ಶರಣರ ಕಾಲದ ಮನರಂಜನೆಯ ಕಾಯಕಗಳು

Date: 18-07-2022

Location: ಬೆಂಗಳೂರು


“ಶರಣರಲ್ಲಿ ಗಾನ ಮಾಡುವವರನ್ನು ಕುರಿತು, ನೃತ್ಯಕಲಾವಿದರನ್ನು ಕುರಿತು ಬೇರೆ ಬೇರೆ ಅಭಿಪ್ರಾಯಗಳಿವೆ. ಕಲೆಯನ್ನು ಭಿಕ್ಷೆಗಾಗಿ ಬಳಸಬಾರದು, ಭಕ್ತಿಯಿಲ್ಲದ ಕಲೆ-ನೃತ್ಯ ವ್ಯರ್ಥವಾದವುಗಳೆಂದು ಶರಣರು ಹೇಳಿದ್ದಾರೆ. ಆದರೂ ಅನೇಕ ಗಾನತಂಡಗಳು, ನೃತ್ಯಮೇಳಗಳು ಇದನ್ನೇ ವೃತ್ತಿಗಳನ್ನಾಗಿ ಮಾಡಿಕೊಂಡು ಬದುಕುತ್ತಿದ್ದವೆಂದು ತಿಳಿದುಬರುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ಕಾಲದ ಕಲಾ ಸಂಬಂಧಿ ಕಾಯಕಗಳ ಬಗ್ಗೆ ಚರ್ಚಿಸಿದ್ದಾರೆ.

5. ಕಲಾಸಂಬಂಧಿ ಕಾಯಕಗಳು

ಕಲಾ ಸಂಬಂಧಿ ಕಾಯಕಗಳನ್ನು ಮನರಂಜನೆಯ ಕಾಯಕಗಳೆಂದು ಕರೆಯಬಹುದಾಗಿದೆ. ಶರಣರಲ್ಲಿ ಅನೇಕ ಕಲಾವಿದರಿದ್ದರು. ಅವರ ಮನರಂಜನೆ ಕೇವಲ ಮನಸ್ಸಂತೋಷಕ್ಕೆ ಮಾತ್ರ ಸೀಮಿತವಾಗಿರದೆ. ಆತ್ಮಸಂತೋಷಕ್ಕೂ ಕಾರಣವಾಗುತ್ತಿತ್ತು ಕಲಾಸಂಬಂಧಿ ಕಾಯಕದಲ್ಲಿ ಗಾನಮೇಳ, ನೃತ್ಯಮೇಳ ಕಲಕೇತರಾಟ ಬಹುರೂಪಿಯಾಟ. ದುರಗಮುರಗ್ಯಾರಾಟ. ಡೊಂಬರಾಟ, ಕೋಡಂಗಿಯಾಟ, ಗೊಂಬೆಯಾಟ, ಹುಂಜಿನ ಕಾಳಗದಾಟ. ಗೊಂಬೆಯಾಟ ಕೋಲಾಟ ಈ ಮೊದಲಾದವುಗಳನ್ನು ಉದಾಹರಿಸಬಹುದಾಗಿದೆ.

ಗಾನಮೇಳಕ್ಕೆ ಬಹುದೊಡ್ಡ ಪರಂಪರೆಯಿದೆ. ಹಾಡುವುದು ಮನುಷ್ಯನಿಗೆ ಮೊದಲಿನಿಂದಲೇ ಬೆಳೆದುಕೊಂಡು ಬಂದ ಕಲೆಯಾಗಿದೆ. ಶರಣರ ಕಾಲದಲ್ಲಿಯೂ ಹಾಡುಗಾರಿಕೆ ಒಂದು ಕಾಯಕವಾಗಿತ್ತು. ``ಆನು ಒಲಿದಂತೆ ಹಾಡುವೆನಯ್ಯಾ (ವ-494)''ಎಂಬ ಬಸವಣ್ಣನ ವಚನದಲ್ಲಿ ಹಾಡಿನ ಪ್ರಸ್ತಾಪವಿದೆ. ತಾಳ, ರಾಗ, ಅಮೃತಗಣ, ದೇವಗಣ ಗೊತ್ತಿರದಿದ್ದರೂ ನಾನು ಹಾಡುವೆನೆಂಬ ವಿಚಾರ ಬಸವಣ್ಣನ ವಚನದಲ್ಲಿದೆ. ಶರಣರು ವಚನಗಳ ಜತೆಗೆ ಸ್ವರವಚನಗಳನ್ನು ರಚಿಸಿದರು. ಸ್ವರವಚನಗಳನ್ನು ಹಾಡಲೆಂದೇ ರಚಿಸಿದರು. ಪ್ರಸಾದಿ ಲೆಂಕಬಂಕಣ್ಣನ ವಚನದಲ್ಲಿ (ವ-120) ಶಬ್ದದಿಂದ ಸಪ್ತಸ್ವರಗಳು ಹೇಗೆ ಹೊರಡುತ್ತವೆಂಬುದನ್ನು ಹೇಳಲಾಗಿದೆ. ``ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ, ಸ್ವರವೊಂದು, ಸಂಚಾರದ ಪರಿಬಣ್ಣ ಬೇಕಾದಂತೆ (ವ-399)'' ಎಂದು ಬೊಕ್ಕಸದ ಚಿಕ್ಕಣ್ಣ ಹೇಳಿದ್ದಾನೆ. ಕಲೆಯನ್ನು ಕೆಲವರು ಭಿಕ್ಷೆಗೆ ಬಳಸಿಕೊಂಡರು. ಇದನ್ನು ಚೆನ್ನಬಸವಣ್ಣ ``ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ ಅನಾಚಾರಿ (ವ-943)'' ಯೆಂದು ವಿಡಂಬಿಸಿದ್ದಾನೆ. ಹಾಡು ಎಂದಡೆ ಇದೆಂತುಟಾದರಾಗಲಿ ನೀ ಕೇಳುವಂತೆ ಹಾಡಿದೆನು ಕಂಡಯ್ಯಾ (ವ-824)'' ಎಂದು ಸಿದ್ಧರಾಮೇಶ್ವರ ಹೇಳಿದ್ದಾನೆ. ``ಸ್ವರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ (ವ-210)'' ಎಂದು ಅಕ್ಕಮಹಾದೇವಿ ಕೋಗಿಲೆಗಳನ್ನು ಕುರಿತು ಹೇಳಿದ್ದಾಳೆ. ಹೀಗೆ ಅನೇಕ ವಚನಕಾರರಲ್ಲಿ ಗಾನ, ಹಾಡು, ಸ್ವರಗೀತೆ, ಪಾಡು, ಇವುಗಳ ಪ್ರಸ್ತಾಪವಿದೆ. ಗಾನಕಲೆಯನ್ನು ಭಕ್ತಿಗಾಗಿ ಬಳಸಿದ್ದೇ ಹೆಚ್ಚು. ಕೆಲವು ವೃತ್ತಿಗಾಯಕರು ಇದ್ದುದು ತಿಳಿದು ಬರುತ್ತದೆ.

ಶರಣರಲ್ಲಿ ಕೆಲವರು ಈ ಗಾನಗಾರಿಕೆಯನ್ನು ಕಾಯಕಗಳನ್ನಾಗಿ ಮಾಡಿಕೊಂಡಿದ್ದೂ ಉಂಟು. ರಾಗದ ಸಂಕಣ್ಣ ಭಕ್ತಿಯ ತನ್ಮಯತೆಯಿಂದ ತನ್ನ ಆರಾಧ್ಯದೈವದೆದುರು ಹಾಡುಹಾಡುತ್ತಿದ್ದ. ಸಕಳೇಶ ಮಾದರಸನೇ ಮೊದಲ ಸ್ವರವಚನಕಾರನಾಗಿದ್ದಾನೆ. ಈತನು ಅಪ್ರತಿಮ ಸಂಗೀತಗಾರನಾಗಿದ್ದುದು ತಿಳಿದು ಬರುತ್ತದೆ. ಕಿನ್ನರಿಬ್ರಹ್ಮಯ್ಯ ಕಿನ್ನರಿ ನುಡಿಸಿದರೆ, ಘಟ್ಟಿವಾಳಯ್ಯ ಶಿವಶರಣ ಚರಿತ್ರೆಗಳನ್ನು ನೃತ್ಯಕ್ಕೆ ಅಳವಡಿಸಿ ನರ್ತಿಸುತ್ತಿದ್ದ. ಕಕ್ಕಯ್ಯ ಕಂಕರಿವಾದ್ಯವನ್ನು ನುಡಿಸುತ್ತಿದ್ದ. ಸಿದ್ಧಬುದ್ಧಯ್ಯ ಮೊದಲಾದ ಶರಣರು ಹಾಡುಗಾರರಾಗಿದ್ದರು.

12ನೇ ಶತಮಾನದಲ್ಲಿ ನೃತ್ಯಮೇಳಗಳಿದ್ದವು. ಅನೇಕ ನೃತ್ಯಕಲಾವಿದರಿದ್ದರು. ``ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ, ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ (ವ 179)'' ಎಂದು ಬಸವಣ್ಣ ತನ್ನ ವಚನದಲ್ಲಿ ಹೇಳಿದ್ದಾನೆ ``ಹಾಡುವೆನಯ್ಯಾ ನಾಟ್ಯ ರಚನೆಗೆಂದು ಗಾನವ (ವ-1109)'' ಎಂದು ಸಿದ್ಧರಾಮ ಗಾನದ ಮಹತ್ವವನ್ನು ಹೇಳಿದ್ದಾನೆ. ``ಉಟ್ಟರೆ ತೊಟ್ಟರೇನಯ್ಯ? ನಟ್ಟುವರಂತೆ (ವ-903)'' ಎಂದು ಹಡಪದಪ್ಪಣ್ಣ ನಟ್ಟವರನ್ನು, ನೃತ್ಯಗಾರರನ್ನು ವಿಡಂಬಿಸಿದ್ದಾನೆ. ಉಟ್ಟುತೊಟ್ಟು ನೃತ್ಯಮಾಡುವುದು ಮುಖ್ಯವಲ್ಲ, ಒಳಗೆ ಭಕ್ತಿ ಇರಬೇಕೆಂದು ತಿಳಿಸಿದ್ದಾನೆ. ``ಉದಕದ ಕೊಡನ ಹೊತ್ತಾಡುವ ಗೊರವತಿಯ ಕೈಯಲ್ಲಿ ಕಂಕಣ, ಉಲಿವ ಗೆಜ್ಜೆ ಚರಣದಲ್ಲಿ (ವ-957)'' ಎಂಬ ವಚನದಲ್ಲಿ ಗೆಜ್ಜೆಕಟ್ಟಿಕೊಂಡು ಕುಣಿವ ಗೊರವತಿಯ ವಿಡಂಬನೆಯಿದೆ. ``ಕುಣಿವ ಕುದುರೆಯ ಮೇಲೆ ಕುಳಿತು, ಆಡುವ ಪಾತ್ರವ ನೋಡುತ ಬಂದವರೆಲ್ಲರು ಅರುಹಿರಿಯರೆ? (ವ-1207)'' ಎಂದು ನಗೆಯ ಮಾರಿತಂದೆ ಕೇಳಿದ್ದಾನೆ. ``ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಂಗೆ ಗೀತವಾದ್ಯನೃತ್ಯವನಾಡಿ ಮೆಚ್ಚಿಸುವ ಗಣಂಗಳಿಗೆ ನಮೋನಮೋ ಎಂಬೆನು (ವ-1411)'' ಎಂದು ಉರಿಲಿಂಗಪೆದ್ದಿಯು ತನ್ನ ವಚನದಲ್ಲಿ ನೃತ್ಯಗಾರರಿಗೆ ನಮಿಸಿದ್ದಾನೆ.

ಹೀಗೆ ಶರಣರಲ್ಲಿ ಗಾನ ಮಾಡುವವರನ್ನು ಕುರಿತು, ನೃತ್ಯಕಲಾವಿದರನ್ನು ಕುರಿತು ಬೇರೆ ಬೇರೆ ಅಭಿಪ್ರಾಯಗಳಿವೆ. ಕಲೆಯನ್ನು ಭಿಕ್ಷೆಗಾಗಿ ಬಳಸಬಾರದು, ಭಕ್ತಿಯಿಲ್ಲದ ಕಲೆ-ನೃತ್ಯ ವ್ಯರ್ಥವಾದವುಗಳೆಂದು ಶರಣರು ಹೇಳಿದ್ದಾರೆ. ಆದರೂ ಅವರ ಕಾಲದಲ್ಲಿ ಅನೇಕ ಗಾನತಂಡಗಳು, ನೃತ್ಯಮೇಳಗಳು ಇದನ್ನೇ ವೃತ್ತಿಗಳನ್ನಾಗಿ ಮಾಡಿಕೊಂಡು ಬದುಕುತ್ತಿದ್ದವೆಂದು ತಿಳಿದುಬರುತ್ತದೆ.

ಕಲಕೇತರಾಟವೂ ಕೂಡ ನೃತ್ಯಪ್ರಧಾನವಾದ ಕಲೆಯಾಗಿದೆ. ಜನಪದರಲ್ಲಿ ಕಿಳ್ಳಿಕೇತರಾಟದಂತೆ ಕಲಕೇತರಾಟವೂ ಪ್ರದರ್ಶನ ಕಲೆಯಾಗಿದೆ. ವೀರಭದ್ರನ ವೇಷವಧರಿಸಿ ದಕ್ಷಬ್ರಹ್ಮನ ವಿರುದ್ಧ ಯಜ್ಞ-ಯಾಗಾದಿಗಳ ವಿರುದ್ಧ ಈ ಕಲಾವಿದರು ಒಡಬು ಹೇಳುತ್ತಿದ್ದರು. ಇದೇ ವೃತ್ತಿಯಿಂದ ಬಂದ ಹಣವನ್ನು ತಮ್ಮ ಸಂಸಾರಕ್ಕೊಂದಿಷ್ಟು ಇಟ್ಟುಕೊಂಡು ಉಳಿದದ್ದನ್ನು ದಾಸೋಹ ಮಾಡುತ್ತಿದ್ದರು. ಕಲಕೇತಯ್ಯ ಶರಣನು ಈ ಕಾಯಕವನ್ನು ಮಾಡುತ್ತಿದ್ದ. ತೆಲುಗು ಕವಿ ಪಾಲ್ಕುರಿಕೆ ಸೋಮನಾಥನು ತನ್ನ ತೆಲುಗು ಕೃತಿ ``ಬಸವ ಪುರಾಣ''ದಲ್ಲಿ ಇವನ ಕಥಾನಕವನ್ನು ಹೇಳಿದ್ದಾನೆ. ಹಣೆಯ ಮೇಲೆ ಎತ್ತಿಕಟ್ಟಿದ ಮುಡಿ, ಹಣೆಯಲ್ಲಿ ವಿಭೂತಿ, ಕಿವಿಗಳಲ್ಲಿ ಕೆಂದಳಿರು, ಕಾಲಲ್ಲಿ ಗೆಜ್ಜೆ ಎಡಗೈಯಲ್ಲಿ ದಕ್ಷನ ಕುರಿತಲೆ, ಬಲಗೈಯಲ್ಲಿ ಬೆತ್ತ, ಮೈಮೇಲೆ ಹೊದಿದ ಕಾಗಿನಕಪ್ಪಡ ಇವು ಕಲಕೇತ ಬ್ರಹ್ಮಯ್ಯನ ವೇಷ-ಭೂಷಣಗಳಾಗಿದ್ದವೆಂದು ಬಸವಪುರಾಣದಲ್ಲಿ ಹೇಳಲಾಗಿದೆ.

``ಎನ್ನ ತಗರ ಆರು ಸನ್ನೆಗೆ ಏರದು
ಮೂರು ಸನ್ನೆಗೆ ಓಡದು
ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವುದು
ಕುಟಿಲ ಕವಳವನೊಲ್ಲದು...........''
- ಕಲಕೇತಯ್ಯ (ಸ. ವ.ಸಂ.7, ವ-34)

ಕಲಕೇತಯ್ಯನು ತನ್ನ ವೃತ್ತಿಪ್ರತಿಮೆಯ ಮೂಲಕ ಅನೇಕ ಆಧ್ಯಾತ್ಮಿಕ ವಿಷಯಗಳನ್ನು ತಿಳಿಸಿದ್ದಾನೆ ``ಕಾಲನಾಲ್ಕು ಮುರಿದು, ಕೋಡೆರಡಕಿತ್ತು ಆರಡಗಿತ್ತು ತಗರಿನ ಹಣೆಯಲ್ಲಿ (ವ-36) ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾನೆ. ಜನಪದರಲ್ಲಿ ಈ ಆಟವನ್ನು ಪುರವಂತಿಕೆಯೆಂದು ಕರೆಯಲಾಗುತ್ತದೆ. ಪುರವಂತಿಕೆ ವೇಷಧರಿಸಿದ ಕಲಕೇತರದು ಕಲಾವೃತ್ತಿಯಾಗಿತ್ತು. ಶರಣರ ಕಾಲಕ್ಕೆ ಇದು ಗೌರವದ ಕಾಯಕವೆಂದು ಪರಿಗಣಿಸಲ್ಪಟ್ಟಿತು.

ಕಲಕೇತರಾಟದಂತೆ ಬಹುರೂಪಿಯಾಟವೂ ಶರಣರ ಕಾಲಕ್ಕೆ ಕಾಯಕವಾಗಿ ಮಾರ್ಪಟ್ಟಿತು. ಬಹುರೂಪಿಗಳನ್ನು ವೇಷಗಾರರು, ಹಗಲುವೇಷದವರೆಂದು ಕರೆಯುತ್ತಿದ್ದರು. ಶರಣರು ಬರುವದಕ್ಕಿಂತ ಮೊದಲೇ ಈ ಕಲಾವೃತ್ತಿಯಿತ್ತು. ಆಗ ರಾಮಾಯಣ ಮಹಾಭಾರತದ ಬಿಡಿಪ್ರಸಂಗಗಳನ್ನು ಬಹುರೂಪಿಗಳು ಗ್ರಾಮೀಣ ಜನರಿಗೆ ತೋರಿಸಿ ಅವರಿಂದ ಹಣ, ಕಾಳುಕಡಿ ಪಡೆಯುತ್ತಿದ್ದರು. ಶರಣರ ಕಾಲಕ್ಕೆ ಇದು ಶರಣತತ್ವ ಹೇಳುವ ಕಲೆಯಾಗಿ ಬೆಳೆಯಿತು. ಶರಣರಲ್ಲಿ ಬಹುರೂಪಿ ಚೌಡಯ್ಯನು ಈ ಕಾಯಕವನ್ನು ಮಾಡುತ್ತಿದ್ದ. ಈ ಕಾಯಕವನ್ನು ಬಸವ ಪ್ರಸಾದವೆಂದು ಸ್ವೀಕರಿಸಿದ ಬಹುರೂಪಿ ಚೌಡಯ್ಯನು ಪ್ರತಿದಿನವೂ ಒಬ್ಬೊಬ್ಬ ಶರಣನ ವೇಷಧರಿಸಿ ಶರಣತತ್ತ್ವಗಳನ್ನು ಹೇಳುತ್ತಿದ್ದನೆಂದು ತಿಳಿದುಬರುತ್ತದೆ.

``ಇನ್ನಾಡುವೆ ಜಂಗಮ ಬಹುರೂಪ
ಅಲ್ಲಮನಂತೆ ಆಡುವೆ ಬಹುರೂಪ
ಅಜಗಣ್ಣನಂತೆ ಆಡುವೆ ಬಹುರೂಪ
ಮುಖವಾಡದಯ್ಯಗಳಂತೆ ಆಡುವೆ ಬಹುರೂಪ
ಪುರುಷಾಂಗಣವ ಮೆಟ್ಟಿ ಆಡುವೆ ಬಹುರೂಪ
ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ''
- ಬಹುರೂಪಿ ಚೌಡಯ್ಯ (ಸ.ವ.ಸಂ.8,ವ-136)

ಬಹುರೂಪಿ ಚೌಡಯ್ಯನು ತನ್ನ ಕೆಲವು ವಚನಗಳಲ್ಲಿ ಬಹುರೂಪ ಕಲೆಯ ಮಹತ್ವವನ್ನು ಹೇಳಿದ್ದಾನೆ. ಹಗಲುವೇಷ ಹಾಕಿ ಶರಣರ ತತ್ವ ಹೇಳಿದರೆ ಜನರು ಕುತೂಹಲದಿಂದ ಕೇಳುತ್ತಿದ್ದರು. ಅಲಂಕಾರಿಕವಾದ ವೇಷಗಳನ್ನು ನೋಡಿ ಆಕರ್ಷಿತರಾಗುತ್ತಿದ್ದರು. ತನ್ನ ಬಹುರೂಪಕ್ಕೆ ಬಸವಣ್ಣನೇ ಸೂತ್ರಧಾರಿಯೆಂದು ಬಹುರೂಪಿ ಚೌಡಯ್ಯನು ತನ್ನ ವಚನದಲ್ಲಿ ಹೇಳಿಕೊಂಡಿದ್ದಾನೆ.

ದುರಗಮುರಗಿಯರಾಟವೂ ಕೂಡ ಕಲಾಸಂಬಂಧಿ ಕಾಯಕದಲ್ಲಿಯೇ ಬರುತ್ತದೆ. ದುರಗಮುರುಗಿಯವರು ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು ಇವರು ದುರಗಮ್ಮ-ಮರಗಮ್ಮ ದೇವತೆಗಳ ಭಕ್ತರಾಗಿದ್ದರು. ಶಕ್ತಿದೇವತೆಯಾದ ಮಾರೆಮ್ಮನನ್ನು ತಲೆಯ ಮೇಲೆ ಹೊತ್ತುಕೊಂಡು ಇಲ್ಲಿಯ ಕಲಾವಿದ ಕುಣಿಯುತ್ತಿದ್ದ. ಹೀಗೆ ದೇವಿಯನ್ನು ತಲೆಮೇಲಿಟ್ಟುಕೊಂಡು ಒಬ್ಬ ಕುಣಿಯುತ್ತಿದ್ದ, ಮತ್ತೊಬ್ಬ ಕಲಾವಿದ ಡಕ್ಕೆಯನ್ನು ಬಾರಿಸುತ್ತಿದ್ದ. ಹೀಗೆ ಕುಣಿಯುತ್ತಿದ್ದರೆ, ಕಲಾವಿದ ಬಾರಕೋಲಿನಿಂದ ತನ್ನ ಮೈಗೆ ಹೊಡೆದುಕೊಳ್ಳುತ್ತಿದ್ದ. ಶರಣರಲ್ಲಿ ಡಕ್ಕೆಯ ಬೊಮ್ಮಣ್ಣ, ಮಸರದ ಮಾರಯ್ಯ ಈ ಮೊದಲಾದವರು ಈ ಕಾಯಕದಲ್ಲಿ ತೊಡಗಿದ್ದರೆಂದು ತಿಳಿದು ಬರುತ್ತದೆ. ಹೀಗೆ ಕ್ಷುದ್ರದೇವತೆಯನ್ನು ಹೊತ್ತು ತಿರುಗುತ್ತಿದ್ದ ಡಕ್ಕೆಯ ಮಾರಯ್ಯನನ್ನು ಕಂಡು ಏಕದೇವೋಪಾಸಕನಾಗಿದ್ದ ಶಂಕರದಾಸಿಮಯ್ಯನು ಡಕ್ಕೆಯ ಬೊಮ್ಮಣ್ಣನನ್ನು ಪ್ರಶ್ನಿಸುತ್ತಾನೆ. ಆಗ ಡಕ್ಕೆಯ ಬೊಮ್ಮಣ್ಣನು ನನಗೆ ತಲೆಯ ಮೇಲೆಲ್ಲ ಲಿಂಗವೇ ಕಾಣಿಸುತ್ತದೆಂದು ಹೇಳುತ್ತಾನೆ. ಶಂಕರದಾಸಿಮಯ್ಯನ ಕಣ್ಣಿಗೆ ಮಾರಿಯಾಗಿ ಕಾಣುತ್ತಿದ್ದ ಶಕ್ತಿದೇವತೆ ಬೊಮ್ಮಣ್ಣನಿಗೆ ಲಿಂಗವಾಗಿ ಕಾಣುತ್ತಾಳೆ. ಇಷ್ಟಲಿಂಗಬೇರೆಯಲ್ಲ ಈ ಮಾರಿ ಬೇರೆಯಲ್ಲ ಎಂದು ತಿಳಿದ ಬೊಮ್ಮಣ್ಣನು ಮರೆತರೆಮಾರಿ ಅರಿತರೆ ಉಮಾದೇವಿಯೆಂದು ಹೇಳುತ್ತಿದ್ದ.

``ಕಾಯವೆಂಬ ಡಕ್ಕೆಯಮೇಲೆ
ಜೀವವೆಂಬ ಹೊಡೆಚೆಂಡು ಬೀಳೆ
ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ
ಇಂತೀ ಉಲುಹಿನ ಭೇದದಲ್ಲಿ
ಹೊಲಬುದೆಪ್ಪದೆ ಗೆಲಬೇಕು ಕಾಲವೆಂಬ ಮಾರಿಯ
ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ..''
- ಢಕ್ಕೆಯ ಬೊಮ್ಮಣ್ಣ (ಸ.ವ.ಸಂ.7, ವ-925)

ಢಕ್ಕೆಯ ಬೊಮ್ಮಣ್ಣನು ಇಲ್ಲಿ ಕಾಲವೆಂಬ ಮಾರಿಯನ್ನು ಗೆಲ್ಲಬೇಕೆಂದು ಹೇಳಿದ್ದಾನೆ ಬ್ರಹ್ಮ, ವಿಷ್ಣು, ರುದ್ರ ಈ ತ್ರಿಮೂರ್ತಿಗಳಲ್ಲಿ ಮರೆವು ಹೆಚ್ಚಾದುದರಿಂದ ಆಕೆ ಮಾರಿಯಾಗಿ ಕಾಣಿಸಿದಳೆಂದು ಈ ಶರಣ ತನ್ನ ವಚನವೊಂದರಲ್ಲಿ ವಿವರಿಸಿದ್ದಾನೆ. ಹೀಗೆ 12ನೇ ಶತಮಾನದಲ್ಲಿ ಬೊಮ್ಮಣ್ಣ ಮೊದಲಾದ ಶರಣರು ಈ ಕಾಯಕವನ್ನು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.

ಈ ಕಲಾಸಂಬಂಧಿ ವೃತ್ತಿಗಳಲ್ಲಿ ಇನ್ನೂ ಕೆಲವು ಆಟಗಳಿವೆ. ಆದರೆ ಶರಣರು ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ಕೋಡಗದ ಮಾರಣ್ಣನೆಂಬ ವ್ಯಕ್ತಿ ಮೊದಲು ಕೋಡಂಗಿಯಾಟವನ್ನಾಡಿಸುತ್ತಿದ್ದ. ಶರಣನಾದ ಮೇಲೆ ಈ ವೃತ್ತಿಯನ್ನು ಬಿಟ್ಟುಬಿಟ್ಟನೆಂದು ತಿಳಿದುಬರುತ್ತದೆ. ಶರಣರ ಕಾಲದಲ್ಲಿ ಕೆಲವು ವೃತ್ತಿಗಳು ಮರೆಯಾದವು. ಹಾವಿನಾಟ, ಕೋಡಂಗಿಯಾಟ, ಕಣ್ಮರೆಯಾದವು. ಇನ್ನು ಸೂತ್ರಗೊಂಬೆಯಾಟ. ತೊಗಲುಗೊಂಬೆಯಾಟಗಳನ್ನು ಕಾಯಕವನ್ನಾಗಿ ಮಾಡಿಕೊಂಡ ಶರಣರು ಕಾಣುವುದಿಲ್ಲ. ಆದರೆ ಈ ಆಟಗಳ ಬಗೆಗೆ ಶರಣರ ವಚನಗಳಲ್ಲಿ ಪ್ರಸ್ತಾಪಗಳಿವೆ. ಹುಂಜಿನ ಕಾಳಗದ ದಾಸಯ್ಯನೆಂಬ ವಚನಕಾರನು ಮೊದಲು ಹುಂಜಿನ ಕಾಳಗದಾಟವನ್ನು ಆಡುತ್ತಿದ್ದನೆಂದೂ, ಶರಣನಾದ ಮೇಲೆ ಈ ಆ ಆಟವನ್ನು ಬಿಟ್ಟನೆಂದು ತಿಳಿದು ಬರುತ್ತದೆ. ಕೋಲೆಬಸವನಾಟ, ಕೋಲಾಟ. ನಗೆಮಾರಿತಂದೆಯ ನಗೆವಡಿಕಾರಾಟ, ಗೊಂದಲಿಗರಾಟಗಳ ಬಗೆಗೆ ಶರಣರ ವಚನಗಳಲ್ಲಿ ಪ್ರಸ್ತಾಪವಿದೆ. ಹೀಗೆ ಅನೇಕ ಆಟಗಳು ಮನರಂಜನೆಯ ಕಾಯಕಗಳಾಗಿದ್ದವು.

ಮುಂದುವರಿಯುವುದು…

ಈ ಅಂಕಣದ ಹಿಂದಿನ ಬರಹಗಳು:
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...