ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ

Date: 01-08-2022

Location: ಬೆಂಗಳೂರು


“ಕಾಯಕ ಕಡ್ಡಾಯ ಮಾತ್ರವಾಗಿರಲಿಲ್ಲ, ಅದೇ ಕೈಲಾಸವಾಗಿತ್ತು. ದೇವಾನುದೇವತೆಗಳಿರುವ ಕೈಲಾಸ ಹುಸಿಯೆಂದು ಹೇಳಿದ ಶರಣರು ಕಾಯಕಜೀವಿಗಳು ಎಲ್ಲಿರುತ್ತಾರೋ ಅದೇ ಕೈಲಾಸವೆಂದು ಸ್ಪಷ್ಟಪಡಿಸಿದರು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ಪಾಲಿಗೆ ಕಾಯಕ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

ಸ್ವಾರ್ಥ ಅತಿಯಾಸೆಯ ತೊರೆದು
ಕಾಯಕದಲ್ಲಿ ಸ್ವಾರ್ಥ-ಅತಿಯಾಸೆ ಸಲ್ಲದೆಂದು ಶರಣರು ಹೇಳಿದ್ದಾರೆ. ಸ್ವಾರ್ಥವು ಮನುಷ್ಯನನ್ನು ಸಣ್ಣವನನ್ನಾಗಿ ಮಾಡಿದರೆ, ಅತಿಯಾಸೆಯು ದುಃಖಕ್ಕೆ ಮೂಲ ಕಾರಣವಾಗುತ್ತದೆ. ಯಾವುದೇ ಸ್ವಾರ್ಥದಿಂದ ಕಾಯಕ ಮಾಡಬಾರದೆಂದು ಹೇಳಿದ ಶರಣರು ಅತಿಯಾಸೆ ಮನುಷ್ಯನ ಜೀವನವನ್ನೇ ಹಾಳುಮಾಡುತ್ತದೆಂದು ತಿಳಿಸಿದ್ದಾರೆ.

“ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ
ಗುರುಚರಕೆ ವಂಚಿಸಿ,
ತಾಯಿ ತಂದೆ, ಬಂಧುಬಳಗ, ಹೆಂಡತಿ, ಒಡಹುಟ್ಟಿದವರು
ಎಂದು ಸಮಸ್ತ ಪದಾರ್ಥವ ಚಾಗೆಯ ಮಾಡುವನೊಬ್ಬ
ಭಕ್ತದ್ರೋಹಿ ನೋಡಾ, ಕೂಡಲಸಂಗಮದೇವಾ”

- ಬಸವಣ್ಣ (ಸ.ವ.ಸಂ.1, ವ:1178)

ಬಸವಣ್ಣನವರು ಈ ವಚನದಲ್ಲಿ ಸ್ವಾರ್ಥದ ಕಾಯಕದ ಬಗ್ಗೆ ಹೇಳಿದ್ದಾರೆ. ಕಾಯಕವು, ಗುರುಲಿಂಗಜಂಗಮದ ಹೆಸರಿನಿಂದ ಪ್ರಾರಂಭವಾಗಬೇಕೆಂಬುದು ಶರಣಸಿದ್ಧಾಂತವಾಗಿದೆ. ಕಲಿಸಿದ ಗುರು, ಇಷ್ಟಲಿಂಗ ಮತ್ತು ದೀಕ್ಷೆನೀಡುವ ಜಂಗಮ ಈ ಮೂವರೂ ಹೊರಗೆ ಕಾಣಿಸುತ್ತಾರೆ. ಇದು ಮೂರ್ತರೂಪ, ಇದು ಮೊದಲನೇ ಅರ್ಥ. ಆದರೆ ನಿಜವಾದ ಗುರುಲಿಂಗಜಂಗಮರೆಂದರೆ ಅರಿವು-ಆಚಾರ-ಅನುಭಾವ. ಇವು ಹೊರಗೆ ಕಾಣಿಸುವುದಿಲ್ಲ, ಒಳಗೆ ಇರುತ್ತವೆ. ಇವು ಅಮೂರ್ತ ರೂಪದಲ್ಲಿರುತ್ತವೆ. ಮೂರ್ತರೂಪದ ಗುರುಲಿಂಗಮಜಂಗಮರಿಗೆ ಕಾಯಕದ ಧನವನ್ನು ನೀಡುವುದು ಒಂದು ಅರ್ಥವಾದರೆ; ಅರಿವು-ಆಚಾರ-ಅನುಭಾವದ ಬೆಳವಣಿಗೆಗೆ ಕಾಯಕದ ಧನವನ್ನು ವ್ಯಯಿಸಬೇಕೆಂಬುದು ಮತ್ತೊಂದು ಅರ್ಥವಾಗಿದೆ. ಇದನ್ನು ಬಿಟ್ಟು ತಾಯಿ-ತಂದೆ-ಬಂಧು-ಬಳಗಕ್ಕೆಂದೇ ದುಡಿದದ್ದನ್ನೆಲ್ಲ ಕೊಟ್ಟುಬಿಟ್ಟರೆ ಅದು ಕಾಯಕವಾಗುವುದಿಲ್ಲ. ಅದು ಭಕ್ತಿದ್ರೋಹವಾಗುತ್ತದೆ. ಅಂಥವನು ಭಕ್ತದ್ರೋಹಿಯಾಗುತ್ತಾನೆಂದು ಬಸವಣ್ಣನವರು ಹೇಳಿದ್ದಾರೆ. ಕಾಯಕದಲ್ಲಿ ಕೇವಲ ದುಡಿಯುವುದು, ಧನಗಳಿಸುವುದು ಮುಖ್ಯವಾಗುವುದಿಲ್ಲ. ದುಡಿಮೆಯಿಂದ ಬಂದ ಧನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂಬುದು ಮುಖ್ಯವಾಗುತ್ತದೆ.

ದುಡಿಮೆಯ ಧನ ಸ್ವಾರ್ಥಕ್ಕೆ ಉಪಯೋಗವಾಗಬಾರದು. ಅದು ಗುರುಲಿಂಗಜಂಗಮಕ್ಕೆ ಸಲ್ಲಬೇಕೆಂಬ ವಿಚಾರವನ್ನು ನುಲಿಯ ಚಂದಯ್ಯನವರು ತಿಳಿಸಿದ್ದಾರೆ. ಯಾವುದೇ ಕಾಯಕ ಮಾಡಿದರೂ ಭಾವಶುದ್ಧವಾಗಿರಬೇಕೆಂದು ತಿಳಿಸಿರುವ ಅವರು ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆಯೆಂದು ಹೇಳಿದ್ದಾರೆ. ಹೀಗಾಗಿ ಕಾಯಕಕ್ಕೂ-ಗುರುಲಿಂಗಮಜಂಗಮಕ್ಕೂ ಸಂಬಂಧವಿದೆ.

“ಕಾಯಕವೆಂದು ಕಲ್ಪಿಸಿ ಮಾಡುವಲ್ಲಿ
ತುಡುಗುಣಿಯಂತೆ ಮಡದಿ ಮಕ್ಕಳಿಗೆಂದು
ಹೆಡಿಗೆ ಗಳಿಗೆಯಲ್ಲಿ ಹೊಯ್ದು, ಕಡ ಪರಪತಿಯೆಂದು ಕೊಟ್ಟಡೆ,
ಅದು ಗುರುಪರಚರ ಈ ಮೂರರೊಡವೆಯಲ್ಲ.
ಆತನು ಮೃಢಭಕ್ತನೆಂದು ಅವನ ಮನೆಯಲ್ಲಿ ಒಡಗೂಡಿ ಉಂಡಡೆ,
ಅಡಗ ನಾಯಿ ತಿಂದು, ಮಿಕ್ಕುದ ನರಿತಿಂದಂತೆ
ಐಘಂಟೇಶ್ವರಲಿಂಗವೆ ಸಾಕ್ಷಿಯಾಗಿ”

-ಸತ್ತಿಗೆಕಾಯಕದ ಮಾರಯ್ಯ (ಸ.ವ.ಸಂ.9, ವ:601)

ಈ ವಚನದಲ್ಲಿ ಸತ್ತಿಗೆ ಕಾಯಕದ ಮಾರಯ್ಯನವರು, ಕಾಯಕದಲ್ಲಿ ಸ್ವಾರ್ಥ ಸಲ್ಲದೆಂದು ಸ್ಪಷ್ಟಪಡಿಸಿದ್ದಾರೆ. ತಾನು ದುಡಿದ ಧನವನ್ನು ಕೇವಲ ತನ್ನ ಮಡದಿ ಮಕ್ಕಳಿಗೆ ವ್ಯಯಿಸುವುದನ್ನು ಇವರು ಕಳ್ಳನಾಯಿಗೆ ಹೋಲಿಸಿದ್ದಾರೆ. ಹೀಗೆ ಮಾಡುವುದು ಗುರುಪರಚರರ ಒಡವೆಯಲ್ಲವೆಂದು ಹೇಳಿದ್ದಾರೆ. ಇಂಥವನು ಶಿವಭಕ್ತನೆಂದು ತಿಳಿದು ಆತನ ಮನೆಯಲ್ಲಿ ಉಂಡರೆ, ನಾಯಿತಿಂದು ಬಿಟ್ಟ ಮಾಂಸವನ್ನು ನರಿತಿಂದಂತೆ ಎಂದು ಲೌಕಿಕ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಸತ್ತಿಗೆಕಾಯಕ ಮಾಡಿಕೊಂಡಿದ್ದ ಒಬ್ಬ ಸಾಮಾನ್ಯ ಶರಣನಾದ ಮಾರಯ್ಯ ಇಲ್ಲಿ ಜನಭಾಷೆಯಲ್ಲಿ, ಜನರಿಗೆ ತಿಳಿಯುವಂತೆ ಕಾಯಕದ ವ್ಯಾಖ್ಯಾನ ಮಾಡಿದ್ದಾರೆ. ಜನಸಾಮಾನ್ಯರು ಶರಣರಿಂದ ಸಂಸ್ಕಾರ ಪಡೆದುಕೊಂಡು ತಾವು ಕೂಡಾ ಹೀಗೆ ಶರಣರಾದರೆಂಬುದನ್ನು ಶರಣ ಚಳುವಳಿ ಹೇಳುತ್ತದೆ. ಇಂತವರು ಆಧ್ಯಾತ್ಮ ಹೇಳಿದಾಗ, ಆಧ್ಯಾತ್ಮದ ಪರಿಭಾಷೆಯೇ ಬದಲಾಗುತ್ತದೆ. ಶರಣ ಸಿದ್ಧಾಂತವನ್ನು ಸರಳವಾಗಿ ಮತ್ತು ತೀವ್ರವಾಗಿ ಮಂಡಿಸಿದವರೇ ಇಂತಹ ವಚನಕಾರರಾಗಿದ್ದಾರೆ.

“ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಡೆ ನಿಮಗೇಕೆ? ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ”
- ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5, ವ:710)

ಈ ವಚನದಲ್ಲಿ ಆಯ್ದಕ್ಕಿ ಲಕ್ಕಮ್ಮ ಅತಿಯಾಸೆಯ ಬಗೆಗೆ ಹೇಳಿದ್ದಾಳೆ. ಅತಿಯಾಸೆಯಿಂದ ಮಾಡುವುದು ಕಾಯಕವೇ ಅಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಲಕ್ಕಮ್ಮ ಆಳುವ ಅರಸನ ಉದಾಹರಣೆಯ ಮೂಲಕ ಕಾಯಕಸಿದ್ಧಾಂತವನ್ನು ಬಿಡಿಸಿ ಹೇಳಿದ್ದಾಳೆ. ಆಸೆಯೆಂಬುದು, ಅತಿಯಾಸೆಯೆಂಬುದು ಅರಸರಿಗೆ, ಆಳುವವರಿಗೆ ಇರುತ್ತದೆಯೇ ಹೊರತು ಶಿವಭಕ್ತರಿಗಲ್ಲವೆಂಬುದು ಈ ಶರಣೆಯ ಸ್ಪಷ್ಟ ನಿಲುವಾಗಿದೆ. ಆಸೆ-ಸ್ವಾರ್ಥಗಳನ್ನು ತೊರೆದು ಬಂದಾಗಲೇ ಶರಣನಾಗಲು ಸಾಧ್ಯವಾಗುತ್ತದೆಂದು ಹೇಳಿರುವ ಲಕ್ಕಮ್ಮ ಇಲ್ಲಿ ಆಳುವ ಅರಸನನ್ನೇ ಕೌಂಟರ್ ಮಾಡಿದ್ದಾಳೆ. ಆಸೆ-ಅತಿಯಾಸೆಯಿಂದ ಕೂಡಿರುವ ಅರಸರಿಗಿಂತ; ಆಸೆತೊರೆದು ಬಂದಿರುವ ಶರಣರು ಮುಖ್ಯರಾಗುತ್ತಾರೆ. ಆಸೆಯಿದ್ದಾಗಲೇ ಆತ ಅರಸನಾಗುತ್ತಾನೆ. ಆಳಬೇಕೆಂದು ಬಯಸುತ್ತಾನೆ. ಹೀಗಾಗಿ ಅರಸ ಆಸೆ ಪಡುವುದು ಸಹಜ. ಆದರೆ ಆಸೆ-ಸ್ವಾರ್ಥಗಳನ್ನು ತೊರೆದು ಬಂದಿರುವ ಶಿವಭಕ್ತ ಆಸೆಪಟ್ಟರೆ ಹೇಗೆಂಬುದು ಈ ಶರಣೆಯ ಪ್ರಶ್ನೆಯಾಗಿದೆ. ಇನ್ನು ರೋಷವೆಂಬುದು ಯಮದೂತರಿಗೆ ಇರುತ್ತದೆಯೇ ಹೊರತು ಅಜಾತರಿಗೆ ಇರುತ್ತದೆಯೇ ಎಂದು ಪ್ರಶ್ನಿಸಿದ್ದಾಳೆ. ಇಲ್ಲಿ ಬಂದಿರುವ ಆಸೆ ಮತ್ತು ರೋಷಗಳು ಶರಣರ ವೈರಿಗಳಾಗಿವೆ. ಕಾಯಕದ ವೈರಿಗಳಾಗಿವೆ. ಹೀಗಿದ್ದಾಗ ಈಸಕ್ಕಿಯಾಸೆ ನಿಮಗೇಕೆ ಬಂತು? ಇದನ್ನು ಈಶ್ವರ ಒಪ್ಪಲಾರ, ಹೋಗಿ ಸುರವಿಬನ್ನಿ ಎಂದು ಗಂಡನನ್ನೇ ಎಚ್ಚರಿಸಿದ ಮಹಾಶರಣೆ ಆಯ್ದಕ್ಕಿ ಲಕ್ಕಮ್ಮ. ಈ ಶರಣೆಯ ವಚನಗಳಲ್ಲಿ ನಿಜವಾದ ಕಾಯಕ ಸಿದ್ಧಾಂತವಿದೆ.

“ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ”

- ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ (ಸ.ವ.ಸಂ.5, ವ:735)

ದಲಿತ ವಚನಕಾರ್ತಿ ಕಾಳವ್ವೆ ಕಾಯಕ ಸಿದ್ಧಾಂತ ಕುರಿತು ಸ್ಪಷ್ಟವಾದ ನಿಲುವುಗಳನ್ನು ತಾಳಿದ್ದಾಳೆ. ಈ ವಚನದಲ್ಲಿ ಸ್ವಾರ್ಥ ಮತ್ತು ಅತಿಯಾಸೆ ಇವೆರಡರ ಪ್ರಸ್ತಾಪವಿದೆ. ಭಕ್ತರಾಗಬೇಕಾದರೆ ನಿಸ್ವಾರ್ಥ ಕಾಯಕ ಮಾಡಬೇಕು. ಸತ್ಯಶುದ್ಧವಿಲ್ಲದೇ ಇರುವುದು ಕಾಯಕವೇ ಅಲ್ಲ ಎಂಬಂತಹ ನಿಖರವಾದ ನುಡಿಗಳ ಮೂಲಕ ಪ್ರಾರಂಭವಾಗುವ ಈ ವಚನ “ಆಸೆಯೇ ಭವದ ಬೀಜ, ನಿರಾಸೆಯೇ ನಿತ್ಯಮುಕ್ತಿ” ಎಂಬ ತತ್ವವನ್ನು ಹೇಳುತ್ತದೆ. ಭವ ಮತ್ತು ಭವಿ ಪದಗಳು ಅನೇಕ ಶರಣರ ವಚನಗಳಲ್ಲಿ ಬಳಕೆಯಾಗಿವೆ. ಭವವೆಂದರೆ ಭೋಗದ ಜೀವನ, ಭವಿಯೆಂದರೆ ಆಳರಸ. ಹೀಗಾಗಿ ಆಳರಸ-ಪ್ರಭುತ್ವ ಇಲ್ಲಿ ಭವಿಯಾಗಿ ಕಾಡಿದೆ. ಶರಣರ ಪ್ರತಿಯೊಂದು ಸಿದ್ಧಾಂತಗಳು ಪ್ರಭುತ್ವದ ವಿರುದ್ಧ, ಪುರೋಹಿತಶಾಹಿಯ ವಿರುದ್ಧ ಇವೆ. ಹೀಗಾಗಿ ಪ್ರಭುತ್ವ ಮತ್ತು ಪುರೋಹಿತಶಾಹಿ ಮೊದಲಿನಿಂದ ಇಂದಿನವರೆಗೂ ಶರಣಸಿದ್ಧಾಂತಗಳನ್ನು ನಿರಾಕರಿಸುತ್ತ, ನಿರ್ಲಕ್ಷಿಸುತ್ತ ಬಂದಿವೆ.

ಕಾಯಕ ಸಿದ್ಧಾಂತದ ಮೂಲಕ, ದಾಸೋಹ ಸಿದ್ಧಾಂತದ ಮೂಲಕ, ಸಾಮಾಜಿಕನ್ಯಾಯದ ಸಿದ್ಧಾಂತದ ಮೂಲಕ ಶರಣರು ಪ್ರಭುತ್ವವನ್ನು ಮತ್ತು ಪುರೋಹಿತಶಾಹಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ತೋರಿಕೆಗೆ ಇದು ಧಾರ್ಮಿಕ ಚಳವಳಿಯಾಗಿ ಕಂಡರೂ, ಇದು ನಿಜವಾದ ಸಾಮಾಜಿಕ ಹೋರಾಟವಾಗಿದೆ. ಧರ್ಮವನ್ನು ಸಾಮಾಜಿಕ ಪರಿಭಾಷೆಯ ಮೂಲಕ ಅರ್ಥೈಸಿದ ಶರಣರು, ಸಮಾಜವನ್ನು ಧಾರ್ಮಿಕ ಸಿದ್ಧಾಂತದ ಮೂಲಕ ಕಟ್ಟಲು ಪ್ರಯತ್ನಿಸಿದ್ದಾರೆ.

ಸಂಗ್ರಹ ಪ್ರವೃತ್ತಿ ಸಲ್ಲದು

ವೃತ್ತಿಗೂ ಕಾಯಕಕ್ಕೂ ಇರುವ ಬಹುದೊಡ್ಡ ಅಂತರವೆಂದರೆ, ಸಂಗ್ರಹ ಪ್ರವೃತ್ತಿ. ವೃತ್ತಿಯಲ್ಲಿ ತಾನು ಗಳಿಸಿದ ಹಣವನ್ನು ತನಗಾಗಿ, ತನ್ನ ಕುಟುಂಬಕ್ಕಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು. ಆದರೆ ಕಾಯಕ ಸಿದ್ಧಾಂತದಲ್ಲಿ ಸಂಗ್ರಹಕ್ಕೆ ಅವಕಾಶವೇ ಇಲ್ಲ. ಜಾಗತೀಕರಣದ ಈ ಸಂದರ್ಭದಲ್ಲಿ ಸಂಗ್ರಹ ಮಾಡುವ ಆಸೆ ಅತಿಯಾಗಿದೆ. ಸಂಗ್ರಹ ಪ್ರವೃತ್ತಿ ಹೀಗೆ ಬೆಳೆದು ನಿಂತರೆ ಅದು ಮುಂದೆ ಸಾಮ್ರಾಜ್ಯಶಾಹಿಯ ಕಡೆಗೆ ವಾಲುತ್ತದೆ. ಶರಣರ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದ ಸರ್ವಜ್ಞ ಕವಿ “ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಎಂದು ಹೇಳಿದ್ದಾನೆ. ಸಂಗ್ರಹ ಪ್ರವೃತ್ತಿಯ ಜನ ತಾವು ಸಂಗ್ರಹಿಸಿದ್ದು ತಮಗಾಗುತ್ತದೆ, ತಮ್ಮ ಕುಟುಂಬಕ್ಕಾಗುತ್ತದೆಂದು ನಂಬಿರುತ್ತಾರೆ. ಈ ನಂಬಿಕೆಯನ್ನು ಶರಣರ ಸಿದ್ಧಾಂತ ಬುಡಮೇಲು ಮಾಡಿದೆ. ಕೊಟ್ಟಿದ್ದು ಅಂದರೆ ಪರರಿಗೆ, ಬಡವರಿಗೆ, ಅಸಹಾಯಕರಿಗೆ ನೀಡಿದ ದುಡ್ಡೇ ಮುಂದೆ ಬರುತ್ತದೆ. ಬಚ್ಚಿಟ್ಟದ್ದು ಪರರ ಪಾಲಾಗುತ್ತದೆಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. “ಕೊಟ್ಟು ನಾ ಕೆಟ್ಟೆನೆನಬೇಡ ಅದು ಮುಂದೆ ಕಟ್ಟಿಟ್ಟ ಬುತ್ತಿ ಸರ್ವಜ್ಞ” ಎಂದು ಸರ್ವಜ್ಞ ಕವಿ ನಿಖರವಾಗಿ ಹೇಳಿದ್ದಾನೆ.

“ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ
-ಬಸವಣ್ಣ (ಸ.ವ.ಸಂ.1, ವ:436)

ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸುವ ಬಸವಣ್ಣನವರು ಈ ವಚನದಲ್ಲಿ ಪ್ರಮಥರಾಣೆಯನ್ನಿಟ್ಟು ಪ್ರಮಾಣ ಮಾಡಿದ್ದಾರೆ. ಸಂಗ್ರಹಪ್ರವೃತ್ತಿ ಇರಬಾರದೆಂಬುದಕ್ಕೆ ಇದಕ್ಕಿಂತ ದೊಡ್ಡ ಬದ್ಧತೆ ಮತ್ತೊಂದಿಲ್ಲವೆನ್ನಬಹುದು.

“ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದೆಳೆಯ” ಎಂಬ ನುಡಿಯಲ್ಲಿ ತಾನು ದುಡಿದ ದ್ರವ್ಯದಲ್ಲಿ ಕಿಂಚಿತ್ತನ್ನೂ ಇಂದಿಂಗೆ, ನಾಳಿಗೆ ಬೇಕೆಂದು ಸಂಗ್ರಹಿಸುವುದಿಲ್ಲವೆಂದು ಬಸವಣ್ಣನವರು ಪ್ರತಿಜ್ಞೆ ಮಾಡಿದ್ದಾರೆ. ಇದು ಕಾಯಕ ಸಿದ್ಧಾಂತದ ಬಹುದೊಡ್ಡ ತತ್ವವಾಗಿದೆ. ನೆಲದಲ್ಲಿ ನಿಧಿ ಮುಚ್ಚಿಡುವವರಿಗೆ ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ವಿಡಂಬನೆ ಮಾಡಿದ್ದಾರೆ. ಆಯುಷ್ಯ ತೀರಿದ ಬಳಿಕ ಆ ಅರ್ಥವನುಂಬುವವರಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. “ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ ಉಣ್ಣದೆ ಹೋಗದಿರಾ!” ಎಂದು ಕಿವಿಮಾತು ಹೇಳಿದ್ದಾರೆ.

“ಆವಾವ ಜಾತಿಗೋತ್ರದಲ್ಲಿ ಬಂದರೂ, ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು” (ವ:13) ಎಂದು ಹೇಳಿರುವ ಕನ್ನಡಿಕಾಯಕದ ಅಮ್ಮಿದೇವಯ್ಯ, ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸಿದ್ದಾರೆ. “ಮೂರು ಕಾಯಕದಂದವ ತಿಳಿದು ನಡೆಯಬೇಕು” ಎನ್ನುವ ಅಮ್ಮಿದೇವಯ್ಯ ದುಡಿದ ಹಣವನ್ನು ಸಂಗ್ರಹಿಸಿಡುವುದು ತಪ್ಪೆಂದು ಸ್ಪಷ್ಟಪಡಿಸಿದ್ದಾರೆ.

“ಕಂಥೆತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮನಲ್ಲ” ಎಂದು ನಿರ್ಭಿಡೆಯಿಂದ ಹೇಳಿರುವ ಅಂಬಿಗರ ಚೌಡಯ್ಯ ಹಣಸಂಗ್ರಹಣೆ ಮಾಡುವವರನ್ನು ಕಂಡು ಕಟುವಾಗಿ ವಿಡಂಬಿಸಿದ್ದಾರೆ.

ಹೀಗೆ ಶರಣರು ಅನೇಕ ವಚನಗಳಲ್ಲಿ ಸಂಗ್ರಹ ಪ್ರವೃತ್ತಿಯನ್ನು ವಿರೋಧಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ನೆಲದಲ್ಲಿ ಹೂಳಿಟ್ಟು ಸತ್ತುಹೋದರೆ ಅದು ವ್ಯರ್ಥವಾಗುತ್ತದೆಂದು ನಂಬಿರುವ ಶರಣರು ಹಣ ಸಂಗ್ರಹದ ಕ್ರಿಯೆಯಲ್ಲಿ ಸ್ವಾರ್ಥ ಇರುತ್ತದೆಂದು ಸಾರಿ ಹೆಳಿದ್ದಾರೆ. ಹಣ ಸಂಗ್ರಹದಿಂದ ಯಾರಿಗೂ ಪ್ರಯೋಜನವಿಲ್ಲವೆಂದು ತಿಳಿಸಿದ ಶರಣರು ಸಂಗ್ರಹನೀತಿಯನ್ನು ಖಂಡಿಸಿದ್ದಾರೆ.

ಇತರ ವಿಚಾರಗಳು

ಕಾಯಕಕ್ಕೆ ಸಂಬಂಧಿಸಿದಂತೆ, ಶರಣರು ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಶರಣ ಚಳವಳಿಯಲ್ಲಿ ಭಾಗವಹಿಸಿದವರಿಗೆ ಕಾಯಕ ಕಡ್ಡಾಯವಾಗಿತ್ತೆಂಬುದು ಬಹುಮುಖ್ಯ ಸಂಗತಿಯಾಗುತ್ತದೆ. ಪ್ರತಿಯೊಬ್ಬರೂ ಕಾಯಕ ಮಾಡಬೇಕೆಂಬುದು ಶರಣರ ವ್ರತವಾಗಿತ್ತು. ಅವರಿಗೆ ಕಾಯಕವೇ ವ್ರತವಾಗಿತ್ತು. “ಕಾಯಕದ ಬೆಂಬಳಿಯಲ್ಲಿ ತಂದನೆನ್ನ ಬಸವಣ್ಣ (ವ:16)” ಎಂದು ಕನ್ನಡಿ ಕಾಯಕದ ಅಮ್ಮಿದೇವಯ್ಯ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ಅನೇಕ ಶರಣರು ಬೇರೆ ಬೇರೆ ಕಾಯಕ ಮಾಡುತ್ತಿದ್ದರು. ಕಾಯಕದಿಂದ ಬಂದ ದ್ರವ್ಯವನ್ನು ದಾಸೋಹಕ್ಕೆ ಸಮರ್ಪಿಸುತ್ತಿದ್ದರು. ಸರ್ವರಿಗೂ ಕಾಯಕ ಕಡ್ಡಾಯವಾದುದರಿಂದ ರಾಜ್ಯದ ಬೊಕ್ಕಸ ಹೆಚ್ಚಾಯಿತು. ಸತ್ಯಶುದ್ಧ ಕಾಯಕ ಮಾಡಿದ್ದರಿಂದ ಸಮಾಜದಲ್ಲಿ ನೆಮ್ಮದಿ ಮೂಡಿತು. ಶರಣರ ಈ ಪ್ರಾಮಾಣಿಕತೆಯನ್ನು ಕಂಡು ಹೊರನಾಡುಗಳಿಂದ ದೊಡ್ಡ ದೊಡ್ಡ ವ್ಯಾಪಾರಿಗಳು ವ್ಯಾಪಾರಕ್ಕೆಂದು ಕಲ್ಯಾಣಕ್ಕೆ ಬರುತ್ತಿದ್ದರು. ಕಾಯಕತತ್ವದಿಂದ ಒಂದು ರೀತಿಯ ಆರ್ಥಿಕ ಕ್ರಾಂತಿಯನ್ನೇ ಶರಣರು ಮಾಡಿದರು.

“ಗುರುವಾದಡೂ ಕಾಯಕದಿಂದಲೆ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದ ವೇಷದ ಪಾಶ ಹರಿವುದು”
-ನುಲಿಯ ಚಂದಯ್ಯ (ಸ.ವ.ಸಂ.7, ವ: 1314)

ಗುರುವಾಗಲಿ-ಜಂಗಮನಾಗಲಿ ಯಾವುದೇ ಶರಣನಾಗಲಿ ಕಾಯಕ ಮಾಡಲೇಬೇಕು. ಕಾಯಕದಿಂದಲೇ ಅವರಿಗೆ ಜೀವನ್ಮುಕ್ತಿಯೆಂಬ ಸಂದೇಶವನ್ನು ಶರಣರು ಹೇಳಿದರು. ಯಾವುದೇ ಕಾಯಕ ಮಾಡಿದರೂ ಸರಿಯೆ, ಆದರೆ ಕಾಯಕ ಮಾಡಲೇಬೇಕೆಂಬುದು ಶರಣತತ್ವವಾಗಿತ್ತು. ಹೀಗಾಗಿ ಪ್ರತಿಯೊಬ್ಬ ಶರಣನೂ ಕಾಯಕಜೀವಿಯಾಗಿದ್ದ. ಹೀಗೆ ಪ್ರತಿಯೊಬ್ಬರೂ ಕಾಯಕ ಮಾಡುವದರಿಂದ ಶ್ರಮಸಂಸ್ಕೃತಿ ಬೆಳೆಯಿತು. ಶ್ರಮಸಂಸ್ಕೃತಿಯಿಂದ ಅವರೆಲ್ಲ ಆರೋಗ್ಯವಂತರಾಗಿದ್ದರು. ಅತಿಯಾಸೆಯನ್ನು ತೊರೆದದ್ದರಿಂದ ನೆಮ್ಮದಿಯಿಂದ ಬಾಳಿದರು.

ಕಾಯಕ ಕಡ್ಡಾಯವಾಗಿದೆ. ಯಾರಾದರೂ ಕಾಯಕ ಬಿಟ್ಟರೆ, ಸೈರಿಸಬಾರದೆಂದು ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ನೇರವಾಗಿ ಹೇಳಿದ್ದಾಳೆ. ಕಾಯಕವೇ ಇವರಿಗೆಲ್ಲ ವ್ರತವಾಗಿತ್ತು. ಅಕ್ಕಮ್ಮನ ಅನೇಕ ವಚನಗಳಲ್ಲಿ ವ್ರತದ ಮಹತ್ವ ಕುರಿತು ಹೇಳಲಾಗಿದೆ. ಆ ವ್ರತ ಬೇರಾವುದೂ ಆಗಿರದೆ ಅದು ಕಾಯಕವೇ ಆಗಿತ್ತೆಂಬುದು ಮಹತ್ವದ ಸಂಗತಿಯಾಗಿದೆ.

ಕಾಯಕ ಕಡ್ಡಾಯ ಮಾತ್ರವಾಗಿರಲಿಲ್ಲ, ಅದೇ ಕೈಲಾಸವಾಗಿತ್ತು. ದೇವಾನುದೇವತೆಗಳಿರುವ ಕೈಲಾಸ ಹುಸಿಯೆಂದು ಹೇಳಿದ ಶರಣರು ಕಾಯಕಜೀವಿಗಳು ಎಲ್ಲಿರುತ್ತಾರೋ ಅದೇ ಕೈಲಾಸವೆಂದು ಸ್ಪಷ್ಟಪಡಿಸಿದರು.

“ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು,
ಕಾಯಕವೇ ಕೈಲಾಸವಾದ ಕಾರಣ,
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು”

- ಆಯ್ದಕ್ಕಿ ಮಾರಯ್ಯ (ಸ.ವ.ಸಂ.6,ವ:1171)

ಗುರು-ಲಿಂಗ-ಜಂಗಮಕ್ಕೆ ಶರಣರು ತುಂಬಾ ಗೌರವ ಕೊಡುತ್ತಾರೆ. ಆದರೆ ಕಾಯಕದ ಮುಂದೆ ಅವುಗಳನ್ನು ಗೌಣವಾಗಿ ಕಾಣುತ್ತಾರೆ. ಕಾಯಕದಲ್ಲಿ ನಿರತನಾದಾಗ ಗುರುದರ್ಶನವೂ ಬೇಕಿಲ್ಲ. ಲಿಂಗಪೂಜೆಯೂ ಬೇಕಿಲ್ಲ. ಜಂಗಮದ ಹಂಗೂ ಬೇಕಿಲ್ಲ. ಏಕೆಂದರೆ ಕಾಯಕವೇ ಕೈಲಾಸವಾಗಿದೆ. ಗುರು-ಲಿಂಗ-ಜಂಗಮದ ಪೂಜೆ ಮಾಡುವುದು ಕೈಲಾಸಕ್ಕೆ ಹೋಗಲು, ಆದರೆ ಕಾಯಕವೇ ಕೈಲಾಸವಾಗಿರುವುದರಿಂದ ಕಾಯಕದ ಮುಂದೆ ಅವು ಕೂಡ ಗೌಣವಾಗಿ ಕಾಣಿಸಿವೆ.ಕಾಯಕದಲ್ಲಿ ನಿರತನಾದಾಗ ನುಲಿಯ ಚಂದಯ್ಯನ ಲಿಂಗವು ಜಾರಿ ಬಾವಿಯಲ್ಲಿ ಬೀಳುತ್ತದೆ. ಆದರೆ ಆತ ನುಲಿಯ ಕಾಯಕ ಬಿಟ್ಟುಕೊಟ್ಟು ಲಿಂಗದ ಹುಡುಕಾಟಕ್ಕೆ ತೊಡಗುವುದಿಲ್ಲ. ಆತನ ಕಾಯಕನಿಷ್ಠೆಯನ್ನು ಕಂಡು ಲಿಂಗವೇ ಹುಡುಕಿಕೊಂಡು ಬರುತ್ತದೆಂಬ ಐತಿಹ್ಯದಲ್ಲಿ ಶರಣರು ಕಾಯಕಕ್ಕೆ ಕೊಟ್ಟ ಮಹತ್ವವೆಂತಹದೆಂಬುದು ಸ್ಪಷ್ಟವಾಗುತ್ತದೆ.

“ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೇ ಕೈಲಾಸ
ಕಾಯಕವಿಲ್ಲದವನ ಅರಿವು ವಾಯವಾಯಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯಗಂಜಿಯಾಸೆಬೇಡ,
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ
ಇಂತಿವರಡಿಯ ಕಾಬುದಕ್ಕೆ ಮೊದಲೇ ಅಡಗಿದೆಯಲ್ಲಾ,
ಮನಸಂದಿತ್ತು ಮಾರೇಶ್ವರಾ”

-ಮನಸಂದ ಮಾರಿತಂದೆ (ಸ.ವ.ಸಂ.8, ವ:942)

ಮನಸಂದ ಮಾರಿತಂದೆಗಳ ಈ ವಚನದಲ್ಲಿ ಕಾಯಕದ ಮಹತ್ವವನ್ನು ಹೇಳಲಾಗಿದೆ. ಆಯ್ದಕ್ಕಿ ಮಾರಯ್ಯನವರಂತೆ ಇವರೂ ಕೂಡ ಕಾಯಕವೇ ಕೈಲಾಸವೆಂದು ಸ್ಪಷ್ಟಪಡಿಸಿದ್ದಾರೆ. ಕಾಯವಿರುವುದೇ ಕಾಯಕಮಾಡಲೆಂಬ ವಿಚಾರವನ್ನು ಈ ವಚನಕಾರ ತಿಳಿಸಿದ್ದಾರೆ. ಕಾಯಕವಿಲ್ಲದವನ ಅರಿವು ವ್ಯರ್ಥವೆಂದು ಹೇಳಿದ್ದಾರೆ. ಗಂಜಿಯಾಸೆಗಾಗಿ ಇನ್ನೊಬ್ಬರ ಮನೆಗೆ ಅಡಿಗಡಿಗೆ ಹೋಗಿ ಕೇಳುವುದು ತರವಲ್ಲ; ಕಾಯಕಮಾಡಿ ದುಡಿದು ತಿನ್ನಬೇಕೆಂಬ ಸ್ಪಷ್ಟ ಸಂದೇಶವನ್ನು ಶರಣರು ಕೊಟ್ಟಿದ್ದಾರೆ.

ಕಾಯಕದಿಂದ ಅನೇಕ ಪ್ರಯೋಜನಗಳಿವೆಯೆಂದು ಶರಣರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಕಾಯಕವಿರದಿದ್ದರೆ ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕಾಗುತ್ತದೆ. ಪರರ ಮನೆಗೆ ಹೋಗಿ ಕೈಯೊಡ್ಡಿ ಬೇಡಬೇಕಾಗುತ್ತದೆ. ಇಂತಹ ಹಂಗಿನ ಜೀವನ ತರವಲ್ಲ, ಸ್ವಾಭಿಮಾನದ ಜೀವನ ನಡೆಸಬೇಕಾದರೆ ಕಾಯಕ ಮಾಡಬೇಕೆಂದು ಹೇಳಿರುವ ಶರಣರು ಪ್ರತಿಯೊಬ್ಬರಲ್ಲಿ ಸ್ವಾಭಿಮಾನವನ್ನು ಮೂಡಿಸಿದ್ದಾರೆ. ಹಂಗಿನ ಬದುಕು ಗುಲಾಮಗಿರಿಯನ್ನು ಕಲಿಸಿದರೆ, ಕಾಯಕದ ಬದುಕು ಸ್ವಾಭಿಮಾನವನ್ನು ಬೆಳೆಸುತ್ತದೆ. ವ್ಯಕ್ತಿಯೊಬ್ಬ ಗೌರವದಿಂದ, ಸ್ವಾಭಿಮಾನದಿಂದ ಬದುಕಬೇಕಾದರೆ, ಕಾಯಕ ಮಾಡಬೇಕೆಂದು ಅವರು ತಿಳಿಹೇಳಿದ್ದಾರೆ. ಕಾಯಕದಿಂದ ಕೇವಲ ವ್ಯಕ್ತಿ ಮಾತ್ರ ಬೆಳೆಯದೆ, ಇಡೀ ಸಮಾಜವೇ ಅಭಿವೃದ್ಧಿಯಾಗುತ್ತದೆಂಬ ಸತ್ಯವನ್ನು ಆ ಕಾಲಘಟ್ಟದಲ್ಲಿಯೇ ವಿವರಿಸಿ ಹೇಳಿದ್ದಾರೆ.

ಮುಖ್ಯಾಂಶಗಳು
`ಕಾಯಕ’ ಪದ ಎಷ್ಟೊಂದು ಅರ್ಥಗಳನ್ನೊಳಗೊಂಡಿದೆಯೆಂಬುದಕ್ಕೆ ಶರಣರ ಈ ವಚನಗಳೇ ಸ್ಪಷ್ಟ ಉದಾಹರಣೆಗಳಾಗಿವೆ. ಇವೆಲ್ಲವುಗಳನ್ನು ಕೂಡಿಸಿಕೊಂಡು ಕಾಯಕದ ಮುಖ್ಯಾಂಶಗಳನ್ನು ನೋಡಬಹುದಾಗಿದೆ.
1. ಚಾತುರ್ವರ್ಣ ವ್ಯವಸ್ಥೆಯ ವೃತ್ತಿತಾರತಮ್ಯವನ್ನು ಅಳಿಸಿಹಾಕಿದ್ದೇ ಕಾಯಕ. ಹೀಗಾಗಿ `ಕಾಯಕ’ ವರ್ಣವ್ಯವಸ್ಥೆಗೆ ಕೌಂಟರ್ ಆಗಿದೆ.
2. ಕಾಯಕದ ಉದ್ದೇಶ ಕೇವಲ ದುಡಿದು ಹಣಗಳಿಸುವುದಲ್ಲ, ದುಡಿಮೆಯ ಮೂಲಕ ಸಾತ್ವಿಕ ಸಮಾನತೆಯ ಬದುಕನ್ನು ಕಟ್ಟಿಕೊಳ್ಳುವದಾಗಿದೆ.
3. ನಿಷ್ಠೆ-ಪ್ರಾಮಾಣಿಕತೆಗಳು ಕಾಯಕದ ಪ್ರಮುಖ ಲಕ್ಷಣಗಳಾಗಿವೆ.
4. ಸ್ವಾರ್ಥ-ಅತಿಯಾಸೆಯನ್ನು ತೊರೆದಾಗಲೇ ಕಾಯಕ ಪ್ರಾರಂಭವಾಗುತ್ತದೆ.
5. ಕಾಯಕದಲ್ಲಿ ಸಂಗ್ರಹ ಪ್ರವೃತ್ತಿಯೆಂಬುದಿಲ್ಲ.
6. ಎಲ್ಲರೂ ಕಾಯಕ ಮಾಡಬೇಕು, ಹೀಗಾಗಿ ಕಾಯಕ ಕಡ್ಡಾಯವಾಗಿದೆ.
7. ಕಾಯಕ ಕಡ್ಡಾಯವಾದುದರಿಂದ ಆರ್ಥಿಕಕ್ರಾಂತಿ ಸಾಧ್ಯವಾಗಿದೆ.
8. ಕಾಯಕವೇ ಕೈಲಾಸವಾಗಿದೆ.
9. ಕಾಯಕದಿಂದ ಬಂದ ಹಣಮಾತ್ರ ದಾಸೋಹಕ್ಕೆ ವಿನಿಯೋಗವಾಗುತ್ತದೆ.
10. ಕಾಯಕದಲ್ಲಿ ನಿವೃತ್ತಿಯೆಂಬುದಿಲ್ಲ.
11. ಕಾಯಕವು ವ್ಯಸನಿಗಳನ್ನು, ದುರಾಚಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ. ತೆಕ್ಕೆಯಕಾಯಕ, ಮುಳ್ಳಾವಿಗೆಯಕಾಯಕ, ಶಸ್ತ್ರದ ಕಾಯಕ ಇದನ್ನೇ ಮಾಡಿವೆ.
12. ಕಾಯಕದಿಂದ ಆರ್ಥಿಕ ಭದ್ರತೆ ಸಾಧ್ಯವಾಗುತ್ತದೆ.
13. ಕಾಯಕದಲ್ಲಿ ವೈವಿಧ್ಯತೆಯಿದೆ ಮತ್ತು ಸಮಾನತೆಯಿದೆ.
14. ಸತ್ಕಾರ್ಯದಿಂದ ಸಂಪಾದಿಸಿದ್ದು ಇಲ್ಲಿ ಸತ್ಪಾತ್ರಕ್ಕೆ ಸಲ್ಲುತ್ತದೆ.
15. ವೃತ್ತಿಗಳಲ್ಲಿ ಮೇಲು-ಕೀಳುಗಳಿಲ್ಲವೆಂದು ಹೇಳಿದ್ದೇ ಕಾಯಕತತ್ವ.
16. ಆಲಸ್ಯ-ಸೋಮಾರಿತನ-ನಿರ್ಲಕ್ಷ್ಯಕ್ಕೆ ಕಾಯಕದಲ್ಲಿ ಅವಕಾಶವಿಲ್ಲ.
17. ಕಾಯಕಕ್ಕೆ ಸಾಮಾಜಿಕ ಮತ್ತು ಧಾರ್ಮಿಕವೆಂಬ ಎರಡು ಮುಖಗಳಿವೆ.
18. ಕಾಯಕದಲ್ಲಿ ಕೌಶಲ್ಯಕ್ಕೆ ಗಮನ ಕೊಡಲಾಗಿದೆ.
19. ಕಾಯಕತತ್ವ ಶ್ರಮಜೀವಿಗಳಿಗೆ ಹೆಮ್ಮೆಯ ಸಂಕೇತವಾಗಿದೆ.
20. ಜಾತಿಭೇದ-ಲಿಂಗಭೇದ-ವೃತ್ತಿಭೇದಗಳನ್ನು ಅಳಿಸಿಹಾಕಿದ ಕಾಯಕಸಿದ್ಧಾಂತವು, ಅಭೇದ ಸಂಸ್ಕೃತಿಯನ್ನು ಹುಟ್ಟುಹಾಕಿದೆ.

ಈ ಅಂಕಣದ ಹಿಂದಿನ ಬರಹಗಳು:
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...