ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ

Date: 20-06-2022

Location: ಬೆಂಗಳೂರು


“ಶರಣರಿಗೆ ಕಾಯಕವೆಂದರೆ ಅದು ಕೇವಲ ದುಡಿಮೆಯಾಗಿರಲಿಲ್ಲ. ಅದೊಂದು ಅನುಭಾವದ ಮಾರ್ಗವಾಗಿತ್ತು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ಕಾಯಕದ ಧೋರಣೆಯನ್ನು ವಿಶ್ಲೇಷಿಸಿದ್ದಾರೆ.

ಮೊದಲಿದ್ದ ವೃತ್ತಿಗಳೆಲ್ಲ ಶರಣರ ಕಾಲಕ್ಕೆ ಕಾಯಕಗಳಾದವು. ಕನ್ನಗಾರಿಕೆ, ಸೂಳೆಗಾರಿಕೆಯಂತಹ ಅನೇಕ ವೃತ್ತಿಗಳನ್ನು ಶರಣರು ತಿರಸ್ಕರಿಸಿದರು. ಕಾಯಕದ ಧೋರಣೆಗೆ ಒಳಪಟ್ಟ ವೃತ್ತಿಗಳು ಮಾತ್ರ ಕಾಯಕಗಳಾಗಿ ಗುರುತಿಸಿಕೊಂಡವು. ಎಲ್ಲ ಶರಣರಿಗೂ ಕಾಯಕ ಕಡ್ಡಾಯವಾಗಿತ್ತು. ಯಾವುದೇ ಕಾಯಕವನ್ನು ಮಾಡುವ ಸ್ವಾತಂತ್ರ್ಯ ಶರಣರಿಗಿತ್ತು. ಮೊದಲಿದ್ದ ವೃತ್ತಿಗಳಲ್ಲಿ ಮೇಲು-ಕೀಳೆಂಬ ಭಾವನೆಗಳಿದ್ದವು. ಶರಣರು ಈ ವೃತ್ತಿ ತಾರತಮ್ಯವನ್ನು ಹೋಗಲಾಡಿಸಿ, ಎಲ್ಲ ಕಾಯಕಗಳನ್ನು ಸಮಾನ ದೃಷ್ಟಿಯಿಂದ ನೋಡಿದರು. ಹೀಗಾಗಿ ಶರಣರಲ್ಲಿರುವ ಸಮಾನತೆಯಂತೆ, ಕಾಯಕಗಳಲ್ಲಿಯೂ ಸಮಾನತೆ ಕಾಣಿಸಿತು. ಶರಣರ ಕಾಲಕ್ಕಿದ್ದ ಕಾಯಕಗಳನ್ನು ಹೀಗೆ ವರ್ಗೀಕರಿಸಬಹುದಾಗಿದೆ.

1. ಉತ್ಪಾದನಾ ಮೂಲ ಕಾಯಕಗಳು
2. ಕೌಶಲ್ಯಮೂಲ ಕಾಯಕಗಳು
3. ಅಗತ್ಯ ಸೇವೆಯ ಕಾಯಕಗಳು
4. ವೃತ್ತಿನಿರತ ಕಾಯಕಗಳು
5. ಕಲಾಸಂಬಂಧಿ ಕಾಯಕಗಳು
6. ಮಹಿಳೆಯರ ಕಾಯಕಗಳು.

ಹೀಗೆ ಈ ವರ್ಗೀಕರಣವನ್ನು ಬೆಳೆಸುತ್ತ ಹೋಗಬಹುದಾಗಿದೆ. ಸಮಾಜ ವ್ಯವಸ್ಥೆಯಲ್ಲಿ ಮುಖ್ಯವಾಗಿದ್ದ ಇಂತಹ ಕೆಲವು ಕಾಯಕಗಳ ಬಗೆಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. ಶರಣರ ಭಕ್ತಿಮೀಮಾಂಸೆ ಇದ್ದ ಹಾಗೆ ಕಾಯಕಮೀಮಾಂಸೆಯೂ ಇದೆ. ಶರಣರು ನಡೆಸಿದ ಗಂಭೀರ ಚರ್ಚೆಯಿಂದಲೇ ಈ ಕಾಯಕಗಳು, ಇವುಗಳ ಉದ್ದೇಶಗಳು ಹುಟ್ಟಿಕೊಂಡಿವೆ. ಮೊದಲೂ ಜನರಿದ್ದರು, ಆ ಜನರಲ್ಲಿ ಮೇಲು ಕೀಳು ಎದ್ದು ಕಾಣುತ್ತಿತ್ತು. ಮೊದಲೂ ವೃತ್ತಿಗಳಿದ್ದವು, ಆ ವೃತ್ತಿಗಳಲ್ಲಿ ಮೇಲು-ಕೀಳು ಭಾವನೆ ತುಂಬಿ ತುಳುಕುತಿತ್ತು. ವಚನಚಳವಳಿ, ಶರಣರಲ್ಲಿ ಸಮಾನತೆಯನ್ನು ತಂದಂತೆ, ಕಾಯಕಗಳಿಗೂ ಏಕರೂಪದ ಗೌರವವನ್ನು ತಂದುಕೊಟ್ಟಿತು.

ಶರಣರ ಕಾಯಕ ಮೀಮಾಂಸೆಯಲ್ಲಿ ಅನೇಕ ಹೊಸ ವಿಷಯಗಳಿವೆ. ಕಾಯಕವೆಂಬುದು ಶರಣರಿಗೆ ಸಮಾನತೆಯನ್ನು ಹುಟ್ಟುಹಾಕುವ ಪ್ರಮುಖ ಅಸ್ತ್ರವಾಯಿತು. ಅಂತೆಯೇ ಅವರು ಅದನ್ನು ಕೈಲಾಸವೆಂದು ಕರೆದರು. ಭಕ್ತ- ಶರಣನಾದಾಗ ಕಾಯಕ ಕೈಲಾಸವಾಗಿ ಕಾಣುತ್ತದೆ. ಹೀಗಾಗಿ ಭಕ್ತಿಮೀಮಾಂಸೆಗೂ ಕಾಯಕಮೀಮಾಂಸೆಗೂ ನೇರವಾದ ಸಂಬಂಧವಿದೆ. ವೃತ್ತಿಯಲ್ಲಿ ಭಕ್ತಿಯಿಲ್ಲ, ವೃತ್ತಿ ಕೈಲಾಸವಾಗುವುದಿಲ್ಲ. ಅಂತೆಯೇ ಶರಣರು ವೃತ್ತಿಯನ್ನು ಕಾಯಕವನ್ನಾಗಿ ಮಾಡಿದರು, ಕಾಯಕದಲ್ಲಿ ಕೈಲಾಸವನ್ನು ಕಂಡರು.

ಈ ಮೇಲೆ ವಿವರಿಸಿದ ಕಾಯಕಗಳಲ್ಲಿ ಯಾರು ಬೇಕಾದರೂ, ಯಾವ ಕಾಯಕವನ್ನಾದರೂ ಮಾಡಬಹುದಾಗಿತ್ತು. ಕಾಶ್ಮೀರದರಸ ಕಲ್ಯಾಣಕ್ಕೆ ಬಂದು ಕಟ್ಟೆಗೆಯನ್ನು ಮಾರುವ ಮೋಳಿಗೆ ಮಾರಯ್ಯನಾಗಿ ಕಾಣಿಸಿಕೊಂಡ. ಕರಣಿಕ, ಮಂತ್ರಿ ಅರಸನ ಕೆಲಸವು ಎಷ್ಟು ಮುಖ್ಯವಾಗಿತ್ತೋ ಕಟ್ಟಿಗೆ-ಕುಳ್ಳು-ಹುಲ್ಲುಗಳನ್ನು ಮಾರುವವರ ಕಾಯಕವೂ ಅಷ್ಟೇ ಮುಖ್ಯವಾಗಿತ್ತು. ಕಾಯಕದಲ್ಲಿ ನಿರತನಾದಾಗ ನಿಷ್ಠೆ, ಏಕಾಗ್ರಚಿತ್ತತೆ ಇರಬೇಕೆಂದು ಹೇಳಿದ ಶರಣರು ಕಾಯಕವೆಂಬುದನ್ನು ಒಂದು ಮೌಲ್ಯವನ್ನಾಗಿ ಮಾಡಿದರು. ಕಾಯಕದ ಮಾದರಿ ಬೇರೆಯಾಗಿರಬಹುದು, ಅದರ ಉಪಯೋಗ ಬೇರೆಯಾಗಿರಬಹುದು ಆದರೆ ಕಾಯಕ ಜೀವಿಗಳು ಒಂದೇ ಯಾಗಿದ್ದರು, ಕಾಯಕದ ಗೌರವ ಕೂಡಾ ಒಂದೇ ಆಗಿತ್ತು. ಶರಣರಿಂದ ಕಾಯಕವೆಂಬುದು ಕ್ರಾಂತಿಕಾರಿಯಾಗಿ ಕಾಣಿಸಿಕೊಂಡಿತು, ಬದಲಾವಣೆಯ ಹರಿಕಾರನಾಗಿ ಬಂದಿತು.

ಭಾರತದಂತಹ ದೇಶದಲ್ಲಿ ವೃತ್ತಿಗಳೇ ಜಾತಿಗಳಾಗಿ ಬೆಳೆದುನಿಂತವು. ಜಾತಿ ತಾರತಮ್ಯದ ಮೂಲಕ ವೃತ್ತಿತಾರತಮ್ಯವೂ ಕಾಣಿಸಿಕೊಂಡಿತ್ತು. ಈ ಸತ್ಯವನ್ನರಿತ ಶರಣರು ಕಾಯಕದಂತಹ ಹೊಸ ಮೌಲ್ಯವೊಂದನ್ನು ಕಟ್ಟಿಕೊಟ್ಟರು. ಜಾತಿ ತಾರತಮ್ಯವನ್ನು ಹೋಗಲಾಡಿಸಿದಾಗ ಸಹಜವಾಗಿಯೇ ವೃತ್ತಿತಾರತಮ್ಯ ಹೊರಟು ಹೋಯಿತು. ಜಾತಿ-ವೃತ್ತಿ, ಇವುಗಳಲ್ಲಿರುವ ನಿಕಟ ಸಂಬಂಧವನ್ನು ಗುರುತಿಸಿದ ಶರಣರು ಜಾತಿಸಂಘರ್ಷದ ಮೂಲಕ ವೃತ್ತಿಸಮಾನತೆಯನ್ನು ತಂದರು. ವೃತ್ತಿಗೌರವ ಹೆಚ್ಚಾದಾಗ, ವೃತ್ತಿಸಮಾನತೆ ಬಂದಾಗ ಅದು ಕಾಯಕವೆಂದು ಕರೆಯಿಸಿಕೊಂಡಿತು. ಮೊದಲಿದ್ದ ವೃತ್ತಿಗಳಲ್ಲಿ ಭಕ್ತಿ ಇರಲಿಲ್ಲ, ಹೀಗಾಗಿ ಅಸಮಾನತೆಯಿತ್ತು. ಶರಣರು ವೃತ್ತಿಗಳಿಗೆ ಭಕ್ತಿಯನ್ನು ಜೋಡಿಸಿದರು. ಆಗ ಅದು ಕಾಯಕವಾಯಿತು. ಅದೇ ಮುಂದೆ ದಾಸೋಹವಾಗಿ ಬೆಳೆಯಲು ಕಾರಣವಾಯಿತು. ಕಾಯಕದಲ್ಲಿ ಭಕ್ತಿ ಇದ್ದಾಗ ಮಾತ್ರ ದಾಸೋಹ ಸಾಧ್ಯ. ಈ ಕಾರಣದಿಂದಲೇ ಕಾಯಕ-ದಾಸೋಹ ಒಂದು ನಾಣ್ಯದ ಎರಡು ಮುಖಗಳಾದವು.

1. ಉತ್ಪಾದನಾ ಮೂಲ ಕಾಯಕಗಳು
ಉತ್ಪಾದನೆಯ ಕ್ರಿಯೆ ಅತಿಮುಖ್ಯವಾದುದು. ಉತ್ಪಾದನೆ ಇರದಿದ್ದರೆ ಬದುಕೇ ಇಲ್ಲ. ಉತ್ಪಾದನೆಯೇ ನಿಜವಾದ ಜೀವನವಾಗಿದೆ. ಜೀವಕ್ಕೂ ಜೀವನಕ್ಕೂ ನೇರವಾದ ಸಂಬಂಧವಿದೆ. ಜೀವ ಇರಬೇಕಾದರೆ ಗಾಳಿ, ನೀರು, ಊಟ ಬೇಕೇಬೇಕು. ಗಾಳಿ-ನೀರು ಪ್ರಕೃತಿದತ್ತವಾಗಿ ಸಿಗುತ್ತವೆ, ಆದರೆ ಆಹಾರವನ್ನು ಉತ್ಪತ್ತಿ ಮಾಡಬೇಕಾಗುತ್ತದೆ. ಆಹಾರ ಉತ್ಪಾದನೆಗೆ ಕೃಷಿ ಬೇಕೇಬೇಕು. ಹೀಗಾಗಿ ಕೃಷಿ ಅಥವಾ ಒಕ್ಕಲುತನವು ಉತ್ಪಾದನಾ ಕಾಯಕಗಳಲ್ಲಿ ಮಹತ್ವದ್ದಾಗಿದೆ. ಉತ್ಪಾದನಾ ಮೂಲ ಕಾಯಕಗಳಲ್ಲಿ ಕೃಷಿ, ಹೈನುಗಾರಿಕೆ, ಕುರಿಸಾಕಾಣಿಕೆ, ಮೀನುಗಾರಿಕೆಯಂತಹ ಕಾಯಕಗಳು ಬರುತ್ತವೆ.

i) ಕೃಷಿ
ಕೃಷಿಗೆ ಭಾರತದೇಶದಲ್ಲಿ ಬಹುದೊಡ್ಡ ಪರಂಪರೆಯಿದೆ. ಹೊಯ್ಸಳರ ಶಾಸನವೊಂದರಲ್ಲಿ ಒಕ್ಕಲಿಗರನ್ನು ಭೂಮಿಕಾರರೆಂದು ಕರೆಯಲಾಗಿದೆ. ಇನ್ನು ಕೆಲವು ಶಾಸನಗಳಲ್ಲಿ ಕೃಷಿಕರನ್ನು ಒಕ್ಕಲಮಕ್ಕಳು ಎಂದು ಉಲ್ಲೇಖಿಸಲಾಗಿದೆ. ರೈತನು ಭೂಮಿಯನ್ನು ಹದಮಾಡಿ, ಬೆವರು ಸುರಿಸಿ ದುಡಿದು ಆಹಾರ ಉತ್ಪಾದನೆ ಮಾಡುತ್ತಾನೆ. ಆಯಗಾರರ ಸಹಕಾರದೊಂದಿಗೆ ವಿವಿಧ ಬಗೆಯ ಧವಸ-ಧಾನ್ಯಗಳನ್ನು ಬೆಳೆಯುತ್ತಾನೆ. ಹೀಗೆ ಬೆಳೆದ ಬೆಳೆಯನ್ನು ರೈತ ತಾನೊಬ್ಬನೇ ಉಪಯೋಗಿಸುತ್ತಿರಲಿಲ್ಲ. ಅದರಲ್ಲಿ ಒಂದು ಭಾಗ ತೆರಿಗೆಗೆ ಹೋಗುತ್ತಿತ್ತು ಮತ್ತೊಂದು ಭಾಗ ಅಯಗಾರರಿಗೆ ಹೋಗುತ್ತಿತ್ತು. ಉಳಿದ ಭಾಗವನ್ನು ರೈತ ಉಪಯೋಗಿಸುತ್ತಿದ್ದ. ಕೃಷಿಯೆಂಬುದು ಈ ಕಾರಣಕ್ಕಾಗಿಯೇ ಈ ದೇಶದಲ್ಲಿ ಪವಿತ್ರ ವೃತ್ತಿಯಾಗಿದೆ. ಶರಣರು ಬಂದ ನಂತರ ಕೃಷಿಯನ್ನು ಕಾಯಕವನ್ನಾಗಿ ಮಾಡಿ ಕೃಷಿಕನ ಗೌರವವನ್ನು ಹೆಚ್ಚಿಸಿದರು.

ಶರಣರಲ್ಲಿ ಒಕ್ಕಲಿಗ ಮುದ್ದಣ್ಣ, ಅಜಗಣ್ಣ, ಏಲೇಶ್ವರ ಕೇತಯ್ಯ, ಇಳಿಹಾಳ ಬೊಮ್ಮಯ್ಯ, ಬಡಿಹೊರಿ ಬ್ರಹ್ಮಯ್ಯ ಇವರೆಲ್ಲಾ ಕೃಷಿಕರೇ ಆಗಿದ್ದರು. ಬಾಹೂರ ಬೊಮ್ಮಣ್ಣ, ನೀಲಕಂಠಯ್ಯ ಇವರು ತೋಟಗಾರಿಕೆಯ ಕೃಷಿ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಅಕ್ಕಮ್ಮ, ರೆಮ್ಮವ್ವೆ, ಮುಕ್ತಾಯಕ್ಕ ಈ ಮೊದಲಾದ ಶರಣೆಯರು ಕೃಷಿಕಾಯಕದವರಾಗಿದ್ದರೆಂಬುದು ಗಮನಿಸಬೇಕಾದ ಸಂಗತಿಯಾಗುತ್ತದೆ.

ಸಿದ್ಧರಾಮೇಶ್ವರನು ತನ್ನ ವಚನವೊಂದರಲ್ಲಿ ಕೃಷಿಕನನ್ನು ``ಕೃಷೀವಲ’’ನೆಂದು ಕರೆದಿದ್ದಾನೆ. (ವ. 131). ``ಓಲೆಯಕಾರ ಭಕ್ತನಾದರೆ ಮನದ ಕ್ರೋಧ ಬಿಡದು ಒಕ್ಕಲಿಗ ಭಕ್ತನಾದರೆ ಅವನ ಪೂರ್ವಾಶ್ರಯ ಬಿಡದು’’ (ವ. 160) ಎಂದು ಚೆನ್ನಬಸವಣ್ಣ ಹೇಳಿದ್ದಾನೆ. ಒಕ್ಕಲಿಗ ವೃತ್ತಿಯು ವಚನಕಾರರು ಬರುವದಕ್ಕಿಂತ ಮೊದಲೇ ಇತ್ತು. ಆದರೆ ಅದು ಪೂರ್ವಾಶ್ರಮದಿಂದ ಬಿಡುಗಡೆ ಹೊಂದಿರಲಿಲ್ಲ. ಶರಣರು ಒಕ್ಕಲಿಗ ವೃತ್ತಿಯನ್ನು ಕೃಷಿಕಾಯಕವನ್ನಾಗಿ ಮಾಡಿದರು. ಆಗ ಅದು ಪೂರ್ವಾಶ್ರಮದಿಂದ ಮುಕ್ತವಾಯಿತು.

 

“ಹದನರಿದು ಹರಗುವ, ಬೆದೆಯರಿದು ಬಿತ್ತುವ,
ಸಸಿ ಮಂದವಾದರೆ ತೆಗೆವನಯ್ಯಾ.
ಒಂದೊಂದ ಹೊಕ್ಕು ಬೆಳವಸಿಯ ತೆನೆ ಮೆಲುವನಯ್ಯಾ.
ಕೊಯಿವನಯ್ಯಾ, ಕೊರೆವನಯ್ಯಾ ಒಕ್ಕೂವೆನಯ್ಯಾ, ತೂರುವೆನಯ್ಯಾ
ಲೋಕಾದಿ ಲೋಕಂಗಳ ಹಗೆಯನಿಕ್ಕುವನಯ್ಯಾ ದೇವರಾಯ ಸೊಡ್ಡಳ.’’
- ಸೊಡ್ಡಳ ಬಾಚರಸ (ಸ.ವ.ಸಂ. 9. ವ : 826)

ಈ ವಚನದಲ್ಲಿ ಸೊಡ್ಡಳ ಬಾಚರಸನು ಕೃಷಿಕಾಯಕದ ವಿನ್ಯಾಸ ಹೇಗಿರುತ್ತದೆಂಬುದನ್ನು ವಿವರಿಸಿದ್ದಾನೆ. ಹೊಲವನ್ನು ಹರಗಬೇಕಾದರೆ. ಭೂಮಿ ಹದಗೊಂಡಿರಬೇಕು ಆಗ ಮಾತ್ರ ಹರಗಲು ಸಾಧ್ಯವಾಗುತ್ತದೆ. ಅದೇರೀತಿ ಬೀಜಗಳನ್ನು ಬಿತ್ತಬೇಕಾದರೆ ಭೂಮಿ ಬೆದೆಗೊಂಡಿರಬೇಕು. ಆಗಮಾತ್ರ ಬೀಜಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಬೀಜವು ಭೂಮಿಯಲ್ಲಿ ಬಿದ್ದು ಸಸಿಯಾಗಿ ಬೆಳೆದು, ತೆನೆಬಿಟ್ಟು, ಕೊಯ್ಲು ಬರುತ್ತದೆ. ಆಗ ಕೊಯ್ಯುವ, ಕೊರೆವ, ಒಕ್ಕುವ, ತೂರುವ ಕಾರ್ಯಗಳು ಪ್ರಾರಂಭವಾಗುತ್ತವೆ. ಎಲ್ಲ ವೈರತ್ವನ್ನು ಮರೆತು ಎಲ್ಲರಿಗೂ ಅನ್ನ ನೀಡುವ ರೈತ ನಿಜವಾದ ದೇವಮಾನವನಾಗಿದ್ದಾನೆ. ಇಂತಹ ದೇವ ಮಾನವನನ್ನು ಶರಣರು ಅತ್ಯಂತ ಗೌರವದಿಂದ ಕಂಡಿದ್ದಾರೆ. ಆತ ಮಾಡುವ ಕೃಷಿಕಾಯಕವನ್ನು ಪೂಜ್ಯತೆಯಿಂದ ನೋಡಿದ್ದಾರೆ.

“ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು
ಅಲ್ಲಿಂದ ಆಚೆ ಮಧ್ಯಭೂಮಿ,
ಮೂರು ನೆಲದ ಭೂಮಿಯ ಆರೈದು ಬೆಳೆದಿಹೆನೆಂದಡೆ
ಇದಾರ ವಶವೂ ಅಲ್ಲ.
ಕಾಮ ಭೀಮ ಜೀವ ಧನದೊಡೆಯ ನೀನೆಬಲ್ಲೆ’’
- ಒಕ್ಕಲಿಗ ಮುದ್ದಣ್ಣ (ಸ.ವ. ಸಂ. 6, ವ : 1742)

ಒಕ್ಕಲಿಂಗ ಮುದ್ದಣ್ಣನು ಈ ವಚನದಲ್ಲಿ ಭೂಮಿಯ ಲಕ್ಷಣವನ್ನು ಹೇಳಿದ್ದಾನೆ. ಭೂಮಿ ಒಂದೇ ರೀತಿಯಾಗಿರುವುದಿಲ್ಲ. ತೆಗ್ಗು, ತೆಂಬ, ಕರಲು, ಕೊರಕಲು ಇದ್ದೇ ಇರುತ್ತದೆ. ಸಮತಟ್ಟಾದ ಫಲವತ್ತಾದ ಭೂಮಿ ಸಿಗುವುದು ವಿರಳ. ಕೃಷಿಕಾಯಕದಿಂದ ಹೀಗೆ ತೆಗ್ಗು-ತೆಂಬದಿಂದ ಕೂಡಿದ ಭೂಮಿಯನ್ನು ಸಮತಟ್ಟಾಗಿ ಮಾಡಬಹುದು. ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಬಹುದು. ಈ ಬದಲಾವಣೆ ಕೃಷಿಕಾಯಕದಿಂದ ಮಾತ್ರ ಸಾಧ್ಯವಾಗುತ್ತದೆಂದು ಒಕ್ಕಲಿಗ ಮುದ್ದಣ್ಣ ಹೇಳಿದ್ದಾನೆ. ಕೃಷಿಕಾಯಕದ ಈ ವ್ಯವಸಾಯವನ್ನು ಮುದ್ದಣ್ಣ ಆಧ್ಯಾತ್ಮದ ಪರಿಭಾಷೆಯಲ್ಲಿ ವಿವರಿಸಿದ್ದಾನೆ. ಭೂಮಿಯಲ್ಲಿಯೂ ಕೂಡ ಸಮತಟ್ಟು ಸಮಾನ ಅಳತೆಯಿಲ್ಲ. ಅದೇ ರೀತಿ ಜೀವಿಗಳಲ್ಲಿಯೂ ಕೂಡ ಒಂದೇ ರೀತಿಯಿಲ್ಲ. ಭೂಮಿಯನ್ನು ಸಮತಟ್ಟು ಮಾಡಿಕೊಳ್ಳಲು, ಜನಸಮುದಾಯದಲ್ಲಿ ಸಮಾನತೆಯನ್ನು ಹುಟ್ಟುಹಾಕಲು ಕಾಯಕ ಹೇಗೆ ಮುಖ್ಯವಾಗುತ್ತದೆಂಬುದನ್ನು ಶರಣರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ.

ಅಲ್ಲಮ್ಮಪ್ರಭು ತಮ್ಮ ವಚನವೊಂದರಲ್ಲಿ ತೋಟವನ್ನು ಒಂದು ಪ್ರತಿಮೆಯಾಗಿರಿಸಿಕೊಂಡು, ಆಧ್ಯಾತ್ಮವೆಂಬ ಕೃಷಿಯ ಕುರಿತು ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ.
“ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ
ಒಡೆದು ಸಂಸಾರದ ಹಂಟೆಯ, ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ
ಅಖಂಡ ಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಲೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ’’
- ಅಲ್ಲಮಪ್ರಭು (ಸ.ವ.ಸಂ. 2, ವ : 1231)

ಈ ವಚನದಲ್ಲಿ ತೋಟದ ಕೃಷಿಯ ಮೂಲಕ, ಆಧ್ಯಾತ್ಮ ಕೃಷಿಯನ್ನು ಹೇಳಲಾಗಿದೆ. ತನುವೇ ತೋಟ, ಮನವೇ ಗುದ್ದಲಿ ಬಹಳ ಸುಂದರವಾದ ಮತ್ತು ಸೂಕ್ತವಾದ ಹೋಲಿಕೆ. ತೋಟದಲ್ಲಿ ಕೃಷಿಕಾಯಕವ ಮಾಡಿ ಬೆಳೆತೆಗೆಯಬೇಕಾದರೆ ಏನೆಲ್ಲ ಮಾಡಬೇಕೊ, ಅವೆಲ್ಲಾ ಕ್ರಿಯೆಗಳನ್ನು ಆಧ್ಯಾತ್ಮದ ಕೃಷಿಯಲ್ಲಿ ಮಾಡಬೇಕೆಂದು ಪ್ರಭು ತಿಳಿಸಿದ್ದಾರೆ. ಹೀಗೆ ಕೃಷಿಕಾಯಕದ ಪ್ರತಿಮೆಯ ಮೂಲಕ ಆಧ್ಯಾತ್ಮವನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಹೇಳಿದ್ದು ಕುತೂಹಲಕಾರಿಯಾಗಿದೆ. ಹೀಗಾಗಿ ಶರಣರಲ್ಲಿ ಕೃಷಿಯೆಂಬುದು ಕೇವಲ ಕಾಯಕ ಮಾತ್ರವಾಗಿರದೆ, ಅದು ಆಧ್ಯಾತ್ಮವನ್ನು ಅರಿತುಕೊಳ್ಳುವ ಸುಲಭ ಮಾರ್ಗವೂ ಆಗಿದೆ.

ii) ಹೈನುಗಾರಿಕೆ
ಕೃಷಿ ಕಾಯಕದಲ್ಲಿ ರೈತ ಬೀಜಗಳನ್ನು ಬಿತ್ತಿ ಬೆಳೆಗಳನ್ನು ಬೆಳೆಯುತ್ತಾನೆ. ಹೈನುಗಾರಿಕೆಯಲ್ಲಿ ಹಸು, ಎಮ್ಮೆಗಳನ್ನು ಸಾಕಿ, ಹಾಲನ್ನು ಕರೆದು ಹಾಲಿನ ಉತ್ಪನ್ನಗಳು ದೊರೆಯುವಂತೆ ಈ ಕಸುಬುಗಾರರು ಮಾಡುತ್ತಾರೆ. ಕೃಷಿಯಿಂದ ಬರುವ ರೊಟ್ಟಿ, ರಾಗಿ, ಅನ್ನ ಹೇಗೇ ಮುಖ್ಯವೊ, ಅದೇ ರೀತಿ ಹಾಲು, ಮೊಸರು, ತುಪ್ಪ ಮುಖ್ಯವಾಗುತ್ತವೆ. ಹಿಂದೆ ಗೋವಳಿಗರು, ಗೋಪಾಲರು ಈ ವೃತ್ತಿಯನ್ನು ಮಾಡುತ್ತಿದ್ದರು. ಹೈನುಗಾರಿಕೆಗೆ ಸಂಬಂಧಿಸಿದಂತೆ ಶರಣರ ವಚನಗಳಲ್ಲಿ ಅನೇಕ ಮಾಹಿತಿಗಳು ದೊರೆಯುತ್ತವೆ.

ಬಸವಣ್ಣ ತಮ್ಮ ವಚನವೊಂದರಲ್ಲಿ `ಒರೆಯಾವು’ ಎಂದು ಬಳಸಿದ್ದಾನೆ. ಒರೆಯಾವು ಎಂದರೆ ಕರುವಿದ್ದ ಆಕಳೆಂದು ಅರ್ಥ. ಇನ್ನೊಂದು ವಚನದಲ್ಲಿ ``ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ ಇಪ್ಪರು’’ (ವ. 869) ಎಂದು ಹೇಳಿದ್ದಾರೆ. ``ಹಾಲ ಸಾಗರಲೊಳಗೋಲಾಡುತಿರ್ದು ಓರೆಮಾವಿನ ಬೆನ್ನ ಹರಿವನಲ್ಲ. (ವ. 1756) ವೆಂದು ಚೆನ್ನಬಸವಣ್ಣ ತಮ್ಮ ವಚನದಲ್ಲಿ ತಿಳಿಸಿದ್ದಾನೆ. ``ಹಂದಿ ಹೈನವಲ್ಲ, ಸಂಸಾರಿ ಜಂಗಮವಲ್ಲ. (ವ. 713)’’ ಎಂದು ಚಂದಿಮರಸ ತನ್ನ ವಚನದಲ್ಲಿ ಹೇಳುತ್ತ ಹೈನುಗಾರಿಕೆ ಮಾಡಲು ಆಕಳು, ಎಮ್ಮೆ, ಆಡು, ಕುರಿಗಳನ್ನು ಸಾಕಾಣಿಕೆ ಮಾಡಬೇಕೆಂದು ಹೇಳಿದ್ದಾನೆ. ಹಾಲಿನ ಉತ್ಪನ್ನಗಳನ್ನು ವಚನ ಭಂಡಾರಿ ಶಾಂತರಸನು ``ಕೀಲೋತ್ಪನ್ನದಂತೆ (ವ. 31)’’ ಎಂದು ತಿಳಿಸಿದ್ದಾನೆ. ``ದಧಿಯ ಕಡೆವಾಕೆಯ ತುದಿಗಂಡವ ಕೊಯಿದು (ವ. 553)’’ ಎಂದು ಸಗರ ಬೊಮ್ಮಣ್ಣನ ವಚನದಲ್ಲಿ ಬರುತ್ತದೆ.

``ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ ?’’ (ವ. 418) ಎಂದು ಅಕ್ಕಮಹಾದೇವಿ ಪ್ರಶ್ನಿಸಿದ್ದಾಳೆ. ``ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ (ವ. 108)’’ ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾಳೆ. ಶರಣರ ಕಾಲಕ್ಕೆ ಆಕಳು ಎಮ್ಮೆಗಳನ್ನು ಸಾಕಿ ಹೈನುಗಾರಿಕೆಯ ಕಾಯಕವನ್ನು ಮಾಡುತ್ತಿದ್ದರೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ದನಗಳನ್ನು ಕಾಯುತ್ತಿದ್ದ ತುರುಗಾಹಿ ರಾಮಣ್ಣನು, ಆಕಳು ಮತ್ತು ಹೋರಿ ಕೂಡುವದರಿಂದ ಕರು ಹುಟ್ಟುವುದನ್ನು ಹೇಳುತ್ತ, ಆಗ ಆಕಳಿನಿಂದ ಕ್ಷೀರಧಾರೆಯೇ ಹರಿಯುತ್ತದೆಂದು ಹೈನುಗಾರಿಕೆ ಕಾಯಕದ ಸಂಭ್ರಮವನ್ನು ತಿಳಿಸಿದ್ದಾನೆ.

iii) ಕುರಿ ಸಾಕಾಣಿಕೆ
12ನೇ ಶತಮಾನದಲ್ಲಿ ಕುರಿ ಸಾಕಾಣಿಕೆಯು ಮುಖ್ಯ ಕಾಯಕವಾಗಿತ್ತೆಂದು ತಿಳಿದು ಬರುತ್ತದೆ. ಕೆಲವು ವಚನಗಳಲ್ಲಿ ಕುರಿ ಸಾಕಾಣಿಕೆಯ ವಿಚಾರ ಪ್ರಸ್ತಾಪವಾಗಿದೆ. ಕಬ್ಬಿನ ತೋಟಕ್ಕೆ ಹೊಕ್ಕ ಕುರಿ, ಕಬ್ಬಿನ ಹೊರಗಿನ ಎಲೆಯನ್ನು ತಿನ್ನುತ್ತದೆ. ಅದೇ ಆನೆ ಕಬ್ಬನ್ನೇ ತಿನ್ನುತ್ತದೆ. ಕಬ್ಬಿನ ಎಲೆಯನ್ನೇ ತಿಂದರೂ ಕುರಿ ಹಾಲು ಕೊಡುತ್ತದೆ. ಬಸವಣ್ಣ ತನ್ನ ವಚನವೊಂದರಲ್ಲಿ (ವ. 597) ಈ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಶರಣರಲ್ಲಿ ವೀರಗೊಲ್ಲಾಳನು ಕುರಿಕಾಯುತ್ತ ಕುರಿ ಸಾಕಾಣಿಕೆ ಕಾಯಕದಲ್ಲಿ ತೊಡಗಿದ್ದನೆಂಬುದು ಸ್ಪಷ್ಟವಾಗುತ್ತದೆ.

``ಆಡು ಅರುದಿಂಗಳು ಹುಟ್ಟಿ, ಮೂರುದಿನ ಬದುಕಿ
ಒಂದು ದಿನ ಸತ್ತಿತ್ತು
ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು.
ಮರಿಯು ಮೊಲೆಯನುಂಗಿ, ಕುರುಹಿನೊಳಗಡಗಿತ್ತು
ಆಡು ಕುರಿ ಬಂದ ಬಟ್ಟೆಯ ಸೋಧಿಸಿಕೊಂಡು,
ತೋಳನ ತೊಡಕಿನಲ್ಲಿ ಸಾಯದೆ, ಅರಿ ವೀರಬೀರೇಶ್ವರಲಿಂಗವ’’
- ವೀರಗೊಲ್ಲಾಳ (ಸ.ವ.ಸಂ. 9, ವ : 86)

ವೀರಗೊಲ್ಲಾಳನ ಈ ವಚನದಲ್ಲಿ ಅಡು, ಕುರಿ, ಮರಿ, ತೋಳಗಳ ಪ್ರಸ್ತಾಪವಿದೆ. ಕುರಿಸಾಕಾಣಿಕೆ ಎಷ್ಟೊಂದು ಕಷ್ಟದಿಂದ ಕೂಡಿತ್ತೆಂಬುದು ಇದರಿಂದ ತಿಳಿದು ಬರುತ್ತದೆ. ಆಡು ಮತ್ತು ಕುರಿಗಳಿಂದ ಅನೇಕ ಲಾಭಗಳಿವೆ. ಆಡಿನ ಹಾಲನ್ನು ಔಷಧವಾಗಿಯೂ ಉಪಯೋಗಿಸುತ್ತಾರೆ. ಕುರಿಯ ಉಣ್ಣೆ, ಉಡುಪುಗಳನ್ನು ಸಿದ್ಧಪಡಿಸಲು, ಕಂಬಳಿ ಮಾಡಲು ಬರುತ್ತದೆ. ಆಡು-ಕುರಿಗಳನ್ನು ತೋಳಗಳಿಂದ ರಕ್ಷಿಸಿಕೊಂಡು ಈ ಕಾಯಕವನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಕುರಿ ಕಾಯುವವನ ಮೈಯೆಲ್ಲಾ ಕಣ್ಣಾಗಿರಬೇಕಾಗಿರುತ್ತದೆ. ತೋಳನ ತೊಡಕಿನಲ್ಲಿ ಸಾಯದೇ ಹೇಗೆ ಕುರಿ ಪಾರಾಗುತ್ತದೆಯೋ, ಹಾಗೆಯೇ ಮನುಷ್ಯ ಈ ಸಂಸಾರ ಜಂಜಾಟದಿಂದ ಮೇಲೆದ್ದು ಬರಬೇಕೆಂದು ಇಲ್ಲಿ ವೀರಗೊಲ್ಲಾಳ ಹೇಳಿದ್ದಾನೆ. ವೀರಗೊಲ್ಲಾಳನ ನಿಜವಾದ ಹೆಸರು ಕಾಟ ಕೂಟನೆಂದು ತಿಳಿದು ಬರುತ್ತದೆ. ಗೊಲ್ಲಾಳನ ಈ ಕಾಯಕನಿಷ್ಠೆಯನ್ನು ಕಂಡು ಗುಪ್ತಮಂಚಣ್ಣ ವರ್ಣನೆ ಮಾಡಿದ್ದಾನೆ. ``ಅರಿದಡೆ ಗೊಲ್ಲಾಳನಂತಿರಬೇಕು, ಮರೆದಡೆ ಚಂದಯ್ಯನಂತಿರಬೇಕು’’ (ವ. 307) ಎಂದು ಗುಪ್ತಮಂಚಣ್ಣ ಹೇಳಿದ್ದಾನೆ.

iv) ಮೀನುಗಾರಿಕೆ
ಹೊಳೆ, ಕೆರೆ, ನದಿಗಳಲ್ಲಿ ಮೀನುಹಿಡಿದು, ಮೀನುಗಾರಿಕೆ ಕಾಯಕ ಮಾಡುತ್ತಿದ್ದ ಶರಣರ ಬಗೆಗೆ ಅನೇಕ ವಚನಗಳಲ್ಲಿ ಪ್ರಸ್ತಾಪವಿದೆ. 12ನೇ ಶತಮಾನದಲ್ಲಿ ಮೀನುಗಾರಿಕೆಯನ್ನು ಒಂದು ಕಾಯಕವನ್ನಾಗಿ ಮಾಡಿದ ಶರಣರು, ಈ ಕಾಯಕ ಜೀವಿಗಳ ಬಗೆಗೆ ಪ್ರಸ್ತಾಪಿಸಿದ್ದಾರೆ. ಮೀನುಗಾರನಿಗೆ ಕಬ್ಬಿಲನೆಂದು ಕರೆಯುತ್ತಿದ್ದರೆಂದು ಚೆನ್ನಬಸವಣ್ಣ ಹೇಳಿದ್ದಾನೆ. ಮೀನು ಹಿಡಿಯುವ ಕ್ರಿಯೆಗೆ ಜನವೇಂಟೆಯೆಂದು ಕರೆಯುತ್ತಿದ್ದರು. ಮೀನು ಹಿಡಿಯಲು ಬಲೆಬೀಸಿ ಗಾಳವನ್ನು ಹಾಕುತಿದ್ದರು, ಇದಕ್ಕೆ ಗಾಣವೆಂದು ಕೂಡಾ ಕರೆಯುತ್ತಿದ್ದರು. ಆ ಕಾಲದಲ್ಲಿ ತೆಪ್ಪ, ದೋಣಿಗಳನ್ನು ಬಳಸಿಕೊಂಡು ಮೀನು ಹಿಡಿಯುತ್ತಿದ್ದರು. ಅಂತೆಯೇ ಗಾಳದ ಕಣ್ಣಪ್ಪನಿಗೆ, ಗಾಣದ ಕಣ್ಣಪ್ಪನೆಂದು ಕರೆಯುತ್ತಿದ್ದರು. ಈತ ಗಾಣಿಗನಾಗಿರದೆ, ಮೀನುಗಾರನಾಗಿದ್ದಾನೆ. ಕಂಭದ ಮಾರಿತಂದೆ ಕೂಡ ಕಬ್ಬಿಲಿಗನಾಗಿದ್ದನು. ಅಂಬಿಗರು ದೋಣಿ ನಡೆಸುವುದರೊಂದಿಗೆ ಮೀನುಗಾರಿಕೆಯ ಕಾಯಕವನ್ನು ಮಾಡುತ್ತಿದ್ದರೆಂದು ಹಡಪದಪ್ಪಣನ ಪುಣ್ಯಸ್ತ್ರೀ ಲಿಂಗಮ್ಮ ಹೇಳಿದ್ದಾಳೆ. ``ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ (ವ. 1289)’’ ಎಂದು ಹೇಳಿರುವ ಲಿಂಗಮ್ಮನ ಈ ನುಡಿಯಲ್ಲಿ ಅಂಬಿಗರ ಕಾಯಕದ ಬಗೆಗೆ ಸ್ಪಷ್ಟತೆಯಿದೆ.

``ಗಾಣವ ಹಾಕಲಾಗಿ ಆರಾರು ಸಿಕ್ಕಿದರು ಆರೈಕೆಗೊಳ್ಳಯ್ಯ (ವ. 264)’’ ಎಂದು ತನ್ನ ವಚನದಲ್ಲಿ ಹೇಳಿರುವ ಗಾಳದ ಕಣ್ಣಪ್ಪನು ಈ ಕಾಯಕದಲ್ಲಿ ಹೆಸರುವಾಸಿಯಾಗಿದ್ದನು. ತನ್ನ ವೃತ್ತಿಪ್ರತಿಮೆಯ ಮೂಲಕ, ಆಧ್ಯಾತ್ಮದ ಮಹತ್ವವನ್ನು ಈ ಶರಣ ಕಂಡುಕೊಂಡಿದ್ದಾನೆ. ಇನ್ನೊಬ್ಬ ವಚನಕಾರ ಕಂಬದ ಮಾರಿತಂದೆಯು ಮೀನು ಹಿಡಿಯುವ ಬಲೆಯ ಪ್ರತಿಮೆಯ ಮೂಲಕ ಆಧ್ಯಾತ್ಮದ ವಿಷಯವನ್ನು ತಿಳಿಸಿಕೊಟ್ಟಿದ್ದಾನೆ. ಮಹಾನದಿಯಲ್ಲಿ ಆಡುತ್ತಿದ್ದ ಮತ್ಸ್ಯಕ್ಕೆ ಒಂದು ಮಾಂಸದ ತುಂಡುಕಟ್ಟಿ ಬಲೆಯ ಬೀಸಿದರೆ, ಬಲೆಗೆ ಆ ಮತ್ಸ್ಯಸಿಕ್ಕಿ ಹಾಕಿಕೊಳ್ಳಲಿಲ್ಲವೆಂದು ಹೇಳುತ್ತಾ ಈ ಕಾಯಕದ ಕ್ರಿಯೆಯನ್ನು ಆಧ್ಯಾತ್ಮದ ಪರಿಭಾಷೆಯನ್ನಾಗಿ ಬಳಸಿಕೊಂಡಿದ್ದಾನೆ. ``ಆ ಮತ್ಸ್ಯದಂಗದ ಕವಚ ದುಸ್ಸಂಗದ ನೀರ ಮುಟ್ಟದಾಗಿ ಅದು ನಿರಂಗದ ಮತ್ಸ್ಯ (ವ. 7)’’ ಎಂದು ಹೇಳಿರುವ ಕಂಬದ ಮಾರಿತಂದೆಯು ಇಲ್ಲಿ ವೃತ್ತಿ ಪ್ರತಿಮೆಯ ಮೂಲಕ ಮಹತ್ವದ ಅನುಭಾವದ ನುಡಿಗಳನ್ನಾಡಿದ್ದಾನೆ. ಹೀಗಾಗಿ ಶರಣರಿಗೆ ಕಾಯಕವೆಂದರೆ ಅದು ಕೇವಲ ದುಡಿಮೆಯಾಗಿರಲಿಲ್ಲ. ಅದೊಂದು ಅನುಭಾವದ ಮಾರ್ಗವಾಗಿತ್ತು.

ಮುಂದುವರೆಯುತ್ತದೆ....

ಈ ಅಂಕಣದ ಹಿಂದಿನ ಬರಹಗಳು:
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಹಕ್ಕಿಯ ಹಾಡಿಗೆ ತಲೆದೂಗುವ ಸಡಗರ...

01-07-2022 ಬೆಂಗಳೂರು

“ಸಿಂಗಾಪುರದಲ್ಲಿ ಪಕ್ಷಿ ಸಾಕಣೆಯ ಮೂಲಗಳ ಕುರಿತ ಮಾಹಿತಿ ಅಸ್ಪಷ್ಟ. ಆದರೂ 1950ರ ದಶಕದಲ್ಲಿ ಬ್ರಿಟಿಷ್ ಸಶಸ್ತ್ರ ಪ...

ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದ...

30-06-2022 ಬೆಂಗಳೂರು

“ಹಸಿ ಮೈ ಹೊತ್ತ, ಅಲ್ಲಲ್ಲಿ ಪಾಚಿಗಟ್ಟಿದ, ಜಾರಿದರೆ ಸರಕ್ಕೆಂದು ನೆಲಕಚ್ಚಿಸುವ ಮೆಟ್ಟಿಲುಗಳನ್ನು ನಾಜೂಕಾಗಿಯೆ ಇಳ...

ಎ. ಎನ್. ಮೂರ್ತಿರಾಯರ - ದೇವರು; ವಾ...

29-06-2022 ಬೆಂಗಳೂರು

“ಚಿಕ್ಕಂದಿನಲ್ಲಿಯೇ ಮೊಳೆತ ದೇವರ ಅಸ್ತಿತ್ವದ ಕುರಿತಾದ ಅಪನಂಬಿಕೆ ಮೂರ್ತಿರಾಯರಲ್ಲಿ ಬಲಿತು ಬಲವಾಗುತ್ತದೆ. 90ನೇ ...