ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

Date: 23-05-2022

Location: ಬೆಂಗಳೂರು


'ಆತ್ಮ-ಪರಮಾತ್ಮನಾಗುವದೆಂದರೆ, ಅದು ನದಿಯಲ್ಲಿ ನದಿಬೆರೆತಂತೆ ನೈಸರ್ಗಿಕವಾದುದಾಗಿದೆ. ಅಂತರಂಗ-ಬಹಿರಂಗವೆಂಬ ಭೇದಗಳನ್ನು ಕಳೆದುಕೊಳ್ಳುವದಾಗಿದೆ. ಭಿನ್ನತೆ ದೂರವಾದಾಗ ಐಕ್ಯತೆ ಲಭಿಸುತ್ತದೆ. ಈ ಸ್ಥಲದಲ್ಲಿ ನಾನು ಎಂಬ ಅಹಂ ಪ್ರಜ್ಞೆ ಅಳಿದು ಹೋಗಿ ನಾವು ಎಂಬ ಹೃದಯವೈಶಾಲ್ಯತೆ ಕಾಣಿಸುತ್ತದೆ' ಎನ್ನುತ್ತಾರೆ ಹಿರಿಯ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣಧರ್ಮ ಅಂಕಣದಲ್ಲಿ ಷಟ್ ಸ್ಥಲಗಳಲ್ಲಿ ಕೊನೆಯದಾದ ಐಕ್ಯಸ್ಥಲದ ಕುರಿತು ವಿಶ್ಲೇಷಿಸಿದ್ದಾರೆ.

ಷಟ್‍ಸ್ಥಲಗಳಲ್ಲಿ ಇದು ಕೊನೆಯ ಸ್ಥಲವಾಗಿದೆ. ಇಲ್ಲಿ ಐಕ್ಯವೆಂದರೆ ಆತ್ಮನು ಪರಮಾತ್ಮನಲ್ಲಿ ಲೀನವಾಗುವುದೆಂದರ್ಥ. ದ್ವೈತ ಭಾವವಳಿದು ಅದ್ವೈತಭಾವ ಮೂಡಿ ನರ ಹರನಾಗುವದೇ ಐಕ್ಯಸ್ಥಲದ ವಿಶಿಷ್ಟತೆಯಾಗಿದೆ. ಇಲ್ಲಿಯ ಸಾಧಕನಿಗೆ ಪೂಜೆ-ಧ್ಯಾನ-ಯೋಗಗಳೇ ಅಗತ್ಯ ಇರುವುದಿಲ್ಲ. ಜೀವನಾಗಿದ್ದವನು, ಶಿವನಾಗುವುದೇ ಐಕ್ಯಸ್ಥಲ. 13ನೇ ಶತಮಾನದಲ್ಲಿ ಹುಟ್ಟಿಕೊಂಡ ವೀರಶೈವ ಧರ್ಮಾಚರಣೆಗಳಲ್ಲಿ ನಿಧನರಾದವರನ್ನು ಲಿಂಗೈಕ್ಯರಾದರೆಂದು ಕರೆಯಲಾಗುತ್ತದೆ. ಆದರೆ ಶರಣರು ಹೇಳಿದ ಐಕ್ಯಸ್ಥಲವು ಜೀವ-ದೇವನಾಗಿ ಬೆಳೆದ ಸಂಭ್ರಮದ ಸ್ಥಲವಾಗಿದೆ.

ಆತ್ಮ-ಪರಮಾತ್ಮನಾಗುವದೆಂದರೆ, ಅದು ನದಿಯಲ್ಲಿ ನದಿಬೆರೆತಂತೆ ನೈಸರ್ಗಿಕವಾದುದಾಗಿದೆ. ಅಂತರಂಗ-ಬಹಿರಂಗವೆಂಬ ಭೇದಗಳನ್ನು ಕಳೆದುಕೊಳ್ಳುವದಾಗಿದೆ. ಭಿನ್ನತೆ ದೂರವಾದಾಗ ಐಕ್ಯತೆ ಲಭಿಸುತ್ತದೆ. ಈ ಸ್ಥಲದಲ್ಲಿ ನಾನು ಎಂಬ ಅಹಂ ಪ್ರಜ್ಞೆ ಅಳಿದು ಹೋಗಿ ನಾವು ಎಂಬ ಹೃದಯವೈಶಾಲ್ಯತೆ ಕಾಣಿಸುತ್ತದೆ. ತಾನೇ-ಸಮಾಜವಾಗುವುದು ಲೌಕಿಕದ ಪರಿಭಾಷೆಯಾಗಿದೆ. ಸಕಲಜೀವಗಳಿಗೆ ಲೇಸನ್ನೇ ಬಯಸುವ ಉದಾರ ಮನಸ್ಸು ಇಲ್ಲಿ ಕಾಣ ಸಿಕೊಳ್ಳುತ್ತದೆ. ಇಲ್ಲಿ ಸಮರಸ ಭಕ್ತಿಯೇ ಸ್ಥಾಯಿಯಾಗಿದೆ.

‘ಜನನ-ಮರಣ ವಿರಹಿತನಾಗದನ್ನಕ್ಕ ಐಕ್ಯನೆಂತೆಂಬೆನಯ್ಯಾ’ ಎಂದು ಪ್ರಶ್ನಿಸಿರುವ ಬಸವಣ್ಣನವರು ಸರ್ವಾಂಗಗಳಲ್ಲಿರುವ ಹೊಲಸನ್ನು ತೊಳೆದುಕೊಂಡು ಒಳಗಿನ ಕಸವನ್ನು ತೆಗೆದು ಹಾಕಿದಾಗ ಮಾತ್ರ ಕೂಡಲಸಂಗಮದೇವನನ್ನು ಕೂಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ನಿಜವಾದ ಐಕ್ಯಸ್ಥಲವೆಂದು ಹೇಳಿದ್ದಾರೆ.

“ಕೈಯಲ್ಲಿ ಮುಟ್ಟಿದ ಪದಾರ್ಥ ಕೈಯೊಳಗೆ ಐಕ್ಯ
ಕಂಗಳು ತಾಗಿದ ಪದಾರ್ಥ ಕಂಗೊಳೈಕ್ಯ
ನಾಲಿಗೆ ತಾಗಿದ ಪದಾರ್ಥ ನಾಲಿಗೆದೊಳಗೈಕ್ಯ
ನೀಡುವ ಪರಿಚಾರಕರು ಬೇಸತ್ತರಲ್ಲದೆ,
ಆರೋಗಣೆಯ ಮಾಡುವ ದೇವನೆತ್ತಲೆಂದರಿಯನು
ಬ್ರಹ್ಮಾಂಡವನೊಡಲೊಳಗಡಗಿಸಿಕೊಂಡು ಬಂದ ದೇವಂಗೆ
ಆರೋಗಣೆಯ ಮಾಡಿಸಿಹಿನೆಂಬ ಅಹಂಕಾರದಲ್ಲಿ ಇದ್ದೆನಾಗಿ
ನಾನು ಕೆಟ್ಟ ಕೇಡನೇನೆಂಬೆನಯ್ಯಾ?....”
-ಬಸವಣ್ಣ(ಸ.ವ.ಸಂ.1,1165)

ಈ ವಚನದಲ್ಲಿ ಬಸವಣ್ಣನವರು ಐಕ್ಯಸ್ಥಲದ ವೈವಿದ್ಯತೆಯನ್ನು ಗುರುತಿಸಿದ್ದಾರೆ. ಪಂಚೇಂದ್ರಿಯಗಳ ಮೂಲಕ ಕಾಣ ಸಿಕೊಳ್ಳುವ ಪದಾರ್ಥಗಳು ಪಂಚೇಂದ್ರಿಯಗಳಲ್ಲಿಯೇ ಐಕ್ಯವಾಗುವ ಸ್ಥಿತಿಯನ್ನು ತಿಳಿಸಿದ್ದಾರೆ. ಎರಡಿಲ್ಲದ ಐಕ್ಯಂಗೆ ಒಳಹೊರಗೆಂಬುದಿಲ್ಲವೆಂದು ಹೇಳಿರುವ ಅಲ್ಲಮಪ್ರಭುಗಳು, ‘ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿಯೆಂತು ಹೇಳಾ ಸಂಗನಬಸವಣ್ಣ?’ ಎಂದು ಬಸವಣ್ಣನವರನ್ನು ಪ್ರಶ್ನಿಸಿದ್ದಾರೆ.

“ಹಸಿವು, ತೃಷೆ,ವಿಷಯ,ವ್ಯಸನ ಈ ನಾಲ್ಕು ಉಳ್ಳವರು
ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ?
ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲಿ
ಅರಿದನಾದಡೆ ಹಸಿವ ಮೀರಿ ಉಂಬ, ತೃಷೆಯ ಮೀರಿ ಕೊಂಬ
ವಿಷತವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ
ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು
ಎನ್ನಮನ ನಾಚಿತ್ತು ಗುಹೇಶ್ವರಾ”
-ಅಲ್ಲಮಪ್ರಭು(ಸ.ವ.ಸಂ.2,ವ:1622)

ಗುಹೇಶ್ವರಲಿಂಗದಲ್ಲಿ ಐಕ್ಯವಾಗಬೇಕಾದರೆ, ಹಸಿವು, ತೃಷೆ, ವಿಷಯ, ವ್ಯಸನಗಳನ್ನು ತೊರೆಯಬೇಕಾಗುತ್ತದೆಂದು ತಿಳಿಸಿರುವ ಪ್ರಭುಗಳು ಲಿಂಗೈಕ್ಯಸ್ಥಲ ಅಷ್ಟೊಂದು ಸುಲಭವಾದದ್ದಲ್ಲವೆಂದು ಹೇಳಿದ್ದಾರೆ. ಅರಿಯುವದು ಬೇರೆ, ಆಚರಿಸುವುದು ಬೇರೆ, ಅರಿದರಿದು ಆಚರಿಸಲರಿಯದ ಕಾರಣ ಅವರು ಲಿಂಗೈಕ್ಯರಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಸಾಧಕನಾದವನು ಕರ್ಪುರದ ಗಿರಿಯನು ಉರಿತಾಗಿದಂತೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾಗುತ್ತಾನೆಂದು ಹೇಳಿರುವ ಚೆನ್ನಬಸವಣ್ಣನವರು, ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರಯ್ಯಾ? ಎಂದು ಪ್ರಶ್ನಿಸಿದ್ದಾರೆ. ಆಕಾರ-ನಿರಾಕಾರಗಳೆಂಬ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯನೆಂದು ಹೇಳಿರುವ ಅವರು ‘ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ’ ವೆಂದು ತಿಳಿಸಿದ್ದಾರೆ.

“ಐಕ್ಯಂಗೆ ಆತ್ಮನೇ ಅಂಗ, ಆ ಅಂಗಕ್ಕೆ ಸದ್ಭಾವವೇ ಹಸ್ತ
ಆ ಹಸ್ತಕ್ಕೆ ಮಹಾಸಾದಾಖ್ಯ, ಆ ಸಾದಾಖ್ಯಕ್ಕೆ ಚಿಚ್ಛಕ್ತಿ
ಆ ಶಕ್ತಿಗೆ ಮಹಾಲಿಂಗ ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ
ಆ ಕಲೆಗೆ ಹೃದಯೇಂದ್ರಿಯವೆ ಮುಖ
ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು ಸಮರಸ ಭಕ್ತಿಯಿಂದರ್ಪಿಸಿ
ಆ ಸುಪರಿಣಾಮ ಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ, ನಿಮ್ಮ ಲಿಂಗೈಕ್ಯನು”
-ಚೆನ್ನಬಸವಣ್ಣ(ಸ.ವ.ಸಂ.3,ವ:1095)

ಮೊದಲು ದೇಹ ಅಂಗವಾಗಿರುತ್ತದೆ. ಐಕ್ಯಸ್ಥಿತಿ ತಲುಪಿದ ಮೇಲೆ ಆತ್ಮವೇ ಅಂಗವಾಗುತ್ತದೆ. ಲಿಂಗೈಕ್ಯನು ಸುಪರಿಣಾಮ ಪ್ರಸಾದವ ಭೋಗಿಸಿ ಸುಖಿಸುತ್ತಿಹನೆಂದು ಚೆನ್ನಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ. ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲವೆಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು, ಗುರುವಿನ ಕುರುಹ ಕಂಡು ಗುರುಸ್ವರೂಪನಾಗಿ ಪರಮಾತ್ಮನಲ್ಲಿ ಐಕ್ಯವ ಗಳಿಸಬೇಕೆಂದು ತಿಳಿಸಿದ್ದಾರೆ. ಐಕ್ಯಸ್ಥಲ ಹೊಂದಿದ ಸಾಧಕ ದಿವ್ಯಜ್ಞಾನಿಯಾಗುತ್ತಾನೆಂದು ಅವಸರದ ರೇಕಣ್ಣಗಳು ಹೇಳಿದರೆ, ಜೀವವಿದ್ದು ಜೀವವಿಲ್ಲ, ಜೀವ ಪರಮನಲ್ಲಿ ಐಕ್ಯವಾಯಿತೆಂದು ತಿಳಿಸಿರುವ ಆದಯ್ಯನವರು, ಶರಣರನ್ನು ‘ಉಂಡುಪವಾಸಿಗಳು, ಬಳಸಿಬ್ರಹ್ಮಚಾರಿಗಳು’ ಎಂದು ಕರೆದಿದ್ದಾರೆ.

“ಹುಸಿಯಿಲ್ಲದಿರ್ದಡೆ ಭಕ್ತನೆಂಬೆ!
ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ!
ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ!
ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ!
ಆಶೆಯಿಲ್ಲದಿರ್ದಡೆ ಶರಣನೆಂಬೆ
ಈ ಐವರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ”
-ಗಣೇಶ ಮಸಣಯ್ಯ(ಸ.ವ.ಸಂ.7,ವ:261)

ಷಟ್‍ಸ್ಥಲಗಳ ಸಾಧಕನಾಗಬೇಕಾದರೆ ಏನನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಗಜೇಶ ಮಸಣಯ್ಯನವರು ಈ ವಚನದ ಮೂಲಕ ವಿವರಿಸಿದ್ದಾರೆ. ಕಿರಣದೊಳಗಿನ ಸುರಂಗದಂತೆ, ಬೀಜದೊಳಗಿನ ವೃಷಕದಂತೆ, ಆತ್ಮನು ಪರಮಾತ್ಮನಲ್ಲಿ ಐಕ್ಯವಾಗಿದೆಯೆಂದು ಗುಪ್ತಮಂಚಣ್ಣನವರು ತಿಳಿಸಿದ್ದಾರೆ.

“ಚಿನ್ನದೊಳಗಣ ಬಣ್ಣದಂತೆ
ಬಣ್ಣನುಂಗಿದ ಬಂಗಾರದಂತೆ
ಅನ್ಯಭಿನ್ನವಿಲ್ಲದ ಲಿಂಗೈಕ್ಯವು
ಲಿಂಗ ಅಂಗವಾದಲ್ಲಿ, ಅಂಗ ಲಿಂಗವಾದಲ್ಲಿ
ಹಿಂಗದಭಾವ ಚಿನ್ನ ಬಣ್ಣದ ತೆರ
ಇದು ಪ್ರಾಣಲಿಂಗ ಯೋಗ, ಸ್ವಾನುಭಾವ ಸಮ್ಮತ
ಇದು ಅಂಗಲಿಂಗ ಯೋಗ, ಪ್ರಾಣಲಿಂಗ ಪ್ರಣವ
ಉಭಯನಾಶನ ಐಕ್ಯಲೇಪ
ನಾರಾಯಣಪ್ರಿಯ ರಾಮನಾಥಾ”
- ಗುಪ್ತಮಂಚಣ್ಣ(ಸ.ವ.ಸಂ.7,ವ:333)

ಈ ವಚನದಲ್ಲಿ ಗುಪ್ತಮಂಚಣ್ಣನವರು ಯಾವ ವಸ್ತುನಿನಲ್ಲಿ ಯಾವುದು ಐಕ್ಯವಾಗಿದೆಯೆಂದು ತಿಳಿಸುತ್ತ ಉಭಯನಾಶವೇ ಐಕ್ಯಲೇಪವೆಂದು ಹೇಳಿದ್ದಾರೆ. ಸರ್ವಮಯವಾದ ಐಕ್ಯನಾಭಾವಿಗೆ ಅಂಡಪಿಂಡ-ಬ್ರಹ್ಮಾಂಡ, ಆಕಾಶ-ಆತ್ಮನೆಂದುಂಟೆ? ಎಂದು ಘಟ್ಟಿವಾಳಯ್ಯನವರು ಕೇಳಿದರೆ, ಐಕ್ಯಸ್ಥಲವು ವಿಶ್ವೇಶ್ವರಯ್ಯ ಲಿಂಗದ ಒಳಗಿನಾಟವೆಂದು ತುರುಗಾಹಿ ರಾಮಣ್ಣನವರು ತಿಳಿಸಿದ್ದಾರೆ. ಪೃಥ್ವಿ, ಅಪ್ಪು, ತೇಜ,ವಾಯು, ಆಕಾಶ ತತ್ವಗಳಿಂದ ಕ್ರಮವಾಗಿ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರುಸ್ಥಲಗಳು ಜೋಡಣೆಯಾಗಿವೆಯೆಂದು ದಾಸೋಹದ ಸಂಗಣ್ಣನವರು ಸ್ಪಷ್ಟಪಡಿಸಿದ್ದಾರೆ.

ತ್ರಿವಿಧಸ್ಥಲದಂತೆ ಇರುವದು, ಐಕ್ಯನ ಅರ್ಪಿತಸ್ಥಲಭೇದವೆಂದು ಪ್ರಸಾದಿಭೋಗಣ್ಣನವರು ತಿಳಿಸಿದ್ದಾರೆ. ಭಕ್ತ-ಬ್ರಹ್ಮತತ್ವವಾಗಿ, ಮಾಹೇಶ್ವರ-ವಿಷ್ಣುತತ್ವವಾಗಿ, ಪ್ರಸಾದಿ-ರುದ್ರತತ್ವವಾಗಿ, ಪ್ರಾಣಲಿಂಗಿ-ಈಶ್ವರತತ್ವವಾಗಿ, ಶರಣ-ಸದಾಶಿವತತ್ವವಾಗಿ ಐಕ್ಯ-ಮಹಾಭೇದತತ್ವವಾಗಿದೆಯೆಂದು ಪ್ರಸಾದಿಭೋಗಣ್ಣನವರು ತಮ್ಮ ಈ ವಚನದಲ್ಲಿ ಹೇಳಿದ್ದಾರೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...