿದೆ.

“ಚಿಲಿಮಿಲಿ ಎಂದು ಓದುವ ಗಿಳಿಗಳಿರಾ
ನೀವು ಕಾಣಿರೆ, ನೀವು ಕಾಣಿರೆ
ಸ್ವರವೆತ್ತಿ ಹಾಡುವ ಕೋಗಿಲೆಗಳಿರಾ
ನೀವು ಕಾಣಿರೆ, ನೀವು ಕಾಣಿರೆ ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
- ಅಕ್ಕಮಹಾದೇವಿ (ಸ.ವ. ಸಂ. 5, ವ-211)

ಎಂದು ಚೆನ್ನಮಲ್ಲಿಕಾರ್ಜುನನ್ನು ಹುಡುಕುವ ಪರಿ ಇದೆಯಲ್ಲ, ಇದೇ ನಿಜವಾದ ಆಧ್ಯಾತ್ಮ. ಗಿಳಿಗಳ ಮೂಲಕ, ಕೋಗಿಲೆಗಳ ಮೂಲಕ, ತುಂಬಿಗಳ ಮೂಲಕ ನವಿಲುಗಳ ಮೂಲಕ ಅನಂತತೆಯನ್ನು, ಚೇತನ ಶಕ್ತಿಯನ್ನು ಕಂಡುಕೊಳ್ಳುವದಿದೆಯಲ್ಲ ಅದೇ ನಿಜವಾದ ಭಕ್ತಿ. ಹೀಗೆ ಶರಣೆಯರಿಗೆ ಸತಿ-ಪತಿ ಭಾವವೆಂಬುದು ಸಾಂಸರಿಕ ಸುಖದ ಲೋಲಪವಾಗಿ ಕಾಡದೆ, ಅನಂತ ಬೆಳಕಾಗಿ, ಸಕಲಜೀವಿಗಳ ನಿನಾದವಾಗಿ ಸಮುದಾಯದ ಸತ್ಯವಾಗಿ ಬೆಳಗಿದೆ. ದೇವರನ್ನು ತಂದೆಯೆಂದು ಪೂಜಿಸಿದವರುಂಟು, ತಾಯಿಯೆಂದು ಆರಾಧಿಸಿದವರುಂಟು. ಆದರೆ ದೇವರನ್ನೇ ಪತಿಯೆಂದು ಕರೆದು, ಅಂತಹ ಆಮೂರ್ತ ರೂಪದ ಪತಿಯೊಂದಿಗೆ ಬಾಳುವೆ ಮಾಡಿದವರು ತುಂಬ ವಿರಳ. ಅಕ್ಕಮಹಾದೇವಿ, ಸತ್ಯಕ್ಕನಂತಹ ಶಿವಶರಣೆಯರು ಅಂತಹ ವಿರಳರಲ್ಲಿ ವಿರಳರಾಗಿದ್ದಾರೆ. ಸತಿ- ಪತಿ ಭಾವದಲ್ಲಿ ಸಮಾನತೆಯ ತತ್ವವಡಗಿದೆ. ಶರಣ ಸಿದ್ಧಾಂತದ ಪ್ರಕಾರ “ಸತಿ” ಎಂದರೆ ಸಕಲ ಜೀವರಾಶಿಗಳು, “ಪತಿ” ಎಂದರೆ ಚೈತನ್ಯ. ಶಿವ- ಪ್ರಕೃತಿ-ಸಮಾಜ ಹೀಗೆ ವಿವಿಧ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಜೀವ ಸತಿ-ಸಮಾಜ ಪತಿಯಾದಾಗ; ವ್ಯಕ್ತಿಗಿಂತ ಸಮಾಜ ದೊಡ್ಡದಾಗುತ್ತದೆ. ಹೀಗಾಗಿ ಶರಣರ `ಸತಿ-ಪತಿ’ ಭಾವದ ಅರ್ಥವನ್ನು ಮನೋವೈಜ್ಞಾನಿಕ ನೆಲೆಯಲ್ಲಿ, ಸಮಾಜೋ ಧಾರ್ಮಿಕ ಚೌಕಟ್ಟಿನಲ್ಲಿ ವಿಸ್ತರಿಸಿಕೊಳ್ಳಬಹುದಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಕಾಯಕ ನಿಷ್ಠೆ
ಅರಿವು-ಆಚಾರ
ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...