ಸಾವನದುರ್ಗದ ನೆತ್ತಿಯ ಮೇಲೆ…

Date: 19-08-2022

Location: ಬೆಂಗಳೂರು


“ಬೆಟ್ಟದ ತುತ್ತ ತುದಿಗೆ ತಲುಪಿದಾಗ ಮನಸ್ಸು ಸಾರ್ಥಕ ಭಾವ ತುಂಬಿಕೊಂಡು ನಗುತ್ತಿತ್ತು. ಬೆಟ್ಟದ ಸುತ್ತಮುತ್ತಲಿನ ವಾತಾವರಣ ಮತ್ತು ಬೆಟ್ಟದ ದುರ್ಗಮ ಅಂಚು ಹಾಗೂ ಕೆಳಗಿನ ಕಂದರ ಪಾತಾಳ ಎಲ್ಲವೂ ಜಾಗೃತ ಮನಸ್ಸನೊಮ್ಮೆ ಆಗಾಗ ಎಚ್ಚರಿಸುತ್ತಿತ್ತು” ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಸಾವನದುರ್ಗ ಚಾರಣ ಕುರಿತು ಬರೆದಿದ್ದಾರೆ.

ಚುಮುಗುಡುವ ಚೂಪು ಚಳಿಯನ್ನೆ ಚುಚ್ಚಿಸಿಕೊಳ್ಳುತ್ತ ಬೈಕ್ ಏರಿದೆ. ಬೆಂಗಳೂರು, ತನ್ನ ನಸುಕಿನ ಕನಸುಗಳನ್ನು ಹಳದಿ ಬೀದಿ ದೀಪದ ಕೆಳಗೆ ಒಣಗಿಹಾಕಿ ನೇಸರನ ಹಾದಿ ಕಾಯುತ್ತಿತ್ತು. ಮಾಗಡಿ ರೋಡಿನ ಯಾವುದೊ ಒಂದು ಬ್ರಿಡ್ಜ್ ಮೇಲೆ ಬಂದು ನಿಂತಾಗ ಬೆಳಗಿನ ಆರುವರೆ. ನಮ್ಮ ಚಾರಣದ ಗೆಳೆಯರೆಲ್ಲಾ ತಮ್ಮ ತಮ್ಮ ಬೈಕ್ ಗಳ ಮೇಲೆ ಲಗೇಜುಗಳೊಂದಿಗೆ ಒಟ್ಟಾಗಿ ಸೇರಿ ಅಲ್ಲಿಂದ ಹೊರಟಾಗ ೭ ಗಂಟೆ. ಬೆಂಗಳೂರಿನ ಪಡುವಣದಲ್ಲಿರುವ ಮಾಗಡಿ ರಸ್ತೆಯ ಮಾರ್ಗವಾಗಿ ಹೊರಟರೆ... ಆಹಾ! ಆಗಷ್ಟೆ ಒಂದು ಕಾಂಕ್ರೀಟ್ ಜಗತ್ತಿನಿಂದ ಹೊರಬಿದ್ದು ಮಲೆನಾಡಿನ ಹಸಿರಿಗೆ ಕಾಲಿಟ್ಟ ಸಂಭ್ರಮ. ಒಂದಷ್ಟು ಚಳಿಭರಿತ ಮುಂಜಾವಿನಲಿ, ಎಡಬಲದ ಹಸಿರನ್ನೆ ಆಸ್ವಾದಿಸುತ್ತಾ ಪ್ರಫುಲ್ಲಗೊಳ್ಳುತ್ತಿರುವ ಮನಸ್ಸು ಹರಿಬಿಟ್ಟು ಸಣ್ಣ ಸ್ಪೀಡಿನೊಂದಿಗೆ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಏಕಶಿಲಾ ಬೆಟ್ಟಕ್ಕೆ ಹಾಜರಿ ಹಾಕುವ ಕೌತುಕದಲ್ಲಿ ಬೆಳಗೊಂದನ್ನು ಆರಂಭಿಸಿದ್ದೆವು.

ಸಾವನದುರ್ಗದ ಪಾದ ತಲುಪಿದಾಗ ಬೆಳಗಿನ ೯ ಗಂಟೆಯ ಆಸುಪಾಸು. ಬಿಸಿಲು ಏರಿ ಏರಿ ಬರುವ ಸಿಟ್ಟಿಗೆ ಮುಸುಕಿದ ಮಂಜು ಮುನಿಸಿ ಮಾಯವಾಗಿತ್ತು. ಒಟ್ಟಾಗಿ ಎಲ್ಲರೂ ಒಂದುಕಡೆ ಸೇರಿ ಸಣ್ಣ ಪರಿಚಯ ಮಾಡಿಕೊಂಡೆವು. ಹೊಸಬರೂ ಸಹ ಆತ್ಮೀಯರಾದರು. ಊಟ ಮಾಡಿ ಕೈ ತೊಳೆದು ಎಲ್ಲರೂ ಒಂದೊಂದು ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಕೈಗೆತ್ತಿಕೊಂಡು ಮೇಲೆ ಹೊರಟೆವು. ನಮ್ಮ ನಲವತ್ತು ಜನರ ಧ್ಯೇಯ ಅವತ್ತು ಪ್ಲಾಸ್ಟಿಕ್ ಕಸ ಮುಕ್ತ ಸಾವನದುರ್ಗ ಎಂಬುವುದಾಗಿತ್ತು. ಹಾಗಾಗಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಸೇರಿದ್ದೆವು. ಅಲ್ಲಲ್ಲಿ ಕಟ್ಟಲು ಒಂದಷ್ಟು ನಾಮಫಲಕಗಳನ್ನೂ ಸಹ ರೆಡಿ ಮಾಡಿಕೊಂಡು ಹೋಗಿದ್ದೆವು.

ಈಗ ಬೆಟ್ಟದ ಪಾದದಿಂದ ಮೇಲೆ ಹತ್ತಲು ಶುರುವಿಟ್ಟುಕೊಂಡೆವು. ಬೆಟ್ಟದ ಮೇಲೆ ಕೋಟೆ ಇದೆ. ದೇವಸ್ಥಾನ ಇದೆ. ಗುಹೆಗಳೂ ಸಹ ಇವೆ ಅಂತ ಒಂದೊಂದೆ ಇತಿಹಾಸದ ಸುರುಳಿ ಬಿಚ್ಚಿಕೊಳ್ಳುತ್ತ ಗೆಳೆಯನೊಬ್ಬ ಜೊತೆಯಾದ‌. ಬೆಟ್ಟ ತುಂಬಾ ಭಯಂಕರ ಅನುಭವವನ್ನು ಹಾಸಿ ಮಲಗಿತ್ತು. ಅದನ್ನೇರುವ ಸಾಹಸ ಮಾಡುವುದೆಂದರೆ ವಿಚಿತ್ರ ಹುಚ್ಚು ಅಂತ ಒಳಗೊಳಗೆ ಮನಸ್ಸು ತಿವಿಯುತ್ತಲೆ ಇತ್ತು. ಬೆಟ್ಟದ ಮೈ ಮಡಚಿಕೊಂಡ ಇಕ್ಕೆಲಗಳ ಎದೆ ಏರಿ ಸಣ್ಣ ಸಣ್ಣ ಹೆಜ್ಜೆಗಳನ್ನೆ ಸಾಗುಹಾಕುತ್ತ ಕೋಟೆಯ ಮೊದಲ ಬಾಗಿಲು ಬಡೆಯುವಷ್ಟರಲ್ಲೆ ಕೈಕಾಲು ಮೈ ಎಲ್ಲವೂ ಭಯದ ಬೆವರಲ್ಲಿ ಬೆವೆತು ಹೋಗಿತ್ತು. ಒಂದಷ್ಟು ಹೊತ್ತು ಅಲ್ಲೆ ವಿಶ್ರಾಂತಿ ಪಡೆಯುತ್ತಾ ಗೆಳೆಯ ಹೇಳುವ ಕಥೆಗೆ ಕಿವಿಯಾದೆ.

ಸಾವನದುರ್ಗವು ಸ್ಥಳೀಯವಾಗಿ ಕರಿಗುಡ್ಡ (ಕಪ್ಪು ಬೆಟ್ಟ) ಮತ್ತು ಬಿಳಿಗುಡ್ಡ (ಬಿಳಿ ಬೆಟ್ಟ) ಎಂಬ ಹೆಸರು ಹೊಂದಿರುವ ಎರಡು ಬೆಟ್ಟಗಳಿಂದ ಪ್ರಚಲಿತವಾಗಿ ಹೆಸರುವಾಸಿಯಾಗಿದೆ. ಈ ಬೆಟ್ಟದ ಹೆಸರಿನ ಆರಂಭದ ದಾಖಲೆಯು ಕ್ರಿ.ಶ. 1340 ರಲ್ಲಿ ಮಾಡಬಲುವಿನ ಹೊಯ್ಸಳ ಮೂರನೆ ಬಲ್ಲಾಳನ ಅವಧಿಯಲ್ಲಿ ಕಂಡುಬಂದಿದೆ, ಇಲ್ಲಿ ಇದನ್ನು ಸಾವಂಡಿ ಎಂದು ಕರೆಯಲಾಗುತ್ತದೆ. ಈ ಹೆಸರು ಅಚ್ಯುತರಾಯನ ಅಧೀನದ ಮಾಗಡಿಯ ಗವರ್ನರ್ ಸಾಮಂತರಾಯನಿಗೆ ಸೇರಿದ್ದೆಂದು ಹೇಳಲಾದ ಸಾಮಂತದುರ್ಗದಿಂದ ಹುಟ್ಟಿಕೊಂಡಿದೆಯೆಂದು ಮತ್ತೊಂದು ಅವಲೋಕನವು ಸೂಚಿಸುತ್ತದೆ, ಆದರೂ ಇದನ್ನು ದೃಢೀಕರಿಸುವ ಯಾವುದೇ ಲಿಖಿತ ದಾಖಲೆಗಳಿಲ್ಲ.

ಇದು ಮಾಗಡಿ ರಾಜರ ಎರಡನೇ ರಾಜಧಾನಿಯಾಗಿತ್ತು. 1638 ರಿಂದ 1728 ರವರೆಗೆ, ಮೈಸೂರು ಈ ಸ್ಥಳವನ್ನು ವಶಪಡಿಸಿಕೊಂಡಿತು ಮತ್ತು ದಳವಾಯಿ ದೇವರಾಜರು ನೆಲಪಟ್ಟಣದಲ್ಲಿ ಅರಮನೆಯನ್ನು ನಿರ್ಮಿಸಿಕೊಂಡು ಈ ಸ್ಥಳದಲ್ಲಿ ವಾಸಿಸಿದರು. 1791 ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಮೂರನೇ ಆಂಗ್ಲೊ-ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಸೈನ್ಯದಿಂದ ಇದನ್ನು ವಶಪಡಿಸಿಕೊಂಡರು.

ರಾಬರ್ಟ್ ಹೋಮ್ ಆತನ ಸೆಲೆಕ್ಟ್ ವ್ಯೂವ್ಸ್ ಇನ್ ಮೈಸೂರಿ‌ನಲ್ಲಿ (೧೭೯೪) ಬೆಂಗಳೂರಿನಿಂದ ಬೆಟ್ಟದ ದೂರದ ದೃಶ್ಯಗಳನ್ನು ತೋರಿಸುತ್ತಾನೆ. ಆತ ಇದನ್ನು ಸಾವಿನದುರ್ಗ ಅಥವಾ ಫೋರ್ಟ್ ಆಫ್ ಡೆತ್ ಎಂದು ಕರೆದಿದ್ದಾನೆ.

ಇಷ್ಟುದ್ದದ ಇತಿಹಾಸವನ್ನು ಅವನು ಸುರುಳಿ ಸುರುಳಿಯಾಗಿ ಬಿಚ್ಚುತ್ತಿರುವಾಗಲೆ ನಮ್ಮ ಗಾರ್ಬೇಜ್ ಚೀಲ ಪ್ಲಾಸ್ಟಿಕ್ ಕಸವನ್ನು ತನ್ನೊಡಲೊಳಗೆ ತುಂಬಿಕೊಳ್ಳುತ್ತಿತ್ತು. ಸುಮಾರು ಜನ ಬೆಟ್ಟದ ಬುಡದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಬರುತ್ತಾರೆ. ಬಂದವರು ಈ ಬೆಟ್ಟದ ಮೇಲಿನ ಕೋಟೆಯ ಮೊದಲ ಬಾಗಿಲಿನವರೆಗಾದರೂ ಹತ್ತುವ ಪ್ರಯತ್ನ ಮಾಡುತ್ತಾರೆ. ಬಂದವರು ತಿಂದು ಬಿಸಾಡುವ ಪ್ಲಾಸ್ಟಿಕ್‌ಗಳು ಪ್ರಕೃತಿಯ ಮೇಲೆ ಬೀರುವ ಪರಿಣಾಮವನ್ನು ಯಾವತ್ತಿಗೂ ಸಹ ಬೀಸಾಡಿದವರು ಅವಲೋಕಿಸುವುದಿಲ್ಲ. ಜಗತ್ತಿನ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂಬ ಹೆಗ್ಗಳಿಕೆಯನ್ನು ಪ್ರಕೃತಿ ತಾನಾಗೆ ಒಪ್ಪಿಸಿದ್ದರೂ ಸಹ ಪ್ರವಾಸೋದ್ಯಮ ಇಲಾಖೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಂತೆ ಸ್ಥಳೀಯ ಚಟುವಟಿಕೆಗಳ ಮೇಲೆ ನಿಗಾ ವಹಿಸದೆ ನಿರ್ಲಕ್ಷ್ಯದೆಡೆಗೆ ಮಗ್ಗಲು ಬದಲಾಯಿಸಿ ಮಲಗಿದೆ.

ಬೆಟ್ಟದ ಮೇಲಿನ ಕೋಟೆಯ ಎರಡನೆ ಬಾಗಿಲಿನವರೆಗೂ ನಮ್ಮ ಪ್ಲಾಸ್ಟಿಕ್ ಆಯ್ದು ತುಂಬಿಕೊಳ್ಳುವ ಪ್ರಯಾಣ ಚಾಲ್ತಿಯಲ್ಲೆ ಇತ್ತು. ಅಲ್ಲಿಗೆ ಒಂದು ಚೀಲ ತುಂಬಿದ್ದಕ್ಕೆ ಆ ಚೀಲ ಅಲ್ಲೆ ಇಟ್ಟು ನಮ್ಮ ಚಾರಣ ಶುರು ಮಾಡಿದೆವು. ಈ ಹಾದಿ ಕತ್ತಿಯಂಚಿನ ದಾರಿಯಂತೆ ದುರ್ಗಮವಾಯಿತು. ಕೈಕಾಲುಗಳೆಲ್ಲಾ ಬೆವತುಹೋದವು. ಒಂದು ದೀರ್ಘ ದುರ್ಗಮವಾದ ಹಾದಿ ಕ್ರಮಿಸಿದ ನಂತರ ಒಂದಷ್ಟು ಹಸಿರು ಎದುರಾಯಿತು‌. ಎದೆ ಎತ್ತರದ ಬೆಟ್ಟವನ್ನು ಉಸಿರು ಬಿಗಿ ಹಿಡಿದು ಏರುತ್ತಲೆ ಆ ಹಸಿರು ತಲುಪಿದಾಗ ಅಲ್ಲಿ ಒಂದು ಪಾಳುಬಿದ್ದ ದೇವಾಲಯ ಮತ್ತು ಸುತ್ತ ಮುತ್ತಲೂ ಹಾಸಿ ಮಲಗಿದ ಮಟ್ಟಸ ಬೆಟ್ಟ. ದೇವಾಲಯದ ಎದುರು ನಿಸರ್ಗ ನಿರ್ಮಿತ ಮಳೆನೀರು ಶೇಖರಣದ ಎರಡು ದೊಡ್ಡ ಹುಂಡಿಗಳು. ಇಲ್ಲಿಂದ ಇಡೀ ಸುತ್ತಮುತ್ತಲಿನ ದೂರದೂರದ ಬೆಟ್ಟ ಗುಡ್ಡಗಳು, ಊರುಗಳು, ಬೆಟ್ಟದ ಪಾದದಲ್ಲಿರುವ ದೇವಾಲಯಗಳು, ದೂರದ ಕಂದರಗಳು ಜೊತೆಗೆ ಬೆಟ್ಟದ ಹತ್ತಿರವಿರುವ ಅರ್ಕಾವತಿ ನದಿಯ ತಿಪ್ಪಗೊಂಡನಹಳ್ಳಿ ಜಲಾಶಯ ಎಲ್ಲವೂ ರಮ್ಯ ರಮಣೀಯವಾಗಿ ಕಾಣುತ್ತಿದ್ದವು. ಎಲ್ಲವನ್ನೂ ಜೋಡುಗಣ್ಣು ಬಿಚ್ಚಿ ಮೈಮನಸ್ಸು ಹರವಿ ನೋಡುತ್ತಾ ಒಂದರೆಕ್ಷಣ ಮೈ ಮರೆತು ಹೋಗಿಬಿಟ್ಟೆ.!

ಈಗ ಮತ್ತೆ ಇಲ್ಲಿಂದ ಬೆಟ್ಟದ ತುದಿಯಲ್ಲಿರುವ ನಂದಿ ದೇವಾಲಯದೆಡೆಗೆ ಚಾರಣ ಶುರು ಮಾಡಿದೆವು. ಈಗ ಒಂದಷ್ಟು ಬೆಚ್ಚನೆಯ ಮತ್ತು ತಣ್ಣನೆಯ ಗುಹೆಗಳು ಎದುರುಗೊಂಡವು. ಅಲ್ಲೊಂದಿಷ್ಟು ಪ್ಲಾಸ್ಟಿಕ್ ಆಯ್ದು ಗುಂಪೆ ಹಾಕಿ ಮೇಲೆ ಹತ್ತುತ್ತಾ ಹೋದೆವು. ಈ ಬೆಟ್ಟದ ಮೇಲೆ ಮತ್ತು ಆಸುಪಾಸಿನಲ್ಲಿ ಒಟ್ಟು ೧೧೯ ಜಾತಿಯ ಪೊದೆ ಸಸ್ಯ ಸಂಪತ್ತು ಹೊಂದಿದೆ ಎಂದು ಒಂದು ದಾಖಲೆ ಪ್ರಕಾರ ರುಜುವಾತಾಗಿದೆ. ಎಷ್ಟು ಚೆಂದದ ಹೂವುಗಳನ್ನು ಅರಳಿಸುವ ಮರಗಳನ್ನು ಈ ಕಲ್ಲು ಬೆಟ್ಟ ತನ್ನ ಎದೆಯಲ್ಲಿರಿಸಿಕೊಂಡಿದೆ ಎಂದರೆ ಸುಮಾರು ಹೊತ್ತು ಅವನ್ನೆ ನೋಡಿಕೊಳ್ಳುತ್ತಾ ಕುಳಿತುಬಿಡಬೇಕೆನಿಸಿಬಿಡುತ್ತೆ!

ಬೆಟ್ಟದ ತುತ್ತ ತುದಿಗೆ ತಲುಪಿದಾಗ ಮನಸ್ಸು ಸಾರ್ಥಕ ಭಾವ ತುಂಬಿಕೊಂಡು ನಗುತ್ತಿತ್ತು. ಬೆಟ್ಟದ ಸುತ್ತಮುತ್ತಲಿನ ವಾತಾವರಣ ಮತ್ತು ಬೆಟ್ಟದ ದುರ್ಗಮ ಅಂಚು ಹಾಗೂ ಕೆಳಗಿನ ಕಂದರ ಪಾತಾಳ ಎಲ್ಲವೂ ಜಾಗೃತ ಮನಸ್ಸನೊಮ್ಮೆ ಆಗಾಗ ಎಚ್ಚರಿಸುತ್ತಿತ್ತು. ಸ್ವಲ್ಪ ಹೊತ್ತು ಅಲ್ಲೇ ಕಾಲ ಕಳೆದು ಕೆಳಗಿಳಿಯಲು ಶುರುಮಾಡಿದೆವು. ಆಗಲೆ ನೋಡಿ ಹೋಗಿದ್ದ ಪಾಳು ಬಿದ್ದಿರುವ ದೇವಾಲಯದ ಎದುರು ಕೂತು ಎಲ್ಲರೂ ಊಟ ಮುಗಿಸಿದೆವು. ಅಲ್ಲಿ ಹದ್ದುಗಳ ಓಡಾಟ ಜಾಸ್ತಿ ಆಗಿತ್ತು. ತುಂಬಾ ಕ್ಲಿಯರ್ ಆಗಿ ನಾವು ಹದ್ದಿನ ಚಲನವಲನಗಳನ್ನು ಬೆಟ್ಟದ ಈ ಸ್ಥಳದಿಂದ ನೋಡಬಹುದು. ಭರ್ತಿ ಊಟದ ನಂತರ ಅಲ್ಲಲ್ಲಿ ಪ್ಲಾಸ್ಟಿಕ್ ಕಸ ತುಂಬಿಸಿಟ್ಟ ಭರ್ತಿ ಚೀಲಗಳನ್ನು ನಾಜೂಕಾಗಿ ಅಲ್ಲಿಂದ ಕೆಳಗೆ ತಳ್ಳಿಕೊಂಡು, ಎತ್ತಿಕೊಂಡು ಒಂದೊಂದು ಕಡೆ ಉರುಳಿಸಿಕೊಳ್ಳುತ್ತಾ ಕೆಳಗಿಳಿದು ಬಂದೆವು.

ಪೂರ್ತಿ ಕೆಳಗಿಳಿದಾಗ ಸಂಜೆ ನಾಲ್ಕುವರೆ ಸಮಯ. ಒಟ್ಟು ೪೦ ರಿಂದ ೫೦ ಚೀಲಗಳನ್ನು ಒಟ್ಟುಗೂಡಿಸಿದೆವು. ಒಂದು ಚೀಲ ೧೦ ರಿಂದ ೧೫ ಕೆಜಿ ತೂಕ ತೂಗಿದರೂ ಸಹ ಒಟ್ಟು ೫೦೦ ಕೆಜಿಯಷ್ಟು ಪ್ಲಾಸ್ಟಿಕ್ ಅನ್ನು ನಾವು ಮುಕ್ತಗೊಳಿಸಿದ್ದೇವೆ ಎನ್ನುವ ಸಮಾಧಾನ ಇತ್ತು. ಇದು ಸಾವನದುರ್ಗದ ಒಂದು ದಿನದಲ್ಲಿ ನಮಗಾದಷ್ಟು ಮಟ್ಟಿಗೆ ಮಾಡಿದ ಕೆಲಸ ಅಷ್ಟೆ. ಇನ್ನೂ ವಾರಕ್ಕಾಗುವಷ್ಟು ಭರ್ತಿ ಕಸವನ್ನು ನಮ್ಮ ಪೀಳಿಗೆ ಅಲ್ಲಿ ಪೇರಿಸಿಟ್ಟಿದ್ದು ದುರಂತ. ಆ ಇಡೀ ಕಸವನ್ನು ನೀವೆ ಮಾರಿಕೊಳ್ಳಬಹುದು ಅಂತ ಬೆಟ್ಟದ ಬಾಗಿಲಿನ ಹತ್ತಿರದ ಗೂಡಂಗಡಿಯವನಿಗೆ ವರ್ಗಾಯಿಸಿ. ಅಲ್ಲಿಂದ ನಾವುಗಳೆಲ್ಲಾ ಬೆಂಗಳೂರಿನೆಡೆಗೆ ಪಯಣ ಶುರುಮಾಡಿದೆವು. ಬೆನ್ನ ಹಿಂದೆ ನೇಸರ ಬೆನ್ನುತಟ್ಟಿದಂತೆ ಭಾಸವಾಗಿ ಒಂದಷ್ಟು ಹೊತ್ತು ನಿಂತು ಸೂರ್ಯಾಸ್ತ ಆಗುವವರೆಗೂ ಬೆಟ್ಟದಂಚನ್ನೆ ನೋಡುತ್ತಾ ಕಾಲಹರಣ ಮಾಡಿದೆವು. ಸಂಜೆ ಸೂರ್ಯ ಸರಿದಾಗ ಮತ್ತೆ ಚಳಿ ಒಕ್ಕರಸಿಕೊಂಡು ಬಂತು. ಮತ್ತದೆ ಹಸಿರು ಮಂಜು ಎದುರುಗೊಳ್ಳುತ್ತಾ ಬೆಂಗಳೂರಿಗೆ ದಾರಿ ತೋರಿಸುವಾಗ ಸಾವನದುರ್ಗದಿಂದ ನಮ್ಮ ಬೈಕಿನ ಚಕ್ರಗಳು ಬಹಳ ದೂರ ಬಂದುಬಿಟ್ಟಿದ್ದವು.

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...