ಶರಣರ ಧರ್ಮ

Date: 23-01-2022

Location: ಬೆಂಗಳೂರು


‘ಎಲ್ಲವನ್ನೂ ತೊರೆದು ಸಂನ್ಯಾಸಿಯಾಗೆಂದು ಹೇಳುವುದು ಲಿಂಗಾಯತ ಧರ್ಮವಲ್ಲ, ಎಲ್ಲವನ್ನೂ ಅನುಭವಿಸಿ ಸಂಸಾರವನ್ನು ಗೆಲ್ಲು ಎಂದು ಹೇಳುವುದು ಲಿಂಗಾಯತ ಧರ್ಮವಾಗಿದೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣ ಧರ್ಮ ಅಂಕಣದಲ್ಲಿ ಶರಣರ ಧರ್ಮದ ಕುರಿತು ವಿಶ್ಲೇಷಿಸಿದ್ದಾರೆ.

ಪ್ರತಿಯೊಂದು ಧರ್ಮಕ್ಕೆ ಅದರದೇ ಆದ ಧಾರ್ಮಿಕ ಪರಿಕಲ್ಪನೆಗಳಿರುತ್ತವೆ, ಸಿದ್ಧಾಂತಗಳಿರುತ್ತವೆ. ಆಚರಣೆಗಳಿರುತ್ತವೆ. ಭಾರತದಲ್ಲಿರುವ ಧರ್ಮಗಳಲ್ಲಿ ಕೆಲವು ಧರ್ಮಗಳು ಏಕವ್ಯಕ್ತಿಯಿಂದ ಸ್ಥಾಪನೆಯಾಗಿದ್ದರೆ. ಮತ್ತೆ ಕೆಲ ಧರ್ಮಗಳು ಪುರಾಣ ಪುರುಷರಿಂದ ಪ್ರಾರಂಭವಾಗಿರುತ್ತವೆ. ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಶೈವಧರ್ಮ- ಬೌದ್ಧಧರ್ಮ- ಜೈನಧರ್ಮ- ವೈದಿಕಧರ್ಮ ಪ್ರಮುಖವಾದವುಗಳಾಗಿವೆ. ಬೌದ್ಧಧರ್ಮ ಬುದ್ಧನಿಂದ ಪ್ರಾರಂಭವಾದರೆ, ಜೈನಧರ್ಮವು ಮಹಾವೀರನಿಂದ ಪ್ರಾರಂಭವಾಯಿತು. ಈ ಧರ್ಮಗಳ ಸಂಸ್ಥಾಪಕರು ಮನುಷ್ಯರೇ ಆಗಿದ್ದರು, ಇತಿಹಾಸದ ವ್ಯಕ್ತಿಗಳಾಗಿದ್ದರು. ಆದರೆ ಶೈವಧರ್ಮ ಮತ್ತು ವೈದಿಕ ಧರ್ಮಗಳು ಮಾತ್ರ ಪುರಾಣ ಪುರುಷರಿಂದ ಪ್ರಾರಂಭವಾದವು. ಶೈವಧರ್ಮದ ಹುಟ್ಟಿಗೆ ಶಿವ ಕಾರಣನಾದರೆ, ವೈದಿಕ ಧರ್ಮದ ಹುಟ್ಟಿಗೆ ವಿಷ್ಣು ಕಾರಣನಾಗಿದ್ದಾನೆ. ಶಿವಪುರಾಣಗಳಿಂದ ಶೈವಧರ್ಮದ ಪರಿಚಯವಾದರೆ, ಶ್ರುತಿ-ಸ್ಮೃತಿ-ಬ್ರಾಹ್ಮಣ್ಯಕಗಳಿಂದ ವೈದಿಕಧರ್ಮದ ಪರಿಚಯವಾಯಿತು. ಶಿವ ಮತ್ತು ವಿಷ್ಣು ಅಮೂರ್ತರೂಪಗಳಾಗಿವೆ. ಬುದ್ಧ ಮತ್ತು ಮಹಾವೀರ ಚಾರಿತ್ರಿಕ ವ್ಯಕ್ತಿಗಳಾಗಿದ್ದಾರೆ.

ಯಾವುದೇ ಧರ್ಮ, ಯಾರಿಂದ ಪ್ರಾರಂಭವಾಯಿತು? ಯಾವಾಗ ಪ್ರಾರಂಭವಾಯಿತು? ಏಕೆ ಪ್ರಾರಂಭವಾಯಿತೆಂಬ ಪ್ರಶ್ನೆಗಳಿಗಿಂತ, ಆ ಧರ್ಮದ ಪ್ರಾಮುಖ್ಯತೆಯೇನು? ಅದು ಇಂದಿಗೆ ಎಷ್ಟರ ಮಟ್ಟಿಗೆ ಪ್ರಸ್ತುತ? ಆ ಧರ್ಮ ಜನಪರವೋ, ಜನವಿರೋಧಿಯೋ? ಎಂಬಂತಹ ಪ್ರಶ್ನೆಗಳು ಮುಖ್ಯವಾಗುತ್ತವೆ. ವರ್ತಮಾನದ ಆಶಯಗಳಿಗೆ ತಕ್ಕಂತೆ ಧರ್ಮಗಳ ಪ್ರಸ್ತುತತೆಯೇನೆಂಬುದನ್ನು ಕಂಡುಕೊಳ್ಳಬೇಕಾಗುತ್ತದೆ.

ಲಿಂಗಾಯತ ಧರ್ಮವು ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಸ್ಥಾಪನೆಯಾಯಿತು. ಆದುದರಿಂದ ಇದನ್ನು ಬಸವಧರ್ಮವೆಂದು ಕರೆಯಲಾಗುತ್ತದೆ. ಶೈವಧರ್ಮದ ನಂತರ ಕರ್ನಾಟಕದಲ್ಲಿ ಈ ಧರ್ಮ ಹುಟ್ಟಿಕೊಂಡಿದೆ. ಇದು ವಿಶಿಷ್ಟ ಧರ್ಮವಾಗಿದೆ. ಉತ್ತಂಗಿ ಚೆನ್ನಪ್ಪನವರು, ಡಾ. ಎಂ. ಎಂ ಕಲಬುರ್ಗಿಯವರು ಇದನ್ನು ಲಿಂಗಾಯತ ಧರ್ಮವೆಂದೇ ಕರೆದಿದ್ದಾರೆ, ಬಸವಣ್ಣವರಿಂದ ಈ ಧರ್ಮ ಸ್ಥಾಪನೆಯಾದುದರಿಂದ ಇದನ್ನು “ಬಸವ ಧರ್ಮ”ವೆಂದು ಕರೆಯುತ್ತಾರೆ. ಎಲ್ಲ ಧರ್ಮಗಳಲ್ಲಿರುವಂತೆ ಇಲ್ಲಿಯೂ ಧರ್ಮದ ಸಿದ್ಧಾಂತ, ದೇವರ ಪರಿಕಲ್ಪನೆ, ದೇವಾಲಯದ ವಿಚಾರಗಳು ಪ್ರಸ್ತಾಪವಾಗಿವೆ. ಆದರೆ ಶರಣರ ಧಾರ್ಮಿಕ ಪರಿಕಲ್ಪನೆ ಉಳಿದ ಧರ್ಮಗಳಿಗಿಂತ ತುಂಬ ಭಿನ್ನವಾಗಿದೆ. ಉಳಿದ ಧರ್ಮಗಳೆಲ್ಲ ದೇವರು-ಮುಕ್ತಿ-ಪಾರಮಾರ್ಥಗಳ ಬಗ್ಗೆ ಮಾತನಾಡಿದರೆ, ಲಿಂಗಾಯತ ಧರ್ಮವು ಇವುಗಳ ಜತೆಗೆ ವ್ಯಕ್ತಿ-ಸಮುದಾಯ-ಸಮಾಜದ ಬಗೆಗೂ ಮಾತನಾಡುತ್ತದೆ. ಇಲ್ಲಿಯ ಧರ್ಮ ಧಾರ್ಮಿಕವಾಗಿರುವಂತೆ-ಸಾಮಾಜಿಕವೂ ಆಗಿದೆ. ಈ ಧರ್ಮದಲ್ಲಿಯೂ ದೇವಾಲಯದ ಪ್ರಸ್ತಾಪ ಬರುತ್ತದೆ. ಆದರೆ ಆ ದೇವಾಲಯವು ಸ್ಥಾವರ ದೇವಾಲಯವಾಗಿರದೆ, ಭಕ್ತರ ದೇಹವೇ ದೇಗುಲವಾಗಿದೆ. ಶರಣರು ದೇವಾಲಯದ ಪರಿಕಲ್ಪನೆಯನ್ನು ತಿರಸ್ಕರಿಸಲಿಲ್ಲ. ಅದನ್ನು ಸ್ಥಾವರದಿಂದ-ಚಲನಶೀಲಗೊಳಿಸಿದರು. ಕಲ್ಲು ಮಣ್ಣಿನ ಗುಡಿಗಳ ಬದಲಾಗಿ; ಮನುಷ್ಯನ ದೇಹವನ್ನೇ ದೇವಾಲಯವನ್ನಾಗಿ ಪರಿವರ್ತಿಸಿದರು. ಇನ್ನು ಶರಣರು ದೇವರ ಅಸ್ತಿತ್ವವನ್ನು ಅಲ್ಲಗಳೆಯಲಿಲ್ಲ. ಆದರೆ ಆ ದೇವರನ್ನು ಅವರು ಶರಣನಲ್ಲಿ ಕಂಡರು, ಶರಣಚಳವಳಿಯಲ್ಲಿ ವ್ಯಕ್ತಿಯೇ-ಶಕ್ತಿಯಾದ, ನರನೇ ಹರನಾದ, ಶಿವಶರಣನೇ ಶಿವನಿಗಿಂತ ಅಧಿಕನಾಗಿ ಕಾಣಿಸಿಕೊಂಡ. ಹೀಗೆ ಬಸವಣ್ಣನವರ ಧರ್ಮ-ದೇವಾಲಯ-ದೇವರುಗಳ ಪರಿಕಲ್ಪನೆಗಳು ತುಂಬ ವಿಶಿಷ್ಟವಾಗಿವೆ.

‘ದಯವೇ ಧರ್ಮದ ಮೂಲವಯ್ಯ”- ಎಂಬುದು ಲಿಂಗಾಯತ ಧರ್ಮದ ಮೂಲ ಧ್ಯೇಯವಾಖ್ಯವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಈ ಧರ್ಮವನ್ನು ಸ್ಥಾಪಿಸಿದ್ದರಿಂದ ಇದಕ್ಕೆ ಬಸವಧರ್ಮವೆಂದು ಕರೆಯುತ್ತಾರೆ. ಬಸವಣ್ಣನವರುಕಟ್ಟಿದ ಈ ಧರ್ಮವು ಶೈವಧರ್ಮಕ್ಕಿಂತ ಭಿನ್ನವಾದುದು ಮತ್ತು ವೈದಿಕಧರ್ಮದ ವಿರೋಧಿಯಾದುದಾಗಿದೆ. ಹೀಗಾಗಿ ಇದು ಭಾರತದ ಅವೈದಿಕ ಧರ್ಮವಾಗಿದೆ. ಬೌದ್ಧನಿಂದ-ಬೌದ್ಧಧರ್ಮ ಹುಟ್ಟಿದ ಹಾಗೆ, ಮಹಾವೀರನಿಂದ ಜೈನಧರ್ಮ ಸ್ಥಾಪನೆಯಾದ ಹಾಗೆ ಬಸವಣ್ಣನವರಿಂದ ಲಿಂಗಾಯತ ಧರ್ಮ ಹುಟ್ಟಿದೆ. ಆದುದರಿಂದ ಈ ಧರ್ಮದ ಸಂಸ್ಥಾಪಕ 12ನೇ ಶತಮಾನದ ಬಸವಣ್ಣನವರೇ ಆಗಿದ್ದಾರೆ. ಈ ಧರ್ಮದಲ್ಲಿ ಶಿವನ ಆರಾಧನೆಯೂ ಇಲ್ಲ, ವಿಷ್ಣುವಿನ ಆರಾಧನೆಯೂ ಇಲ್ಲ; ಬದಲಾಗಿ ಆತ್ಮನ ಸಾಧನೆಯಿದೆ; ಆತ್ಮ ಪರಮಾತ್ಮನಾಗಿ ಬೆಳೆಯುವ ಬೆಳವಣಿಗೆಯಿದೆ. ಆ ಪರಮಾತ್ಮನ ಪರಿಕಲ್ಪನೆ ಕೂಡಾ ಹೊಸತನದಿಂದ ಕೂಡಿದೆ. ಅದು ಸಮಷ್ಟಿ ಪ್ರಜ್ಞೆಯಾಗಿ ಕಾಣಿಸಿಕೊಂಡಿದೆ. ಆತ್ಮ ಮತ್ತು ಪರಮಾತ್ಮನ ಸಂಬಂಧವೆಂದರೆ ಅದು ವ್ಯಕ್ತಿ ಮತ್ತು ಸಮಾಜದ ಸಂಬಂಧವೇ ಆಗಿದೆ. ಹೀಗಾಗಿ ಇದು ಸಾಮಾಜಿಕ ಧರ್ಮವಾಗಿದೆ. ಲಿಂಗಾಯತ ಧರ್ಮವೂ ಕೂಡ ಬೌದ್ಧಧರ್ಮದ ಹಾಗೆ ಮನುಷ್ಯರ ಸಾಧ್ಯತೆಯ ಬಗೆಗೆ ಮಾತನಾಡುತ್ತದೆ. ದುಃಖ ಇರುವುದು. ಮನುಷ್ಯರಿಗೇ ಹೊರತು ದೇವರಿಗಲ್ಲ. ಆದುದರಿಂದ ಬೌದ್ಧಧರ್ಮ ಮತ್ತು ಬಸವಧರ್ಮಗಳು ಮನುಷ್ಯರ ಕಣ್ಣೀರೊರೆಸುತ್ತವೆ. ಸಾಂತ್ವಾನ ಹೇಳುತ್ತವೆ. ತನ್ನೊಳಗಡೆಯೇ ಇರುವ ಶಕ್ತಿಯನ್ನು ಬಲಪಡಿಸಿಕೊಂಡು ದೊಡ್ಡ ಸಾಧಕನಾಗಿ ಬೆಳೆಯುವದನ್ನು ಕಲಿಸುತ್ತವೆ. ಆದುದರಿಂದ ಲಿಂಗಾಯತ ಧರ್ಮವು ದೇವ-ದಾನವರ ಬಗೆಗೆ ಚಿಂತಿಸದೆ ಮಾನವರ ಬಗೆಗೆ ಆಲೋಚಿಸುತ್ತದೆ. ಮಾನವೀಯತೆಯನ್ನು ಕಟ್ಟಿಕೊಡುತ್ತದೆ.

ಚಾಮರಸ ಕವಿಯ ಪ್ರಭುಲಿಂಗಲೀಲೆಯಲ್ಲಿ ಬರುವ ಪ್ರಾರ್ಥನಾ ಪದ್ಯವೊಂದು ಮಹತ್ವದ ವಿಚಾರವನ್ನು ತಿಳಿಸುತ್ತದೆ. ಚಾಮರಸ ನೂರೊಂದು ವಿರಕ್ತರಲ್ಲಿ ಒಬ್ಬ, ಈತ ವೀರಶೈವ ಕವಿ. ಬಸವಣ್ಣನವರ ಹೊಸಧರ್ಮದ ಪರಿಕಲ್ಪನೆ ಈ ಕವಿಗೆ ತಿಳಿದಿದೆ. ಹೀಗಾಗಿ ಲಿಂಗಾಯತ ಧರ್ಮದ ಬಗೆಗೆ ಈತ ಅತ್ಯಂತ ಪ್ರಾಮಾಣಿಕತೆಯಿಂದ ಹೇಳಿದ್ದಾನೆ.

“ಕಾಯದೊಳು ಗುರುಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚರ‍್ಯ ಸಂಗನ ಬಸವ ಶರಣಾರ್ಥಿ”
-ಚಾಮರಸ (ಪ್ರಭುಲಿಂಗಲೀಲೆ ಪ್ರಾರ್ಥನಾ ಪದ್ಯ)

ಗುರು-ಲಿಂಗ-ಜಂಗಮಗಳನ್ನು ಶೈವ-ವೀರಶೈವ ಧರ್ಮಗಳು ಹೊರಗೆ ಗುರುತಿಸಿದರೆ, ಬಸವಣ್ಣನವರು ಈ ಮೂರನ್ನೂ ಒಳಗೆ ಕಂಡುಕೊಂಡಿದ್ದಾರೆ. ಅರಿವು ಎಂಬ ಗುರುವು, ಆಚಾರವೆಂಬ ಲಿಂಗ ಹಾಗೂ ಅನುಭಾವವೆಂಬ ಜಂಗಮ ಇವು ಮೂರು ದೇಹದೊಳಗಡೆ ಇರುವುದರಿಂದಲೇ ದೇಹ ದೇವಾಲಯವಾಗಲು ಸಾಧ್ಯವಾಗಿದೆ. ಇಷ್ಟಲಿಂಗದ ಮೂಲಕ ಎಲ್ಲವನ್ನೂ ಒಳಗೇ ಕಂಡುಕೊಳ್ಳುವ ಶಕ್ತಿಯನ್ನು ಬಸವಣ್ಣನವರು ತೋರಿಸಿಕೊಟ್ಟರು. ಈ ಕಾರಣದಿಂದ ಸಮಸ್ತ ಭಕ್ತವರ್ಗವನ್ನು ಬಸವಣ್ಣನವರು ಪಾವನವ ಮಾಡಿದರೆಂದು ಹೇಳಿರುವ ಚಾಮರಸನು ಸಂಗನ ಬಸವನನ್ನುಪೂರ್ವಾಚರ‍್ಯನೆಂದು ಕರೆದು ಶರಣಾರ್ಥಿ ಹೇಳಿದ್ದಾನೆ. ಲಿಂಗಾಯತ ಧರ್ಮದ ಪೂರ್ವಾಚರ‍್ಯ ಸಂಗನಬಸವಣ್ಣನೆಂದು ಚಾಮರಸ ಕವಿ ಇಲ್ಲಿ ಸ್ಪಷ್ಟಪಡಿಸಿದ್ದಾನೆ.

ಬಸವಣ್ಣನ ಧರ್ಮ ಎಷ್ಟೊಂದು ವೈಜ್ಞಾನಿಕವಾಗಿದೆಯೆಂಬುದನ್ನು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಧರ್ಮ ಪ್ರಾರಂಭವಾಗುವ ಮೊದಲು ಅದ್ವೈತ, ವಿಶಿಷ್ಟಾಧ್ವೈತ ಧರ್ಮಗಳು ಜಾರಿಯಲ್ಲಿದ್ದವು. ಲಿಂಗಾಯತ ಧರ್ಮ ಕೂಡಾ ಇಂತಹದ್ದೇ ಒಂದು ಅದ್ವೈತವಾಗಿರಬೇಕೆಂದು ಕೆಲವರು ತಿಳಿದುಕೊಂಡಿದ್ದರು. ಇದನ್ನು ಅಲ್ಲಮಪ್ರಭು ತಮ್ಮ ವಚನವೊಂದರಲ್ಲಿ ಹೀಗೆ ಸ್ಪಷ್ಟಪಡಿಸಿದ್ದಾರೆ.

“ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ
ಬ್ರಹ್ಮವ ನುಡಿದು ಭ್ರಮಿತನಾದೆಯ್ಯಾ
ಶೂನ್ಯವ ನುಡಿದು ನಾನು ಸುಖ ದುಃಖಕ್ಕೆ ಗುರಿಯಾದೆನಯ್ಯಾ
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯಾ”.

-ಅಲ್ಲಮಪ್ರಭು (ಸ.ವ.ಸಂ.೨, ವ:೮೫, ೧೯೯೩)

ಲಿಂಗಾಯತ ಧರ್ಮವು, ಉಳಿದವುಗಳಿಗಿಂತ ಹೇಗೆ ಭಿನ್ನವಾಗಿದೆಯೆಂಬುದನ್ನು ಈ ವಚನ ಸ್ಪಷ್ಟಪಡಿಸುತ್ತದೆ. ಈ ಧರ್ಮವು ಅದ್ವೈತವನ್ನು ಮೀರಿದ ಧರ್ಮವಾಗಿದೆ. ಅದ್ವೈತದಲ್ಲಿ ಐಕ್ಯಸ್ಥಲವಿಲ್ಲ; ಆದರೆ ಲಿಂಗಾಯತ ಧರ್ಮದಲ್ಲಿ ಆರನೇ ಸ್ಥಲವಾದ ಐಕ್ಯಸ್ಥಲದವರೆಗೆ ಬೆಳವಣೆಗೆ ಇದೆ. ಐಕ್ಯಸ್ಥಿತಿಯೆಂಬುದು ಆತ್ಮ-ಪರಮಾತ್ಮನ ಸಂಗಮವಾಗಿದೆ; ವ್ಯಕ್ತಿ-ಸಮಾಜದ ಬೆಸುಗೆಯಾಗಿದೆ. ಅಂತೆಯೇ ಅಲ್ಲಮಪ್ರಭು “ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ” ಎಂದು ಹೇಳಿದ್ದಾರೆ. ಬ್ರಹ್ಮಜ್ಞಾನ, ಬ್ರಹ್ಮವಿದ್ಯೆ ಇವುಗಳನ್ನು ಶರಣರು ಒಪ್ಪುವುದೇಇಲ್ಲ. ಜ್ಞಾನದಲ್ಲಿ ಒಂದು ಶ್ರೇಷ್ಠ, ಮತ್ತೊಂದು ಕನಿಷ್ಠವೆಂದಿರುವುದಿಲ್ಲ. ಶರಣರದು ಶೂನ್ಯವನ್ನು ಮೀರಿದ ಬಯಲು ತತ್ವವಾಗಿದೆ. “ಸಂಗನಬಸವಣ್ಣನ ಸಾನಿಧ್ಯದಿಂದ ನಾನು ಸದ್ಭಕ್ತನಾದೆ” ಎಂದು ಅಲ್ಲಮಪ್ರಭು ಹೇಳಬೇಕಾದರೆ, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಎಷ್ಟೊಂದು ಮಹತ್ವದ್ದಾಗಿತ್ತೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

“ಕವಿತ್ವ ಸಾಧಕರೆಲ್ಲ ಕಳವಳಿಸಿಹೋದರು
ವಿದ್ಯಾಸಾಧನಕರೆಲ್ಲ ಬುದ್ಧಿಗೆಟ್ಟರು
ಲಿಂಗಸಾಧಕರೆಲ್ಲ ಭೂಭಾರಕರಾದರು
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಜಂಗಮ ಸಾಧಕನಾದಾತ ಬಸವಣ್ಣನೊಬ್ಬನೇ”

-ಚೆನ್ನಬಸವಣ್ಣ(ಸ.ವ.ಸಂ.೩ ವ:೧೧೩೧,೧೯೯೩)

ನಮ್ಮಲ್ಲಿ ಅನೇಕ ಸಾಧಕರಿದ್ದಾರೆ; ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಇದನ್ನು ಚೆನ್ನಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಕವಿತ್ವ ಸಾಧಕರು, ವಿದ್ಯಾಸಾಧಕರು, ಲಿಂಗಸಾಧಕರು ಇಲ್ಲಿದ್ದಾರೆ. ಆದರೆ ಜಂಗಮ ಸಾಧಕನಾದಾತ ಬಸವಣ್ಣನೊಬ್ಬನೇ ಎಂದು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಜಂಗಮವೆಂದರೆ ಚಲನಶೀಲತೆ, ಜಂಗಮವೆಂದರೆ ಅನುಭಾವ. ಚಲನಶೀಲವಾದುದೇ ನಿಜವಾದ ಜೀವಂತಿಕೆಯ ಲಕ್ಷಣ. ಇಂತಹ ಚಲನಶೀಲತೆಯ ಸಾಧಕ ಬಸವಣ್ಣನೊಬ್ಬನೇ ಆಗಿದ್ದಾನೆ. ನಿಜವಾದ ಅನುಭಾವಿ ಬಸವಣ್ಣ ಮಾತ್ರ ಎಂದು ಇಲ್ಲಿ ಸ್ಪಷ್ಟಪಡಿಸಿಲಾಗಿದೆ.

ಚೆನ್ನಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ಈ ಲಿಂಗಮಯ ಸಿದ್ಧಾಂತವನ್ನು ಬಸವಣ್ಣನವರು ಹುಟ್ಟುಹಾಕಿದರೆಂದು ಹೇಳಿದ್ದಾರೆ.

“ಆದಿ ಬಸವಣ್ಣ ಅನಾದಿ ಲಿಂಗವೆಂದೆಂಬರು ಹುಸಿಹುಸಿ
ಈ ನುಡಿಯ ಕೇಳಲಾಗದು
ಆದಿ ಲಿಂಗ ಅನಾದಿ ಬಸವಣ್ಣ
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು
ಪ್ರಸಾದವು ಬಸವಣ್ಣನ ಅನುಕರಿಸಲು ಆಯಿತ್ತು
ಇಂತೀ ತ್ರಿವಿಧಕ್ಕೆ ಬಸವಣ್ಣನೇಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಯ್ಯ”

-ಚೆನ್ನಬಸವಣ್ಣ(ಸ.ವ.ಸಂ.೩ ವ:೫,೧೯೯೩)

ಈ ವಚನದಲ್ಲಿ ಚೆನ್ನಬಸವಣ್ಣನವರು ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಪ್ರಮಥರು; ಲಿಂಗ ಆದಿಯಾದರೆ, ಬಸವಣ್ಣ ಅನಾದಿಯೆಂದು ಹೇಳಿದ್ದಾರೆ. ಲಿಂಗ, ಜಂಗಮ, ಪ್ರಸಾದ ಎಲ್ಲವೂ ಬಸವಣ್ಣನವರ ಮೂಲಕವೇ ಹುಟ್ಟಿಕೊಂಡಿವೆಯೆಂದು ಸ್ಪಷ್ಟಪಡಿಸಿದ್ದಾರೆ. ಇದೇ ವಿಷಯವನ್ನು ಅಲ್ಲಮಪ್ರಭು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.

“ಆದಿಯಲ್ಲಿ ನೀನೇ ಗುರುವಾದ ಕಾರಣ
ನಿನ್ನಿಂದ ಹುಟ್ಟಿತ್ತು ಲಿಂಗ
ಆದಿಯಲ್ಲಿ ನೀನೇ ಲಿಂಗವಾದ ಕಾರಣ
ನಿನ್ನಿಂದ ಹುಟ್ಟಿತ್ತು ಜಂಗಮ.
ಆದಿಯಲ್ಲಿ ನೀನೇ ಜಂಗಮವಾದ ಕಾರಣ
ನಿನ್ನಿಂದ ಹುಟ್ಟಿತ್ತು ಪ್ರಸಾದ
ಆದಿಯಲ್ಲಿ ನೀನೇ ಪ್ರಸಾದಿಯಾದ ಕಾರಣ
ನಿನ್ನಿಂದ ಹುಟ್ಟಿತ್ತು ಪಾದೋದಕ.....”

-ಅಲ್ಲಮಪ್ರಭು (ಸ.ವ.ಸಂ.೨,ವ: ೮೯೩, ೧೯೯೩)

ಹೀಗೆ ಚೆನ್ನಬಸವಣ್ಣನವರು ಮತ್ತು ಅಲ್ಲಮಪ್ರಭುಗಳು ಈ ಧರ್ಮದ ಸಂಸ್ಥಾಪಕ ಬಸವಣ್ಣ ಮಾತ್ರವೆಂದು ಸ್ಪಷ್ಟಪಡಿಸಿದ್ದಾರೆ. ಇದೇ ವಚನದಲ್ಲಿ ಮುಂದುವರಿದು ಹೇಳಿದ ಅಲ್ಲಮಪ್ರಭು, ಬಸವಣ್ಣನವರನ್ನು ಪೂರ್ವಾಚಾರಿಯೆಂದು ಕರೆದಿದ್ದಾರೆ. ಇಷ್ಟಲಿಂಗದ ಪರಿಕಲ್ಪನೆ ಬಸವಣ್ಣನವರಿಂದಲೇ ಹುಟ್ಟಿದ್ದಾಗಿದೆ. ಅಲ್ಲಿಯವರೆಗೆ ಸ್ಥಾವರಲಿಂಗಗಳಿದ್ದವು. ಬಸವಣ್ಣನವರನ್ನು ಈ ಎಲ್ಲ ಶರಣರು ಸರ್ವಾಚಾರಿ, ಸದಾಚಾರಿ, ಪೂರ್ವಾಚಾರಿಯೆಂದು ಕರೆದಿದ್ದಾರೆ. ಬಸವಣ್ಣನವರೇ ಲಿಂಗವಂತ ಧರ್ಮದ ಸಂಸ್ಥಾಪಕರು, ಪ್ರಥಮಾಚಾರ್ಯರು, ಪೂರ್ವಾಚಾರ್ಯರು ಅವರೇ ಆಗಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ಬಸವಣ್ಣನವರು ಸ್ವಯಂ ಗುರುವಾಗಿದ್ದಾರೆ. ಅವರು ಕಂಡುಕೊಂಡ ಸತ್ಯವೇ ಇಷ್ಟಲಿಂಗವಾಗಿದೆ. ಅವರು ಸ್ಥಾಪಿಸಿದಧರ್ಮವೇ ಲಿಂಗಾಯತ ಧರ್ಮವಾಗಿದೆ.

“ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ
ಎನ್ನ ಮನವನೊರೆದು ನೋಡುವುದು ಬಸವಣ್ಣನ ಧರ್ಮವಯ್ಯಾ
ಎನ್ನ ಧನವ ಸೂರೆಮಾಡುವುದು ಬಸವಣ್ಣನ ಧರ್ಮವಯ್ಯಾ
ಕಪಿಲಸಿದ್ಧ ಮಲ್ಲಿನಾಥಯ್ಯಾ”

-ಸಿದ್ಧರಾಮೇಶ್ವರ(ಸ.ವ.ಸಂ.೪,ವ:೨೩೬, ೧೯೯೩)

“ನೋಟದ ಭಕ್ತಿ ಬಸವನಿಂದಾಯಿತ್ತು
ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ.
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ?
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ
ಕಪಿಲಸಿದ್ಧ ಮಲ್ಲಿನಾಥಯ್ಯಾ”

-ಸಿದ್ಧರಾಮೇಶ್ವರ(ಸ.ವ.ಸಂ.೪, ವ:೫೫೮, ೧೯೯೩)

ಈ ಎರಡು ವಚನಗಳಲ್ಲಿ ಸಿದ್ಧರಾಮೇಶ್ವರರು ಬಸವಣ್ಣನ ಧರ್ಮ, ಬಸವಣ್ಣನ ಧರ್ಮ ಎಂದು ಸ್ಪಷ್ಟಪಡಿಸುತ್ತಲೇ ಹೋಗಿದ್ದಾರೆ. ಬಸವಣ್ಣನ ಧರ್ಮ ಸಾಮಾನ್ಯವಾದುದಲ್ಲ, ಅದು ಮಹಾಜ್ಞಾನದಿಂದ ಕಟ್ಟಲ್ಪಟ್ಟಿದೆ, ಅದರಲ್ಲಿ ಮಹಾಪ್ರಕಾಶವಿದೆ. ಅದೇ ಲಿಂಗಾಯತ ಧರ್ಮವಾಗಿದೆ. ಅಂತಹ ಧರ್ಮವನ್ನು ಬೇರೆಯವರಿಂದ ಸ್ಥಾಪಿಸಿಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ತನುವನ್ನು ಅಲ್ಲಾಡಿಸುವ, ಮನವನ್ನು ಒರೆದುನೋಡುವ, ದಾಸೋಹಕ್ಕಾಗಿ ಧನವನ್ನು ಸೂರೆಮಾಡುವ ಬಸವಣ್ಣನವರ ಧರ್ಮ ತುಂಬ ವಿಶಿಷ್ಟವಾದುದಾಗಿದೆಯೆಂದು ಶಿವಯೋಗಿ ಸಿದ್ಧರಾಮರು ಈ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಬಸವಣ್ಣನವರ ಧರ್ಮವು ಕರುಣೆಯ ಧರ್ಮವಾಗಿದೆ, ಆದುದರಿಂದ ಅದು ಎಲ್ಲರಿಗೂ ಅಗತ್ಯವಾಗಿದೆಯೆಂದು ಶಿವಯೋಗಿಗಳು ವಿವರಿಸಿದ್ದಾರೆ. ಕಪಿಲಸಿದ್ದ ಮಲ್ಲಿನಾಥಯ್ಯಗೂ, ತಮಗೂ ಹೀಗೆ ಎಲ್ಲರಿಗೂ ಲಿಂಗಾಯತ ಧರ್ಮವೇ ಆದರ್ಶವಾಗಿದೆಯೆಂದು ಸಿದ್ಧರಾಮೇಶ್ವರರು ಈ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಲಿಂಗಾಯತ ಧರ್ಮವು ತುಂಬ ವಿಶಿಷ್ಟವಾದುದಾಗಿದೆ. ಇದು ಕನ್ನಡನಾಡಿನ ಪ್ರಥಮ ಧರ್ಮವಾಗಿದೆ. ಈ ನಾಡಿನಲ್ಲಿ ಶರಣರು ಬರುವದಕ್ಕಿಂತ ಪೂರ್ವದಲ್ಲಿ ಅನೇಕ ಧರ್ಮಗಳು ಇದ್ದವು. ಅವು ಯಾವೂ ಈ ನಾಡಿನ ಮಣ್ಣಿನಲ್ಲಿ ಹುಟ್ಟಿದವುಗಳಾಗಿರಲಿಲ್ಲ. ಅವೆಲ್ಲಾ ಭಾರತದ ಬೇರೆ ಬೇರೆ ಪ್ರದೇಶಗಳಿಂದ ಬಂದಂತವುಗಳು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಈ ಧರ್ಮವನ್ನು ಸ್ಥಾಪನೆಮಾಡಿದರು, ಬಸವಣ್ಣನೇ ಈ ಧರ್ಮದ ಮೂಲಪುರುಷ, ಅದಕ್ಕಾಗಿ ಇದಕ್ಕೆ ಬಸವಧರ್ಮವೆಂದೂ ಕರೆಯುತ್ತಾರೆ. ಸ್ಥಾವರಲಿಂಗವ ಬಿಟ್ಟು, ಇಷ್ಟ-ಲಿಂಗಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದರಿಂದ ಇದಕ್ಕೆ ಲಿಂಗಾಯತ ಧರ್ಮವೆಂತಲೂ ಕರೆಯುತ್ತಾರೆ. ಶೈವಧರ್ಮದ ಕಾಪಾಲಿಕ, ಕಾಲಾಮುಖ, ಪಾಶುಪತ ಮತ್ತು ಲಕುಲೀಶ ಶಾಖೆಗಳು, ಶರಣರು ಕರ್ನಾಟಕದಲ್ಲಿ ಜನಿಸುವದಕ್ಕಿಂತ ಮೊದಲೇ ಜಾರಿಯಲ್ಲಿದ್ದವು. ಅದೇ ರೀತಿ ಜೈನಧರ್ಮ ಹಾಗೂ ಬೌದ್ಧ ಧರ್ಮದ ವಜ್ರಯಾನ ಶಾಖೆ ಈ ನಾಡಿನಲ್ಲಿದ್ದವು. ಆದರೆ ಇವು ಯಾವೂ ಈ ನೆಲದಲ್ಲಿ ಹುಟ್ಟಿದ ಧರ್ಮಗಳಲ್ಲ. ಶೈವ-ಜೈನ ಧರ್ಮಗಳ ಜತೆ ವೈದಿಕ ಧರ್ಮದ ಶಾಖೆಗಳೂ ತುಂಬ ಪ್ರಬಲವಾಗಿದ್ದವು. ಆದರೆ ಈ ಧರ್ಮಗಳೆಲ್ಲ ಹೊರಗಿನಿಂದ ಬಂದವುಗಳೇ ಆಗಿವೆ. ಬಸವಣ್ಣನಿಗಿಂತ ಮೊದಲಿದ್ದ ಶಂಕರಾಚಾರ್ಯರಾಗಲಿ, ರಾಮಾನುಜಾಚಾರ್ಯರಾಗಲಿ ಬಸವಣ್ಣನ ನಂತರ ಬಂದ ಮಧ್ವಾಚಾರ್ಯರಾಗಲಿ ಇವರಾರೂ ಕರ್ನಾಟಕದವರಲ್ಲ. ಆದ್ದರಿಂದ ಕರ್ನಾಟಕದಲ್ಲಿ ಹುಟ್ಟಿದ ಪ್ರಪ್ರಥಮ ಧರ್ಮವೇ ಲಿಂಗಾಯತ ಧರ್ಮವಾಗಿದೆ. ಕನ್ನಡ ಭಾಷೆಗೆ ಜಾತಿಸಂಬಂಧವಿಲ್ಲ ಕರ್ನಾಟಕದಲ್ಲಿ ಜನಿಸಿದವರು, ಇಲ್ಲಿಯೇ ಇದ್ದವರು ಅವರೆಲ್ಲಾ ಕನ್ನಡಿಗರು. ಅದೇ ರೀತಿ ಶರಣಧರ್ಮ ಕೂಡಾ ಯಾವುದೇ ಜಾತಿಗೆ ಸಂಬಂಧಿಸಿಲ್ಲ. ಜಾತಿಯೆಂಬುದು ಜನ್ಮದಿಂದ ನಿರ್ಧಾರವಾಗುತ್ತದೆ. ಜೈನರ ಜಾತಿಯಲ್ಲಿ ಹುಟ್ಟಿದರೆ ಜೈನರೆನಿಸಿಕೊಳ್ಳುತ್ತಾರೆ, ಬ್ರಾಹ್ಮಣರ ಜಾತಿಯಲ್ಲಿ ಹುಟ್ಟಿದರೆ ಬ್ರಾಹ್ಮರೆನಿಸಿಕೊಳ್ಳುತ್ತಾರೆ, ವೀರಶೈವ ಜಾತಿಯಲ್ಲಿ ಹುಟ್ಟಿದರೆ

ವೀರಶೈವರೆನಿಸಿಕೊಳ್ಳುತ್ತಾರೆ. ಅದರೆ ಲಿಂಗಾಯತ ಧರ್ಮಕ್ಕೆ ಜಾತಿ ಆಧಾರವಾಗಿಲ್ಲ. ಶೈವಬ್ರಾಹ್ಮಣನಾದ ಬಸವಣ್ಣ, ಮದ್ದಳಿಗ ಜಾತಿಯವನಾದ ಅಲ್ಲಮ, ಮಾದಾರ ಜಾತಿಗೆ ಸೇರಿದ ಚೆನ್ನಯ್ಯ, ಧೂಳಯ್ಯ, ಸಮಗಾರ ಜಾತಿಗೆ ಸೇರಿದ ಕಕ್ಕಯ್ಯ, ಅಂಬಿಗ ಜಾತಿಗೆ ಸೇರಿದ ಅಂಬಿಗರಚೌಡಯ್ಯ ಇವರೆಲ್ಲಾ ಲಿಂಗಾಯತ ಧರ್ಮದ ಸಂಸ್ಥಾಪಕರು. ಕರ್ನಾಟಕದಲ್ಲಿರುವ ಎಲ್ಲರ ಭಾಷೆ ಹೇಗೆ ಕನ್ನಡವೋ, ಅದೇ ರೀತಿ ಈ ನಾಡಿನಲ್ಲಿರುವ, ಈ ನಾಡಿನವರಿಂದಲೇ ಸ್ಥಾಪನೆಯಾದ ಈ ಧರ್ಮವು ಎಲ್ಲ ಕನ್ಮಡಿಗರ ಧರ್ಮವಾಗಿದೆ. ಅಂತೆಯೇ ವೀರಶೈವ ಧರ್ಮಕ್ಕೂ-ಲಿಂಗಾಯತ ಧರ್ಮಕ್ಕೂ, ಬ್ರಾಹ್ಮಣ ಧರ್ಮಕ್ಕೂ-ಲಿಂಗಾಯತ ಧರ್ಮಕ್ಕೂ ಬಹಳ ವ್ಯತ್ಯಾಸವಿದೆ. ಬ್ರಾಹ್ಮಣ ಮಹಾಸಭಾದಲ್ಲಿ ಇಂದಿಗೂಕೂಡ ಬ್ರಾಹ್ಮಣರಾಗಿ ಹುಟ್ಟಿದವರೇ ಅದರ ಸದಸ್ಯರಾಗಿರುತ್ತಾರೆ. ಅದೇ ರೀತಿ ವೀರಶೈವ ಮಹಾಸಭಾದಲ್ಲಿ ಹುಟ್ಟಿನಿಂದ ವೀರಶೈವರಾದವರೇ ಅದರ ಸದಸ್ಯರಾಗಿರುತ್ತಾರೆ. ಆದರೆ ಲಿಂಗಾಯತ ಧರ್ಮದಲ್ಲಿ ಶರಣತತ್ವವನ್ನು ನಂಬಿದ ಯಾರಾದರೂ ಸದಸ್ಯರಾಗಿರ ಬಹುದಾಗಿದೆ. ಬಸವಧರ್ಮದ ನಿಜವಾದ ತಾತ್ವಕ ತಳಹದಿಯೇ ಇದಾಗಿದೆ. ಇಲ್ಲಿ ಜಾತಿಭೇದವಿಲ್ಲ-ಲಿಂಗಭೇದವಿಲ್ಲ-ವರ್ಗಭೇದವಿಲ್ಲ-ಪ್ರದೇಶಿಕಭೇದವಿಲ್ಲ. ಎಲ್ಲಭೇದಗಳನ್ನು ತಿರಸ್ಕರಿಸಿದ ಅಭೇದ ಸಂಸ್ಕೃತಿಯೇ ಶರಣ ಸಂಸ್ಕೃತಿಯಾಗಿದೆ. ಆದುದರಿಂದ ಕರ್ನಾಟಕಕ್ಕೆ ಲಿಂಗಾಯತ ಧರ್ಮವೇ ಪ್ರಥಮ ಸ್ವತಂತ್ರ ಧರ್ಮವಾಗಿದೆ, ಶರಣರು ನುಡಿದ ಕನ್ನಡ ಈ ನಾಡಿನ ಪ್ರಥಮ ಭಾಷೆಯಾಗಿದೆ. ಎಲ್ಲ ಜಾತಿ-ಲಿಂಗ-ವರ್ಗಭೇದಗಳನ್ನು ಮುರಿದೊಗೆದ ಜಾತ್ಯಾತೀತ ಸಂಸ್ಕೃತಿಯೇ ಶರಣ ಸಂಸ್ಕೃತಿಯಾಗಿದೆ. ಈ ಸತ್ಯವನ್ನು ಕನ್ನಡಿಗರು ಅರ್ಥೈಸಿಕೊಂಡರೆ, ಕನ್ನಡವನ್ನು ಪ್ರೀತಿಸುವ ರೀತಿಯಲ್ಲಿಯೇ ಲಿಂಗಾಯತ ಧರ್ಮವನ್ನು ತಮ್ಮದೆಂದು ತಿಳಿದುಕೊಳ್ಳಬೇಕಾಗುತ್ತದೆ.

ಪ್ರತಿಯೊಂದು ಧರ್ಮಗಳ ಸಂಸ್ಥಾಪಕರು ಆಯಾ ಧರ್ಮಗಳ ಗೋತ್ರದವರೇ ಆಗಿರುತ್ತಾರೆ. ಆದರೆ ಲಿಂಗಾಯತ ಧರ್ಮದ ಗೋತ್ರ ಪುರುಷ ಮಾದಾರ ಚೆನ್ನಯ್ಯನಾಗಿದ್ದಾನೆ. ಈ ಧರ್ಮದ ಅನುಭವ ಮಂಟಪದ ಅಧ್ಯಕ್ಷ ಶೂದ್ರ ನಟವರ ಜಾತಿಗೆ ಸೇರಿದ ಅಲ್ಲವಪ್ರಭುವಾಗಿದ್ದಾನೆ. ಈ ಸತ್ಯವನ್ನು ತಿಳಿದುಕೊಂಡಾಗ ಜಾತಿರಹಿತ ಧರ್ಮವೆಂಬುದಿದ್ದರೆ ಅದು ಲಿಂಗಾಯತ ಧರ್ಮಮಾತ್ರವೆಂಬುದು ಸ್ವಷ್ಟವಾಗುತ್ತದೆ. ಭಾರತದ ಅಥವಾ ಕರ್ನಾಟಕದ ಇತರ ಧರ್ಮಗಳಿಗೆ ಹೋಲಿಸಿದರೆ ಇದನ್ನು ಒಂದು ಧರ್ಮ ಎನ್ನುವದಕ್ಕಿಂತ ಒಂದು ಸಿದ್ಧಾಂತವೆಂದು ಕರೆಯುವುದು ಸೂಕ್ತವೆನಿಸುತ್ತದೆ. ಮಾರ್ಕ್ಸ್ ಸಿದ್ಧಾಂತ, ಲೋಹಿಯಾ ಸಿದ್ಧಾಂತಗಳಿರುವಂತೆ ಶರಣಸಿದ್ಧಾಂತ ಇದೆ. ಇದರ ಎಲ್ಲ ಲಕ್ಷಣಗಳು ಸಿದ್ಧಾಂತಕ್ಕೆ ಸಮೀಪವಾಗಿವಿಯೇ ಹೊರತು, ಧರ್ಮಕ್ಕಲ್ಲ.

ದೇಶವ್ಯವಸ್ಥೆಯಲ್ಲಿ “ಧರ್ಮ” ಎಂಬ ಹೆಸರು ಕಿವಿಗೆ ಬಿದ್ದಾಕ್ಷಣ ಇಂದಿನ ಯುವ ಜನತೆಗೆ ಅಸಹ್ಯಭಾವನೆ ಹುಟ್ಟುತ್ತದೆ. ಅದು ಸಹಜವೂ ಆಗಿದೆ. ಯಾಕೆಂದರೆ ಇಲ್ಲಿ ಹುಟ್ಟಿದ ಯಾವ ಧರ್ಮಗಳೂ ಧರ್ಮಗಳಾಗಿ ಉಳಿದುಕೊಂಡಿಲ್ಲ, ಅವು ಜಾತಿಗಳಾಗಿ ಪರಿವರ್ತನೆಗೊಂಡಿವೆ. ವೋಟ್‌ಬ್ಯಾಂಕ್‌ಗಳಾಗಿ ಆಕರ್ಷಿಸುತ್ತವೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಮೊದಲು ಈ ಜಾತಿ-ಧರ್ಮಗಳ ಲೆಕ್ಕಾಚಾರವನ್ನೇ ಮಾಡುತ್ತವೆ. ಹೀಗಾಗಿ ಪ್ರಜಾಪ್ರಭುತ್ವವೆಂಬುದು ಇಂದು ರಾಜಕೀಯ ಪ್ರಭುತ್ವ ಮತ್ತು ಧಾರ್ಮಿಕ ಪ್ರಭುತ್ವಗಳೆರಡರಲ್ಲಿ ಹಂಚಿಹೋಗಿದೆ. ಇಂದಿನ ಧಾರ್ಮಿಕ ಪ್ರಭುತ್ವದ ಅನೇಕ ಜಗದ್ಗುರುಗಳು ವೋಟ್‌ಬ್ಯಾಂಕ್‌ಗಳ ಮಾಲಿಕರಾಗಿದ್ದಾರೆಯೇ ಹೊರತು, ಅವರು ಲಿಂಗಾಯತ ಧರ್ಮದ ಅನುಯಾಯಿಗಳಾಗಿಲ್ಲ. ಆದ್ದರಿಂದಲೇ ಯುವಜನತೆಗೆ ಧರ್ಮಗಳ ಬಗ್ಗೆ ಅಪನಂಬಿಕೆ ಉಂಟಾಗಿದೆ.

ಈ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮತ್ತು ಕೋಮುವಾದಿಗಳಿಗೆ ಧರ್ಮ-ಜಾತಿಯೆಂದರೆ ಎಲ್ಲಿಲ್ಲದ ಸಂಭ್ರಮ. ಅವರೆಂದೂ ಸಿದ್ಧಾಂತಗಳ ಬೆನ್ನು ಹತ್ತುವದಿಲ್ಲ. ಅವರು ಸುಲಭವಾಗಿ ಅಧಿಕಾರಕ್ಕೆ ಬರಲು ಜಾತಿ-ಧರ್ಮಗಳೇ ಪ್ರಧಾನಸ್ಥಾನವಹಿಸುತ್ತವೆ. ಅವರಿಗೆ ಆ ಧರ್ಮದಲ್ಲಿ ಭಕ್ತಿ ಇರಲಿ-ಬಿಡಲಿ ಅವರು ಅನಿವಾರ್ಯವಾಗಿ ಅಂತಹ ಧರ್ಮ-ಜಾತಿಗಳನ್ನು ಅಪ್ಪಿಕೊಳ್ಳಬೇಕಾದ ಪ್ರಸಂಗವಿದೆ. ಹೀಗಾಗಿ ಈ ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಧರ್ಮಪ್ರಭುತ್ವವಾಗಿದೆ. ಹಿಂದೆ ರಾಜನ ಆಳ್ವಿಕೆಯಲ್ಲಿ ಬ್ರಾಹ್ಮಣರು, ಕುಲಗುರುಗಳಾಗಿ ರಾಜಗುರುಗಳಾಗಿ ರಾಜನನ್ನು ನಿಯಂತ್ರಿಸಿದಂತೆ, ಇಂದು ಪ್ರಬಲ ಧರ್ಮಗಳ ಜಗದ್ಗುರುಗಳು ಮುಖ್ಯಮಂತ್ರಿಗಳನ್ನು, ಪ್ರಧಾನಮಂತ್ರಿಗಳನ್ನು ನಿಯಂತ್ರಿಸುತ್ತಾರೆ. ಹೀಗಾಗಿ ಧರ್ಮ ಮತ್ತು ರಾಜಕೀಯ ಎಂಬುವುಗಳು ಒಂದು ನಾಣ್ಯದ ಎರಡು ಮುಖಗಳಾಗಿವೆ. ಧರ್ಮ ಮತ್ತು ರಾಜಕೀಯಗಳು ಪರಸ್ಪರ ಕೂಡಿಕೊಂಡಿರಬಾರದೆಂದು ಇದರ ಅರ್ಥವಲ್ಲ. ಬೌದ್ಧಧರ್ಮದಂತಹ ಧರ್ಮ, ಅಶೋಕನಂತಹ ಸಾಮ್ರಾಟ ಕೂಡಿಕೊಂಡಾಗ ಹಿಂಸೆಯಳಿದು ಅಹಿಂಸೆ ಹುಟ್ಟುತ್ತದೆ. ಸಿಟ್ಟು ಅಳಿದು ಶಾಂತಿ ನೆಲೆಗೊಳ್ಳುತ್ತದೆ, ದ್ವೇಷದ ಬದಲು ಪ್ರೀತಿ ಹುಟ್ಟಿಕೊಳ್ಳುತ್ತದೆ. ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ ಅಂತಹ ಸಮನ್ವಯ ಸಾಧ್ಯವಾಗಿಲ್ಲ. ಸಿದ್ಧಾಂತವಿಲ್ಲದ ಮತೀಯ ಜಗದ್ಗುರುಗಳು ಹಾಗೂ ಸ್ವಾರ್ಥ ರಾಜಕಾರಣಿಗಳು ಹೆಚ್ಚು ಸಂಖ್ಯೆಯಲ್ಲಿ ಸಮಾಹಿತಗೊಂಡಿದ್ದಾರೆ. ಇವರೆದುರು ಸಿದ್ಧಾಂತವಿರುವ ಸ್ವಾಮಿಗಳು, ಜನಪರ ಕೆಲಸಮಾಡುವ ರಾಜಕಾರಣಿಗಳು ಅಲ್ಪಸಂಖ್ಯಾತರಾಗಿದ್ದಾರೆ. ಭಾರತದ ಅಲ್ಪಸಂಖ್ಯಾತರು ಕೆಲವು ವರ್ಷಗಳಲ್ಲಿಯೇ ಬಹುಸಂಖ್ಯಾತರಾಗಬಹುದು, ಆದರೆ ಈ ಸಾತ್ವಿಕ ಅಲ್ಪಸಂಖ್ಯಾತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಪ್ರಜಾಪ್ರಭುತ್ವದ ಅವಸಾನದ ಸಂಕೇತವಾಗಿದೆ.

ಶರಣಸಿದ್ಧಾಂತದ ತಾತ್ವಿಕತೆ ತುಂಬಾ ದೊಡ್ಡದು; ಅದರ ಆಚರಣೆ ತುಂಬ ಕಠಿಣವಾದುದು. ಹೀಗಾಗಿ ಲಿಂಗಾಯತ ಧರ್ಮವೆಂಬುದು ಈ ನಾಡಿನಲ್ಲಿ ಕೆಲವು ವರ್ಷಗಳು ಮಾತ್ರ ಜೀವಂತವಾಗಿತ್ತು. ಶರಣರ ಕ್ರಾಂತಿಯ ನಂತರ ಲಿಂಗಾಯತ ಧರ್ಮ ದೂರ ಸರಿಯಿತು. ವೀರಶೈವ ಧರ್ಮದ ಎರಡನೇಘಟ್ಟ ಎಂದು ಕರೆಸಿಕೊಳ್ಳುವ (ನೂರೊಂದುವಿರಕ್ತರ) ಹದಿನೈದನೇ ಶತಮಾನದ ಹೊತ್ತಿಗೆ ಸಿದ್ಧಾಂತ ಪೂರ್ತಿ ಕರಗಿ ಹೋಗಿತ್ತು. ನೂರೊಂದು ವಿರಕ್ತರಲ್ಲಿ ಒಬ್ಬನೂ ಶೂದ್ರನಿಲ್ಲ, ಒಬ್ಬನೂ ದಲಿತನಿಲ್ಲ, ಒಬ್ಬರೂ ಮಹಿಳೆಯಿಲ್ಲ. ಹೀಗಾಗಿ ಶೂನ್ಯಸಂಪಾದನೆಗಳು ರಚನೆಯಾದ ಕಾಲಘಟ್ಟದಲ್ಲಿ ಲಿಂಗಾಯತ ಧರ್ಮದ ಸಿದ್ಧಾಂತಗಳೆಲ್ಲಾ ಕಳೆದು ಹೋಗಿ ವೀರಶೈವವೇ ಮತ್ತೆ ಪ್ರಧಾನವಾಯಿತು. ಇಂದಿಗೂ ಕೂಡ ವೀರಶೈವವೇ ಪ್ರಧಾನವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಧರ್ಮವನ್ನು ವೈದಿಕರು-ಪುರೋಹಿತಶಾಹಿಗಳು ಕೊಂದರೆ, ಹದಿನೈದನೇ ಶತಮಾನದಲ್ಲಿ ವೀರಶೈವರು-ಜಾತಿಜಂಗಮರು ಕೊಂದುಬಿಟ್ಟರು. ಹೀಗಾಗಿ ಲಿಂಗಾಯತ ಧರ್ಮವನ್ನು ನಾಶಮಾಡಿದ ಶ್ರೇಯಸ್ಸು ವೀರಶೈವ ಹಾಗೂ ಬ್ರಾಹ್ಮಣ ಪುರೋಹಿತಶಾಹಿಗಳಿಗೆ ಸಲ್ಲುತ್ತದೆ. ದೇವಾಲಯಗಳನ್ನು ನಿರಾಕರಿಸಿದ ಶರಣರ ಹೆಸರಿನಲ್ಲಿಯೇ ನೂರಾರು ದೇವಾಲಯಗಳು ಹುಟ್ಟಿಕೊಂಡಿವೆ. ಕಾಯಕ ಜೀವಿಗಳಾಗಿದ್ದ ಶರಣರ ಅನುಯಾಯಿಗಳು ಇಂದು ನಿರುದ್ಯೋಗಿಗಳಾಗಿದ್ದಾರೆ. ದಾಸೋಹದಿಂದ ಹೆಗ್ಗಳಿಕೆಗಳಿಸಿದ್ದ ಶರಣರ ಸಂತಾನ ಇಂದು ನಿರ್ಗತಿಕವಾಗಿದೆ. ಆದ್ದರಿಂದ ಇಂದು ಲಿಂಗಾಯತ ವಾಸನೆ ಏನಾದರೂ ಇದ್ದರೆ, ಅದು ದುಡಿವ ಶ್ರಮಿಕರಲ್ಲಿದೆ, ಬಡ ರೈತರಲ್ಲಿದೆ, ಮೈಮುರಿದು ದುಡಿವ ಗ್ರಾಮೀಣ ಮಹಿಳೆಯರಲ್ಲಿದೆ.

ಶರಣಸಿದ್ಧಾಂತ ಮತ್ತು ಮಾರ್ಕ್ಸ್ಸಿದ್ಧಾಂತ ಒಂದು ನಾಣ್ಯದ ಎರಡು ಮುಖಗಳು. ಬುದ್ಧ-ಬಸವ-ಅಂಬೇಡಕರ್ ಈ ದೇಶ ಕಂಡ ಮಹಾನುಭಾವಿಗಳು; ಸಮಾನತೆಯ ಹರಿಕಾರರು. ಇಪ್ಪತ್ತೊಂದನೇ ಶತಮಾನದಲ್ಲಿ ಇವರ‍್ಯಾರೂ ಇಲ್ಲ, ಇವರ ವಿಚಾರ ಧಾರೆಗಳು ಜಾರಿಯಾಗುತ್ತಿಲ್ಲ, ಬದಲಾಗಿ ಇವರ ಭಜನೆ ನಡೆದಿದೆ, ಇವರ ಮೂರ್ತಿಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ನಡೆದಿದೆ. ಮತ್ತು ಈ ಧರ್ಮ ಕುರಿತು ಭಾಷಣಗಳು ಭರ್ಜರಿಯಾಗಿವೆ.

ಲಿಂಗಾಯತ ಧರ್ಮದ ಸಂಪೂರ್ಣ ಸಾಧನೆ ಶರಣರ ಕಾಲಕ್ಕೇ ಸಾಧ್ಯವಾಗಲಿಲ್ಲ. ಶರಣಸಿದ್ಧಾಂತಗಳು ಅಂದು ಜಾರಿಗೆ ಬಂದಿದ್ದರೆ, ಕರ್ನಾಟಕವೇ ಮೊದಲನೇ ಫ್ರೇಂಚ್‌ಕ್ರಾಂತಿಯಾಗಿರತಿತ್ತು. ಆದರೆ ಪಟ್ಟಭದ್ರ ಹಿತಾಶಕ್ತಿಗಳು ಶರಣರ ಕ್ರಾಂತಿಯನ್ನು ವಿಫಲಗೊಳಿಸಿದವು. ಎಳೆಯೂಟಿಯೊಂದಿಗೆ ಶರಣರ ಕ್ರಾಂತಿ ದುರಂತದಲ್ಲಿ ಮುಕ್ತಾಯವಾಯಿತು. ಹೀಗಾಗಿ ಮುಂದೆ ಬಂದರ‍್ಯಾರೂ ಶರಣಸಿದ್ಧಾಂತದ ಆಚರಣೆಗೆ ಕೈಹಾಕಲು ಹೋಗಲಿಲ್ಲ. ಆ ಸಿದ್ಧಾಂತ ಎಷ್ಟೊಂದು ಕಠಿಣವಾದದ್ದೆಂದರೆ, ಅದು ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ. ಕೊರಳಲ್ಲಿ ಕಟ್ಟಿದ ಬೆಂಡು ಮುಳುಗಗೊಡುವುದಿಲ್ಲ, ಕಾಲಲ್ಲಿ ಕಟ್ಟಿದ ಗುಂಡು ತೇಲಗೊಡುವುದಿಲ್ಲ. ಈಸುವದೇ ಬೇಡವೆಂದ ಜನತೆಗೆ ಶರಣಸಿದ್ಧಾಂತದ ಅಗತ್ಯವೇ ಇರುವುದಿಲ್ಲ. ಹೀಗಾಗಿ ಲಿಂಗಾಯತವೆಂಬುದು ಹನ್ನೆರಡನೇ ಶತಮಾನದಲ್ಲಿ ಮಾಡಿದ ಮೊದಲ ಪ್ರಯೋಗವಾಯಿತು. ಅಂತಹ ಪ್ರಯೋಗವನ್ನು ಮುಂದುವರಿಸಿಕೊಂಡು ಹೋಗಲು ನಂತರದಲ್ಲಿ ಬಂದ ಯುವಪೀಳಿಗೆ ಮನಸ್ಸು ಮಾಡಲಿಲ್ಲ. ಹೀಗಾಗಿ ಶರಣಸಿದ್ಧಾಂತ ಒಂದು ಆದರ್ಶವಾಯಿತೇ ಹೊರತು ವಾಸ್ತವವಾಗಲಿಲ್ಲ.

ಶರಣರು ತಮ್ಮ ಧರ್ಮಕ್ಕೆ ಹೊಸ ವ್ಯಾಖ್ಯೆ ಬರೆದರು. ಧರ್ಮವೆಂದರೆ ಪಾರಲೌಕಿಕಕ್ಕೆ ಮಾತ್ರ ಸೀಮಿತವಾದುದಲ್ಲ ಅದು ಇಹಲೋಕಕ್ಕೂ ಸಂಬಂದಿಸಿದ್ದೆಂದು ಹೇಳಿದರು. ಧರ್ಮವೆಂದರೆ ಕೇವಲ ದೇವರು ಮತ್ತು ದೇವಾಲಯಗಳಿಗೆ ಮಾತ್ರ ಸೀಮಿತವಾದುದಲ್ಲ ಅದು ಮನುಷ್ಯ ಮತ್ತು ದೇಹಕ್ಕೆ ಸಂಬಂಧಿಸಿದ್ದೂ ಹೌದೆಂದು ಸ್ಪಷ್ಟಪಡಿಸಿದರು. ಧರ್ಮವೆಂದರೆ ಮೋಕ್ಷದ ಹಾದಿ ಮಾತ್ರವಲ್ಲ ಅದು ಬದುಕಿನ ನಡೆ ಎಂದು ತೋರಿಸಿದರು.

“ದಯವಿಲ್ಲದ ಧರ್ಮವಾವುದಯ್ಯಾ
ದಯವೇಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ
ದಯವೇಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನತಲ್ಲದೊಲ್ಲನಯ್ಯಾ”

-ಬಸವಣ್ಣ (ಸ.ವ.ಸಂ.೧,ವ:೨೪೭)

ಲಿಂಗಾಯತ ಧರ್ಮದ ಬಗ್ಗೆ ಪ್ರಥಮವಾಗಿ ಬರೆದ ಬಸವಣ್ಣನ ಹೊಸ ವ್ಯಾಖ್ಯೆ ಇದು. ಇಲ್ಲಿ ಬಂದಿರುವ ದಯೆ ಇಹಲೋಕದ ಸಕಲ ಜೀವರಾಶಿಗಳಿಗೂ ಸಂಬಂಧಿಸಿದ್ದೇ ಹೊರತು, ಪರಲೋಕದವರಿಗಲ್ಲವೆಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಧರ್ಮವು ಹೊರನೋಟಕ್ಕೆ ಪಾರಮಾರ್ಥಿಕವೆಂದು ಕಂಡುಬಂದರೂ, ಅದರೊಳಗಿನ ಸಿದ್ಧಾಂತಗಳೆಲ್ಲಾ ಇಹಲೋಕಕ್ಕೆ ಸಂಬಂಧಿಸಿದವುಗಳಾಗಿವೆ. ಆದ್ದರಿಂದ ಶರಣರ ದೃಷ್ಟಿಯಲ್ಲಿ ನಿಜವಾದ ಧಾರ್ಮಿಕವೆಂದರೆ ಅದು ನಿಜವಾದ ಸಾಮಾಜಿಕವೇ ಆಗಿತ್ತು. ಧಾರ್ಮಿಕ-ಸಾಮಾಜಿಕದಲ್ಲಿ ಮತ್ತು ಇಹ-ಪರದಲ್ಲಿ ಭೇದಭಾವಗಳಿರಲಿಲ್ಲ. ಸ್ವರ್ಗ-ನರಕ ಲೋಕಗಳು ಬೇರೆ ಬೇರೆಯಾಗಿರಲಿಲ್ಲ. “ಇಲ್ಲಿಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ” ಎಂಬ ಬಸವಣ್ಣನ ನುಡಿ ಇಲ್ಲಿಯದಕ್ಕೆ ಪ್ರಾಧಾನ್ಯತೆ ನೀಡಿತು. ಹೀಗಾಗಿ ಲಿಂಗಾಯತ ಧರ್ಮವೆಂಬುದು ಸಾಮಾಜಿಕ ಧರ್ಮವಾಯಿತು.

“ಧರ್ಮವೆ ಸಯವಾಗಿ ಆಚಾರದ ನಿಲವನರಿದು
ಹೃದಯದ ಕತ್ತಲೆಯ ಉದಯದಲೆ ಕಳೆದು
ಮುಟ್ಟುವುದ ಮುಟ್ಟದೆ ಕಳೆದು, ಮುಟ್ಟುದದ ಮುನ್ನವೇ ಕಳೆದು
ಅಯ್ಯಾ ಅಯ್ಯಾಯೆಂಬಲ್ಲಿಯೆ ಕಲಿಯಾದ......”

-ಚೆನ್ನಬಸವಣ್ಣ (ಸ.ವ.ಸಂ.೩, ವ:೩೭೭)

ಇದು ಚೆನ್ನಬಸವಣ್ಣನ ಧರ್ಮದ ವ್ಯಾಖ್ಯಾನವಾಗಿದೆ. “ಸಯ” ಎಂದರೆ ಶಾಂತ. ಧರ್ಮವೆಂದರೆ ಶಾಂತವಾದುದು, ಸಂಯಮದಿಂದ ಕೂಡಿದ್ದು, ಅಂತಹ ಧರ್ಮ ಆಚಾರದ ನಿಲುವನ್ನರಿತಿರುತ್ತದೆ, ಹೃದಯದ ಕತ್ತಲೆಯನ್ನು ಕಳೆಯುತ್ತದೆ. ಅಯ್ಯಾ ಅಯ್ಯಾ ಎಂಬುವುದು ಕೇವಲ ವಿನಯದ ಮಾತಲ್ಲ, ಅದು ವೀರತನದ ಮಾತಾಗಿದೆಯೆಂದು ಚೆನ್ನಬಸವಣ್ಣ ಹೇಳಿದ್ದಾನೆ. “ಅಯ್ಯಾ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ” ಎಂಬ ಬಸವಣ್ಣನ ವಚನದ ನುಡಿಯಲ್ಲಿ ಇದೇ ಅರ್ಥವಿದೆ. ನಿಜವಾದ ಕಲಿ ದಯಾಮಯಿಯಾಗಿರುತ್ತಾನೆ. ನಿಜವಾದ ವೀರನೇ ವಿನಯವಂತನೆಂದು ಲಿಂಗಾಯತ ಧರ್ಮ ಹೇಳುತ್ತದೆ.

“ಧರ್ಮವ ಧರಿಸಿದ ಬಳಿಕ
ಲಿಂಗಾರ್ಚನೆಯ ಮಾಡಿ ಸಾಯಬಹುದಯ್ಯಾ
ಸತ್ತಡೆ ಸಾಯಬಹುದು
ಹೊತ್ತಿಗೊಮ್ಮೆ ಸೂರ್ಯನಂತೆ ಬರಬಾರದಯ್ಯಾ
ಬಂದಡೆ ಬರಬಹುದು,
ತನ್ನಾಯತವ ಮರೆದಿರಬಾರದಯ್ಯಾ
ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ”

-ಸಿದ್ಧರಾಮ. (ಸ.ವ.ಸಂ.೪, ವ:೧೫೧೧)

ಸಿದ್ಧರಾಮ ಹೇಳಿರುವ ಇಲ್ಲಿಯ ಲಿಂಗಾರ್ಚನೆ ಕ್ರಿಯೆಗೆ ಸಂಬಂಧಿಸಿದೆ. ಅರಿವು ಗುರುವಾಗಬೇಕಾದರೆ, ಆಚರಣೆಯೆಂಬುದು ಭಾವಲಿಂಗದಿಂದ ಮಾತ್ರ ಸಾಧ್ಯವಾಗುತ್ತದೆ. ಧರ್ಮವನ್ನು ಧರಿಸುವದೆಂದರೆ ಲಿಂಗಾರ್ಚನೆಯನ್ನು ಮಾಡುವುದೆಂದರ್ಥ; ಲಿಂಗಾರ್ಚನೆಯ ಮಾಡುವುದೆಂದರೆ ಅರಿವನ್ನೇ ಗುರುವಾಗಿಸಿಕೊಳ್ಳುವುದೆಂದರ್ಥ. ಜ್ಞಾನ ಮತ್ತು ಕ್ರಿಯೆ ಲಿಂಗಾಯತ ಧರ್ಮದ ಎರಡು ಪ್ರಮುಖ ಸಾಧನಗಳು. ಕೇವಲ ಜ್ಞಾನಿಯಾಗುವುದರಿಂದ ಉಪಯೋಗವಿಲ್ಲ; ಕೇವಲ ಕ್ರಿಯೆಯಲ್ಲಿ ತೊಡಗಿರುವುದರಿಂದಲೂ ಉಪಯೋಗವಿಲ್ಲ. ಜ್ಞಾನವೆಂಬುದು ಕ್ರಿಯೆಗೆ ಬಂದಾಗ, ಜ್ಞಾನದ ಮಹತ್ವ, ಆದರ ಬೆಳಕು, ಅದರ ಸೌಂದರ್ಯ ಗೊತ್ತಾಗುತ್ತದೆ. ಅದೇ ರೀತಿ ತನ್ನರಿವೇ ತನಗೆ ಗುರುವಾದಾಗ ತನ್ನೊಳಗಿರುವ ಶಕ್ತಿ ಸಾಧ್ಯತೆಗಳ ಪರಿಚಯವಾಗುತ್ತದೆ. ಹೀಗಾಗಿ ಲಿಂಗಾಯತ ಧರ್ಮವು ಕೇವಲ ಬೋಧನಾ ಪ್ರಧಾನವಾದುದಲ್ಲ; ಗೊತ್ತುಗುರಿಯಿಲ್ಲದ ಕ್ರಿಯಾ ಪ್ರಧಾನವಾದುದೂ ಅಲ್ಲ. ಹೀಗಾಗಿ ಅದು ಜ್ಞಾನ-ಕ್ರಿಯೆ ಮೇಳೈಸಿದ ಧರ್ಮ. ಅರಿವು-ಆಚಾರ ಕೂಡಿದ ಧರ್ಮ. ಅಂಗಾಂಗ-ಲಿಂಗಾಂಗವಾದ ಧರ್ಮ, ದೇಹ-ದೇವಾಲಯವಾದ ಧರ್ಮ, ಆತ್ಮ-ಪರಮಾತ್ಮವಾದ ಧರ್ಮ.

“ಅಯ್ಯಾ, ಧರ್ಮಿಯಲ್ಲ ಕರ್ಮಿಯಲ್ಲ ನೋಡಾ, ನಿರವಯಶೂನ್ಯಲಿಂಗಮೂರ್ತಿ
ಅಯ್ಯಾ, ಕಾಮಿಯಲ್ಲ ನಿಃಕಾಮಿಯಲ್ಲ ನೋಡಾ, ನಿರವಯಶೂನ್ಯಲಿಂಗಮೂರ್ತಿ”
-ಅಲ್ಲಮಪ್ರಭು (ಸ.ವ.ಸಂ.೨, ವ:೭೯೦)

ನಿರವಯಶೂನ್ಯಲಿಂಗಮೂರ್ತಿಯೆಂಬ ಶಕ್ತಿ ಕಾಣುವುದು ಕೇವಲ ಧರ್ಮ-ಕೇವಲ ಕರ್ಮದಿಂದ ಸಾಧ್ಯವಿಲ್ಲ. ಧರ್ಮ-ಕರ್ಮ ಕೂಡಿದಾಗ ಆ ಬಯಲು ತತ್ವದ ದೇವರು ಕಾಣಿಸಿಕೊಳ್ಳುತ್ತಾನೆಂದು ಅಲ್ಲಮಪ್ರಭು ಹೇಳಿದ್ದಾನೆ. ಕ್ರೋಧ-ನಿಃಕ್ರೋಧ, ಲೋಭ-ನಿರ್ಲೋಭ, ಮೋಹ-ನಿರ್ಮೋಹ, ಮತ್ಸರ-ನಿರ್ಮತ್ಸರ ಇವೆಲ್ಲವುಗಳನ್ನು ಮೀರಿನಿಂತಾಗ ಅಂತಹ ಧರ್ಮದ ಅನುಭಾವ, ಅಂತಹ ಲಿಂಗಮೂರ್ತಿಯ ಸಾಕ್ಷಾತ್ಕಾರ ಸಾಧ್ಯವೆಂದು ಹೇಳಿದ್ದಾನೆ.

ಧರ್ಮ ಬಿಟ್ಟಿವರಿಗೆ ಲಿಂಗವಿಲ್ಲ-ಜಂಗಮವಿಲ್ಲವೆಂದು ಹೇಳುವ ಅಕ್ಕಮಹಾದೇವಿ-“ಅಂಗದ ಭಂಗದ-ಲಿಂಗಮುಖದಿಂದ ಗೆಲ್ಲುವುದು ಧರ್ಮ, ಮನದ ಭಂಗದ-ಅರುಹಿನ ಮುಖದಿಂದ ಗೆಲ್ಲುವುದು ಧರ್ಮ, ಜೀವನ ಭಂಗದ-ಶಿವಾನುಭವದಿಂದ ಗೆಲ್ಲುವುದು ಧರ್ಮವೆಂದು” ಹೇಳಿದ್ದಾಳೆ. ಲಿಂಗಾಯತ ಧರ್ಮ ಎಷ್ಟೊಂದು ಅರ್ಥಪೂರ್ಣವೆಂಬುದನ್ನು ಮುಕ್ತಾಯಕ್ಕ ಹೀಗೆ ಹೇಳುತ್ತಾಳೆ.

“ಜಲದ ಚಿತ್ತಾರದ ಕೊರಳಿನಲ್ಲಿ
ದಾರವಿಲ್ಲದ ಮುತ್ತಿನ ಸರವು ನೋಡಾ!
ಚಿತ್ತಾರವಳಿಯದೆ ಮುತ್ತು ಉಳಿಯದೆ
ನಿಂದ ನಿಲವಿನ ಪರಿಯ ನೋಡಾ!......”

-ಮುಕ್ತಾಯಕ್ಕ (ಸ.ವ.ಸಂ.೫, ವ:೧೧೧೩)

ಸುಂದರವಾದ ಕಾವ್ಯದಲ್ಲಿ ಕಠಿಣವಾಗಿದ್ದ ಧರ್ಮದ ವ್ಯಾಖ್ಯೆಯನ್ನು ಮುಕ್ತಾಯಕ್ಕ ಬಿಡಿಸಿಟ್ಟಿದ್ದಾಳೆ. “ನುಡಿಯನೆಂಬಲ್ಲಿಯೆ ನುಡಿ ಇದೆ. ನಡೆಯೆನೆಂಬಲ್ಲಿಯೆ ನಡೆಯಿದೆ”ಎಂದು ಲಿಂಗಾಯತ ಧರ್ಮವನ್ನು ವಿಸ್ತರಿಸಿ ಅದಕ್ಕೆ ಹೊಸ ಆಯಾಮ ನೀಡಿದ ಮುಕ್ತಾಯಕ್ಕ, ಅಲ್ಲಮನೊಂದಿಗೆ ಧಾರ್ಮಿಕ ಚರ್ಚೆಯಲ್ಲಿ ತೊಡಗುತ್ತಾಳೆ.

“ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನನೊಲಿಸುವ ಪರಿ”

-ಬಸವಣ್ಣ (ಸ.ವ.ಸಂ.೧, ವ:೨೩೫)

ಬಸವಣ್ಣನವರ ಈ ಒಂದೊಂದು ನುಡಿಯೂ ಲಿಂಗಾಯತ ಧರ್ಮದ ತಿರುಳಿನಂತಿದೆ. ಜಗತ್ತಿನಲ್ಲಿ ಧರ್ಮದ ವ್ಯಾಖ್ಯೆಯನ್ನು ಇದಕ್ಕಿಂತಲೂ ಸರಳವಾಗಿ ಹೇಳಿದವರಿಲ್ಲ. ಎಲ್ಲವನ್ನೂ ತೊರೆದು ಸಂನ್ಯಾಸಿಯಾಗೆಂದು ಹೇಳುವುದು ಲಿಂಗಾಯತ ಧರ್ಮವಲ್ಲ, ಎಲ್ಲವನ್ನೂ ಅನುಭವಿಸಿ ಸಂಸಾರವನ್ನು ಗೆಲ್ಲು ಎಂದು ಹೇಳುವುದು ಲಿಂಗಾಯತ ಧರ್ಮವಾಗಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...