ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು

Date: 12-09-2022

Location: ಬೆಂಗಳೂರು


ಶರಣರು ಧಾರ್ಮಿಕ ಕ್ಷೇತ್ರದಿಂದ ಪ್ರವೇಶಿಸಿ, ರಾಜಕೀಯ ಕ್ಷೇತ್ರವನ್ನು ಪವಿತ್ರಗೊಳಿಸಲು ಪ್ರಯತ್ನಿಸಿದರು, ರಾಜ್ಯಾಧಿಕಾರವನ್ನು ಹಿಡಿಯದೆಯೇ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಭಾರತದ ಯಾವುದೇ ಧರ್ಮವೂ ಇಂತಹ ಕೆಲಸಕ್ಕೆ ಕೈಹಾಕಿರಲಿಲ್ಲ. ಭಾರತದ ಯಾವುದೇ ಚಳವಳಿಯೂ ಇಂತಹ ಧಾರ್ಮಿಕ ನೆಲೆಗಟ್ಟನ್ನು ಹೊಂದಿರಲಿಲ್ಲ. ಶರಣರಿಗೆ ಧಾರ್ಮಿಕ-ರಾಜಕೀಯ-ಸಾಮಾಜಿಕ ಬೇರೆ ಬೇರೆಯಾಗಿ ಕಾಣಿಸಲೇ ಇಲ್ಲ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಅವ್ತತಿನ ಸಮಸಮಾಜದ ಕನಸಿನ ಕುರಿತು ವಿವರಿಸಿದ್ದಾರೆ.

ವರ್ಣಹೋರಾಟದ ಹಾಗೆ, ಶರಣರಲ್ಲಿ ವರ್ಗಹೋರಾಟದ ಸಿದ್ಧಾಂತಗಳು ಸ್ಪಷ್ಟವಾಗಿರಲಿಲ್ಲ. ಅರಸನ ವಿರುದ್ಧ, ಅರಸೊತ್ತಿಗೆಯ ವಿರುದ್ಧ ಕೆಲವು ಮಾತುಗಳಿವೆಯಾದರೂ, ಅರಸೊತ್ತಿಗೆಯನ್ನೇ ಬದಲಿಸುವುದು ಅವರ ಉದ್ದೇಶವಾಗಿರಲಿಲ್ಲ. ಸ್ವತಃ ಬಸವಣ್ಣನವರೇ ಅರಸೊತ್ತಿಗೆಯ ಭಾಗವಾಗಿದ್ದರು. ರಾಜ-ಮಹಾರಾಜರ ಆಳ್ವಿಕೆಯ ಆ ಕಾಲದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. ಅರಸೊತ್ತಿಗೆಯನ್ನು ಕಿತ್ತೊಗೆದು ಗಣಪರಿಷತ್ತಿನ ಹಾಗಿರುವ ಮತ್ತೊಂದು ಪರ್ಯಾಯ ವ್ಯವಸ್ಥೆಯನ್ನು ಕಟ್ಟುವುದೂ ಶರಣರ ಉದ್ದೇಶವಾಗಿರಲಿಲ್ಲ. ರಾಜನೇ ಪ್ರತ್ಯಕ್ಷ ದೇವತೆಯಾಗಿದ್ದ ಆ ಕಾಲಘಟ್ಟದಲ್ಲಿ ಪ್ರಜೆಗಳ ಬಗೆಗೆ, ಸಾಮಾನ್ಯರ ಬಗೆಗೆ ಚಿಂತನೆಯೇ ನಡೆದಿರಲಿಲ್ಲ. ಅಂದಿನ ವಾಸ್ತವ ಹಾಗಿದ್ದಾಗ ಅರಸೊತ್ತಿಗೆಗೆ ಪರ್ಯಾಯವಾಗಿ ಹೊಸ ರಾಜವ್ಯವಸ್ಥೆಯನ್ನು ರಾಜ್ಯಾಡಳಿತವನ್ನು ಕಟ್ಟಬೇಕೆಂಬ ಉದ್ಧೇಶ ಅವರದಾಗಿರಲಿಲ್ಲ. ಸಮಾಜವಾದಿ ಚಿಂತನೆಯ ಪ್ರಜಾಸತ್ಮಾತ್ಮಕ ಪರಿಕಲ್ಪನೆಗಳೇ ಆಗ ಬೆಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಸಮ ಸಮಾಜ ಕಟ್ಟುವ ಹೊಸ ಕನಸೊಂದನ್ನು ಕಂಡರು. ಶರಣರು 12ನೇ ಶತಮಾನದಲ್ಲಿ ಕಂಡ ಕನಸೇ ಮುಂದೆ 16ನೇ ಶತಮಾನದ ಹೊತ್ತಿಗೆ ಫ್ರೆಂಚ್ ಕ್ರಾಂತಿಗೆ ಕಾರಣವಾಯಿತು. ನಂತರದ ಶತಮಾನಗಳಲ್ಲಿ ಪ್ರಜಾಸತ್ತಾತ್ಮಕ ಚಿಂತನೆಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಆಮೇಲೆ, ಕಾರ್ಲ್‍ಮಾರ್ಕ್ಸ್‌, ಮಾವೊ ಅವರ ಸಮಾಜವಾದಿ ಸಿದ್ಧಾಂತಗಳ ಪರಿಚಯವಾಯಿತು.

ಬುದ್ಧನ ಕಾಲದಲ್ಲಿದ್ದ ಗಣಪರಿಷತ್ ಪರಿಕಲ್ಪನೆ ಬಸವಣ್ಣನವರು ಕಟ್ಟಬಯಸಿದ ಸಮಸಮಾಜದ ಕನಸು ನಂತರದ ಶತಮಾನಗಳಲ್ಲಿ ಹುಟ್ಟಿಕೊಂಡ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪ್ರೇರಣೆಯಾದವು. ಹೀಗಾಗಿ ಈ ಪರಂಪರೆಯಲ್ಲಿಯೇ ಹೋರಾಟದ ಬೀಜಗಳಿವೆ. ಹೊಸತನದ ಹುಡುಕಾಟಗಳಿವೆ. ಇದಕ್ಕೆ ಬುದ್ಧ-ಬಸವ ಸಾಕ್ಷಿಯಾಗಿದ್ದಾರೆ. ಮಾರ್ಕ್ಸ್‌ನ ವರ್ಗಹೋರಾಟದ ಸಿದ್ಧಾಂತವು ಶರಣರಲ್ಲಿತ್ತೆಂದು ಹೇಳಲಾಗದು. ಇವರಿಬ್ಬರ ಉದ್ದೇಶಗಳು ಬೇರೆ ಬೇರೆಯಾಗಿದ್ದವು.

ವಂಶವೃಕ್ಷವೇ ಅರಸೊತ್ತಿಗೆಯ ಮೂಲಧ್ಯೇಯವಾಗಿರುವುದರಿಂದ, ಅಲ್ಲಿ ಬಿಜ್ಜಳನನ್ನು ಕಿತ್ತೊಗೆದು ಬೇರೆಯವರನ್ನು ಅರಸನನ್ನಾಗಿ ಮಾಡಲು ಬರುತ್ತಿರಲಿಲ್ಲ. ಅಂತೆಯೇ ಮತೀಯವಾದಿಗಳು ಬಿಜ್ಜಳನ ಮಗ ಸೋವಿದೇವನಿಗೆ ಪಟ್ಟಕಟ್ಟಿ ತಮ್ಮ ಆಸೆಯನ್ನು ಈಡೇರಿಸಿಕೊಂಡರು. ಇಂತಹ ಕುಯುಕ್ತಿ, ಕುತಂತ್ರಗಳು ಶರಣರಿಗೆ ಬೇಕಾಗಿರಲಿಲ್ಲ. ಬಿಜ್ಜಳನನ್ನು ಬದಲಿಸುವುದೆಂದರೆ ಅರಸನನ್ನು ಬದಲಿಸಿದಂತೆಯೇ ಹೊರತು ಅರಸೊತ್ತಿಗೆಯನ್ನಲ್ಲ. ಹೀಗಾಗಿ ಶರಣರ ಹೋರಾಟ ಅರಸೊತ್ತಿಗೆಯ ವಿರುದ್ಧ ನಡೆದದ್ದಲ್ಲ. ಇದು ಆ ಕಾಲಘಟ್ಟದಲ್ಲಿ ಸಾಧ್ಯವೂ ಇರಲಿಲ್ಲ. ಅರಸನೊಂದಿಗಿದ್ದುಕೊಂಡೇ ಅರಸನ ನಂಬಿಕೆಯನ್ನು ಗಳಿಸುವುದರ ಮೂಲಕ ಸಮಸಮಾಜವನ್ನು ಕಟ್ಟುವ ಕನಸು ಶರಣರದಾಗಿತ್ತು. ಈ ಕಾರಣಕ್ಕಾಗಿಯೇ ಅವರು ಕಾಯಕ ತತ್ವದ ಮೂಲಕ ಕಲ್ಯಾಣರಾಜ್ಯದ ಹೊಸ ಆರ್ಥಿಕ ಬೆಳವಣಿಗೆಗೆ ಕಾರಣರಾದರು. ಶರಣರ ಕಾಯಕ ನಿಷ್ಠೆಯಿಂದ, ಅವರ ಶ್ರಮದ ಪ್ರಾಮಾಣಿಕತೆಯಿಂದ ಕೆಲವೇ ವರ್ಷಗಳಲ್ಲಿ ಬಿಜ್ಜಳನ ಖಜಾನೆ ತುಂಬಿಕೊಂಡಿತು. ಅಂದಿನ ಶ್ರಮಜೀವಿಗಳು ದಿನವೂ ಬೆವರು ಸುರಿಸಿ ದುಡಿಯುತ್ತಿದ್ದರು. ಹೆಚ್ಚು ಕೂಲಿಯನ್ನು ಕೇಳುತ್ತಿರಲಿಲ್ಲ. ದುಡಿದ ಹಣದಲ್ಲಿ ಹೆಚ್ಚಿನ ಭಾಗವನ್ನು ದಾಸೋಹಕ್ಕೆ ಕೊಡುತ್ತಿದ್ದರು. ಕಾಯಕ-ದಾಸೋಹದಂತಹ ಯೋಜನೆಗಳು ಬಿಜ್ಜಳನಿಗೆ ತುಂಬ ಅನುಕೂಲವಾದವು. ಬೇರೆ ಬೇರೆ ಪ್ರಾಂತಗಳಿಂದ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣಕ್ಕೆ ಬಂದು ಅಲ್ಲಿಯ ವ್ಯವಸ್ಥೆಯನ್ನು ಕಂಡು ಕೊಂಡಾಡಿದರು. ಮೋಸ, ಕಳವು, ಸ್ವಾರ್ಥ, ಕಲ್ಯಾಣದ ಶ್ರಮಜೀವಿಗಳಲ್ಲಿರಲಿಲ್ಲ. ಹೀಗಾಗಿ ನಿರಂತರ ದುಡಿಮೆ, ಮತ್ತು ಪ್ರಾಮಾಣಿಕ ವ್ಯವಹಾರಗಳಿಂದ ಬಿಜ್ಜಳನ ಸಂಪತ್ತು ಹೆಚ್ಚಾಯಿತು.

ಬಸವಣ್ಣನವರ ನಿಧಿ ಪವಾಡದ ಕಥೆ ಇದನ್ನೇ ಹೇಳುತ್ತದೆ. ಬಿಜ್ಜಳನ ಸಿಂಹಾಸನದ ಕೆಳಗಡೆ ನಿಧಿಯಿತ್ತು. ಅದನ್ನು ಬಸವಣ್ಣನವರು ಬಂದು ತೆಗೆದುಕೊಟ್ಟರೆಂಬ ಪವಾಡ ಕಥೆ ಇದೆ. ಇಲ್ಲಿ ಬಸವಣ್ಣನವರಿಂದ ಬಿಜ್ಜಳನ ನಿಧಿ ಹೆಚ್ಚಾದದ್ದು ಸತ್ಯ; ಆದರೆ ಅದು ಪವಾಡದಿಂದಲ್ಲ, ಶ್ರಮಜೀವಿಗಳ ದುಡಿಮೆಯಿಂದ, ಅವರ ಪ್ರಾಮಾಣಿಕ ಬದುಕಿನಿಂದ. ಎಲ್ಲ ಶ್ರಮಜೀವಿಗಳೂ ಬಸವಣ್ಣನವರ ಸಂಗಡ ಇದ್ದರು. ಬಸವಣ್ಣ ಅವರಿಗೆ ನಾಯಕನಾಗಿದ್ದ, ಸಾಕ್ಷಾತ್ ದೇವರಂತೆ ಕಾಣುತ್ತಿದ್ದ. ಈ ಅವಕಾಶವನ್ನು ಬಸವಣ್ಣನವರು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗೊಂದು ವೇಳೆ ಅರಸೊತ್ತಿಗೆಯ ವಿರುದ್ಧ ಶ್ರಮಿಕರೆಲ್ಲರನ್ನೂ ಸಂಘಟಿಸಿದ್ದರೆ, ಅದೇ ಪ್ರಥಮ ಕಾರ್ಮಿಕ ಚಳವಳಿಯಾಗುತಿತ್ತು. ಬಸವಣ್ಣನವರಿಗೆ ಸಿಂಹಾಸನದ ಕನಸಿರಲಿಲ್ಲ. ತಾನು ಅರಸನಾಗಬೇಕೆಂಬ ಬಯಕೆ ಕಿಂಚಿತ್ತೂ ಇರಲಿಲ್ಲ. ರಾಜಸತ್ತೆಯ ಕಾಲಘಟ್ಟದಲ್ಲಿದ್ದುಕೊಂಡು, ಸಮಸಮಾಜದ ಕನಸನ್ನು ಕಂಡಿದ್ದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.

ಅರಸನನ್ನು ಬದಲಿಸುವುದು ಶರಣರ ಉದ್ದೇಶವಾಗಿರಲಿಲ್ಲ. ಅರಸೊತ್ತಿಗೆಯನ್ನು ಕಿತ್ತೊಗೆಯುವುದು ಅವರ ಧೋರಣೆಯಾಗಿರಲಿಲ್ಲ. ಆದರೂ ಅವರು ಸಮಸಮಾಜದ ಕನಸನ್ನು ಕಂಡರು, ಎಲ್ಲ ಜಾತಿ-ಜನಾಂಗಗಳಲ್ಲಿ ಸಮಾನತೆ ತಂದರು. ವೃತ್ತಿಗೌರವವನ್ನು ಹೆಚ್ಚಿಸಿ ಕಾಯಕವೆಂಬ ಹೊಸ ಪರಿಕಲ್ಪನೆಯನ್ನು ಕೊಟ್ಟರು. ಲಿಂಗ ಅಸಮಾನತೆಯನ್ನು ಅಳಿಸಿಹಾಕಿ ಮಹಿಳೆಯರಿಗೆ ಗೌರವ ಕೊಟ್ಟರು. ಇಷ್ಟೆಲ್ಲಾ ಬೆಳವಣಿಗೆಗಳು, ಬದಲಾವಣೆಗಳು ಸಮಾಜವ್ಯವಸ್ಥೆಯಲ್ಲಿ ಮೂಡಿ ಬರಲು ಅವರ ಹೊಸ ರಾಜಕೀಯ ನೀತಿಯೇ ಕಾರಣವಾಗಿದೆ. ಹೌದು ಶರಣರಿಗೂ ಒಂದು ರಾಜಕೀಯ ನೀತಿಯಿತ್ತು. ಆದರೆ ಅದು ರಾಜನನ್ನು ಬದಲಾಯಿಸುವದಾಗಿರಲಿಲ್ಲ. ರಾಜಸತ್ತೆಯನ್ನು ಅಳಿಸಿ ಹಾಕುವದಾಗಿರಲಿಲ್ಲ. ಬದಲಾಗಿ ರಾಜಸತ್ತೆಯೊಂದಿಗೆ ಇದ್ದುಕೊಂಡೇ ರಾಜನಲ್ಲಿ ಮತ್ತು ರಾಜ್ಯಾಡಳಿತದಲ್ಲಿ ಸಾತ್ವಿಕ ವಿಚಾರಗಳನ್ನು ತುಂಬಿ ಸಮಸಮಾಜ ಕಟ್ಟುವದಾಗಿತ್ತು. ಈ ಕಾರಣಕ್ಕಾಗಿಯೇ ಶರಣರು ಅನುಭವಮಂಟಪ ಕಟ್ಟಿದರು. ಅಲ್ಲಿ ಸಾತ್ವಿಕರಾದವರಿಗೆಲ್ಲ ಮುಕ್ತ ಅವಕಾಶವಿತ್ತು. ಮೊದಲು ಜನಸಮುದಾಯದ ಮನಪರಿವರ್ತನೆ ಮಾಡಿದರು; ಅವರಲ್ಲಿದ್ದ ಮೂಢನಂಬಿಕೆ-ಅಂಧಸಂಪ್ರದಾಯಗಳನ್ನು ಕಿತ್ತೊಗೆದರು. ಈ ಅಸಮಾನತೆಗೆ ಕಾರಣವಾಗಿದ್ದ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಅಷ್ಟೊಂದು ಕಡಿಮೆ ಅವಧಿಯಲ್ಲಿಯೇ ಅವರು ಸಮಾಜವ್ಯವಸ್ಥೆಯಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದರು. ಶತಮಾನಗಳಿಂದ ವರ್ಣವ್ಯವಸ್ಥೆಯ ಕಪಿಮುಷ್ಠಿಯಲ್ಲಿದ್ದ ಸಮಾಜ ವ್ಯವಸ್ಥೆಯು, ಹರಳಯ್ಯನ ಮಗ-ಮಧುವಯ್ಯನ ಮಗಳು ಮದುವೆಯಾದದ್ದನ್ನು ಕಣ್ಣಾರೆ ಕಾಣುವಂತಾಯಿತು. ಕೊನೆಗೆ ಸೋವಿದೇವನನ್ನು ಮೋಸದಿಂದ ಪಟ್ಟಕ್ಕೆಕಟ್ಟಿ ದುರಾಡಳಿತ ಪ್ರಾರಂಭಿಸಿದ ಕೊಂಡೆಮಂಚಣ್ಣನಂತಹ ಕೋಮುವಾದಿಗಳಿಂದ ಕಲ್ಯಾಣ ಹೊತ್ತಿ ಉರಿಯತೊಡಗಿತು. ಆಗಲೂ ಶರಣರು ಹಿಂಜರಿಯಲಿಲ್ಲ, ತಮ್ಮ ತತ್ವವನ್ನು ಬಿಟ್ಟುಕೊಡಲಿಲ್ಲ. ಯಾವುದೇ ರಾಜಿಮಾಡಿಕೊಳ್ಳಲಿಲ್ಲ. ದುಷ್ಟ ಆಡಳಿತದ ವಿರುದ್ಧ ಬಂಡೆದ್ದರು. ಸೋವಿದೇವನಂತಹ ಸ್ವಾರ್ಥಿ ಅರಸ ಮರಣದಂಡನೆ ವಿಧಿಸಿದಾಗ ಹೆದರದೆ ಹಿಮ್ಮಟ್ಟದೆ, ಮರಣವೇ ಮಹಾನವಮಿ ಎಂದು ಜೈಘೋಷ ಮಾಡುತ್ತ ಸಾವನ್ನು ಸ್ವಾಗತಿಸಿದರು. ಯಾವುದೇ ರಾಜಕೀಯ ಚಿಂತನೆ ಇರಲಾರದೆ ಇಂತಹ ದೊಡ್ಡ ಕ್ರಾಂತಿಯೊಂದು ಆಗಲು ಸಾಧ್ಯವೇ ಇಲ್ಲ. ಹೀಗಾಗಿ ಶರಣರಿಗೂ ಒಂದು ರಾಜಕೀಯ ನೀತಿಯಿತ್ತು. ಅದರ ಬಗೆಗೆ ಹೆಚ್ಚಿನ ಚರ್ಚೆಗಳು, ನಡೆಯಬೇಕಾಗಿದೆ, ಚಿಂತನೆಗಳು ಗಟ್ಟಿಗೊಳ್ಳಬೇಕಾಗಿದೆ.

ಇಂದಿಗೂ ಕೂಡ ಅಂತಹ ಪ್ರಗತಿಪರ ಸಂಘಟನೆಗಳಿವೆ. ಈ ಸಂಘಟನೆಗಳು ನೇರವಾಗಿ, ರಾಜಕೀಯ ಪಕ್ಷಗಳಂತೆ ಚುನಾವಣೆಗೆ ನಿಲ್ಲುವುದಿಲ್ಲ; ಅಧಿಕಾರ ಹಿಡಿಯಲು ಹಂಬಲಿಸುವುದಿಲ್ಲ. ಆದರೆ ಆಳುವ ಸರಕಾರ ತಪ್ಪು ಮಾಡಿದಾಗ ಸುಮ್ಮನೇ ಕೂಡುವುದಿಲ್ಲ. ಚಳವಳಿ ನಡೆಸುತ್ತವೆ, ಹೋರಾಟ ಕಟ್ಟುತ್ತವೆ. ಇಂತಹ ಸಂಘಟನೆಯಲ್ಲಿರುವವರು ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ. ಸರಕಾರ ಕೊಟ್ಟ ಯಾವುದೇ ಶಿಕ್ಷೆಗೆ ಬೆದರಿಕೆಗೆ ಹೆದರುವುದಿಲ್ಲ. ಸಮಾಜವ್ಯವಸ್ಥೆಯನ್ನು ಸರಿಪಡಿಸಲು ಹೋರಾಡುತ್ತಲೇ ಇರುತ್ತಾರೆ. ಹೀಗಾಗಿ ಹೋರಾಟಕ್ಕೆ ಕೊನೆಯೆಂಬುದಿಲ್ಲ. ಅದು 12ನೇ ಶತಮಾನದ ಶರಣರಿಂದ ಪ್ರಾರಂಭವಾಗಿ ಇಂದಿನ ಪ್ರಗತಿಪರ ಸಂಘಟನೆಗಳ ಚಳವಳಿಗಳ ಮೂಲಕ ಮುಂದುವರೆದಿದೆ.

ಈಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳೇ ಕಳೆದಿವೆ. ಈ ಅವಧಿಯಲ್ಲಿ ಎಷ್ಟೋ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ ಎಷ್ಟೋ ಸರಕಾರಗಳು ಆಳಿಹೋಗಿವೆ. ಸಮಾನತೆ ಸಿಕ್ಕಿದೆಯೇ? ಶೋಷಣೆ ಕಡಿಮೆಯಾಗಿದೆಯೆ? ನಿರುದ್ಯೋಗ ಹೋಗಿದೆಯೆ? ನೆಮ್ಮದಿಯ ಜೀವನ ಸಾಧ್ಯವಾಗಿದೆಯೆ? ಎಂಬಂತಹ ಅನೇಕ ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲ. ಅಂದಮೇಲೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆಯೆಂದು ಹೇಗೆ ಹೇಳುವುದು? ಇಂತಹ ಪ್ರಶ್ನೆಗಳು ಮುಖ್ಯವಾಗುತ್ತವೆ. ಜನರ ಮನಪರಿವರ್ತನೆಯಾಗದ ಹೊರತು ಎಷ್ಟೇ ಅಭಿವೃದ್ಧಿ ಕೆಲಸಗಳು ನಡೆದರೂ ಉಪಯೋಗವಾಗುವುದಿಲ್ಲ. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರದಂತಹ ಆರು ವೈರಿಗಳನ್ನು ಒಳಗಿಟ್ಟುಕೊಂಡು ಏನು ಮಾಡಿದರೂ ಅದು ಉಪಯೋಗವಾಗುವುದಿಲ್ಲ. ಆದುದರಿಂದ ಶರಣರು ನಮಗೆ ಒಳಗಿನ ವೈರಿಗಳವಿರುದ್ಧ ಹೋರಾಡಲು ಕಲಿಸಿದರು. ಇದು ಶರಣರ ಮಹತ್ವದ ರಾಜಕೀಯ ನೀತಿಯಾಗಿದೆ. ಸಮಾಜದ ಸಂಪತ್ತನ್ನೆಲ್ಲ ಲೂಟಿ ಹೊಡೆದು, ಅಧಿಕಾರ ದುರುಪಯೋಗಿಸಿಕೊಂಡು ಶ್ರೀಮಂತರಾಗಬೇಕೆಂದು ಶರಣರು ಹೇಳಲಿಲ್ಲ. ಬದಲಾಗಿ ದುಡಿದದ್ದರಲ್ಲಿ ತನಗೆ ಬೇಕಾದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ದಾಸೋಹಕ್ಕರ್ಪಿಸಲು ಹೇಳಿದರು. ಇದು ಅವರ ಪ್ರಮುಖ ರಾಜಕೀಯ ನೀತಿ. ಸಕಲಜೀವಿಗಳಿಗೂ ಅವರು ಲೇಸನ್ನೇ ಬಯಸಿದರು. ಇದು ಅವರ ಸಾಮಾಜಿಕ ನೀತಿ. ಕಾಯಕತತ್ವದ ಮೂಲಕ ರಾಜ್ಯದ ಬೊಕ್ಕಸ ತುಂಬುವಂತಾಯಿತು. ಇದು ಅವರ ಆರ್ಥಿಕ ನೀತಿ. ಯಾವುದೇ ಸಿದ್ಧಾಂತಗಳಿರದೆ, ಚಿಂತನೆಗಳಿರದೆ, ನಿಸ್ವಾರ್ಥ-ತ್ಯಾಗ-ಬಲಿದಾನಗಳಿರದೆ ಯಾವುದೇ ಕ್ರಾಂತಿಕಾರಕ ಬದಲಾವಣೆಗಳಾಗಲು ಸಾಧ್ಯವಿಲ್ಲ. ಶರಣರು ತಮ್ಮ ಕಡಿಮೆ ಅವಧಿಯಲ್ಲಿಯೇ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಇದಕ್ಕೆ ಅವರ ರಾಜಕೀಯ ನೀತಿಯೇ ಕಾರಣವಾಗಿದೆ. ಧಾರ್ಮಿಕ ಕ್ಷೇತ್ರದಿಂದ ಪ್ರವೇಶಿಸಿ, ರಾಜಕೀಯ ಕ್ಷೇತ್ರವನ್ನು ಪವಿತ್ರಗೊಳಿಸಲು ಪ್ರಯತ್ನಿಸಿದರು, ರಾಜ್ಯಾಧಿಕಾರವನ್ನು ಹಿಡಿಯದೆಯೇ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಭಾರತದ ಯಾವುದೇ ಧರ್ಮವೂ ಇಂತಹ ಕೆಲಸಕ್ಕೆ ಕೈಹಾಕಿರಲಿಲ್ಲ. ಭಾರತದ ಯಾವುದೇ ಚಳವಳಿಯೂ ಇಂತಹ ಧಾರ್ಮಿಕ ನೆಲೆಗಟ್ಟನ್ನು ಹೊಂದಿರಲಿಲ್ಲ. ಅವರಿಗೆ ಧಾರ್ಮಿಕ-ರಾಜಕೀಯ-ಸಾಮಾಜಿಕ ಬೇರೆ ಬೇರೆಯಾಗಿ ಕಾಣಿಸಲೇ ಇಲ್ಲ. ಈ ಕಾರಣಕ್ಕಾಗಿ ಇದು ಭಾರತ ಕಂಡ ಬಹುದೊಡ್ಡ ಚಳವಳಿಯಾಗಿದೆ. ತುಂಬ ವಿನೂತನವಾದ ರಾಜಮಾರ್ಗವಾಗಿದೆ, ವಿಶಿಷ್ಟವಾದ ಆಧ್ಯಾತ್ಮಿಕ ಮಾರ್ಗವಾಗಿದೆ.

(ಮುಂದುವರಿಯುವುದು)

ಈ ಅಂಕಣದ ಹಿಂದಿನ ಬರಹಗಳು:
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...