ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ

Date: 21-07-2022

Location: ಬೆಂಗಳೂರು


“ಗಂಗಾಂಬಿಕೆಯ ಸಾಧನೆ, ಆಕೆ ಬಸವಣ್ಣನ ಆದರ್ಶ ಪತ್ನಿಯಾಗಿದ್ದದ್ದು, ಬಸವಣ್ಣನ ಮಹಾಮನೆಯ ದಾಸೋಹದ ಜವಾಬ್ದಾರಿ ಹೊತ್ತದ್ದು ಇವೆಲ್ಲ ವಿಷಯಗಳು ಜನಪದ ಹಾಡುಗಳಲ್ಲಿ ಪ್ರಕಟವಾಗಿವೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ಗಂಗಾಂಬಿಕೆಯ ಜೀವನಚಿತ್ರವನ್ನು ಕಟ್ಟಿಕೊಡುವ ವಿವಿಧ ಉಲ್ಲೇಖಗಳನ್ನು ಪ್ರಸ್ತಾಪಿಸಿದ್ದಾರೆ.

ಗಂಗಾಂಬಿಕೆ ಬಸವಣ್ಣನವರ ಧರ್ಮಪತ್ನಿಯಾಗಿದ್ದು, ಈಕೆಯ ಜೀವಿತದ ಕಾಲ ಕ್ರಿ.ಶ.1160 ಆಗಿದೆ. ಗಂಗಾಬಿಂಕೆ, ಬಸವಣ್ಣನವರ ಸೋದರಮಾವ ಬಲದೇವನ ಮಗಳು. ಬಲದೇವನು, ಬಸವಣ್ಣನವರ ತಾಯಿಯಾಗಿದ್ದ ಮಾದಲಾಂಬಿಕೆಯ ಸೋದರ. ಹೀಗಾಗಿ ಗಂಗಾಂಬಿಕೆ ಬಸವಣ್ಣನವರಿಗೆ ಸೋದರಸೊಸೆಯಾಗಬೇಕು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಲದೇವನು, ತನ್ನ ಸೋದರಳಿಯ ಬಸವಣ್ಣನಿಗೆ ತನ್ನ ಮಗಳನ್ನು ಕೊಡಬೇಕೆಂದು ಮೊದಲಿನಿಂದಲೂ ಬಯಸಿದ್ದ. ಬಸವಣ್ಣನವರು ಈ ಸಂಬಂಧವನ್ನು ಒಪ್ಪಿಕೊಂಡ ಮೇಲೆ, ಗಂಗಾಂಬಿಕೆಯೊಂದಿಗೆ ಬಸವಣ್ಣನವರ ವಿವಾಹವಾಯಿತು.

"ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ ಎಂದು ಹೇಳಿದರಮ್ಮ ಎನ್ನ ಒಡೆಯರು."

- (ಸ.ವ.ಸಂ5, ವ-753 1993)

ಎಂದು ಗಂಗಾಂಬಿಕೆ ತನ್ನ ವಚನವೊಂದರಲ್ಲಿ ಉಲ್ಲೇಖಿಸಿರುವುದರಿಂದ ಈಕೆಗೆ ಚೆನ್ನಲಿಂಗನೆಂಬ ಮಗನಿದ್ದನೆಂದೂ, ನಂತರದಲ್ಲಿ ಆ ಬಾಲಕ ತೀರಿಹೋಗಿರಬೇಕೆಂದೂ ತಿಳಿದುಬರುತ್ತದೆ. ಗಂಗಾಂಬಿಕೆಯ ಜೀವನಚರಿತ್ರೆಯನ್ನು ಕಟ್ಟಿಕೊಳ್ಳುವಲ್ಲಿ ವಚನಕಾರರ ವಚನಗಳು, ಪುರಾಣಕಾವ್ಯಗಳು, ಆಧುನಿಕ ಕೃತಿಗಳು, ಜನಪದ ಕೃತಿಗಳು ಹೀಗೆ ಅನೇಕ ಆಕರಗಳಿವೆ. ಅದರಲ್ಲಿ ಮೊದಲನೆಯ ಆಕರವೆಂದರೆ ಶರಣರು ರಚಿಸಿರುವ ವಚನಗಳಾಗಿವೆ. ಗಂಗಾಂಬಿಕೆಯನ್ನು ಕುರಿತಂತೆ ಅಲ್ಲಮಪ್ರಭುಗಳ ಒಂದು ವಚನವಿದೆ. ಅದನ್ನು ನೋಡಿ, ನಂತರದಲ್ಲಿ ಪ್ರಕಟವಾಗಿರುವ ಪುರಾಣಕಾವ್ಯಗಳತ್ತ ಗಮನಹರಿಸಬಹುದಾಗಿದೆ.

"ಪತಿಯ ಸೇವಿಸಿ ಲಿಂಗಧ್ಯಾನದಲ್ಲಿಪ್ಪುದು ಅತ್ಯಂತ ಘನ
ಬಸವನ ಸತಿ ಸತಿಯಳಲ್ಲ, ಬಸವನ ಸತಿ ಲೋಕದ ಹೆಣ್ಣಲ್ಲ
ಬಸವನ ಸತಿ ಗುಹೇಶ್ವರ ಲಿಂಗದ ಪ್ರಾಣಲಿಂಗ ಕೇಳಾ ಮಡಿವಾಳಯ್ಯ"

- ಅಲ್ಲಮಪ್ರಭು

ಬಸವಣ್ಣನ ಸತಿ ಗಂಗಾಂಬಿಕೆಯು ಕೇವಲ ಬಸವಣ್ಣನ ಸತಿ ಮಾತ್ರವಾಗಿರದೆ, ಗುಹೇಶ್ವರಲಿಂಗದ ಪ್ರಾಣಲಿಂಗವಾಗಿದ್ದಾಳೆಂದು ಅಲ್ಲಮಪ್ರಭು ಮಡಿವಾಳ ಮಾಚಿದೇವನಿಗೆ ಹೇಳಿದ್ದಾನೆ. ಗಂಗಾಂಬಿಕೆಯ ವ್ಯಕ್ತಿತ್ವ ಸಾಧನೆ ಬಹುದೊಡ್ಡದೆಂದು ತಿಳಿಯಲಿಕ್ಕೆ ಈ ವಚನವು ಮುಖ್ಯ ಆಕರವಾಗಿದೆ.

ಹರಿಹರನ "ಬಸವರಾಜ ದೇವರ ರಗಳೆ"ಯಲ್ಲಿ ಗಂಗಾಂಬಿಕೆಯ ಪ್ರಸ್ತಾಪವಿದೆ. ಬಸವಣ್ಣನು, ತನ್ನ ಸೋದರಮಾವ ಬಲದೇವನ ಸಲಹೆಯಂತೆ ಕಲ್ಯಾಣಕ್ಕೆ ಬಂದು ಕಾರಣಿಕ ವೃತ್ತಿ ಪ್ರಾರಂಭಿಸುತ್ತಾನೆ. ತನ್ನ ಜಾಣ್ಮೆ ಸಾಧನೆಯಿಂದ ದಂಡನಾಯಕನಾಗುತ್ತನೆ. ಆಮೇಲೆ ಸುಶೀಲೆಯರಪ್ಪ ಗಂಗಾದೇವಿ, ಮಾಯಾದೇವಿಯರನ್ನು ಮದುವೆಯಾಗುತ್ತಾನೆಂದು ಹೇಳಲಾಗಿದೆ. ಹರಿಹರ ಹೇಳಿರುವ ಗಂಗಾದೇವಿಯೇ ಗಂಗಾಂಬಿಕೆಯಾಗಿದ್ದಾಳೆ, ಮಾಯಾದೇವಿಯೇ ನೀಲಾಂಬಿಕೆಯಾಗಿದ್ದಾಳೆ.

ಸಿಂಗಿರಾಜನು ತನ್ನ "ಅಮಲಬಸವ ಚಾರಿತ್ರ"ದಲ್ಲಿ ಶಿವನ ಜಟಾಜೂಟದಲ್ಲಿರುವ ಗಂಗೆ ಭುವಿಗವತರಿಸಿ ಬಸವನ ಪತ್ನಿಯಾದಳೆಂದು ಹೇಳಿದ್ದಾನೆ. ಬಸವಣ್ಣನ ಕೀರ್ತಿಯನ್ನು ಕೇಳಿದ ಬಲದೇವನು, ಭಾಗ್ಯವನ್ನು ಅಪ್ಪಿಕೊಳ್ಳುವಂತೆ ಬಸವಣ್ಣನನ್ನು ಅಪ್ಪಿಕೊಂಡನೆಂದು ಹೇಳಿದ್ದಾನೆ.

"ಗಂಗಾಧರ ಜಟಾಜೂಟದಿಂದಿಳಿದ ಭಾ ಗ್ಯಾಂಗನೆಯ ಭಾಗೀರಥಿನಾಮವೆಸೆವಮಲ ಗಂಗಾಂಬಿಕೆಯನು
ಸುತೆಯ ಸುಕೃತಕೊಪ್ಪಿಸುವೊಲು ಬಸವಂಗೊಪ್ಪಿಸುತ.."
- ಅಮಲ ಬಸವಚಾರಿತ್ರ

ಹೀಗೆ ಸಿಂಗಿರಾಜನು ಬಸವಣ್ಣ-ಗಂಗಾಂಬಿಕೆಯರ ಮದುವೆಯನ್ನು, ಶಿವ-
ಪಾರ್ವತಿಯರಿಗೆ ಹೋಲಿಸಿ, ಪವಾಡಕತೆಗಳನ್ನು ಹೇಳಿದ್ದಾನೆ.

ಭೀಮಕವಿಯ "ಬಸವಪುರಾಣ"ದಲ್ಲಿ, ಬಸವಣ್ಣ ತನ್ನ ಅಳಿಯನಾದರೆ ತಾನು ಧನ್ಯನಾದೆನೆಂದು ಬಲದೇವ ಭಾವಿಸಿರುವುದು ಪ್ರಕಟವಾಗಿದೆ. ಅದೇ ರೀತಿ ಲಕ್ಕಣ್ಣ ದಂಡೇಶನ-"ಶಿವತತ್ವ ಚಿಂತಾಮಣಿ" ಕೃತಿಯಲ್ಲಿ ಇದೇ ವಿಷಯದ ಪ್ರಸ್ತಾಪವಿದೆ. ಕೂಡಲ ಸಂಗಮದಲ್ಲಿದ್ದ ಬಸವಣ್ಣನ ಕೀರ್ತಿವಾರ್ತೆಯನ್ನು ಕೇಳಿದ ಬಲದೇವನು ಬಸವಣ್ಣನಿಗೆ ಪತ್ರ ಬರೆದು, ಕಲ್ಯಾಣಕ್ಕೆ ಕರೆಸಿಕೊಳ್ಳುತ್ತಾನೆ. ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಬಸವಣ್ಣನಿಗೆ ಕೊಟ್ಟು ಲಗ್ನ ಮಾಡುತ್ತಾನೆಂದು ಹೇಳಲಾಗಿದೆ.

"ಶರಣಲೀಲಾಮೃತ" ಕೃತಿಯಲ್ಲಿಯೂ ಇದೇ ವಿಷಯ ವ್ಯಕ್ತವಾಗಿದೆ. ಶಿವನು ತನ್ನ ಜಡೆಯಲ್ಲಿದ್ದ ಗಂಗೆಗೆ, ಬಲದೇವನ ಪುತ್ರಿಯಾಗಿ ಜನಿಸಬೇಕೆಂದೂ ಕಲ್ಯಾಣದಲ್ಲಿ ಬಸವಣ್ಣನ ಪತ್ನಿಯಾಗಬೇಕೆಂದೂ ಆಜ್ಞೆ ಮಾಡುತ್ತಾನೆ. ಈ ವಿಷಯ "ಶರಣಲೀಲಾಮೃತ"ದಲ್ಲಿ ಸ್ಪಷ್ಟವಾಗಿದೆ. ಗಂಗಾಂಬಿಕೆಯು ಘನಲಿಂಗಿ ರುದ್ರಮುನಿಗಳ ಶಿಷ್ಯಳಾಗಿದ್ದಳೆಂದು ತಿಳಿದು ಬರುತ್ತದೆ. ಗುರುಸೇವೆ, ಪತಿಭಕ್ತಿ, ಲಿಂಗನಿಷ್ಠೆಗಳಿಂದ ಆಕೆ ದೊಡ್ಡ ಸಾಧಕಳಾಗಿ ಬೆಳೆದಳೆಂದು ಈ ಪುರಾಣಕಾವ್ಯಗಳಲ್ಲಿ ಹೇಳಲಾಗಿದೆ.

ಬಸವಣ್ಣ-ಗಂಗಾಂಬಿಕೆಯರ ವಿವಾಹವನ್ನು ನಡುಗನ್ನಡದ ಪುರಾಣಕವಿಗಳು ವರ್ಣಿಸಿದ್ದಾರೆ. ಗಂಗಾಂಬಿಕೆ ಸುಂದರಿಯಾಗಿದ್ದಳು, ಧೈರ್ಯದಲ್ಲಿ ಭೂದೇವಿಗೆ ಸಮಾನವಾಗಿದ್ದಳು, ಸಂಪತ್ತಿನಲ್ಲಿ ಲಕ್ಷ್ಮಿಯಂತಿದ್ದಳು, ಜಾಣ್ಮೆಯಲ್ಲಿ ಭಾರತಿಯಂತಿದ್ದಳು, ರೂಪದಲ್ಲಿ ರತಿಯಂತಿದ್ದಳು, ಪಾತಿವ್ರತ್ಯದಲ್ಲಿ ಅರುಂಧತಿಯಂತಿದ್ದಳೆಂದು ವರ್ಣಿಸಲಾಗಿದೆ. ಬಸವಣ್ಣನ ಜತೆಯಲ್ಲಿ ಜತೆಯಾಗಿ ನಿಂತ ಗಂಗಾಂಬಿಕೆಯು ಬಹುದೊಡ್ಡ ಗೃಹಿಣಿಯಾಗಿದ್ದಳು, ಸಾಂಸಾರಿಕ ಜೀವನದ ಜತೆಗೆ ಬಸವಣ್ಣನ ಸಾಮಾಜಿಕ ಜೀವನದಲ್ಲಿಯೂ ಈಕೆ ಸಹಾಯಕಳಾಗಿದ್ದಳೆಂದು ಕವಿಗಳು ವರ್ಣಿಸಿದ್ದಾರೆ. ಬಸವಣ್ಣ

ಕಲ್ಯಾಣದಲ್ಲಿ ಚಳವಳಿಯನ್ನು ಪ್ರಾರಂಭಿಸಿದಾಗ ಹೆಗಲಿಗೆ ಹೆಗಲುಕೊಟ್ಟು ದುಡಿದ ಗಂಗಾಂಬಿಕೆ, ಬಸವಣ್ಣನ ಜೀವನದಲ್ಲಿ ಎಲೆಮರೆಯ ಹೂವಿನಂತಿದ್ದಳು. ಕಲ್ಯಾಣದಲ್ಲಿ ಬಸವಣ್ಣ ಅನೇಕ ಪರೀಕ್ಷೆಗಳನ್ನು, ಸವಾಲುಗಳನ್ನೆದುರಿಸುವ ಸಂದರ್ಭಗಳು ಬರುತ್ತವೆ. ಆ ಸಂದರ್ಭದಲ್ಲೆಲ್ಲಾ ಗಂಗಾಂಬಿಕೆ ಎದೆಗುಂದದೆ ಗಂಡನಿಗೆ ಧೈರ್ಯ ತುಂಬುತ್ತಿದ್ದಳು. ಸಮಸ್ಯೆ ಎಂತಹದೇ ಇದ್ದರೂ ಅದನ್ನು ಬಗೆಹರಿಸುತ್ತಿದ್ದಳೆಂದು ತಿಳಿದುಬರುತ್ತದೆ. ತನ್ನ ಮಗ ಬಾಲಕನಿದ್ದಾಲೇ ಸತ್ತು ಹೋದಾಗ ಎದೆಗುಂದದೆ ಗಂಗಾಂಬಿಕೆ ಚೆನ್ನಬಸವಣ್ಣನನ್ನೇ ತನ್ನ ಮಗನಂತೆ ನೋಡಿಕೊಳ್ಳುತ್ತಾಳೆ. ಅಲ್ಲಮಪ್ರಭುವಿನಂತಹ ಮಹಾ ಸಾಧಕನ ಮಾರ್ಗದರ್ಶನದಲ್ಲಿ ಪಕ್ವವಾದ ಗಂಗಾಂಬಿಕೆಯ ವ್ಯಕ್ತಿತ್ವ

ಬಹುದೊಡ್ಡದು. ಕಲ್ಯಾಣಕ್ರಾಂತಿಯ ನಂತರ ಬಸವಣ್ಣ ಸಂಗಮಕ್ಕೆ ಹೋಗುತ್ತಾನೆ. ಆದರೆ ಗಂಗಾಂಬಿಕೆ ಹಾಗೆ ಮಾಡದೆ, ಶರಣಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುತ್ತಾಳೆ. ಗುರು ಘನಲಿಂಗರುದ್ರಮುನಿಗಳ ಅಣತಿಯಂತೆ, ಮಡಿವಾಳ ಮಾಚಿದೇವ, ಚೆನ್ನಬಸವಣ್ಣನವರ

ನೇತೃತ್ವದಲ್ಲಿ ಸಿದ್ಧವಾದ ವೀರಪಡೆಯನ್ನು ಪ್ರೋತ್ಸಾಹಿಸುತ್ತಾಳೆ. ಮಡಿವಾಳ ಮಾಚಿದೇವನ ವ್ಯಕ್ತಿತ್ವವನ್ನು, ಆತನ ಶೌರ್ಯವನ್ನು ತನ್ನ ವಚನಗಳಲ್ಲಿ ಹೇಳಿರುವ ಗಂಗಾಂಬಿಕೆ, ಅವರು ಕಟ್ಟಿದ್ದ ವೀರಪಡೆಯನ್ನು ಬೆಳೆಸಲು ಮಾತೃರಕ್ಷಣೆ ನೀಡುತ್ತಾಳೆ. ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಶರಣರು ಮಲಪ್ರಭಾ ನದೀತೀರದ ಕಾದರವಳ್ಳಿಗೆ ಬರುತ್ತಾರೆ. ಉಳಿವಿಗೆ ಹೊರಟ ಈ ಶರಣ ಸಮೂಹ ಬಿಜ್ಜಳನ ಸೈನ್ಯದೊಂದಿಗೆ ಸೆಣಸುತ್ತದೆ. ಈ ಹೋರಾಟದಲ್ಲಿ ವೀರವನಿತೆಯಂತೆ ಭಾಗವಹಿಸಿದ್ದ ಗಂಗಾಂಬಿಕೆ ಅಲ್ಲಿಯೇ ವೀರಮರಣವನ್ನಪ್ಪುತ್ತಾಳೆ. ಅಲ್ಲಿಯೇ ಸಮೀಪದ ಮಗುಟಖಾನ ಹುಬ್ಬಳ್ಳಿಯಲ್ಲಿ ಈಕೆ ಐಕ್ಯಳಾದಳೆಂದು ಫ.ಗು.ಹಳಕಟ್ಟಿಯವರು ಹೇಳಿದ್ದಾರೆ. ಮಗಟಖಾನ ಹುಬ್ಬಳ್ಳಿ ಸಮೀಪ ಮಲಪ್ರಭಾ ನದಿಯ ಎಡದಂಡೆಯ ಮೇಲೆ ಈಕೆಯ ಸಮಾಧಿ ಇಂದಿಗೂ ಸ್ಮಾರಕವಾಗಿ ಉಳಿದಿದೆ.

"ಗಂಗಾಂಬಿಕೆ ತಾಯಿ ಗುಂಗೆಲ್ಲಾ ಶಿವನಲ್ಲಿ ಗಂಗ್ಯಾಗಿ ಹರದಾಳೆ ಕಲ್ಯಾಣಕೆ | "
-(ಡಾ.ನೀಲಾಂಬಿಕೆ ಶೇರಿಕಾರ ಸಂಗ್ರಹ)

ಇಂತಹ ಅನೇಕ ಜನಪದ ತ್ರಿಪದಿಗಳಲ್ಲಿ ಗಂಗಾಂಬಿಕೆ ಕಾಣಿಸಿಕೊಂಡಿದ್ದಾಳೆ. ಗಂಗಾಂಬಿಕೆಯ ಸಾಧನೆ, ಆಕೆ ಬಸವಣ್ಣನ ಆದರ್ಶ ಪತ್ನಿಯಾಗಿದ್ದದ್ದು, ಬಸವಣ್ಣನ ಮಹಾಮನೆಯ ದಾಸೋಹದ ಜವಾಬ್ದಾರಿ ಹೊತ್ತದ್ದು ಇವೆಲ್ಲ ವಿಷಯಗಳು ಜನಪದ ಹಾಡುಗಳಲ್ಲಿ ಪ್ರಕಟವಾಗಿವೆ.

"ಕಾದರೊಳ್ಳಿಯ ಮುಂದ ಕಾದಿದರು ಜಂಗಮರು ಕಾದಿ ಹಿಮ್ಮೆಟ್ಟಿ ಜನರನ್ನು | ಮುರಗೋಡ ಹಾದಿಯೊಳು ಮಡಿದ ಮಾಚಯ್ಯ"
- (ಡಾ.ಗದ್ದಗಿಮಠ - ಹಂತಿಯ ಹಾಡುಗಳು)

ಈ ತ್ರಿಪದಿಯಲ್ಲಿ ಮುರಗೋಡ ಹಾದಿಯಲ್ಲಿ ಮಡಿದ, ಮಡಿವಾಳ ಮಾಚಯ್ಯನ ಪ್ರಸ್ತಾಪವಿದೆ. ಮಡಿವಾಳ ಮಾಚಯ್ಯ ಮತ್ತು ಗಂಗಾಂಬಿಕೆ ಜೊತೆಯಲ್ಲಿಯೇ ಹೊರಟಿದ್ದರು. ಮುರಗೋಡ ಹಾದಿಯಲ್ಲಿ ಮಾಚಯ್ಯ ಮಡಿದರೆ, ಮಗುಟಖಾನ ಹುಬ್ಬಳ್ಳಿಯಲ್ಲಿ ಗಂಗಾಂಬಿಕೆ ನಿಧನಳಾಗುತ್ತಾಳೆ. ಹೀಗೆ ಕೆಲವು ಸಂಗತಿಗಳು ಮಾತ್ರ ಜನಪದ ಹಾಡುಗಳಿಂದ ತಿಳಿಯುತ್ತವೆಯೇ ಹೊರತು ಶರಣರ ಸಮಗ್ರ ಚರಿತ್ರೆಯನ್ನು ಯಾವ ಕೃತಿಗಳೂ ಹೇಳುವುದಿಲ್ಲ.

ಬಸವಣ್ಣನವರನ್ನು ಕುರಿತು ಆಧುನಿಕ ಸಾಹಿತ್ಯದಲ್ಲಿ ಅನೇಕ ಕಾದಂಬರಿಗಳು, ನಾಟಕಗಳು ಪ್ರಕಟವಾಗಿದೆ. ಆ ಎಲ್ಲ ಕೃತಿಗಳಲ್ಲಿಯೂ ಗಂಗಾಂಬಿಕೆಯ ಪಾತ್ರ ಪ್ರಮುಖವಾಗಿ ಕಾಣಿಸಿಕೊಂಡಿದೆ. ಆಧುನಿಕ ಕೃತಿಗಳು ಕೂಡ ಶರಣರ ಚರಿತ್ರೆಯನ್ನು ಹೇಳಲಾರವು. ಅವುಗಳಿಗೆ ಶರಣರ ಚರಿತ್ರೆ ಹೇಳುವುದು ಮುಖ್ಯವಾಗಿರದೆ, ಅವರ ಸಾಧನೆಯನ್ನು ಹೇಳುವುದು ಮುಖ್ಯವಾಗುತ್ತದೆ. ಗಂಗಾಂಬಿಕೆ, ಶರಣರ ಚರಿತ್ರೆಯಲ್ಲಿ ಅಮರಳಾಗಿದ್ದಾಳೆ. ಆದರ್ಶ ಪತ್ನಿಯಾಗಿ, ಶರಣ ಸಂಕುಲದ ತಾಯಿಯಾಗಿ, ಮಹಾಮನೆಯ ಕೇಂದ್ರವಾಗಿ ಗಂಗಾಂಬಿಕೆ ತನ್ನದೇ ಆದ ಸಾಧನೆಯನ್ನು ಮಾಡಿದ್ದಾಳೆ.

ಗಂಗಾಂಬಿಕೆಯ ಒಂಬತ್ತು ವಚನಗಳು ಪ್ರಕಟವಾಗಿವೆ. "ಗಂಗಾಪ್ರಿಯ ಕೂಡಲಸಂಗ" ಎಂದು ಈಕೆಯ ವಚನಾಂಕಿತವಾಗಿದೆ. ಇಲ್ಲಿಯ ಐದು ವಚನಗಳಲ್ಲಿ ಮಗನ ಅಗಲಿಕೆಯ ವಿಷಯವೇ ಅಭಿವ್ಯಕ್ತಿಯಾಗಿದೆ. "ಒಂದು ಹಾಳಭೂಮಿಯಲಿ ಹುಲಿ ಬಂದು ಎನ್ನ ಎಳಗರುವ ಭಕ್ಷಿಸಿತಲ್ಲಾ" "ಫಲವಿಲ್ಲದ ಕಂದನಿರ್ಪನವಳಿಗೆ, ಎನಗೆ ಫಲವಿಲ್ಲ ಕಂದನಿಲ್ಲ" ಇಂತಹ ವಚನದ ಸಾಲುಗಳಲ್ಲಿ ಗಂಗಾಂಬಿಕೆಯ ಪುತ್ರ ಸಂತಾಪ ಸ್ಪಷ್ಟವಾಗಿ ಕಾಣಿಸುತ್ತದೆ.

ಕಲ್ಯಾಣವನ್ನು ಬಿಟ್ಟು ಹೋಗುವಾಗ ಮಡಿವಾಳ ಮಾಚಯ್ಯ ಬರುತ್ತಾನೆ, ಹೀಗಾಗಿ ಆತನನ್ನು ಕುರಿತಂತೆ ಒಂದು ವಚನವಿದೆ. ಇನ್ನು ಬಸವಣ್ಣನನ್ನು ಕುರಿತಂತೆ ಒಂದೆರಡು ವಚನಗಳಿವೆ. ಬಸವಣ್ಣನು ಮಾದರಸ-ಮಾದಲಾಂಬಿಕೆಯರ ಮಗನೆಂಬುದು ಈಕೆಯ ವಚನದಿಂದ ಸ್ಪಷ್ಟವಾಗುತ್ತದೆ. ಬಸವಣ್ಣ ಮಾದಾರ ಚೆನ್ನಯ್ಯನ ಮಗನಿರಬಹುದೆ? ಎಂಬಂತಹ ಕೆಲವು ಅರೆವಿದ್ವಾಂಸರ ಸಂಶಯಕ್ಕೆ ಗಂಗಾಂಬಿಕೆಯ ಈ ವಚನ ಸ್ಪಷ್ಟಸಾಕ್ಷಿಯಾಗಿ ನಿಂತುಕೊಂಡಿದೆ.

"ಸಾಂದ್ರವಾಗಿ ಹರಗಣಭಕ್ತಿಯ ಮಾಳ್ವನೆಂತೊ ಮಾದಲಾಂಬಿಕಾನಂದನನು?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯನೋಳ್ಪನೆಂತೊ ಮಾದರಸನ ಮೋಹದ ಮಗನು?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ
ಗಂಗಾಪ್ರಿಯ ಕೂಡಲಸಂಗನ ಶರಣಚೆನ್ನ?"

- (ಸ.ವ.ಸಂ.5, ವ-761, ಪುಟ:240, 1993)

ಸಾಂದ್ರ ಎಂದರೆ ತೀವ್ರವಾದ-ಉತ್ಕಟವಾದ ಎಂಬರ್ಥವಿದೆ. ಬಸವಣ್ಣನ ಭಕ್ತಿ ಉತ್ಕಟವಾಗಿತ್ತು, ಬಿಜ್ಜಳನರಮನೆಯ ನ್ಯಾಯ ನಡೆಸುವುದು ಅಷ್ಟೇ ವೇಗವಾಗಿತ್ತು, ಲಿಂಗಾರ್ಚನೆ ಮಾಡುವುದೂ ಕೂಡ ಅಷ್ಟೇ ಉತ್ಕಟವಾಗಿತ್ತೆಂದು ಗಂಗಾಂಬಿಕೆಯು ಈ ವಚನದಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾಳೆ. ಈಕೆಯ ವಚನಗಳು ಆಪ್ತವಾಗಿವೆ, ಆತ್ಮೀಯವೆನಿಸುತ್ತವೆ.

ಮುಂದುವರಿಯುವುದು…

ಈ ಅಂಕಣದ ಹಿಂದಿನ ಬರೆಹಗಳು:
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...