ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ

Date: 02-12-2021

Location: ಬೆಂಗಳೂರು


ವೈದೇಹಿಯವರ ಕತೆಗಳು ಮಾತು-ಮೌನಗಳ ಮಧ್ಯೆ ಜೀಕಾಡುತ್ತ, ನೆರಳು-ಬೆಳಕಿನ ಆಟವಾಡುತ್ತ ಅನುಭವದ ಸಂಕೀರ್ಣತೆಯನ್ನು ನಿರೂಪಿಸುವ ಪರಿ ಅನನ್ಯವಾದುದು’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ವೈದೇಹಿ ಅವರ ಬರಹಗಳ ಕುರಿತು ವಿಶ್ಲೇಷಿಸಿದ್ದಾರೆ. 

ವೈದೇಹಿಯವರ ಕಥಾಸಾಹಿತ್ಯವು ಅಕ್ಷರ ಜಗತ್ತಿನ ಸೃಷ್ಟಿಯಾಗಿದ್ದರೂ, ಅಕ್ಷರಸ್ಥ ಭಾಷೆಯ ಯಾಜಮಾನ್ಯವನ್ನು ನಿರಾಕರಿಸುವ ಮುಕ್ತ ಹಾಗೂ ಚಲನಶೀಲ ಮಾದರಿಯದು. ‘ಹೆಣ್ಣು ಅನುಭವ’ ಹಾಗೂ ಆ ಮೂಲಕ ಸಿದ್ಧಿಸುವ ‘ಹೆಣ್ಣು ಅರಿವನ್ನು’ ತಮ್ಮ ವಿಶಿಷ್ಟ ಅಭಿವ್ಯಕ್ತಿಯ ಮೂಲಕ ‘ಹೊಳೆಯಿಸುವದರಲ್ಲಿ’ ವೈದೇಹಿ ತೊಡಗುತ್ತಾರೆ. ವೈದೇಹಿಯವರ ಕತೆಗಳ ಅನನ್ಯತೆಯಿರುವುದು ಕೂಡ ಮಾತುಗಳ ಮೂಲಕ ಧ್ವನಿಸುವ ಹೆಣ್ಣುಲೋಕದ ಬಹುಸ್ವರೀಯತೆಯಲ್ಲಿ. ಅವರು ಯಾವುದೇ ತಾತ್ವಿಕತೆಯನ್ನು ಒಡಲಲ್ಲಿರಿಸಿಕೊಂಡು ಕತೆ ಹೆಣೆಯುವುದಿಲ್ಲ. ಹೆಣ್ಣು ಜಗತ್ತಿನ ಒಳ ವಿನ್ಯಾಸಗಳನ್ನು ತಾದಾತ್ಮ್ಯದಿಂದ ಒಳಹೊಕ್ಕು ಅರಿಯುತ್ತ ಅದರ ಸಹಜ ಲಯಗಳನ್ನು ಅವರು ತಮ್ಮ ಕಥೆಗಳಲ್ಲಿ ಸೆರೆಹಿಡಿಯುತ್ತಾರೆ. ಈ ಲಯಗಳನ್ನು ತಮ್ಮ ಸ್ತ್ರೀ ಪಾತ್ರಗಳ ಮಾತಿನ ಚಲನೆಗಳ ಮೂಲಕ ಹೊಮ್ಮಿಸುತ್ತಾರೆ. ವಸ್ತು, ಭಾಷೆ, ತಂತ್ರಗಳು ತಾದಾತ್ಮ್ಯದಿಂದ ಬೆರೆತ ಸಹಜತೆ ಈ ಕತೆಗಳ ವೈಶಿಷ್ಟ್ಯ. ಅವರೇ ಹೇಳುವಂತೆ, ‘ಬರೆಯುವುದು ಸಹಜ ಕ್ರಿಯೆ’. ಆದರೆ ಹಾಗೆ ಸಹಜವಾಗಿ ಬರೆಯುವುದು ಮೇಲ್ನೋಟಕ್ಕೆ ತೋರುವಷ್ಟು ಸರಳವಾದ ವಿಷಯವಲ್ಲ. ಸಿದ್ಧಭಾಷೆಯ ಚೌಕಟ್ಟುಗಳೇ ಸಹಜವನ್ನು ನುಡಿಯದಂತೆ ನಿರ್ಬಂಧಿಸುವ ದೊಡ್ಡ ತಡೆಯಾಗಿಬಿಡುತ್ತದೆ. ಈ ತೊಡಕುಗಳನ್ನು ಮೀರುವ ಜಾಣ್ಮೆ ವೈದೇಹಿಯವರ ಕಥನಕ್ರಮವನ್ನು ಅನನ್ಯವಾಗಿ ರೂಪಿಸಿದೆ. ಆದ್ದರಿಂದಲೇ ಅವರ ಕತೆಗಳು ಅನುಭವಗಳ ಮರುಸೃಷ್ಟಿ. ಹೆಣ್ಣು ಅನುಭವಗಳ ಆಳವಾದ ಶೋಧನೆಯಲ್ಲಿ ತೊಡಗುವ ಈ ಕತೆಗಳು ವೈಚಾರಿಕ ಆಕೃತಿಗಳಲ್ಲಿ ಬಂಧಿಯಾಗುವುದಿಲ್ಲ. ಪ್ರಜ್ಞಾಪೂರ್ವಕವಾಗಿ, ತಾರ್ಕಿಕವಾಗಿ ಕಟ್ಟಲ್ಪಡುವ ನಿಶ್ಚಿತ ವೈಚಾರಿಕತೆಗಿಂತ ಚಲನಶೀಲ ಸ್ಥಿತಿಯ ಬೆರಗಿನೆಡೆಗೆ, ಅತಾರ್ಕಿಕ ನೆಲೆಯ ಅನುಭವಜನ್ಯ ಲೋಕದೆಡೆಗೆ ಈ ಕತೆಗಳು ಚಲಿಸುತ್ತವೆ.

ಅಕ್ಷರವು ಅರ್ಥವನ್ನು ಅಧಿಕೃತಗೊಳಿಸುತ್ತದೆ. ಆದರೆ, ಮಾತು ಚಲನಶೀಲವಾದುದು. ಅಂತೆಯೇ ಹೆಣ್ಣಿನ ಚೈತನ್ಯವೂ ಕೂಡ ಜಂಗಮರೂಪಿಯಾದುದು. ಸ್ತ್ರೀಸಂವೇದನೆಯ ದಟ್ಟ ಅನುಭೂತಿಯನ್ನು ಓದುಗರೊಳಗೆ ಅನುರಣಿಸುವಂತೆ ಮಾಡುವ ವೈದೇಹಿಯವರ ಕತೆಗಳು ಇದನ್ನು ಸಾಧ್ಯವಾಗಿಸುವುದು ಮಾತಿನ ಮೂಲಕವೇ. ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟುತ್ತಹೋಗುವುದು ಕೂಡ ಈ ಮಾತೇ ಆಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡಗಳ ಪರಿಸರದಲ್ಲಿ ಹೆಂಗಸರು ‘ಕತೆ ಹೇಳುತ್ತಾ ಕೂಡ್ರುವುದು’ ಎಂದರೆ ಮಾತಿನಲ್ಲಿ ನಿರತರಾಗುವುದು ಅಥವಾ ಹರಟೆಹೊಡೆಯುವುದೆಂದೇ ಅರ್ಥ. ಮಾತಿನ ಮೂಲಕವೇ ಕತೆ ಹೇಳುವುದು ಹೆಣ್ಣಿನ ಅಭಿವ್ಯಕ್ತಿಗೆ ಸಹಜವಾದದ್ದು. ಹೆಣ್ಣುಭಾಷೆ ಹರಡಿಕೊಂಡಿದ್ದು ಕೂಡ ಮಾತಿನ ಚಲನಶೀಲತೆಯಲ್ಲೇ ವಿನಃ ಅಕ್ಷರದ ಸ್ಥಾವರತ್ವದಲ್ಲಲ್ಲ. ವೈದೇಹಿಯವರ ಕತೆಗಳ ಆವರಣವನ್ನು ರೂಪಿಸುವ ಹೆಂಗಳೆಯರೆಲ್ಲ ಬೌದ್ಧಿಕ ಲೋಕದ ರಚನೆಗಳನ್ನು ಅರಿತವರಲ್ಲ. ಆದ್ದರಿಂದ ಅವರಿಗರಿವಿಲ್ಲದೆಯೇ ಇಂತಹ ಪ್ರಜ್ಞಾಪೂರ್ವಕ ರಚನೆಗಳನ್ನು ಕತೆಗಳಲ್ಲಿ ಆ ಪಾತ್ರಗಳು ನಿರಚಿಸುತ್ತ ಹೋಗುತ್ತವೆ. 

ವಿಮರ್ಶಕ ರಾಜೇಂದ್ರ ಚೆನ್ನಿಯವರು “ವೈದೇಹಿಯವರ ಕತೆಗಳ ಓದು ಅತ್ಯಂತ ಸೂಕ್ಷ್ಮವಾದ ಶ್ರಾವಣ ಪ್ರತಿಭೆಯೊಂದರ ಅನಾವರಣ” ಎನ್ನುತ್ತಾರೆ. ವೈದೇಹಿ ಕತೆಗಳ ಪರಿಸರವು ಸರಳ ದೈನಂದಿನ ಲಯಗಳನ್ನೇ ನಿರೂಪಿಸುವಂತಹದು. ಇದನ್ನು ದೇಸಿ ಅನುಭವ ಎಂದು ಬೇಕಾದರೂ ಕರೆಯಬಹುದು. ಒಂದು ಪ್ರದೇಶದ, ಒಂದು ಭಾಷೆಯ ಮಿತಿಯಲ್ಲಿಯೇ ಆ ಅನುಭವಗಳು ಚಲಿಸುತ್ತಿರುವಂತೆ ತೋರುತ್ತವೆ. ಆದರೆ, ಈ ಸರಳವೆಂದು ತೋರುವ ಅನುಭವ ಲೋಕದ ಹಿಂದೆ ಸಂಕೀರ್ಣವಾದ ಪ್ರತಿಮೆಗಳಿವೆ. ಎಲ್ಲ ದೇಶ-ಕಾಲಗಳಿಗೆ ಅನ್ವಯಿಸಬಲ್ಲ ಮೂಲರೂಪಕಗಳಿವೆ. ಆ ಮೂಲರೂಪಕವನ್ನು ವಾಚ್ಯವಾಗಿ ಬೆಳೆಸುವ ತಂತ್ರ ವೈದೇಹಿ ಕಥನದಲ್ಲಿದೆ. ಮುಂದುವರೆದು ಅವರು “ಕತೆಯ ಪಾತ್ರಗಳ ಹುಟ್ಟು, ಅಸ್ತಿತ್ವಗಳು ಅವುಗಳಿಗೇ ವಿಶಿಷ್ಟವಾದ ಅವುಗಳ ಸಂವೇದನೆಯ ಅವಿಭಾಜ್ಯ ಅಂಶವಾಗಿ, ಕರ್ಣನಿಗೆ ಕವಚ, ಕುಂಡಲಗಳಿದ್ದಂತೆ ಇರುವ ಅವುಗಳ ಮಾತಿನಲ್ಲಿದೆ. ನಮ್ಮ ಓದಿನಲ್ಲಿ ಈ ಪಾತ್ರಗಳು ಪ್ರತ್ಯಕ್ಷವಾಗುವುದು, ನಮ್ಮ ಅನುಭವ ಲೋಕವನ್ನು ಪ್ರವೇಶ ಮಾಡಿ ನಿಲ್ಲುವುದು ಅವುಗಳ ಮಾತಿನಿಂದಲೇ. ಇದು ಕೇವಲ ಕತೆಗಾರ್ತಿಯ ಜಾಣ್ಮೆ, ಕೌಶಲದ ವಿಷಯವಲ್ಲ. ಅಥವಾ ಅವರು ಬಳಸುವ ಪ್ರಾದೇಶಿಕ ಭಾಷೆಯ ಸೊಗಡಿನ ವಿಷಯವಲ್ಲ. ಮನುಷ್ಯನ ಅಂತರಂಗದ ಅತ್ಯಂತ ಅನಿರೀಕ್ಷಿತವಾದ, ಗೋಚರಕ್ಕೆ ಬರದಷ್ಟು ಸೂಕ್ಷ್ಮವಾದ, ಸಂಗ್ರಹಿಸಿ ಹೇಳಹೊರಟರೆ ತಮ್ಮ ನೈಜ ಸಂಕೀರ್ಣತೆಯನ್ನು ಕಳೆದುಕೊಂಡು ಉಡುಗಿಹೋಗುವಂಥ ವಿಶಿಷ್ಟವಾದ, ಆ ಕ್ಷಣದ್ದೇ ಆದರೂ ಆಯಾ ವ್ಯಕ್ತಿಗಳ ಶೀಲವನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಇರುವ ಮಾತುಗಳ ಬಗ್ಗೆ ನಾನು ಹೇಳುತ್ತಿದ್ದೇನೆ”. ಎನ್ನುತ್ತಾರೆ. ಮಾತಿನ ಲಯ, ಕಾಕು, ಅಬ್ಬರ, ಉನ್ಮಾದ, ಸುಯ್ಲು, ಏರಿಳಿತ, ನಿಟ್ಟುಸಿರು, ತೀಕ್ಷ್ಣತೆ ಎಲ್ಲವೂ ಅವರ ಕತೆಗಳ ಸಂಕೀರ್ಣಾನುಭವಕ್ಕೆ ಕಾರಣವಾಗುತ್ತವೆ.  

ಮಾತುಗಳಲ್ಲೇ ಭಾವಾಭಿನಯ ಮಾಡುವ ವಿಶಿಷ್ಟ ಶಕ್ತಿ ಈ ಕತೆಗಳ ನಾಟಕೀಯ ವಿನ್ಯಾಸಕ್ಕೆ ಕಾರಣ
ವೈದೇಹಿಯವರ ಕತೆಗಳು ಮಾತು-ಮೌನಗಳ ಮಧ್ಯೆ ಜೀಕಾಡುತ್ತ, ನೆರಳು-ಬೆಳಕಿನ ಆಟವಾಡುತ್ತ ಅನುಭವದ ಸಂಕೀರ್ಣತೆಯನ್ನು ನಿರೂಪಿಸುವ ಪರಿ ಅನನ್ಯವಾದುದು. ಅವರ ಅಕ್ಕು, ಹಕ್ಕಿಲ್ಲದವರು, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿಯೆಂಬ ನೆನಪು ಮುಂತಾದವು ಮಾತಿನ ಮೂಲಕವೇ ಕಟ್ಟಿನಿಲ್ಲಿಸಿದ ಕತೆಗಳು. ಇನ್ನು, ಅಂತರಂಗದ ಪುಟಗಳು, ಗೂಡಿನೊಳಗೊಂದು ಹಕ್ಕಿ, ಮರಗಿಡಬಳ್ಳಿ, ಸೌಗಂಧಿಯ ಸ್ವಗತಗಳು, ಶಕುಂತಲೆಯೊಂದಿಗೆ ಒಂದು ಅಪರಾಹ್ನ, ಒಂದು ಬಾಗಿಲ ಸದ್ದು ಮುಂತಾದ ಕತೆಗಳು ಪ್ರಜ್ಞೆಯ ಮೌನದಲ್ಲಿ, ಮನಸ್ಸಿನ ಅವ್ಯಕ್ತ ಮೂಲೆಗಳಲ್ಲಿ ಕದಲುತ್ತಿರುವ ಸೂಕ್ಷ್ಮ ಸಂಚಲನಗಳನ್ನು ನಿರೀಕ್ಷಿಸುತ್ತಾ, ಆ ಸುಪ್ತ ಸ್ವರಗಳನ್ನು ಆಲಿಸುವ ಮಾದರಿಯವು. ಮಾತಿನಂತೆಯೇ ಕ್ರಿಯೆಯನ್ನು ತಮ್ಮ ಪಾತ್ರಗಳ ಭಾವಾಭಿವ್ಯಕ್ತಿಗೆ ವೈದೇಹಿ ಬಳಸಿಕೊಳ್ಳುತ್ತಾರೆ. ಥಟ್ಟನೆ, ಅನಿರೀಕ್ಷಿತ ಕ್ರಿಯೆಯ ಮೂಲಕ, ದೇಹಭಾಷೆಯ ಮೂಲಕ ಕಥಾಪಾತ್ರಗಳು ಓದುಗರಿಗೆ ಶಾಕ್ ನೀಡುತ್ತವೆ. ಮನಸ್ಸಿನ ಅನೂಹ್ಯ ಚಲನೆಗಳ ವ್ಯಕ್ತರೂಪವೋ ಎಂಬಂತೆ ಮಾಡುವ ಈ ಕ್ರಿಯೆಗಳು ನಾಟಕೀಯವಾದ ಆವರಣವೊಂದನ್ನು ಕತೆಗಳಲ್ಲಿ ಸೃಜಿಸುತ್ತವೆ. ಮಾತಿನೊಳಗಿನ ಮೌನ, ಮೌನದೊಳಗಿನ ಮಾತುಗಳನ್ನು ಕೇಳಿಸುವಂಥ ವೈದೇಹಿಯವರ ಭಾಷಿಕ ಸಾಮರ್ಥ್ಯವು ಕತೆಗಳ ಅನನ್ಯ ಅನುಭವಕ್ಕೆ ಕಾರಣ.

ಹೆಣ್ಣಿನ ಚೈತನ್ಯವು ಸದಾ ಮುಕ್ತ ಹಾಗೂ ಚಲನಶೀಲವಾದುದು. ಅವಳ ವ್ಯಕ್ತಿತ್ವವು ಜಂಗಮರೂಪಿ. ಹೆಣ್ಣು ಸ್ವಭಾವತಃ ಚಂಚಲೆ ಎಂಬುದನ್ನು ನಮ್ಮ ಸಿದ್ಧ ಆಲೋಚನಾ ಕ್ರಮ ಯಾವಾಗಲೂ ಋಣಾತ್ಮಕವಾಗಿಯೇ ಗ್ರಹಿಸುತ್ತ ಬಂದಿದೆ. ಆದರೆ, ಚಂಚಲತೆ ಚಲನಶೀಲತೆಗೆ ಸಂಬಂಧಿಸಿದ್ದು. ಅದೊಂದು ಸೃಜನಶೀಲ ಸಾಧ್ಯತೆಯೂ ಹೌದು. ಈ ಮುಕ್ತತೆಯನ್ನು ಲಕಾನ್ ‘ಕಾವ್ಯಾತ್ಮಕ ಸಾಧ್ಯತೆ’ ಎನ್ನುತ್ತಾನೆ. ಹೆಣ್ಣಿನ ಅಭಿವ್ಯಕ್ತಿಯಲ್ಲಿ ಇಂಥ ಸಾಧ್ಯತೆ ಸಹಜವಾಗಿದೆ. ಆದ್ದರಿಂದ ಅವಳ ಭಾಷೆ ಕೂಡ ಧ್ಯಾನದ ಏಕತಾರಿಯಲ್ಲ. ಅದು ಬಹುಸ್ವರಗಳು ಹೊರಡಿಸುವ ಸಂಗೀತದಂತೆ. ‘ಅರ್ಥ’ದ ಅಧಿಕಾರದಾಚೆಗೆ ಅದು ಸದಾ ಜಿಗಿಯುತ್ತಲೇ ಇರಬಲ್ಲದು. ಆದ್ದರಿಂದಲೇ ಗಂಡಿನ ಪಾಲಿಗೆ ಅವಳು ಅರ್ಥೈಸಲು ಸಾಧ್ಯವಾಗದ ‘ಮೀನಿನ ಹೆಜ್ಜೆ’. ಹೆಣ್ಣಿನ ಜೈವಿಕತೆಗೂ ಅವಳ ಭಾಷೆಗೂ ಸಂಬಂಧವಿದೆ. ಭಾಷೆ ಬರಿಯ ಸಾಮಾಜಿಕ ಉತ್ಪನ್ನವಲ್ಲ ಎಂಬುದನ್ನು ಚಾಮ್‍ ಸ್ಕಿಯಂತಹ ಆಧುನಿಕ ಭಾಷಾವಿಜ್ಞಾನಿಗಳ ಅಭಿಪ್ರಾಯವೂ ಸಮರ್ಥಿಸುತ್ತದೆ. ಫ್ರೆಂಚ್ ಚಿಂತಕಿ ಕ್ರಿಸ್ಟೆವಾ ಭಾಷೆಯನ್ನು ಸಂಜ್ಞಾತ್ಮಕ (ಸೀಮಿಯಾಟಿಕ್) ಮತ್ತು ಸಂಕೇತಾತ್ಮಕ (ಸಿಂಬಾಲಿಕ್) ಎಂದು ಎರಡು ವಿಭಾಗ ಮಾಡುತ್ತಾಳೆ. ಸಂಜ್ಞಾತ್ಮಕವನ್ನು ಸ್ತ್ರೀ ಶರೀರದ ಜೊತೆಗೂ, ಸಂಕೇತಾತ್ಮಕವನ್ನು ಸಹಜ ಅಭಿವ್ಯಕ್ತಿಯನ್ನು ತೆಡೆಯುವ ಪಿತೃರೂಪೀ ದಮನಾತ್ಮಕ ಕಾನೂನಿಗೂ ಹೋಲಿಸುತ್ತಾಳೆ. ಎಲ್ಲ ಸಾಂಕೇತಿಕ ವ್ಯವಸ್ಥೆಗಳೂ ಅರ್ಥದ ಮೂಲ ಅಧಿಕಾರವನ್ನು ಸ್ಥಾಪಿಸುವಂಥವು. ಮನುಷ್ಯ ಭಾಷೆ ಕೂಡ ಇಂಥ ಸಾಂಕೇತಿಕ ವ್ಯವಸ್ಥೆ. “ಈ ಸಾಂಕೇತಿಕ ವ್ಯವಸ್ಥೆಯ ಹೊರಗಿರುವುದೇ ಹೆಂಗಸು; ಆಕೆ ಮಾತಿನ ಪ್ರಜ್ಞಾಪೂರ್ವಕ, ವ್ಯವಸ್ಥಿತ, ವೈಚಾರಿಕ ವ್ಯವಸ್ಥೆಗಳನ್ನು ಬುಡಮೇಲು ಮಾಡುತ್ತಾಳೆ. ವಾಚಿಕೆಯ ಸ್ಥಿತಿಗಿಂತ ಮುಂಚೆ ಇರುವ ಸುಪ್ತಪ್ರಜ್ಞೆ ಆಕೆ”. ರೆವಲ್ಯೂಷನ್ ಇನ್ ಪೊಯೆಟಿಕ್ ಲ್ಯಾಂಗ್ವೇಜ್ ಎಂಬ ಕೃತಿಯಲ್ಲಿ ಕ್ರಿಸ್ಟೆವಾ ಹೀಗೆ ವಿವರಿಸುತ್ತಾಳೆ. ಇಂಥ ಕಾವ್ಯಾತ್ಮಕ ಸಾಧ್ಯತೆಯನ್ನು ತಮ್ಮ ಕತೆಗಳಲ್ಲಿ ಸಿದ್ಧಿಸಿಕೊಂಡಿರುವುದರಿಂದ ವೈದೇಹಿಯವರ ಬರವಣಿಗೆ ಸ್ತ್ರೀಸಂವೇದನೆಯ ಮೂಲರೂಪಗಳನ್ನು ಕಾಣಿಸುತ್ತದೆಯೆಂಬುದು ನನ್ನ ತಿಳುವಳಿಕೆ. ಹೆಣ್ತನದ ಬಗೆಗಿನ ಸಿದ್ಧಗ್ರಹಿಕೆಗಳನ್ನು ಹೆಜ್ಜೆಹೆಜ್ಜೆಗೂ ಬುಡಮೇಲು ಮಾಡುವ ಸ್ಫೋಟಕಗುಣ ವೈದೇಹಿಯವರ ಅಭಿವ್ಯಕ್ತಿಯ ಶಕ್ತಿ. ಅವರ ಕತೆಗಳಲ್ಲಿ ಹೆಣ್ತನದ ಅಂತಃಶಕ್ತಿಯು ಎಲ್ಲ ಕಟ್ಟುಗಳನ್ನು ಮೀರಿ ಹರಿಯುವ ಗುಣದಿಂದಾಗಿ ಅನನ್ಯವೆನಿಸುತ್ತದೆ.

ವೈದೇಹಿಯವರ ಸಶಕ್ತ ಅಭಿವ್ಯಕ್ತಿಗೆ ಮೂಲವಾದ ಅವರ ಅನುಭವಲೋಕವನ್ನು ಅರಿಯದಿದ್ದರೆ ಈ ಪ್ರಕ್ರಿಯೆ ಅಪೂರ್ಣವಾಗಿಬಿಡುತ್ತದೆ. ಕೋಟ, ಕುಂದಾಪುರ ಪರಿಸರದ ಬದುಕು ಅವರಲ್ಲಿ ಅಚ್ಚಳಿಯದ ಸ್ಮೃತಿ ಬಿಂಬಗಳನ್ನು ಮೂಡಿಸಿ ಅವರೊಳಗೆ ಬತ್ತದ ಒರತೆಯಾಗಿ ತುಂಬಿಕೊಂಡಿದೆ. ಮನೆಯ ತಳಿಕಂಡಿಯ ಮೂಲಕ ಅವರು ಕಂಡ ಹೆಣ್ಣುಲೋಕವು ಅವರನ್ನು ಇನ್ನಿಲ್ಲದಂತೆ ಕಾಡಿದೆ. ಮಂಕಾದ, ಅಸ್ವಸ್ಥರಾದ ಹೆಣ್ಣುಗಳು, ದುಃಖವನ್ನೆಲ್ಲ ಒಳಗೇ ನುಂಗುತ್ತಾ, ವ್ಯವಸ್ಥೆಯ ದಮನಕ್ಕೆ ಎದೆಯೊಡ್ಡಿನಿಂತು ಹೋರಾಡುವ ಜಿಗುಟುತನದ ಹೆಣ್ಣುಗಳು, ನಮ್ಮ ಚೈತನ್ಯಲೋಕವನ್ನು ನೀವು ನಾಶಮಾಡಲಾರಿರಿ ಎಂದು ವ್ಯವಸ್ಥೆಗೇ ಸವಾಲು ಹಾಕುತ್ತ, ಚಿವುಟಿದಷ್ಟೂ ಚಿಗುರುವ ಹೆಣ್ಣುಗಳು, ತಮ್ಮ ಉಳಿವಿಗಾಗಿ ಉಪಾಯ ಹೂಡುವ, ತಂತ್ರ ಹೆಣೆಯುವ ಜಾಣ್ಮೆಯ ಹೆಣ್ಣುಗಳು. ಹೀಗೆ ಸ್ತ್ರೀ ಮನೋಲೋಕದ ವೈವಿಧ್ಯ ಅವರ ಪ್ರಜ್ಞೆಯಲ್ಲಿ ದಾಖಲಾಗಿದೆ. ಅದುಮಿಟ್ಟ ಹೆಣ್ಣುಲೋಕದ ಭಾಷೆ ವೈದೇಹಿಯವರ ಕಥೆಗಳಲ್ಲಿ ಉಜ್ವಲವಾಗಿ ಚಿತ್ರಿತವಾಗಿದೆ. ಅವರು ಕಾಣುವ ಲೋಕಸತ್ಯಗಳು ಸ್ಫೋಟಕವಾದವು. ಅದನ್ನು ಅಭಿವ್ಯಕ್ತಿಸಲು ನಿರ್ಬಂಧವೊಡ್ಡಿದಾಗ ಅವರು ಅಸ್ವಸ್ಥರಾಗುತ್ತಾರೆ. ಅವರ ಭಾಷೆ ಅಸಂಗತವಾಗುತ್ತದೆ. ಇಲ್ಲಿ ವೈದೇಹಿಯವರು ಹೇಳುವ ‘ತಳಿಕಂಡಿ’ ಸಾಂಕೇತಿಕವಾಗಿ ಕಾಣಿಸುತ್ತದೆ. ನಮ್ಮ ವೈಯಕ್ತಿಕ ಅನುಭವಗಳ ಕಿಡಕಿಯಿಂದಲೇ ನಾವು ಜಗತ್ತನ್ನು ಕಾಣಲು-ಗ್ರಹಿಸಲು ಸಾಧ್ಯ. ಅನುಭವದ ವಿಸ್ತಾರಕ್ಕಿಂತ, ಅನುಭವದ ಸಾಂದ್ರತೆಯಲ್ಲಿ ಮನಸ್ಸು ನೆಡುವುದು ಸ್ತ್ರೀ ಬದುಕಿನ ಒಂದು ಕ್ರಮವೂ ಹೌದೇನೋ.

‘ಅಕ್ಕು’ ಕತೆಯಲ್ಲಿ ಅವಳ ಅಸಂಗತವೆನಿಸುವ ಮಾತುಗಳಲ್ಲಿ ಇಂಥ ಹಲವು ಕೇಂದ್ರಗಳಿವೆ. ಅಕ್ಕು ಗಂಡನಿಲ್ಲದ ಹೆಣ್ಣು. ಅವಳ ಲೈಂಗಿಕ ಅತೃಪ್ತಿ ಹಾಗೂ ತಾಯತ್ತನದ ಬಯಕೆಗಳನ್ನು ಆಕೆ ತನ್ನ ಹುಚ್ಚಿನ ಸ್ಥಿತಿಯಲ್ಲಿ ವ್ಯಕ್ತಪಡಿಸುತ್ತಾಳೆ. ಅವಳು ಬದುಕುವ ಪರಿಸರವು ಸ್ತ್ರೀ ವಿರೋಧಿ ಪಿತೃಪ್ರಧಾನ ಮೌಲ್ಯಗಳಿಂದ ಆವೃತವಾದುದು. ಊರಿನ ಜನರಿಗೆಲ್ಲ ಅಕ್ಕು ಒಂದು ತಮಾಶೆಯ ವಸ್ತುವಾದರೆ, ಅವಳ ಮನೆಯಲ್ಲಿರುವ ಅಜ್ಜಯ್ಯ ಹಾಗೂ ವಾಸು ಚಿಕ್ಕಪ್ಪರಿಗೆ ಅವಳು ನುಂಗಲಾರದ ತುತ್ತು. ಆ ಮನೆಯ ಪರಿಸರದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ಪುರುಷಪ್ರಧಾನ ವ್ಯವಸ್ಥೆಯು ಹೆಣ್ಣಿನ ವಿಧೇಯತೆ ಹಾಗೂ ಮೌನವನ್ನು ಅಪೇಕ್ಷಿಸುತ್ತದೆ. ಆದರೆ ಅಕ್ಕು ಈ ಎರಡೂ ಅಪೇಕ್ಷೆಗಳನ್ನು ಮುರಿಯುತ್ತಾಳೆ. ಅಕ್ಕುವನ್ನು ಸಾಯುವಂತೆ ಹೊಡೆಯುವ ಮೂಲಕ ಅವಳನ್ನು ಮೌನವಾಗಿಸಲು ಅವರು ಪ್ರಯತ್ನಿಸಿದಂತೆಲ್ಲ ಅಕ್ಕು ಇನ್ನೂ ವ್ಯಗ್ರಳಾಗುತ್ತ ಹೋಗುತ್ತಾಳೆ. ಪುರುಷಲೋಕದ ತೆರೆಮರೆಯ ಹಾದರಗಳನ್ನು ಬಯಲು ಮಾಡುವ ಮೂಲಕ ಅವರೇ ಮೌನ ತಾಳುವಂತೆ ಮಾಡುತ್ತಾಳೆ. ‘ನನ್ ಗಂಡ ಎಲ್ಲಿ ಸತ್ತ? ಈ ಕ್ಷಣ ತಂದುಕೊಡಿ’ ಎಂದು ಹಲುಬುವ ಅಕ್ಕುವನ್ನು ಪರಿಪರಿಯಾಗಿ ಪರಿಹಾಸ್ಯ ಮಾಡುವ ನಾಟಕೀಯ ಸನ್ನಿವೇಶವೊಂದು ಕತೆಯಲ್ಲಿ ಬರುತ್ತದೆ. ತಮ್ಮಣ್ಣಯ್ಯ ಎಂಬುವವನೊಬ್ಬ ಯಕ್ಷಗಾನದ ಸ್ತ್ರೀಪಾತ್ರದಂತೆ ನಡು ಬಳುಕಿಸುತ್ತಾ, ಕೈಬೀಸಿ ಎದೆಗೆ ಹೊಡೆದುಕೊಳ್ಳುತ್ತಾ, ‘ಪ್ರಿಯೆ, ನಿನ್ನ ಗಂಡನೆಂಬುವ ನಾನು ಬಂದಿದ್ದೇನೆ. ನನ್ನಿಂದೇನಾಗಬೇಕು?’ ಎಂದು ನಾಟಕೀಯವಾಗಿ ನುಡಿಯುವಾಗ ಇಡೀ ವಾತಾವರಣ ನಗೆಗಡಲಲ್ಲಿ ತೇಲುತ್ತದೆ. ಆದರೆ, ಸರಕ್ಕೆಂದು ಏರಿಬಂದ ಅಕ್ಕು ಅವನನ್ನು ಕಚ್ಚಿಬಿಡುತ್ತಾಳೆ. ‘ಏ ತಮ್ಮಣ್ಣಯ್ಯ, ಬಾಲ ಮುಚ್ಗಂಡ್ ಆಚೆಗ್ ಹೋಗ್, ನಿನ್ ಕೆಲ್ಸ ಕಾಣ್. ನನ್ ಸುದ್ದೀಗ್ ಬತ್ಯಾ? ನಿನ್ ಹೆಂಡ್ತಿ ಮೊನ್ನೆ ಯಾರೊಟ್ಟಿಗ್ ಬಾಚ್ಕಂಡ್ ಮನ್ಕಂಡಿದ್ಲ್ ಅಂತೇಳಿ ಹೇಳೂದಾ ಈಗ’, ಎಂದು ಕತ್ತಿ ಬೀಸಿದಂತೆ ಪ್ರತಿಕ್ರಿಯಿಸಿದಾಗ ತಮ್ಮಣ್ಣಯ್ಯನ ನಗೆ ನಂದಿಹೋಗುತ್ತದೆ. ಮುಂದೊಂದು ದಿನ ಅವಳ ಓಡಿಹೋದ ಗಂಡ ವಾಪಾಸು ಬಂದಾಗ, ‘ಅಕ್ಕೂ ಸತ್ ಮೂರ್ ಹಗ್ಲು ಮೂರ್ ರಾತ್ರಿ ಆಯಾಯ್ತ್. ಈ ನಾರಟೆ ಕ್ರಿಯೆ ಹಿಡ್ಯುಕೆ ಬಂದದ್ದಾ ಕೇಣಿ’ ಎಂದು ಭಗಭಗನೇ ಉರಿಯುವ ಸ್ವರದಲ್ಲಿ ಕೇಳುತ್ತಾಳೆ. ‘ಅಂತೂ ಬಂದ್ಯ! ಊರ್ ಮೇಲಿನ್ ಹೆಣ್ಮಕ್ಳೆಲ್ಲ ಖರ್ಚಾದ್ವ’ ಎಂದು ದೊಡ್ಡತ್ತೆ ಕೇಳಿದಾಗ ಅವ ಬಾಯಿ ತೆರೆಯುವ ಮೊದಲೆ, ‘ನಾನೇನ್ ಬಿಟ್ಟಿದ್ನ? ಈ ಊರೊಳ್ಗೆ ಯಾವ್ ಗಂಡ್ಸನ್ ನಾನ್ ಬಿಟ್ಟಿದ್ದೆ ಅಂಬ್ರ್! ಹೇಳೂ ಗಂಡ್ಸ್‍ಯಿದ್ರೆ ಬರ್ಲಿ ಕಾಂಬ!’ ಎಂದು ಸವಾಲೆಸೆಯುತ್ತಾಳೆ. ‘ನೀವೆಂತದೇ ಹೇಳಿ ದೊಡ್ಡತ್ತೆ, ಇದ್ರ್ ಕಿಂತ ಆ ಅಡ್ಡದ್ಮನೆ ತಿಮ್ಮಪ್ಪಯ್ಯ ಅಡ್ಡಿಲ್ಲೆ. ಅವ್ನ್ ಯೆದಿಯೇನ್, ತುಟಿಯೇನ್...’ ಎಂದು ಹೆಣ್ಣನ್ನು ಬಾಳಿಸಲಾಗದ ನಪುಂಸಕ ಗಂಡನ ಸ್ಥಿತಿಯನ್ನು ಪ್ರತಿರೋಧಿಸುತ್ತಾಳೆ. ಅಕ್ಕುವಿನ ಈ ಪ್ರತಿರೋಧ ತೀಕ್ಷ್ಣವಾಗಿದ್ದೇ ಆದರೂ ಅದು ಅವಳ ಹುಚ್ಚಿನ ಸ್ಥಿತಿಯಲ್ಲಿ ಮಾತ್ರ ಸಾಧ್ಯವಾಗುವುದು ವಿಪರ್ಯಾಸ. ಭಯ ಮತ್ತು ಮೌನವನ್ನು ಮೀರಿದ ಈ ಅಕ್ಕುವನ್ನು ಅಜ್ಜಯ್ಯ ಮತ್ತು ವಾಸು ಚಿಕ್ಕಪ್ಪಯ್ಯ ‘ಒಗೆಯುವ ಕಲ್ಲಿಗೆ ವಸ್ತ್ರ ಜಪ್ಪಿದಂತೆ’ ದಾರುಣವಾಗಿ ಹೊಡೆಯುತ್ತಾರೆ. ಅಂಥ ಹೊಡೆತಗಳಿಂದ ಅಕ್ಕುವನ್ನು ತಪ್ಪಿಸದ ಆ ಮನೆಯ ಹೆಂಗಸರು ಕೂಡ ಪುರುಷಪ್ರಧಾನ ಮೌಲ್ಯವನ್ನೇ ಉಸಿರಾಡುವವರು. ತನ್ನ ತೆರೆಮರೆಯ ಹಾದರವನ್ನು ಬಚ್ಚಿಡುವ ವಾಸು ಚಿಕ್ಕಪ್ಪಯ್ಯ ಅಕ್ಕುವನ್ನು ಶಿಕ್ಷಿಸುವುದು ತನ್ನ ಅಧಿಕಾರವೆಂದು ಭಾವಿಸುತ್ತಾನೆ. 

ಕುಟುಂಬವು ಪುರುಷಾಧಿಕಾರದ ಕೇಂದ್ರವಾಗಿದ್ದು, ಅದು ಹಿಂಸೆಯನ್ನು ಸಹಜವಾಗಿಸುತ್ತದೆ. ಸುತ್ತಲಿನ ಸಮಾಜ ಕೂಡ ಅದನ್ನು ಅನುಮೋದಿಸುತ್ತದೆ. ಆದ್ದರಿಂದ ಅಕ್ಕುವಿನ ಹುಚ್ಚು ಅವಳಿಗೆ ವ್ಯವಸ್ಥೆ ನೀಡಿದ ಬಳುವಳಿ. ವಾಚ್ಯಾರ್ಥದಲ್ಲಿ ಅದು ಪಿತೃಪ್ರಾಧಾನ್ಯತೆಯ ದಮನಕಾರೀ ಶಕ್ತಿಯ ಪ್ರತಿಬಿಂಬವಾದರೆ, ಸಂಕೇತಾರ್ಥದಲ್ಲಿ ಅದು ಸಮಾಜದ ವಿರುದ್ಧದ ದಂಗೆಯಾಗಿ ತೋರುತ್ತದೆ. ಸಾಯುವಂತೆ ಹೊಡೆತ ತಿಂದರೂ ಅಕ್ಕು ತನ್ನ ಪ್ರಜ್ಞಾಲೋಕವನ್ನು ನಾಶವಾಗದಂತೆ ಕಾಯ್ದುಕೊಳ್ಳುತ್ತಾಳೆ. ಅವಳನ್ನು ಕೋಣೆಯಲ್ಲಿ ಬಂಧಿಸಿದಾಗ, ಕಿಡಕಿಯಿಂದಲೇ ಟುವಾಲು ಬೀಸುತ್ತ, ‘ಆ ತಮ್ಮಣ್ಣಯ್ಯನ್ ಹೆಂಡ್ತಿ ಕಾಯ್ತ್ಲ್ ಕಾಣ್. ಓಡು ಬೇಗ. ಮರ್ಯಾದೆ ಸತ್ತವ್ನೇ, ಈಗ ಹೊಡೀ ಬಾ... ಕಾಂಬ’, ಎಂದು ಕೂಗು ಹಾಕುತ್ತಾಳೆ. ಅವಳ ದೇಹ ಹಿಂಸೆಗೊಳಗಾದರೂ ಅವಳ ಒಳಪ್ರಪಂಚವನ್ನು ನಾಶಮಾಡಲಾಗುವುದಿಲ್ಲ ಎಂಬುದೇ ಅವಳ ಗೆಲುವು. ಅವಳ ಮಾತುಗಳೇ ಪುರುಷಲೋಕದ ದಮನಕ್ಕೆ ಕೊಡುವ ಉತ್ತರ. ಅವಳು ಕಿಟಕಿಯಿಂದ ಟುವಾಲು ಬೀಸುವುದು ಅಂಥ ವಿಜಯದ ಸಂಕೇತ. ಹೆಣ್ಣು ತನ್ನನ್ನು ಉಳಿಸಿಕೊಳ್ಳಲು ಅಂಥ ಕಿಟಕಿಗಳನ್ನು ಹುಡುಕಿಕೊಳ್ಳುತ್ತಾಳೆಂಬುದೇ ಇಲ್ಲಿನ ಧ್ವನಿ.

ಪುರುಷಾಧಿಕಾರವನ್ನು ನಿರಾಕರಿಸುವ ಹೆಣ್ಣು ಯಾವಾಗಲೂ ಪುರುಷನಿಗೊಂದು ಸವಾಲು. ಅಂಥ ನಿರಾಕರಣೆ ಅವನ ಪುರುಷ ಅಹಮಿಕೆಯನ್ನು ಘಾಸಿಗೊಳಿಸುತ್ತದೆ. ಅಂಥ ಹೆಣ್ಣನ್ನು ಪಳಗಿಸಲು ಅವನು ಬಳಸಿಕೊಳ್ಳುವುದು ಅವಳ ದೇಹವನ್ನೇ. ಅತ್ಯಾಚಾರದ ಮೂಲಕ ಅವಳ ಮನೋಲೋಕವನ್ನು ಘಾಸಿಗೊಳಿಸುವುದು ಅವನ ಹುನ್ನಾರ. ಅಮ್ಮಚ್ಚಿಯೆಂಬ ನೆನಪು ಕತೆ ಇದನ್ನೇ ತನ್ನ ವಿವರಗಳಲ್ಲಿ ತುಂಬ ಸೂಚ್ಯವಾಗಿ ನಿರೂಪಿಸುತ್ತದೆ. ಸಣ್ಣಸಣ್ಣ ಆಸೆಗಳಿಗೂ ತಣ್ಣೀರೆರಚುತ್ತಾ ತನ್ನ ಚೈತನ್ಯವನ್ನು ಹೊಸಕಿಹಾಕುವ ವೆಂಕಪ್ಪಯ್ಯನ ತಂತ್ರಗಳಿಗೆ ಸೋಲೊಪ್ಪಿಕೊಳ್ಳದೇ ಅಮ್ಮಚ್ಚಿ ಪ್ರತಿತಂತ್ರ ಹೂಡುತ್ತಾಳೆ. ಇದರಿಂದ ಕೆರಳಿದ ವೆಂಕಪ್ಪಯ್ಯ ಅವಳ ಮೇಲೆ ಅತ್ಯಾಚಾರವೆಸಗುತ್ತಾನೆ. ಮರ್ಯಾದೆಗಂಜುವ ಸಾಂಪ್ರದಾಯಿಕ ಸಮಾಜದಲ್ಲಿ ಅಮ್ಮಚ್ಚಿ ವೆಂಕಪ್ಪಯ್ಯನನ್ನು ಮದುವೆಯಾಗುವುದು ಅನಿವಾರ್ಯವಾಗುತ್ತದೆ. ಗಂಡುದಿಕ್ಕಿಲ್ಲದ ಮನೆಗೆ ಸಹಾಯಕನಾಗಿ ಬಂದು ಸೇರಿಕೊಂಡ ವೆಂಕಪ್ಪಯ್ಯ ಆ ಮನೆಯ ಹಕ್ಕುದಾರಳಾದ ಅಮ್ಮಚ್ಚಿಯ ಮೇಲೆ ಹಕ್ಕು ಸಾಧಿಸುವುದು ಆ ಇಡೀ ಪರಿಸರಕ್ಕೆ ಒಪ್ಪಿತವಾದ ಸಂಗತಿ. ವ್ಯವಸ್ಥೆಯ ವಿರುದ್ಧ ನೇರ ಯುದ್ಧ ಹೂಡಲಾಗದ ಅಮ್ಮಚ್ಚಿ ಮದುವೆಯಾಗಿ ವೆಂಕಪ್ಪಯ್ಯನೊಂದಿಗೆ ತಿರುಪತಿಗೆ ತೆರಳುತ್ತಾಳೆ. ಕೆಲವು ತಿಂಗಳು ಕಳೆದ ಮೇಲೆ ಒಬ್ಬಳೇ ವಾಪಸಾಗುತ್ತಾಳೆ. ‘ಏನು ರಂಡೆ ಒಬ್ಬಳೇ! ಯಂತ ಕತೆ ಮಾಡಿಂಡೆ?’ ಎಂದು ಗುಮಾನಿಯಿಂದ ಕೇಳಿದ ತಾಯಿಗೆ, ‘ಒಬ್ಬಳೇ ಬರದೆ ಮತ್ತೆಂತ ಮಾಡ್ತದ್ ಅಲ್ಲಿದ್ದ್? ನಿನ್ನ ಯಂಕಪ್ಪಯ್ಯ ನೇಣು ಹಾಂಕಿಂಡ’ ಎಂದು ನಿರಾಳ ದನಿಯಲ್ಲಿ ಉಸುರುತ್ತಾಳೆ. ಪರೋಕ್ಷವಾಗಿ ಮಾಡುವ ಗೆರಿಲ್ಲಾ ಯುದ್ಧತಂತ್ರದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತಾಳೆ.

ಸಮಾಜೋ-ಸಾಂಸ್ಕೃತಿಕ ನೆಲೆಯಲ್ಲಿ ಹೆಣ್ಣು ಅನುಭವಿಸುವ ದಿಗ್ಭ್ರಮೆಯನ್ನು ತೋರಿಸುವ ಮೂಲಕ ಸಮಾಜ ಹಾಗೂ ಸಂಸ್ಕೃತಿಯ ಆಳದಲ್ಲಿ ಬೇರೂರಿದ ಪಿತೃಪ್ರಧಾನ ಸಂರಚನೆಗಳನ್ನು ಕಾಣಿಸುವ ಕತೆಗಳನ್ನು ವೈದೇಹಿ ಬರೆಯುತ್ತಾರೆ. ಆಧುನಿಕತೆಯ ಮೂಲಕ ಸಾಮಾಜಿಕ ಬದುಕಿನಲ್ಲಾದ ಬದಲಾವಣೆಗಳು ಹಾಗೂ ಆಧುನಿಕ ಜ್ಞಾನಶಾಖೆಗಳು ನೀಡಿದ ಹೊಸನೋಟಗಳು ಹೆಣ್ಣಿಗೆ ತಾನು ಯಾರು? ತನಗೇನು ಬೇಕಾಗಿದೆ? ತನ್ನ ದೇಹ-ಮನಸ್ಸುಗಳ ನಿಯಂತ್ರಣ ಯಾರು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡಿತು. ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು ಎಂಬ ಕತೆಯಲ್ಲಿ ಆ ಊರಿಗೆ ಹೊಸತಾಗಿ ಬಂದ ಸಿನಿಮಾ ಟಾಕೀಸು ಆಧುನಿಕತೆಯ ಸಂಕೇತ. ಆ ಊರಿನ ಪ್ರತಿಷ್ಠಿತರ ಹೆಂಡತಿಯರು ಗಂಡಂದಿರ ಅಪ್ಪಣೆ ಪಡೆದು ಹೊಸಿಲು ದಾಟಿ ಸಿನಿಮಾ ಟಾಕೀಸಿಗೆ ಬರುವುದೆಂದರೇ ಒಂದು ಬಗೆಯ ಕ್ರಾಂತಿ. ಸಿನಿಮಾ ಟಾಕೀಸಿನಲ್ಲಿ ಮ್ಯಾನೇಜರ್ ಇವರ ಬಳಿ ಟಿಕೇಟು ಕೇಳಿದಾಗ ಕೈಯಲ್ಲಿ ಕಾಸಿಲ್ಲದ ಇವರು ದಿಗ್ಭ್ರಾಂತರಾಗುತ್ತಾರೆ. ತಾವೆಷ್ಟೇ ಗೈಯ್ದರೂ, ತಾವೆಷ್ಟು ಪ್ರತಿಷ್ಠಿತರ ಮನೆಗೆ ಸೇರಿದವರಾದರೂ ಟಿಕೇಟಿಗೆ ಬೇಕಾದ ಹಣವನ್ನು ‘ಬೇಡುವ ಪರದೇಸಿಗಳಂತೆ’ ಪಡೆಯಬೇಕಲ್ಲ ಎಂಬ ಅರಿವು ಇದುವರೆಗಿನ ಅವರ ವಿಸ್ಮೃತಿಯನ್ನು ಸರ್ರನೆ ಕಳಚಿಹಾಕುತ್ತದೆ. ಕುಟುಂಬ, ಸಮಾಜ, ಆರ್ಥಿಕ ವ್ಯವಸ್ಥೆಗಳಲ್ಲಿ ತಾವು ಕಾಣೆಯಾಗಿದ್ದೇವೆಂಬ ಆಘಾತ ಅವರಿಗಾಗುತ್ತದೆ. ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ ಎಂಬ ಕತೆಯಲ್ಲೂ ಪೊಳ್ಳು ಠೇಂಕಾರದಲ್ಲಿ ಮುಚ್ಚಿಹೋದ ಸುಬ್ಬಕ್ಕನನ್ನು ಅನಾವರಣಗೊಳಿಸುವ ಮೂಲಕ ಹೆಣ್ಣಿನ ಶೂನ್ಯ ಸ್ಥಿತಿಯನ್ನು ಪ್ರಶ್ನಿಸಲಾಗಿದೆ. ಮದುವೆ ಮನೆಯೊಂದರಲ್ಲಿ ಕಂಬಕ್ಕೆ ಒರಗಿ ಕೂತು ಎಲ್ಲವನ್ನು ವಿಮರ್ಶಿಸುವ ಸಮಾಜಶಾಸ್ತ್ರ ಓದಿಕೊಂಡ ಹುಡುಗಿಯ ಸಾಕ್ಷಿಪ್ರಜ್ಞೆಯಲ್ಲಿ ಈ ಕತೆಯನ್ನು ಕಟ್ಟಲಾಗಿದೆ. ಮದುವೆ ಮನೆಯಲ್ಲಿ ಆಡುವ ಮಾತುಗಳು ಜಗಳದ ರೂಪ ಪಡೆದು ಅಲ್ಲಿ ನೆರೆದ ಹೆಂಗಸರ ಆರೋಪಿತ ವ್ಯಕ್ತಿತ್ವಗಳೆಲ್ಲ ಕಳಚಿ  ಅಸ್ತಿತ್ವ ಶೂನ್ಯತೆಯ ದರ್ಶನವಾಗುತ್ತದೆ. 

ಮದುವೆ ಮನೆಯೆಂಬ ಆ ಮಿನಿ ಸಮಾಜದಲ್ಲಿ ಕೇಳಿಸಿದ ವ್ಯಂಗ್ಯ, ತಮಾಷೆ, ಅಹಂ ಹಾಗೂ ಆಳವಾದ ವಿಷಾದಗಳನ್ನು ಹೊಮ್ಮಿಸುವ ಮಾತುಗಳು ತಮ್ಮ ಆಳದಲ್ಲಿ ಅನೇಕ ಪ್ರಶ್ನೆಗಳನ್ನು ಹೊಮ್ಮಿಸುವಂತೆ ಕಥೆಯ ವಿನ್ಯಾಸವಿದೆ. ಹೆಣ್ಣು ತನ್ನ ವಿಸ್ಮೃತಿಯನ್ನು ಒಡೆದುಕೊಳ್ಳುವ ಅರಿವಿನ ಕ್ಷಣಗಳನ್ನು ವೈದೇಹಿ ಮಾತುಗಳ ಮೂಲಕವೇ ಕಟ್ಟಿಕೊಡುತ್ತಾರೆ. ವಾಚ್ಯತೆ ಇಲ್ಲಿ ದೌರ್ಬಲ್ಯವಲ್ಲ. ಮಾತುಗಳ ಅನುರಣನ ಸಾಮರ್ಥ್ಯ ವೈದೇಹಿಯವರು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. 

ಈ ಅಂಕಣದ ಹಿಂದಿನ ಬರೆಹಗಳು:
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಚರಿತ್ರೆ ಅಂದು-ಇಂದು...

18-01-2022 ಬೆಂಗಳೂರು

ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ...

ಒಬ್ಬರಲ್ಲ ಮೂವರು : ರಾಕ್ಸ್ ಮೀಡಿಯಾ...

17-01-2022 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ...

16-01-2022 ಬೆಂಗಳೂರು

‘ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟ...