ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

Date: 11-07-2022

Location: ಬೆಂಗಳೂರು


“ವೈದ್ಯ, ಉಪ್ಪಾರ, ಗಾಣಿಗ, ಎಲಿಗಾರ, ಲಿಪಿಗಾರ. ಸೆರೆಗಾರ. ಕಲ್ಲುಕುಟಿಗ, ಕಟ್ಟಿಗೆ ಮಾರುವವ ಈ ಮೊದಲಾದ ವೃತ್ತಿಗಳು ಶರಣರ ಕಾಲಕ್ಕೆ ಕಾಯಕಗಳಾಗಿ ಬದಲಾದವು. ವೃತ್ತಿನಿರತ ಕೆಲಸಗಳಲ್ಲಿ ಲಾಭ ಮುಖ್ಯವಾಗದೆ ಸೇವೆ ಮುಖ್ಯವಾಯಿತು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ, ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮವನ್ನು ಚರ್ಚಿಸಿದ್ದಾರೆ.

4. ವೃತ್ತಿನಿರತ ಕಾಯಕಗಳು

ಸ್ವತಂತ್ರ ಸೇವೆಯ ಕಾಯಕಗಳನ್ನು ವೃತ್ತಿನಿರತ ಕಾಯಕಗಳೆಂದು ಕರೆಯಬಹುದಾಗಿದೆ. ಈ ಕಾಯಕಗಳೂ ಕೂಡ ಸೇವಾ ವಲಯಕ್ಕೆ ಸೇರಿದರೂ ಇವು ಪ್ರೊಫೆಷನಲ್ ಆಗಿರುವುದರಿಂದ ವೃತ್ತಿನಿರತವೆಂದು ಕರೆಯುವುದು ಸೂಕ್ತವೆನಿಸುತ್ತದೆ. ವೈದ್ಯ, ಉಪ್ಪಾರ, ಗಾಣಿಗ, ಎಲಿಗಾರ, ಲಿಪಿಗಾರ. ಸೆರೆಗಾರ. ಕಲ್ಲುಕುಟಿಗ, ಕಟ್ಟಿಗೆ ಮಾರುವವ ಈ ಮೊದಲಾದ ವೃತ್ತಿಗಳು ಶರಣರ ಕಾಲಕ್ಕೆ ಕಾಯಕಗಳಾಗಿ ಬದಲಾದವು. ವೃತ್ತಿನಿರತ ಕೆಲಸಗಳಲ್ಲಿ ಲಾಭ ಮುಖ್ಯವಾಗದೆ ಸೇವೆ ಮುಖ್ಯವಾಯಿತು. ಇಂತಹ ಸೇವೆಗಳಲ್ಲಿ ಸ್ವತಂತ್ರ ವೃತ್ತಿ ಮತ್ತು ವ್ಯಾಪಾರೀ ವೃತ್ತಿ ಎರಡೂ ಸೇರಿಕೊಂಡವು. ಕಂಬಾರ, ಕುಂಬಾರ, ನೇಕಾರ ಇವೂ ಕೂಡ ವೃತ್ತಿನಿರತ ಕಾಯಕಗಳಾದರೂ ಇಲ್ಲಿ ಕೌಶಲ್ಯ-ಕಲೆಗಾರಿಕೆ ಮುಖ್ಯವಾಗಿರುವುದರಿಂದ ಇವುಗಳನ್ನು ಕೌಶಲ್ಯಮೂಲ ಕಾಯಕಗಳಲ್ಲಿ ಸೇರಿಸಲಾಗಿದೆ.

ವೈದ್ಯಕೀಯ ಕಾಯಕವು, ವೃತ್ತಿನಿರತ ಕಾಯಕಗಳಲ್ಲಿ ಮುಖ್ಯವಾದುದಾಗಿದೆ. ವೈದ್ಯ ಪದ್ಧತಿ ಪ್ರಾಚೀನ ಕಾಲದಿಂದ ಬೆಳೆದುಬಂದಿದೆ. ವೈದ್ಯಪದ್ಧತಿಯಲ್ಲಿ ಹಲವು ಪ್ರಕಾರಗಳಿವೆ. ರಸವೈದ್ಯ, ನಾಟಿವೈದ್ಯ, ಆಯುರ್ವೇದ ವೈದ್ಯ ಹೀಗೆ ಈ ಪ್ರಕಾರಗಳು ಬೆಳೆಯುತ್ತ ಹೋಗುತ್ತವೆ. ಕಣ್ಣು ನೋವಿನ ಉಪಶಮನಕ್ಕಾಗಿ ಲೋಳೆಸರವನ್ನು ಔಷಧವನ್ನಾಗಿ ಬಳಸುತ್ತಿದ್ದರೆಂದು ಅಲ್ಲಮಪ್ರಭು ಹೇಳಿದ್ದಾನೆ. 12ನೇ ಶತಮಾನದ ಶರಣರಲ್ಲಿ ವೈದ್ಯಸಂಗಣ್ಣ ಈ ಕಾಯಕಕ್ಕೆ ಸೇರಿದ ಮಹತ್ವದ ವಚನಕಾರನಾಗಿದ್ದಾನೆ. ಆಯುರ್ವೇದದಲ್ಲಿ ಹರಳೆಣ್ಣೆಗೆ ಮಹತ್ವದ ಸ್ಥಾನವಿದೆ. ಹರಳೆಣ್ಣೆಯನ್ನು ಆಗ ಹೇರಂಡ, ಏರಂಡ ಎಂದು ಕರೆಯುತ್ತಿದ್ದರು. ``ಏರಂಡದ ಬಿತ್ತಿನಂತೆ, ರಸವಾರಿಯಂತೆ- (ವ-1111)'' ಎಂದು ಬಸವಣ್ಣ ತನ್ನ ವಚನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಕಾರಲವಣ, ಬಿಳಿಯಲವಣ, ಸೈಂಧಲವಣಗಳ ಪ್ರಸ್ತಾಪವನ್ನು ಅಕ್ಕಮ್ಮ ತನ್ನ ವಚನಗಳಲ್ಲಿ ವಿವರಿಸಿದ್ದಾಳೆ. ``ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯ ಬಲ್ಲುದೆ? (ವ-679)'' ಎಂದು ಅಮುಗೆರಾಯಮ್ಮ ತನ್ನ ವಚನದಲ್ಲಿ ಕೇಳಿದ್ದಾಳೆ, ``ಗಿಡಮರಬಳ್ಳಿಗಳ ನಾರುಬೇರುಗಳ ಶರೀರದೊಂಡೆಯಲ್ಲಿ ಧರಿಸಿದಡೆ, ರೋಗಿಯ ಹಲವು ರೋಗಗಳು ನಷ್ಟವಪ್ಪ ಪರಿಯಂತೆ (ವ-1559)'' ಎಂದು ಚೆನ್ನಬಸವಣ್ಣ ಹೇಳಿದ್ದಾನೆ.

ಶರಣರಲ್ಲಿ ಗಣದಾಸಿ ಭೀಮಯ್ಯ ಕುಷ್ಠರೋಗ ನಿವಾರಣೆ ಮಾಡುತ್ತಿದ್ದನೆಂದು ತಿಳಿದುಬರುತ್ತದೆ. ವೈದ್ಯ ಸಂಗಣ್ಣನ ಕೆಲವು ವಚನಗಳಲ್ಲಿ ವೈದ್ಯಕೀಯ ವಿಷಯದ ಜತೆಗೆ ಮನುಷ್ಯನ ದೇಹದಲ್ಲಿರುವ ನಾಡಿಗಳ ಪರಿಚಯವೂ ಆಗುತ್ತದೆ

``ವೈದ್ಯವೆಂದು ಮಾಡುವಲ್ಲಿ ನಾನಾ ಮೂಲಿಕೆ, ವನದ್ರವ್ಯ ಸಹ ಮುಂತಾಗಿ
ಲವಣ, ಪಾಷಾಣ, ಲೋಹ, ಪಂಚ ಸಿಂಧೂರಗಳಿಂದ
ರಸದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ
ಸರ ಸಂದಾನ ವಿಹಂಗ ಮೃಗನರ ಮತ್ತಿವರೊಳಗಾದ
ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮ ಸಿದ್ಧಿಯಾಗಿ
ತಾ ಮಾಡಿದ ಔಷಧ ಪ್ರಸಿದ್ಧವಾಗಿ..........''

- ವೈದ್ಯಸಂಗಣ್ಣ (ಸ.ವ.ಸಂ.9, ವ-126)

ವೈದ್ಯಸಂಗಣ್ಣನ ಈ ವಚನದಲ್ಲಿ ಗಿಡಮೂಲಿಕೆಗಳಿಂದ ತಾನು ಸಿದ್ಧಪಡಿಸುತ್ತಿದ್ದ ಔಷಧಿಗಳ ಪ್ರಸ್ತಾಪವಿದೆ. ಉಳಿದ ವಚನಗಳಲ್ಲಿ ನಾಡಿ, ನಾಳ, ದ್ವಾರಗಳ ಪರಿಚಯವಿದೆ. ಮಯೂರನಾಡಿ, ಮಂಡೂಕನಾಡಿ, ಜಳೂಕನಾಡಿ, ಅಹಿವಳಿನಾಡಿ, ಮಂಡಲಗಮಕ ನಾಡಿ, ಪಂಡೇತಪಥನಾಡಿ, ದೀರ್ಘನಾಡಿ, ಅಧಮನಾಡಿ, ಉತ್ತರನಾಡಿ, ಪೂರ್ವನಾಡಿ, ಪಶ್ಚಿಮನಾಡಿ, ಗಜಗಮನನಾಡಿ, ವಿಕ್ರಮನಾಡಿ, ಸೂತ್ರನಾಡಿ, ಸಂಚುನಾಡಿ, ಸಂಚಲನ ನಾಡಿ, ಶೈತ್ಯನಾಡಿ, ಉಷ್ಣನಾಡಿ ಹೀಗೆ ಅನೇಕ ನಾಡಿಗಳ ಉಲ್ಲೇಖವಿದೆ. ಹೊರನಾಳ ಎಂಟುಕೋಟಿ, ಒಳನಾಳ ನೂರೆಂಟು, ಹೊರದ್ವಾರ ಒಂಬತ್ತು, ಒಳದ್ವಾರ ಸರ್ವಾಂಗಮಯ (ವ-127)''ವೆಂದು ಮತ್ತೊಂದು ವಚನದಲ್ಲಿ ಹೇಳಿದ್ದಾನೆ. ಹೀಗೆ ಹಿಂದಿದ್ದ ವೈದ್ಯ ವೃತ್ತಿಗಳನ್ನೆಲ್ಲ ಕಾಯಕಗಳನ್ನಾಗಿ ಪರಿವರ್ತಿಸಿದ ಶರಣರು (ವೃತ್ತಿನಿರತ) ಪ್ರೊಫೆಸನಲ್ ಲಾಭಕ್ಕಿಂತ ಜನರಸೇವೆಯೇ ಮುಖ್ಯವೆಂದು ಹೇಳಿ ವೈದ್ಯವೃತ್ತಿಯ ಕಾಯಕಕ್ಕೆ ಗೌರವವನ್ನು ತಂದುಕೊಟ್ಟರು.

ಉಪ್ಪಾರನ ಕಾಯಕ ಕಟ್ಟಡ ನಿರ್ಮಾಣ ಮಾಡುವುದು ಮನೆ ಕಟ್ಟುವುದಾಗಿತ್ತು. ಇಂದಿನ ಸಿವಿಲ್ ಇಂಜನಿಯರ್‌ಗಳಂತೆ ಅಂದಿನ ಉಪ್ಪಾರರು ಕೆಲಸಮಾಡುತ್ತಿದ್ದರು. ಇಟ್ಟಿಗೆ ತಯ್ಯಾರಿಸುವುದು, ಕೋಟೆ ಕಟ್ಟುವುದು ಇಂತಹ ಕೆಲಸಗಳನ್ನು ಉಪ್ಪಾರರೇ ಮಾಡುತ್ತಿದ್ದರು. ಉಪ್ಪಾರರನ್ನು ಗೌಂಡಿಯೆಂದು ಕರೆಯುತ್ತಾರೆ. ಬಡಿಗ, ಕಮ್ಮಾರ, ಒಡ್ಡರ ಸಹಾಯದಿಂದ ದೊಡ್ಡದೊಡ್ಡ ಕಟ್ಟಡಗಳನ್ನು ಉಪ್ಪಾರರು ನಿರ್ಮಿಸುತ್ತಿದ್ದರು. ಥಾಪಿ, ನೂಲದಾರ, ಜಾಣ, ಮಟ್ಟ, ಮಟ್ಟವಾಲಿಗಿ ಈ ಮೊದಲಾದ ಸಲಕರಣೆಗಳಿಂದ ಇವರು ಈ ಕಾಯಕವನ್ನು ಮಾಡುತ್ತಿದ್ದರೆಂದು ತಿಳಿದುಬರುತ್ತದೆ.

ಗಾಣಿಗ ವೃತ್ತಿಯು ಶರಣರ ಕಾಲಕ್ಕೆ ಕಾಯಕವಾಯಿತು. ಗಾಣಿಗವೃತ್ತಿ ಮೊದಲು ವ್ಯಾಪಾರಿ ವೃತ್ತಿಯಾಗಿತ್ತು, ಶರಣರು ಅದಕ್ಕೆ ಕಾಯಕದ ಸ್ಪರ್ಷ ನೀಡಿದ ಮೇಲೆ ಅದೂ ಕೂಡ ಉಳಿದ ಕಾಯಕಗಳಂತೆ ಹೊಸ ನೈಪುಣ್ಯತೆಯನ್ನು ಪ್ರಾಮಾಣಿಕತೆಯನ್ನು ಪಡೆದುಕೊಂಡಿತು. ಎಣ್ಣೆಕಾಳುಗಳಿಂದ ಎಣ್ಣೆ ತೆಗೆಯುವುದು, ಹಾಗೆ ಬಂದ ಎಣ್ಣೆಯನ್ನು ನ್ಯಾಯಯುತ ದರಕ್ಕೆ ಮಾರಾಟ ಮಾಡುವುದು, ಆ ಹಣದಲ್ಲಿ ಕೆಲವು ಭಾಗ ದಾಸೋಹಕ್ಕೆ ನೀಡುವುದು ಇದು ಈ ಎಲ್ಲ ಕಾಯಕಗಳ ಕರ್ತವ್ಯವಾಗಿತ್ತು. ಗಾಣಿಗರಲ್ಲಿ ಅನೇಕ ಪಂಗಡಗಳಿವೆ. ಕೆಲವರು ಮರದ ಗಾಣದಿಂದ, ಕೆಲವರು ಕಲ್ಲಿನ ಗಾಣದಿಂದ ಎಣ್ಣೆ ತೆಗೆಯುತ್ತಿದ್ದರು. ಇವರಲ್ಲಿ ಕಲ್ಲಿನ ಗಾಣದವರನ್ನು ಸಜ್ಜನ ಗಾಣಿಗರೆಂದು, ಮರದ ಗಾಣದಿಂದ ಎಣ್ಣೆ ತೆಗೆಯುತ್ತಿದ್ದವರನ್ನು ಕರಿಗಾಣಿಗರೆಂದು ಕರೆಯುತ್ತಿದ್ದರು. ಗಾಣಿಗರನ್ನು ಜ್ಯೋತಿಪನರು ಎಂದು ಕರೆಯಲಾಗುತ್ತಿತ್ತು. ಮೈಸೂರು ತಾಲೂಕಿನ ಹೆಮ್ಮನ ಹಳ್ಳಿಯ ಕ್ರಿ.ಶ. 1175ರ ಶಾಸನದಲ್ಲಿ ಎಣ್ಣೆಗಾಣದ ಪ್ರಸ್ತಾಪವಿದೆ.

12ನೇ ಶತಮಾನದ ಕೆಲವು ಶರಣರಲ್ಲಿ ಈ ವೃತ್ತಿಯ ಪ್ರಸ್ತಾಪವಿದೆ. ``ಪರಸ್ತ್ರೀಗಳುಪಿದವರ ಗಾಣದಲಿಕ್ಕಿಹಿಳಿಯನೆ (ವ-566)'' ಎಂದು ಬಸವಣ್ಣ ಹೇಳಿದ್ದರೆ, ``ಕಂಠವೆಂಬುದು ಗಂಟಲಗಾಣ (ವ-474) ವೆಂದು ಅಲ್ಲಮಪ್ರಭು ಗಾಣದ ಪ್ರಸ್ತಾಪ ಮಾಡಿದ್ದಾನೆ. ``ಅರಿದುಕೊಂಡಡೆ ಗಾಣ ಹೊರಗಾಯಿತ್ತು (ವ-132)'' ಎಂದು ಚೆನ್ನಬಸವಣ್ಣ ಹೇಳಿದ್ದಾನೆ. ``ಭೂಮಿಯ ಮಧ್ಯದಲ್ಲಿ ಒಬ್ಬ ಗಾಣಿಗ ಸ್ಥಾಣುವ ನೆಟ್ಟು; ಮೊದಲೊಂದು, ಬಾಯಿಮೂರು, ಕೊಂತವಾರು, ಎಂಟೆತ್ತು, ನೊಗಹದಿನಾರು, ಕೊರಳಕಣ್ಣಿ ನೂರೊಂದು ಇಂತಿವಕೂಡಿ ಹೊಡೆಯಲಾಗಿ (ವ-1251)'' ಎಂದು ನಗೆಯ ಮಾರಿತಂದೆ ಗಾಣದ ವಿವರವನ್ನು ಕೊಟ್ಟಿದ್ದಾನೆ. ಅನಾಮಿಕ ನಾಚಯ್ಯ, ತೆಲ್ಲಿಗ ಕಲ್ಲಿಶೆಟ್ಟಿ ಶರಣರು ಗಾಣದ ಕಾಯಕಮಾಡುತ್ತಿದ್ದರು.

ಶರಣರಲ್ಲಿ ಮಾರುಡಿಗೆ ನಾಚಯ್ಯ ಗಾಣಿಕ ಸಮುದಾಯಕ್ಕೆ ಸೇರಿದವನಾಗಿದ್ದ. ಗಾಣದ ಕಣ್ಣಪ್ಪ ಮೀನುಗಾರನಾಗಿದ್ದ; ಈತನ ಹೆಸರಿನ ಪ್ರಾರಂಭದಲ್ಲಿ ಬರುವ ``ಗಾಣದ'' ಪದವು ``ಗಾಳದ'' ಆಗಬೇಕು. ನಾಚಯ್ಯ ಬಸವಣ್ಣನವರ ಸಮಕಾಲೀನನಾಗಿದ್ದು ``ಮಾರುಡಿಗೆಯ ನಾಚೇಶ್ವರಾ'' ಅಂಕಿತದಲ್ಲಿ ಈತ ವಚನ ರಚಿಸಿದ್ದಾನೆ. ಬಸವಕಲ್ಯಾಣದ ಸಮೀಪದ ಮಾರುಡಿಗೆ ಅಥವಾ ಮಾಡಿಗಿ ಇವನ ಊರಾಗಿತ್ತು, ಇವನು ತಿಲದ ಕಾಯಕ (ಗಾಣದ ಕಾಯಕ) ಮಾಡುತ್ತಿದ್ದನೆಂದು ಡಾ. ವಿಜಯಶ್ರೀ ಸಬರದ ತಮ್ಮ ಸಂಶೋಧನಾ ಲೇಖನದಲ್ಲಿ ತಿಳಿಸಿದ್ದಾರೆ. ಮಾರುಡಿಗೆ ನಾಚಯ್ಯನೇ ಗಾಣಿಗ ಸಮಾಜದ ಶರಣನೆಂದು ಸ್ಪಷ್ಟಪಡಿಸಿದ್ದಾರೆ. (ನೋಡಿ: ``ವಚನತೋರಣ''- ಡಾ. ವಿಜಯಶ್ರೀ ಸಬರದ, 2018) ಈ ಶರಣನನ್ನು ಕುರಿತು ಹರಿಹರ ಕವಿಯು ``ಮಾರುಡಿಗೆ ನಾಚಿ ತಂದೆಯ ರಗಳೆ''ಯನ್ನು ರಚಿಸಿದ್ದಾನೆ. ಹೀಗೆ ಶರಣರ ಕಾಲದಲ್ಲಿ ಅನೇಕರು ಈ ವೃತ್ತಿಯನ್ನು ಮಾಡುತ್ತಿದ್ದರು. ಶರಣರು ಅವರನ್ನೆಲ್ಲ ಕಾಯಕಜೀವಿಗಳನ್ನಾಗಿ ಮಾಡುವುದರ ಮೂಲಕ ಈ ವೃತ್ತಿಗೆ, ಕಾಯಕದ ಗೌರವ ತಂದುಕೊಟ್ಟರು.

ಈಳಿಗರು ಹೆಂಡದ ವೃತ್ತಿ ಮಾಡುತ್ತಿದ್ದರು. ಮೈಸೂರು ಪ್ರದೇಶದ ಕಡೆ ಇವರನ್ನು ಈಡಿಗರೆಂದು ಕರೆದರೆ, ಕೊಡಗಿನಲ್ಲಿ ಇವರನ್ನು ಬಿಲ್ಲವರೆಂದು ಕರೆಯಲಾಗುತ್ತಿತ್ತು. ಕಲಬುರಗಿಯ ಕಡೆ ಇವರನ್ನು ಗುತ್ತೇದಾರರೆಂದು, ಕಲಾಲರೆಂದು ಕರೆಯಲಾಗುತ್ತದೆ. ಈಚಲು ಮರ, ತಾಳೆ ಮರಗಳಿಂದ ಹೆಂಡವನ್ನು ಇಳಿಸಿ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇನ್ನು ಇವರಲ್ಲಿ ಕೆಲವರು ಸೆರೆ ತಯ್ಯಾರಿಸುತ್ತಿದ್ದರು. ಹಿಪ್ಪೆಹೂ, ದ್ರಾಕ್ಷಿ, ಕಿಣ್ವ ಹೂ ಇವುಗಳನ್ನು ಕಾಯಿಸಿ ಮದ್ಯ ತಯಾರಿಸುತ್ತಿದ್ದರು. ಹೆಂಡಕ್ಕೆ ಕಳ್ಳು ಎಂದು ಕರೆಯುತ್ತಿದ್ದರು. ಶರಣರಲ್ಲಿ ಹೆಂಡದ ಮಾರಯ್ಯ ಇದೇ ವೃತ್ತಿ ಮಾಡುತ್ತಿದ್ದ. ಶರಣನಾದ ಮೇಲೆ ಹೆಂಡದ ವೃತ್ತಿ ಕಾಯಕವಾಯಿತು. ಆಗ ಮಾರಯ್ಯನಂತವರು ಈಚಲು, ತಾಳೆ, ತೆಂಗಿನಮರಗಳಿಂದ ನೀರಾ ಸಿದ್ಧಪಡಿಸಿ ಬಾಣಂತಿಯರಿಗೆ, ಅಶಕ್ತರೋಗಿಗಳಿಗೆ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಮೊದಲು ನಿಷೆಯನ್ನು ತರಿಸುತ್ತಿದ್ದ ಹೆಂಡವು, ಶರಣರ ಕಾಲಕ್ಕೆ ನೀರಾ ಆಗಿ ಔಷಧಿಯ ರೂಪ ಪಡೆದುಕೊಂಡಿತು.

``ತಾಳಮರದ ಕೆಳಗೆ ಒಂದು ಹಾಲಹರವಿಯಿದ್ದಡೆ
ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬದು...''
-ಬಸವಣ್ಣ (ಸ.ವ.ಸಂ.1, ವ-90)

``ಉದಕವೆಲ್ಲ ಒಂದೆ,
ಈಚಲವ ಆಶ್ರಯಿಸಿ ಮದ್ಯಪಾನವೆನಿಸಿತ್ತು
ಸುರತರುವ ಆಶ್ರಯಿಸಿ ಅಮೃತವೆನಿಸಿತ್ತು......''
-ಸಿದ್ಧರಾಮೇಶ್ವರ (ಸ.ವ.ಸಂ.4, ವ-1395)

``ಇವರೆಲ್ಲರ ವಂಚಿಸಿ ಅರಸನ ಹೆಂಡತಿ
ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು''
-ಕೋಲಶಾಂತಯ್ಯ (ಸ.ವ.ಸಂ.7, ವ-107)

ಈ ಮೇಲಿನ ವಚನಗಳಲ್ಲಿ ಹೆಂಡದ ಬಗೆಗಿದ್ದ ಶರಣರ ವಿಚಾರಗಳು ಸ್ಪಷ್ಟವಾಗಿವೆ. ಈಚಲು ಮರದ ಕೆಳಗೆ ಕುಳಿತು ಹಾಲು ಕುಡಿದರೆ, ಸುರೆ ಕುಡಿಯುತ್ತಾನೆಂದು ಜನರು ಭಾವಿಸುತ್ತಾರೆಂದು ಬಸವಣ್ಣ ಹೇಳಿದ್ದಾನೆ. ಈಚಲದ ರಸ ಹೆಂಡವಾದರೆ, ಕಲ್ಪವೃಕ್ಷವೆಂದು ಕರೆಯುವ ತೆಂಗಿನ ರಸ ಅಮೃತ ಸಮಾನವೆನಿಸುತ್ತದೆಂದು ಸಿದ್ಧರಾಮ ಹೇಳಿದ್ದಾನೆ. ಅರಸನ ಹೆಂಡತಿಯೊಬ್ಬಳು. ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದ್ದಳೆಂದು ಕೋಲಶಾಂತಯ್ಯ ಹೇಳಿದ್ದಾನೆ. ಒಂದು ಗಿಡದ ರಸ ನಿಶೆಯನ್ನೇರಿಸಿ ಅನಾಹುತಕ್ಕೆ ಕಾರಣವಾದರೆ, ಮತ್ತೊಂದು ಗಿಡದ ರಸ ಅಮೃತದಂತಿದೆಯೆಂದು ಹೇಳಿರುವ ಶರಣರು ಹೆಂಡದ ಉದ್ಯಮದ ಸತ್ಯಸತ್ಯಾತೆಯನ್ನು ಹೇಳಿದ್ದಾರೆ.

``ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ
ಹೊರಗಣ ಭಾಜನಕ್ಕೆ, ಒಳಗಣ ಇಂದ್ರಿಯಕ್ಕೆ
ಉಂಡುದಣಿದು, ಕಂಡುದಣಿದು, ಸಂದೇಹವ ಬಿಟ್ಟು ದಣಿದು
ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ
ಆನಂದವೆಂಬುದ ಆಲಿಂಗನವ ಮಾಡಿ..''
- ಹೆಂಡದ ಮಾರಯ್ಯ (ಸ.ವ.ಸಂ.9, ವ-1193)

ಹೆಂಡದ ಕಾಯಕದಲ್ಲಿದ್ದ ಮಾರಯ್ಯನು ತನ್ನ ವೃತ್ತಿ ಪ್ರತಿಮೆಯ ಮೂಲಕ ಅನೇಕ ಸತ್ಯಗಳನ್ನು ಹೇಳಿದ್ದಾನೆ. ``ಅರಿದುಕೊಂಡಲ್ಲಿ ಸುಧೆ, ಮರೆದು ಕೊಂಡಲ್ಲಿ ಸುರೆ (ವ-1192) ಎಂದು ಮತ್ತೊಂದು ವಚನದಲ್ಲಿ ಹೇಳಿದ್ದಾನೆ ಈ ಸುರೆಯಲ್ಲಿ ಬ್ರಹ್ಮ-ವಿಷ್ಣು-ರುದ್ರರೇ ಕೆಟ್ಟು ಹೋದರೆಂದು ಹೆಂಡದ ಮಾರಯ್ಯ ವಿವರಿಸಿದ್ದಾನೆ. ಶರಣರು ಸುರೆಯಾವುದು ಸುಧೆ ಯಾವುದೆಂದು ತಿಳಿದಿದ್ದರೆಂಬುದು ಈ ವಚನಗಳಿಂದ ತಿಳಿದುಬರುತ್ತದೆ.

ಎಲೆಗಾರ ವೃತ್ತಿಕೂಡಾ ಸ್ವತಂತ್ರ ವೃತ್ತಿಯೇ ಆಗಿತ್ತು. ಎಲೆತೋಟದಿಂದ ಎಲೆಗಳನ್ನು ತಂದು ಜನರಿಗೆ ಮಾರಾಟ ಮಾಡುತ್ತಿದ್ದುದು ಒಂದು ಕಾಯಕವಾದರೆ, ಎಲೆಗಳನ್ನು ಬೆಳೆದು ಎಲೆತೋಟಗಳ ಮುಖಾಂತರ ಕೃಷಿ ಮಾಡುತ್ತಿದ್ದುದು ಮತ್ತೊಂದು ಕಾಯಕವಾಗಿದೆ. ವೀಳ್ಯದೆಲೆಗಳನ್ನು ಎಲೆಗಾರರು ಮಾರುತ್ತಿದ್ದರು.

12ನೇ ಶತಮಾನದ ಶರಣರಲ್ಲಿ ಎಲೆಗಾರ ತಿಮ್ಮಣ್ಣ, ಎಲೆಗಾರ ಕಾಮಣ್ಣ ಈ ಮುಂತಾದವರು ಈ ಕಾಯಕವನ್ನು ಮಾಡುತ್ತಿದ್ದರು, ಊಟದ ನಂತರ ಎಲೆಯಡಿಕೆ ಹಾಕಿಕೊಳ್ಳುವುದರಿಂದ, ಉಂಡ ಊಟವು ಸರಳವಾಗಿ ಜೀರ್ಣವಾಗುತ್ತದೆಂದು ನಂಬಿದ್ದ ಗ್ರಾಮೀಣರು ಎಲೆಹಾಕಿಕೊಳ್ಳುವುದನ್ನು ತಪ್ಪಿಸುತ್ತಿರಲಿಲ್ಲ. ಹಡಪದಪ್ಪಣ್ಣನನ್ನೇ. ಅಡಪದಪ್ಪಣ್ಣ ಎಂದು ಕೆಲವರು ವಿದ್ವಾಂಸರು ಗುರುತಿಸಿದ್ದಾರೆ. ಈತ ಬಸವಣ್ಣನಿಗೆ ತನ್ನ ಅಡಪದಿಂದ (ಎಲೆಯಡಿಕೆ ಪೆಟ್ಟಿಗೆ) ಎಲೆಯಡಿಕೆಯನ್ನು ಕೊಡುವ ಕಾಯಕಮಾಡುತ್ತಿದ್ದನೆಂದು ವಿದ್ವಾಂಸರು ಹೇಳಿದ್ದಾರೆ.

``ಎಲೆ ಮಿಗಿಲು ಆರು ತಿಂಗಳಿರುವುದು
ವೃತಹೋಗಲು ಆ ಕ್ಷಣ, ಭ್ರಷ್ಟನೆಂದು ಕೂಡರು
ಎಲೆ ಹಳದಾದಡೆ ಶಿವಂಗರ್ಪಿತ.........''
- ಎಲೆಗಾರ ಕಾಮಣ್ಣ (ಸ.ವ.ಸಂ.6,ವ-1655)

ಈ ಎಲೆಗಾರ ಕಾಮಣ್ಣ ತನ್ನ ವಚನದಲ್ಲಿ ವೃತ್ತಿ ಪ್ರತಿಮೆಯ ಮೂಲಕ ಆಧ್ಯಾತ್ಮದ ಸಂಗತಿಯನ್ನು ತಿಳಿಸಿದ್ದಾನೆ. ಶರಣರ ಕಾಲಕ್ಕೆ ಎಲೆಗಾರಿಕೆಯ ಕಾಯಕ ಜನಪ್ರಿಯವಾಗಿತ್ತೆಂದು ತಿಳಿದುಬರುತ್ತದೆ.

ಕಲ್ಲುಕುಟಿಗರು ಅಥವಾ ಭೋವಿಜನಾಂಗದವರು ಕಲ್ಲಿನ ವ್ಯಾಪಾರವನ್ನು ಮಾಡುತ್ತಿದ್ದರು. ಇದು ಮುಂದೆ ಒಂದು ಸ್ವತಂತ್ರ ಉದ್ಯಮವಾಗಿ ಬೆಳೆಯಿತು. ಭೂಮಿಯಿಂದ ಬಂಡೆಗಳನ್ನು ತೆಗೆದು ಅವುಗಳನ್ನು ಒಡ್ಡರಿಂದ ಅಳತೆಗೆ ತಕ್ಕಂತೆ ಬಡಿಸಿ ಗುಡಿ- ಗುಂಡಾರ ಕಟ್ಟಲು. ಮನೆಮಠಗಳನ್ನು ಕಟ್ಟಲು ಮಾರಾಟ ಮಾಡುತ್ತಿದ್ದರು. ಕ್ರಿ.ಶ.974ರ ಹಾನಗಲ್ಲ ಶಾಸನದಲ್ಲಿ ಇವರನ್ನು ``ಕಲ್ಲುಕುಟಿಗ ಬಿಟ್ಟೋಜ'' ಎಂದು ಕರೆಯಲಾಗಿದೆ.

``ಶಿಲೆ ಭಾವ ಹಿಂಗಿ ಕುರುಹಾಯಿತ್ತು ಕಾರುಕನ ಕೈಯಲ್ಲಿ
ಪಾಷಾಣಭಾವ ಹಿಂಗಿ ಕಳೆಯಾಯಿತ್ತು, ಆಚಾರ್ಯನ ಕೈಯಲ್ಲಿ.....''
- ಡಕ್ಕೆಯ ಬೊಮ್ಮಣ್ಣ (ಸ.ವ.ಸಂ.7 ವ-978)

ಡಕ್ಕೆಯ ಬೊಮ್ಮಣ್ಣನು ಈ ವಚನದಲ್ಲಿ ಕಲ್ಲುಕುಟಿಗರ ಬಗೆಗೆ ಪ್ರಸ್ತಾಪಿಸಿದ್ದಾನೆ. ಈ ವೃತ್ತಿ ಮಾಡುವವರನ್ನು ಬೊಮ್ಮಣ್ಣನು ``ಕಾರುಕ'' ಎಂದು ಕರೆದಿದ್ದಾನೆ. ಕಾರುಕ ಎಂದರೆ ಶಿಲ್ಪಿ ಎಂದರ್ಥವಾಗುತ್ತದೆ. ಭೂಮಿಯಿಂದ ದೊಡ್ಡ ದೊಡ್ಡ ಬಂಡೆಗಳೆನ್ನೆಬ್ಬಿಸಿ ಒಡ್ಡರ ಸಹಾಯದಿಂದ ಆ ಬಂಡೆಗಳಿಗೆ ಒಂದು ಆಕಾರಕೊಡಿಸಿ ಕಲ್ಲುಕುಟಿಗರು ಈ ಕಾಯಕವನ್ನು ಮಾಡುತ್ತಿದ್ದರು.

ಮೋಳಿಗೆ ಮಾರುವ ಕಾಯಕವಿರುವಂತೆ, ಕುಳ್ಳು ಹುಲ್ಲುಗಳನ್ನು ತಂದು ಶರಣರಿಗೆ ಮಾರುವ ಕಾಯಕವನ್ನು ಕೆಲವರು ಮಾಡುತ್ತಿದ್ದರು. ಇವೆಲ್ಲ ಸ್ವತಂತ್ರ ಕಾಯಕಗಳೇ ಆಗಿದ್ದವು. ಇಂಧನಕ್ಕಾಗಿ ಬಳಸುವ ಸೌದೆಯನ್ನು ಜನರಿಗೆ ಸರಬರಾಜು ಮಾಡುವ ಮೋಳಿಗೆಯ ಕಾಯಕವನ್ನು ಅನೇಕ ಜನ ಮಾಡುತ್ತಿದ್ದರು. ಕಾಶ್ಮೀರದ ಅರಸ ಕಲ್ಯಾಣಕ್ಕೆ ಬಂದು ಇದೇ ಕಾಯಕವನ್ನು ಮಾಡಿ ಮೋಳಿಗೆ ಮಾರಯ್ಯನೆಂದು ಹೆಸರುವಾಸಿಯಾದ. ಹೊಡೆಹುಲ್ಲ ಬಂಕಣ್ಣನು ಹುಲ್ಲುಮಾರುವ ಕಾಯಕ ಮಾಡುತ್ತಿದ್ದನು. ಕಚ್ಚಾಹುಲ್ಲಿಗೆ ಹೊಡೆಯೆಂದು ಕರೆಯಲಾಗುತಿತ್ತು. ದನಕರುಗಳಿಗಾಗಿ ಜನರು ಈ ಹುಲ್ಲನ್ನು ಕೊಂಡುಕೊಳ್ಳುತ್ತಿದ್ದರು. ಗಾವುದಿ ಮಾಚಯ್ಯನೂ ಕೂಡ ಹುಲ್ಲು ಮಾರುವ ಕಾಯಕವನ್ನೇ ಮಾಡುತ್ತಿದ್ದ. ಇನ್ನು ನುಲಿಯ ಚೆಂದಯ್ಯನು ನುಲಿ-ಕಣ್ಣೆಗಳನ್ನು ಸಿದ್ಧಪಡಿಸಿ ಮಾರುತ್ತಿದ್ದ. ಅಡವಿಯಲ್ಲಿ ಬೆಳೆದ ಪುಂಡಿಯನ್ನು ತಂದು ತೋಯಿಸಿ, ಹದಮಾಡಿ ನಾರನ್ನು ತೆಗೆದು ಅದರಿಂದ ನುಲಿ ಮಾಡುತ್ತಿದ್ದ. ರೈತರಿಗೆ ಬೇಕಾಗುವ ಹಗ್ಗ, ಕಣ್ಣಿ, ಬಾರುಕೋಲು, ಮಿಣೆ, ಮೂಗದಾಣ ಇವೆಲ್ಲವುಗಳನ್ನೂ ನುಲಿಯಿಂದಲೇ ತಯ್ಯಾರಿಸುತ್ತಿದ್ದನು. ಹೀಗೆ ಇನ್ನೂ ಅನೇಕ ಸ್ವತಂತ್ರ ಕಾಯಕಗಳಿದ್ದು ಶರಣರು ಈ ಎಲ್ಲ ಕಾಯಕಗಳಿಗೆ ವೃತ್ತಿ ಗೌರವವನ್ನು ತಂದುಕೊಟ್ಟರು.

ಮುಂದುವರಿಯುವುದು…

ಈ ಅಂಕಣದ ಹಿಂದಿನ ಬರಹಗಳು:
ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...