“ಸಾವನ್ನು ಮರೆತು ಜೀವಿಸಬೇಕು ಆದರೆ ಸಾವಿನ ಎಚ್ಚರವಿರಬೇಕು”: ಜ್ಹೋರ್ಬಾ

Date: 05-10-2021

Location: ಬೆಂಗಳೂರು


‘ಕರೊನಾದಂತಹ ವೈರಸ್‍ಗಳು ಕೊಡುವ ಮಾನಸಿಕ ಖಿನ್ನತೆಯಿಂದ ಹೊರಬರಲು ಜ್ಹೋರ್ಬಾ ಹೇಳುವಂತೆ, “ಸಾವನ್ನು ಮರೆತು ಜೀವಿಸಬೇಕು ಆದರೆ ಸಾವಿನ ಎಚ್ಚರವಿರಬೇಕು” ಎಂಬಂತಹ ಚೂರು ಹುಚ್ಚುತನವೂ ಭಂಡ ಧೈರ್ಯವೂ ನಮಗೆ ಬೇಕು’ ಎನ್ನುತ್ತಾರೆ ಲೇಖಕ ಕನಕರಾಜ್ ಆರನಕಟ್ಟೆ. ಅವರ ‘ಕಡಲ್ಗುದುರೆ’ ಅಂಕಣದಲ್ಲಿ ‘ನಿಕೊಸ್ ಕಜ್ಹಂತಜ್ಹಕಿಸ್ ರ “ಜ್ಹೋರ್ಬಾ, ದಿ ಗ್ರೀಕ್.”ಕಾದಂಬರಿಯ ಕುರಿತು ವಿಶ್ಲೇಸಿದ್ದಾರೆ.

ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ನರಮನುಷ್ಯರನ್ನು ನರಳಿಸುತ್ತಿರುವ ಕೋವಿಡ್‍ನ ಈ ಸಂದರ್ಭದಲ್ಲಿ ಬದುಕಿನ ಬಗ್ಗೆ ನಂಬಿಕೆ ಉಳಿಸಿಕೊಳ್ಳುವುದೇ ದುಸ್ತರವಾಗಿ ಕಾಣುತ್ತಿದೆ. ಮನುಷ್ಯನ ದೇಹವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬಯಸುವ ಪ್ರಭುತ್ವಗಳಂತೂ ಕರೊನಾದ ಮೂಲಕ ಮನುಷ್ಯರ ಅಸ್ತಿತ್ವವನ್ನೇ ತಮ್ಮ ಬೆರಳತುದಿಗಳಲ್ಲಿಟ್ಟುಕೊಂಡಿರುವುದು ಈ ಶತಮಾನದ ಬಹುದೊಡ್ಡ ದುರಂತವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಕೋವಿಡ್‍ನ ಕಾರಣದಿಂದಾಗಿ ಪ್ರಭುತ್ವ ಬಯಸುವ ಶಿಸ್ತು, ಆಜ್ಞೆಗಳು ಮನುಷ್ಯ ಬದುಕಿನ ಸಹಜ ಅಂಗವಾಗಿ ಮಾರ್ಪಟ್ಟು ಸ್ವಾತಂತ್ರ್ಯ, ಸ್ವಚ್ಛಂದತೆಗಳು ಅವ್ಯವಸ್ಥಿತೆಯ ರೂಪಕಗಳಾಗುವುದರ ಮುಖೇನ ಪ್ರಭುತ್ವ, ಧರ್ಮ, ರಾಜಕೀಯ ಸಿದ್ಧಾಂತ ಮುಂತಾದ ಸಾಂಸ್ಥೀಕರಣಗೊಂಡ ಅಧಿಕಾರದ ನೆಲೆಗಳು ವಿಶ್ವವಿಡೀ ಮತ್ತಷ್ಟು ಗಟ್ಟಿಯಾಗುತ್ತಿವೆ ಎಂದೇ ಹೇಳಬಹುದೇನೊ. ಸ್ವಾತಂತ್ರ್ಯ ಎಂಬ ಮನುಷ್ಯರ ಮೂಲಭೂತ ಗುಣವನ್ನೇ ಅಳಿಸಿಹಾಕುವ ಕೋವಿಡ್‍ನ ಈ ಸುನಾಮಿಯ ಸಂದರ್ಭದಲ್ಲಿ ಜೀವರಸವಾಗಿ ನನಗೆ ಕಾಣುವುದು 1946ರಲ್ಲಿ ಪ್ರಕಟವಾದ (ನಂತರ 1964ರಲ್ಲಿ ಸಿನಿಮಾ ಆದ), ಇಂದಿಗೂ ಯುರೋಪ್ ಅಮೆರಿಕಾಗಳಲ್ಲಿ ಕೆಲವರಿಂದ ಕೊಂಡಾಡಲ್ಪಡುತ್ತಿರುವ ಗ್ರೀಕ್ ಕಾದಂಬರಿ “ಜ್ಹೋರ್ಬಾ, ದಿ ಗ್ರೀಕ್.”

ಇಂದಿನ ಕೋವಿಡ್ ಖಿನ್ನತೆಯಿಂದ ಹೊರಬರಲು ಬಹುಶಃ ಜಗತ್ತಿನ ಹತ್ತಾರು ಕಡೆ ಸಾಹಿತ್ಯಾಸಕ್ತರು/ಸಿನಿಮಾಸಕ್ತರು ಜ್ಹೋರ್ಬಾನ ಆಸರೆ ಪಡೆದಿರಲೂಬಹುದು. ಸಮಾಜ ಬಯಸುವ ಶಿಸ್ತುಬದ್ಧ ಜೀವನ ಕೊನೆಗೆ ವ್ಯಾಕುಲತೆಯನ್ನು ಮಾತ್ರ ಮನುಷ್ಯರಿಗೆ ತರಬಲ್ಲದು ಎಂದು ಮನಸ್ಸು ಬಯಸಿದಂತೆ ಬದುಕಿದ, ವಿಶ್ವ ಸಾಹಿತ್ಯ ಎಂದೂ ಮರೆಯದ ಕಥಾಪಾತ್ರವನ್ನು ನಮಗೆ ನೀಡಿದ ಆಧುನಿಕ ಗ್ರೀಕ್ ಸಾಹಿತ್ಯದ ಮೇರು ಬರಹಗಾರ ನಿಕೊಸ್ ಕಜ್ಹಂತಜ್ಹಕಿಸ್ ನಾಲ್ಕು ಸಾವಿರ ವರ್ಷಗಳಿಂದ ಇಂದಿನವರೆವಿಗೂ ನಮ್ಮ ನಡುವೆ ಚರ್ಚೆಯಲ್ಲಿರುವ ಮನುಷ್ಯರ ಅಸ್ತಿತ್ವದ ಕುರಿತಾದ ಎರಡು ವಿರುದ್ಧ ನೆಲೆಗಳನ್ನು ಇಲ್ಲಿ ಚರ್ಚಿಸಿದ್ದಾನೆ.

ಸಾಕ್ರೆಟಿಸ್‍ನ ವೈಚಾರಿಕ ಸಿದ್ಧಾಂತ ಪ್ಲೇಟೊ ಮತ್ತು ಅರಿಸ್ಟಾಟಲರ ಮೂಲಕ ಇಂದಿನವರೆವಿಗೂ ತನ್ನ ಯಜಮಾನ್ಯವನ್ನು ಸಾಧಿಸಿದ್ದರೆ ಅರಿಸ್ಟೊಪಸ್ ಎಂಬ ಮತ್ತೊಬ್ಬ ಗ್ರೀಕ್ ತತ್ವಜ್ಞಾನಿಯ ಅನುಭವ ಕೇಂದ್ರಿತ ಸಿದ್ಧಾಂತ ಮೂಲೆಗುಂಪು ಮಾಡಲ್ಪಟ್ಟಿದೆ ಎಂದೇ ಹೇಳಬಹುದು. ಸಾಕ್ರೆಟಿಸ್ ಹೇಳುವ ವಿಚಾರಗಳಿಗೆ ಎದಿರು ನಿಂತು ಅರಿಸ್ಟೊಪಸ್ ಸಂತೋಷ, ಖುಷಿಗಳೇ ಮನುಷ್ಯರಿಗೆ ಉನ್ನತ ಜ್ಞಾನಗಳನ್ನು ನೀಡುತ್ತವೆ ಎಂದು ವಾದಿಸಿ ಹೊಸ ಜ್ಞಾನಶಾಖೆಯನ್ನೇ ಹುಟ್ಟುಹಾಕಿದ. ನಂತರದ ದಿನಗಳಲ್ಲಿ ಪ್ಲೇಟೊ ಅರಿಸ್ಟಾಟಲರ ಸಾಂಸ್ಥಿಕ ತತ್ವಜ್ಞಾನವೇ ಮುನ್ನೆಲೆಗೆ ಬಂದು ಡೆಮಕ್ರಟಿಸ್‍ನ ಮೂಲಕ ಅರಳಿದ ಅನುಭವ, ಸಂತೋಷ, ಉತ್ಸಾಹಗಳನ್ನಾಧರಿಸಿದ “ಹೆಡೊನಿಸ್ಟ್ ಸಿದ್ಧಾಂತ” ಕ್ರಮೇಣ ಮಹತ್ವ ಕಳೆದುಕೊಳ್ಳುತ್ತಿತ್ತು. ಕ್ರಿಸ್ತನ ನಂತರ ಇಡೀ ಜಗತ್ತೇ ಪ್ಲೇಟೊವಿನ “ಮಾದರಿ ರಾಜ್ಯ”ಗಳಾಗಲೇ ಬಯಸಿದ್ದರಿಂದ ಮತ್ತು ಹೆಡೊನಿಸಮ್ ವ್ಯಕ್ತಿಯೋರ್ವನನ್ನು ಸರ್ವ ಸ್ವತಂತ್ರಗೊಳಿಸುವ ಕಾರಣಕ್ಕೆ ಪ್ರಭುತ್ವಗಳೆಲ್ಲವೂ ಆದರ್ಶ ರಾಜ್ಯದ ಹೆಸರಲ್ಲಿ ಅರಿಸ್ಟೋಪಸ್‍ನ ಈ ಸಿದ್ಧಾಂತವನ್ನು ಮೂಲೆಗುಂಪು ಮಾಡಲೇ ಪ್ರಯತ್ನಿಸಿದವು. ಆದರೂ ಹೆಡೊನಿಸಮ್ ಜಗತ್ತಿನ ಬಹುತೇಖ ಸಂಸ್ಕೃತಿಗಳಲ್ಲಿ ಇಂದಿಗೂ ಹಾಸುಹೊಕ್ಕಾಗಿದೆ. ಕ್ರಿಸ್ತ ಪೂರ್ವ ನಾಲ್ಕನೇ ಶತಮಾನದಲ್ಲಿ ಅರಳಿದ ಈ ಅನುಭವವನ್ನಾಧರಿಸಿದ “ರಸವಾದ”ದ ತಿರುಳನ್ನೇ ನಿಕೊಸ್ ಕಜ್ಹಂತಜ್ಹಕಿಸ್ 1946ರಲ್ಲಿ ಎರಡು ವಿಶ್ವಯುದ್ಧಗಳು ನಡೆದುಹೋದ ಸಮಯದಲ್ಲಿ ಬರೆದಿದ್ದು. ಫ್ರೆಂಚ್‍ಗೆ ಅನುವಾದಗೊಂಡು ನಂತರ ಇಂಗ್ಲಿಷಿಗೆ ಹೋದ ಈ ಕಾದಂಬರಿ ಬಹು ಜನಪ್ರಿಯಗೊಂಡು 1964ರಲ್ಲಿ ಹಾಲಿವುಡ್‍ನ ಸಿನಿಮಾವಾಗಿ ಹೊರಹೊಮ್ಮಿ ಜಗತ್ತಿನ

ನೂರಾರು ಸಿನಿಮಾಗಳಿಗೆ ಸ್ಫೂರ್ತಿಯಾಯಿತು. ಹಾಲಿವುಡ್‍ನ ಶ್ರೇಷ್ಠ ನಟರುಗಳಲ್ಲೊಬ್ಬನಾದ ಆಂಟನಿ ಕ್ವಿನ್ ಈ ಸಿನಿಮಾದಲ್ಲಿ ಪಾತ್ರವಾಗಿಯೇ ಬದುಕಿದ ಜ್ಹೋರ್ಬಾ ಎಂಬ ಜೀವನೋತ್ಸಾಹದ ಬುಗ್ಗೆಯನ್ನು ನಮ್ಮ ಮುಂದೆ ಚಿಮ್ಮಿಸಿದ್ದಾನೆ. ಇಲ್ಲಿ ಬರುವ ಎರಡು ಮುಖ್ಯ ಪಾತ್ರಗಳು ಗ್ರೀಕ್ ಸಂಸ್ಕೃತಿಯ ಎರಡು ಮುಖ್ಯಧಾರೆಗಳಾದ “ಅಪೊಲೊ” ಮತ್ತು “ಡೈಯನೊಸಿಸ್” ಸಿದ್ಧಾಂತಗಳನ್ನು ಪ್ರತಿನಿಧಿಸುತ್ತವೆ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ.

ಪುರಾತನ ಗ್ರೀಕ್ ಸಂಸ್ಕೃತಿಯ ಎರಡು ಭಿನ್ನ ದೈವಗಳಾದ ಅಪೊಲೊ ಮತ್ತು ಡೈಯನೊಸಿಸ್‍ಗಳು ಮನುಜಕುಲದ ಬಗೆಗಿನ ಎರಡು ವಿಭಿನ್ನ ಜೀವನದೃಷ್ಠಿಗಳನ್ನು ಪ್ರತಿನಿಧಿಸುತ್ತವೆ. ಜ್ಞಾನ-ವಿಚಾರ, ಶಿಸ್ತು- ವ್ಯವಸ್ಥೆಗಳ ರೂಪಕವಾಗಿ ಅಪೊಲೊ ದೇವನಿದ್ದರೆ ಅದಕ್ಕೆ ತದ್ವಿರುದ್ಧವಾಗಿ ಸಂತೋಷ, ಕಾಮನೆ, ಸ್ವಾತಂತ್ರ್ಯಗಳ ರೂಪಕವಾಗಿ ಡೈಯನೊಸಿಸ್ ಇದ್ದಾನೆ. ಈ ಎರಡು ದೈವಗಳನ್ನಾಧರಿಸಿಯೇ ಗ್ರೀಕ್ ತತ್ವಜ್ಞಾನ ಬೆಳೆದಿದೆ ಎನ್ನಬಹುದು. ಮಾನವನ ಹುಟ್ಟನ್ನು ನಿಯಮ, ಶಿಸ್ತು, ನೈತಿಕತೆಗಳ ಮೂಲಕ ನಾಗರೀಕಗೊಳಿಸುವುದೇ ಅಪೊಲೊ ಆಧರಿತ ಜ್ಞಾನಶಾಖೆಗಳ (ಮುಖ್ಯವಾಗಿ ಧರ್ಮ/ರಾಜಕೀಯ ಸಿದ್ಧಾಂತಗಳ) ಉದ್ದೇಶವಾಗಿದ್ದರೆ ಡೈಯನೊಸಿಸ್ ಆರಾಧಕರು ದುಃಖ ಮತ್ತು ಸಂತೋಷಗಳು ಮಾತ್ರ ಮನುಷ್ಯನ ಅಸ್ಮಿತೆಯನ್ನು ನಿರ್ಧರಿಸುವವು ಮತ್ತು ಮನುಷ್ಯ ಬದುಕಿನ ಏಕಮಾತ್ರ ಉದ್ದೇಶ ಸಂತೋಷವೇ ಆಗಿರುವುದರಿಂದ ದೈಹಿಕ ವಾಂಛೆಯನ್ನು ತೃಪ್ತಿಗೊಳಿಸುವುದೇ ಬದುಕು ಎನ್ನುತ್ತಾರೆ. ಮಾನವ ಲೋಕಕ್ಕೆ ಅತೀತವಾದ ಸ್ವರ್ಗ-ನರಕ, ನೀತಿ-ಅನೀತಿ, ಪಾಪ-ಪುಣ್ಯ ಎಂಬ ವಿಷಯಗಳು ಅಪೊಲೊಗರಿಗೆ ಮುಖ್ಯವಾದರೆ ಕಾಮ, ಹೆಂಡ, ದೈಹಿಕ ಶ್ರಮಗಳೆಂಬ ಲೌಕಿಕ ವಿಷಯಗಳೇ ಡೈಯನೊಸಿಸ್ಸರಿಗೆ ಮುಖ್ಯವಾಗುತ್ತದೆ. ಹೆಡೊಸ್ ಎನ್ನುವ ಗ್ರೀಕ್ ಪದದರ್ಥ “ಸಂತೋಷ”, ಹಾಗಾಗಿಯೇ ಈ ಡೈಯನೊಸಿಸ್ ಸಿದ್ಧಾಂತವನ್ನು ಹೆಡೊನಿಸಮ್ ಎಂದು ಕರೆಯಲಾಗುತ್ತದೆ. ಈ ಎರಡು ಭಿನ್ನ ನಿಲುವಿನ ತತ್ವಜ್ಞಾನಗಳನ್ನು ನಿಕೊಸ್ ಕಜ್ಹಂತಜ್ಹಕಿಸ್ ತನ್ನ ಕಾದಂಬರಿಯಲ್ಲಿ ನಿಕಷೆಗೊಡ್ಡಿ ಎರಡು ಮಹಾಯುದ್ಧಗಳು ಸಂಭವಿಸಿ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದ ಗಳಿಗೆಯಲ್ಲಿ ಪ್ಲೇಟೊ ಆಧರಿತ ಅಪೊಲೊ ಸಿದ್ಧಾಂತವನ್ನು ನಿರಾಕರಿಸಿ ಮನುಷ್ಯನ ಪೂರ್ಣ ಉನ್ನತಿಗೆ ಅರಿಸ್ಟೋಪಸ್‍ನ ಹೆಡೊನಿಸಮ್ ಸಿದ್ಧಾಂತವೇ ಸರಿಯಾದ ಮಾರ್ಗ ಎನ್ನುತ್ತಾನೆ. ಹಾಗಾಗಿಯೇ ಜ್ಹೋರ್ಬಾ ಎಂಬ ಹೆಡೊನಿಸ್ಟ್‍ನನ್ನೇ ನಿಜವಾದ ಗ್ರೀಕ್ ಎನ್ನುವ ಅರ್ಥದಲ್ಲಿ ಕಾದಂಬರಿಯ ಶೀರ್ಷಿಕೆಯನ್ನು ಕೊಡುತ್ತಾನೆ. ಆಂಟನಿ ಕ್ವಿನ್ ಎಂಬ ಮಹಾನ್ ಕಲಾವಿದ “ಜ್ಹೋರ್ಬಾ, ದಿ ಗ್ರೀಕ್” ಎನ್ನುವ ಹಾಲಿವುಡ್ ಸಿನಿಮಾದಲ್ಲಿ ಕಜ್ಹಂತಜ್ಹಕಿಸ್ ಜ್ಹೋರ್ಬಾನನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸಿ ಇಂದಿನ ನಮ್ಮ ಕೋವಿಡ್‍ನ ಖಿನ್ನತೆಯನ್ನೇ ಕ್ಷಣ ಮರೆಸುತ್ತಾನೆ.

ಮನುಷ್ಯ ಬದುಕುವುದೇ ನಾಲ್ಕೂ ಮತ್ತೊಂದು ದಿನ, ಸಾಯುವುದರೊಳಗೆ ಎಷ್ಟು ಸಾಧ್ಯವೋ ಅಷ್ಟು ಸಂತೋಷವಾಗಿ ಬದುಕಬೇಕು ಎಂಬುದನ್ನು ಸಹಜವಾಗಿ ಉಸಿರಾಡುವ ಜ್ಹೋರ್ಬಾ ಕಳೆದು ಹೋದ ನಿನ್ನೆಗಳ ಮತ್ತು ಬರಲಿರುವ ನಾಳೆಗಳ ಕುರಿತು ಮನುಷ್ಯ ಯೋಚಿಸುತ್ತಾ ಕೂರುವುದು ದಡ್ಡತನ ಎನ್ನುತ್ತಾನೆ. “ನಮ್ಮ ಕಣ್ಣೆದುರಿಗಿರುವ ಈ ಹೊತ್ತನ್ನು ಅನುಭವಿಸಬೇಕು, ಬಾಸ್” ಎಂದು ತನ್ನ ಹೊಸ ಗೆಳೆಯ ಸುಶಿಕ್ಷಿತ ಬ್ರಿಟಿಷ್ ಬರಹಗಾರನಿಗೆ ಹೇಳುತ್ತಾನೆ. ಮನಸ್ಸಿಗೆ ಸರಿಯೆನ್ನಿಸುವುದನ್ನು ಮತ್ತು ದೇಹ ಬಯಸುವುದನ್ನು ತಕ್ಷಣ ಮಾಡುತ್ತಾ ಬದುಕನ್ನು ಸಹ್ಯಗೊಳಿಸಿಕೊಳ್ಳಬೇಕೇ ವಿನಃ ಶಿಸ್ತು, ಸ್ವಚ್ಛತೆ, ನಿಯಮ ಎನ್ನುತ್ತಾ ಜೀವನವನ್ನು ಕಠಿಣಗೊಳಿಸಿಕೊಳ್ಳಬಾರದೆನ್ನುತ್ತಾನೆ. ಧಾರ್ಮಿಕವಾದಿ ಅಥವ ನಾಸ್ತಿಕ ಯಾರಾದರೂ ಸರಿಯೇ ಎಲ್ಲರ ದೇಹಗಳು ಕೊನೆಗೊಂದು ದಿನ ಗೆದ್ದಲಿಗೆ ಆಹಾರವಾಗುತ್ತವೆ; ಹೀಗಿರುವಾಗ ನೀನು ಗ್ರೀಕ್, ನಾನು ಬ್ರಿಟೀಶ್, ಅವನು ಟರ್ಕಿಶ್ ಎಂಬ ಅಸ್ತಿತ್ವಗಳೆಲ್ಲ ಯಾವ ಕಾರಣಕ್ಕೆ ಬಾಸ್ ಎಂದು ಜೋರು ನಗುವ ಹೊರಚೆಲ್ಲಿ ಗಡದ್ದಾಗಿ ಶರಾಬು ಸೇವಿಸಿ ಬೇಸರವಾದಾಗ ಅಥವ ಸಂತೋಷವಾದಾಗ ಮನಸ್ಸೋ ಇಚ್ಛೆ ಡ್ಯಾನ್ಸ್ ಮಾಡುತ್ತಾನೆ. ಬೆವರು ಸುರಿಯುವಷ್ಟು ಬೆಳಿಗ್ಗೆ ದೈಹಿಕ ಕೆಲಸ, ರಾತ್ರಿ ಪೂರ ಮನಸ್ಸು ದೇಹಗಳನ್ನು ಸಂತೋಷವಾಗಿಡಬಲ್ಲ ಕಾಮ ಮತ್ತು ಹೆಂಡ- ಇವೇ ಜ್ಹೋರ್ಬಾನ ಬದುಕಿನ ತಿರುಳು. ಇವೆಲ್ಲಕ್ಕಿಂತ ಮುಖ್ಯವಾಗಿ ಆತ ಕಷ್ಟ ಎಂದು ಬಂದವರಿಗೆ ಅಥವ ನೋವಿನಲ್ಲಿರುವವರಿಗೆ ಸಹಾಯ ಮಾಡಲು ಸದಾ ಮುನ್ನುಗ್ಗುತ್ತಿರುತ್ತಾನೆ. ಧರ್ಮ, ನೈತಿಕತೆ ಅಥವ ರಾಷ್ರ್ಟೀಯತೆಯ ಅಸ್ಮಿತೆಗಳು ಆತನಿಗೆ ನಗಣ್ಯ. ಭವಿಷ್ಯದ ಬಗ್ಗೆ ಯೋಚಿಸುತ್ತಾ ಈ ಹೊತ್ತನ್ನು ಅನುಭವಿಸದೇ ಬದುಕುವುದೊ ಅಥವ ನಿನ್ನೆಯ ಬಗೆಗಿನ ನೆನಪಲ್ಲೇ ಕೊರಗುತ್ತಾ ಕೂರುವುದೊ ಜ್ಹೋರ್ಬಾನಿಗೆ ಆಗದ ಕೆಲಸ. ಯಾವುದನ್ನೂ “ಪ್ಲಾನ್ಡ್” ಆಗಿ ಮಾಡದ, ಯೋಚಿಸಿದ ಆತನಿಗೆ ಆ ಕ್ಷಣ ಏನನ್ನಿಸುತ್ತದೆಯೋ ಅದೇ ಸತ್ಯ. ಅದನ್ನು ಪೂರ್ಣ ಮನಸ್ಸಿನಿಂದ ಯಾವುದೇ “ಗಿಲ್ಟ್” - ಅಪರಾಧೀ ಭಾವಗಳಿಂದ- ಕೊರಗದೇ ಕಾಲವನ್ನು ಎದುರುಗೊಳ್ಳುತ್ತಾ ಹೋಗುತ್ತಾನೆ. ಹೀಗೆ ಕಾಲಕ್ಕೆ ಸರಿಯಾಗಿ ಓಗೊಡುತ್ತಾ ಮನುಷ್ಯನ ದೇಹ ಮನಸ್ಸುಗಳನ್ನು ಖುಷಿಯಾಗಿರಿಸಿಕೊಳ್ಳುವುದರ ಮುಖೇನ ರೋಗ, ಮುಪ್ಪು, ಸಾವುಗಳನ್ನು ನಾವು ನೆಮ್ಮದಿಯಾಗಿ ದಾಟಬಹುದು ಎನ್ನುತ್ತಾನೆ. ಶಿಸ್ತು, ಸಂಯಮ, ಮೌನ ಮತ್ತು ಸ್ವಚ್ಛತೆಗಳ ಪ್ರತಿರೂಪನಾಗಿರುವ ಕಾದಂಬರಿಯ ನಿರೂಪಕ (ಬ್ರಿಟಿಶ್ ಬರಹಗಾರ) ಈ ಕಿಲಾಡಿ ಮುದುಕ ಜ್ಹೋರ್ಬಾನ ಸರಳ ಸಹಜತೆಗೆ ಮಾರು ಹೋಗುತ್ತಾನೆ. ಬುದ್ಧನ ಬಗೆಗೆ ಅಪರಿಮಿತ ಆಸಕ್ತಿ ಇಟ್ಟುಕೊಂಡಿರುವ ಆತ ಜ್ಹೋರ್ಬಾನ ವಿಶಿಷ್ಟ ಬುದ್ಧತ್ವವನ್ನು ನೋಡಿ ಅಚ್ಚರಿಗೊಳಗಾಗಿ ಕಥೆಯ/ಸಿನಿಮಾದ ಕೊನೆಯಲ್ಲಿ ಜ್ಹೋರ್ಬಾನೊಂದಿಗೆ ಡ್ಯಾನ್ಸ್ ಮಾಡುತ್ತಾ ಜ್ಹೋರ್ಬಾನಂತೆಯೇ ಬದುಕನ್ನು ಗಸಿಯವರೆಗೂ ಹೀರುವ, ಇಂಪಲ್ಸಿವ್ ಆಗಿ/ ತೀವ್ರವಾಗಿ, ಭಾವಾತ್ಮಕವಾಗಿ, ಉತ್ಕಟವಾಗಿ, ಸಹಜವಾಗಿ ಬದುಕುವುದೇ ಮನುಷ್ಯನಿಗೆ ಸೂಕ್ತವಾದ ಹಾದಿ ಎನ್ನುವ ತೀರ್ಮಾನಕ್ಕೆ ಬಂದಂತೆ ಕಾಣಿಸುತ್ತದೆ. ಸೋಲು ಗೆಲುವುಗಳ ಆಚೆ ನಿಂತು ಬದುಕನ್ನು ಅನುಭವಿಸಬೇಕು ಎಂಬ ಜ್ಹೋರ್ಬಾನ ಮನಸ್ಥಿತಿಯನ್ನು ಪೂರ್ಣವಾಗಿ ಸ್ವೀಕರಿಸಿದಂತೆಯೇ ಕಾಣುತ್ತದೆ.

ಮನುಷ್ಯನ ಮೂಲಗುಣದಿಂದ ಹೊರಗಿರುವ ನೈತಿಕತೆ, ಧರ್ಮ, ಕಾನೂನು ಕಟ್ಟಳೆಗಳು, ಮತ್ತು ರಾಜಕೀಯ ಸಿದ್ಧಾಂತಗಳು ಕೊನೆಗೊಂದು ದಿನ ವಿನಾಶದ ಅಂತ್ಯವನ್ನೇ ಕಾಣುತ್ತದೆಯಾದ್ದರಿಂದ ಮನುಷ್ಯ ತನ್ನೊಳಗಿನ ಸಹಜ “ಭಾವ”ಗಳಿಂದ ಮಾನವೀಯತೆಯನ್ನು ಕಂಡುಕೊಳ್ಳುವ ಅವಶ್ಯವಿದೆ ಎನ್ನುವ ಜರ್ಮನ್ ತತ್ವಜ್ಞಾನಿ ನೀಚೆಯ ಮಾತನ್ನೇ ಜ್ಹೋರ್ಬಾ ಇಲ್ಲಿ ಪ್ರತಿಧ್ವನಿಸುತ್ತಾನೆ. ಶೂನ್ಯ ಮನಸ್ಥಿತಿಯೇ ಮನುಷ್ಯನ ಉನ್ನತಿಗೆ ಸಹಕಾರಿಯಾಗಬಲ್ಲದು ಎಂಬ ಸಾಕ್ರೆಟಿಸ್‍ನಿಗಿಂತಲೂ ಹಿಂದಿನ ಗ್ರೀಕ್ ತತ್ವಜ್ಞಾನಿ ಹೆರಾಕ್ಲಟಸ್‍ನ ಆಧುನಿಕ ರೂಪವೇ ಜ್ಹೋರ್ಬಾ.

ಈ ಅಸಾಧಾರಣ, “ಅಸಭ್ಯ” ಜ್ಹೋರ್ಬಾ ಆಸ್ತಿಕ ನೈತಿಕವಾದಿಗಳಿಂದ ಮಾತ್ರವಲ್ಲದೆ ಮಾರ್ಕ್ಸ್ ವಾದಿ ಸ್ತ್ರೀವಾದಿಗಳಿಂದಲೂ ಕಠಿಣ ವಿಮರ್ಶೆಗೊಳಗಾಗಿದ್ದಾನೆ. ಅಂತೆಯೇ ಜಗತ್ತಿನ ಅದೆಷ್ಟೊ ಆಧುನಿಕ ಸಾಹಿತ್ಯ/ಸಿನಿಮಾಗಳಿಗೆ ಸ್ಫೂರ್ತಿ ನೀಡಿದ್ದಾನೆ. ನಮ್ಮ ಭಾರತದ ಸಿನಿಮಾಗಳಿಗೂ ಈ “ಜ್ಹೋರ್ಬಾ, ದಿ ಗ್ರೀಕ್” ದಶಕಗಳಿಂದ ಕಂಟೆಂಟ್ ಒದಗಿಸುತ್ತಲೇ ಇದ್ದಾನೆ. ನಮ್ಮ ಕನ್ನಡದ ಪುಟ್ಟಣ್ಣ ಕಣಗಲ್ ನಿರ್ದೇಶನದ “ನಾಗರಹಾವು” ಕೂಡ ಈ ವಸ್ತುವನ್ನು “ಭಾರತೀಯ”ಗೊಳಿಸಿದಂತೆಯೇ ನನಗೆ ಕಾಣುತ್ತದೆ. ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಹವಾ ನಿರ್ಮಿಸಿದ “ನಾಗರಹಾವು” ಚಲನಚಿತ್ರದಲ್ಲಿ ಈ “ಜ್ಹೋರ್ಬಾ, ದಿ ಗ್ರೀಕ್” ಸಿನಿಮಾದ ಹಿನ್ನೆಲೆ ಸಂಗೀತವನ್ನು ಎತ್ತಿಕೊಂಡು ಹಾಡಿನ ಟ್ಯೂನ್ ಆಗಿ ಬಳಸಿಕೊಳ್ಳಲಾಗಿದೆ. ಕನಿಷ್ಟ ಪಕ್ಷ ಸಂಗೀತದ ಕ್ರೆಡಿಟ್ ಕೂಡ ಕೊಡದ ಇಂತಹ ಹತ್ತಾರು ಭಾರತೀಯ ಸಿನಿಮಾಗಳಲ್ಲಿ ಜ್ಹೋರ್ಬಾ ಅಡಗಿ ಕುಳಿತಿದ್ದಾನೆ. ಇತ್ತೀಚಿಗಿನ ಅವನ ಇಂಡಿಯನ್ ವರ್ಷನ್ ಎಂದರೆ ಮಲೆಯಾಳಂನಲ್ಲಿ ಬಹು ಯಶಸ್ವಿಗೊಂಡ “ಚಾರ್ಲಿ” ಎಂಬ ಸಿನಿಮಾ. ಗ್ರೀಕ್‍ನ ಈ ಜ್ಹೋರ್ಬಾ ಚರ್ಚಿಸುವ ಅಂಶಗಳ ಹತ್ತಿರಕ್ಕೂ ನುಸುಳಲಾರದ ಭಾರತೀಯ ಮಿಡ್ಲ್‍ಕ್ಲಾಸ್ ಸಿನಿಮಾಗಳು ಮತ್ತದೇ ಮಾನವೀಯತೆ, ನೈತಿಕತೆ, ಧಾರ್ಮಿಕ ನಡತೆ ಎಂಬ ಕಿತ್ತು ಹೋದ ಕ್ಲೀಷೆಗಳನ್ನೇ ಹೊಸಹೊಸದಾಗಿ ಬಡಿಸುವುದು ನಾಚಿಕೆ ತರುವ ವಿಷಯ. ಈ ಹೆಡೊನಿಸ್ಟ್ ವಿಷಯಗಳನ್ನು ಭಾರತೀಯ ತತ್ವಜ್ಞಾನವೂ ಸೇರಿದಂತೆ ಇಸ್ಲಾಂ ಪೂರ್ವ ಅರೇಬಿಯಾ, ದಕ್ಷಿಣ ಅಮೆರಿಕಾ, ಜಪಾನ್, ಚೈನಾ, ಆಫ್ರಿಕಾಗಳ “ಮೂಲ” ಸಾಹಿತ್ಯಗಳಲ್ಲೂ ಕಾಣಬಹುದು. ಅವು ಅರಿಸ್ಟೋಪಸ್‍ನ ವಿಚಾರಗಳಿಗಿಂತ ತುಸು ಭಿನ್ನವಾಗಿದ್ದರೂ ತಿರುಳು ಮಾತ್ರ ಒಂದೇ ಎಂಬಂತೆ ನನಗೆ ಕಾಣುತ್ತದೆ. ಆದರೆ ಈ ಹೆಡೊನಿಸಂ ಸಿದ್ಧಾಂತ ಗಟ್ಟಿಯಾಗಿ ಬಲವಾಗಿ ಬೆಳೆದಿದ್ದು ಮಾತ್ರ 20 ಶತಮಾನದ ಯುರೋಪ್, ಅಮೆರಿಕಾಗಳಲ್ಲೇ!

ಹೆಡೊನಿಸಂನ ಸತ್ವವನ್ನು ಹೀರಿಕೊಂಡು ಅರಳಿದ ಪಶ್ಚಿಮದ ಮನಸ್ಸುಗಳನ್ನು ಬಹುಬೇಗನೆ ಕಬಳಿಸಿಕೊಂಡ ಅಲ್ಲಿಯ “ಕ್ಯಾಪಿಟಲಿಸ್ಟ್” ಸಿದ್ಧಾಂತದ ದೊರೆಗಳು ಜನಸಾಮಾನ್ಯರ ಆಸೆ, ಕಾಮ, ಸ್ವತಂತ್ರಗಳನ್ನು ಬಂಡವಾಳ ಮಾಡಿಕೊಂಡದ್ದನ್ನು ನಾವಿಲ್ಲಿ ಮರೆಯಬಾರದು. ಬುದ್ಧ, ಕಾರ್ಲ್ ಮಾರ್ಕ್ಸ್ ಒಟ್ಟಿಗೆ ತಂದು ಹೊಸ ಸಿದ್ಧಾಂತ ರೂಪಿಸಿದ ಎರಿಕ್ ಫ್ರಾಂನಾಗಲಿ ಅಥವ ಆಧ್ಯಾತ್ಮವನ್ನು ಕಾಮದ ಜೊತೆ ಜೋಡಿಸಿದ ನಮ್ಮ ಓಶೋ ಆಗಲಿ ಹೆಡೊನಿಸಂನ್ನು ನೆಗೆಟಿವ್ ಆಗಿಯೇ ಕಂಡಿದ್ದಾರಾದ್ದರಿಂದ ಕಳೆದ ಶತಮಾನದ ಪ್ರಖರ ತತ್ವಜ್ಞಾನಿಗಳಾದ ಹನ್ನಾ ಅರ್ಡೆಂಟ್ ಅಥವ ಮಿಷೆಲ್ ಫುಕೊರಲ್ಲಿ ಹೆಡನಿಸಂನ ಹೊಸ ದಾರಿ ಸಿಗಬಹುದೆ ಎನ್ನುವುದು ನನ್ನ ವೈಯುಕ್ತಿಕ ಅನಿಸಿಕೆ ಮತ್ತು ಹುಡುಕಾಟ.

ಕೊನೆಯದಾಗಿ, ಮುಕ್ತಾಯವಾಗಲ್ಲ, ಒಂದು ಮಾತು: ಕರೊನಾದಂತಹ ವೈರಸ್ ತಂದೊಡ್ಡುವ ಅಪಾಯ/ ದುರಂತಗಳನ್ನು ಮನುಷ್ಯರು ಮಾಡಿದ ಪಾಪಕ್ಕೆ ತಂದು ನಿಲ್ಲಿಸುವಂತಹ ಖಂಡದಲ್ಲಿ ವಾಸಿಸುತ್ತಿರುವ ನಮಗೆ ಡೈಯನೊಸಿಸ್‍ಗಿಂತ ಅಪೊಲೊವೇ ಹತ್ತಿರವಾಗುವುದು. ಸೊಫೊಕ್ಲಿಸ್ ಎಂಬ ಗ್ರೀಕ್ ದುರಂತ ನಾಟಕಕಾರ ಅಪೊಲೊ ಆರಾಧಕನಾಗಿ ಮನುಷ್ಯರ ಆದಿಗುಣ ಸ್ವಾತಂತ್ರ್ಯವನ್ನು (ಪ್ರಜಾಪ್ರಭುತ್ವವನ್ನು) ನಿರಾಕರಿಸಿ ರಾಜಪ್ರಭುತ್ವದೊಳಕ್ಕೆ ಜನಸಮೂಹವನ್ನು ಎಳೆಯಲು ಪ್ಲೇಗ್ ಎಂಬ ರೋಗವನ್ನು ದೈವಶಾಪವಾಗಿ ಮಾರ್ಪಡಿಸುತ್ತಾನೆ. ಇದರ ಮುಂದುವರಿಕೆಯೆಂಬಂತೆ ನೈಸರ್ಗಿಕ ವಿಕೋಪಗಳನ್ನೂ ದೈವನಿಂದನೆ, ಧರ್ಮನಿಂದನೆಯ ಫಲ ಎಂದೆಲ್ಲ ವಿಶ್ಲೇಷಿಸುವ ಭವ್ಯ ಏಷ್ಯಾ ಖಂಡದ ಮಹಾಜನತೆಯಾದ ನಮಗೆ ಈ ಹೊತ್ತಲ್ಲಿ ಜ್ಹೋರ್ಬಾನಂತಹ ನಮ್ಮದೇ ಮೂಲದ ಹೆಡೊನಿಸ್ಟರ ಅವಶ್ಯಕತೆ ಎಂದಿಗಿಂತಲೂ ಇಂದು ತುಂಬ ಅವಶ್ಯವಿದೆ. ಅವುಗಳಿಂದ ನಾವು ಹೊಸತಾದ ಸಾಹಿತ್ಯವನ್ನು, ಬದುಕನ್ನು ಹುಡುಕುವ ಅವಶ್ಯಕತೆಯಿದೆ. ಹೇಗೆ ಅರಿಸ್ಟೋಪಸ್ ಕಜ್ಹಂತಜ್ಹಕಿಸ್ ನ ಜ್ಹೋರ್ಬಾನಾದನೋ ಅಥವ ಬೋದಿಲೇರ್, ಜೀನ್ ಜೆನೆ, ಮಾಃಕ್ ದೆ ಸೇಡ್, ಚಾಲ್ರ್ಸ್ ಬುಕೊವಸ್ಕಿಗಳು ಹೆಡೊನಿಸಂನ ಆಧುನಿಕ ರುವಾರಿಗಳಾದರೋ ಹಾಗೇ ನಾವೂ ನಮ್ಮ ಚಾರ್ವಾಕನನ್ನು ಜ್ಹೋರ್ಬಾನೊಂದಿಗೆ ಸಂವಾದಕ್ಕಿಳಿಸಬೇಕಿದೆ.

ಕರೊನಾದಂತಹ ವೈರಸ್‍ಗಳು ಕೊಡುವ ಮಾನಸಿಕ ಖಿನ್ನತೆಯಿಂದ ಹೊರಬರಲು ಜ್ಹೋರ್ಬಾ ಹೇಳುವಂತೆ, “ಸಾವನ್ನು ಮರೆತು ಜೀವಿಸಬೇಕು ಆದರೆ ಸಾವಿನ ಎಚ್ಚರವಿರಬೇಕು” ಎಂಬಂತಹ ಚೂರು ಹುಚ್ಚುತನವೂ ಭಂಡ ಧೈರ್ಯವೂ ನಮಗೆ ಬೇಕು. ಅದಕ್ಕೆ ಜ್ಹೋರ್ಬಾನಂತೆ ತೀವ್ರವಾಗಿ ಬದುಕುವ ಅಸೀಮ ಧೈರ್ಯವೂ ನಮ್ಮೊಳಗಿರಬೇಕು.

Zorba , the Greek ಸಿನಿಮಾದ ಪ್ರಸಿದ್ದ ನೃತ್ಯ:

 

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...