ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

Date: 06-08-2020

Location: ಬೆಂಗಳೂರು


ವಿಶ್ವಸಾಹಿತ್ಯ ಮತ್ತು ರಂಗಭೂಮಿಯ ಅನನ್ಯ ಚೇತನ ವಿಲ್ಹಿಯಂ ಷೇಕ್ಸ್‌ಪಿಯರ್‌. ಹದಿನೈದನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದ ಷೇಕ್ಸ್‌ಪಿಯರ್‌ ಭಾರತೀಯ ಭಾಷೆಗಳೂ ಸೇರಿದಂತೆ ಜಗತ್ತಿನ ವಿವಿಧ ಭಾಷೆಗಳ ಮೇಲೆ ಬೀರಿದ ಪ್ರಭಾವ ವಿಭಿನ್ನ-ವಿಶಿಷ್ಟ. ಕನ್ನಡ ನವೋದಯ ಕಾಲದಲ್ಲಿ ಅಂದರೆ 19ನೇ ಶತಮಾನದ ಉತ್ತರಾರ್ಧ ಹಾಗೂ 20ನೇ ಶತಮಾನದ ಪೂರ್ವಾರ್ಧದಲ್ಲಿ ಕನ್ನಡದ ಮನಸ್ಸುಗಳನ್ನು ಷೇಕ್ಸ್‌ಪಿಯರ್‌ನಿಗೆ ಮುಖಾಮುಖಿಯಾದ ಬಗೆಯನ್ನು ವಿಮರ್ಶಕಿ-ಲೇಖಕಿ ಡಾ. ತಾರಿಣಿ ಶುಭದಾಯಿನಿ ಅವರು ಈ ಅಭ್ಯಾಸಪೂರ್ಣ ಬರೆಹದಲ್ಲಿ ಚರ್ಚಿಸಿದ್ದಾರೆ.

ಮೆಕಾಲೆ ಇಂಡಿಯಾದ ಚರಿತ್ರೆ ಬದಲಾಯಿಸುವ ಇಂಗ್ಲಿಷ್ ಶಿಕ್ಷಣದ ಮಿನಿಟಿಗೆ ಸಹಿ ಹಾಕುವ ವೇಳೆಗೇ ಪ್ರಾಯಶ: ಷೇಕ್ಸ್‌ಪಿಯರ್‌ನ ಪ್ರಭಾವವನ್ನು ಮುನ್ನವೇ ಕಂಡಿದ್ದನೋ ಏನೊ ಇಂಗ್ಲಿಷ್ ಶಿಕ್ಷಣದ ಹಬ್ಬುವಿಕೆಯೊಂದಿಗೆ ಭಾರತೀಯರಿಗೆ ಈ ನಾಟಕಕಾರನ ಬಗ್ಗೆ ರುಚಿ ಹತ್ತಿಬಿಟ್ಟಿತು. ಶಾಲಾಕಾಲೇಜುಗಳಲ್ಲಿ ಷೇಕ್ಸ್‌ಪಿಯರ್‌, ಕಾಳಿದಾಸ, ಭಾಸ ಮುಂತಾದವರ ಜಾಗವನ್ನು ನಿಧಾನವಾಗಿ ಆಕ್ರಮಿಸತೊಡಗಿದ್ದನ್ನು ಯಾರಾದರೂ ಕಾಣಬಹುದಿತ್ತು. ಶಿಕ್ಷಿತ ಕೆನೆಪದರವು ಶುದ್ಧಗಿಳಿಗಳಂತೆ ಷೇಕ್ಸ್‌ಪಿಯರ್‌ನ ಉಲ್ಲೇಖಗಳನ್ನು ಉದ್ಧರಿಸುತ್ತಾ ಮೆರೆಯುತ್ತಿರುವಾಗಲೇ ಷೇಕ್ಸ್‌ಪಿಯರ್‌ನ ಸಾಹಿತ್ಯವನ್ನು ತಮ್ಮ ರುಚಿಗೆ ಒಗ್ಗಿಸಿಕೊಳ್ಳುವಲ್ಲಿ ದೇಸೀ ರಂಗಭೂಮಿಗಳು ಕ್ರಿಯಾಶೀಲವಾಗತೊಡಗಿದ್ದವು. ಇಂಗ್ಲಿಷಿನಲ್ಲಿ ಕೇಳಿಸಿಕೊಂಡ ಷೇಕ್ಸ್‌ಪಿಯರ್‌ ನಾಟಕಗಳ ಸಾರ್ವಕಾಲಿಕ ಕಥೆಗಳನ್ನು ಸೃಜನಶೀಲವಾಗಿ ಬಳಸಿಕೊಂಡು ಅವುಗಳನ್ನು ದೇಶೀಯ ಸಂಸ್ಕೃತಿ ಎಂಬ ಕಲ್ಪಿತ ಅಚ್ಚುಗಳಲ್ಲಿ ತುಂಬಿ ಮತ್ತೆ ಮತ್ತೆ ಕಟ್ಟಲಾಯಿತು. ಕೆಲವರು ಅನ್ಯದೇಶೀಯನ ಸಾಹಿತ್ಯವನ್ನು ಜರಡಿಯಾಡಿ ಹಿಟ್ಟು ಯಾವುದೊ ಹೊಟ್ಟು ಯಾವುದೊ ತಿಳಿಯದೆ ತಮ್ಮನ್ನು ಸಮರ್ಥಿಸಿಕೊಂಡರೆ ಇನ್ನೂ ಕೆಲವರು ಇಂಗ್ಲಿಷಿನ ತಿನಿಸನ್ನು ಇಂಗ್ಲಿಷಿನ ಹಾಗೆಯೇ ತಿನ್ನಲಾಗುತ್ತದೆಯೇ? ಎಂದು ಪ್ರಶ್ನಿಸಿ ಹಾಲು ಒಡೆದು ಪನ್ನೀರು ಮಾಡಿಕೊಳ್ಳುವ ಯತ್ನಕ್ಕೆ ಕೈಹಾಕಿ ಹೊಸ ರುಚಿಯನ್ನು ಮಾಡಲಾರಂಭಿಸಿದ್ದರು. ಷೇಕ್ಸ್‌ಪಿಯರ್‌ ಅಂತೂ ಹೊಸ ಹೊಸ ಅವತಾರಗಳಲ್ಲಿ ಬರಲಾರಂಭಿಸಿ, ದೇಶೀಯ ಸಂವೇದನೆಯಲ್ಲಿ ಪಾಲು ಪಡೆದ.

ವಸಾಹತೋತ್ತರ ಓದುಗಳಲ್ಲಿ ಷೇಕ್ಸ್‌ಪಿಯರ್‌ ವಸಾಹತುಶಾಹಿ ರಾಜಕೀಯದ ಭಾಗವಾಗಿದ್ದಾನೆ (ಈ ಕುರಿತಾಗಿ ‘ಪೊಲಿಟಿಕಲ್ ಷೇಕ್ಸ್‌ಪಿಯರ್‌’ (ಸಂ) ಜೊನಾದನ್ ದಾಲಿಮೊರ್ & ಅಲನ್ ಸಿನ್‌ಫೀಲ್ಡ್, ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್, 1994) ಎಂಬ ಕೃತಿಯೇ ಇಂಗ್ಲಿಷಿನಲ್ಲಿ ಬಂದಿದೆ). ವಸಾಹತುಶಾಹಿ ಆಳ್ವಿಕೆಯ ಕಾರಣದಿಂದ ಒಳಬಂದ ಷೇಕ್ಸ್‌ಪಿಯರ್‌ ದೇಶೀಯ ಅನುಸಂಧಾನದಲ್ಲಿ ಮುರಿದು ಕಟ್ಟಿಕೊಳ್ಳುವ ಸೃಜನಶೀಲ ನಿರಚನೆಗೆ ಇಂಬುಕೊಟ್ಟ ಪರಿಣಾಮವಾಗಿ ದೇಶೀಯ ನೆಲೆಗಳಲ್ಲಿ ಒಂದು ಪ್ರತಿಕ್ರಿಯೆ, ಪ್ರತಿರೋಧಗಳ ಹುಟ್ಟಿಗೆ ಕಾರಣನಾದ. ದೇಶೀಯರು ಷೇಕ್ಸ್‌ಪಿಯರ್‌ನನ್ನು ಪಾಶ್ಚಾತ್ಯ ಸಂಸ್ಕೃತಿಯ ಜೊತೆ ಸಮೀಕರಿಸಿಕೊಂಡಿದ್ದರಿಂದ ಅವನ ಜೊತೆ ಅನುಸಂಧಾನ ಮಾಡುತ್ತಾ ಹೋದರು. ಕೆಲವೊಮ್ಮೆ ನೇರ ತಕರಾರಿಗೆ ಇಳಿದರೆ, ಇನ್ನೊಮ್ಮೆ ಅವನ ಸಾಹಿತ್ಯದ ಒಳ್ಳೆಯ ಅಂಶಗಳನ್ನು ಶುದ್ಧೀಕರಿಸಿ ಒಳಗೆ ತೆಗೆದುಕೊಳ್ಳುವ ಧೋರಣೆ ಹೊಂದಿದ್ದರು. ತಮ್ಮಿಚ್ಛೆಯಂತೆ ಷೇಕ್ಸ್‌ಪಿಯರ್‌ನನ್ನು ನಿರೂಪಿಸುತ್ತಾ ಹೋದರು. ಷೇಕ್ಸ್‌ಪಿಯರ್‌ನನ್ನು ಸ್ವೀಕರಿಸುವ ದೇಶೀಯ ವರ್ಗದಲ್ಲಿ ಷೇಕ್ಸ್‌ಪಿಯರ್‌ ಜೊತೆ ನೇರವಾಗಿ ತಕರಾರು ಮಾಡುವ ವಿದ್ಯಾವಂತ ತಲೆಮಾರಿಗಿಂತಲೂ ಅವನನ್ನು ತಂತಮ್ಮ ಭಾಷೆ, ಸಂವೇದನೆಗಳಲ್ಲಿ ನಿಜಗೊಳಿಸಿಕೊಳ್ಳಲೆತ್ನಿಸಿದ ದೇಶೀಯರ ವರ್ಗವು ಸೃಜನಶೀಲ ಕಟ್ಟುವಿಕೆಗಳಲ್ಲಿ ಮುಂಚೂಣಿಯಲ್ಲಿದ್ದಿತು. ಅವನ ಸಾಹಿತ್ಯವನ್ನು ಇನ್ನಿಲ್ಲದಂತೆ ರೂಪ, ಭಾಷೆಗಳನ್ನು ಬದಲಾಯಿಸಿ ಅವು ಷೇಕ್ಸ್‌ಪಿಯರ್‌ನ ಮೂಲ ಕಾಪಿರೈಟನ್ನೇ ಬುಡಮೇಲು ಮಾಡುವಂತಿದ್ದವು ಹಲವು. ಹೀಗೆ ಬದಲಾಯಿಸಿಕೊಳ್ಳುವ ಮೂಲಕ ಆಳವಾಗಿ ಯಾರಿಗೋ ಉತ್ತರ ಹೇಳುತ್ತಿದ್ದೇವೆಂಬ ಭಾವನೆ ಇದ್ದಿರಬೇಕು. ಈ ವರ್ಗ ಷೇಕ್ಸ್‌ಪಿಯರ್‌ನನ್ನು ತಮಗೆ ಅರಿವಿಲ್ಲದಂತೆ ಜೀರ್ಣಿಸಿಕೊಂಡುಬಿಟ್ಟಿದ್ದರಿಂದ ಅವನನ್ನು ತಮ್ಮ ಅನ್ನಮಯ ಕೋಶದ ಭಾಗವಾಗಿ ಒಪ್ಪಿಕೊಂಡುಬಿಟ್ಟಿದ್ದವು. ಈ ಒಳಗೊಳ್ಳುವ, ಅರಗಿಸಿಕೊಳ್ಳುವ, ಒಲ್ಲದ ಅಂಶಗಳನ್ನು ಎಸೆಯುವ ಪ್ರಕ್ರಿಯೆಗಳು ಷೇಕ್ಸ್‌ಪಿಯರ್‌ ಸಾಹಿತ್ಯವು ಭಾರತೀಯ ಭಾಷೆಗಳಲ್ಲಿ ಹೇಗೆ ಒಂದು ಚರಿತ್ರೆಯನ್ನು ನಿರ್ಮಿಸಿತು ಎನ್ನುವುದಕ್ಕೆ ಸೂಚಕವಾಗಿವೆ. ಪಠ್ಯಗಳನ್ನು ಸಂಕ್ಷಿಪ್ತಗೊಳಿಸುವುದು, ಕೆಲವು ಭಾಗಗಳನ್ನು ಹಿಗ್ಗಿಸುವುದು, ಮಧ್ಯಪ್ರವೇಶ ಮಾಡುವುದು ಇತ್ಯಾದಿ ಎಲ್ಲ ಕ್ರಿಯೆಗಳೂ ಅನುವಾದಕರ ಸ್ವತಂತ್ರ ಧೋರಣೆಗಳು.

ಷೇಕ್ಸ್‌ಪಿಯರ್‌ ಎಂಬ ಇಂಗ್ಲಿಷ್ ಕವಿ/ನಾಟಕಕಾರನನ್ನು ಇಟ್ಟುಕೊಂಡು ಒಂದು ಭಾರತೀಯ ಭಾಷೆಯಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ ಷೇಕ್ಸ್‌ಪಿಯರ್‌ ಭಾಷಾಂತರಗಳೊಂದಿಗೆ ಒಂದು ಅನುವಾದ ಚರಿತ್ರೆಯೇ ತೆರೆದುಕೊಳ್ಳುತ್ತದೆ. ರಂಗಕರ್ಮಿಗಳೂ ಸಾಹಿತ್ಯದ ಒಲವುಳ್ಳವರೂ ಷೇಕ್ಸ್‌ಪಿಯರ್‌ ಸಾಹಿತ್ಯವನ್ನು ಅನುಸಂಧಾನ ಮಾಡಲು ಉತ್ಸುಕವಾಗಿದ್ದುದಕ್ಕೆ ಸಾಮಾನ್ಯ ಕಾರಣಗಳೆಂದರೆ ವಸಾಹತುಶಾಹಿ ಪ್ರಭುತ್ವದ ಬಗೆಗಿನ ಗೌರವ, ಆದರಣೆಗಳು ಒಂದೆಡೆ ಇದ್ದರೆ ಕಥಾವಸ್ತುವಿನ ಸಾರ್ವತ್ರಿಕತೆ ಇನ್ನೊಂದು ಬಲವಾದ ಕಾರಣವೆನ್ನಬಹುದು. ಒಂದು ವಿಶ್ವಾತ್ಮಕ ಮಾನವೀಯ ಗ್ರಹಿಕೆಯನ್ನು ಆಯಾ ಸಂಸ್ಕೃತಿಗಳ ಕಕ್ಷೆಗಳೊಳಗೆ ಇಟ್ಟುಕೊಂಡು ನಮ್ಮ ಕನ್ನಡಿಗಳ ಮೂಲಕ ಜಗತ್ತನ್ನು ನೋಡುವ ಅವಕಾಶವನ್ನು ಷೇಕ್ಸ್‌ಪಿಯರ್‌ ಸಾಹಿತ್ಯ ಮಾಡಿಕೊಡುತ್ತದೆ. ಇದರ ಜೊತೆಗೆ ವಸಾಹತುಶಾಹಿ ಪ್ರಭುತ್ವದ ಸಂಸ್ಕೃತಿಯನ್ನು ದೇಶೀಯ ಸಂದರ್ಭಗಳಲ್ಲಿ ಸೃಷ್ಟಿಸಿಕೊಳ್ಳುವ ಮೂಲಕ ಅದಕ್ಕೆ ಪ್ರತಿರೋಧ ಸೂಚಿಸಬಹುದಾದ ಮೂರನೇ ಸಾಧ್ಯತೆ ಕೂಡ ಇದೆ.

ಷೇಕ್ಸ್‌ಪಿಯರ್‌ನನ್ನು ಅನುವಾದಿಸಿಕೊಳ್ಳುವುದೆಂದರೆ ಎಷ್ಟು ಸುಲಭವೋ ಅಷ್ಟೇ ಸಂಕೀರ್ಣವಾದ ಪ್ರಕ್ರಿಯೆ. ಪ್ರತಿ ಷೇಕ್ಸ್‌ಪಿಯರ್‌ ಓದುಗ/ಅನುವಾದಕ ತನ್ನದೇ ಆದ ರೀತಿಯಲ್ಲಿ ಆ ಸಾಹಿತ್ಯವನ್ನು ಮತ್ತೆ ಕಟ್ಟಿಕೊಳ್ಳುತ್ತಿರುತ್ತಾನೆ. ಪ್ರಾಯಶಃ ಷೇಕ್ಸ್‌ಪಿಯರ್‌ ನಮ್ಮೊಳಗೆ ಬಂದಿದ್ದೇ ದಟ್ಟವಾದ ಸಾಂಸ್ಕೃತಿಕ ಪ್ರಭಾವಗಳಿಂದ. ಜೊತೆಗೆ ನಮಗೆ ಬೇಕಾದ ಷೇಕ್ಸ್‌ಪಿಯರ್‌ನನ್ನು ಕಟ್ಟಿಕೊಳ್ಳತೊಡಗಿದ್ದು ಷೇಕ್ಸ್‌ಪಿಯರ್‌ನ ‘ಆಸ್ ಯೂ ಲೈಕ್ ಇಟ್’ ಎನ್ನುವ ಹಿಂಜಬಹುದಾದ ವಸ್ತುಗಳಿಂದ; ಧೋರಣೆಗಳಿಂದ. ಷೇಕ್ಸ್‌ಪಿಯರ್‌ನ್ನು ನಮ್ಮವನ್ನಾಗಿ ಮಾಡಿಕೊಳ್ಳುವ ತಹತಹ ಮಾತ್ರ ಸಾಧಾರಣವಾಗಿ ಎಲ್ಲ ಭಾರತೀಯ ಭಾಷೆಗಳಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿಂದಲೇ ಕಾಣುತ್ತದೆ. ಆದರೆ ಅವನನ್ನು ಒಳಗು ಮಾಡಿಕೊಂಡ ವಿಧಾನಗಳು ಮಾತ್ರ ವಿಭಿನ್ನವಾಗಿದ್ದವು. ಷೇಕ್ಸ್‌ಪಿಯರ್ ಸಾಹಿತ್ಯವನ್ನು ತಂತಮ್ಮ ಭಾಷೆಯಲ್ಲಿ ತರಲು ಎದುರಿಸಿದ ಸಂದಿಗ್ಧಗಳು ಸಾಂಸ್ಕೃತಿಕವಾಗಿರುವಂತೆಯೇ ಅವು ಸಂರಚನೆಗೆ ಸಂಬಂಧಿಸಿದವೂ ಆಗಿದ್ದವು. ಇವುಗಳನ್ನು ಬಗೆಹರಿಸಿಕೊಳ್ಳಲು ಒಂದು ಮೀಮಾಂಸೆಯ ನೆರವು ಇದ್ದೀತೊ ಹೇಗೊ ಎಂಬುದರ ಬಗ್ಗೆಯೂ ತಿಳಿಯುವುದಿಲ್ಲ. ಬಹುತೇಕ ಭಾರತೀಯಗೊಳಿಸಿಕೊಳ್ಳುವ ಪ್ರಕ್ರಿಯೆಯು ವೈಯಕ್ತಿಕ ಪ್ರಯೋಗಗಳಾಗಿದ್ದಂತೆ ಪ್ರತಿಕ್ರಿಯಾತ್ಮಕವಾಗಿಯೂ ಇದ್ದಂತೆ ತೋರುತ್ತದೆ. ಭಾಷೆ, ಭಾವ, ಸಂರಚನೆಗಳು ಸೃಜನಾತ್ಮಕವಾದಂತೆಲ್ಲ ಅಪರಿಮಿತವಾದ ಷೇಕ್ಸ್‌ಪಿಯರ್‌ ಸಾಹಿತ್ಯರೂಪಗಳು ಹೊಮ್ಮತೊಡಗಿದವು.

ಷೇಕ್ಸ್‌ಪಿಯರ್ ಅನುವಾದಗಳು ಅಖಿಲ ಭಾರತೀಯ ಪ್ರಕ್ರಿಯೆಯಾಗಿದ್ದವು. ಆದರೆ ಅವು ನೇರವಾಗಿ ಅನುವಾದಗೊಳ್ಳುವುದಕ್ಕಿಂತ ಛದ್ಮವೇಷಧಾರಿಗಳಾಗಿದ್ದವು ಎನ್ನುವುದಕ್ಕೆ ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ವಿವಿಧ ಭಾಷೆಗಳಲ್ಲಿ ನಡೆದ ಷೇಕ್ಸ್‌ಪಿಯರ್ ನಾಟಕಗಳ ರೂಪಾಂತರಗಳೇ ಸಾಕ್ಷಿ. ಗುಜರಾತಿ, ಬಂಗಾಲಿ, ಹಿಂದೀ, ಮರಾಠಿ ಇತ್ಯಾದಿ ಭಾರತೀಯ ಭಾಷೆಗಳಲ್ಲಿ ಬಂದ ಷೇಕ್ಸ್‌ಪಿಯರ್ ಅನುವಾದಗಳ ವಿನ್ಯಾಸವು ಹೀಗೆ ರೂಪಾಂತರಗೊಂಡಿರುವುದನ್ನು ಗಮನಿಸಬಹುದು. ಒಬ್ಬ ಅನ್ಯದೇಶೀಯ ನಾಟಕಕಾರನನ್ನು ದೇಸೀಯವಾಗಿ ಕಸಿ ಮಾಡಿಕೊಳ್ಳುವ ಉತ್ಸಾಹ, ಕುತೂಹಲಗಳು ಈ ರೂಪಾಂತರಗಳ ಬೆನ್ನಹಿಂದೆ ಇರಬಹುದು. ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಿತ ಸಮುದಾಯಕ್ಕೆ ಸೇರಿದ್ದ ಅಕಾಡೆಮಿಕ್ ಬರಹಗಾರನನ್ನು ಸಾಧಾರಣೀಕರಣಗೊಳಿಸಿಕೊಳ್ಳುವ ಪ್ರಕ್ರಿಯೆ ಇಲ್ಲಿ ಕಾಣುತ್ತದೆ. ಅನೇಕ ಅನುವಾದಕರು ತಮ್ಮ ಅನುವಾದಗಳ ಹಿಂದಿನ ಉದ್ದೇಶವನ್ನು ವಿವರಿಸುವಾಗ ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಮಾಡಿದ ಅನುವಾದ; ಷೇಕ್ಸ್‌ಪಿಯರ್‌ನೆಂಬ ನಾಟಕಕಾರನನ್ನು ನಮ್ಮವರಿಗೆ ಪರಿಚಯಿಸುವ ಉದ್ದೇಶದಿಂದ ಮಾಡಿದ ಅನುವಾದ ಎಂದು ಹೇಳಿಕೊಂಡಿದ್ದಾರೆ. ಕನ್ನಡದ ಸಂದರ್ಭದಲ್ಲಿಯೂ ಭಾಷಾಂತರಕಾರರು ಈ ಅಭಿಪ್ರಾಯದ ಮಾತುಗಳನ್ನು ನಿವೇದನೆ ಮಾಡಿಕೊಂಡಿದ್ದಾರೆ. ಒಥೆಲೊ ಭಾಷಾಂತರವಾದ ‘ಶೂರಸೇನ ಚರಿತ್ರೆ’ಯ ಪ್ರಸ್ತಾವನೆಯಲ್ಲಿ,”ಇಂಗ್ಲಿಷಿನಲ್ಲಿನ ನಾಟಕಗಳಲ್ಲಿ ಕೆಲವನ್ನು ಕನ್ನಡದಲ್ಲಿ ಬರೆದರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿರುವುದೂ ಅಲ್ಲದೆ ಇಂಗ್ಲಿಷ್ ಜನರಲ್ಲಿನ ವ್ಯವಹಾರಾದಿಗಳೂ ಸ್ವಲ್ಪಮಟ್ಟಿಗೆ ಕನ್ನಡಿಗರಿಗೆ ಗೊತ್ತಾಗಬಹುದಾದ್ದರಿಂದ ಷೇಕ್ಸ್‌ಪಿಯರ್‌ ಮಹಾಕವಿಯು ಬರೆದ ನಾಟಕಗಳನ್ನು ಕನ್ನಡಿಸಬೇಕೆಂದು ಸಿ.ಸುಬ್ಬರಾಯರು ಬಸವಪ್ಪಶಾಸ್ತ್ರಿಗಳನ್ನು ಪ್ರೇರಿಸಿ ಒಥೆಲೊ ನಾಟಕವನ್ನು ‘ಶೂರಸೇನ ಚರಿತ್ರೆ’ಯೆಂಬ ಹೆಸರಿನಿಂದ ಕನ್ನಡಿಸಿದರು ಎನ್ನಲಾಗಿದೆ. ಹ್ಯಾಮ್ಲೆಟ್ ನಾಟಕವನ್ನು ‘ಸನ್ತಾಪಕ’ ಎಂಬ ಹೆಸರಿನಲ್ಲಿ ರೂಪಾಂತರಗೊಳಿಸಿದ ಅನುವಾದಕ ಅಮೃತಾಚಾರಿ ಎಂಬುವರು ತಮ್ಮ ಭಾಷಾಂತರದ ಉದ್ದೇಶಗಳು ಎರಡು ಎಂದು ಹೇಳುತ್ತಾ, “ಆ ಮಹಾಕವಿಯ ನಾಟಕಗಳನ್ನು ಇಂಗ್ಲಿಷ್ ಭಾಷಾ ಪರಿಚಯವಿಲ್ಲದ ಕನ್ನಡ ಜನಸಾಮಾನ್ಯಕ್ಕೆ ಪರಿಚಯ ಮಾಡುವುದು, ಎರಡನೆಯದಾಗಿ, ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆಯಬೇಕೆಂದಿರುವ ವಿದ್ಯಾರ್ಥಿಗಳಿಗೂ, ವಿದ್ಯಾರ್ಥಿನಿಯರಿಗೂ ಅಲ್ಪ ಸ್ವಲ್ಪ ಸಹಾಯವಾಗುವಂತೆ ಮೊದಲೇ ಪರಿಚಯ ಮಾಡುವುದು” (ಸನ್ತಾಪಕ, ವಿಜ್ಞಾಪನೆ). ಭಾರತದಲ್ಲಿ ಷೇಕ್ಸ್‌ಪಿಯರ್ ಅನುವಾದಗಳ ಧೋರಣೆಯನ್ನು ಅಧ್ಯಯನ ಮಾಡಿದ ಶಿಶಿರಕುಮಾರ್ ದಾಸ್ ಅವರು ಹೇಳುವಂತೆ, “ಷೇಕ್ಸ್‌ಪಿಯರ್ ಭಾರತೀಯ ಉನ್ನತ ವರ್ಗಕ್ಕೆ ಸಾಂಸ್ಕೃತಿಕ ಬಿಂಬವಾಗಿದ್ದ. ಸುಶಿಕ್ಷಿತ ಇಂಗ್ಲಿಷ್ ವರ್ಗವು ತಮ್ಮ ದೇಶೀಯ ಸಾಹಿತ್ಯ ಪರಂಪರೆಯನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದು ದೇಶೀಯ ಪರಂಪರೆಯ ಜಾಗದಲ್ಲಿ ಹೊಸ ಮಾದರಿಗಳನ್ನೂ ನಿಯಮಗಳನ್ನೂ ಸ್ಥಾಪಿಸಲು ಯತ್ನಿಸುತ್ತಿತ್ತು. ಈ ವಿದ್ಯಾವಂತ ಸಂತತಿ ಹೆಚ್ಚಾಗುತ್ತಿದ್ದಂತೆ ಅದು ಷೇಕ್ಸ್‌ಪಿಯರ್‌ ಭಾಷಾಂತರಗಳನ್ನು ಮಾಡಲು ಉದ್ಯುಕ್ತವಾಯಿತು… ಇವರು ಯಾರಿಗಾಗಿ ಮಾಡುತ್ತಿದ್ದರು ಎಂದರೆ ಅಲ್ಪಸ್ವಲ್ಪ ಇಂಗ್ಲಿಷ್ ತಿಳಿದವರು ಅಥವಾ ಇಂಗ್ಲಿಷ್ ಬಾರದೇ ಇರುವವರಿಗಾಗಿ. ಆದರೆ ವ್ಯಂಗ್ಯ ಎಂದರೆ ಇಂಗ್ಲಿಷ್ ಬಲ್ಲ ಉನ್ನತ ವರ್ಗವು ಷೇಕ್ಸ್‌ಪಿಯರ್‌ನನ್ನು ಶುದ್ಧವಾಗಿ ನೋಡಲು ಬಯಸಿ ಭಾಷಾಂತರಗಳನ್ನು ಮೂಲಪಠ್ಯಕ್ಕೆ ನಿಷ್ಠವಾಗಿರುವಂತೆ ಮಾಡಲೆತ್ನಿಸಿದರು. ಹಾಗೆ ನೋಡಿದರೆ ಭಾಷಾಂತರವು ಮೂಲ ಷೇಕ್ಸ್‌ಪಿಯರ್‌ನನ್ನು ಕಲುಷಿತಗೊಳಿಸುತ್ತದೆ ಎಂಬ ಭಾವನೆಯಿತ್ತು. ಈ ವಿದ್ಯಾವಂತ ವರ್ಗದ ವೈರುಧ್ಯದ ಧೋರಣೆಗಳಿಂದ ಭಾಷಾಂತರಗಳಿಗೆ ಗೌರವ ಇರಲಿಲ್ಲ” (ಶಿಶರ್‌ಕುಮಾರ್ ದಾಸ್: 2005, ಪು.48).

ಇಂಗ್ಲಿಷ್ ಬಲ್ಲ ವರ್ಗವು ಅದಾಗಲೇ ಇದ್ದ ಒಂದು ಸುಶಿಕ್ಷಿತ ಓದುಗ ವಲಯವನ್ನು ಪಾಶ್ಚಾತ್ಯ ಓದಿಗೆ ತೆರೆಯುವ ಮೂಲಕ ಅವರ ಅಭಿರುಚಿಯನ್ನು ಹೊಸ ಸಮಾಜಕ್ಕೆ ಅಣ ಗೊಳಿಸುವ ಯತ್ನ ಮಾಡುತಿತ್ತು. ಆದರೆ ಭಾಷಾಂತರಗಳು ನಡೆಯುತ್ತಿದ್ದುದು ಸ್ಥೂಲವಾಗಿ ಇಂಗ್ಲಿಷ್ ಬಲ್ಲ/ಬಾರದ ವಿದ್ಯಾರ್ಥಿ ವೃಂದಕ್ಕೆ ಹಾಗೂ ಸ್ಥಳೀಯ ಆಸಕ್ತ ವಾಚಕರಿಗೆ. ಹೀಗಾಗಿ ಷೇಕ್ಸ್‌ಪಿಯರ್ ನಾಟಕಗಳು, ಕವಿತೆಗಳು ಭಾಷಾಂತರಗೊಳ್ಳುತ್ತಿದ್ದುದು ಈ ವಲಯದ ಮಧ್ಯದಲ್ಲಿಯೇ. ಷೇಕ್ಸ್‌ಪಿಯರ್ ನಾಟಕಗಳು/ಸಾನೆಟ್‌ಗಳು ಭಾರತಕ್ಕೆ ಬರುವುದಕ್ಕೆ ಇಂಗ್ಲಿಷ್ ವಿದ್ಯಾಭ್ಯಾಸವೇ ಮುಖ್ಯ ಪ್ರೇರಣೆ. ಅಲ್ಲದೆ ಷೇಕ್ಸ್‌ಪಿಯರ್ ನಾಟಕಗಳು ವಿಶ್ವಮಾನವತ್ವಕ್ಕೆ ಸಲ್ಲುವ ಮಾನವತಾ ವಸ್ತುಗಳನ್ನು ಹೊಂದಿದ್ದರಿಂದ ಅವು ಸಾಧಾರಣೀಕರಣಕ್ಕೆ ಒಗ್ಗಿದವು.

ಕನ್ನಡದ ಮಟ್ಟಿಗೆ ಪಠ್ಯಪುಸ್ತಕಗಳಲ್ಲಿ ಷೇಕ್ಸ್‌ಪಿಯರ್ ಸೇರ್ಪಡೆಯು ವಸಾಹತುಶಾಹಿ ಶಿಕ್ಷಣ ಆರಂಭಗೊಂಡ ಕಾಲದಿಂದಲೇ ಆರಂಭವಾದಂತೆ ತೋರುತ್ತದೆ. ಪಠ್ಯಪುಸ್ತಕಗಳನ್ನು ಮಾಡುವಾಗ ಷೇಕ್ಸ್‌ಪಿಯರ್ ನಾಟಕದ ಹಾಡುಗಳನ್ನು ಭಾಷಾಂತರ ಮಾಡಿಕೊಳ್ಳಲಾಗಿದೆ. ಕನ್ನಡದ ಮೊದಲ ತಲೆಮಾರಿನ ಭಾಷಾಂತರಕಾರರಾದ ಪಂಜೆಯವರು ಸಂಪಾದಿಸಿದ ಕನ್ನಡ 2ನೆಯ ಪಠ್ಯಪುಸ್ತಕದಲ್ಲಿ(1919) ಹಟ್ಟಿಯಂಗಡಿ ನಾರಾಯಣರಾಯರು ಅನುವಾದಿಸಿದ್ದ ಷೇಕ್ಸ್‌ಪಿಯರ್‌ನ ಮರ್ಚೆಂಟ್ ಆಫ್ ವೆನಿಸ್ ನಾಟಕದಿಂದ ನಾಲ್ಕನೇ ಅಂಕದ ‘ಕ್ವಾಲಿಟಿ ಆಫ್ ಮರ್ಸಿ ಈಸ್ ಸೋ..’ ಎನ್ನುವ ಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಸ್.ಜಿ ನರಸಿಂಹಾಚಾರ್ಯರು ‘ದಿ ಟೆಂಪೆಸ್ಟ್’ ನಾಟಕದಿಂದ ಏರಿಯಲ್ ಹಾಡುವ ‘ಫುಲ್ ಫ್ಯಾದೊಮ್ ಫೈವ್ ದೈ ಫಾದರ್ ಲೈಸ್’ ಹಾಗು ‘ವೇರ್ ದ ಬೀ ಸಕ್ಸ್’ ಎಂಬ ಎರಡು ಹಾಡುಗಳನ್ನು ಅನುವಾದಿಸಿದ್ದರು. 1919ರಲ್ಲಿ ಹಟ್ಟಿಯಂಗಡಿ ನಾರಾಯಣರಾಯರು ‘ಆಂಗ್ಲ ಕವಿತಾವಳಿ’ಯ ಹೆಸರಿನಲ್ಲಿ ಷೇಕ್ಸ್‌ಪಿಯರ್ ಮತ್ತು ಇತರರು ಎಂಬ ಮಾನದಂಡದ ಮೇಲೆ ಕಾವ್ಯದ ಭಾಷಾಂತರವನ್ನು ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ನಾರಾಯಣರಾಯರು ‘ಮರ್ಚೆಂಟ್ ಆಫ್ ವೆನಿಸ್’ ನಾಟಕದ ‘ಕ್ವಾಲಿಟಿ ಆಫ್ ಮರ್ಸಿ ಈಸ್ ಸೋ.. ’ ಎಂಬ ಕವಿತಾಭಾಗವನ್ನು ‘ಕರುಣೆ’ ಎಂದು ಅನುವಾದಿಸಿದ್ದರು. ಮರ್ಚೆಂಟ್ ಆಫ್ ವೆನಿಸ್ಸಿನ 5ನೇ ಅಂಕದ 1ನೇ ದೃಶ್ಯದ ‘ಅತಿಚಿತ್ರ ಸುಸ್ವರದ ಬಲ, ವನದ ಹರಿಣಾಶ್ವ/ತತಿಕೊಬ್ಬಿ ಕೂಗಿ ನೆಗೆದೋಡುತಿರಲು’ ಎಂದೂ ಹಾಗು ಅದೇ ಅಂಕದ ‘ಕರುಣರಸ ಹಿಂಡಿ ತೆಗೆಯುವುದಿಲ್ಲ, ದಿವದಿಂದ/ಸುರಿವ ಶೀಕರದ ಸ್ವಭಾವಿಯಹುದು’ ಎಂದೂ ಮಾಡಲಾಗಿದೆ. ಇದಲ್ಲದೆ ಇದೇ ನಾಟಕದ 3ನೇ ಅಂಕ, 1ನೇದೃಶ್ಯ, 1ನೇ ಅಂಕದ 1ನೇ ದೃಶ್ಯದ ಕೆಲವು ಭಾಗಗಳು ಭಾಷಾಂತರಗೊಂಡಿವೆ. ಮೆಷರ್ ಫಾರ್ ಮೆಷರ್ (1ಅಂ. 1ದೃ), ಆಸ್ ಯು ಲೈಕ್ ಇಟ್ (2ಅಂ. 1ನೇ ದೃ), ಟೆಂಪೆಸ್ಟ್ (4ನೇ ಅಂ, 1ನೇ ದೃ), ಲವ್ಸ್ ಲೇಬರ್ ಲಾಸ್ಟ್ (1ನೇ 1ದೃ) ಇತ್ಯಾದಿ ಭಾಗಗಳನ್ನು ಅಚ್ಚಗನ್ನಡದಲ್ಲಿ ನಾರಾಯಣರಾಯರು ಅನುವಾದ ಮಾಡಿದ್ದಾರೆ. ಕಂಪೆನಿ ನಾಟಕಗಳಲ್ಲಿ ರೂಪಾಂತರಗೊಂಡ ಷೇಕ್ಸ್‌ಪಿಯರ್‌ನ ನಾಟಕಗಳಲ್ಲಿ ಕೆಲವು ಹಾಡುಗಳ ಭಾಗಗಳನ್ನು ಪದಶಃ ಅಲ್ಲದಿದ್ದರೂ ಕೆಲವು ಆಶಯಗಳನ್ನು ಉಳಿಸಿಕೊಂಡು ಹಾಡುಗಳನ್ನಾಗಿಸಿಕೊಂಡಿದೆ. ಹೊಸಪೇಟೆಯ ಹನುಮಂತೇಗೌಡರು ಭಾಷಾಂತರಿಸಿದ ‘ವೇಣುಪುರಿಯ ವರ್ತಕ’ ನಾಟಕದಲ್ಲಿ ಸ್ವಕೀಯವಾದ ಪದ್ಯಗಳನ್ನೂ ಷೇಕ್ಸ್‌ಪಿಯರ್ ನಾಟಕದ ಪದ್ಯಗಳನ್ನೂ ರಚಿಸಿ ಸೇರಿಸಿದ್ದಾರೆ. ಬಿ.ಎಂ.ಶ್ರೀಕಂಠಯ್ಯ ಅವರ ‘ಇಂಗ್ಲಿಷ್ ಗೀತಗಳು’ ಸಂಕಲನದಲ್ಲಿಯೂ ಷೇಕ್ಸ್‌ಪಿಯರ್ ನಾಟಕದ ಕೆಲವು ಹಾಡುಗಳ ಅನುವಾದಗಳಿವೆ. ಶ್ರೀಯವರು ಷೇಕ್ಸ್‌ಪಿಯರ್‌ನ ಸಾನೆಟ್ಟುಗಳಿಗಿಂತ ರಂಗಗೀತೆಗಳ ಕಡೆಗೇ ಹೆಚ್ಚು ಒಲವು ತೋರಿರುವುದು ಕುತೂಹಲಕಾರಿಯಾಗಿದೆ.

ಶೈಕ್ಷಣಿಕ ಅವಶ್ಯಕತೆಯಿಂದ ಪದವಿ ತರಗತಿಗಳಿಗೆ, ಪ್ರಿ ಯೂನಿವರ್ಸಿಟಿ ಪಠ್ಯಗಳಿಗೆ ಷೇಕ್ಸ್‌ಪಿಯರ್‌ನ ನಾಟಕಗಳ ಅನುವಾದಗಳು ಪಠ್ಯಗಳಾಗಿ ನಿರಂತರವಾಗಿ ನಡೆಯುತ್ತಿದ್ದವು. ಇದರಿಂದ ಷೇಕ್ಸ್‌ಪಿಯರ್‌ ನಾಟಕಗಳು ತಮ್ಮ ರಂಗಸಾಧ್ಯತೆಯಾಚೆ ‘ಓದಿಗೆಂದು’ ಅನುವಾದ ಮಾಡಲ್ಪಟ್ಟವು. ಷೇಕ್ಸ್‌ಪಿಯರ್‌ ನಾಟಕಗಳನ್ನು ಶಾಲಾಕಾಲೇಜುಗಳ ಹಂತಗಳಲ್ಲಿ ವಿದ್ಯಾರ್ಥಿಗಳು ಹವ್ಯಾಸಿಯಾಗಿ ಪ್ರದರ್ಶನ ಮಾಡುತ್ತಿದ್ದರಾದರೂ ಅವುಗಳಿಗೆ ಹೆಚ್ಚಿನ ವ್ಯಾಪ್ತಿ ಇರಲಿಲ್ಲ. ಪಠ್ಯ ಬೋಧನೆಯಲ್ಲಿ ಅಕಾಡೆಮಿಕ್ ಆಗಿ ಷೇಕ್ಸ್‌ಪಿಯರ್‌ನನ್ನು ಕಲಿಸುವುದು ಎಂದರೆ ಮೂಲ ಷೇಕ್ಸ್‌ಪಿಯರ್ ವಿಮರ್ಶಕರು, ಸಂಪಾದಕರು ಮಾಡಿದ ಟಿಪ್ಪಣಿಗಳನ್ನು ಇಟ್ಟುಕೊಂಡು ವಿಶ್ಲೇಷಿಸುವುದು ಇವೇ ಮುಂತಾದ ಚಟುವಟಿಕೆಗಳಿಗೆ ಪ್ರಾಶಸ್ತ್ಯ ಸಿಗುತ್ತಿತ್ತು.

ಇವನ್ನು ಹೊರತು ಪಡಿಸಿದರೆ ಷೇಕ್ಸ್‌ಪಿಯರ್‌ ನಾಟಕಗಳು ‘ಪ್ರೇಕ್ಷಕರಿಗೆ’ ಎಂದು ಅನುವಾದಗೊಂಡಿದ್ದು ರಂಗಭೂಮಿಗಾಗಿ. ಆಧುನಿಕಗೊಳ್ಳುತ್ತಿದ್ದ ಭಾರತೀಯ ಸಮಾಜದ ಆಶೋತ್ತರಗಳಿಗೆ ಅನುಗುಣವಾಗಿ ನಾಟಕಗಳನ್ನು ಆಡಿಸಬೇಕಾದ ಒತ್ತಡದಲ್ಲಿದ್ದ ನಾಟಕ ಕಂಪನಿಗಳು ಷೇಕ್ಸ್‌ಪಿಯರ್ ನಾಟಕಗಳನ್ನು ಬರಮಾಡಿಕೊಂಡವು. ಯಕ್ಷಗಾನ, ಬಯಲಾಟಗಳ ದೇಶೀಯ ರಂಗಪ್ರದರ್ಶನಗಳಿಗಿಂತ ವಿಭಿನ್ನವಾಗಿ ರಂಜನೆ ಉಂಟು ಮಾಡುವ ಹೊಸ ಸಾಧ್ಯತೆಯನ್ನು ವಸಾಹತುಶಾಹಿ ಸಂಪರ್ಕವು ದೇಶೀಯರಲ್ಲಿ ಕಾಣಿಸಿತ್ತು.

ಷೇಕ್ಸ್‌ಪಿಯರ್ ನಾಟಕಗಳ ರಂಗಪ್ರಯೋಗಗಳ ಜೊತೆ ಭಾರತೀಯ ರಂಗಭೂಮಿಯ ಹೊಸ ಶಕೆಯೂ ಆರಂಭಗೊಂಡಿತ್ತು ಎನ್ನಬಹುದು. ಆರಂಭದಲ್ಲಿ ವಸಾಹತುಶಾಹಿ ಕೇಂದ್ರಸ್ಥಾನವೆನಿಸಿದ ಕೊಲ್ಕತ್ತಾದಲ್ಲಿ ಬ್ರಿಟಿಷ್ ಅಧಿಕಾರಿಗಳ ಮನರಂಜನೆಗೆಂದು ರಂಗ ಚಟುವಟಿಕೆಗಳು ಆರಂಭಗೊಂಡಿದ್ದ ಸಂದರ್ಭದಲ್ಲಿ ಷೇಕ್ಸ್‌ಪಿಯರ್ ನಾಟಕಗಳು ಕಾಣಿಸಿಕೊಂಡವು. ವಸಾಹತುಶಾಹಿ ಆಳ್ವಿಕೆಯ ಇನ್ನೆರಡು ಕೇಂದ್ರಗಳಾದ ಮುಂಬಯಿ ಮತ್ತು ಮದ್ರಾಸುಗಳಲ್ಲೂ ನಾಟಕಗಳು ಬ್ರಿಟಿಷ್ ಆಪ್ತವಲಯದಲ್ಲಿ ಆರಂಭಗೊಂಡವು. ಇಂಗ್ಲಿಷ್ ಶಿಕ್ಷಣದೊಂದಿಗೆ ಶಿಕ್ಷಿತ ಭಾರತೀಯರೂ ಈ ನಾಟಕಗಳನ್ನು ನೋಡುವ ಅಭಿರುಚಿ ಬೆಳೆಸಿಕೊಂಡ ಪರಿಣಾಮವಾಗಿ ಥಿಯೇಟರುಗಳು ಎದ್ದುನಿಂತವು. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಉನ್ನತವರ್ಗದ ವಲಯದಲ್ಲಿ ಖಾಸಗಿಯಾಗಿ ಷೇಕ್ಸ್‌ಪಿಯರ್ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಮೊದಲು ನೋಟಕರಾಗಿ ಪ್ರವೇಶ ಮಾಡಿದ ಭಾರತೀಯರು ಆನಂತರ ಪಾತ್ರಧಾರಿಗಳಾಗಿ ಬಂದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅಂದರೆ ಸುಮಾರು 1850ರ ಹೊತ್ತಿಗೆ ಪಾರ್ಸಿನಾಟಕ ಕಂಪೆನಿಗಳು ಷೇಕ್ಸ್‌ಪಿಯರ್ ನಾಟಕಗಳನ್ನು ಸ್ಥಳೀಯಗೊಳಿಸಿ ರಂಗಪ್ರದರ್ಶನ ನೀಡತೊಡಗಿದವು. ಪಾರ್ಸಿ ರಂಗಭೂಮಿಗಳು ಷೇಕ್ಸ್‌ಪಿಯರ್‌ನನ್ನು ಬಹುತೇಕ ‘ಜೀರ್ಣೋಭವ’ ಎಂದು ನುಂಗಿಹಾಕಿದ್ದವು. ಗುಜರಾತ್, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳಲ್ಲಿ ಸಂಚರಿಸುತ್ತಿದ್ದ ಪಾರ್ಸಿ ರಂಗಭೂಮಿಯ ಪ್ರದರ್ಶನಗಳು ಆನಂತರ ಜನಪ್ರಿಯಗೊಂಡು ದೇಶದ ಇತರೆ ಭಾಗಗಳಿಗೂ ದೇಶೀಕರಣಗೊಂಡ ಷೇಕ್ಸ್‌ಪಿಯರ್ ನಾಟಕಗಳು ಬರಲಾರಂಭಿಸಿದವು. ಕೆಲವು ಉನ್ನತವರ್ಗಗಳಲ್ಲಿ ಇಂಗ್ಲಿಷಿನಲ್ಲಿಯೇ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಒಟ್ಟಿನಲ್ಲಿ ದೇಶೀಯ ಸಂಸ್ಥೆಗಳು ತಮ್ಮ ರಂಗಪ್ರದರ್ಶನಗಳಲ್ಲಿ ಷೇಕ್ಸ್‌ಪಿಯರ್‌ನನ್ನು ಬಳಕೆ ಮಾಡುತ್ತಲೇ ಬಂದಿದ್ದರಿಂದ ಷೇಕ್ಸ್‌ಪಿಯರ್ ಸಾಹಿತ್ಯದ ಸಾತತ್ಯ ನಿರಂತರವಾಗಿ ಉಳಿಯಿತು.

ಷೇಕ್ಸ್‌ಪಿಯರ್ ಅನುವಾದಕರ ಗುಂಪು ಅವನ ನಾಟಕಗಳನ್ನು ಕನ್ನಡಿಸಿಕೊಳ್ಳುವ ಹೊಸ ಪಾಕವನ್ನು ಕಂಡುಕೊಳ್ಳುವ ಜೊತೆಗೆ ಹೊಸ ಪ್ರೇಕ್ಷಕವರ್ಗವನ್ನೂ ಸೃಷ್ಟಿಸಿಕೊಳ್ಳುವ ಹವಣಿಕೆಯಲ್ಲತ್ತು. ಬಳ್ಳಾರಿ ರಾಘವಾಚಾರ್ ಕಂಪನಿ, ವರದಾಚಾರ್ಯ ಕಂಪನಿಗಳು ಷೇಕ್ಸ್‌ಪಿಯರ್‌ನ ನಾಟಕಗಳ ಸವಿಯನ್ನು ಜನರಿಗೆ ತಲುಪಿಸಿದವರಲ್ಲಿ ಮುಂಚೂಣಿಯಲ್ಲಿದ್ದವು. ನಾಟಕದ ಉಮೇದು ಮೈಸೂರು ಅರಸರನ್ನೂ ಬಿಡದೆ ಚಾಮರಾಜೇಂದ್ರ ಒಡೆಯರು ‘ಶ್ರೀ ಚಾಮರಾಜೇಂದ್ರ ನಾಟಕ ಸಭಾ’ ಎಂಬ ಕಂಪನಿಯನ್ನು ಪೋಷಿಸಿದರು. ಇದರಲ್ಲಿ ಇಂಗ್ಲಿಷ್ ನಾಟಕಗಳಿಗೆ ಪ್ರಾಶಸ್ತ್ಯ ಸಿಕ್ಕಿತು. ಇಲ್ಲಿ ಷೇಕ್ಸ್‌ಪಿಯರ್‌ನ ನಾಟಕಗಳಾದ ನಾಲ್ಕನೇ ಹೆನ್ರಿ, ಟ್ವೆಲ್ತ್ ನೈಟ್, ಮರ್ಚೆಂಟ್ ಆಫ್ ವೆನಿಸಿನ ಕೋರ್ಟಿನ ಭಾಗಗಳನ್ನು ಕನ್ನಡದಲ್ಲಿ ಅಳವಡಿಸಿ ಆಡಲಾಯಿತು. ಕರ್ನಾಟಕದಲ್ಲಿ ಆಗ ಪ್ರಚಲಿತವಿದ್ದ ರತ್ನಾವಳಿ ನಾಟಕ ಮಂಡಳಿ ಸಹ ಷೇಕ್ಸ್‌ಪಿಯರ್ನ ನಾಟಕಗಳನ್ನು ಆಡುತಿತ್ತು. ಶ್ರೀಕಂಠೇಶಗೌಡರು ತಮ್ಮದೇ ಆದ ಕಂಪನಿ ಆರಂಭಿಸಿ ಕೆಲವು ನಾಟಕಗಳನ್ನು ಆಡಿಸಿದ್ದರು ಎನ್ನಲಾಗಿದೆ. ಈ ಎಲ್ಲ ಕ್ರಿಯೆಗಳು ಸ್ಥಳೀಯರಲ್ಲಿ ಷೇಕ್ಸ್‌ಪಿಯರ್ ಕುರಿತಾದ ಇದ್ದ ಆಸಕ್ತಿಯನ್ನು ತೋರುತ್ತವೆ. ಹೀಗೆ ಷೇಕ್ಸ್‌ಪಿಯರ್ ಕನ್ನಡದಲ್ಲಿ ಓದುಗಬ್ಬ, ನೋಡುಗಬ್ಬವಾಗಿ ಸ್ವೀಕಾರಗೊಂಡಿದ್ದ.

ಷೇಕ್ಸ್‌ಪಿಯರ್ ಮನರಂಜನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅವನ ಸಾಹಿತ್ಯದ ಮಾನವತಾ ವಸ್ತುವು ಕಥನದ ರೂಪದಲ್ಲಿಯೂ ಹೇಳಲ್ಪಟ್ಟವು. ಮೂಲಕಥೆಯ ಹಂದರವನ್ನಿಟ್ಟುಕೊಂಡು ಮೌಖಿಕ ಪರಂಪರೆಯಲ್ಲಿ ಕಥೆ ಕಟ್ಟಿಕೊಂಡು ಹೋಗುವ ಹಾಗೆ ಷೇಕ್ಸ್‌ಪಿಯರ್ ಜಾನಪದೀಯವಾಗಿದ್ದ. ಸ್ವತಃ ಷೇಕ್ಸ್‌ಪಿಯರ್ ನಾಟಕಗಳ ವಸ್ತುಗಳೇ ಯುರೋಪಿನ ಇತಿಹಾಸ, ಜಾನಪದ, ಸ್ಥಳೀಯ ಚರಿತ್ರೆಗಳಿಂದ ಹೆಕ್ಕಿಕೊಂಡವು. ಇವೇ ಕಥೆಗಳು ಸ್ಥಳೀಯ ಸಂಸ್ಕೃತಿ, ಅಭಿರುಚಿಗಳನುಸಾರಿಯಾಗಿ ದೇಶೀಯರಿಗೆ ಹೇಳಲ್ಪಟ್ಟವು. ರಾಮಚಂದ್ರದೇವ ಅವರು ತಮ್ಮ ‘ಶೇಕ್ಸ್‌ಪಿಯರ್ ಎರಡು ಸಂಸ್ಕೃತಿಗಳಲ್ಲಿ’ ಕೃತಿಯಲ್ಲಿ ಇದಕ್ಕೆ ಪೂರಕವಾಗಿ ಹರಿವಂಶರಾಯ್ ಬಚ್ಚನ್ ಅವರನ್ನು ಉಲ್ಲೇಖಿಸುತ್ತಾರೆ. ಬಚ್ಚನ್ ಆವರ ಪ್ರಕಾರ ಹಿಂದಿಯಲ್ಲಿ ಷೇಕ್ಸ್‌ಪಿಯರ್ ನಾಟಕಗಳನ್ನು ಆಡಿಸುತ್ತಿದ್ದವರಲ್ಲಿ ಹೆಚ್ಚಿನವರು ಆಟವನ್ನು ಅರ್ಥ ಮಾಡಿಕೊಂಡಿರಲಿಲ್ಲ. ನಿಜಾರ್ಥದಲ್ಲಿ ಷೇಕ್ಸ್‌ಪಿಯರ್ ಅನುವಾದಗಳೇ ಇರಲಿಲ್ಲ. ಕೆಲವು ಉರ್ದು ರೂಪಾಂತರಗಳು ಮತ್ತು ಷೇಕ್ಸ್‌ಪಿಯರ್ ವಸ್ತುಗಳನ್ನಾಧರಿಸಿದ ಕೆಲವು ನಾಟಕಗಳು ಮಾತ್ರ ಇದ್ದವು. ಹೆಸರು, ವಾತಾವರಣ, ಸಂಭಾಷಣೆ ಎಲ್ಲವೂ ಬದಲಾಗಿದ್ದವು. ಮೂಲದ ಕಥೆ, ಕಥಾ ಸಂವಿಧಾನ ಮಾತ್ರ ಉಳಿಸಿಕೊಳ್ಳಲಾಗುತ್ತಿತ್ತು; ದೃಶ್ಯಗಳಿದ್ದವು, ಆದರೆ ಮೂಲದ ಮಾತುಗಳಿರಲಿಲ್ಲ ಎಂದು ಹೇಳಿದ್ದಾರೆ (ರಾಮಚಂದ್ರದೇವ, 1993:3). ಹೀಗೆ ಕನ್ನಡದಲ್ಲಿಯೂ ಕಥೆಯ ರೂಪದಲ್ಲಿ ಷೇಕ್ಸ್‌ಪಿಯರ್ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಕಾಣಿಸಿಕೊಂಡಿದ್ದಾನೆ. ರಾ.ಯ. ಧಾರವಾಡಕರರು ಉಲ್ಲೇಖಿಸುವಂತೆ ಷೇಕ್ಸ್‌ಪಿಯರ್ ನಾಟಕಗಳ ಕಥೆಗಳನ್ನು ‘ಮನೋರಂಜಕ ಕಥೆಗಳು’ (ಬಿ.ಎಂ. ಸಿಂಗಿತ, ಹಿಂದೂ ಪ್ರೆಸ್, ಧಾರವಾಡ, 1891) ಎಂಬ ಹೆಸರಿನಲ್ಲಿ ಬಂದಿತ್ತು (ಧಾರವಾಡಕರ, 2013:45). ಇದೇ ಮಾದರಿಯಲ್ಲಿ ಚಂಡಮಾರುತ-ಷೇಕ್ಸ್‌ಪಿಯರ್ ಮಹಾಕವಿಯ ಟೆಂಪೆಸ್ಟ್ ಎಂಬ ನಾಟಕದ ಕಥೆಯ ಸಾರಾಂಶವು(1892). ಪೆರಿಕ್ಲಿಸ್ ನಾಟಕದ ಕಥನ- ‘ಮರಿಕಲಾಭ್ಯುದಯ’ (1897), ದ ವಿಂಟರ್‍ಸ್‌ ಟೇಲ್’ ಕೃತಿಯ ಅನುವಾದ ಮಹೀಮಂಡನ (1900) ಎಂಬ ಗದ್ಯರೂಪ, ಷೇಕ್ಸ್‌ಪಿಯರ್ ಮಹಾಕವಿಯ ನಾಟಕ ಕಥಾನುವಾದ (1909), ಪದ್ಮಿನಿ(1911) (ಒಥೆಲೊ, ತೆಲುಗಿನಿಂದ ಕನ್ನಡಕ್ಕೆ ಗದ್ಯಾನುವಾದ), ಷೇಕ್ಸ್‌ಪಿಯರ್ ನಾಟಕ ಕಥೆಗಳು(ನಾಲ್ಕು) (1934) ಇವು ಇನ್ನಷ್ಟು ಉದಾಹರಣೆಗಳು.

ಷೇಕ್ಸ್‌ಪಿಯರ್ ನಾಟಕಗಳು ನಾಟಕಗಳಾಗಿ ಮಾತ್ರವಲ್ಲದೆ ಬೇರೆ ಬೇರೆ ಪ್ರಕಾರಗಳಾಗಿ ಅನುವಾದಗೊಂಡಿರುವುದು ವಿಶೇಷ. ಚಾರ್ಲ್ಸ್ಲ್ಯಾಂಬ್ ಮತ್ತು ಮೇರಿ ಲ್ಯಾಂಬ್ ಇಬ್ಬರೂ ಷೇಕ್ಸ್‌ಪಿಯರ್ ನಾಟಕಗಳನ್ನು ಕಥೆಗಳನ್ನಾಗಿ ನಿರೂಪಿಸಿದ ಮಾದರಿಯಲ್ಲಿಯೇ ಕನ್ನಡದಲ್ಲಿಯೂ ಷೇಕ್ಸ್‌ಪಿಯರ್ ಕಥಾವಸ್ತುಗಳನ್ನು ಕಥನದ ರೂಪದಲ್ಲಿ ತರಲಾಯಿತು. ಪ್ರಾಯಶಃ ನಾಟಕ ನೋಡುವುದು ಆಡುವುದು ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದುದರಿಂದ ನಾಟಕದ ರೂಪ ಬಿಟ್ಟುಕೊಟ್ಟು ಕಥೆಗಳನ್ನು ಆಸ್ವಾದಿಸುವ ಹವ್ಯಾಸ ಬೆಳೆಯಿತು ಎನ್ನಿಸುತ್ತದೆ. ಮನೆಯಲ್ಲಿ ಕುಳಿತು ಓದುವ ವಯಸ್ಕರು, ಗೃಹಿಣಿಯರಿಗಾಗಿ, ಇಂಗ್ಲಿಷ್ ಚೆನ್ನಾಗಿ ಅರ್ಥವಾಗದ ವಿದ್ಯಾರ್ಥಿಗಳಿಗಾಗಿ ಅನುವಾದಗಳು ಮಾಡಲ್ಪಟ್ಟವು. ಹಾಗೆ ನೋಡಿದರೆ ಕನ್ನಡದಲ್ಲಿ ಶುರುವಿನಲ್ಲಿ ಬಂದ ಅನುವಾದ ಕಾದಂಬರಿಗಳಲ್ಲಿ ಒಂದಾದ ಬಿ. ವೆಂಕಟಾಚಾರ್ಯರು ಅನುವಾದಿಸಿದ ‘ಭ್ರಾಂತಿ ವಿಲಾಸ’ (1869)ವು ಮೂಲತಃ ಬಂಗಾಳಿಯಿಂದ ಬಂದ ಷೇಕ್ಸ್‌ಪಿಯರ್ ಅಳವಡಿಕೆ. ಈಶ್ವರಚಂದ್ರ ವಿದ್ಯಾಸಾಗರರು ‘ದ ಕಾಮಿಡಿ ಆಫ್ ಎರರ‍್ಸ್’ ನಾಟಕವನ್ನು ಕಾದಂಬರಿಯಾಗಿಸಿದ್ದರು. ಅದು ಕನ್ನಡಕ್ಕೆ ಹಾಗೆಯೇ ಬಂದಿತು. ಅದರಲ್ಲಿ ಷೇಕ್ಸ್‌ಪಿಯರ್ ನಾಟಕದ ವಾಸನೆಗಿಂತ ಬಂಗಾಳಿ ಪ್ರಾದೇಶಿಕತೆಯ ಸೊಗಡಿನ ವಾಸನೆಯೇ ಮುಂದಿದ್ದಿತು. ಅಲ್ಲದೆ ವೆಂಕಟಾಚಾರ್ಯರು ತಮ್ಮ ಅನುವಾದಿತ ಕೃತಿಗೆ ಉಪದ್ಘೋತವನ್ನು ಬರೆಯುತ್ತಾ ಪಾಶ್ಚಾತ್ಯ ನಾಟಕಗಳ ಕುಂದು ಕೊರತೆಗಳೇನು? ಅವುಗಳನ್ನು ಯಥಾವತ್ತಾಗಿ ತಂದರೆ ಹೇಗೆ ತಪ್ಪಾಗುತ್ತದೆ ಎನ್ನುವುದನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ (ಡೆಪ್ಯುಟಿ ಚನ್ನಬಸಪ್ಪನವರು ಅನುವಾದಿಸಿದ ‘ದ ಕಾಮಿಡಿ ಆಫ್ ಎರರ‍್ಸ್’ ನಾಟಕವು ‘ನಗದವರನ್ನು ನಗಿಸುವ ಕಥೆ’ (1871) ಎಂದು ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆಯಾದರೂ ಅದು ಉಪಲಬ್ಧವಿಲ್ಲದ ಕಾರಣ ಅದರ ರೂಪ-ರಚನೆಗಳ ಬಗ್ಗೆ ಏನೂ ಹೇಳಲು ಬಾರದಂತಾಗಿದೆ. ಪ್ರಾಯಶಃ ವೆಂಕಟೇಶ ಭೀಮರಾವ್ ಭಂಡವಾಡರ ‘ಕಮಲಾಕ್ಷ ಪದ್ಮ ಗಂಧಿಯರ ಕಥೆಯು’(1881) ಎನ್ನುವುದು ಷೇಕ್ಸ್‌ಪಿಯರ್ ನಾಟಕದ ಅಳವಡಿಕೆ ಎನ್ನಲಾಗಿದೆ. ಇದನ್ನು ಎ.ಎನ್.ಮೂರ್ತಿರಾವ್ ಅವರು ತಮ್ಮ ಷೇಕ್ಸ್‌ಪಿಯರ್ ಕುರಿತ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ). ಅಧ್ಯಯನಗಳು ತಿಳಿಸುವಂತೆ ಭಾರತದಲ್ಲಿ ಬಂದ ಮೊದಲ ಹಂತದ ಷೇಕ್ಸ್‌ಪಿಯರ್ ಅನುವಾದಗಳಲ್ಲಿ ಹೆಚ್ಚಿನವು ಕಥೆಯ ರೂಪದಲ್ಲಿ ಬಂದವು. ಹಿಂದಿಯಲ್ಲಿ ಹರೀಶ್ ತ್ರಿವೇದಿಯವರು ಗುರುತಿಸುವಂತೆ ನೂರಕ್ಕೂ ಹೆಚ್ಚು ಕೃತಿಗಳು ಷೇಕ್ಸ್‌ಪಿಯರ್‌ನನ್ನು ಗದ್ಯರೂಪದಲ್ಲಿಯೇ ಅನುವಾದಿಸಿರುವಂತದ್ದು. ಕನ್ನಡದ ಮಾತು ವಸಾಹತುಶಾಹಿ ಕಾಲದಲ್ಲಿ ಹೊಸ ಬದಲಾವಣೆಗಳೊಂದಿಗೆ ತಲೆ ಎತ್ತುತ್ತಿದ್ದ ಸಂದರ್ಭದಿಂದ ಹಿಡಿದು ಹೊಸಗನ್ನಡದ ಸಂಸ್ಕರಿತ ರೂಪಗಳಲ್ಲಿರುವ ಬಂದ ತನಕ ಷೇಕ್ಸ್‌ಪಿಯರ್ ಕನ್ನಡಕ್ಕೆ ಒಂದಿಲ್ಲದೊಂದು ಬಗೆಯಲ್ಲಿ ಬರುತ್ತಲೇ ಇದ್ದ. ರಂಗಭೂಮಿ ಅವನನ್ನು ಇನ್ನೊಂದು ರೀತಿಯಲ್ಲಿ ಕಟ್ಟಿಕೊಳ್ಳುತ್ತಿತ್ತು.

ಷೇಕ್ಸ್‌ಪಿಯರ್ ಅನೇಕ ನಾಟಕಗಳನ್ನು ಪೂರ್ಣಪ್ರಮಾಣದಲ್ಲಿ ಅನುವಾದಿಸದೆ ಒಂದು ಅಂಕ ಅಥವಾ ಕೆಲವು ದೃಶ್ಯಗಳನ್ನು ಮಾತ್ರವೇ ಅನುವಾದ ಮಾಡಿರುವುದುಂಟು. ಉದಾಹರಣೆಗೆ ಜೂಲಿಯಸ್ ಸೀಸರ್ ನಾಟಕದ ಮೂರನೇ ಅಂಕವನ್ನು ಮಾತ್ರ ತೆಗೆದುಕೊಂಡು ‘ಶವಸಂಸ್ಕಾರ’(1939) ಎನ್ನುವ ಹೆಸರಿನಲ್ಲಿ ಅನುವಾದಿಸಲಾಗಿದೆ. ಇದನ್ನು ಒಂದು ಪುಟ್ಟ ನಾಟಕದಂತೆಯೇ ಬಿಂಬಿಸಲಾಗಿದೆ.

ಪ್ರಾಯಶಃ ಇವು ಷೇಕ್ಸ್‌ಪಿಯರ್‌ನೆಂಬ ಪರಕೀಯನನ್ನು ಮುರಿದು ಕಟ್ಟಿಕೊಳ್ಳುವ ಬಗೆಗಳಾಗಿದ್ದವು. ಅಲ್ಲದೆ ತಮ್ಮ ನೆಲದಲ್ಲಿ ನಿಂತು ಇನ್ನೊಂದು ಸಂಸ್ಕೃತಿಯನ್ನು ಜೀರ್ಣಿಸಿಕೊಳ್ಳುವ ಅಸ್ಮಿತೆಯ ಹೋರಾಟವೂ ಆಗಿದ್ದವು. ಈ ಅನುವಾದ/ರೂಪಾಂತರಗಳು ಸ್ವತಂತ್ರ ಕೃತಿಗಳೆಂಬಂತೆ ಕಾಣಿಸುತ್ತಿದ್ದವು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಕಾರಗಳ ಚರಿತ್ರೆಯನ್ನು ಬರೆಯುವಾಗ ಇವನ್ನು ಅನುವಾದಗಳೆಂದು ಬರೆಯಬೇಕೊ ಅಥವಾ ಮೂಲವನ್ನಾಧರಿಸಿದ ಸ್ವತಂತ್ರಕೃತಿಗಳೆಂದು ಪರಿಗಣಿಸಬೇಕೊ ಎನ್ನವ ಸಂದಿಗ್ಧವು ಸಾಹಿತ್ಯ ಚರಿತ್ರೆಕಾರರನ್ನು ಕಾಡುವಂತೆ ಇದೆ. ಮಾಸ್ತಿಯವರು ಶ್ರೀಕಂಠೇಶಗೌಡರ ಮ್ಯಾಕ್‌ಬೆತ್ ಅನುವಾದವಾದ ಪ್ರತಾಪರುದ್ರದೇವ ಕೃತಿಯು ಮೂಲವನ್ನು ಉಲ್ಲೇಖಿಸದಿದ್ದರೆ ಸ್ವತಂತ್ರ ಕೃತಿ ಎಂದೇ ಭಾವಿಸುವಂತಿದೆ ಎಂದಿದ್ದಾರೆ.

ಕನ್ನಡದಲ್ಲಿ ಷೇಕ್ಸ್‌ಪಿಯರ್ ನಾಟಕಗಳ ಅನುವಾದಗಳು ಸಂಸ್ಕೃತ ನಾಟಕಾನುವಾದಗಳ ಜೊತೆ ಪೈಪೋಟಿಗಿಳಿದಿದ್ದಂತೆ ಕಾಣುತ್ತಿದ್ದವು. ಸಂಸ್ಕೃತ ನಾಟಕಗಳ ಅನುವಾದಗಳು ಶ್ರೇಣಿಯಲ್ಲಿ ತಮ್ಮದೇ ಆದ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದ್ದವು. ಷೇಕ್ಸ್‌ಪಿಯರ್ ನಾಟಕಾನುವಾದಗಳನ್ನು ಒಪ್ಪಿಕೊಳ್ಳಬೇಕಾದ ಅಗತ್ಯ ಬಿದ್ದಾಗ ಷೇಕ್ಸ್‌ಪಿಯರ್‌ನನ್ನು ಕಾಳಿದಾಸನಿಗೆ ಹೋಲಿಸಿ ಅವನಿಗೆ ಸ್ವಾಗತ ಕೋರಲಾಗಿದೆ. ನಿಧಾನವಾಗಿ ದೇಶೀಯ ಸಮಾಜವು ಒಂದು ನಾಗರಿಕ ಸಮಾಜದ, ರೆನೆಸಾನ್ಸ್ಯುಗದ ಮಾನವ ಕೇಂದ್ರಿತ ಆಲೋಚನೆಗಳ ಸಂಪರ್ಕಕ್ಕೆ ಬಂದಿತು ಎನ್ನಬಹುದು.

ಕನ್ನಡದಲ್ಲಿ ಷೇಕ್ಸ್‌ಪಿಯರ್ ಭಾಷಾಂತರಗಳ ಹರವು ಒಂದು ಇಡೀ ಶತಮಾನವನ್ನು ಆವರಿಸಿದೆ. ಹತ್ತೊಂಬತ್ತನೇ ಉತ್ತರಾರ್ಧದಿಂದ ಇಪ್ಪತ್ತನೇ ಶತಮಾನದ ಕೊನೆವರೆಗು ಅವುಗಳ ನಕಾಶೆಯನ್ನು ಹಾಕಿಕೊಳ್ಳಬಹುದು. ನಾಟಕಗಳು ಅನುವಾದಗೊಳ್ಳತೊಡಗಿದ್ದು ಸುಮಾರು 1870ರ ಹೊತ್ತಿಗೆ. ಇವುಗಳಲ್ಲಿ ಮುಕ್ಕಾಲುಪಾಲು ಷೇಕ್ಸ್‌ಪಿಯರ್ ನಾಟಕಗಳೇ ಇದ್ದವು. ಕನ್ನಡದಲ್ಲಿ ಬಂದ ಇಂಗ್ಲಿಷ್ ನಾಟಕಗಳ ಭಾಷಾಂತರಗಳನ್ನೂ ಇನ್ನೊಂದೆಡೆ ಷೇಕ್ಸ್‌ಪಿಯರ್ ಕೃತಿಗಳನ್ನೂ ತೂಕ ಹಾಕಿದರೆ ಎರಡೂ ಒಂದೇ ಅಥವಾ ಷೇಕ್ಸ್‌ಪಿಯರ್ ಕೃತಿಗಳೇ ಮುಂಚೂಣಿಯಲ್ಲಿದ್ದವು ಎನ್ನಬಹುದು. ಷೇಕ್ಸ್‌ಪಿಯರ್ ಕೆಲವು ಕೃತಿಗಳು ನೇರವಾಗಿ ಇಂಗ್ಲಿಷಿನಿಂದ ಬಂದರೆ ಹಲವಾರು ನಾಟಕಗಳು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಬೇರೆ ಬೇರೆ ಭಾರತೀಯ ಭಾಷೆಗಳ ಮುಖಾಂತರ ಕನ್ನಡಕ್ಕೆ ಬಂದಂತವು. ಷೇಕ್ಸ್‌ಪಿಯರ್ ನಾಟಕಗಳ ಭಾಷಾಂತರಗಳ ವಿನ್ಯಾಸ ಗಮನಿಸಿದರೆ ಅವುಗಳಲ್ಲಿ ಜನಪ್ರಿಯವಾದ ಕಾಮಿಡಿ, ಟ್ರಾಜಿಡಿಗಳು ಬಂದಿರುವುದನ್ನು ನೋಡಬಹುದು.

ಷೇಕ್ಸ್‌ಪಿಯರ್ ನಾಟಕಗಳಲ್ಲಿ ಭಾರತೀಯರಿಗೆ ಪ್ರಿಯವಾಗಿದ್ದು ಕೆಲವೇ ನಾಟಕಗಳು. ಹ್ಯಾಮ್ಲೆಟ್, ಮ್ಯಾಕ್‌ಬೆತ್, ರೊಮಿಯೊ ಜೂಲಿಯೆಟ್, ಟೇಮಿಂಗ್ ಆಫ್ ದ ಶ್ರೂ, ಕಿಂಗ್ ಲಿಯರ್, ಟು ಜಂಟಲ್ ಮ್ಯಾನ್ ಆಫ್ ವೆರೊನಾ, ಕಾಮಿಡಿ ಆಫ್ ಎರರ‍್ಸ್, ದ ಮರ್ಚೆಂಟ್ ಆಫ್ ದ ವೆನಿಸ್, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಒಥೆಲೊ ಇವೇ ಮೇಲಿಂದ ಮೇಲೆ ಅನುವಾದಗೊಳ್ಳುತ್ತಿದ್ದ ನಾಟಕಗಳು. ಪ್ರಾಯಶಃ ಈ ಆಯ್ಕೆಗಳು ಷೇಕ್ಸ್‌ಪಿಯರ್‌ನನ್ನು ಒಗ್ಗಿಸಿಕೊಳ್ಳುವ ಉಪಾಯಗಳಿರಬಹುದು. ಯುರೋಪಿನ ಸಂಸ್ಕೃತಿಯನ್ನು ಸ್ಥಳೀಯವಾಗಿ ಕಸಿ ಮಾಡಿಕೊಳ್ಳುವ ಮೂಲಕ ದೇಶೀಯತೆಯನ್ನು ವಿಸ್ತರಿಸಿಕೊಳ್ಳುವ ಬಗೆಯಿರಬಹುದು. ಪುನಾ ಈ ಭಾಷಾಂತರಗಳ ವಿನ್ಯಾಸವು ಒಂದೇ ತೆರನಾಗಿಲ್ಲ. ಎಸ್.ಜಿ.ನರಸಿಂಹಾಚರ‍್ಯರ ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’ ಭಾಷಾಂತರವು ಇಂಗ್ಲಿಷಿನಿಂದ ಬಂದಿದ್ದರೆ ಹೊನ್ನಾಪುರಮಠ ಅವರದು ಮರಾಠಿಯಿಂದ ಬಂದುದು. ಭಾಷೆ, ವಿನ್ಯಾಸ, ಕಥಾವಸ್ತುವಿನ ನಿರ್ವಹಣೆಗಳು ಪ್ರತಿ ಅನುವಾದದಲ್ಲಿಯೂ ವಿಭಿನ್ನವಾಗಿರುವಂತವು. ರೊಮಿಯೊ ಜೂಲಿಯೆಟ್, ದ ಟೇಮಿಂಗ್ ಆಫ್ ದ ಶ್ರೂ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ದ ಮರ್ಚೆಂಟ್ ಆಫ್ ವೆನಿಸ್, ಮ್ಯಾಕ್‌ಬೆತ್ ಮುಂತಾದ ಟ್ರಾಜಿಡಿ, ಕಾಮಿಡಿಗಳು ಪುನಾ ಪುನಾ ಜನರನ್ನು ಭಾಷಾಂತರಗಳ ಮೂಲಕ ತಲುಪಿವೆ. ಷೇಕ್ಸ್‌ಪಿಯರ್‌ನ ಮೂವತ್ತೇಳು ನಾಟಕಗಳಲ್ಲಿ ಸರಿಸುಮಾರು ಇಪ್ಪತ್ತು ನಾಟಕಗಳು ಅನುವಾದವಾಗಿವೆ ಎನ್ನಲಾಗಿದೆ. ಆದರೆ ಅನೇಕವು ದಾಖಲೆಯಲ್ಲಿ ಹೆಸರಿದ್ದರೂ ಕೃತಿಗಳ ರೂಪದಲ್ಲಿ ಉಪಲಬ್ಧವಿಲ್ಲ.

ಒಂದು ಸ್ಥೂಲ ಗ್ರಹಿಕೆಯಲ್ಲಿ ಕನ್ನಡದಲ್ಲಿ ಹತ್ತೊಂಬತ್ತನೇ ಶತಮಾನ ಹಾಗೂ ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಬಂದ ಷೇಕ್ಸ್‌ಪಿಯರ್ ನಾಟಕಗಳಲ್ಲಿ ಹೆಸರಿಸಬಹುದಾದವುಗಳು ಹೀಗಿವೆ-ಕಾಮಿಡಿ ಆಫ್ ಎರರ‍್ಸ್(ನಗದವರನ್ನು ನಗಿಸುವ ಕಥೆ (1871), ಭ್ರಾಂತಿವಿಲಾಸ (1876), ಒಥೆಲೊ (ರಾಘವೇಂದ್ರರಾವ (1885), ಶೂರಸೇನ ಚರಿತ್ರೆ (1895), ಕಿಂಗ್ ಲಿಯರ್ (ಹೇಮಚಂದ್ರ ವಿಲಾಸ(1899), ಮ್ಯಾಕ್‌ಬೆತ್ (ಪ್ರತಾಪರುದ್ರದೇವ (1895), ದ್ವೇಷ ಭಾಂಡಾರ ನಾಟಕವು(1926), ಆಸ್ ಯು ಲೈಕ್ ಇಟ್ (ಕಮಲಾವತಿ ಪರಿಣಯ(?)), ದ ಟು ಜೆಂಟಲ್‌ಮೆನ್ ಆಫ್ ವೆರೋನ (ಕುಸುಮಾಕರ (1897)), ಆಲ್ ಈಸ್ ವೆಲ್ ದಟ್ ಎಂಡ್ಸ್ ವೆಲ್ (ಸತೀಮಣಿ ವಿಜಯ (1897), ದ ಮರ್ಚೆಂಟ್ ಆಫ್ ವೆನಿಸ್ (ಪಾಂಚಾಲೀ ಪರಿಣಯ(1890), ವೇಣುಪುರಿಯ ವರ್ತಕ (1928), ಸುರತ ನಗರದ ಶ್ರೇಷ್ಠಿ(1929), ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ (ಪ್ರಮೀಳಾರ್ಜುನೀಯಂ (1896), ವಸಂತಯಾಮಿನೀ ಸ್ವಪ್ನ ಚಮತ್ಕಾರ (1916)), ರೋಮಿಯೊ ಅಂಡ್ ಜೂಲಿಯೆಟ್ (ಕಮಲಾಕ್ಷ ಪದ್ಮಗಂಧಿಯರ ಕಥೆ (1881), ರಾಮವರ್ಮ ಲೀಲಾವತಿ ಚರಿತ್ರೆ (1889), ರಮೇಶ ಲಲಿತಾ (1917), ದ ವಿಂಟರ್ಸ್ ಟೇಲ್ (ಮಂಜುಘೋಷ?), ಮಂಜುವಾಣಿ (1914), ದ ಟೇಮಿಂಗ್ ಆಫ್ ದ ಶ್ರೂ (ಗಯ್ಯಾಳಿಯನ್ನು ಸಾಧು ಮಾಡುವಿಕೆ (?), ಬಹಾದ್ದೂರು ಗಂಡ, ಚಂಡೀಮದಮರ್ದನ (1910), ತ್ರಾಟಿಕಾ ನಾಟಕ ಅಥವಾ ಮೊಂಡ ಗಂಡ ತುಂಟ ಹೆಂಡತಿ (1920), ಹ್ಯಾಮ್ಲೆಟ್ (ಹ್ಯಾಮ್ಲೆಟ್ ಆ ನಾಟಕದ ಕರ‍್ಣಾಟ ಭಾಷಾಂತರ (1905), ಸಿಂಬಲೈನ್ (ಜಯಸಿಂಹರಾಜ ಚರಿತ್ರೆ (1907). (ಷೇಕ್ಸ್‌ಪಿಯರ್ ನಾಟಕಗಳು ಮತ್ತೆ ನಂತರ ನೇರಾನುವಾದಗಳಲ್ಲಿ ಬರಲಾರಂಭಿಸಿದಾಗಲು ಸರ್ವೇಸಾಧಾರಣವಾಗಿ ಇವೇ ನಾಟಕಗಳು- ಮ್ಯಾಕ್‌ಬೆತ್ (ಡಿ.ವಿ.ಗುಂಡಪ್ಪ, ಮಾಸ್ತಿ, ರಾಮಚಂದ್ರದೇವ, ಕೆ.ಎಸ್.ಭಗವಾನ್), ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ (ಕೆ.ಎಸ್.ನಿಸಾರ್ ಅಹಮದ್), ಹ್ಯಾಮ್ಲೆಟ್ (ಪರ್ವತವಾಣಿ , ಮಾಸ್ತಿ, ವೈ.ಎಂ.ಷಣ್ಮುಖಯ್ಯ, ರಾಮಚಂದ್ರದೇವ, ಕೆ.ಎಸ್.ಭಗವಾನ್), ಮತ್ತೆ ಅನುವಾದಗೊಂಡಿರುವದು ಕುತೂಹಲಕಾರಿಯಾಗಿದೆ).

ಷೇಕ್ಸ್‌ಪಿಯರ್ ಚಾರಿತ್ರಿಕ ನಾಟಕಗಳು ಕನ್ನಡದಲ್ಲಿ ಅಷ್ಟಾಗಿ ಅನುವಾದಗೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ನಾಟಕಗಳ ಅನುವಾದ ಪ್ರಯತ್ನಗಳನ್ನು ಬಿಟ್ಟರೆ ಷೇಕ್ಸ್‌ಪಿಯರ್ ಕ್ರಾನಿಕಲ್ಸ್ ನಾಟಕಗಳು ಕನ್ನಡಿಗರ ಮನ್ನಣೆಯನ್ನು ಗಳಿಸಿದಂತಿಲ್ಲ. ಮೊದಲಲ್ಲಿ ಬಂದ ಅಣ್ಣಾಜಿರಾವ್ ಅವರು ಅನುವಾದಿಸಿದ ‘ಪೆರಿಕ್ಲಿಸ್’ ನಾಟಕ-‘ಪರಿಕಲಾಭ್ಯುದಯ’ (1897) ಬಿಟ್ಟರೆ ಬಹಳ ಕಾಲದ ಅಂತರದಲ್ಲಿ ಡಿ.ವಿ.ಗುಂಡಪ್ಪನವರು ಅನುವಾದಿಸಿದ ‘ಹೆನ್ರಿ, ದ ಸಿಕ್ತ್ಸ್‌-2ದ ರೂಪಾಂತರ ‘ಜಾಕ್ ಕೇಡ್: ದೊಂಬಿ ದಾಂಧಲೆಯ ಪ್ರಹಸನ’(1959)ದ ನಡುವೆ ಒಂದು ದೀರ್ಘ ಅಂತರವಿದೆ. ತಾರಕೇಶ್ವರ ಅವರು ಅಭಿಪ್ರಾಯ ಪಡುವಂತೆ, “ಭಾರತ ರಾಷ್ಟ್ರೀಯತೆ ಮತ್ತು ಕನ್ನಡ ರಾಷ್ಟ್ರೀಯತೆ ಎರಡೂ ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಅವು ಕಟ್ಟಿದ ಗತವೈಭವದ ಚರಿತ್ರೆಯಲ್ಲಿ ವದಂತಿ, ಪುರಾಣ, ಧಾರ್ಮಿಕ, ಭಕ್ತಿ ಎಲ್ಲವೂ ಸೇರಿ, ಕನ್ನಡಿಗರು ನಮ್ಮ ಗತವನ್ನು ರೂಪಿಸಿದ ರೀತಿಯೇ ಬೇರೆಯಾಗಿದ್ದರಿಂದ ಕನ್ನಡಿಗರಿಗೆ ಷೇಕ್ಸ್‌ಪಿಯರ್‌ನ ಚಾರಿತ್ರಿಕ ನಾಟಕಗಳನ್ನು ಭಾಷಾಂತರಿಸುವ ಅಗತ್ಯ ಬರಲಿಲ್ಲ ಎನ್ನಿಸುತ್ತದೆ” (ತಾರಕೇಶ್ವರ, 2015:457)

ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ ಷೇಕ್ಸ್‌ಪಿಯರ್ ಕನ್ನಡಕ್ಕೆ ಕಾಲಿಟ್ಟಿದ್ದೇ ರೂಪಾಂತರ/ಅಳವಡಿಕೆ ಸ್ವರೂಪದಲ್ಲಿ ಎನ್ನಬಹುದು. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬಂದ ಷೇಕ್ಸ್‌ಪಿಯರ್ ನಾಟಕಗಳು ಅಳವಡಿಕೆಗಳು ಕನ್ನಡದಲ್ಲಿ ಬಂದಿವೆ. ಪ್ರತಿ ಅನುವಾದಗಳಲ್ಲಿಯೂ ಅನುವಾದಕರು ತಾವೇಕೆ ಷೇಕ್ಸ್‌ಪಿಯರ್‌ನನ್ನು ಕನ್ನಡಕ್ಕೆ ತಂದೆವು ಎಂಬ ಬಗ್ಗೆ ನಿವೇದಿಸಿಕೊಂಡಿದ್ದಾರೆ. ಹಾಗೆಯೇ ತಮ್ಮ ಅನುವಾದದಲ್ಲಿನ ಬದಲಾವಣೆಗಳು ಹೇಗೆ ಸಮರ್ಥವಾಗುತ್ತವೆ ಎನ್ನುವುದನ್ನು ಸ್ವತಃ ವಿವರಿಸಿದ್ದಾರೆ.

ಭಾಷಾಂತರ ನಾಟಕಗಳು ಸ್ಥಳೀಕರಿಗೆಂದೇ ತಯಾರಿಸಿದ ಅಡುಗೆಗಳು. ವಿದ್ಯಾರ್ಥಿಗಳಿಗೆ ಹಾಗು ಇಂಗ್ಲಿಷ್ ಬಾರದವರಿಗೆ ಭಾಷಾಂತರಗೊಳಿಸಿ ಹೇಳುತ್ತಿದ್ದೇವೆಂಬ ಭಾವನೆ ಭಾಷಾಂತರಕಾರರಿಗೆ ಇದ್ದುದರಿಂದ ಅವರು ಅದರ ಸಲುವಾಗಿಯೇ ಕೆಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಹೆಸರುಗಳನ್ನು ಬದಲಾಯಿಸಿದರೆ, ಕೆಲವೊಮ್ಮೆ ಸಂದರ್ಭಗಳನ್ನೇ ಬದಲಾಯಿಸಿ ಬಿಟ್ಟಿದ್ದ ಉದಾಹರಣೆಗಳಿವೆ. ಷೇಕ್ಸ್‌ಪಿಯರ್‌ನ ನಾಟಕಗಳು ಮೊದಲ ಹಂತದ ಭಾಷಾಂತರಗಳಲ್ಲಿ ಹೀಗೆ ತೀವ್ರತಮ ಬದಲಾವಣೆಗೆ ಒಳಗಾಗಿಯೇ ಬಂದವು. ಷೇಕ್ಸ್‌ಪಿಯರ್ ನಾಟಕಗಳನ್ನು ತಮ್ಮಂತೆ ಮಾಡಿಕೊಳ್ಳುವಾಗ ರೂಪಾಂತರ, ಅಳವಡಿಕೆಗಳೆಂಬ ತಂತ್ರಗಳನ್ನು ದೇಶೀಯರು ಬಳಸಿದರು. ನಾಟಕದ ವಸ್ತುವನ್ನು ಬದಲಾಯಿಸುವುದು; ನಾಟಕದಲ್ಲಿರುವ ಪಾತ್ರಗಳ ಹೆಸರುಗಳನ್ನು ಆಯಾ ಸಾಮಾಜಿಕ ಪರಿಸರಗಳಿಗೆ ತಕ್ಕಂತೆ ಬದಲಾಯಿಸುವುದು; ಕಥಾಹಂದರವನ್ನು ಬೇಕಾದಂತೆ ತಿದ್ದುವುದು, ಸೇರಿಸುವುದು ಅಥವಾ ಕೈಬಿಡುವುದು ಇವು ವಸ್ತು/ಪಾತ್ರಗಳಲ್ಲಿ ಕೈಯ್ಯಾಡಿಸುವ ಬಗೆಗಳಾದರೆ ನಾಟಕವನ್ನು ಗದ್ಯದಲ್ಲಿ ನಿರೂಪಿಸುವುದು, ಒಂದು ಅಥವಾ ಕೆಲವು ಅಂಕಗಳನ್ನು ಮಾತ್ರ ಪ್ರಸ್ತುತ ಪಡಿಸುವುದು; ನಾಂದಿ ಪದ್ಯಗಳನ್ನು ಸೇರಿಸುವುದು; ಟ್ರಾಜಿಡಿಯನ್ನು ಕಾಮಿಡಿಯನ್ನಾಗಿ ಪರಿವರ್ತಿಸುವುದು ಇತ್ಯಾದಿ ಸಂರಚನಾತ್ಮಕ ಅಳವಡಿಕೆಗಳು ಕೂಡ ಗಮನಾರ್ಹವಾಗಿವೆ.

ಸಂಸ್ಕೃತಿಯ ಪ್ರಶ್ನೆಯ ಜೊತೆಗೆ ಸಂರಚನೆಯ ಪ್ರಶ್ನೆಯು ಷೇಕ್ಸ್‌ಪಿಯರ್ ಅನುವಾದಕರಿಗೆ ಕಾಡಿದ ಸಂಗತಿ. ಅವನ ನಾಟಕಗಳನ್ನು ಕನ್ನಡಿಸಿಕೊಳ್ಳುವಾಗ ಅದಾಗಲೇ ರೂಢಿಯಲ್ಲಿದ್ದ ನಾಟಕ ಪ್ರಕಾರವನ್ನು ತ್ಯಜಿಸಿ ಸಂಪೂರ್ಣ ಇಂಗ್ಲಿಷ್ ನಾಟಕ ಪದ್ಧತಿಯನ್ನು ಅನುಸರಿಸಬೇಕೊ ಎನ್ನುವ ಸಂದಿಗ್ಧ ಅಲ್ಲಿ ಮುನ್ನೆಲೆಯಲ್ಲಿದೆ. ಷೇಕ್ಸ್‌ಪಿಯರ್ ನಾಟಕಗಳು ಎಲಿಜಬೆತನ್ ಯುಗಧರ್ಮದಂತೆ ಕಾವ್ಯ ಮತ್ತು ಗದ್ಯದ ಹದ ಬೆರೆಸಿಕೊಂಡ ನಾಟಕಗಳು. ಬ್ಲಾಂಕ್ ವರ್ಸ್ ಬಳಸಿ ಬರೆದ ಈ ಮಾದರಿಯನ್ನು ಅನುಸಂಧಾನ ಮಾಡುವ ಕನ್ನಡದ ಭಾಷಾಂತರಕಾರರು ಸಾಂಪ್ರದಾಯಿಕ ಲಕ್ಷಣಗಳೊಂದಿಗೆ ಕಸಿ ಮಾಡಿಕೊಳ್ಳುತ್ತಾರೆ. ಬಿ.ವೆಂಕಟಾಚಾರ್ಯರು ತಮ್ಮ ಭ್ರಾಂತಿವಿಲಾಸ ಅನುವಾದಕ್ಕೆ ಮುನ್ನ ಬರೆಯುವ ವಿಜ್ಞಾಪನೆಯಲ್ಲಿ ಅದನ್ನು ಗದ್ಯಕೃತಿಯನ್ನಾಗಿ ಮಾರ್ಪಡಿಸಿದುದಕ್ಕೆ ಸಮರ್ಥನೆ ಮಾಡುತ್ತಾ, “ಆಂಗಿಲೇಯ ಮೂಲಗ್ರಂಥವು ಆ ಸಂಪ್ರದಾಯ ಪ್ರಕಾರ ನಾಟಕರೂಪವಾಗಿ ರಚಿಸಲ್ಪಟ್ಟಿದ್ದರೂ ಸಂಸ್ಕೃತದೊಳು ದಶರೂಪಕಾದಿ ಲಕ್ಷಣಗ್ರಂಥಗಳಿಂದ ತಿಳಿಸಲ್ಪಟ್ಟಿರುವ ದಶವಿಧರೂಪಕ ಲಕ್ಷಣಗಳೊಳಗೆ ಅದಕ್ಕೊಂದೂ ಇಲ್ಲವಾದುದರಿಂದ ಕಾದಂಬರೀ ಮುಂತಾದವುಗಳಂತೆ ಕೇವಲ ವಾಕ್ಯರೂಪವಾಗಿ ಮಾಡಲ್ಪಟ್ಟಿವೆ” (ವೆಂಕಟಾಚಾರ್ಯ, 1876). ಷೇಕ್ಸ್‌ಪಿಯರ್ ನಾಟಕಗಳ ಹಾಡುಗಳನ್ನು ಯಾವ ಛಂದಸ್ಸಿಗೆ ಹೊಂದಿಸುವುದೊ ಎಂಬ ಜಿಜ್ಞಾಸೆ ಸಹ ಭಾಷಾಂತರಕಾರರಿಗೆ ಉಂಟಾಗಿದೆ (ಎಂ.ಎಸ್.ಪುಟ್ಟಣ್ಣ, ಎಂ.ಎಲ್.ಶ್ರೀಕಂಠೇಶಗೌಡ ಮುಂತಾದವರು ತಮ್ಮ ಅನುವಾದಗಳ ಮುನ್ನುಡಿಗಳಲ್ಲಿ ಈ ಪ್ರಶ್ನೆಯನ್ನು ಚರ್ಚಿಸಿದ್ದಾರೆ). ಕನ್ನಡಿಸಿಕೊಳ್ಳುವ ಉತ್ಸಾಹದಲ್ಲಿ ಷೇಕ್ಸ್‌ಪಿಯರ್ ನಾಟಕಗಳಿಗೆ ನಾಂದಿ ಮತ್ತು ಮಂಗಳಾಪದ್ಯಗಳನ್ನು ಸೇರಿಸಲಾಗಿದೆ.

*

ಈ ಎಲ್ಲಾ ಬಗೆಯ ಪ್ರಯತ್ನಗಳನ್ನು ಒಂದೇ ಮನಸ್ಸಿನಿಂದ ಓದುಗರು ಸ್ವೀಕಾರ ಮಾಡಿದರೆಂದು ಹೇಳಲಾಗದು. ಸಮಕಾಲೀನ ವಿದ್ಯಾವಂತರಲ್ಲಿಯೇ ಅನುವಾದಗಳ ಬಗ್ಗೆ ಅಸಮಾಧಾನವಿದ್ದು ಅವರು ಕಟು ವಿಮರ್ಶೆಯನ್ನು ಮಾಡುತ್ತಿದ್ದರು. ಕನ್ನಡವನ್ನು ಹಾಳು ಮಾಡಲೆಂದೇ ಕೆಲವು ಅನುವಾದಕರು ಹೆಸರು ಬದಲಾಯಿಸಿ, ಕಥೆ ಬದಲಾಯಿಸಿ ಹಿಂಸೆ ಮಾಡುತ್ತಿದ್ದಾರೆ ಎಂದು ಕೆಲ ವಾಚಕರು ಪತ್ರಿಕೆಗಳಿಗೆ ಪ್ರತಿಕ್ರಿಯೆಯನ್ನು ಬರೆದಿದ್ದುಂಟು. ಈ ಚರ್ಚೆ ಒಮ್ಮೊಮ್ಮೆ ಕಾಳಿದಾಸನನ್ನು ಷೇಕ್ಸ್‌ಪಿಯರ್ಗೆ ಹೋಲಿಸುವ ಚರ್ಚೆಯಾಗಿ ಭಾರತೀಯ ವರ್ಸಸ್ ಪಾಶ್ಚಾತ್ಯ ಹಗ್ಗ ಜಗ್ಗಾಟಗಳು ತಾರಕಕ್ಕೇರುತ್ತಿದ್ದವು. ಸಂಸ್ಕೃತ ಹಿನ್ನೆಲೆಯ ವರ್ಗಕ್ಕೆ ಕಾಳಿದಾಸ ಉತ್ಕೃಷ್ಟ ಮಾದರಿಯಾಗಿದ್ದ. ಆದರೆ ಶೂದ್ರವರ್ಗದಿಂದ ಬಂದ ಶ್ರೀಕಂಠೇಶಗೌಡರಂತಹ ಅನುವಾದಕರಿಗೆ ಕಾಳಿದಾಸನಿಗಿಂತ ಷೇಕ್ಸ್‌ಪಿಯ‌ರೇ ಮೇಲು ಎನ್ನಿಸುತ್ತಾನೆ. ಸಂಸ್ಕೃತ ನಾಟಕಗಳು ಇಂಗ್ಲಿಷಿನ ಜೊತೆಜೊತೆಯಲ್ಲಿಯೇ ಅನುವಾದಗೊಳ್ಳುತ್ತಿದ್ದ ವೇಳೆಯಲ್ಲಿ ಇಂತಹ ಆಯ್ಕೆಗಳು ಆತ್ಯಂತಿಕವಾಗಿದ್ದವು. ಷೇಕ್ಸ್‌ಪಿಯರ್‌ನನ್ನು ಓದುವ ವರ್ಗವು ಜಾತ್ಯತೀತ, ಆಧುನಿಕ ಮನೋಭಾವ ಹೊಂದಿದ್ದು ಹೊಸ ಭಾರತೀಯ ಸಾಮಾಜಿಕ ಜೀವನಶೈಲಿಯ ಮುಂಚೂಣಿಯಲ್ಲಿತ್ತು.

ಕನ್ನಡದಲ್ಲಿ ಬಂದ ಮೊದಲ ಸಾಲಿನ ಅನುವಾದಗಳು ಬಹುತೇಕ ಷೇಕ್ಸ್‌ಪಿಯರ್‌ನನ್ನು ‘ಟ್ರಿಮ್’ ಮಾಡಿಕೊಂಡು ಒಳಗೆ ಕರೆದುಕೊಂಡವು. ಕಾಪಿರೈಟ್ ಅಧಿಕೃತತೆ ನಮ್ಮ ಬರವಣಿಗೆಯ ನೀತಿನಿಯಮಗಳಲ್ಲಿ ಕಾಣಿಸಿಕೊಳ್ಳುವವರಗೆ ನೇರಾನುವಾದ ಎನ್ನುವುದು ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ಸುಮಾರು ಇಪ್ಪತ್ತನೇ ಶತಮಾನದ ಮಧ್ಯಭಾಗದ ನಂತರ ನೇರಾನುವಾದಗಳ ಮಾದರಿಗಳು ಹೆಚ್ಚಾಗಿ ಬರಲಾರಂಭಿಸಿದವು. ಬ್ರಿಟಿಷ್ ಶಿಕ್ಷಣ ಪದ್ಧತಿಯಲ್ಲಿ ಈ ಮೊದಲು ಪಠ್ಯಪುಸ್ತಕಗಳಾಗಿ ಬಂದ ಅನುವಾದಗಳು ಮೂಲಕೃತಿಯನ್ನು ಹೆಚ್ಚು ನಿಷ್ಠವಾಗಿ ನಡೆದಂತವು. ಆದರೆ ವಾಚಕರ ಗುಂಪುಗಳು ಅಕಾಡೆಮಿಕ್ ವಲಯ ಬಿಟ್ಟು ವಿಸ್ತಾರವಾಗುತ್ತಾ ಹೋದಂತೆ ಮೂಲಕೃತಿನಿಷ್ಠೆಯ ಬಗೆಗಿನ ನೋಟಕ್ರಮಗಳು ಸಂಸ್ಕೃತಿನಿಷ್ಠವಾಗುತ್ತಾ ಹೋದವು.

ಸ್ಥಳೀಯ ಸಂಸ್ಕೃತಿಗೆ ಒಗ್ಗಿಸುವುದರಲ್ಲಿ ಅನೇಕ ತಂತ್ರಗಳಿವೆ. ಮೊದಲನೆಯದಾಗಿ ಸಂಸ್ಕೃತೀಕರಣಗೊಳಿಸುವ ಪ್ರಕ್ರಿಯೆ. ಮೇಲ್ನೋಟದಲ್ಲಿ ಅದು ಹೆಸರು ಬದಲಾಯಿಸುವುದರಿಂದ ಆಗಿದೆ ಸ್ಥಳೀಯವಾಗಿ ರೂಢಿಯಾಗಿರುವ ಹೆಸರುಗಳನ್ನು ಬಳಸುವುದರ ಮೂಲಕ ಷೇಕ್ಸ್‌ಪಿಯರ್ ನಾಟಕದ ಹೆಸರುಗಳನ್ನು ಪರಿಚಿತವಾಗಿಸುವುದು. ಪ್ರತಾಪರುದ್ರದೇವ, ಹೇಮಚಂದ್ರ, ರಾಘವೇಂದ್ರರಾವ್, ಶೂರಸೇನ, ಜಯಸೇನ, ರಾಮವರ್ಮ, ಮುಂತಾದ ಹೆಸರುಗಳನ್ನು ಆರಂಭಿಕ ಅನುವಾದಕರು ಬಳಸಿದ್ದಾರೆ. ಅವು ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಪಂಚತಂತ್ರ, ಕಥಾಸರಿತ್ಸಾಗರದ ಕಥೆಗಳ ಪಾತ್ರಗಳ ಹೆಸರುಗಳನ್ನು ಹೋಲುತ್ತದೆ. ಆದರೆ ಹೆಸರುಗಳು ಬದಲಾಗುತ್ತಿದ್ದಂತೆ ಹೆಸರಿನ ಹಿಂದಿನ ಸಂಸ್ಕೃತಿಗಳು ಇಣುಕಲಾರಂಭಿಸುತ್ತವೆ. ಅನುವಾದಕರು ಅನೇಕ ಸಾರಿ ಹೆಸರುಗಳ ಜೊತೆ ಇಡೀ ಕಥಾಹಂದರವನ್ನೇ ಕೆಲವೊಮ್ಮೆ ಬದಲಾಯಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದುದೂ ಉಂಟು.

ಕನ್ನಡದ ಆರಂಭಿಕ ಷೇಕ್ಸ್‌ಪಿಯರ್ ಅನುವಾದಗಳು ನೈತಿಕತೆಯ ಉದ್ದೇಶವನ್ನು ಒಳಗೊಂಡಿರುತ್ತಿದ್ದವು. ಷೇಕ್ಸ್‌ಪಿಯರ್ ಡೈಡಾಕ್ಟಿಕ್ ಎನ್ನಿಸುವ ನಾಟಕಕಾರನಲ್ಲ; ಅವನ ನಾಟಕಗಳು ಯಾವುದೇ ಸಂದೇಶಗಳನ್ನು ನೀಡಿ ಕೊನೆಯಾಗುವುದಿಲ್ಲ. ಪುನರುಜ್ಜೀವನ ಕಾಲದ ಮಾನವತಾ ನೆಲೆಯನ್ನು ಆಧಾರವಾಗಿಟ್ಟುಕೊಂಡ ನಾಟಕಕಾರನಾದ ಷೇಕ್ಸ್‌ಪಿಯರ್ ಮನುಷ್ಯನ ಪ್ರಕೃತಿಯನ್ನೂ ತನ್ನ ಮರ್ತ್ಯದ ಅನುಭವಗಳನ್ನೂ ಹೊರಗಿನ ಪ್ರಕೃತಿಯೊಂದಿಗೆ ತೂಗಿ ನೋಡುವ ರೊಮ್ಯಾಂಟಿಕ್ ಸ್ವಭಾವದ ಬರಹಗಾರ. ಅಲ್ಲಿ ನೈತಿಕತೆ ಎನ್ನುವುದು ಆತ್ಯಂತಿಕವಾದ ಆಯ್ಕೆ. ಆದರೆ ಕನ್ನಡದ ಮೊದಲ ಅನುವಾದಕರು ಅವನ ಸಾಹಿತ್ಯವನ್ನು ನೈತಿಕತೆಯ ದೃಷ್ಟಿಯಿಂದ ನೋಡಿದರು. ‘ಕಿಂಗ್ ಲಿಯರ್’ದಂತಹ ದುರಂತ ನಾಟಕವು ಸ್ಥಳೀಯವಾಗಿ ಒಂದು ಅತ್ಯುತ್ತಮ ನೀತಿಕತೆಯಾಗುತ್ತದೆ. ‘ಟೇಮಿಂಗ್ ಆಫ್ ದ ಶ್ರೂ’ ಹೆಂಗಸಿನ ನೀತಿಯನ್ನು ನಿರ್ಧರಿಸುವ ನೀತಿಕತೆಯಾಗುತ್ತದೆ. ಎಂ.ಎಸ್ ಪುಟ್ಟಣ್ಣ ಅವರು ‘ಕಿಂಗ್‌ಲಿಯರ್’ ಪಾತ್ರಗಳನ್ನು ‘ವಿಷಜೆ’, ‘ಕುಮಂತ್ರ’, ‘ದುಃಖಸಾರ’ ಹೆಸರುಗಳನ್ನು ಇಡುವುದರ ಮೂಲಕ ನೀತಿಯ ಆಂತರಿಕ ಉದ್ದೇಶವನ್ನು ಹೊರಗೆಡಹುತ್ತಾರೆ. ಮರ್ಚೆಂಟ್ ಆಫ್ ವೆನಿಸ್ ನಾಟಕದ ಇಂಗ್ಲಿಷ್ ನೈತಿಕತೆ ಒಂದು ಬಗೆಯಾದರೆ ಅದು ಕನ್ನಡಕ್ಕೆ ಬರುವಾಗ ‘ಭಾರತೀಯ ಸಂಸ್ಕೃತಿಗೆ’ ತಕ್ಕನಾಗಿ ಬರಬೇಕಾಗುತ್ತದೆ.

ಷೇಕ್ಸ್‌ಪಿಯರ್ ಕನ್ನಡದ ಅನುವಾದಕ-ಓದುಗ ವರ್ಗಕ್ಕೆ ಒದಗಿದ್ದು ಆಧುನಿಕತೆಯ ಬೇಡಿಕೆಯಿಂದಾಗಿ. ಸಾಮಾಜಿಕ ಬದಲಾವಣೆಗಳನ್ನು ನಿರೀಕ್ಷಿಸುವ ಮನೋಧೋರಣೆಯು ಪಾಶ್ಚಾತ್ಯ ಸಂಸ್ಕೃತಿಯ ಪ್ರೀತಿಯ ನಿವೇದನೆ (ಕೋರ್ಟ್ಶಿಪ್) ಮತ್ತು ಮದುವೆಯೆಂಬ ಕೌಟುಂಬಿಕ ವ್ಯವಸ್ಥೆಗಳ ಮೌಲ್ಯಗಳನ್ನು ಬೆಸೆಯುವ ಬೆಳವಣಿಗೆಗಳನ್ನು ಎದುರು ನೋಡುತ್ತಿತ್ತು. ಸಮಾಜದ ಕೆನೆಪದರಿನ ವರ್ಗಕ್ಕೆ ಆಳುವ ವರ್ಗದ ಆಧುನಿಕತೆಗೆ ಸರಿಸಮನಾಗಿ ತಕ್ಕನಾಗಿ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕಾದ ಆಕಾಂಕ್ಷೆ ಇದ್ದುದರಿಂದ ಆಧುನಿಕತೆಯನ್ನು ಅದು ಬಯಸುತ್ತಿತ್ತು. ಆದರೆ ಇದರ ಸಲುವಾಗಿ ತಮ್ಮ ಸಂಸ್ಕೃತಿಯ ತಿರುಳನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಇಷ್ಟವಿರಲಿಲ್ಲ. ಇದರಿಂದ ಇಬ್ಬಗೆಯ ತುಡಿತಗಳು ಇಲ್ಲಿ ಕಾಣುತ್ತವೆ. ಷೇಕ್ಸ್‌ಪಿಯರ್‌ನ ‘ರೊಮಿಯೊ ಜೂಲಿಯೆಟ್’ ನಾಟಕವು ಪ್ರೀತಿಯ ತೀವ್ರವ್ಯಾಮೋಹಿತನವನ್ನು ಅದರ ಸ್ವೈರಭಾವದೊಂದಿಗೆ ಹೇಳುವಂತದ್ದು. ‘ಟೇಮಿಂಗ್ ಆಫ್ ದ ಶ್ರೂ’ ಸಂಸಾರದಲ್ಲಿ ಅಹಂಕಾರ ತೋರುವ ಹೆಣ್ಣನ್ನು ಪಳಗಿಸುವ ವಸ್ತು ಹೊಂದಿರುವಂತದ್ದು. ಭಾರತೀಯರಿಗೆ ಈ ಎರಡೂ ನಾಟಕಗಳು ಏಕಕಾಲಕ್ಕೆ ಇಷ್ಟವಾಗಿವೆ! ಮದುವೆ ಸಂಸಾರದ ನಿಯಮಗಳನ್ನು ಪಾಲಿಸಬೇಕೆನ್ನುವ ಮೂಲಕ ಪ್ರೀತಿಯ ಸ್ವಚ್ಛಂದತೆಯನ್ನು ಬಿಡಬಹುದೇ? ಪ್ರೀತಿಯ ವ್ಯಾಮೋಹವು ನಮ್ಮ ಸಮಾಜ, ಸಂಸ್ಕೃತಿಯನ್ನು ನಾಶ ಮಾಡಲು ಬಿಡಬಹುದೇ? ಈ ಎರಡೂ ಪ್ರಶ್ನೆಗಳನ್ನು ಕೇಳಿಕೊಳ್ಳುವವರೂ ಅನುವಾದಕರೆಂಬ ಸಂಸ್ಕೃತಿನಿಷ್ಠರೇ. ಆದ್ದರಿಂದಲೇ ‘ರೊಮಿಯೊ ಜೂಲಿಯೆಟ್’ ಕನ್ನಡಕ್ಕೆ ಬಂದಾಗ ಪ್ರೇಮಿಗಳಾಗುತ್ತಾರೆ ನಿಜ, ಆದರೆ ಮೂಲ ನಾಟಕದ ಇಂದ್ರಿಯನಿಷ್ಠ ಪ್ರೇಮ ನಿವೇದನೆಯು ಹಿನ್ನೆಲೆಗೆ ಸರಿದುಬಿಡುತ್ತದೆ. ದುರಂತ ನಾಟಕವು ಕೊನೆಯಲ್ಲಿ ಸುಖಾಂತ್ಯವಾಗಿ ಭಗವಾನ್ ವಿಷ್ಣು ಕಾಣಿಸಿಕೊಂಡು ಸತ್ತವರನ್ನು ಬದುಕಿಸಿ ಎಲ್ಲರನ್ನೂ ಹರಸುತ್ತಾನೆ. ಆತ್ಯಂತಿಕವಾಗಿ ಸಂಸ್ಕೃತಿನಿಷ್ಠ ಮನಸ್ಸೇ.

ಷೇಕ್ಸ್‌ಪಿಯರ್‌ನನ್ನೂ ಸೇರಿ ಪಾಶ್ಚಾತ್ಯ ಬರಹಗಾರರನ್ನು ತಮ್ಮ ಅಂಗಳಕ್ಕೆ ಬಿಟ್ಟುಕೊಳ್ಳುವಾಗ ಅನುವಾದಕರಿಗೆ ಸಂಸ್ಕೃತಿಯ ಪ್ರಶ್ನೆಯೇ ದೊಡ್ಡದಾಗಿತ್ತು. ಹೊಸದಾಗಿ ಉದಯವಾಗುತ್ತಿದ್ದ ರಾಷ್ಟ್ರೀಯತೆಯು ಭಾರತೀಯತೆಯೆಂಬ ಶುದ್ಧ ಸಂಸ್ಕೃತಿಯ ರೂಪವನ್ನು ಕಲ್ಪಿಸಿಕೊಳ್ಳುತ್ತಿತ್ತು. ಎಲ್ಲೆಲ್ಲಿ ಯುರೋಪಿಯನ್ ನಿಲುವುಗಳು, ನಡವಳಿಕೆಗಳು ಉದಾರವಾಗಿವೆ ಎನ್ನಿಸುತ್ತದೆಯೋ ಅಂತ ಕಡೆಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಅನುವಾದಕರು ಪ್ರಜ್ಞಾಪೂರ್ವಕವಾಗಿ ಪ್ರತಿಕ್ರಿಯಿಸುತ್ತಾರೆ. ಅವಕಾಶಗಳಿದ್ದಲ್ಲಿ ಮಧ್ಯಪ್ರವೇಶ ಮಾಡಿ ಆಗಿರುವ ಅನಾಹುತವನ್ನು ಸರಿಪಡಿಸುವ ಯತ್ನ ಮಾಡುತ್ತಾರೆ. ಷೇಕ್ಸ್‌ಪಿಯರ್ ನಾಟಕಗಳಲ್ಲಿ ಹೇರಳವಾಗಿದ್ದ ಇಂದ್ರಿಯನಿಷ್ಠತೆ, ಬೀದಿಭಾಷೆ ಇವನ್ನೆಲ್ಲ ಮೊದಲ ಅನುವಾದಕರು ‘ಸರಿಪಡಿಸಲು’ ಹೆಣಗಿದ್ದಾರೆ.

ಭಾವೋದ್ರೇಕಗೊಳಿಸುವ ಲೈಂಗಿಕ ಸಂಬಂಧಗಳು, ಕಾಮನೆಗಳು, ವಿರಸಗಳನ್ನು ಭಾರತೀಯ ಭಾಷಾಂತರಕಾರರು ತಾವು ಭಾವಿಸಿದಂತೆ ಆ ಭಾವನೆಗಳ ತೀವ್ರತೆಯನ್ನು ತಗ್ಗಿಸಿ ಸ್ವದೇಶಿ ಪಠ್ಯಗಳನ್ನು ನಿರ್ಮಿಸಿಕೊಂಡರು.ಇವು ಆತ್ಯಂತಿಕವಾದ ನೈತಿಕ ಆಯ್ಕೆಗಳಾಗಿದ್ದವು. ಷೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಸೂಚಿಸಿದ ನೈತಿಕತೆಯ ಸ್ವರೂಪಕ್ಕೂ ಸ್ಥಳೀಯ ಭಾಷಾಂತರಕಾರರು ಪರಿಭಾವಿಸಿದ ನೈತಿಕತೆಗೂ ದೃಷ್ಟಿ ಧೋರಣೆಗಳ ವ್ಯತ್ಯಾಸಗಳಿದ್ದವು. ಇವು ಸಂಸ್ಕೃತಿಗಳ ವ್ಯತ್ಯಾಸಗಳು ಆಗಿದ್ದವು. ಮಚೆಂಟ್ ಆಫ್ ವೆನಿಸ್ ನಾಟಕವನ್ನು ರೂಪಾಂತರವಾದ ‘ವೇಣುಪುರಿಯ ವರ್ತಕ’ಕ್ಕೆ ಪ್ರಸ್ತಾವನೆ ಬರೆಯುವ ಆ ಪುಸ್ತಕದ ಸಂಪಾದಿಸಿದ ಭೀ.ಜೀ.ಹುಲಿಕವಿಯವರು ‘ಪಾಶ್ಚಾತ್ಯರ ನಾಗರಿಕತೆಗೂ ನಮ್ಮ ನಾಗರಿಕತೆಗೂ ವಿಶೇಷ ತಾರತಮ್ಯವುಂಟು…ಆದುದರಿಂದ ಅನಾವಶ್ಯಕವೆಂದು ತೋರಿದ ವಿಷಯಗಳನ್ನೆಲ್ಲ ಇದರಲ್ಲಿ ಬಿಟ್ಟುಬಿಟ್ಟಿದೆ ಮತ್ತು ಅವಶ್ಯಕವೆಂದು ತೋರಿದಂತೆ ಮಾರ್ಪಾಡುಗಳನ್ನು ಮಾಡಿದೆ’ ಎಂದು ಸಮರ್ಥನೆ ಮಾಡುತ್ತಾರೆ (ಹನುಮಂತೇಗೌಡ, 1928).

ಭಾರತೀಯ ಸಮಾಜದಲ್ಲಿ ‘ಟೇಮಿಂಗ್ ಆಫ್ ದ ಶ್ರೂ’ ನಾಟಕ ಜನಪ್ರಿಯವಾಗಲು ಅದು ಪಿತೃತ್ವದ ಮೌಲ್ಯಗಳನ್ನು ಎತ್ತಿಹಿಡಿದಂತೆ ಅನ್ನಿಸಿದ್ದಕ್ಕೆ. ಹೆಣ್ಣನ್ನು ‘ಪಳಗಿಸುವ’ ಕ್ರಿಯೆಯು ಸಂಸ್ಕೃತಿಗೆ ಅಗತ್ಯವಾಗಿರುವಂತದ್ದು ಎಂಬ ಭಾವನೆ ಸಾರ್ವತ್ರಿಕವಾಗಿಯೇ ಇತ್ತು. ಹಾಗಾಗಿ ಕನ್ನಡದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಷೇಕ್ಸ್‌ಪಿಯರ್ನ ಈ ನಾಟಕ ಮೆಚ್ಚುಗೆ ಪಡೆಯಿತಲ್ಲದೆ ಮೇಲಿಂದ ಮೇಲೆ ಅನುವಾದಗೊಂಡಿತು. ‘ಒಥೆಲೊ’ ನಾಟಕದ ಶೀಲದ ಪ್ರಶ್ನೆಯು ಮುನ್ನೆಲೆಗೆ ಬಂದು ಅದನ್ನೊಂದು ನೀತಿಕತೆಯನ್ನಾಗಿ ನಿರೂಪಿಸಲಾಗಿದೆ (ಬಸವಪ್ಪಶಾಸ್ತ್ರಿಗಳ ‘ಶೂರಸೇನ ಚರಿತ್ರೆ’ ಅನುವಾದ ನೋಡಿ). ಅಲ್ಲದೆ ಲವ್ ಮ್ಯಾರೇಜ್ ಎಂಬ ಕಲ್ಪನೆಯೇ ಹೊಸದಾದ ಸಮಾಜದಲ್ಲಿ ಸಾಂಪ್ರದಾಯಿಕ ಮದುವೆ ಪದ್ಧತಿ ಮುರಿದು ಹೊರಗೆ ಕಾಲಿಟ್ಟ ಡೆಸ್ಡಿಮೊನಾ ಸಾಯುವುದು ಅನಿವಾರ್ಯವಾಗಿತ್ತು. ಎಂ.ಎಸ್.ಪುಟ್ಟಣ್ಣ ಅವರ ‘ಹೇಮಚಂದ್ರರಾಜ ವಿಲಾಸ’(ಕಿಂಗ್ ಲಿಯರ್ ಅನುವಾದ) ನಾಟಕವು ಅನುವಾದದಲ್ಲಿ ನೀತಿಕಥೆಗಿಂತ ಮುಂದೆ ಹೋಗುವುದಿಲ್ಲ. ರಾಮವರ್ಮ ಲೀಲಾವತಿ (ರೊಮಿಯೊ ಜೂಲಿಯೆಟ್) ನಾಟಕದಲ್ಲಿ ಲೀಲಾವತಿಯ ಪಾತಿವ್ರತ್ಯಕ್ಕೆ ಒತ್ತು ನೀಡಲಾಗಿರುವುದು ಪ್ರೀತಿಯ ವ್ಯಾಮೋಹದ ತೀವ್ರತೆಯನ್ನು ತಣಿಸಿ ಸ್ವೀಕರಿಸಲೆಂದು. ಚಂಡೀಮದಮರ್ದನ, ಗಯ್ಯಾಳಿಯನ್ನು ಸಾಧು ಮಾಡುವಿಕೆ (ದ ಟೇಮಿಂಗ್ ಆಫ್ ದ ಶ್ರೂ) ಮುಂತಾದ ನಾಟಕಗಳು ಹೆಣ್ಣಿನ ಅಧಿಕಪ್ರಸಂಗತನ, ಗಂಡುಬೀರಿತನವನ್ನು ಖಂಡಿಸಿ, ಹೆಣ್ಣು ಹೆಣ್ಣಾಗಿರಬೇಕೆಂಬ ನೀತಿಯನ್ನು ಮುಂದಿಡುತ್ತವೆ. ಈ ಬಗೆಯ ಅನುವಾದಗಳಲ್ಲಿ ಕಥೆಯ ನೀತಿಯನ್ನು ತಮ್ಮ ಸಂದರ್ಭಕ್ಕೆ ತಕ್ಕಂತೆ ಹೊರತೆಗೆಯುವ ಉದ್ದೇಶಗಳಿದ್ದವೇ ವಿನಾ ಷೇಕ್ಸ್‌ಪಿಯರ್ ನಾಟಕದ ಸಾಂಕೇತಿಕ ಅರ್ಥಗಳನ್ನಾಗಲೀ ನಿಗೂಢತೆಯನ್ನಾಗಲೀ ಅನುವಾದಗಳು ಹೆಕ್ಕಿಕೊಳ್ಳಲು ಆಸಕ್ತಿ ಹೊಂದಿರಲಿಲ್ಲ ಎನ್ನಬಹುದು.

ಷೇಕ್ಸ್‌ಪಿಯರ್ ನಾಟಕಗಳ ಭಾಷಾಂತರಗಳು ಎತ್ತಿಕೊಂಡ ನೈತಿಕತೆ ಮತ್ತು ಅಭಿರುಚಿಯ ಪ್ರಶ್ನೆ ತೀವ್ರವಾಗುವುದಕ್ಕೆ ಕಾರಣ ಭಾಷಾಂತರಕಾರರು ಉನ್ನತ ವರ್ಗಕ್ಕೆ ಸೇರಿದವರೇ ಆಗಿದ್ದುದು. ಶಿಷ್ಟ ಸಂಸ್ಕೃತಿಯ ಪಾತಳಿಯಲ್ಲಿಯೇ ಇರಬೇಕೆನ್ನುವ ಮನೋಭಾವದಿಂದ ಷೇಕ್ಸ್‌ಪಿಯರ್‌ನಂತಹ ನಾಟಕಕಾರನ ನಾಟಕಗಳು ತಮ್ಮ ಮೂಲದ ಮೊನಚು ಕಳೆದುಕೊಂಡು ಪೇಲವವಾದ ಭಾಷಾಂತರಗಳಲ್ಲಿ ಕಥೆಗಳಾಗಿ ಅವತರಿಸಿದವು. ಕೆಲವೊಮ್ಮೆ ರಸಗಳೇ ಅದಲು ಬದಲಾಗಿ ಭಾಷಾಂತರಗಳಲ್ಲಿ ಸಾಕಷ್ಟು ಪಲ್ಲಟಗಳು ಕಂಡವು. ಮೊದಲ ಹಂತದ ಭಾಷಾಂತರಕಾರರಲ್ಲಿ ಈ ಪ್ರಕ್ರಿಯೆ ಸಾಮಾನ್ಯವೆನಿಸುವಂತಿದೆ. ಆದರೆ ಈ ಧೋರಣೆ ಸ್ವತಂತ್ರಪೂರ್ವ ಭಾಷಾಂತರಗಳಲ್ಲಿ ಮತ್ತಷ್ಟು ಬಲವಾಗುತ್ತಲೇ ಹೋಯಿತು. ಪ್ರಕಟಣಕಾರರು ಸ್ವತಂತ್ರ ವಹಿಸಿ ನಾಟಕಗಳನ್ನು ತಿದ್ದು, ಪ್ರಕಟಿಸುವ ಕಾಲ ಅದಾಗಿತ್ತು ಎನ್ನುವುದನ್ನು ಕೆಲವು ಕೃತಿಗಳ ಪ್ರಸ್ತಾವನೆಗಳೇ ತಿಳಿಸುತ್ತವೆ.

ಸಂಸ್ಕೃತಿಯ ಹೆಸರಲ್ಲಿ ಪಿತೃತ್ವದ ಧೋರಣೆಗಳು ತಲೆಯೆತ್ತುತ್ತಿದ್ದ ಸಂದರ್ಭದಲ್ಲಿ ಷೇಕ್ಸ್‌ಪಿಯರ್ ನಾಟಕಗಳ ಅನುವಾದಗಳು ಬಂದವಾದ್ದರಿಂದ ಅವು ತಮ್ಮದೇ ಆದ ‘ತಿದ್ದುವಿಕೆ’ಯನ್ನು ಮಾಡಿದವು. ಎಂ.ಎಲ್ ಶ್ರೀಕಂಠೇಶಗೌಡರು ತಮ್ಮ ‘ಪ್ರತಾಪರುದ್ರದೇವ’ದಲ್ಲಿ ಮೂಲ ಷೇಕ್ಸ್‌ಪಿಯರ್ ನಾಟಕದಲ್ಲಿ ಆತಿಥೇಯಳಾಗಿದ್ದ ಲೇಡಿ ಮ್ಯಾಕ್‌ಬೆತ್ ರಾಜನ ಕೈಯಿಗೆ ಮುತ್ತಿಕ್ಕಿ ಒಳಗೆ ಕರೆದುಕೊಳ್ಳುವ ದೃಶ್ಯದ ಬಗ್ಗೆ ತೀವ್ರವಾದ ಜಿಜ್ಞಾಸೆ ಮಾಡುತ್ತಾರೆ. ವಾಸ್ತವವಾಗಿ ಮೂಲ ನಾಟಕದಲ್ಲಿ ಅದೊಂದು ತೀರಾ ಕ್ಷುಲ್ಲಕವಾದ ಸಂಗತಿ. ಆದರೆ ಪರಪುರುಷನ ಕೈಯನ್ನು ಪತಿವ್ರತೆಯಾದವಳು ಮುಟ್ಟಬಹುದೇ? ಮುತ್ತಿಕ್ಕಬಹುದೇ? ಎನ್ನುವುದು ಅನುವಾದದಲ್ಲಿ ಮಹತ್ವದ ಪ್ರಶ್ನೆಯಾಗಿಬಿಡುತ್ತದೆ. ಇಂತಹ ಪಿತೃತ್ವದ ದೃಷ್ಟಿಧೋರಣೆಗಳು ಷೇಕ್ಸ್‌ಪಿಯರ್ ಅನುವಾದಗಳಲ್ಲಿ ಸಾಮಾನ್ಯವೆನಿಸುವಂತಿವೆ.

ನಾಟಕವು ಪ್ರದರ್ಶನ ಸಾಹಿತ್ಯವಾದ ಕಾರಣ ಅಲ್ಲಿ ಹೊಂದಾಣಿಕೆಯು ಅಗತ್ಯವೆಂದು ಭಾಷಾಂತರಕಾರರು ಭಾವಿಸಿರುವಂತೆ ತೋರುತ್ತದೆ. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಭಾಷಾಂತರಗೊಳ್ಳಲಾರಂಭಿಸಿದ್ದ ಷೇಕ್ಸ್‌ಪಿಯರ್ ನಾಟಕಗಳ ಕಥಾಹಂದರವು ವಿಶ್ವಾತ್ಮಕವಾದ ಕುಟುಂಬ, ತಂದೆತಾಯಂದಿರ ಗಂಡ, ಪ್ರೇಮಿಯ ಪ್ರೇಮ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವುದರಿಂದ ಅವನ್ನು ಯಾವುದೇ ಸಮಾಜಕ್ಕೆ ಎಣೆಯಿಲ್ಲದೆ ಒಗ್ಗಿಸುವುದಕ್ಕೆ ಅವಕಾಶವಿದೆ. ಆದರೆ ಕೆಲವೊಂದು ಸನ್ನಿವೇಶಗಳು ಷೇಕ್ಸ್‌ಪಿಯರ್ ಸಮಾಜದ ನಡವಳಿಕೆಗಳಾಗಿದ್ದು ಅವುಗಳನ್ನು ದೇಶೀಸಮಾಜದಲ್ಲಿ ತರುವುದು ಕಠಿಣವೆನಿಸುವಂತಿರುತ್ತವೆ. ಇಂತಹ ಸೂಕ್ಷ್ಮಸಂಗತಿಗಳನ್ನು ಭಾಷಾಂತರಗಳು ಹದವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸುತ್ತವೆ.

ಷೇಕ್ಸ್‌ಪಿಯರ್ ನಾಟಕಗಳ ರೂಪಾಂತರಗಳಲ್ಲಿ ಕಥಾಸಂವಿಧಾನವನ್ನು ಸ್ವೀಕರಿಸುವ ಮನೋಭಾವವನ್ನು ಭಾಷಾಂತರಕಾರರು ಹೊಂದಿದ್ದಾರೆ. ಆದರೆ ರೂಪಾಂತರಗಳು ಅವರಿಗೆ ಅವಶ್ಯಕವಾಗಿದ್ದವು. ಏಕೆಂದರೆ ವರ್ಣಗಳ ಆಚರಣೆಯಲ್ಲಿ ಅಡಕಗೊಂಡಿರುವ ಆದಿಮ ನಂಬಿಕೆಗಳನ್ನು ಇವರು ಸ್ಥಳೀಯವಾಗಿ ಜಾತಿ ಮತ್ತು ಧರ್ಮಗಳಿಗೆ ಹೊಂದಿಸಿಕೊಳ್ಳಬೇಕಾದ ಒತ್ತಡವನ್ನು ಸ್ವಯಂಪ್ರೇರಿತವಾಗಿ ಅನುಭವಿಸಿದ್ದರು. ಭಾಷಾಂತರಗಳು ಜಾತಿಯನ್ನು ವರ್ಣವೆಂಬುದಕ್ಕೆ ತತ್ಸಮವಾಗಿ ಬಳಸಿ ಭಿನ್ನ ಜನಾಂಗೀಯರನ್ನು ಸಂಸ್ಕೃತಿಗೆ ಒಗ್ಗಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಭಾಷಾಂತರಕಾರರ ಗ್ರಹಿಕೆಯಲ್ಲಿ ಯುರೋಪು ಸಮಾಜದ ಜ್ಯೂಗಳು ಇಲ್ಲಿನ ಮಾರವಾಡಿ ಅಥವಾ ಶೆಟ್ಟಿ ಜನಾಂಗಗಳಿಗೆ ಹೋಲುತ್ತಾರೆ. ಆದರೆ ಮಾರವಾಡಿಗಳಾಗಲೀ ವೈಶ್ಯರಾಗಲೀ ವ್ಯಾಪಾರ ದೃಷ್ಟಿಯಿಂದ ಜ್ಯೂಗಳಿಗೆ ಹೋಲಿಸಲ್ಪಡಬಹುದೇ ವಿನಾ ಅವರಲ್ಲಿ ಜ್ಯೂ ಮತ್ತು ಕ್ರಿಶ್ಚಿಯನ್ ಸಮುದಾಯಗಳಲ್ಲಿ ತಳಪಾಯದಲ್ಲಿದ್ದ ಧಾರ್ಮಿಕ ದ್ವೇಷಗಳೇನೂ ಕಾಣುವುದಿಲ್ಲ. ಈ ಸ್ಥಳೀಕರಲ್ಲಿ ‘ಹೊಟ್ಟೆ ಬಗೆದು ಸೇರುಮಾಂಸ’ ಬಗೆದುಕೊಳ್ಳುವ ಸೇಡಿಗೆ ಅರ್ಥ ಕಾಣುವುದಿಲ್ಲ. ಕೆರೂರರ ‘ಸುರತ ನಗರದ ಶ್ರೇಷ್ಠಿ’ ನಾಟಕದಲ್ಲಿ ಮೂಲ ನಾಟಕದ ಕ್ರಿಶ್ಚಿಯನ್ ಹಾಗು ಜ್ಯೂಗಳ ಸಂಘರ್ಷವನ್ನು ರಜಪೂತರು, ಮಾರವಾಡಿಗಳು ಇವರ ನಡುವಿನ ಸಂಘರ್ಷದಂತೆ ತೋರಿಸಲಾಗಿದೆ. ಇದೇ ನಾಟಕವನ್ನು ಭಾಷಾಂತರಿಸುವ ಹನುಮಂತ ಗೌಡರು ನಾಟಕವನ್ನು ‘ಭಾರತೀಯ’ಗೊಳಿಸುವ ಒತ್ತಡಕ್ಕೆ ಸಿಲುಕಿ ಬ್ರಾಹ್ಮಣರು ಸೇರಿಕೊಂಡು ಕ್ಷತ್ರಿಯ ಕುಲದ ಹುಡುಗನೊಂದಿಗೆ ಜೈನಕನ್ಯೆಯನ್ನು ಮದುವೆ ಮಾಡಿಕೊಟ್ಟಾಗ ಪ್ರಾಯಶ್ಚಿತ್ತವಾಗುವಂತೆ ಮಾಡುತ್ತಾರೆ. ಆನಂದರಾಯರು ಭಾಷಾಂತರಿಸಿದ ‘ಪಾಂಚಾಲಿ ಪರಿಣಯ’(1890) ರಲ್ಲಿ ಜ್ಯೂ ಕ್ರಿಶ್ಚಿಯನ್ ನಡುವಿನ ವರ್ಣ ಸಂಘರ್ಷವನ್ನು ಬೌದ್ಧ ಮತ್ತು ಹಿಂದೂ ಸಂಘರ್ಷವನ್ನಾಗಿ ಕಲ್ಪಿಸಲಾಗಿದೆ. ಭಾರತದ ಪ್ರಾಚೀನ ಚರಿತ್ರೆಯಲ್ಲಿ ಎಂದೊ ನಡೆದ ಬೌದ್ಧ-ಹಿಂದೂ ಸಂಘರ್ಷದ ಸಾಂದರ್ಭಿಕತೆಯನ್ನು ಇಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಇಂತಹ ಹತ್ತು ಹಲವು ಉದಾಹರಣೆಗಳನ್ನು ಮೊದಲ ಸಾಲಿನ ಭಾಷಾಂತರಗಳಲ್ಲಿ ಶೋಧಿಸಬಹುದು.

ಷೇಕ್ಸ್‌ಪಿಯರ್ ನಾಟಕಗಳಲ್ಲಿ ಭಾಷಾಂತರಕಾರರಿಗೆ ತೊಡಕಾಗುವುದು ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್’ ನಾಟಕದ ಸಾಮಾನ್ಯರು. ಶ್ರೀಕಂಠೇಶಗೌಡರ ‘ಪ್ರಮೀಳಾರ್ಜುನೀಯಂ’ದಲ್ಲಿ ಬರುವ ನಾಟಕವನ್ನು ಆಡಲು ಸಾಮಾನ್ಯರು ಬರುವುದನ್ನು ಸ್ಥಳೀಯ ಜಾತಿಗಳಿಗೆ ಹೊಂದಿಸುತ್ತಾರೆ. ಮಡಿವಾಳ, ಕ್ಷೌರಿಕ, ಆಚಾರಿ ಹೀಗೆ ಅನೇಕ ಸ್ಥಳೀಯ ಜಾತಿಗಳಲ್ಲಿ ಸಾಮಾನ್ಯರು ಮೈದಳೆದು ಬರುತ್ತಾರೆ. ಕೆರೂರು ವಾಸುದೇವಾಚಾರ್ಯರು ಷೇಕ್ಸ್‌ಪಿಯರ್‌ನ ಇದೇ ನಾಟಕವನ್ನು ‘ವಸಂತ ಯಾಮಿನಿ ಸ್ವಪ್ನಾಚಮತ್ಕಾರ ನಾಟಕವು’ ಎಂದು ಅನುವಾದಿಸಿದ್ದಾರೆ. ಅದರಲ್ಲಿ “ವನಜ್ಯೋತ್ಸ್ನಾದೇವಿಯರ ಪುಷ್ಪಶಯ್ಯೆಯ ಸಮೀಪದಲ್ಲಿಯೆ ಗ್ರಾಮ್ಯರಾದ ಕೆಲವರು ಕರ್ನಾಟಕಸ್ಥರು ತಮ್ಮ ಹಡಪದ ಜೋಳಿಗೆ ಉಳಿಬಾಚಿ ತಿಗರಿ ಸೂಜಿ ದಾರಗಳನ್ನೊಳಗೊಂಡ ನಾಟಕವನ್ನಾಡಬೇಕೆಂದು ಸಾಹಸದಿಂದ ಬಂದು ತಮ್ಮ ವಾಕ್ಚಾತುರ್ಯದ ಚಿಂತನೆಯನ್ನು ಮಾಡುತ್ತಿದ್ದರು” (ವಾಸುದೇವಾಚಾರ್ಯ, 1916:156) ಎಂದು ಪಾತ್ರ ಪರಿಚಯ ಮಾಡಲಾಗಿದೆ. ಇಲ್ಲಿಯೂ ಜಾತಿಸೂಚಕವಾದ ಹೆಸರುಗಳನ್ನಿಟ್ಟುಕೊಂಡ ಸಾಮಾನ್ಯರಿದ್ದಾರೆ. ಈ ಎರಡು ಭಾಷಾಂತರಗಳನ್ನು ಉದಾಹರಣೆಯನ್ನಾಗಿ ಇಟ್ಟು ನೋಡುವುದಾದರೆ ಜಾತಿಯಲ್ಲಿ ಪ್ರಮುಖವಾಗಿ ವ್ಯಕ್ತವಾಗುವ ಮೇಲು ಕೀಳಿನ ಕಲ್ಪನೆಯನ್ನು ಭಾಷಾಂತರಗಳು ಬಿಂಬಿಸುತ್ತವೆ. ಭಾಷಾಂತರಕಾರರ ಧೋರಣೆಯಲ್ಲಿ ಅನ್ಯತೆ ಮತ್ತು ಅನನ್ಯತೆಗಳು ಉಲ್ಲೇಖವಾಗುತ್ತವೆ ಎನ್ನುವುದನ್ನು ಗಮನಿಸಬಹುದು. ಶ್ರೀಕಂಠೇಶಗೌಡರ ‘ಪ್ರಮೀಳಾರ್ಜುನೀಯಂ’ ನಾಟಕಾನುವಾದದಲ್ಲಿ ಬರುವ ಸಾಮಾನ್ಯರು ತಮ್ಮ ಜಾತಿ ನಿಶ್ಚಿತತೆಗಳನ್ನು ಢಾಳಾಗಿಯೇ ತೋರ್ಪಡಿಸುತ್ತಾರೆ. ಪ್ರತಿ ಪಾತ್ರಧಾರಿಯು ತನ್ನ ಮತ್ತು ಇನ್ನೊಬ್ಬನ ಜಾತಿಯನ್ನು ನಿಸ್ಸಂಕೋಚವಾಗಿ ಉಲ್ಲೇಖಿಸುವನು. ನಾಟಕದ ರಿಹರ್ಸಲ್ ಮಾಡುತ್ತಿದ್ದ ಕ್ಷೌರದ ನಾಗಪ್ಪ ಹಾಡಿದಾಗ ಮಾಯಾಚಾರಿ ಪ್ರಶಂಸಿಸುವುದು, ‘ಎಷ್ಟಾದರೂ ವಾಲಗ ಊದಿದ ಬಾಯಿ!’ (ಶ್ರೀಕಂಠೇಶಗೌಡ 2009:133). ಮಡಿವಾಳ ಮಾಚಯ್ಯನು ‘ಕೆರೇಲಿ ಒಗೆಯುವ ಅಗಸನಿಗಿಲ್ಲದ ನೀರು ತಲೆಕೆರೆಯೊ ಹಜಾಮನ ಬಟ್ಟಲಲ್ಲಿದೆಯೇನು?’(ಅದೇ, ಪು.133) ಎನ್ನುತ್ತಾನೆ. ಮೂಲ ಷೇಕ್ಸ್‌ಪಿಯರ್ ನಾಟಕದಲ್ಲಿ ಸಾಮಾನ್ಯರು ತಾವು ಅನುಸರಿಸುತ್ತಿದ್ದ ವೃತ್ತಿಗನುಸಾರವಾಗಿ ಕೀಳು ಎನ್ನುವುದನ್ನು ತಮ್ಮ ಸ್ವಭಾವದಲ್ಲಿ ಹಾಗೂ ಧೋರಣೆಯಲ್ಲಿ ತೋರಿಸಿದರೆ, ಭಾರತೀಯ ಸಂದರ್ಭದಲ್ಲಿ ಅದು ಜಾತಿಗೆ ಪರಿವರ್ತನೆಗೊಳ್ಳುತ್ತದೆ. ಇಲ್ಲಿ ಜಾತಿಯು ವೃತ್ತಿ ಮತ್ತು ಹುಟ್ಟಿನ ಶ್ರೇಣೀಕರಣಗಳೆರಡನ್ನೂ ಒಟ್ಟಿಗೇ ಸೂಚಿಸುವುದರಿಂದ ಪಾತ್ರಧಾರಿಗಳು ಇಲ್ಲಿ ಸಮಾಜದ ಒಂದು ನಿಶ್ಚಿತ ವರ್ಗ ಮತ್ತು ಜಾತಿಗೆ ಸೇರಿದವರು ಎನ್ನುವುದು ಸ್ಪಷ್ಟವಾಗಿದೆ.

ನಾಟಕ ಪ್ರಕಾರದ ಆಂತರಿಕ ಬದಲಾವಣೆಗಳು ರಾಷ್ಟ್ರೀಯತಾವಾದಿ ಮನೋಭಾವ ಬೆಳೆಯುತ್ತಿದ್ದ ಸಮಯದಲ್ಲಿ ಹುಟ್ಟಿದ್ದರಿಂದ ಭಾಷಾಂತರಗಳಲ್ಲಿ ಸಂಸ್ಕೃತಿ ಪ್ರಶ್ನೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ರಾಷ್ಟ್ರೀಯತೆಯ ಈ ಹಿನ್ನೆಲೆಯಲ್ಲಿ ಭಾರತೀಯ ಭಾಷಾಂತರಗಳು ಸಂಸ್ಕೃತಿಯ ಪುನರ‍್ರಚನೆಯಲ್ಲಿ ತೊಡಗಿದವು. ಶಿಶಿರಕುಮಾರ್ ದಾಸ್ ಅವರು ಷೇಕ್ಸ್‌ಪಿಯರ್ ನಾಟಕಗಳ ಅನುವಾದಗಳನ್ನು ಕುರಿತು ಮಾತನಾಡುತ್ತಾ ಬಹುತೇಕ ಭಾರತೀಯ ಭಾಷಾಂತರಕಾರರು ತಮ್ಮ ಭಾಷಾಂತರಗಳ ಮೂಲಕ ಆಧುನಿಕತೆಯನ್ನು ಹುಡುಕಾಡಬೇಕಾಯಿತು ಎನ್ನುತ್ತಾರೆ (ಶಿಶಿರಕುಮಾರ್ ದಾಸ್, 2005:50). ಕನ್ನಡದ ಶ್ರೀಕಂಠೇಶಗೌಡರಿಗೆ ಹೊರಗಿನ ಆಧುನಿಕತೆಯನ್ನು ಇಂಗ್ಲಿಷ್ ಭಾಷಾಂತರಗಳು ತಂದುಕೊಡುತ್ತಿವೆ ಎನ್ನುವ ಕಾರಣಕ್ಕೆ ಅವು ಮುಖ್ಯವಾಗುತ್ತವೆ. ತಮ್ಮ ‘ಪ್ರತಾಪರುದ್ರದೇವ’ ನಾಟಕದ ಮುನ್ನೆಲೆಯಲ್ಲಿ ಗೌಡರು ಬರೆಯುವಂತೆ; “ಸಂಸ್ಕೃತ ಗ್ರಂಥಗಳ ಆ ಮಹತ್ತರವಾದ ಬ್ರಹ್ಮಾಸ್ತ್ರ, ವಿಮಾನ, ತಪಶ್ಶಕ್ತಿಗಳು, ಈ ಪಾಪಿ ಮದ್ದು ಗುಂಡು, ರೈಲ್, ವಿದ್ಯಚ್ಛಕ್ತಿಗಳ ಕಾಲದಲ್ಲಿ, ಅದ್ಭುತ ಭ್ರಾಂತಿಗಳಾಗಿ ರುಚಿಸದಿರುವುವು. ಅವುಗಳನ್ನೇ ಕಟ್ಟಿಕೊಂಡು ಹೆಣಗಾಡದೆ ಕಾಲಾನುಗುಣವಾದ ಗ್ರಂಥಗಳಿಂದಲೂ, ಕನ್ನಡದ ಗ್ರಂಥಗಳನ್ನು ಪ್ರಚುರತೆಗೆ ತರಲು ಆಂಗ್ಲೇಯ ಕರ್ನಾಟಕ ವಿದ್ಯಾವಂತರು ‘ಸಿರಿಗನ್ನಡಂಗೆಲ್ಗೆ’ ಅಂದರೇನೆ ಕನ್ನಡವು ಮುಂದೆ ವೃದ್ಧಿಯಾಗುವುದು”(ಶ್ರೀಕಂಠೇಶಗೌಡ, 2009: 14).

ಆಧುನಿಕತೆಯ ಪ್ರಶ್ನೆಯು ಢಾಳಾಗಿ ಕಾಣುವುದು ಹತ್ತೊಂಬತ್ತನೆಯ ಶತಮಾನದ ಭಾಷಾಂತರಕಾರರಲ್ಲಿ. ಅನ್ಯ ಸಂಸ್ಕೃತಿಯನ್ನು ಎದುರಿಸುವಾಗ ಅನುಸರಿಸುವ ಇಬ್ಬಗೆಯ ಧೋರಣೆಗಳನ್ನು ಅವರು ಭಾಷಾಂತರಗಳಲ್ಲಿ ಪ್ರಯೋಗ ಮಾಡಿದರು. ಇದರಿಂದ ಮೂರನೆಯದೊಂದು ಗ್ರಹಿಕೆಯೂ ಭಾಷಾಂತರಗಳಿಂದ ಹುಟ್ಟಿಕೊಂಡಿತು. ಉದಾಹರಣೆಗೆ ಷೇಕ್ಸ್‌ಪಿಯರ್‌ನನ್ನು ಭಾಷಾಂತರಿಸಿದ ಕನ್ನಡದ ಭಾಷಾಂತರಕಾರರು ರೆನೆಸಾನ್ಸಿನ ಬರಹಗಾರನೊಬ್ಬನ ಬರಹಗಳನ್ನು ಭಾಷಾಂತರಿಸುತ್ತಿದ್ದೇವೆ ಎನ್ನುವ ಮನೋಭಾವಕ್ಕಿಂತ ಅವನನ್ನು ಮಾನವ ಜೀವನ ಮೌಲ್ಯಗಳನ್ನು ಪ್ರಕಟಿಸುವ ಅಭಿಜಾತ ಸಾಹಿತ್ಯ ಪರಂಪರೆಯ ಕರ್ತೃವಾಗಿ ನೋಡಿದರು. ಭಾಷಾಂತರಗಳಲ್ಲಿ ಕಾಣುವ ಷೇಕ್ಸ್‌ಪಿಯರ್ ನಾಟಕಗಳು ಸ್ಥಳೀಯ ಅಭಿಜಾತ ಪರಂಪರೆಯ ಕವಚ ಹೊದ್ದು ಬಂದಂತವು. ಶ್ರೀಕಂಠೇಶಗೌಡ, ಕೆರೂರು ವಾಸುದೇವಾಚಾರ್ಯ ಮುಂತಾದ ಭಾಷಾಂತರಕಾರರ ಧೋರಣೆಯು ಆಧುನಿಕತೆಯನ್ನು ಕಸಿ ಮಾಡಿಕೊಂಡ ರೀತಿಯದಾಗಿತ್ತು. ಅವರ ಸಂವೇದನೆಗಳು ಕಾಳಿದಾಸನನ್ನೂ ಷೇಕ್ಸ್‌ಪಿಯರ್‌ನನ್ನೂ ಅರಗಿಸಿಕೊಳ್ಳುವುದರಿಂದ ಆಧುನಿಕತೆಯನ್ನು ವಿವರಿಸಿಕೊಂಡಿದ್ದವು.

ಕನ್ನಡದಲ್ಲಿ ಷೇಕ್ಸ್‌ಪಿಯರ್ ಅನುವಾದಗಳ ಮೊದಲ ಫಸಲಿನಲ್ಲಿ ಉಂಟಾದ ಸಂಚಲನ, ಅವುಗಳು ಹುಟ್ಟುಹಾಕಿದ ಸಾಂಸ್ಕೃತಿಕ ಸಂದಿಗ್ಧಗಳು ದಶಕಗಟ್ಟಳೆ ತಲೆಮಾರುಗಳಲ್ಲಿ ಜಿಜ್ಞಾಸೆಯನ್ನು ಉಂಟು ಮಾಡಿದವು. ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ಷೇಕ್ಸ್‌ಪಿಯರ್ ನೇರಾನುವಾದಗಳಿಗೆ ಪ್ರಾಶಸ್ತ್ಯ ಸಿಕ್ಕಿದ್ದರಿಂದ ಸಂಸ್ಕೃತಿ ಪುನಾರಚನೆಯ ಸಂಗತಿಗಳು ಹಿನ್ನೆಲೆಗೆ ಸರಿದವು. ಷೇಕ್ಸ್‌ಪಿಯರ್ ಕುರಿತಾದ ಆಸಕ್ತಿ ಶೈಕ್ಷಣಿಕ ವಲಯ ಮತ್ತು ರಂಗಭೂಮಿಗಳಲ್ಲಿ ಕಡಿಮೆಯಾಗಲಿಲ್ಲವಾದ್ದರಿಂದ ಅವನ ನಾಟಕಗಳ ಭಾಷಾಂತರದ ಪ್ರಕ್ರಿಯೆ ಅಬಾಧಿತವಾಗಿ ಸಾಗಿತು. ಆದರೆ ಕನ್ನಡದ ಜಾಯಮಾನದಂತೆ ಮತ್ತೆ ಷೇಕ್ಸ್‌ಪಿಯರ್‌ನನ್ನು ಸೃಜಿಸಿಕೊಳ್ಳುವ ಅನುಸೃಷ್ಟಿಯ ಮಾದರಿ ತಲೆ ಎತ್ತಿತು. ಇದರಿಂದ ಮತ್ತೆ ಮತ್ತೆ ಷೇಕ್ಸ್‌ಪಿಯರ್‌ನನ್ನು ಮುರಿದು ಕಟ್ಟಿಕೊಳ್ಳುವ ಅಲೆ ಬಂದಂತಾಯಿತು. ಚಂದ್ರಶೇಖರ ಕಂಬಾರರ ‘ಮಾರಿಕಾಡು’, ಎಚ್.ಎಸ್.ಶಿವಪ್ರಕಾಶರ ‘ಮಾರನಾಯಕನ ದೃಷ್ಟಾಂತ’, ‘ನಟ್ಟಿರುಳಾಟ’ ಮುಂತಾದ ಮರುಸೃಷ್ಟಿಯ ನಾಟಕಗಳು ಮತ್ತೊಮ್ಮೆ ಷೇಕ್ಸ್‌ಪಿಯರ್‌ನನ್ನು ಯುಗಧರ್ಮಕ್ಕನುಸಾರಿಯಾಗಿ, ಪ್ರಾದೇಶಿಕವಾಗಿ ಕಟ್ಟಿಕೊಂಡವು. ಷೇಕ್ಸ್‌ಪಿಯರ್‌ನ ಜೀವನಗಾಥೆಗಳನ್ನೇ ಆಧರಿಸಿ ಅವನ ನಾಟಕಗಳನ್ನು ಮರುಸೃಷ್ಟಿಸುವ ಪ್ರಯೋಗಗಳೂ ನಡೆದವು (ಷೇಕ್ಸ್‌ಪಿಯರ್ ಸ್ವಪ್ನನೌಕೆಯಿಂದ ಶೇಕ್ಸ್ಪಿಯರ್ ಮನೆಗೆ ಬಂದ ನಾಟಕಗಳವರೆಗೆ). ಹೀಗೆ ಷೇಕ್ಸ್‌ಪಿಯರ್ ಹುಟ್ಟಿಸಿದ ಆಸಕ್ತಿ ತಲೆಮಾರುಗಳಲ್ಲಿ ಸೃಜನಶೀಲತೆಗೆ ಇಂಬುಕೊಟ್ಟಿದೆ.

*****

ಆಕರಗಳು

ಉಷಾ, ಎಂ (2019) ಕನ್ನಡ ಮ್ಯಾಕ್‌ಬೆತ್‌ಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ

ತಾರಕೇಶ್ವರ, ವಿ.ಬಿ (2015) “ಇಂಗ್ಲಿಷ್ ಅನುವಾದ ಸಾಹಿತ್ಯ: ನಾಟಕ”. ಅನುವಾದ ಸಾಹಿತ್ಯ ಚರಿತ್ರೆ. ಮೋಹನ ಕುಂಟಾರ (ಸಂ), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು

ಧಾರವಾಡಕರ, ರಾ.ಯ (2013) ಹೊಸಗನ್ನಡದ ಉದಯಕಾಲ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಮುದ್ರಣ. 1975

ಬಾಲುರಾವ್, ಶಾ (ಸಂ) (2015) ಷೇಕ್ಸ್‌ಪಿಯರ್‌ಗೆ ನಮಸ್ಕಾರ, ಬೆಂಗಳೂರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಮರುಮುದ್ರಣ

ರಾಮಚಂದ್ರದೇವ (1993) ಶೇಕ್ಸ್‌ಪಿಯರ್‌: ಎರಡು ಸಂಸ್ಕೃತಿಗಳಲ್ಲಿ, ಬೆಂಗಳೂರು: ಗ್ರಂಥಾವಳಿ

ಶಿಶಿರಕುಮಾರ್ ದಾಸ್ (2005) “ಷೇಕ್ಸ್‌ಪಿಯರ್ ಇನ್ ಇಂಡಿಯನ್ ಲಾಂಗ್ವೇಜಸ್”. ಇಂಡಿಯಾಸ್

ಷೇಕ್ಸ್‌ಪಿಯರ್‌- ಟ್ರಾನ್ಸ್ಲೇಷನ್, ಇಂಟರ್‌ಪ್ರಿಟೇಶನ್ ಅಂಡ್ ಪರ್‌ಫಾರ್ಮೆನ್ಸ್.

ಪೂನಮ್ ತ್ರಿವೇದಿ & ಡೆನಿಸ್ ಬಾರ್ತಲೊಮ್ಯೊ(ಸಂ),

ಡೆಲಾವೆರ್:ಯೂನಿವರ್ಸಿಟಿ ಆಫ್ ಡೆಲಾವೆರ್ ಪ್ರೆಸ್

ಶ್ರೀನಿವಾಸ ಹಾವನೂರ (2011) ಹೊಸಗನ್ನಡದ ಅರುಣೋದಯ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ. ಮೂರನೇ ಮುದ್ರಣ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...