ಸಾವಿರ ಭಾವಗಳ ಹೊತ್ತ ಹುಡುಗಿಯ ಕತೆಗಳು

Date: 05-03-2022

Location: ಬೆಂಗಳೂರು


‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 'ವಿಠಲಗಟ್ಟಿ ಉಳಿಯ' ಹೊಸಬರೇನಲ್ಲ. ಅವರ ಸಾಹಸಗಾಥೆ ಅಪಾರ. ಲೇಖನಿಯಲ್ಲಿ ಹುಟ್ಟಿಕೊಂಡ ಲೇಖನ, ಕಾವ್ಯ, ಕತೆ, ಕಾದಂಬರಿಗಳು ಅನೇಕ. ಮಾತ್ರವಲ್ಲ ಪತ್ರಿಕೋದ್ಯಮದಲ್ಲೂ ಪಳಗಿದವರು ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಕತೆಗಾರ ವಿಠಲಗಟ್ಟಿ ಉಳಿಯ ಅವರ ಸಾವಿರ ಕತೆಗಳ ಹುಡುಗಿ ಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.

ಎಲ್ಲವನ್ನೂ ಹೇಳಿಕೊಳ್ಳುವ ತವಕವಿದ್ದರೂ ಕೆಲವೊಂದನ್ನು ಹೇಳಿಕೊಳ್ಳಲಾಗದ ವ್ಯಕ್ತಿಯೊಬ್ಬನ ಒಳ ಬೇಗುದಿ ಹೇಳತೀರದ್ದು. ಹೇಳಬೇಕೆಂದೆನಿಸುತ್ತದೆ ನಿಜ. ಹೇಳಿ ಹೇಗೆ ಹಗುರವಾಗುವುದು? ಎಂಬುದು ಮಾತ್ರ ತಿಳಿಯದಾಗಿ ಬಿಡುತ್ತದೆ. ಹೊರೆ ಇಳಿಸುವ ಬಗೆಯಂತೂ ತೋಚುವುದೇ ಇಲ್ಲ. ಎದುರಿನ ಹಾದಿಯೋ ಕಾಣಿಸುವುದೇ ಇಲ್ಲ. ಒಬ್ಬ ಸೃಜನಾತ್ಮಕ ವ್ಯಕ್ತಿಯೆದುರು ಅಭಿವ್ಯಕ್ತಿಯ ಮಾರ್ಗ ಹಲವಿರುತ್ತವೆ. ಎದೆಯ ಮಿಡಿತದ ಸದ್ದನ್ನು, ಹೊಟ್ಟೆಯೊಳಗೆ ಹಾರುವ ಪಾತರಗಿತ್ತಿಯ ಹಾರಾಟವನ್ನು, ಮನದ ಗೊಂದಲವನ್ನು. ಅಷ್ಟೇ ಯಾಕೆ, ಜೀವ ತೊಟ್ಟ ಎಲ್ಲ ಭಾವನೆಗಳನ್ನೂ ಸದ್ದಿಲ್ಲದೇ ದಾಟಿಸುವ ಶಕ್ತಿ ಲೇಖನಿಗಿದೆ.

‘ಶ್ರೀ.ವಿಠಲಗಟ್ಟಿ ಉಳಿಯ’ ಅಂತಹ ಒಬ್ಬ ಸೃಜನಶೀಲ ಕವಿ, ಲೇಖಕ, ಕತೆಗಾರ, ಕಾದಂಬರಿಕಾರ. ಕನ್ನಡಕ್ಕೆ ಅಸ್ಪೃಶ್ಯರಾಗಿ ಕಾಡುತ್ತಿರುವ ‘ಕಾಸರಗೋಡು’ ಎಂಬ ಗಡಿನಾಡ ನೆಲದಲ್ಲಿ ಹುಟ್ಟಿದ್ದು 'ಗಟ್ಟಿ'ಯವರೂ ಸೇರಿದಂತೆ, ಅಲ್ಲಿ ಜನಿಸಿದ ಬಹುತೇಕ ಎಲ್ಲಾ ಸೃಜನಾತ್ಮಕ ಬರಹಗಾರರ ಪಾಲಿನ ದೊಡ್ಡ ಶಾಪ. ಅಂತಿದ್ದೂ ಅಲ್ಲಿಯವರ ಸಾಹಿತ್ಯ ಪ್ರೇಮ ಅಚಲ, ಅಮರ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 'ವಿಠಲ ಗಟ್ಟಿ ಉಳಿಯ' ಹೊಸಬರೇನಲ್ಲ. ಅವರ ಸಾಹಸಗಾಥೆ ಅಪಾರ. ಲೇಖನಿಯಲ್ಲಿ ಹುಟ್ಟಿಕೊಂಡ ಲೇಖನ, ಕಾವ್ಯ, ಕತೆ, ಕಾದಂಬರಿಗಳು ಅನೇಕ. ಮಾತ್ರವಲ್ಲ ಪತ್ರಿಕೋದ್ಯಮದಲ್ಲೂ ಪಳಗಿದವರು. ಹೊಟ್ಟೆ-ಮನಸ್ಸನ್ನು ಸಮವಾಗಿ ತುಂಬಿಸುವ ಹರಸಾಹಸದೊಳಗೆ ಹೊಟ್ಟೆಗೆ ತಣ್ಣಿರಬಟ್ಟೆ ಅಪ್ಪಿಕೊಂಡದ್ದೇ ಹೆಚ್ಚು. ಆದರೆ ಮನಸ್ಸು ಮಾತ್ರ ಯಥೇಚ್ಚವಾಗಿ ಹತ್ತು ಹಲವು ರುಚಿಗಳನ್ನು ತುಂಬಿಸಿಕೊಳ್ಳುತ್ತಾ ದಷ್ಟಪುಷ್ಟವಾಯಿತು. ಅದರ ಫಲವೇ ಇದೀಗ ನಮ್ಮೆದುರು 'ವಿಠಲ ಗಟ್ಟಿ ಉಳಿಯ'ರ ಗಟ್ಟಿಮುಟ್ಟಾದ 'ಸಾವಿರ ಕತೆಗಳ ಹುಡುಗಿ' ಕತಾ ಸಂಕಲನವಿದೆ. ತಮ್ಮ ಸೆಕೆಂಡ್ ಹಾಫ್ ಕಳೆದು, ಮುಂದಿನ ಹೆಜ್ಜೆಗಳನ್ನಿಡುವ ಹೊತ್ತಿನಲ್ಲಿ ಹುಟ್ಟಿಕೊಂಡ ಭಿನ್ನ ತುಡಿತಗಳ ವಿಭಿನ್ನ ಮಾದರಿಯ ಕತೆಗಳೇ ಸಂಕಲನದ ವೈಶಿಷ್ಟ್ಯ. 32 ಕತೆಗಳ ಸಂಕಲನವನ್ನು ಬೆಂಗಳೂರಿನ 'ವರ್ಣ' ಪ್ರಕಾಶನವು ಪ್ರಕಟಿಸಿದೆ.

ಸಮಾಧಾನ ಪಟ್ಟುಕೊಳ್ಳಲು ಸೋತು ಹೋಗುತ್ತಿದ್ದ ಸಂದರ್ಭದಲ್ಲಿ 'ಗಟ್ಟಿ'ಯವರಿಗೆ ಗುರುವಾಗಿ, ವರವಾಗಿ ಸಿಕ್ಕವರು ಎರಡಕ್ಷರದ ಕಥೆಗಾರ 'ಎಂ.ವ್ಯಾಸ' ಎಂದು ಅವರೇ ಹೇಳಿಕೊಳ್ಳುತ್ತಾರೆ. ಹಾಗೆ ದೊರಕಿದ ಅವಕಾಶವು 'ಗಟ್ಟಿ'ಯವರನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಲ್ಲದೆ, ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವಂತೆಯೂ ಮಾಡಿತು ಎನ್ನುವ ವಿನಮ್ರ ಭಾವ ಅವರದ್ದು. ಮನುಷ್ಯ ಸಂಬಂಧಗಳ ಸುತ್ತಲೇ ಗಿರಕಿ ಹೊಡೆಯುವ ‘ಗಟ್ಟಿ’ಯವರ ಕತೆಗಳಲ್ಲಿ, ಹೇಳಿ ಹಗುರವಾಗದಿರುವ ನೋವುಗಳಿವೆ. ಇಲ್ಲಿಯ ಕತೆಗಳಲ್ಲಿ ನೋವುಗಳೇ ಪರಸ್ಪರ ಸಮಾಧಾನಿಸಿಕೊಳ್ಳುವಂತೆಯೂ ತೋರುತ್ತದೆ. ಇಲ್ಲಿನ ಬಹಳಷ್ಟು ಕತೆಗಳು ಕತೆಗಾರನೂರಿನ ಪರಿಸರ, ಪರಂಪರೆಗಳಿಂದ ಪ್ರಭಾವಿತಗೊಂಡಿವೆ. ಅವುಗಳು ಕತೆಗಾರ 'ವಿಠಲ ಗಟ್ಟಿ ಉಳಿಯ'ರನ್ನು ಇನ್ನಿಲ್ಲದಂತೆ ಮುತ್ತಿ ಕಾಡಿದೆ. ಅದು ಸಹಜ ಕೂಡಾ. ಭೂತಾರಾಧನೆ,ನಂಬಿಕೆ-ವಿಶ್ವಾಸಗಳು ಇನ್ನಿಲ್ಲದಂತೆ ಹರಿದು ಮುಕ್ಕಿ ಕನಸಿನಲ್ಲೂ ಬೆವರಿಳಿಸುತ್ತವೆ. 'ತಲೆಮಾಂಸ' ಅಂತಹ ಒಂದು ಕತೆ. ಕ್ರಿಯೇಟಿವಿಟಿ ಹೇಗೆಲ್ಲಾ ಹುಟ್ಟಿಕೊಳ್ಳುತ್ತದೆ ಎನ್ನುವುದಕ್ಕೆ ಈ ಕಥೆಯಲ್ಲಿ 'ಅಧ್ಯಾಯ' ಪದ ಬಳಸುವ ಬದಲು 'ತಲೆ-2' ಎಂದು ಅಚ್ಚಾಗಿದ್ದೇ ಸಾಕ್ಷಿ.

'ತನ್ನದಾಗದ ಬದುಕಿನಾಚೆ ನಿಂತು ಎಲ್ಲವನ್ನೂ ನೋಡಬೇಕು. ಮನಸ್ಸಿನಾಳದ ಭಾವನೆಗಳೇ ಕೆಲವೊಮ್ಮೆ ನಮ್ಮನ್ನು ದೊಡ್ಡವರನ್ನಾಗಿಯೂ-ಸಣ್ಣವರನ್ನಾಗಿಯೂ ಮಾಡುತ್ತದೆ'- ಎನ್ನುವ ಸಾಲು ಆತ್ಮವಿಮರ್ಶಗೆ ಹಾದಿಯಾಗುತ್ತದೆ. ಅಂತಹದ್ದೊಂದು ಕತೆ-'ಯಕ್ಷ'. ಇದು ನಮ್ಮ ಬಳಗದ ಕತೆ ಎಂದು ಹೇಳುವ 'ಗಟ್ಟಿ'ಯವರು, ಮುಂದುವರಿದು ಹೀಗೆ ಹೇಳುತ್ತಾರೆ: 'ಈ ಜೈಲಿನ ಗೋಡೆ ನನ್ನ ಬದುಕಿನ ಸುತ್ತ ಕಟ್ಟಿಕೊಂಡಿರುವ ಬೃಹತ್ ಹುತ್ತ. ಗೋಡೆಯಾಚೆ ಏನಿದೆ? ಏನಿಲ್ಲ? ನನ್ನ ಮನಸ್ಸಿನಾಚೆಯ ಅಸೆ-ಆಕಾಂಕ್ಷೆಗಳು ಆಗಾಗ ಗರಿಗೆದರುತ್ತಿರುತ್ತವೆ. ಹಾಗಾಗಿ ಜೀವನದ ಪ್ರತಿಯೊಂದು ಕ್ಷಣವೂ ಗೋಡೆಯತ್ತಲೇ ನೋಡಿ ನಿಟ್ಟುಸಿರು ಬಿಡುವುದು ದಿನಚರಿಯಾಗಿದೆ. ಒಣಹಿಂಸೆಯಾಗಿದೆ-ಚಿತ್ರಹಿಂಸೆ...' ಪ್ರತಿಯೊಬ್ಬರ ನಡುವೆಯೂ ಗೋಡೆಗಳು ಎದ್ದೇಳುತ್ತಿರುತ್ತವೆ. ಗೋಡೆಗಳನ್ನೆಬ್ಬಿಸುವ ಮತ್ತು ಅವುಗಳನ್ನು ಕೆಡಹುವ ಕಾರಣಕರ್ತರು ನಾವೇ. ಕತೆಯನ್ನು ಓದಿದ ಮೇಲೆ ಅನಿಸಿದ್ದು: ಕಾರಣವಿಲ್ಲದೇ ಆಗಾಗ ಎದ್ದೇಳುವ ಮಹಾಗೋಡೆಯನ್ನೇ ಹಾರಿ ಬಿಡುಗಡೆ ಹೊಂದಬೇಕು ಎಂದು. ಅಂತಹ ಅನುಭವ ನಿಮಗೂ ಆದರೆ ಅಚ್ಚರಿಯಿಲ್ಲ.'ಕಚ ಮತ್ತು ದೇವಯಾನಿ' ಕತೆಯಲ್ಲಿ ಬರುವ ಮನುಷ್ಯ-ಮನುಷ್ಯರ ನಡುವಿನ ಅನೂಹ್ಯ ಬಂಧಗಳು ಅರಸುವ ಮುಖವಾಡಗಳಿವೆ. ನಿಜದ ಹಂಗಿನಿಂದ ಬಿಡಿಸಿಕೊಳ್ಳುವ ಹರಸಾಹಕ್ಕೆ ಈ ಮುಖವಾಡಗಳು ಉಪಯುಕ್ತವೆನಿಸುತ್ತವೆ. ಅಲೆದಲೆದು ದಣಿದ ಹುಚ್ಚು ಮನಸ್ಸು ಹತ್ತಾರು ಮುಖಗಳನ್ನು ಧರಿಸಿಕೊಳ್ಳುತ್ತದೆ. ಬೆಳೆದು ನಿಂತ ಮನಸ್ಸುಗಳು ಹೇರಿಕೊಂಡ ಅಷ್ಟೂ ಮುಖವಾಡಗಳನ್ನು ಕಳಚಿಡಲು ಬಾಲ್ಯದ ಮುಗ್ಧತೆಯತ್ತ ಮುಖ ಮಾಡುತ್ತವೆ. ಪುರಾಣದ ಎಳೆಯನ್ನು ಹಿಡಿದು ಕಟ್ಟಿದ ಕತೆಯಲ್ಲಿ ಸಾಕಷ್ಟು ಆಧುನಿಕ ಲೋಕದ ಭಾವನೆಗಳು ಕುಣಿಯುತ್ತವೆ. ಕ್ರೂರತೆಗೆ ಕ್ರೂರತೆಯೇ ಪ್ರತೀಕಾರವಲ್ಲ. ಉತ್ತಮ ಮನಸ್ಸೇ ನಿಜವಾದ ಪ್ರತಿಕಾರದ ಉತ್ತರ ಎಂದು 'ಕ್ರೂರ' ಕತೆಯಲ್ಲಿ ಹೇಳಿ ಬೆಚ್ಚಿ ಬೀಳಿಸುತ್ತಾರೆ.

ಪ್ರೀತಿ, ಪ್ರೇಮದ ಕುರಿತಂತೆ ನಾವೆಲ್ಲರೂ ಸ್ವಾರ್ಥಿಗಗಳೇ. ಎರಡು ಹೃದಯಗಳ ನಡುವೆ ಸ್ವಾರ್ಥವು ಟಿಸಿಲೊಡೆಯಿತೆಂದರೆ; ನೋವು, ವಿರಹ, ಅಗಲುವಿಕೆಯು ಸಂಭವಿಸುತ್ತದೆ. ಮರಳಿ ಬಾರದ ಬೆಳದಿಂಗಳ ನೆರಳ ನೆನೆದು ಕುಸಿದೂ ಬಿಡುತ್ತೇವೆ. ಮರಣವು ಪ್ರೀತಿಗಿಂತಲೂ ಸುಂದರವಾಗಿರುವುದರಿಂದಲೇ ಇರಬೇಕು ಉಸಿರು ಚೆಲ್ಲಿದ ಪ್ರೀತಿಯ ಜೀವಗಳು ಮರಳಿ ಬಾರದಿರುವುದು. ಅಂದಹಾಗೆ ನಾವು ತೀಕ್ಷ್ಣವಾಗಿ ಆಗ್ರಹಿಸುವವುಗಳು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ. ಅವರವರ ಎಮೋಷನ್ಸ್ ಗಳನ್ನು ಹಿಡಿದಾಡಿ ಜಗ್ಗಿದರೆ ಮಾತ್ರ ಸಾಲದು, ಎದುರಿನವರ ಎಮೋಷನ್ಸ್ ಕೂಡಾ ಬಹಳ ಮುಖ್ಯವೆನ್ನುವ ಅರಿವು ಇರಬೇಕು. ಇನ್ನೊಬ್ಬರ ಭಾವತೀವ್ರತೆಗಳ ಬಗ್ಗೆ ಗಮನ ಹರಿಸುವುದಿಲ್ಲದಿರುವ ಕಾರಣ ನಾವು ಸೋತು ಹೋಗುತ್ತೇವೆ. ಆಗ್ರಹಗಳು ಬಹಳಷ್ಟಿದ್ದರೂ ಸಾಧ್ಯಾ ಸಾಧ್ಯತೆಗಳ ಕುರಿತಂತೆ ಯೋಚಿಸುವ ಅಗತ್ಯವಿದೆ ಎನ್ನುವ ಪ್ರಜ್ಞೆ ಜಾಗೃತಗೊಳ್ಳಬೇಕು..

'ಪ್ರೇಮ ದುರಂತ' ಕತೆಗಳನ್ನೇ ಹೆಚ್ಚಾಗಿ ನೇಯ್ದ 'ಗಟ್ಟಿ'ಯವರಿಗೆ ಅದರಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲವೇನೋ? ಕನ್ನಡದ ರೋಮ್ಯಾಂಟಿಕ್ ಕತೆಗಾರರ ಪಟ್ಟಿಯಲ್ಲಿ 'ಗಟ್ಟಿ'ಯವರದ್ದು ಗಟ್ಟಿಯಾದ ಹೆಸರು. ಹೆಣ್ಣು ಸುಲಭವಾಗಿ ಒಲಿಯುವವಳಲ್ಲ. ಒಲಿದರಂತೂ ಬಲಿತು ಹೆಮ್ಮರವಾಗುವಷ್ಟು ಪ್ರೀತಿ, ಪ್ರೇಮ,ಕಾಮ ಆಕೆಯದ್ದು. ಹಾಗಿರಲು ಹೆಣ್ಣಿನ ಸೂಕ್ಷ್ಮ ಸಂವೇದನೆಗಳನ್ನು 'ಗಟ್ಟಿ'ಯವರು ಅನುಭವದಿಂದಲೂ,ಅನುಭಾವದಿಂದಲೂ ಅನುಭವಿಸಿ ಬರೆದರೆಂದು ಅಂದುಕೊಳ್ಳಲೇ? ಏನೇ ಇರಲಿ, ಮನಸ್ಸಿನ ಹಾವು-ಏಣಿ ಆಟದಲ್ಲಿ 'ಗಟ್ಟಿ'ಯವರು ದಾಳವಾಗಿ ಭಾವನೆಗಳ ಚಲನೆ, ಓಟಗಳನ್ನು ನಿಯಂತ್ರಿಸುತ್ತಾರೆ. ಭಾವದ ಆಡಂಬೋಲದಲ್ಲಿ ಸಂಚರಿಸುವ ಭಾವರಸಗಳ ನಡುವೆ ನಿತ್ಯವೂ ಉಸಿರಾಡುವ 'ವಿಠಲ ಗಟ್ಟಿ ಉಳಿಯ' ಎಂಬ ಲೇಖಕ, ಕವಿ, ಕತೆಗಾರ, ಕಾದಂಬರಿಕಾರನೊಬ್ಬ ನಿಜಾರ್ಥದ ಭಾವುಕ. ಭಾವನೆಯ ಮನಸ್ಸು ಅರಳುವುದಕ್ಕಿಂತಲೂ ಕಮರಿ ಹೋಗುವ ಅಪಾಯವೇ ಹೆಚ್ಚು.

'ಒಂದು ಚಿಪ್ಪಿನ ಕತೆ, ದ್ರುತ, ಗತಿ, ನೆತ್ತರು ಮೂಡದ ಗಾಯ, ಚೆಂಡೆ, ಒಂದು ವಾರದ ಮೋಹಿನಿ, ದ್ರೋಹಿ, ಬೆಂಕಿ ಮಿಂದವಳು, ಸಾವಿರ ಕತೆಗಳ ಹುಡುಗಿ' ಸೇರಿದಂತೆ ಎಲ್ಲಾ ಕತೆಗಳು ಓದುಗನಲ್ಲಿ ಕೌತುಕಭರಿತ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಹೊಸ ಮಾದರಿಯ ಕತೆಗಳ ಜೊತೆಗೆ ಸಿದ್ಧ ಸೂತ್ರದಡಿಯಲ್ಲಿ ಬಿಗಿದ ಕತೆಗಳೂ ಸೇರಿ ಸಂಕಲನದ ಮಹತ್ತನ್ನು ಹಿಗ್ಗಿಸಿವೆ. ಹಾಳೆಗಳು ಕವುಚಿ ಮಲಗಿದ ನಂತರವೂ ‘ಹುಡುಗಿ’ ಕಾಡುತ್ತಿರುತ್ತಾಳೆ. ಕಾಡದೆ, ಕಾಯದೆ, ನೋಯದೆ, ಮರುಗದೆ, ಕರಗದೆ ಹುಡುಗಿ ಒಲಿಯುವವಳಲ್ಲ. ಅಷ್ಟಕ್ಕೂ ಹುಡುಗಿಯಲ್ಲಿ ಹುದುಗಿರುವ ಭಾವನೆಗಳು ಅನಂತವಾದುದು. ಸಮಯಾನುಸಮಯಕ್ಕೆ ಮಗ್ಗುಲು ಬದಲಾಯಿಸುವ ಒಂದಷ್ಟನ್ನು ಬಿಟ್ಟರೆ ಮಿಕ್ಕಂತೆ ಎಲ್ಲ ಭಾವವೂ ಸಾರ್ವಕಾಲಿಕವಾದದ್ದು. ಆ ಕಾರಣದಿಂದ ಹುಡುಗಿ ಎಂದರೆ ಭಾವನೆಗಳ ಮೊತ್ತ. ಸಹಸ್ರ ಭಾವನೆಗಳ ಹೊತ್ತ ಹುಡುಗಿಯದ್ದು ಹೇಳಿತೀರದಷ್ಟು ವ್ಯಥೆ-ಕತೆಗಳಿವೆ. ಕೊನೆಯೇ ಇಲ್ಲದ ಭಾವದಲೆಗಳ ಮೊರೆತಕ್ಕೆ ಸಾಕ್ಷಿಯಾಗಲು 'ಸಾವಿರ ಕತೆಗಳ ಹುಡುಗಿ' ಕತಾ ಸಂಕಲನವನ್ನು ಕೈಗೆತ್ತಿಕೊಳ್ಳಿ. ನೀವು ಓದಲೇಬೇಕು.

ಈ ಅಂಕಣದ ಹಿಂದಿನ ಬರೆಹಗಳು:
ಪ್ರೇಮಲೋಕ’ದ ಪ್ರೇಮ ಗೀತೆಗಳು…
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...