ಶಾಂತ ಕಡಲೊಳು ಬೀಸಿದ ಬಿರುಗಾಳಿ

Date: 22-03-2021

Location: .


ಸಿಟ್ಟು ತರಿಸುವ ಆವೇಶಕ್ಕಿಂತಲೂ ತಾಳ್ಮೆಯು ತೋರುವ ಭರವಸೆಯಲ್ಲಿ ಬದುಕು ಅಡಗಿದೆ ಎನ್ನುವ ಲೇಖಕ ಸಂತೋಷ ಅನಂತಪುರ ಅವರು, ಮನುಷ್ಯರ ಭಾವಸ್ಥಿತಿಯನ್ನು ಅರ್ಥೈಸುಕೊಳ್ಳುವಿಕೆಯನ್ನು ತಮ್ಮ ‘ಅನಂತಯಾನ’ ಅಂಕಣದಲ್ಲಿ ವಿಶ್ಲೇಷಿಸಿದ ಪರಿ ಇಲ್ಲಿದೆ.

ಈ ಲೋಕದಲ್ಲಿ ಯಾರೇ ಆದರೂ ಅವರು ಬದುಕುವುದು ಅವರಿಗಾಗಿ ಮಾತ್ರ ಎನ್ನುವುದು ಖರೇ. ಗಿಡ ಬಳ್ಳಿಗಳ ಬೇರುಗಳು ನೀರಿನ ಕಡೆಗೆ ಚಲಿಸುವ ಹಾಗೆ ಮನುಷ್ಯ ಕೂಡ ತನ್ನ ಸುಖಕ್ಕಾಗಿ ಹತ್ತಿರದ ಆಧಾರವನ್ನು ಹುಡುಕಿಕೊಳ್ಳುತ್ತಾನೆ. ಲೋಕವದನ್ನೇ ಪ್ರೇಮವೆಂದೋ, ಪ್ರೀತಿ, ಮೈತ್ರಿಯೆಂದೋ ಕರೆಯುತ್ತದೆ. ನಿಜವಾಗಿಯೂ ನೋಡಿದರೆ ಅವೆಲ್ಲವೂ ಸ್ವಚ್ಛಂದ ಒಲವಿನ ಮೋಹಗಳೇ. ಒಸರು. ಇಲ್ಲವಾದರೆ ಬೇರುಗಳು ಒಮ್ಮಿಂದೊಮ್ಮೆಲೆ ಒಣಗಿ ಕಮರುವುದಿಲ್ಲ. ಗುಟುಕು ಜೀವ ಹಿಡಿದು ಹಸಿರು ಇರುವ ಬೇರೆಡೆಯನ್ನು ಹುಡುಕುತ್ತಾ, ಚಲಿಸಿ ಆಧರಿಸಿಕೊಂಡು ಬೆಳೆಯ ತೊಡಗುತ್ತದೆ. ಯಾರಿಗೂ, ಯಾವುದಕ್ಕೂ ಯಾವ ಕಾಲದಲ್ಲೂ ಮುದುಡಲು ಇಷ್ಟವಿರುವುದಿಲ್ಲವಷ್ಟೆ.

ಹಾಗಿರಬಾರದೆಂದರವರು. ಹೀಗಿರಬೇಕೆಂದರಿವರು. ಹಾಗೂ-ಹೀಗೂ ಇರದೇ ಹೇಗೇಗೋ ಇರಬಹುದೆಂದರವರಿವರು. ಯಾರು ಹಿತವರು ಈ ಮೂವರೊಳಗೆ? ನಾವು ಬಾಳುವ ಬದುಕು, ಚಿಂತಿಸುವ, ಯೋಚಿಸುವ ರೀತಿ-ವಿಧಾನ ಹಾಗೆಯೇ ಇಷ್ಟಾ-ನಿಷ್ಟ, ಒಲುಮೆ-ತಿರಸ್ಕಾರಗಳನ್ನು ಆಧರಿಸಿ ಪುರಸ್ಕರಿಸುವುದಲ್ಲದೆ ಅದನ್ನು ಅನುಷ್ಠಾನಿಸಿ ನಡೆಯಬೇಕೆಂದು ಬಯಸುವ ಮನಸ್ಸುಗಳಿಗೇನು ಕೊರತೆಯಿಲ್ಲ. ಕ್ಷಣಕ್ಕೆ ಪ್ರಸ್ತುತವಾಗಿದ್ದುಕೊಂಡೇ ನಾಳೆಗೆ ಅಪ್ರಸ್ತುತವಾಗುವ ಕಾಲಘಟ್ಟದಲ್ಲಿ ಈ ಎಲ್ಲವೂ ನಡೆಯುವುದೇನು? ಅಷ್ಟಿದ್ದರೂ ನಾಳೆ ಹೇಗೆನ್ನುವುದರ ಕಲ್ಪನೆಯೂ ಇಲ್ಲದೆ ಭೂತದ ಬೆನ್ನೇರಿ ವರ್ತಮಾನವನ್ನು ಸುಡುವ ಕ್ರಿಯೆಯಲ್ಲಿ ತೊಡಗುವಾಗ ಭಾವಿಯು ಸೃಷ್ಟಿಸಲಿರುವ ಗೋಜಲಿನ ಕುರಿತಂತೆ ಯಾವುದೇ ಮಾಹಿತಿ ಇರುವುದಿಲ್ಲ. ವಿಚಾರಧಾರೆ, ನಂಬಿಕೆ, ಸಿದ್ಧಾಂತಗಳು ಬದುಕಿನ ಕುರಿತಾದ ಪ್ರೀತಿ-ಮೋಹಗಳನ್ನು,ಹೇರಿಕೊಂಡು ಬಂದಂತಹ ರೀತಿ-ರಿವಾಜುಗಳನ್ನು ಬದಲಿಸಿಬಿಡುತ್ತವೆ. ಹಿಂದಿನಂತೆ, ಈಗ ಯಾವುದೂ ಇಲ್ಲ ಎನ್ನವುದೂ ನಿಜವಷ್ಟೆ. ಆದರೂ ಇದು ಹೀಗೇ... ಅದು ಹಾಗೇ... ಎಂದು ಷರಾ ಬರೆದವರಂತೆ ನಮ್ಮದೇ ಚಿಂತನೆಗಳನ್ನು ದಾಟಿಸುತ್ತೇವಲ್ಲ! ಎಡಬಿಡಂಗಿಗಳಾಗಿಸುವ ವಿಧಾನಗಳು ಬದುಕಿನ ಮಾರುಕಟ್ಟೆಯಲ್ಲಿ ಬಹಳಷ್ಟಿವೆ..ಕಾಲಾನುಕಾಲಕ್ಕೆ ಇರಬೇಕಾಗಿದ್ದನ್ನು ಇರಿಸಿಕೊಂಡು, ಬೆರೆಸಬೇಕಾಗಿದ್ದನ್ನು ಬೆರೆಸಿಕೊಂಡು ಹೋಗಬೇಕಾಗಿರುವುದು ಕಾಲದ ತುರ್ತು.
*
ನಾವುಂಡಿದ್ದೇ ಮೃಷ್ಠಾನ್ನ ಭೋಜನವೆಂದು ನಂಬಿ ಅದನ್ನೇ ಬಡಿಸುತ್ತೇವೆ. ಸಮಯಾನುಸಮಯಕ್ಕೆ ಬದಲಾಗುವ ಸತ್ಯ-ನಿಷ್ಠೆಗಳು ಯಾರ ಮೂಗಿನ ನೇರಕ್ಕೆ ನಿಂತು ಮಾತನಾಡಿವೆ? ಮತ್ತದೇ ನಿಲುವಿಗೆ ಅಂಟಿಕೊಂಡು ನಿಂತಿರುವವರಾದರೂ ಯಾರಿದ್ದಾರೆಂದು ಬೇಕಲ್ಲ. ಬದಲಾದ ಕಾಲಕ್ಕೆ, ಮತ್ತದೇ ಕಾಲವು ತಂದೊಡ್ಡುವ ಸುಖ-ದುಃಖಗಳಿಗೆ ತಕ್ಕಂತೆ ವೇಷ ತೊಟ್ಟವರೇ ಎಲ್ಲರೂ. ಆದರದನ್ನು ಅರಿತು ಹಗುರಾಗುವ ಹೃದಯ ವೈಶಾಲ್ಯತೆ ಇಲ್ಲದಿರುವುದರಿಂದಲೇ ಬಾಳ ಹಾದಿಯಲ್ಲಿ ಮತ್ತೆ ಮತ್ತೆ ಎಡವುತ್ತಿರುವುದು. ಇತಿಹಾಸ ತಿದ್ದಿಕೊಳ್ಳುತ್ತಲೇ ಇರಬೇಕಾಗಿರುವ ಒಂದು ಪಠ್ಯ. ತಪ್ಪುಗಳನ್ನು ಸರಿಯತ್ತಲೂ, ಸರಿಯನ್ನು ಇನ್ನು ಹೆಚ್ಚಿನ ವಿಸ್ತಾರದ ನೆಲೆಯತ್ತಲೂ ಪಸರಿಸುವ ಕಾರ್ಯವನ್ನು ಚರಿತ್ರೆಯಿಂದ ಮಾತ್ರ ಮಾಡಲು ಸಾಧ್ಯ. ಹಿಂದೆ ಹೀಗಿತ್ತು ಎನ್ನುವುದರ ಆಧಾರ, ಅನುಭವದ ಮೇಲೆ ಇಂದು ಹೀಗಿದೆ. ನಾಳೆ? ಗೊತ್ತಿಲ್ಲ.

ನಾವು ಹೇಗಿರಬೇಕೆಂದು ತೀರ್ಮಾನಿಸಬೇಕಾದವರು ಯಾರು? ಹೀಗಿತ್ತು,ಹೀಗಿದೆ ಎಂದು ವರ್ತಮಾನದಲ್ಲಿ ನಿಂತು ವಿಷಯವನ್ನು ಬಿಡಿಸಿ ಹರವುದಷ್ಟೇ ಕೆಲಸವಾಗಬೇಕು ತಾನೆ? ಮುಂದೆ ಹೇಗಿರಬೇಕೆಂದು ನಿಶ್ಚಯಿಸುವವರು ನಾವಲ್ಲ. ನಾವಾಗಲೂಬಾರದು. ಮುಂದಿನದ್ದನ್ನು ನೋಡಲು, ತಪ್ಪಿದ್ದಲ್ಲಿ ತಿದ್ದಿ ಆಸರೆಯಾಗಲು ಬೇಕಿರುವಷ್ಟು ಆಯಸ್ಸು ಇರುವುದಿಲ್ಲವಲ್ಲ! ಇರುವ ಆಯಸ್ಸನ್ನು ಭದ್ರ ಬುನಾದಿಯನ್ನು ಹಾಕಲು ವ್ಯಯಿಸಬೇಕು. ಕರ್ಮಾನುಸಾರವಾಗಿ ಅದರ ಮೇಲೆ ಚಂದದ್ದೋ, ಅಂದಗೆಟ್ಟದ್ದೋ ಮಹಡಿಯು ಎದ್ದೇಳುತ್ತವೆ. ಅಂತಹದ್ದರಲ್ಲಿ ಕಷ್ಟ-ಸುಖಗಳಿಗೆ ವಕಾಲತ್ತು ವಹಿಸುವ ಪಾತ್ರಗಳಾಗಲು - ನಾವು ನಾವಾಗಿರದೆ ಇನ್ಯಾರೋ ಆಗಿ ಬಾಳು ಹಾಳಾಗಿ ಗೋಳೆನಿಸಿಬಿಡುತ್ತದೆ. ಬೆಳಗಿಸುವುದು-ಆರಿಸುವುದು, ಮುದುಡಿಸುವುದು - ಅರಳಿಸುವುದು ಎಲ್ಲವೂ ಚಿತ್ತದ್ದೇ ಕೆಲಸ. ಹಾಗಾಗಿ ಮಾನಸಿಕ ಸ್ವಾಸ್ಥ್ಯ ಬಹಳ ಮುಖ್ಯ.

ಕೊರತೆಗಳನ್ನು ಮುಚ್ಚಿ ಹಾಕಲು ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಹೊಸತೇನಲ್ಲ. ಮಾನಸಿಕ ಗೊಂದಲಗಳು ಆದ್ಯತೆಯನ್ನು, ನಿಲುವು-ಇಷ್ಟಗಳನ್ನು ಬದಲಾಯಿಸುತ್ತ ಹೋದಂತೆ ಕಾಣುವ ಕಣ್ಣುಗಳಿಗೆ ಭಿನ್ನ ರಂಗುಗಳನ್ನು ತಳೆಯುವ ಗೋಸುಂಬೆಯಾಗಿ ಬಿಡುತ್ತೇವೆ. ಕಟ್ಟಿದ್ದನ್ನು ಕಳಚಿ ಇಟ್ಟಿದ್ದರ ಹಿಂದೆ ನಡೆದು ಅಲ್ಲೂ ನಿಲ್ಲಲಾಗದೆ, ಇಲ್ಲೂ ಸಲ್ಲದೆ ಅಂತರ್ ಪಿಶಾಚಿಯ ಪಾತ್ರವಾಗುವುದು ಕೂಡ ಸ್ಪಷ್ಟತೆ ಇಲ್ಲದಾಗ ಹೊಮ್ಮುವ ಗೊಂದಲಗಳದ್ದೇ ಸೃಷ್ಟಿ. ಅನ್ಯರ ನಾಳೆಗಳ ಹಾಳೆಗಳನ್ನು ನಮ್ಮ ಚಿಂತನೆಗಳು ಕೆಡಿಸಬಾರದು. ಆದರೆ ನಾವಷ್ಟಕ್ಕೇ ಸುಮ್ಮನಿರುತ್ತೇವೆ ಎಂದುಕೊಂಡಿರೇ? ಉಹೂಂ... ಬದಲಿಗೆ ಇನ್ಹೇಗೆ ಕೆಡಹಬಹುದು ಎಂಬ ಹೊಸ ಬಗೆಯನ್ನು ಹುಡುಕುವ ಮನಸ್ಸಿನ ಹಿಂದೆ ಬೀಳುತ್ತೇವೆ. ಆದರೆ ಅದೇ ವಿಧಾನಗಳು ತಿರುಗಿ ನಿಲ್ಲಲು ಹೆಚ್ಚಿನ ಹೊತ್ತೇನೂ ಬೇಕಿಲ್ಲ. ಘಟನೆಯನ್ನು ತಿಳಿದುಕೊಂಡರೂ ಘಟನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಲವು ಬಾರಿ ಸೋತು ಬಿಡುತ್ತೇವೆ. ಒಳ್ಳೆಯದನ್ನು ಹುಡುಕುತ್ತ ಹೋದ ಹಾಗೆ ದುಷ್ಟತನವು ಗೋಚರಿಸುವಂತೆ ಮುಚ್ಚಿ ಕುಳಿತ ಅನೇಕ ಘಟನೆಗಳು ಜೀವಿತ ಯಾತ್ರೆಯಲ್ಲಿ ತೆರೆದುಕೊಂಡು ವಾಸ್ತವದ ಬೆಳಕನ್ನು ಚೆಲ್ಲುವುದುಂಟು. ಅಂತಹ ಸ್ಥಿತಿಯಲ್ಲಿ ಭೂಮಿಗೆ ಅಂಟಿಕೊಳ್ಳದೆ ನೀರಲ್ಲಿ ತೇಲುವ ಮನಸ್ಥಿತಿಯನ್ನು ಹೊಂದಿಬಿಡಬೇಕು. ಉಸಿರಿರುವಾಗ ಹೇಗೂ ಈ ಭೂಮಿಗೆ, ಸಹಿಸಿಕೊಳ್ಳುವವರಿಗೆ ಭಾರವಾಗುತ್ತಿರುತ್ತೇವೆ. ಹೊತ್ತುಕೊಂಡು ಹೋಗುವಾಗಲಾದರೂ ಹಗರುವೆನಿಸಿ ಬಿಡಬೇಕು.ಹಾಗೆ ನಾವಿರಬೇಕು.

ಇನ್ನೊಬ್ಬರ ಬಾಳು ನಮ್ಮ ದೃಷ್ಟಿಯ ನೇರಕ್ಕೆ ನಡೆಯಬೇಕಾದದ್ದಲ್ಲ. ಹಾಗಂತ ನಮ್ಮ ಬಾಳೇ ಶ್ರೇಷ್ಠವಾದದ್ದು ಎನ್ನುವ ಅಹಮಿಕೆಯೂ ಸಲ್ಲ. ಪೂರ್ವಾಗ್ರಹಗಳ ಮೂಲಕ ಅನ್ಯರ ಬದುಕನ್ನು ನೋಡುವ, ಟೀಕಿಸುವ ಮನಸ್ಥಿತಿಯು ಬಂಧವನ್ನು ಬೆಸೆಯುವುದಿಲ್ಲ. ವ್ಯಕ್ತಿಗತ ನೋಟ ಮತ್ತು ಆ ನೋಟವು ನೀಡುವ ನಿಲುವುಗಳು ಅನ್ಯರ ಬದುಕನ್ನು ಅಳೆಯುವ ಮಾಪನವಾಗುವುದೊಂದು ದೊಡ್ಡ ದುರಂತ. ನಾವಂದುಕೊಂಡಂತೆಯೇ ಎಲ್ಲವೂ, ಎಲ್ಲರೂ ಇರಬೇಕೆಂದು, ನಮ್ಮ ಯೋಚನೆ- ಚಿಂತನೆಗಳೇ ನಡೆಯಬೇಕೆಂದು ಬಯಸುವುದು ಸರಿಯಲ್ಲವಷ್ಟೆ. ಇವುಗಳ್ಯಾವುವೂ ನಡೆಯಲಿಲ್ಲ ಎಂದ ಮಾತ್ರಕ್ಕೆ ಆ ಜೀವ ನಿಷ್ಪ್ರಯೋಜಕವಾಗಿ ಬಿಡುವುದು ಬದುಕಿನ ಬಹುದೊಡ್ಡ ವಿಪರ್ಯಾಸ.
*
ಆಘಾತಗಳು ಜೀವನದುದ್ದಕ್ಕೂ ಘಟಿಸುತ್ತಲೇ ಇರುತ್ತವೆ. ಅದರಲ್ಲೊಂದು ಮನೋಭಂಗದಂತಹ ದುಃಖದ ಆಘಾತ. ಕೆಲವು ವಿಷಯಗಳು ವಿಷದಂತಾಗುವುದೂ ಇದೆ. ಅಷ್ಟೇ ಯಾಕೆ ಒಂದೊಂದು ಸಲ ಭಾಗ್ಯವು ಕೂಡ ಸಂಕಟದ ರೂಪವನ್ನು ತಾಳಿ ಬರುವುದುಂಟು. ಅಂತವುಗಳು ತಕ್ಷಣಕ್ಕೆ ನಲಿವಿನದ್ದಾಗಿ ಕಂಡರೂ ಲಂಬಯಾನದಲ್ಲಿ ನೋವುಗಳಾಗಿ ಕಾಡುವುದೇ ಹೆಚ್ಚು. ಅನೇಕ ಸಂಬಂಧಗಳನ್ನು ಏಕಕಾಲದಲ್ಲಿ ಉಳಿಸಿಕೊಳ್ಳುವ ಅನಿವಾರ್ಯತೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮೋಹವು ಕರ್ತವ್ಯವನ್ನು ಸೋಲಿಸಿ ಬಿಡುವುದಿದೆ. ಅಪರೂಪಕ್ಕೆನ್ನುವಂತೆ ಒಂದಷ್ಟು ಮಂದಿ ಜೊತೆ ಜೊತೆಗೇ ನಮ್ಮ ಮನಸ್ಸಿನಲ್ಲಿ ಸಾಗುತ್ತಾರೆ. ಅಂತಹ ಯಾನದಲ್ಲಿ ಜೊತೆಯಾದವರು ಜೀವನ ಯಾತ್ರೆಯುದ್ದಕ್ಕೂ ಜೊತೆಯಲ್ಲೇ ಇರಬೇಕು. ಇದನ್ನು ಊಹೆಯೆಂದು ಭಾವಿಸಿದಿರೇ? ತಪ್ಪಲ್ಲ. ಊಹೆಗಳನ್ನೂ ದಾಟಿದವರಿಗೆ ಮಾತ್ರ ಜಯವು ದೊರಕುವುದು. ಇತಿಹಾಸಕ್ಕೆ ನೋವಿನ ಚಪಲ ಇರುವಂತೆ ಗೆಲುವಿನ ಹೆಬ್ಬಯಕೆಯೂ ಇದೆ. ಒಟ್ಟಿನಲ್ಲಿ ಭರವಸೆಗಳು ನೀಡುವ ಸಾಧ್ಯತೆಗಳು ಮುಂದಿನ ಹಾದಿಯನ್ನು ನಿರ್ಮಿಸಿಬಿಡುತ್ತವೆ.

ಬದುಕಿನ ಅಪೂರ್ಣತೆಯಲ್ಲಿಯೇ ರಸವು ತುಂಬಿರುತ್ತದೆ. ಬದುಕನ್ನು ಪೂರ್ಣವಾಗಿಸಬೇಕೆಂಬ ರಸದ ಬಯಕೆಯಲ್ಲಿ ಮತ್ತೊಮ್ಮೆ ಅಪೂರ್ಣದೊಳಕ್ಕೆ ಹೊಕ್ಕು ಪೂರ್ಣವಾಗಿಸಿಕೊಳ್ಳಲು ಹಂಬಲಿಸುತ್ತಿರುತ್ತೇವೆ. ತನ್ನಿಂದಾಚೆ ನೋಡುವ ಶಕ್ತಿಯನ್ನು ಭಾವವು ತಂದುಕೊಡುತ್ತದಲ್ಲ...ಆ ಪ್ರೀತಿಯ ಭಾವ ಯಾರ ಮೇಲಿನದ್ದೂ ಇರಬಹುದು, ಯಾವುದರ ಕುರಿತಾದದ್ದೂ ಆಗಿರಬಹದು. ಆದರೆ ಅದು ನಿಜವಾಗಿರಬೇಕಷ್ಟೆ. ಪ್ರಿಯ ವ್ಯಕ್ತಿಗಳನ್ನು ದೋಷ ಸಹಿತವಾಗಿಯೇ ಸ್ವೀಕರಿಸುವ ಶಕ್ತಿ ಆ ಭಾವಕ್ಕಿದೆ. ಹಾಗಾಗಿ ಕೆಲವೊಂದು ಭಾಸವೂ ಬದುಕಲು ಪ್ರಯೋಜನವಾಗಿ ಬರುತ್ತದೆ. ತೆರೆದುಕೊಂಡ ಗಾಯಗಳು ತಾನಾಗಿಯೇ ನೋವುಗಳನ್ನು ಹರಿಸಿ ಬಿಡುವಾಗ ದುಃಖಗಳು ಹೃದಯದಲ್ಲಿ ಗೆರೆ ಕೊರೆದು ಕುಂತಿರುತ್ತವೆ. ಹಾಗಂತ ಸುಮ್ಮನಿರದೆ ಮೊದಲು ಆತ್ಮಕೇಂದ್ರಿತ ಪ್ರಪಂಚದಿಂದ ಹೊರ ಜಿಗಿದು ಬಿಡಬೇಕು. ಇನ್ನೊಬ್ಬರ ಕಣ್ಣಲ್ಲಿ ನಮಗಾಗಿ ಹರಿಯುವ ಕಣ್ಣೀರು ಅಪೂರ್ವವಾದುದು. ಅದರಲ್ಲಿ ಆನಂದವಿರುತ್ತದೆ, ಪಡೆಯಬೇಕಾದ ಧೈರ್ಯ ಭರವಸೆಗಳೂ ಅಡಗಿರುತ್ತವೆ. ಮಿಡಿಯುವವರು ಜೊತೆಗಿದ್ದಾರೆ ಎಂದರೆ ಅದು ಪೂರ್ವನಂಟಿನ ಭಾಗ್ಯವೇ ಸರಿ. ಅದಕ್ಕೆ ಬೇಕಿರುವುದು ಲಿಂಗ,ಬಂಧ,ನಂಟಿಗಿಂತಲೂ ಹಿರಿದಾದ ಉತ್ಕಟವಾದ ನಿರಪೇಕ್ಷ ಪ್ರೀತಿ.

ನನಸು ಕಠೋರವಾಗಿರುತ್ತದೆಂದು ಕನಸನ್ನು ಕಾಣುವುದು. ಹಾಗೆ ಕಂಡ ಕೆಲವು ಕನಸುಗಳು ನನಸಾಗಿ ಬಿಟ್ಟು ಹರ್ಷದ ಹೊಳೆಯನ್ನು ಹರಿಸುತ್ತವೆ. ಕಂಡ ಕೆಲವೊಂದು ಕನಸು ನನಸಾಗಿ ಬದುಕಲ್ಲಿ ಯಾತನೆಯನ್ನು ತಂದಿಕ್ಕಿಬಿಡುವುದೂ ಉಂಟು. ಅಂತಹ ಕನಸುಗಳ ಉನ್ಮಾದ ಇಳಿಯಲು, ಹೆಮ್ಮೆ ಅಳಿಯಲು ಆಗಾಗ ಸ್ವಯಂ ಶಿಕ್ಷೆಗೆ ಗುರಿಯಾಗಿಸಿಕೊಳ್ಳಬೇಕು. ನಾವು ಬದುಕುವುದು ಕನಸನ್ನು ನಂಬಿಯೇ. ಅಂತಹ ಕನಸುಗಳು ಉಷೆಯಾಗಿ, ಪ್ರಭೆಯಾಗಿ, ಸಂಧ್ಯೆಯಾಗಿ ನಮ್ಮ ಜೊತೆಗಿರಬೇಕಷ್ಟೇ. ಹಗಲು ಬೇಗನೆ ಹಾರಿ ರಾತ್ರಿ ಅವಸರವಾಗಿ ಬರುವಾಗ ಅಂತಹ ಕನಸೊಂದು ನಮಗಾಗಿ ಕಾಯುತ್ತಿರಬೇಕು. ಆ ಕನಸಲ್ಲಿ ಭೀತಿಯು ಕರಗಿ ಬಿಡಬೇಕು. ನೆಲದ ಮೇಲಿನ ಹಣತೆ ಆಕಾಶದಲ್ಲಿಯ ಬೆಳದಿಂಗಳಾಗಲು ಹಾತೊರೆಯುತ್ತದಲ್ಲ ಹಾಗಿರಬೇಕು ಬಾಳುವ ಕ್ರಮ.

ಲೋಕದ ದೃಷ್ಟಿಯಲ್ಲಿ ಬಂಧಗಳನ್ನು ಹೆಣೆದ ಜೀವಗಳು ಅಂತರಂಗದಲ್ಲಿ ಪರಸ್ಪರ ದೂರವಾದ ಭಾವಗಳಾಗಿರುತ್ತವೆ. ಶಾರೀರಿಕವಾಗಿ ಹತ್ತಿರ ಬಂದರೂ ಮಾನಸಿಕವಾಗಿ ದೂರವೇ ಇರುತ್ತವೆ. ನಮ್ಮ ಕೊರತೆಗಳನ್ನು ನಾವೇ ಹೊಟ್ಟೆಗೆ ಹಾಕಿಕೊಳ್ಳದಿದ್ದರೆ ಅನ್ಯರು ಹಾಕಿಕೊಳ್ಳುತ್ತಾರೇನು? ಸೇರಬೇಕಾದದ್ದೆಲ್ಲವೂ ಹೃದಯದ ಮೂಲಕವೇ ಸೇರುವುದು. ಹೃದಯದ ಕುರಿತಾದ ವಿಶೇಷ ವಿವರಣೆಯ ಅಗತ್ಯವಿಲ್ಲ. ಕಾರಣ ಎಲ್ಲರ ಹೃದಯವೂ ಒಂದೇ. ಬಣ್ಣವನ್ನು ಮೆತ್ತಿಕೊಳ್ಳುವ ಚಟಕ್ಕೆ ಕಾರಣವಾಗುತ್ತ ಹೋಗುವಾಗ ಅಂಟಿಸಿಕೊಂಡ ರಂಗುಗಳು ಭಿನ್ನವಲ್ಲದಿದ್ದರೂ ನಂಜೇರಲು ಕಾರಣಗಳು ಬೇಕಿರುವುದಿಲ್ಲ. ವಿಚಾರದ ಸಹಾಯದಿಂದ ವಿಕಾರಗಳ ಮೇಲೆ ವಿಜಯವನ್ನು ಸಾಧಿಸಬಹುದು. ಆದರೆ ಮತ್ಸಿತ-ಕುತ್ಸಿತ ಭಾವದೆದುರು ಏನನ್ನೂ ವ್ಯಕ್ತಪಡಿಸಿ ಸಾಧಿಸುವುದು ಬಲುಕಷ್ಟ. ನಿಸರ್ಗಕ್ಕೆ ದ್ವಂದ್ವದ ಕಲ್ಪನೆಯೇ ಇಲ್ಲ. ಅದೇನಿದ್ದರೂ ಮನುಷ್ಯನಿಗೆ ಮಾತ್ರ. ತನ್ನ ಧರ್ಮವನ್ನು ಪಾಲಿಸುವವನಿಗೆ ಮಾತ್ರ ಇನ್ನೊಬ್ಬ ತನ್ನ ಧರ್ಮವನ್ನು ಪಾಲಿಸಬೇಕೆಂದು ಅಪೇಕ್ಷಿಸುವ ಅಧಿಕಾರವಿರುತ್ತದೆ. ಆದರೆ ನಾವು ಹಾಗಿರುವುದಿಲ್ಲವಷ್ಟೆ.
*
ಶಾಂತವಾಗಿ ಹರಿಯುವ ನಿರ್ಮಲ ಪ್ರವಾಹದ ಭಾವನೆಗೆ ಆರ್ಭಟಿಸಲೂ ಗೊತ್ತು. ಅದು ಒಳ ಹಿಡಿದಿಟ್ಟ ನೋವೆಂಬ ಭಾವಸ್ಥಿತಿಗಿರುವ ಮುಕ್ತಿಯ ಹಾದಿ. ಮಿತಿ ಮೀರಿದರೆ ಶಾಂತ ಸ್ವರೂಪನಾದ ದೇವಿ-ದೇವನೇ ಸಿಡಿದೇಳುವುದನ್ನು ಕೇಳಿದ್ದೇವೆ, ಓದಿದ್ದೇವೆ. ಇನ್ನು ಮನುಷ್ಯನೇನು ಮಹಾ! ಅಂತರಾಳದಲ್ಲಿ ಮಡುಗಟ್ಟಿದ ನೋವನ್ನು ಎಷ್ಟೆಂದು ತುಳಿದಿಟ್ಟುಕೊಳ್ಳಲು ಸಾಧ್ಯ? ಅರಿತವರು ಅರಿಯುತ್ತಾರೆ. ಅರಿಯದವರು ಜರಿಯುತ್ತಾರೆ. ಹೀಗಾಗಿ ನೋಡುವ ಕಣ್ಣಿಗೆ, ಕೇಳುವ ಕಿವಿಗೆ ಅಂತಹ ಸ್ವರೂಪಗಳು ಅಪರಾಧಿಗಳಾಗಿ ಬಿಡುತ್ತವೆ. ಅಷ್ಟೇ ವ್ಯತ್ಯಾಸ. ಸತ್ಯವನ್ನು ಅನಾವರಣಗೊಳಿಸಿ ನೋವನ್ನು ತಹಬದಿಗೆ ತರುವ ಬದಲು ಸಂಭಾಳಿಸಿಕೋ... ಎಂದೆನ್ನುತ್ತಲೇ ಸಹ್ಯವೆನಿಸಿಕೊಳ್ಳುವ ಪ್ರಯತ್ನವು ನಿರಂತರವಾಗಿ ಹೇರಲಾಗುತ್ತದೆ. ಪರಿಣಾಮ ಬೇನೆಯ ಜ್ವಾಲೆ ಮೇಲೆಕ್ಕೇರುತ್ತಲೇ ಹೋಗುತ್ತಿರುತ್ತದೆ. ದಶಕಗಳಷ್ಟು ಕಾಲ ಕುದಿಯುತ್ತಿರುವ ಒಳ ಬೇಗುದಿಯು ಹೊರ ಬರಲು ಕಾರಣಗಳನೇಕ. ಅವುಗಳೇನು ಇಂದಿನದ್ದೋ, ನಿನ್ನೆಯದ್ದೋ ಖಂಡಿತಾ ಅಲ್ಲ. ಒರೆಸುವ ಬಟ್ಟೆಯಂತೆ ಜೀವ ತೇಯ್ದ ಜೀವದ ಸಹನೆಗೂ ಮಿತಿಯಿದೆ. ಮಿತಿ ಮೀರಿದ್ದೇ ಕಟ್ಟೆ ಒಡೆದು ಹರಿಯುವ ರೌದ್ರರಸವನ್ನು ಹಿಡಿದಿಡುವುದು ತ್ರಾಸದಾಯಕ. ಪ್ರಕೃತಿ ಮತ್ತು ಪುರುಷನ ಶಕ್ತಿ ದೌರ್ಬಲ್ಯಗಳು ಅನೇಕ. ಪ್ರಕೃತಿಯು ಸಿಡಿದೆದ್ದರೆ ಪುರುಷನಿಗೆ ಅದನ್ನು ತಡೆಯುವುದು ಬಿಡಿ ತಾಳಿಕೊಳ್ಳುವುದೂ ಕಷ್ಟ.

ಅಂತಹ ಘಟನೆಯೊಂದು ನಡೆಯಿತೆಂದರೆ ಹಿಂದಿನದ್ದೆಲ್ಲವೂ ಅಳಿದು ಹೊಸದು ಮಾತ್ರ ಮುನ್ನೆಲೆಗೆ ಬಂದು ನಿಂತದ್ದೇ ವರ್ತಮಾನ ಅಸಹ್ಯವಾಗಿ ಕಾಣಿಸಿ ಬಿಡುತ್ತದೆ. ಆದರೆ ಭೂತ ಮಾತ್ರ ತನ್ನ ನೋವನ್ನು ಉಣ್ಣುತ್ತಲೇ ನಾಳೆ ಎಂಬ ಸುಂದರ ಭವಿಷ್ಯವು ಇನ್ನೇನು ಹೊತ್ತು ತರಬಹುದೆಂದು ಚಾತಕಪಕ್ಷಿಯಂತೆ ಕಾಯುತ್ತಿರುತ್ತದೆ. ತನಗಲ್ಲದಿದ್ದರೂ ತನ್ನವರಿಗಾಗಿ ಗಂಧದ ಕೊರಡ೦ತೆ ತೇದು, ತಾನೂ ಕರಗಿ ಸುಗಂಧ ಬೀರಲು; ಆ ಗಂಧಕ್ಕೆ ಅರಳಿದ ನಾಸಿಕಗಳದೆಷ್ಟೋ. ಗಂಧದ ಘಮಲನ್ನು ಆಗ್ರಾಣಿಸಿ ಕೊರಡನ್ನು ಮರೆಯುವ ಜಾಯಮಾನ ಹೊಸದೇನಲ್ಲವಲ್ಲ. ಹಾಗಿದ್ದಾಗಲೂ ಬರಲಿರುವ ದಿನಗಳು ಶಾಂತಿ ನೆಮ್ಮದಿಯದ್ದೆಂದು ಹೇಳುವ ಆ ಜೀವದ ಮನಸ್ಸಿನ ಭರವಸೆ ಮಾತ್ರ ಕಿಂಚಿತ್ತೂ ಬತ್ತಿರುವುದಿಲ್ಲ. ಈ ಪಾಪ ಇದೆ ನೋಡಿ ಅದು ಯಾವಾಗಲೂ ಪುಕ್ಕಲೇ. ಕಳ್ಳದಾರಿಯನ್ನು ಹಿಡಿದು ಬರುವುದೇ ಅದರ ಅಭ್ಯಾಸ. ನೋಡುವ ಕಣ್ಣಿಗದು ಅಸಭ್ಯವಾಗಿ ತೋರಿದರೂ ನಡೆಸಿಕೊಳ್ಳುವ ರೀತಿ ಮಾತ್ರ ಬಲು ಸಭ್ಯ. ಹಾಗಾಗಿ 'ಪಾಪ'ದ ಆಟ 'ಪುಣ್ಯ'ದ ಮೇಲೆ ಭರ್ಜರಿಯಾಗಿಯೇ ನಡೆಯುತ್ತವೆ. ಪರಿಣಾಮ ದೇವಪುಣ್ಯವು ಅಸುರ ಪಾಪದೆದುರು ಕ್ಷೀಣಿಸಿಬಿಡುತ್ತದೆ. ಪಾಪ-ಪುಣ್ಯಗಳ ಲೆಕ್ಕಾಚಾರವು ಕ್ಷಣಕ್ಷಣಕ್ಕೂ ಭರದಿಂದ ಸಾಗುತ್ತಿರುತ್ತದೆ. ಪಾಪದ ವಿಷ ನೆತ್ತಿಗೇರುತ್ತಲೇ ಇರುವ ಹೊತ್ತಿಗೆ ಬದುಕಿನ ಎಲ್ಲಾ ನಂಜನ್ನು ಹೀರಿಕೊಳ್ಳಲು ವಿಷಕಂಠನೊಬ್ಬ ಹುಟ್ಟಿಕೊಳ್ಳುತ್ತಾನೆ. ಕಂಠವು ನೀಲಕ್ಕೆ ತಿರುಗಿ ಬಿಗಿದ ಹೊತ್ತಲ್ಲಿ ತನ್ನದೇ ಒಂದು ಅಂಶ ಆಸರೆಯಾಗಿ ಆ ನಂಜನ್ನು ಹೀರಿಕೊಳ್ಳಲು ಮುಂದೆ ಬಂದಿರುತ್ತದೆ. ಬದುಕಿನ ವೈರುಧ್ಯಗಳೇ ಹೀಗೆ...

ತಿಂಗಳ ಬೆಳಕು ನಸುನಗುತ್ತಾ ಕೆಳಕ್ಕಿಳಿದು ಬರುವ ಅಂದವು ವಿರಕ್ತಿಯಿಂದ ಮಾತ್ರ ಜಾಗೃತವಾಗುವುದು. ಮೆಲುನಗೆಯಂತಹ ಮಧುರವಾದ ಭಾಷೆ ಮತ್ತೊಂದಿಲ್ಲ.ಕ್ಷಣಕ್ಷಣಕ್ಕೂ, ಕೂದಲ ಸೆಳಕಿನ ಸುಖ, ಸ್ಪರ್ಶಸುಖ, ದೃಷ್ಟಿ ಸುಖಗಳನ್ನು ದೇಹವು ಬಯಸುತ್ತದೆ. ಅದೆಲ್ಲವನ್ನೂ ಮೊಗೆ ಮೊಗೆದು ಭಾವವು ನೀಡುತ್ತಲೂ ಇರುತ್ತದೆ. ದೇಹವನ್ನು ನಾವು ಪ್ರೀತಿಸಿದಂತೆ ದೇಹ ಮಾತ್ರ ಅದೇ ರೀತಿಯಾಗಿ ಪ್ರೀತಿಸುವುದಿಲ್ಲ. ಸಮಯ ಸಂದರ್ಭ ನೋಡಿ ವೈರವನ್ನು ಸಾಧಿಸಿಬಿಡುತ್ತದೆ. ಸಿಟ್ಟು ತರಿಸುವ ಆವೇಶಕ್ಕಿಂತಲೂ ತಾಳ್ಮೆಯು ತೋರುವ ಭರವಸೆಯಲ್ಲಿ ಬದುಕು ಅಡಗಿದೆ ಎಂದಷ್ಟೇ ಹೇಳಬಹುದು.

ಈ ಸರಣಿಯ ಹಿಂದಿನ ಬರೆಹಗಳು

ರಂಗದ ಮೇಲಿನ ಬಣ್ಣದ ಭಾವಗಳು

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...