ಶರಣರ ದಾಸೋಹ ತತ್ವ - ಹಲವು ಆಯಾಮಗಳು

Date: 15-08-2022

Location: ಬೆಂಗಳೂರು


“ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರು ನಂಬಿದ್ದ ದಾಸೋಹ ಎಂಥದ್ದಾಗಿತ್ತು ಎಂಬುದನ್ನು ವಿಶ್ಲೇಷಿಸಿದ್ದಾರೆ.

ದಾಸೋಹದ ಮಹತ್ವ

ಶರಣರ ಕಾಯಕತತ್ವಕ್ಕೆ ಪ್ರಾಮುಖ್ಯತೆ ಬಂದಂತೆ, ಅವರ ದಾಸೋಹ ತತ್ವಕ್ಕೂ ಮಹತ್ವ ಬಂತು. ಶರಣರ ದಾಸೋಹದ ಸುದ್ದಿ ಕಲ್ಯಾಣದ ಸುತ್ತಮುತ್ತ ಪಸರಿಸಿತು. ಅವರು ನಡೆಸುತ್ತಿದ್ದ ಅನ್ನದಾಸೋಹದಿಂದ ಅನೇಕ ಅಸಹಾಯಕರು, ಅಂಗವಿಕಲರು ಸ್ವಾಭಿಮಾನದಿಂದ ಬದುಕುವಂತಾಯಿತು. ಅನ್ನದಾಸೋಹದಿಂದ ಸಹಪಂಕ್ತಿ-ಸಹಭೋಜನ ಪ್ರಾರಂಭವಾಗಿ, ಎಲ್ಲರೂ ಒಂದೇ ಕಡೆ ಸಮಾನವಾಗಿ ಕುಳಿತು ಪ್ರಸಾದ ಸೇವಿಸುವಂತಾಯಿತು. ಕಾಯಕತತ್ವವು ಜಾತಿಯ ಅಹಂಭಾವ ಮತ್ತು ವೃತ್ತಿಯ ಕೀಳರಿಮೆಗಳನ್ನು ಏಕಕಾಲಕ್ಕೆ ನಿವಾರಣೆ ಮಾಡಿದರೆ, ದಾಸೋಹ ತತ್ವವು ಸಹಪಂಕ್ತಿ-ಸಹಭೋಜನದಿಂದ ಸಮಾನತೆಯನ್ನು ತಂದುಕೊಟ್ಟಿತು. ದಾಸೋಹದ ವಿವಿಧ ಆಯಾಮಗಳನ್ನು ಕುರಿತು ಅನೇಕ ವಚನಕಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ವೈಷ್ಣವಬ್ರಾಹ್ಮಣನಾಗಿದ್ದ ಗುಪ್ತಮಂಚಣ್ಣ ಹರಿಭಕ್ತನಾಗಿದ್ದ. ಮಂಚಣ್ಣನ ತಂದೆ ದಾಮೋದರ ಹಾಗೂ ತಾಯಿ ಮಾಯವಾದಿ. ಈ ದಂಪತಿಗಳಿಗೆ ಬಹಳ ವರ್ಷಗಳಾದರೂ ಮಕ್ಕಳಾಗಲಿಲ್ಲ. ಕಲ್ಯಾಣದ ಬಸವಣ್ಣನವರ ಪ್ರಭಾವಕ್ಕೊಳಗಾದ ಈ ದಂಪತಿ ಗುಪ್ತವಾಗಿ ಶಿವನನ್ನು ಆರಾಧಿಸುತ್ತ, ಶಿವಶರಣರ ತತ್ವಾದರ್ಶಗಳಿಗೆ ಮಾರುಹೋದರು. ಶಿವನ ಆರಾಧನೆಯನ್ನು ಇವರು ಗುಪ್ತರೀತಿಯಿಂದ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಂಚಣ್ಣನ ಜನನವಾದುದರಿಂದ ಗುಪ್ತಮಂಚಣ್ಣನೆಂದು ಹೆಸರಿಟ್ಟರು. ಈ ಮಂಚಣ್ಣ ಮುಂದೆ ದೊಡ್ಡವನಾದ ಮೇಲೆ ವೈಷ್ಣವ ಮತವನ್ನು ತೊರೆದು ಶಿವಮತಕ್ಕೆ ಬರುತ್ತಾನೆ. ಶಿವಶರಣನಾಗಿ ಬಾಳುತ್ತಾನೆ. ಮಂಚಣ್ಣ ದಾಸೋಹತತ್ವವನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ತಾನು ಹರಿಭಕ್ತನಾಗಿ ಬಂದುದನ್ನು ತನ್ನ ವಚನದಲ್ಲಿ ಹೇಳಿಕೊಂಡಿರುವ ಗುಪ್ತಮಂಚಣ್ಣ ದಾಸೋಹದ ಮಹತ್ವವನ್ನು ಕುರಿತು ವಿವರಿಸಿದ್ದಾರೆ. ಹಲವು ವೇಷಗಳಿಂದ, ಹಲವು ನಾಮ ಹಾಕಿಕೊಂಡು ಹುಸಿಬದುಕು ಬದುಕುತ್ತಿದ್ದ ತನಗೆ ಶರಣರ ದಾಸೋಹತತ್ವ ಹೊಸ ಬದುಕನ್ನು ಕೊಟ್ಟಿತೆಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾನೆ. ದಾಸೋಹವೆಂಬುದನ್ನರಿಯದೆ ತನ್ನ ವೇಷ ಹುಸಿಯಾಗಿತ್ತು, ಅರಿತ ಮೇಲೆ ದಾಸೋಹವೇ ತನಗೆ ಹೊಸ ದಾರಿಯನ್ನು ತೋರಿಸಿತೆಂದು ಹೇಳಿದ್ದಾನೆ.

“ತೊಳಸಿಯ ಗಿಡವ ಮೆಲಲಾರದೆ ಕಿವಿಯೊಳಗಿಕ್ಕಿದೆ
ಕಲಸಿದ ನಾಮಕ್ಕೆ ಹಣೆಯ ಕಾಣದೆ ಎದೆಯೊಳಗಿಕ್ಕಿದೆ
ತಾವರೆಯಮಣಿಯ ತಾವಡಿಸೊದಕ್ಕೆ
ಠಾವಕಾಣದೆ ಡಾವರಿಸುತ್ತಿದೆ,
ಎನ್ನ ನಿಮ್ಮ ದಾಸೋಹದ ದಾಸನ ಮಾಡಿಸಯ್ಯಾ
ನಾರಾಯಣಪ್ರಿಯ ರಾಮನಾಥಾ”
-ಗುಪ್ತ ಮಂಚಣ್ಣ (ಸ.ವ.ಸಂ.7, ವ:341)

ಅನ್ಯ ಮತಸ್ಥನಾಗಿದ್ದ, ಗುಪ್ತಮಂಚಣ್ಣನಂತಹ ಅನೇಕರು ಶರಣರ ಪ್ರಭಾವಕ್ಕೊಳಗಾದರು. ದಾಸೋಹದ ದಾಸನ ಮಾಡಿಸಯ್ಯಾ ಎಂದು ತಮ್ಮ ದೈವವನ್ನು ಬೇಡಿಕೊಂಡರು. ಹೊರಗಿನವರೇ ಈ ರೀತಿಯ ಆಕರ್ಷಣೆಗೊಳಗಾದ ಮೇಲೆ ದಾಸೋಹತತ್ವ ಎಷ್ಟೊಂದು ಪ್ರಭಾವವನ್ನುಂಟು ಮಾಡಿತ್ತೆಂಬುದು ಇದರಿಂದ ತಿಳಿದು ಬರುತ್ತದೆ.

“ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು
ಪೂಜೆ - ಪುಣ್ಯ ಮಹಾದೇವನ ಹಂಗು,
ಎನ್ನ ದಾಸೋಹ ಆರ ಹಂಗೂ ಅಲ್ಲ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವೆ
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನ ತಂದೆ”
- ನುಲಿಯ ಚಂದಯ್ಯಾ (ಸ.ವ.ಸಂ.7, ವ: 1297)

ಕಾಯಕನಿಷ್ಠೆಯ ನುಲಿಯ ಚಂದಯ್ಯ, ದಾಸೋಹದ ಬಗ್ಗೆ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಒಂದೊಂದಕ್ಕೆ ಒಂದೊಂದರ ಹಂಗು ಇದೆ. ಆದರೆ ದಾಸೋಹ ಯಾರ ಹಂಗೂ ಅಲ್ಲವೆಂದು ಈ ವಚನಕಾರ ತಿಳಿಸಿದ್ದಾರೆ. ತನ್ನ ಚಂದೇಶ್ವರಲಿಂಗವಾದರೂ ಕಣ್ಣೆಯ ಕಾಯಕ ಮಾಡಿಯೇ ಬದುಕಬೇಕು. ಆದುದರಿಂದ ಚಂದಯ್ಯನವರು, ಚಂದೇಶ್ವರಲಿಂಗಕ್ಕೆ ತಂದೆಯೆಂದು ಗೌರವ ಕೊಡುತ್ತಲೇ ಕಾಯಕದ ಕಡ್ಡಾಯದ ವಿಷಯವನ್ನು ತಿಳಿಸುತ್ತಾರೆ. ಕಾಯಕದ ಬಗೆಗೆ ಇಷ್ಟೊಂದು ನಿಷ್ಠೆ ತೋರಿದ ಈ ಶರಣ ದಾಸೋಹದ ಬಗೆಗೂ ಹೊಸ ವಿಚಾರವನ್ನೇ ತಿಳಿಸಿದ್ದಾರೆ. ದಾಸೋಹಕ್ಕೆ ಯಾರ ಹಂಗೂ ಇಲ್ಲವೆಂಬ ಅವರ ನುಡಿ ಗಮನಿಸುವಂತಿದೆ.

“ಸೋಹಂ ಹೊಕ್ಕು ದಾಸೋಹವೆಂಬ ಅಂಜನವ ಹಚ್ಚಿ
ಮುಂದೆ ನೋಡಲಾಗಿ ಅರುಹ ಕಂಡೆ,
ಆ ಅರುಹಿಂದ ಆಚಾರವ ಕಂಡೆ, ಆಚಾರದಿಂದ ಗುರುವಕಂಡೆ,
ಗುರುವಿಂದ ಲಿಂಗವ ಕಂಡೆ, ಲಿಂಗದಿಂದ ಜಂಗಮವ ಕಂಡೆ,
ಜಂಗಮದಿಂದ ಪ್ರಸಾದವ ಕಂಡೆ, ಪ್ರಸಾದದಿಂದ ಪರವ ಕಂಡೆ...”
-ಹಡಪದ ಅಪ್ಪಣ್ಣ (ಸ.ವ.ಸಂ.9,ವ:1043)

ಹಡಪದ ಅಪ್ಪಣ್ಣನವರು ಈ ವಚನದಲ್ಲಿ ದಾಸೋಹದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ದಾಸೋಹವೆಂಬುದು ಇಲ್ಲಿ ಅವರಿಗೆ ಅಂಜನವಾಗಿ ಕಾಣಿಸಿಕೊಂಡಿದೆ. ಅಂಜನ ಹಚ್ಚಿಕೊಂಡು ನೋಡಿದರೆ, ನೆಲದಲ್ಲಿರುವ ನಿಧಿ ಕಾಣಿಸುತ್ತದೆಂಬುದು ಅಂದಿನವರ ನಂಬಿಕೆಯಾಗಿತ್ತು. ಅಂಜನವೆಂದರೆ, ಇಲ್ಲಿ ಒಂದುರೀತಿಯ ಬೆಳಕು. ಬೆಳಕಿದ್ದಾಗ ಮಾತ್ರ ಎದುರಿಗಿದ್ದದ್ದು ಕಾಣಿಸುತ್ತದೆ. ಅಂದಿನ ಜನಸಮುದಾಯದ ನಂಬಿಕೆಗಳಿಂದ ಅವರ ಆಡುನುಡಿಯ ಪರಿಭಾಷೆಯ ಮೂಲಕವೇ ಶರಣರು ಮಹತ್ವವಾದ್ದದನ್ನು ಕಟ್ಟಿಕೊಟ್ಟಿದ್ದಾರೆ.

ದಾಸೋಹವೆಂಬುದು ಅಪ್ಪಣ್ಣನಂತಹ ವಚನಕಾರರಿಗೆ ಬದುಕನ್ನೇ ಬೆಳಗುವ ಬೆಳಕಾಗಿ ಕಾಣಿಸಿಕೊಂಡಿದೆ. ಈ ಬೆಳಕಿನಿಂದಲೇ ಎಲ್ಲವೂ ಕಾಣತೊಡಗುತ್ತವೆ. ಈ ವಚನದಲ್ಲಿ ಒಂದಕ್ಕೊಂದು ಸಂಬಂಧವಿದೆ. ಮೊದಲು ಅರುಹು ಕಾಣಿಸುತ್ತದೆ. ಅರುಹಿನಿಂದ-ಆಚಾರ, ಆಚಾರದಿಂದ-ಗುರು, ಗುರುವಿನಿಂದ-ಲಿಂಗ, ಲಿಂಗದಿಂದ-ಜಂಗಮ, ಜಂಗಮದಿಂದ-ಪ್ರಸಾದ, ಪ್ರಸಾದದಿಂದ-ಪರದೈವ. ಹೀಗೆ ಈ ಲಿಂಕ್ ಬೆಳೆಯುತ್ತ ಹೋಗುತ್ತದೆ. ಇದೆಲ್ಲಾ ಸಾಧ್ಯವಾದದ್ದು ದಾಸೋಹದಿಂದ ಎಂಬ ಸತ್ಯ ಸ್ಪಷ್ಟವಾಗುತ್ತ ಹೋಗುತ್ತದೆ.

ಮಾದಾರ ಧೂಳಯ್ಯನವರು ತಮ್ಮ ವಚನವೊಂದರಲ್ಲಿ ತನ್ನ ಇಷ್ಟದೈವವಾದ ಧೂಳೇಶ್ವರ ಕಾಣಿಸುವುದು ದಾಸೋಹ ಮಾಡುವ ಸದ್ಭಕ್ತರಲ್ಲೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಸತ್ಯಶುದ್ಧ ಕಾಯಕ ಮತ್ತು ನಿಚ್ಚಜಂಗಮ ದಾಸೋಹ ಇವೆರಡೂ ಶರಣರ ಹೃದಯದೊಳಗೆ ಅಚ್ಚೊತ್ತಿದ್ದವು ಎಂಬುದನ್ನು ಧೂಳಯ್ಯ ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಮಡಿವಾಳ ಮಾಚಿದೇವರು ತಮ್ಮ ವಚನವೊಂದರಲ್ಲಿ ಲಿಂಗಾನುಭಾವಿಯ ಬಗ್ಗೆ ಹೇಳಿದ್ದಾರೆ. ಭಕ್ತಿದಾಸೋಹವ ಮಾಡುವವನೇ ನಿಜವಾದ ಲಿಂಗಾನುಭಾವಿಯೆಂದು ಹೇಳಿರುವ ಮಾಚಿದೇವರು, ನಿತ್ಯವೂ ಭಕ್ತಿದಾಸೋಹ ಮಾಡುವಾತ ಬಸವಣ್ಣನೆಂದು ತಿಳಿಸಿದ್ದಾರೆ. ಸಂಗಮೇಶ್ವರದ ಅಪ್ಪಣ್ಣನೆಂಬ ವಚನಕಾರ ನೀಲಲೋಚನೆಯೇ ನಿಜವಾದ ದಾಸೋಹಿಯೆಂದು ಹೇಳಿದ್ದಾರೆ. ಒಬ್ಬೊಬ್ಬ ಶರಣನ ವಿಶಿಷ್ಟತೆಯನ್ನು ಗುರುತಿಸುತ್ತಾ ಹೋದ ಈ ವಚನಕಾರ ತನ್ನ ವಚನದ (ವಚನ:337) ಕೊನೆಯಲ್ಲಿ “ಪರಮದಾಸೋಹವ ಮಾಡಿ, ಲಿಂಗದಲ್ಲಿ ನಿರವಯಲನೈದಿದರು ನೀಲಲೋಚನೆಯಮ್ಮನವರು” ಎಂದಿದ್ದಾರೆ. ಪ್ರಭುದೇವರು-ಮಾಯಾಕೋಲಾಹಲನಾದರೆ, ಸಿದ್ಧರಾಮ ಮಹಾಶಿವಯೋಗಿ, ಬಸವಣ್ಣ-ಭಂಡಾರಿಯಾದರೆ, ಚೆನ್ನಬಸವಣ್ಣ-ಷಟ್‍ಸ್ಥಲ ಚಕ್ರವರ್ತಿ, ಅಜಗಣ್ಣ-ಐಕ್ಯಸ್ಥಲವ ಸೂರೆಗೊಂಡರೆ, ಉರಿಲಿಂಗದೇವರು-ಶರಣಸತಿಲಿಂಗಪತಿಯಾದರು. ಬಿಬ್ಬಿಬಾಚಯ್ಯ-ಪ್ರಸಾದಿಸ್ಥಲವ ಸೊರೆಗೊಂಡರೆ, ಚಂದಿಮರಸ ಜ್ಞಾನವ ಸೂರೆಗೊಂಡರು. ಅಕ್ಕನಾಗಮ್ಮ ಪ್ರಸಾದಕ್ಕೆ ಸತಿಯಾದರೆ, ಮೋಳಿಗೆಮಹಾದೇವಿ ಬಟ್ಟಬಯಲಾದರು. ಹೀಗೆ ಒಬ್ಬೊಬ್ಬ ಶರಣನದೂ ಒಂದೊಂದು ವಿಶಿಷ್ಟತೆಯೆಂದು ಹೇಳಿದ ಸಂಗಮೇಶ್ವರ ಅಪ್ಪಣ್ಣನವರು, ನೀಲಲೋಚನೆಯಿಂದಲೆ ದಾಸೋಹ ಬೆಳೆದು, ಬಸವಕಲ್ಯಾಣದಲ್ಲಿ ಮಹಾದಾಸೋಹದ ಬೆಳಕು ಕಾಣಿಸಿಕೊಂಡಿತೆಂದು ಹೇಳಿದ್ದಾರೆ.

ಹೀಗೆ ಅನೇಕ ವಚನಕಾರರು ದಾಸೋಹದ ಮಹತ್ವವನ್ನು, ಅದರ ಅನಿವಾರ್ಯತೆಯನ್ನು ಹೇಳುತ್ತಲೇ ಮಹಾದಾಸೋಹಿಗಳ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ದಾಸೋಹವೆಂದರೆ, ಕೇವಲ ಉಣ್ಣುವುದಲ್ಲ, ಉಣ್ಣಿಸುವುದಲ್ಲ; ಸತ್ಯ-ಶುದ್ಧ ಬದುಕನ್ನು ಬಾಳುವದಾಗಿತ್ತು. ಅದು ನಿತ್ಯ-ನಿರಂತರವಾಗಿತ್ತು. ದಾಸೋಹದ ಪರಿಕಲ್ಪನೆಯನ್ನು ಶರಣರು ತಮ್ಮ ಅನುಭವದ ಹಿನ್ನಲೆಯಲ್ಲಿ, ತಮ್ಮ ವೃತ್ತಿ ಪ್ರತಿಮೆಗಳ ಮೂಲಕ ವೈವಿಧ್ಯಮಯ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಇತರ ವಿಚಾರಗಳ

ತನು-ಮನ-ಧನಗಳನ್ನರ್ಪಿಸಿ, ಮಾಡುವ ದಾಸೋಹವು ಒಂದು ಮೌಲ್ಯವಾಗಿ ಬೆಳೆದಿದೆ. ತನುವನರ್ಪಿಸಿ ಮಾಡುವ ದಾಸೋಹವು ಸಂಪೂರ್ಣವಾಗಿರುತ್ತದೆ, ಅದೇ ನಿಜವಾದ ಮುಕ್ತಿಯೆಂದು ಉರಿಲಿಂಗಪೆದ್ದಿ ಹೇಳಿದ್ದಾರೆ. ಮನವನರ್ಪಿಸಿ ಮಾಡುವ ದಾಸೋಹವು ಮತ್ತು ಧನವನರ್ಪಿಸಿ ಮಾಡುವ ದಾಸೋಹವು ಸಂಪೂರ್ಣವಾಗಿರುತ್ತದೆ, ಅದೇ ನಿಜವಾದ ಭಕ್ತಿಯಾಗಿರುತ್ತದೆ, ಅದೇ ಮುಕ್ತಿಗೆ ದಾರಿಯಾಗುತ್ತದೆಂದು ಶರಣರು ಹೇಳಿದ್ದಾರೆ. ಅಂಗದ ಮೇಲೆ ಲಿಂಗವಿದ್ದಾಗ ಸಾಲೋಕ್ಯಮುಕ್ತಿಯ ಅಗತ್ಯವಿಲ್ಲ, ಗುರುಲಿಂಗಜಂಗಮದ ದಾಸೋಹದಲ್ಲಿದ್ದಾಗ ಸಾಮೀಪ್ಯ ಮುಕ್ತಿಯ ಅಗತ್ಯವಿಲ್ಲವೆಂದು ಉರಿಲಿಂಗಪೆದ್ದಿ ತಿಳಿಸಿದ್ದಾರೆ. ಶರಣರು ಕಾಯಕವನ್ನೇ ಕೈಲಾಸವೆಂದು ಭಾವಿಸಿದರು. ದಾಸೋಹವನ್ನೇ ಮುಕ್ತಿಯೆಂದು ತಿಳಿದರು. ಹೀಗಾಗಿ ಕಾಯಕವೇ ಕೈಲಾಸವಾಯಿತು. ದಾಸೋಹವೇ ಮುಕ್ತಿಯಾಯಿತು.

ಆಯುಷ್ಯವೇ-ಲಿಂಗ, ಶ್ರೀಯೇ-ಜಂಗಮ, ನಿಧಾನವೇ-ಸುಜ್ಞಾನ, ವಿದ್ಯೆಯೇ -ಶಿವಮಂತ್ರ ಮತ್ತು ದೇಹವೇ-ದಾಸೋಹವೆಂದು ಅಜಗಣ್ಣತಂದೆ ಹೇಳಿದ್ದಾರೆ. ಎಲ್ಲಾ ತನ್ನೊಳಗೇ ಇದೆ, ಸಾಧನೆಯಿಂದ ಅದು ಪ್ರಕಟವಾಗುತ್ತದೆಂದವರು ತಿಳಿಸಿದ್ದಾರೆ. ಒಮ್ಮನದಿಂದ, ಭಕ್ತಿಯಿಂದ ಮಾಡುವುದು ಮಾತ್ರ ದಾಸೋಹವಾಗುತ್ತದೆಂದು ಶರಣರು ಹೇಳಿದ್ದಾರೆ. ತನು-ಮನ ಕರಗದೆ, ಕಾಯವ ಬಳಲಿಸದೆ, ಕಾಯಕವ ಮಾಡದೆ ಕಾಡಿಬೇಡಿ ಮಾಡುವುದು ದಾಸೋಹ ಹೇಗಾಗುತ್ತದೆಂದು ಶಿವಲೆಂಕ ಮಂಚಣ್ಣನವರು ಕೇಳಿದ್ದಾರೆ.

ದಾಸೋಹವೆಂಬುದು ಸರಳವಾದದ್ದಲ್ಲ. ಕೇವಲ ಧನವ ನೀಡುವುದು ದಾಸೋಹವಲ್ಲ, ಸಂಪತ್ತು ಹಂಚುವುದು ದಾಸೋಹವಲ್ಲ. ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ.

ಕಾಯಕದಲ್ಲಿ ಅನೇಕ ಕಾಯಗಳಿರುವಂತೆ ದಾಸೋಹದಲ್ಲಿಯೂ ಅನೇಕ ರೀತಿಯ ದಾಸೋಹಗಳಿವೆ. ತನು-ಮನ-ಧನವನು, ಗುರು-ಲಿಂಗ-ಜಂಗಮರಿಗೆ ಅರ್ಪಿಸಿ ಮಾಡುವ ತ್ರಿವಿಧ ದಾಸೋಹದ ಬಗೆಗೆ ಶರಣರು ವಿವರವಾಗಿ ಹೇಳಿದ್ದಾರೆ. ಇದರೊಂದಿಗೆ ಅನ್ನದಾಸೋಹ ಮತ್ತು ಜ್ಞಾನದಾಸೋಹದಂತಹ ಮಹತ್ವದ ದಾಸೋಹಗಳಿವೆ. ಅನ್ನದಾಸೋಹಕ್ಕೆ ಶರಣರ ವಚನಗಳಲ್ಲಿ ಹೆಚ್ಚಿನ ವಿವರಗಳು ದೊರೆಯದಿದ್ದರೂ ಚೆನ್ನಬಸವಣ್ಣನವರ ಒಂದು ವಚನದಲ್ಲಿ ಇದರ ಪ್ರಸ್ತಾಪವಿದೆ. ಸಮ ಸಮಾಜವನ್ನು ಕಟ್ಟಬೇಕೆಂದು ಕನಸುಕಂಡ ಶರಣರು 12ನೇ ಶತಮಾನದಲ್ಲಿ ದೊಡ್ಡ ಚಳವಳಿಯನ್ನೆ ಪ್ರಾರಂಭಿಸಿದರು. ಶತಮಾನಗಳಿಂದ ಬೇರುಬಿಟ್ಟಿದ್ದ ಚಾತುರ್ವರ್ಣ ವ್ಯವಸ್ಥೆಯನ್ನು ಅಳಿಸಿಹಾಕಲು ಪ್ರಯತ್ನಿಸಿದರು. ಆದರೆ ಜನಸಾಮಾನ್ಯರು ಕಾಯಕ-ದಾಸೋಹಗಳನ್ನು ಒಪ್ಪಿಕೊಂಡಂತೆ, ಅಂತರ್ಜಾತಿ-ವಿವಾಹಗಳಿಗೆ ಸಿದ್ಧರಿರಲಿಲ್ಲ. ಇದನ್ನೇ ಚೆನ್ನಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ.

“ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ, ಕೊಡುವಲ್ಲಿ ಕುಲವನರಸುವರು.
ಏನೆಂಬೆನಯ್ಯಾ ಒಬ್ಬೊಚ್ಚಿ ಭಕ್ತರ? ಏನೆಂಬೆನಯ್ಯ ಒಬ್ಬೊಚ್ಚಿ ಭವಿಗಳ?
ಇದು ಕಾರಣ ಕೂಡಲಚನ್ನಸಂಗಯ್ಯನಲ್ಲಿ
ಭಕ್ತಕಾಯ ಮಮಕಾಯವೆಂತೆಂಬರು?”
- ಚೆನ್ನಬಸವಣ್ಣ (ಸ.ವ.ಸಂ.3, ವ:167)

ಈ ವಚನದಲ್ಲಿ ಅಂದಿನ ವಾಸ್ತವಸ್ಥಿತಿ ಸ್ಪಷ್ಟವಾಗಿ ಕಾಣಿಸಿದೆ. ಶರಣರು ಅನ್ನದಾಸೋಹ ಪ್ರಾರಂಭಿಸಿದಾಗ, ಎಲ್ಲ ಜಾತಿಯ ಜನಾಂಗದವರು ಒಂದುಕಡೆ ಸೇರಿ, ಸಹಪಂಕ್ತಿಯಲ್ಲಿ ಕುಳಿತು ಸಹಭೋಜನ ಮಾಡಿದರು. ಮದುವೆ ಸಂದರ್ಭಗಳಲ್ಲಿ ಬೇರೆ ಜಾತಿಯವರ ಮದುವೆಗೆ ಹೋದಾಗ ಅವರು ನೀಡಿದ ಉಡುಗುರೆÀ ಬಟ್ಟೆಬರೆಗಳನ್ನು ಸ್ವೀಕರಿಸಿದರು. ವಧು-ವರರಿಗೆ ತಾವು ಬಟ್ಟೆಬರೆಗಳನ್ನು ಉಡುಗುರೆಯಾಗಿ ನೀಡಿದರು. ಇದು ಅವರಿಗೆ ಕಷ್ಟವೆನಿಸಲಿಲ್ಲ. ಆದರೆ ಬೇರೆ ಬೇರೆ ಜಾತಿಗಳೊಂದಿಗೆ ರಕ್ತಸಂಬಂಧ ಮಾಡಲು, ಹೆಣ್ಣ-ಗಂಡು ಕೊಡಲು ಅವರು ಸಿದ್ಧರಿರಲಿಲ್ಲ. ಇದನ್ನು ಗಮನಿಸಿದ ಚೆನ್ನಬಸವಣ್ಣನವರು ಅಂದಿನ ವಾಸ್ತವಚಿತ್ರಣವನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಉಂಬಲ್ಲಿ-ಉಡುವಲ್ಲಿ ಯಾವುದೇ ಜಾತಿಯಾದರೂ ನಡೆಯುತ್ತದೆ. ಆದರೆ ಕೊಂಬಲ್ಲಿ-ಕೊಡುವಲ್ಲಿ ಮಾತ್ರ ತಮ್ಮ ಕುಲದವರೇ ಆಗಬೇಕು. ಶತಮಾನಗಳಿಂದ ವರ್ಣವ್ಯವಸ್ಥೆಯಲ್ಲಿ ಬೆಳೆದುಕೊಂಡು ಬಂದಿದ್ದ ಸಾಮಾನ್ಯಜನರಿಗೆ ಶರಣರ ಜಾತಿನಿರಸನ ಸಿದ್ಧಾಂತವು ಅಷ್ಟಾಗಿ ಆಕರ್ಷಿಸಲಿಲ್ಲ. ಇವರ ಮನಸ್ಥಿತಿಯನ್ನು ಕಂಡು ಚೆನ್ನಬಸವಣ್ಣನಂತಹವರಿಗೆ ಸಿಟ್ಟುಬರುತ್ತದೆ. ಅಂತೆಯೇ ಅವರು “ಏನೆಂಬೆನಯ್ಯ ಒಬ್ಬೊಚ್ಚಿಭಕ್ತರ?” ಎಂದು ಪ್ರಶ್ನಿಸಿದ್ದಾರೆ. ಒಂದನ್ನು ಒಪ್ಪಿ ಒಂದನ್ನು ಬಿಡುವ ಇಂತಹ ಭಕ್ತರನ್ನು ಅವರು ಒಬ್ಬೊಚ್ಚಿಭಕ್ತರೆಂದು ವಿಡಂಬಿಸಿದ್ದಾರೆ. ಈ ವಚನದಿಂದ ಅನ್ನದಾಸೋಹ ನಡೆಯುತ್ತಿತ್ತು. ಸಹಪಂಕ್ತಿ-ಸಹಭೋಜನಗಳು ದಾಸೋಹದಿಂದ ಸಾಧ್ಯವಾದವೆಂಬ ಸತ್ಯ ತಿಳಿದುಬರುತ್ತದೆ. ಆದರೆ “ಕೊಂಬಲ್ಲಿ ಕೊಡುವಲ್ಲಿ” ಅಷ್ಟು ಸರಳವಾಗಿರಲಿಲ್ಲ. ಅಂದಿನ ಅರಸೊತ್ತಿಗೆಗೆ ಕಾಯಕ-ದಾಸೋಹದಂತಹ ಸಿದ್ಧಾಂತಗಳು ಪೂರಕವಾಗಿ ಕಂಡವು. ಕಾಯಕದಲ್ಲಿ ಎಲ್ಲರೂ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಕಾರ್ಯ ಮಾಡುತ್ತಿದ್ದರು. ಹೀಗಾಗಿ ರಾಜ್ಯದ ಬೊಕ್ಕಸ ತುಂಬತೊಡಗಿತು. ಹೊರಗಿನಿಂದ ವ್ಯಾಪಾರಿಗಳು ಹೆಚ್ಚುಸಂಖ್ಯೆಯಲ್ಲಿ ಬರತೊಡಗಿದರು. ಇದರಿಂದ ತೆರಿಗೆಸಂಗ್ರಹ ಹೆಚ್ಚಾಯಿತು. ಯಾವಾಗ ಶರಣರು “ಕೊಂಬುವ-ಕೊಡುವ” ಅಂತರ್ಜಾತಿ ವಿವಾಹಕ್ಕೆ ಕೈಹಾಕಿದರೋ ಆಗ ಆಳುವ ವ್ಯವಸ್ಥೆಗೆ ಅದನ್ನು ಸಹಿಸಿಕೊಳ್ಳಲಾಗಲಿಲ್ಲ. ಶರಣರ ಕ್ರಾಂತಿಯನ್ನೇ ವಿಫಲಗೊಳಿಸಿ ಅವರಿಗೆ ಮರಣದಂಡನೆ ವಿಧಿಸಿದರು. ಆನೆಗಳಿಂದ ತುಳಿಸಿ ಎಲ್ಲರಿಗೂ ಕಾಣುವಂತೆ ಉಗ್ರವಾದ ಮರಣಶಿಕ್ಷೆ ಕೊಟ್ಟರು. ಆಗ ಅನೇಕ ಶರಣರನ್ನು ಅಟ್ಟಿಸಿಕೊಂಡು ಹೋದಾಗ ಅವರು ಚೆಲ್ಲಾಪಿಲ್ಲಿಯಾಗಿ ಬಿಟ್ಟರು.

ಚೆನ್ನಬಸವಣ್ಣನವರ ಈ ವಚನ, ಮಹತ್ವದ ಸಂದೇಶದ ದಾಖಲೆಯಾಗಿದೆ. ಆಳುವ ವ್ಯವಸ್ಥೆ ಹೇಗೆ ಅಂತರ್ಜಾತಿ ವಿವಾಹಕ್ಕೆ ತೀವ್ರ ವಿರೋಧವನ್ನೊಡ್ಡಿತೋ, ಅದೇ ರೀತಿ ಜನಸಾಮಾನ್ಯರು ಕೂಡ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲಿಲ್ಲವೆಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ. ಕಾಯಕ-ದಾಸೋಹದಂತಹ ಮೌಲ್ಯಗಳು ಎಲ್ಲರಿಗೂ ಇಷ್ಟವಾದವು, ಆಳುವ ವ್ಯವಸ್ಥೆಯೂ ಅಡ್ಡಿಬರಲಿಲ್ಲ. ಆದರೆ ಅಂತರ್ಜಾತಿ ಮದುವೆಯ ವಿಷಯ ಬಂದಾಗ ಯಾರೂ ಒಪ್ಪಿಕೊಳ್ಳಲಿಲ್ಲ. ಇದು ಶರಣರ ಕೊನೆಯ ಅಸ್ತ್ರವಾಗಿತ್ತು. ಆದರೆ ಆಳುವವ್ಯವಸ್ಥೆ ಅದಕ್ಕೆ ಅವಕಾಶ ನೀಡಲಿಲ್ಲವೆಂಬ ಸತ್ಯವು ಚರಿತ್ರೆಯಿಂದ ತಿಳಿದು ಬರುತ್ತದೆ.

ಅನ್ನದಾಸೋಹಕ್ಕೆ ಶರಣರು ಕಟ್ಟಿಸಿದ ದಾಸೋಹ ಮಂಟಪಗಳು ಕಾರಣವಾದರೆ; ಜ್ಞಾನದಾಸೋಹಕ್ಕೆ ಅನುಭವಮಂಟಪ ಕಾರಣವಾಯಿತು. ಅನುಭವಮಂಟಪವು ಜ್ಞಾನದಾಸೋಹದ ಕೇಂದ್ರವಾಗಿತ್ತು. ಇಂತಹ ಅನುಭವಮಂಟಪದಲ್ಲಿದ್ದ ಅತ್ಯಂತ ಸಾಮಾನ್ಯ ವ್ಯಕ್ತಿಕೂಡ ಜ್ಞಾನಿಯಾಗಿ ಬೆಳೆದುನಿಂತ, ಅನುಭಾವಿಯಾಗಿ ಕಾಣಿಸಿಕೊಂಡ. ಇದು ಶರಣರ ಜ್ಞಾನದಾಸೋಹದ ಬಹುದೊಡ್ಡ ಕೊಡುಗೆಯಾಗಿದೆ.

ಶರಣರು ಒಂದೆಡೆ ಸೇರಿಕೊಂಡು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಇಂತಹವುಗಳನ್ನೇ ಧರ್ಮಗೋಷ್ಠಿ, ಅನುಭಾವಗೋಷ್ಠಿ, ಗೀತಗೋಷ್ಠಿ, ಶಿವತತ್ವಗೋಷ್ಠಿಯೆಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಗೋಷ್ಠಿಗಳು ನಡೆಯುತ್ತಿದ್ದ ಸ್ಥಳವನ್ನೇ ಅನುಭವಮಂಟಪವೆಂದು ಕರೆಯಲಾಗಿದೆ. ನೀಲಮ್ಮನ ಒಂದು ವಚನದಲ್ಲಿ, ಅನುಭವಮಂಟಪದ ಹುಟ್ಟಿಗೆ ಬಸವಣ್ಣನೇ ಕಾರಣಕರ್ತನಾದನೆಂಬ ಸತ್ಯ ತಿಳಿದುಬರುತ್ತದೆ. ಹಡಪದಪ್ಪಣ್ಣನ ಕಾಲಜ್ಞಾನ ವಚನದಲ್ಲಿ ಕಲ್ಯಾಣದಲ್ಲಿದ್ದ ಚರಮಂಟಪ, ಆರಾಧ್ಯಮಂಟಪಗಳ ಪ್ರಸ್ತಾಪವಿದೆ. ಅವುಗಳಲ್ಲಿ ಅನುಭವಮಂಟಪವೂ ಒಂದಾಗಿದೆ.

“ಆದಿಯಾಧಾರವಿಲ್ಲದಂದು ಕಳೆಮೊಳೆದೋರದಂದು
ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು.......
ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು......
ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು.
ಆ ಅಕ್ಷರವ ರೂಪಮಾಡಿ,
ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು
ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು.......
ಮತ್ರ್ಯಲೋಕವನೆ ಮಹಾಪ್ರಮಥರ ಬಿಡಾರವ
ಮಾಡಿದಾತ ನಮ್ಮ ಬಸವಯ್ಯನು......
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮಕ್ಕೆ
ಇಚ್ಛೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು.......
ಮೂವತ್ತಾರು ಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ
ಅರ್ಪಿತ ಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು.......
ಚೆನ್ನಬಸವನೆಂಬ ಪ್ರಸಾದಿಯ ಪಡೆದು
ಅನುಭವಮಂಟಪವನನು ಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ
ಏಳುನೂರೆಪ್ಪತ್ತು ಅಮರಗಣಂಗಳ
ಅನುಭವ ಮೂರ್ತಿಗಳನ್ನಾಗಿ ಮಾಡಿದಾತ ನಮ್ಮ ಬಸವಯ್ಯನು”

-ನೀಲಮ್ಮ (ಸ.ವ.ಸಂ.5, ವ:844)ನೀಲಮ್ಮನವರ ಈ ವಚನವನ್ನು ಗಮನಿಸಿದಾಗ, ಬಸವಣ್ಣನವರೇ ಜ್ಞಾನದಾಸೋಹ ಸಂಸ್ಥಾಪಕರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. ಅನುಭವಮಂಟಪವನ್ನು ಕಟ್ಟಿ, ಅಮರಗಣಂಗಳನ್ನು ಕರೆಸಿ ಅನುಭಾವಗೋಷ್ಠಿ ನಡೆಸುತ್ತಿದ್ದ ಬಸವಣ್ಣನವರು ಜ್ಞಾನದಾಸೋಹಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕಲ್ಯಾಣವನ್ನು ಕೈಲಾಸ ಮಾಡಿದ ಬಸವಣ್ಣನವರು ಏಳುನೂರೆಪ್ಪತ್ತು ಅಮರಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು. ಈ ಅಮರಗಣಂಗಳು ಜ್ಞಾನದಾಸೋಹ ಮಾಡುತ್ತ, ಜನಸಾಮಾನ್ಯರಲ್ಲಿ ಅರಿವಿನ ಬೆಳಕನ್ನು ಹಚ್ಚಿದರು. ಅನುಭವಮಂಟಪ ಕಲ್ಯಾಣದ ಜ್ಞಾನದಾಸೋಹ ಕೇಂದ್ರವಾಗಿದ್ದರೆ, ಏಳುನೂರೆಪ್ಪತ್ತು ಅಮರಗಣಂಗಳು ಈ ಜ್ಞಾನ ಪ್ರಸಾರದ ನಿಜವಾದ ಜಂಗಮರಾಗಿದ್ದರು. ಜ್ಞಾನದಾಸೋಹದಲ್ಲಿ 12ನೇ ಶತಮಾನದಲ್ಲಿಯೇ ಇಂತಹದೊಂದು ದೊಡ್ಡ ಕ್ರಾಂತಿ ನಡೆದದ್ದು ಬಹುಮುಖ್ಯ ಸಂಗತಿಯಾಗುತ್ತದೆ.

ಶರಣರ ನಂತರ ಬಂದ ಅನೇಕ ಕವಿಗಳು ಅನುಭವಮಂಟಪದ ಪ್ರಸ್ತಾಪ ಮಾಡಿದ್ದಾರೆ. ಸಿಂಗಿರಾಜ ಪುರಾಣದಲ್ಲಿ “ಮಹಾಮಂಟಪದ ಸ್ಥಳವ ಸ್ಥಳಗೊಳಿಸಿಪ್ಪನು” ಎಂಬ ನುಡಿಯಿದೆ. ಅನುಭವಮಂಟಪವನ್ನೇ ಇಲ್ಲಿ ಮಹಾಮಂಟಪಸ್ಥಲ, ಗಣಸಮೂಹ ಮಂಟಪವೆಂದು ಕರೆಯಲಾಗಿದೆ. ವಿರೂಪಾಕ್ಷಪಂಡಿತನ “ಚೆನ್ನಬಸವಪುರಾಣ”ದಲ್ಲಿ ಶಿವತತ್ವಗೋಷ್ಠಿಯ ಪ್ರಸ್ತಾಪವಿದೆ. ಹರಿಹರನ ಬಸವರಾಜದೇವರ ರಗಳೆಯಲ್ಲಿ ಬಸವಣ್ಣನವರು ದೂರ ದೂರದಿಂದ ಬಂದ ಮಾಹೇಶ್ವರರನ್ನು ಸ್ವಾಗತಿಸಿ, ಅವರಿಗೆ ಆದರಾತಿಥ್ಯವ ಮಾಡಿ ಸದ್ಗೋಷ್ಠಿಗಳನ್ನು ನಡೆಸುತ್ತಿದ್ದರೆಂದು ಹೇಳಲಾಗಿದೆ. ಬಸವಣ್ಣನವರ ಮಹಾಮನೆಯಲ್ಲಿ ಶಿವತತ್ವಗೋಷ್ಠಿಯ ನಿನದವೂ, ಸ್ವಾನುಭವ ಪ್ರಘೋಷಣವೂ ಕೇಳಿಬರುತ್ತಿದ್ದವೆಂದು ಭೀಮಕವಿಯ ಬಸವಪುರಾಣದಲ್ಲಿ ತಿಳಿಸಲಾಗಿದೆ. ಇದೇ ರೀತಿ `ಚೆನ್ನಬಸವಪುರಾಣ’ `ಪ್ರಭುದೇವರ ಪುರಾಣ’ಗಳಲ್ಲಿ ಅನುಭವಮಂಟಪವೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಅನೇಕ ವೀರಶೈವ ಪುರಾಣಗಳಲ್ಲಿ `ಮಹಾಮಂಟಪ ಸ್ಥಳ’ `ಗಣಸಮೂಹ ಮಂಟಪ’ `ಮಹಾಮನೆ’ `ಕೂಡಲಸಂಗಮೇಶ ಭವನಮಂಟಪ’ `ಒಡ್ಡೋಲಗ’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಅಬ್ಬಲೂರು ಶಾಸನದಲ್ಲಿ ಏಕಾಂತ ರಾಮಯ್ಯನ ಪ್ರಸ್ತಾಪವಿದ್ದು “ಒಂದು ದಿವಸಂ ಧರ್ಮಗೋಷ್ಠಿಯೊಳಿರ್ದು....” (ಕನ್ನಡ ಶಾಸನ ಸಂಪದ, ಪುಟ-90, 1974 ಸಂ. ಡಾ.ಆರ್.ಸಿ..ಹಿರೇಮಠ, ಡಾ.ಎಂ.ಎಂ.ಕಲಬುರಗಿ) ಎಂಬ ಮಾತು ಬರುತ್ತದೆ. ಇಂತಹ ಧರ್ಮಗೋಷ್ಠಿಯೇ ಅನುಭವಮಂಟಪವಾಗಿತ್ತು. ಇಂತಹ ಧರ್ಮಗೋಷ್ಠಿಗಳಲ್ಲಿ ಅನೇಕ ಶರಣರು ಭಾಗವಹಿಸಿ ಜ್ಞಾನದಾಸೋಹ ಮಾಡುತ್ತಿದ್ದರು. ಏಕಾಂತದ ರಾಮಯ್ಯನವರ ಮೇಲೆ ಬಸವಣ್ಣನವರ ದಟ್ಟ ಪ್ರಭಾವವಾಗಿದೆ. ಅನುಭವಮಂಟಪವು ಸಾಮಾನ್ಯರ ವಿಶ್ವವಿದ್ಯಾಲಯವಾಗಿತ್ತು. 12ನೆ ಶತಮಾನದಲ್ಲಿ ಅನುಭವಮಂಟಪದ ಪ್ರಭಾವದಿಂದ ಇಂತಹ ಧರ್ಮಗೋಷ್ಠಿಗಳು ನಡೆದಿರಬಹುದಾಗಿದೆ. ಬೊಮ್ಮಯ್ಯ, ಜೇಡರದಾಸಿಮಯ್ಯ ಇವರೆಲ್ಲ ಶಿವಗೋಷ್ಠಿಗಳನ್ನು ನಡೆಸುತ್ತಿದ್ದರೆಂದು ಹರಿಹರ ಕವಿ ಹೇಳಿದ್ದಾನೆ.

“ಜ್ಞಾನದ ಬಲದಿಂದ ಅಜ್ಞಾನದ ಕೇಡುನೋಡಯ್ಯ.....
ಕೂಡಲಸಂಗನ ಅನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ”
- ಬಸವಣ್ಣ (ಸ.ವ.ಸಂ.1, ವ: 842)

ಬಸವಣ್ಣನವರ ಈ ವಚನ ಜ್ಞಾನದಾಸೋಹಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಅಜ್ಞಾನ ಅಳಿಯಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯವೆಂದು ನಂಬಿದ್ದ ಬಸವಣ್ಣನವರು; ಅನುಭವಮಂಟಪವನ್ನು ಕಟ್ಟಿದರು. ಅಲ್ಲಿ ಶರಣರ ಅನುಭಾವದಿಂದ ತಮ್ಮ ಭವನಾಶವಾಯಿತೆಂದು ಹೇಳುವಲ್ಲಿ ಅನ್ನದಾಸೋಹಕ್ಕಿಂತಲೂ ಜ್ಞಾನದಾಸೋಹ ದೊಡ್ಡದೆಂದು ತಿಳಿಸಲಾಗಿದೆ. ಇದೇ ವಚನದಲ್ಲಿ ಹೇಳಿರುವಂತೆ ಜ್ಯೋತಿಯ ಬಲದಿಂದ ತಮಂಧದಕೇಡು ಮತ್ತು ಸತ್ಯದ ಬಲದಿಂದ ಅಸತ್ಯದ ಕೇಡು ಎಂಬ ಮಾತು ಬಹುಮುಖ್ಯವಾಗಿದೆ. ಅಜ್ಞಾನದ ಬದಲು-ಜ್ಞಾನ, ತಮಂಧದ ಬದಲು ಜ್ಯೋತಿ, ಅಸತ್ಯದ ಬದಲು-ಸತ್ಯ ಉಂಟಾಗಬೇಕಾದರೆ ಅನುಭವಮಂಟಪ ಅಗತ್ಯವೆಂದು ತಿಳಿದಿದ್ದ ಬಸವಣ್ಣನವರು ಶರಣರ ಸತ್ಸಂಗದ ಮೂಲಕ ಜ್ಞಾನದಾಸೋಹವನ್ನು ಪ್ರಾರಂಭಿಸಿದರು. “ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ” ಎನ್ನುವ ಜೇಡರ ದಾಸಿಮಯ್ಯನವರು “ನಿಮ್ಮ ಶರಣರ ಸೂಳ್ನುಡಿಯ ಅರಗಳಿಗೆಯಿತ್ತಡೆ ನಿಮ್ಮನೇ ಇತ್ತೆ ಕಾಣಾ ರಾಮನಾಥಾ” ಎಂದಿದ್ದಾರೆ. ಜ್ಞಾನದಾಸೋಹ ಶರಣರ ಬಹುಮಹತ್ವದ ಸಿದ್ಧಾಂತವಾಗಿತ್ತು.

“ಅನುಭಾವವಿಲ್ಲದವನ ಭಕ್ತಿ ತಲೆಕೆಳಗಪ್ಪುದಯ್ಯ” ಎಂದು ತಮ್ಮ ಇನ್ನೊಂದು ವಚನದಲ್ಲಿ ಹೇಳಿರುವ ಜೇಡರ ದಾಸಿಮಯ್ಯನವರು ಅನುಭಾವವೇ ಭಕ್ತಿಗಾಧಾರವೆಂದು ಸ್ಪಷ್ಟಪಡಿಸಿದ್ದಾರೆ. “ಭಕ್ತಿಗೆ ಅನುಭಾವವೇ ಬೀಜಕಾಣಿರೋ” ಎಂದು ಹೇಳಿರುವ ಚೆನ್ನಬಸವಣ್ಣನವರು ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತೆಂದು ಹೇಳಿದ್ದಾರೆ. ತಲೆಹೊಲಸಾದರೆ ಹೇಗೆ ಸ್ನಾನ ಮಾಡುತ್ತೇವೆಯೋ, ವಸ್ತ್ರ ಮಾಸಿದಡೆ ಹೇಗೆ ಸ್ವಚ್ಛಗೊಳಿಸುತ್ತೇವೆಯೋ ಹಾಗೆ ಮನಸ್ಸು ಮೈಲಿಗೆಯಾದರೆ, ಶರಣರ ಅನುಭಾವದಿಂದ ಅದು ಶುದ್ಧವಾಗುತ್ತದೆಂದು ಚೆನ್ನಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ ವಿವರಿಸಿದ್ದಾರೆ. ಲಿಂಗ-ಜಂಗಮ-ಪ್ರಸಾದ ಇವೆಲ್ಲಾ ಅನುಭಾವದಿಂದಲೇ ಹುಟ್ಟಿವೆಯೆಂದು ಅಲ್ಲಮಪ್ರಭು ಹೇಳಿದರೆ, “ಅನುಭಾವಿಗಳ ಸಂಗದಿಂದ ತನ್ನ ತನು ಶುದ್ಧವಾಯಿತೆಂದು” ಅಕ್ಕಮಹಾದೇವಿ ಹೇಳಿದ್ದಾರೆ. “ಬಸವಣ್ಣ ನಿನ್ನ ಮಹಾನುಭಾವ ಕೇಳಿ ಕೇಳಿ ಎನ್ನ ಭವಂ ನಾಸ್ತಿಯಾಯಿತ್ತು. ನಿನ್ನ ಸನ್ನಿಧಿಯಿಂದಾನು ಬದುಕಿದೆನು ಕಾಣಾ ಬಸವಣ್ಣ” ಎಂದು ಅಲ್ಲಮಪ್ರಭು ಬಸವಣ್ಣನವರನ್ನು ಕೊಂಡಾಡಿದ್ದಾರೆ. ಶರಣರ ಅನೇಕ ವಚನಗಳಲ್ಲಿ ಜ್ಞಾನದಾಸೋಹದ ವಿಚಾರ, ಅನುಭವಮಂಟಪದ ಪ್ರಸ್ತಾಪವಿದೆ.

ಅನ್ನವು ಹಸಿದ ಹೊಟ್ಟೆಯನ್ನು ತುಂಬಿಸಿದರೆ, ಜ್ಞಾನವು, ಅರಿವಿನ ಹಸಿವನ್ನು ಹಿಂಗಿಸುತ್ತದೆ. ಅಂತೆಯೇ ಶರಣರು ಅನ್ನದಾಸೋಹ ಮತ್ತು ಜ್ಞಾನದಾಸೋಹಕ್ಕೆ ಮಹತ್ವದ ಸ್ಥಾನ ನೀಡಿದ್ದಾರೆ. ಆನೆ, ಕುದುರೆ, ಸಾಮ್ರಾಜ್ಯ, ಸಂಪತ್ತು ಇವೆಲ್ಲಕ್ಕಿಂತ ತಿಳುವಳಿಕೆ ಮಾತು, ಶರಣರ ಸೂಳ್ನುಡಿ ಬಹಳ ಮುಖ್ಯವೆಂದು ಅವರು ನಂಬಿದ್ದರು. ಆ ಕಾರಣಕ್ಕೆ ಜ್ಞಾನಕ್ಕೆ-ಅನುಭಾವಕ್ಕೆ ಸೂಳ್ನುಡಿಗಳಿಗೆ ಅವರು ಪ್ರಾಮುಖ್ಯತೆ ನೀಡಿದ್ದಾರೆ. ಶರಣರ ದಾಸೋಹತತ್ವಕ್ಕೆ ಅನೇಕ ಆಯಾಮಗಳಿವೆ. ಕಾಯಕತತ್ವ ದಾಸೋಹತತ್ವದಿಂದ ಸಾಮಾಜಿಕ ಸಮಾನತೆಯನ್ನು ತರಲು ಮಾಡಿದ ಅವರ ಪ್ರಯತ್ನಗಳು ಗಮನಾರ್ಹವಾಗಿವೆ.

ಮುಖ್ಯಾಂಶಗಳು
1. ತನ-ಮನ-ಧನಗಳನ್ನು ಗುರು-ಲಿಂಗ-ಜಂಗಮಕ್ಕರ್ಪಿಸುವುದೇ ತ್ರಿವಿಧ ದಾಸೋಹ.
2. ಅನ್ನದಾಸೋಹದ ಜತೆಗೆ, ಜ್ಞಾನದಾಸೋಹ, ಭಕ್ತಿದಾಸೋಹ, ಯುಕ್ತಿದಾಸೋಹ, ಮಮಕಾರ ದಾಸೋಹಗಳಿವೆ.
3. ದಾಸೋಹ ಸಾಮಾಜಿಕವಾದರೂ, ಅದಕ್ಕೆ ಧಾರ್ಮಿಕ ನೆಲೆಗಟ್ಟಿದೆ.
4. ದಾನಸಂಸ್ಕೃತಿಗೆ ಪರ್ಯಾಯವಾಗಿ ಬಂದದ್ದು ದಾಸೋಹ ಸಂಸ್ಕೃತಿ.
5. ಕಾಯಕ ಕಡ್ಡಾಯವಾದರೆ, ದಾಸೋಹ ನಿತ್ಯನಿರಂತರ
6. ದಾಸೋಹಿ ಭಕ್ತನಾಗಿರಬೇಕು, ಸದಾಚಾರಿಯಾಗಿರಬೇಕು.
7. ಸತ್ಯ-ಪ್ರಾಮಾಣಿಕತೆ-ನಿಷ್ಠೆಗಳೇ ದಾಸೋಹದ ಜೀವಾಳ.
8. ಸತ್ಯಶುದ್ಧ ಕಾಯಕದಿಂದ ಬಂದ ಧನ ಮಾತ್ರ ದಾಸೋಹಕ್ಕೆ ಸಲ್ಲುತ್ತದೆ.
9. ದಾಸೋಹವೇ ನಿಜವಾದ ಶಿವಾಚಾರ.
10. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಗೆದ್ದವನೇ ನಿಜವಾದ ದಾಸೋಹಿ.
11. ದಾಸೋಹದಲ್ಲಿ ಸಮರ್ಪಣಾ ಭಾವವಿರಬೇಕು.
12. ಅಹಂಕಾರ ನಿರಸನದಿಂದ ಮಾತ್ರ ದಾಸೋಹ ಸಾಧ್ಯ.
13. ದಾಸೋಹ, ಸಹಪಂಕ್ತಿ-ಸಹಭೋಜನದ ಸಾಮರಸ್ಯ ಕೇಂದ್ರ.
14. ದಾಸೋಹ, ಸಮಾನತೆ ತರಲು ಶರಣರು ಕೈಕೊಂಡ ಕ್ರಾಂತಿಕಾರಕ ಅಸ್ತ್ರ.
15. ಕಾಯಕವೇ ಕೈಲಾಸ-ದಾಸೋಹವೇ ಮುಕ್ತಿಯ ದಾರಿ.
16. ದಾಸೋಹವು ಸಮಾಜವನ್ನು ಕಾಣುವ ಅಂಜನ
17. ದೇಹ-ನಿರ್ದೇಹವಾಗುವುದೇ ನಿಜವಾದ ದಾಸೋಹ.
18. ದಾಸೋಹದ ಸ್ಥಾಯಿಭಾವವೇ ನಿಸ್ವಾರ್ಥ.
19. ಮೇಲರಿಮೆ-ಕೀಳರಿಮೆಗಳಿಲ್ಲದ ಸಮಾನತೆಯ ಸಾಧನವೇ ದಾಸೋಹ.
20. ದಾಸೋಹವೆಂಬುದು ಒಂದು ಸಮಾಜಸೇವೆ.

ಈ ಅಂಕಣದ ಹಿಂದಿನ ಬರಹಗಳು:
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...